ತುರ್ತುಪ್ರಜ್ಞೆಯನ್ನು ಕಾಪಾಡಿಕೊಳ್ಳಿ!
1 ಯೇಸುವಿಗೆ, ಭೂಮಿಯ ಮೇಲೆ ತನ್ನ ತಂದೆಯ ಕೆಲಸವನ್ನು ಪೂರೈಸಲು ತನಗಿರುವ ಸಮಯವು ಸೀಮಿತವೆಂದು ತಿಳಿದಿತ್ತು. (ಯೋಹಾ. 9:4) ಆದುದರಿಂದ ಅವನು ತನ್ನ ಶುಶ್ರೂಷೆಯನ್ನು ತುರ್ತುಪ್ರಜ್ಞೆಯಿಂದ ಮಾಡಿದನು, ಮತ್ತು ತನ್ನ ಶಿಷ್ಯರು ಸಹ ಅದೇ ರೀತಿಯಲ್ಲಿ ಮಾಡುವಂತೆ ಅವರಿಗೆ ತರಬೇತಿಯನ್ನಿತ್ತನು. (ಲೂಕ 4:42-44; 8:1; 10:2-4) ಭೌತಿಕ ಸುಖಸೌಕರ್ಯಗಳಿಗೆ ಅವನು ಎರಡನೆಯ ಸ್ಥಾನವನ್ನು ಕೊಟ್ಟನು. (ಮತ್ತಾ. 8:20) ಹೀಗಿದ್ದುದರಿಂದಲೇ, ಯೆಹೋವನು ಅವನಿಗೆ ಕೊಟ್ಟಿದ್ದ ಕೆಲಸವನ್ನು ಪೂರ್ತಿಯಾಗಿ ನೆರವೇರಿಸಲು ಅವನಿಂದ ಸಾಧ್ಯವಾಯಿತು.—ಯೋಹಾ. 17:4.
2 ಸೀಮಿತ ಸಮಯ: “ಸರ್ವಲೋಕದಲ್ಲಿ” ಸುವಾರ್ತೆಯನ್ನು ಸಾರಲು ಉಳಿದಿರುವ ಸಮಯವು ಸಹ ಸೀಮಿತವಾಗಿದೆ. (ಮತ್ತಾ. 24:14) ನಾವು ಅಂತ್ಯಕಾಲದ ಕೊನೆಯ ಭಾಗದಲ್ಲಿ ಜೀವಿಸುತ್ತಿದ್ದೇವೆ ಎಂದು ಬೈಬಲ್ ಪ್ರವಾದನೆಯು ತೋರಿಸುತ್ತದೆ. ಬೇಗನೇ, ‘ದೇವರನ್ನರಿಯದವರೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಒಳಪಡದವರೂ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.’ (2 ಥೆಸ. 1:6-9) ಆ ದಂಡನೆಯು ಮಿಂಚಿನ ಹಾಗೆ ಹಠಾತ್ತನೇ ಬರುವುದು. (ಲೂಕ 21:34, 35; 1 ಥೆಸ. 5:2, 3) ಜನರು ತಾವಿರುವಂಥ ಅಪಾಯಕರ ಸ್ಥಿತಿಯ ವಿಷಯದಲ್ಲಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಈಗ ಸಮಯವಿರುವಾಗಲೇ ಯೆಹೋವನ ಅನುಗ್ರಹವನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುವ ಜವಾಬ್ದಾರಿ ನಮ್ಮದಾಗಿದೆ.—ಚೆಫ. 2:2, 3.
3 ನಮ್ಮಿಂದಾದುದೆಲ್ಲವನ್ನೂ ಮಾಡುವುದು: “ಸಮಯವು ಸಂಕೋಚವಾದದ್ದರಿಂದ” ಅಥವಾ ಕಡಿಮೆಯಾಗಿರುವುದನ್ನು ಗ್ರಹಿಸುತ್ತಾ, ದೇವರ ಸೇವಕರು ಸಾರುವ ಕೆಲಸಕ್ಕೆ ಆದ್ಯತೆಯನ್ನು ನೀಡುತ್ತಾರೆ. (1 ಕೊರಿಂ. 7:29-31; ಮತ್ತಾ. 6:33) ಕೆಲವರು ಶುಶ್ರೂಷೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲಿಕ್ಕಾಗಿ ಆರ್ಥಿಕವಾಗಿ ಲಾಭಗೊಳಿಸುವ ಸದವಕಾಶಗಳು ಅಥವಾ ಇತರ ವೈಯಕ್ತಿಕ ಬೆನ್ನಟ್ಟುವಿಕೆಗಳನ್ನು ಕೈಬಿಟ್ಟಿದ್ದಾರೆ. (ಮಾರ್ಕ 10:29, 30) ಇತರರು ಮುಂದುವರಿಯುತ್ತಿರುವ ಪರೀಕ್ಷೆಗಳನ್ನು ಎದುರಿಸುತ್ತಿರುವುದಾದರೂ “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ” ಮಾಡುತ್ತಾ ಇದ್ದಾರೆ. (1 ಕೊರಿಂ. 15:58) ಅನೇಕರು ನಿಶ್ಚಂಚಲವಾಗಿ ಹಲವಾರು ದಶಕಗಳಿಂದ ಸುವಾರ್ತೆಯನ್ನು ಬಹಿರಂಗವಾಗಿ ಸಾರುತ್ತಾ ಬಂದಿದ್ದಾರೆ. (ಇಬ್ರಿ. 10:23) ರಾಜ್ಯದ ಅಭಿರುಚಿಗಳನ್ನು ಬೆಂಬಲಿಸುವುದರಲ್ಲಿ ಮಾಡಲ್ಪಡುವ ಇಂತಹ ಎಲ್ಲಾ ತ್ಯಾಗಗಳನ್ನು ಯೆಹೋವನು ತುಂಬ ಅಮೂಲ್ಯವೆಂದೆಣಿಸುತ್ತಾನೆ.—ಇಬ್ರಿ. 6:10.
4 ಸಾರುವ ಕೆಲಸವನ್ನು ಒಳಗೊಂಡಿರುವ ಯೆಹೋವನ ಆರಾಧನೆಯ ಮೇಲೆ ನಮ್ಮ ಜೀವನಗಳನ್ನು ಕೇಂದ್ರೀಕರಿಸುವುದು ಯೆಹೋವನ ದಿನವನ್ನು ನಮ್ಮ ಮನಸ್ಸಿನಲ್ಲಿ ನಿಕಟವಾಗಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ. ಇದು ಸೈತಾನನ ಲೋಕದಿಂದ ಅಪಕರ್ಷಿತರಾಗುವುದರಿಂದ ನಮ್ಮನ್ನು ಸಂರಕ್ಷಿಸುತ್ತದೆ ಮತ್ತು ಪರಿಶುದ್ಧವಾದ ನಡವಳಿಕೆಯನ್ನು ಕಾಪಾಡಿಕೊಳ್ಳುವ ನಮ್ಮ ದೃಢಸಂಕಲ್ಪವನ್ನು ಬಲಪಡಿಸುತ್ತದೆ. (2 ಪೇತ್ರ 3:11-14) ವಾಸ್ತವದಲ್ಲಿ, ತುರ್ತುಪ್ರಜ್ಞೆಯಿಂದ ನಮ್ಮ ಶುಶ್ರೂಷೆಯನ್ನು ಪೂರೈಸುವುದು ನಮಗೂ ನಮ್ಮ ಉಪದೇಶವನ್ನು ಕೇಳುವವರಿಗೂ ಜೀವರಕ್ಷಕವಾಗಿ ಪರಿಣಮಿಸಸಾಧ್ಯವಿದೆ.—1 ತಿಮೊ. 4:16.