ಚೈತನ್ಯದಾಯಕ ಸಂಗೀತ
1 ಹಾಡು ಮತ್ತು ಸಂಗೀತವು ಸತ್ಯಾರಾಧನೆಯ ಅವಿಭಾಜ್ಯ ಅಂಗಗಳಾಗಿವೆ. ಪುರಾತನ ಇಸ್ರಾಯೇಲಿನಲ್ಲಿ, ಆಸಾಫ ಮತ್ತು ಅವನ ಸಹೋದರರು ಹಾಡಿದ್ದು: “ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; . . . ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.” (1 ಪೂರ್ವ. 16:8, 9) ಇಂದು ನಾವು ನಮ್ಮ ಸಾಪ್ತಾಹಿಕ ಸಭಾ ಕೂಟಗಳಲ್ಲಿ ಯೆಹೋವನನ್ನು ಕೀರ್ತಿಸುತ್ತಾ ನಮ್ಮ ಧ್ವನಿಗಳನ್ನು ಎತ್ತುತ್ತೇವೆ. (ಎಫೆ. 5:19) ಆತನ ನಾಮಕ್ಕೆ ಸ್ತುತಿಯನ್ನು ಸಲ್ಲಿಸಲು ಇದೆಂಥ ಅದ್ಭುತ ಸದವಕಾಶವಾಗಿದೆ!—ಕೀರ್ತ. 69:30.
2 ಕಿಂಗ್‌ಡಮ್ ಮೆಲಡೀಸ್‌ಗಳಿಗೆ ಅಂದರೆ ವಾದ್ಯವೃಂದ ರಚಿತ ರಾಜ್ಯ ಗೀತೆಗಳಿಗೆ ಕಿವಿಗೊಡುವುದು ನಮ್ಮ ಮನಸ್ಸನ್ನು ಆಧ್ಯಾತ್ಮಿಕ ಆಲೋಚನೆಗಳಿಂದ ತುಂಬಿಸಬಲ್ಲದು. “ಈ ಸಂಗೀತವು ನುಡಿಸಲ್ಪಡುತ್ತಿರುವಾಗ, ಆ ಹಾಡಿನ ಸಾಲುಗಳು ನನ್ನ ಕಿವಿಯಲ್ಲಿ ಮಾರ್ದನಿಸುತ್ತವೆ. ಸಂಗೀತವನ್ನು ಆನಂದಿಸುತ್ತಿರುವಾಗ ಯೆಹೋವನ ಕುರಿತು ಆಲೋಚಿಸುವುದು ಎಂತಹ ಒಂದು ಉತ್ತಮ ವಿಧಾನವಾಗಿದೆ!” ಎಂದು ಒಬ್ಬ ಸಹೋದರಿ ವಿವರಿಸುತ್ತಾಳೆ.—ಫಿಲಿ. 4:8.
3 ಅವುಗಳನ್ನು ಆನಂದಿಸಲು ಸಂದರ್ಭಗಳು: ಮನೆಯಲ್ಲಿ ಕಿಂಗ್‌ಡಮ್ ಮೆಲಡೀಸ್ ನುಡಿಸುವುದು, ಕುಟುಂಬ ಸಂತೋಷವನ್ನು ಪ್ರವರ್ಧಿಸಲು ಸಹಾಯಮಾಡುವ ಬೆಚ್ಚಗಿನ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸುತ್ತದೆ. “ಇದನ್ನು ಮನೆಯಲ್ಲಿಯೂ ನಮ್ಮ ಕಾರಿನಲ್ಲಿಯೂ ಪದೇ ಪದೇ ನುಡಿಸುತ್ತಿರುತ್ತೇವೆ, ಇದು ಮನಸ್ಪರ್ಶಿಸುವ ರೀತಿಯಲ್ಲಿ ರಚಿಸಲ್ಪಟ್ಟಿರುವುದರಿಂದ ಇದನ್ನು ಕೇಳಿಸಿಕೊಳ್ಳಲು ನಮಗೆ ಬೇಸರವಾಗುವುದೇ ಇಲ್ಲ. ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವಾಗ ಅಥವಾ ಒಂದು ಸಮ್ಮೇಳನಕ್ಕೆ ಪ್ರಯಾಣಿಸುತ್ತಿರುವಾಗ ಸರಿಯಾದ ಮನಸ್ಥಿತಿಯನ್ನು ಹೊಂದಿರಲು ಕಿಂಗ್‌ಡಮ್ ಮೆಲಡೀಸ್ ಅನೇಕಾವರ್ತಿ ಸಹಾಯಮಾಡಿದೆ,” ಎಂದು ಒಂದು ಕುಟುಂಬವು ಬರೆಯಿತು. ಒಬ್ಬ ಸಹೋದರಿಯು ಹೇಳಿದ್ದು: “ನಾನು ಮನೆಕೆಲಸವನ್ನು ಮಾಡುತ್ತಿರುವಾಗ ಅವು ನಿಜವಾದ ಉತ್ತೇಜಕಗಳಾಗಿ ಪರಿಣಮಿಸುತ್ತವೆ—ಇಲ್ಲವಾದರೆ ಒಗೆದ ಬಟ್ಟೆಗಳನ್ನು ಮಡಚುವ ಕೆಲಸವನ್ನು ಯಾರು ತಾನೇ ಇಷ್ಟು ಆನಂದದಿಂದ ಮಾಡಬಲ್ಲರು? ನಾನು ಮನಗುಂದಿರುವಾಗ ಈ ಸಂಗೀತವನ್ನು ನುಡಿಸಲು ಯೋಜಿಸುತ್ತೇನೆ. ಈ ಸಂಗೀತಕ್ಕೆ ಎಂತಹ ಪ್ರಚೋದನಾ ಶಕ್ತಿಯಿದೆ! . . . ಪ್ರತಿ ಗೀತೆಯೂ ಸಂತೋಷವನ್ನುಂಟುಮಾಡುತ್ತದೆ.” ಇಂತಹ ಚೈತನ್ಯದಾಯಕ ಸಂಗೀತವು ನಿಮಗೆ ಪ್ರಯೋಜನವನ್ನು ತರಬಲ್ಲ ಸಂದರ್ಭಗಳು ಉಂಟೋ?
4 ಇಂದಿನ ಸಂಗೀತದಲ್ಲಿ ಹೆಚ್ಚಿನದ್ದು ಈ ಲೋಕದ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಕಿಂಗ್‌ಡಮ್ ಮೆಲಡೀಸ್ ರೆಕಾರ್ಡಿಂಗ್‌ಗಳ ಒಳ್ಳೆಯ ಉಪಯೋಗವನ್ನು ಮಾಡುವ ಮೂಲಕ ಹಿತಕರವಾದ ಸಂಗೀತದ ಕಡೆಗೆ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಹೆತ್ತವರು ಮಕ್ಕಳಿಗೆ ಸಹಾಯಮಾಡಬಲ್ಲರು. ಅನೇಕ ಬೈಬಲ್ ವಿದ್ಯಾರ್ಥಿಗಳು ಮತ್ತು ಆಸಕ್ತ ವ್ಯಕ್ತಿಗಳು ಸಹ, ಯೆಹೋವನನ್ನು ಘನಪಡಿಸುವ ಮತ್ತು ಮನಸ್ಸಿಗೆ ಉತ್ತೇಜಕವಾಗಿರುವ ಈ ಸುಂದರವಾದ ಆಧ್ಯಾತ್ಮಿಕ ಗೀತೆಗಳ ಕುರಿತು ತಿಳಿದುಕೊಳ್ಳುವುದರಿಂದ ಸಂತೋಷಪಡುವರು.—ಕೀರ್ತ. 47:1, 2, 6, 7.