ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಯನದಿಂದ ಪ್ರಯೋಜನ ಪಡೆಯುವುದು
1 “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಲ್ಲಿ, ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕವನ್ನು ಪಡೆದುಕೊಳ್ಳಲು ನಾವೆಲ್ಲರೂ ಪುಳಕಿತರಾದೆವು. ಅನೇಕರು ಆ ಪುಸ್ತಕವನ್ನು ತಕ್ಷಣವೇ ಓದಲಾರಂಭಿಸಿದರು. ಇನ್ನೂ ಅನೇಕರು, “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ 2003ರ ವಾರ್ಷಿಕವಚನವನ್ನು ನೋಡಿ ಹಾಗೆ ಮಾಡುವಂತೆ ಪ್ರಚೋದಿಸಲ್ಪಟ್ಟರು.—ಯಾಕೋ. 4:8.
2 ಮಾರ್ಚ್ ತಿಂಗಳಿನಲ್ಲಿ, ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವನ್ನು ನಾವು ಸಭಾ ಪುಸ್ತಕ ಅಧ್ಯಯನದಲ್ಲಿ ಪರಿಗಣಿಸಲಿರುವೆವು. ನಮ್ಮ ಅಧ್ಯಯನದಿಂದ ನಾವು ಅತಿ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯಬಹುದು? ತಯಾರಿಯು ಅತ್ಯಾವಶ್ಯಕವಾಗಿದೆ. ಪ್ರತಿಯೊಂದು ವಾರದ ಅಧ್ಯಯನಕ್ಕಾಗಿ ಕೇವಲ ಕೆಲವು ಪ್ಯಾರಗ್ರಾಫ್ಗಳನ್ನು ಮಾತ್ರ ಶೆಡ್ಯೂಲ್ ಮಾಡಲಾಗಿದ್ದು, ಪ್ರತಿ ಅಧ್ಯಾಯಕ್ಕೆ ಎರಡು ವಾರಗಳು ಕೊಡಲ್ಪಟ್ಟಿರುತ್ತದೆ. ಇದು ನೀವು ಮಾಡಿರುವ ಅಧ್ಯಯನ ಮತ್ತು ವಿಷಯಭಾಗದ ಮೇಲಿನ ಧ್ಯಾನದ ಮೇಲಾಧಾರಿತವಾದ ಹೃತ್ಪೂರ್ವಕ ಹೇಳಿಕೆಗಳನ್ನು ನೀಡಲು ಸಾಕಷ್ಟು ಸಮಯಾವಕಾಶವನ್ನು ಮಾಡಿಕೊಡುವುದು. ಮಾತ್ರವಲ್ಲದೆ, ಪುಸ್ತಕದ ಒಂದು ವಿಶೇಷ ವೈಶಿಷ್ಟ್ಯವನ್ನು ಉಪಯೋಗಿಸಲು ಸಮಯವನ್ನು ಅನುಮತಿಸುತ್ತಾ, ಅಧ್ಯಾಯದ ಕೊನೆಯ ಭಾಗವು ಪರಿಶೀಲಿಸಲ್ಪಡುತ್ತಿರುವ ವಾರಗಳಲ್ಲಿ ಇನ್ನೂ ಸೀಮಿತ ಪ್ಯಾರಗ್ರಾಫ್ಗಳನ್ನು ಮಾತ್ರ ಪರಿಗಣಿಸಲಾಗುವುದು.
3 ಅಧ್ಯಾಯ 2ರಿಂದ ಆರಂಭಿಸುತ್ತಾ, ಪ್ರತಿ ಅಧ್ಯಾಯವು ಕೊನೆಗೊಳ್ಳುವುದಕ್ಕೆ ಮುಂಚೆ “ಧ್ಯಾನಕ್ಕಾಗಿ ಪ್ರಶ್ನೆಗಳು” ಎಂಬ ಚೌಕವು ತೋರಿಬರುತ್ತದೆ. ಅಧ್ಯಾಯದ ಕೊನೆಯ ಪ್ಯಾರಗ್ರಾಫನ್ನು ಪರಿಗಣಿಸಿದ ಬಳಿಕ, ಆ ಚೌಕವನ್ನು ಪರಿಗಣಿಸಲಾಗುವುದು. ಶಾಸ್ತ್ರವಚನಗಳ ಮೇಲೆ ಅವರು ಮಾಡಿರುವ ಧ್ಯಾನದ ಒಳ್ಳೆಯ ಅಂಶಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಾ ಮೇಲ್ವಿಚಾರಕನು ಗುಂಪಿನಲ್ಲಿರುವವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಕೇಳಿಕೊಳ್ಳುವನು. (ಜ್ಞಾನೋ. 20:5) ಚೌಕದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳ ಜೊತೆಗೆ, ಮೇಲ್ವಿಚಾರಕನು ಈ ರೀತಿಯ ಪ್ರಶ್ನೆಗಳನ್ನು ಕೇಳುವನು: “ಈ ಮಾಹಿತಿಯು ನಿಮಗೆ ಯೆಹೋವನ ಕುರಿತು ಏನನ್ನು ತಿಳಿಸುತ್ತದೆ? ಇದು ನಿಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತದೆ? ಇತರರಿಗೆ ಸಹಾಯಮಾಡಲು ನೀವಿದನ್ನು ಹೇಗೆ ಉಪಯೋಗಿಸುವಿರಿ?” ಹೃತ್ಪೂರ್ವಕ ಹೇಳಿಕೆಗಳನ್ನು ಹೊರಸೆಳೆಯುವುದು ಅವನ ಗುರಿಯಾಗಿರಬೇಕೇ ಹೊರತು, ಅಮುಖ್ಯ ವಿವರಗಳಿಗಾಗಿ ಗುಂಪನ್ನು ಪರೀಕ್ಷಿಸುವುದಲ್ಲ.
4 ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವು ಅದ್ವಿತೀಯವಾಗಿದೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಎಲ್ಲಾ ಪ್ರಕಾಶನಗಳೂ ಯೆಹೋವನನ್ನು ಮಹಿಮೆಪಡಿಸುತ್ತವಾದರೂ, ಈ ಪುಸ್ತಕವು ಸಂಪೂರ್ಣವಾಗಿ ಯೆಹೋವನ ಗುಣಲಕ್ಷಣಗಳ ಚರ್ಚೆಗೆ ಮೀಸಲಾಗಿಡಲ್ಪಟ್ಟಿದೆ. (ಮತ್ತಾ. 24:45-47) ನಮಗಾಗಿ ಎಂತಹ ರೋಮಾಂಚಕ ಸದವಕಾಶವು ಕಾದಿದೆ! ಯೆಹೋವನ ವ್ಯಕ್ತಿತ್ವದ ಆಳವಾದ ಅಧ್ಯಯನದಿಂದ ನಾವು ಸಮೃದ್ಧವಾದ ಪ್ರಯೋಜನವನ್ನು ಹೊಂದುವೆವು. ಈ ಅಧ್ಯಯನವು ನಮ್ಮ ಸ್ವರ್ಗೀಯ ತಂದೆಯ ಸಮೀಪಕ್ಕೆ ಬರಲು ನಮಗೆ ಸಹಾಯಮಾಡಲಿ, ಮತ್ತು ಇತರರು ಸಹ ಆತನ ಸಮೀಪಕ್ಕೆ ಬರಲು ಅವರಿಗೆ ಸಹಾಯಮಾಡುವುದರಲ್ಲಿ ನಾವು ಹೆಚ್ಚು ಪರಿಣಾಮಕಾರಿಯಾಗಿರೋಣ.