ಯೇಸುವಿನ ಮನೋಭಾವವನ್ನು ಅನುಕರಿಸಿರಿ
1. ಯೇಸು ಯಾವ ಮನೋಭಾವವನ್ನು ವ್ಯಕ್ತಪಡಿಸಿದನು?
1 ನಾವೆಂದೂ ದೇವಕುಮಾರನನ್ನು ಕಣ್ಣಾರೆ ಕಂಡಿಲ್ಲವಾದರೂ, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತಾದ ಲಿಖಿತ ದಾಖಲೆಯ ಮೂಲಕ ನಾವು ನಿಜವಾಗಿಯೂ ಅವನನ್ನು ಪ್ರೀತಿಸುವಂತಾಗಿದೆ. (1 ಪೇತ್ರ 1:8) ತನ್ನ ತಂದೆಯ ಚಿತ್ತಕ್ಕೆ ವಿಧೇಯನಾಗುತ್ತಾ, ಅವನು ತನ್ನ ಉನ್ನತ ಸ್ವರ್ಗೀಯ ಸ್ಥಾನವನ್ನು ಬಿಟ್ಟು ಭೂಮಿಗೆ ಬಂದನು. ಮನುಷ್ಯನಾಗಿದ್ದಾಗ, ಅವನು ನಿಸ್ವಾರ್ಥಭಾವದಿಂದ ಇತರರ ಸೇವೆಮಾಡಿದನು ಮತ್ತು ತರುವಾಯ ಮಾನವಕುಲಕ್ಕಾಗಿ ತನ್ನ ಜೀವವನ್ನೇ ಅರ್ಪಿಸಿದನು. (ಮತ್ತಾ. 20:28) ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುವುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.” ಅವನ ಸ್ವತ್ಯಾಗ ಆತ್ಮವನ್ನು ನಾವು ಹೇಗೆ ಅನುಕರಿಸಬಲ್ಲೆವು?—ಫಿಲಿ. 2:5-8.
2. ಅನೇಕ ಕ್ರೈಸ್ತರು ಯಾವ ಪಂಥಾಹ್ವಾನವನ್ನು ಎದುರಿಸುತ್ತಾರೆ, ಮತ್ತು ಅದನ್ನು ಜಯಿಸಲು ಅವರಿಗೆ ಯಾವುದು ಸಹಾಯಮಾಡಬಲ್ಲದು?
2 ಆಯಾಸಗೊಂಡಿರುವಾಗ: ಯೇಸು ಪರಿಪೂರ್ಣ ವ್ಯಕ್ತಿಯಾಗಿದ್ದಾಗ್ಯೂ ಅವನಿಗೆ ದಣಿವಾಗುತ್ತಿತ್ತು. ಒಂದು ಸಂದರ್ಭದಲ್ಲಿ, ಯೇಸು “ದಾರಿನಡೆದು ದಣಿದು”ಹೋಗಿದ್ದರೂ ಒಬ್ಬ ಸಮಾರ್ಯದ ಸ್ತ್ರೀಗೆ ಸಮಗ್ರ ಸಾಕ್ಷಿಯನ್ನು ಕೊಟ್ಟನು. (ಯೋಹಾ. 4:6) ಅನೇಕ ಕ್ರೈಸ್ತರು ಇಂದು ಸಹ ತದ್ರೀತಿಯ ಪಂಥಾಹ್ವಾನವನ್ನೇ ಎದುರಿಸುತ್ತಾರೆ. ವಾರವೆಲ್ಲಾ ದುಡಿದ ಮೇಲೆ, ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲಿಕ್ಕಾಗಿ ಶಕ್ತಿಯನ್ನು ಕಂಡುಕೊಳ್ಳುವುದು ಕಷ್ಟಕರವಾಗಿರಸಾಧ್ಯವಿದೆ. ಆದರೂ, ನಾವು ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದಾದರೆ, ಕ್ರೈಸ್ತ ಶುಶ್ರೂಷೆಯು ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸುತ್ತದೆ ಎಂಬುದನ್ನು ಕಂಡುಕೊಳ್ಳುವೆವು.—ಯೋಹಾ. 4:32-34.
3. ಬೋಧಿಸುವುದರಲ್ಲಿ ಯೇಸು ತೋರಿಸಿದ ಸಿದ್ಧಮನಸ್ಸನ್ನು ನಾವು ಹೇಗೆ ಅನುಕರಿಸಬಲ್ಲೆವು?
3 ಮತ್ತೊಂದು ಸಂದರ್ಭದಲ್ಲಿ, ಯೇಸು ಮತ್ತು ಅವನ ಶಿಷ್ಯರು ದಣಿವಾರಿಸಿಕೊಳ್ಳಲಿಕ್ಕಾಗಿ ಒಂದು ಏಕಾಂತ ಸ್ಥಳಕ್ಕೆ ಹೊರಟರು. ಆದರೂ, ಒಂದು ದೊಡ್ಡ ಗುಂಪು ಇದನ್ನು ತಿಳಿದುಕೊಂಡು ಅವರನ್ನು ಎದುರುಗೊಳ್ಳಲಿಕ್ಕಾಗಿ ಓಡಿಹೋಗಿ ಅವರಿಗಿಂತ ಮುಂಚೆ ಅಲ್ಲಿ ಸೇರಿತು. ಇದರ ಕುರಿತು ಕೋಪಗೊಳ್ಳುವ ಬದಲು, ಯೇಸು ‘ಕನಿಕರಪಟ್ಟನು’ ಮತ್ತು ‘ಅವರಿಗೆ ಬಹಳ ವಿಷಯಗಳನ್ನು ಉಪದೇಶಿಸಿದನು.’ (ಮಾರ್ಕ 6:30-34) ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಮತ್ತು ನಡೆಸುವುದು ತದ್ರೀತಿಯ ಮನೋಭಾವವನ್ನು ಕೇಳಿಕೊಳ್ಳುತ್ತದೆ. ಇದು ಸತತ ಪ್ರಯತ್ನ ಮತ್ತು ಜನರಿಗಾಗಿ ಪ್ರಾಮಾಣಿಕ ಪ್ರೀತಿಯನ್ನು ಆವಶ್ಯಪಡಿಸುತ್ತದೆ. ನೀವು ಸದ್ಯದಲ್ಲಿ ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿಲ್ಲವಾದರೆ, ಒಂದನ್ನು ಕಂಡುಕೊಳ್ಳಲು ಮಾಡುವ ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ.
4. ಯೇಸುವಿನ ಮನೋಭಾವವನ್ನು ಅನುಕರಿಸುವಂತೆ ಆಕ್ಸಿಲಿಯರಿ ಪಯನೀಯರ್ ಸೇವೆಯು ನಮಗೆ ಹೇಗೆ ಸಹಾಯಮಾಡಬಲ್ಲದು?
4 ಆಧ್ಯಾತ್ಮಿಕ ಅಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಿ: ಆಧ್ಯಾತ್ಮಿಕ ಚಟುವಟಿಕೆಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಲು ಆಕ್ಸಿಲಿಯರಿ ಪಯನೀಯರ್ ಸೇವೆಯು ಸಹಾಯಮಾಡಬಲ್ಲದು. ಒಬ್ಬ ಯುವ ಸಹೋದರಿಯು ಬರೆದದ್ದು: “ನನ್ನ ಸ್ನೇಹಿತೆಯ ತಾಯಿಯು, ಆಕೆಯೊಂದಿಗೆ ಒಂದು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವಂತೆ ನಮ್ಮಿಬ್ಬರನ್ನೂ ಪ್ರೋತ್ಸಾಹಿಸಿದರು. ನಾವು ಅವರೊಂದಿಗೆ ಜೊತೆಗೂಡಿದಕ್ಕಾಗಿ ನನಗೆ ತುಂಬ ಸಂತೋಷವಾಯಿತು. ಸಹೋದರ ಸಹೋದರಿಯರ ಇನ್ನೂ ಉತ್ತಮ ಪರಿಚಯ ಮಾಡಿಕೊಳ್ಳಲು ನಾನು ಶಕ್ತಳಾದೆ, ಮತ್ತು ಬೇಗನೇ ಅವರು ನನ್ನ ಕುಟುಂಬದವರೋ ಎಂಬಂತೆ ನನಗನಿಸಿತು. ಮತ್ತು ಇತರರೊಂದಿಗೆ ಯೆಹೋವನ ಕುರಿತು ಮಾತನಾಡಲಿಕ್ಕಾಗಿ ಮತ್ತು ಅವರಿಗೆ ಅದ್ಭುತಕರ ರಾಜ್ಯ ಸತ್ಯಗಳನ್ನು ಬೋಧಿಸಲಿಕ್ಕಾಗಿ ಹೆಚ್ಚಿನ ಅವಕಾಶಗಳು ಸಿಕ್ಕಿದಕ್ಕಾಗಿಯೂ ನಾನು ಸಂತೋಷಿಸಿದೆ. ಇದೆಲ್ಲವೂ ನನ್ನನ್ನು ಯೆಹೋವನಿಗೂ ಆತನ ಸಂಸ್ಥೆಗೂ ಇನ್ನೂ ಹೆಚ್ಚು ಸಮೀಪವಾಗುವಂತೆ ಮಾಡಿತು.”—ಕೀರ್ತ. 34:8.
5. ಯೇಸುವಿನ ಮನೋಭಾವವನ್ನು ಅನುಕರಿಸಲು ನಾವು ಏಕೆ ಸತತ ಪ್ರಯತ್ನವನ್ನು ಹಾಕಬೇಕು?
5 ನಮ್ಮ ಅಪರಿಪೂರ್ಣ ಶರೀರ ಮತ್ತು ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆಯ ಮಧ್ಯೆ ಯಾವಾಗಲೂ ಒಂದು ಹೋರಾಟವಿರುತ್ತದೆ. (ರೋಮಾ. 7:21-23) ನಾವು ಈ ಲೋಕದ ಮಿತಶ್ರಮದ ಆತ್ಮವನ್ನು ತ್ಯಜಿಸಬೇಕು. (ಮತ್ತಾ. 16:22, 23) ಈ ವಿಷಯದಲ್ಲಿ ನಾವು ಯಶಸ್ಸನ್ನು ಕಾಣುವಂತೆ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಸಹಾಯಮಾಡಬಲ್ಲನು. (ಗಲಾ. 5:16, 17) ನಾವು ದೇವರ ನೀತಿಯ ಹೊಸ ಲೋಕದೊಳಗೆ ಪ್ರವೇಶಿಸಲು ಕಾಯುತ್ತಿರುವಾಗ, ನಮ್ಮ ಸ್ವಂತ ಅಭಿರುಚಿಗಿಂತಲೂ ರಾಜ್ಯದ ಮತ್ತು ಇತರರ ಅಭಿರುಚಿಗಳನ್ನು ಮುಂದೆ ಇಡುವ ಮೂಲಕ ಯೇಸುವಿನ ಮನೋಭಾವವನ್ನು ಅನುಕರಿಸೋಣ.—ಮತ್ತಾ. 6:33; ರೋಮಾ. 15:1-3.