ಸಂಬಂಧಿಕರಿಗೆ ಸಾಕ್ಷಿ ನೀಡುವುದು—ಹೇಗೆ?
1. ಸಂಬಂಧಿಕರಿಗೆ ಸಾಕ್ಷಿಕೊಡುವಾಗ ವಿವೇಚನೆಯು ಅವಶ್ಯವೇಕೆ?
1 ನಮ್ಮ ಪ್ರಿಯ ಸಂಬಂಧಿಕರೊಂದಿಗೆ, ಯೆಹೋವನ ಆರಾಧನೆಯಲ್ಲಿ ಐಕಮತ್ಯದಿಂದ ಹೊಸ ಲೋಕವನ್ನು ಪ್ರವೇಶಿಸುವುದು ಎಂತಹ ಸಂತಸದ ಸಮಯವಾಗಿರುವುದು! ಸಂಬಂಧಿಕರಿಗೆ ಸಾಕ್ಷಿಕೊಡುವ ಮೂಲಕ, ನಾವು ಈ ಸಂತೋಷಕರ ಪ್ರತೀಕ್ಷೆಯನ್ನು ಪ್ರತ್ಯಕ್ಷತೆಗೆ ತರಬಲ್ಲೆವು. ಆದರೂ, ಸಂಬಂಧಿಕರಿಗೆ ಚೈತನ್ಯದಾಯಕ ರೀತಿಯಲ್ಲಿ ಸಾಕ್ಷಿಕೊಡುವುದು ವಿವೇಚನೆಯನ್ನು ಅವಶ್ಯಪಡಿಸುತ್ತದೆ. ಒಬ್ಬ ಸರ್ಕಿಟ್ ಮೇಲ್ವಿಚಾರಕನು ಗಮನಿಸಿದ್ದು: “ತಮ್ಮ ಸಂಬಂಧಿಕರಿಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಸಾಕ್ಷಿಕೊಡುವ ಮೂಲಕ ಅವರ ಕುತೂಹಲವನ್ನು ಕೆರಳಿಸುವವರೇ ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆದುಕೊಳ್ಳುತ್ತಾರೆ.” ಇದನ್ನು ನಾವು ಹೇಗೆ ಮಾಡಸಾಧ್ಯವಿದೆ?
2. ನಮ್ಮ ಸಂಬಂಧಿಕರಲ್ಲಿ ನಾವು ತೋರಿಸುವ ಪ್ರಾಮಾಣಿಕ ಆಸಕ್ತಿಯು ಅವರ ಕುತೂಹಲವನ್ನು ಹೇಗೆ ಕೆರಳಿಸಸಾಧ್ಯವಿದೆ?
2 ಅವರ ಕುತೂಹಲವನ್ನು ಕೆರಳಿಸಿರಿ: ನಿಮ್ಮ ಸಂಬಂಧಿಕರ ಆಸಕ್ತಿಯನ್ನು ಹೇಗೆ ಕೆರಳಿಸುವುದು ಎಂಬುದರ ಕುರಿತು ಜಾಗರೂಕವಾಗಿ ಮುಂದಾಗಿಯೇ ಆಲೋಚಿಸಿರಿ. (ಜ್ಞಾನೋ. 15:28) ಅವರ ಚಿಂತೆಗಳು ಯಾವುವು? ಅವರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಿದ್ದಾರೆ? ಪ್ರಾಯಶಃ ನೀವು ಅವರೊಂದಿಗೆ ಒಂದು ಲೇಖನವನ್ನು ಹಂಚಿಕೊಳ್ಳಬಹುದು ಅಥವಾ ಅವರಿಗೆ ವಿಶೇಷ ಆಸಕ್ತಿಯದ್ದಾಗಿರುವ ವಿಷಯವಸ್ತುವಿನ ಕುರಿತ ಒಂದು ಮನಮುಟ್ಟುವ ಶಾಸ್ತ್ರವಚನವನ್ನು ತಿಳಿಸಬಹುದು. ನಿಮ್ಮ ಸಂಬಂಧಿಕರು ಹತ್ತಿರದಲ್ಲಿ ಜೀವಿಸುತ್ತಿಲ್ಲದಿರುವಲ್ಲಿ, ನೀವಿದನ್ನು ಒಂದು ಪತ್ರ ಅಥವಾ ಟೆಲಿಫೋನ್ ಕರೆಯ ಮೂಲಕ ಮಾಡಬಹುದು. ಅವರನ್ನು ಕಿರಿಕಿರಿಗೊಳಿಸದೆ ಸತ್ಯದ ಬೀಜಗಳನ್ನು ಬಿತ್ತಿರಿ ಮತ್ತು ಆ ಬೀಜಗಳು ಬೆಳೆಯುವಂತೆ ಯೆಹೋವನ ಕಡೆಗೆ ನೋಡಿರಿ.—1 ಕೊರಿಂ. 3:6.
3. ನಮ್ಮ ಸಂಬಂಧಿಕರು ನಮ್ಮಲ್ಲಿ ಹೊಂದಿರುವ ಆಸಕ್ತಿಯು ಹೇಗೆ ಸಾಕ್ಷಿಕೊಡಲು ಒಂದು ಅವಕಾಶವನ್ನು ಮಾಡಿಕೊಡುವುದು?
3 ಯೇಸು ಒಬ್ಬ ಮನುಷ್ಯನಲ್ಲಿದ್ದ ಅನೇಕ ದೆವ್ವಗಳನ್ನು ಓಡಿಸಿದ ನಂತರ ಅವನಿಗೆ ಹೇಳಿದ್ದು: “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾಮಿಯು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು.” (ಮಾರ್ಕ 5:19) ಇದು ಅವನ ಜನರ ಅಥವಾ ಸಂಬಂಧಿಕರ ಮೇಲೆ ಬೀರಿದ್ದಿರಬಹುದಾದ ಪರಿಣಾಮವನ್ನು ತುಸು ಯೋಚಿಸಿರಿ! ಇಂತಹದ್ದೇ ನಾಟಕೀಯ ಘಟನೆಯು ನಿಮ್ಮ ವಿಷಯದಲ್ಲಿ ನಡೆಯಲಿಕ್ಕಿಲ್ಲವಾದರೂ, ನಿಮ್ಮ ಸಂಬಂಧಿಕರಿಗೆ ನಿಮ್ಮ ಅಥವಾ ನಿಮ್ಮ ಮಕ್ಕಳ ಚಟುವಟಿಕೆಗಳಲ್ಲಿ ತುಸು ಆಸಕ್ತಿಯಿರುವುದು ಸಂಭವನೀಯ. ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನಿರ್ವಹಿಸಿದ ಒಂದು ಭಾಷಣದ ಕುರಿತು, ನೀವು ಹಾಜರಾದ ಅಧಿವೇಶನದ ಕುರಿತು, ಬೆತೆಲಿಗೆ ನೀಡಿದ ಭೇಟಿಯ ಕುರಿತು, ಅಥವಾ ವೈಯಕ್ತಿಕವಾದ ಒಂದು ವಿಶೇಷ ಘಟನೆಯ ಕುರಿತು ತಿಳಿಸುವುದು ಯೆಹೋವ ಮತ್ತು ಆತನ ಸಂಘಟನೆಯ ಕುರಿತು ತುಸು ಹೆಚ್ಚನ್ನು ಅವರೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಮಾಡಿಕೊಡುವುದು.
4. ಸಂಬಂಧಿಕರಿಗೆ ಸಾಕ್ಷಿಕೊಡುವಾಗ ನಾವು ಯಾವ ತಪ್ಪನ್ನು ಮಾಡಬಾರದು?
4 ವಿವೇಚಿಸುವವರಾಗಿರಿ: ಸಂಬಂಧಿಕರಿಗೆ ಸಾಕ್ಷಿ ನೀಡುವಾಗ ಒಂದೇ ಸಮಯಕ್ಕೆ ಹೆಚ್ಚು ವಿಷಯಗಳನ್ನು ತಿಳಿಸುವುದನ್ನು ತ್ಯಜಿಸಿರಿ. ತಾನು ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದ ಸಮಯದ ಕುರಿತು ಜ್ಞಾಪಿಸಿಕೊಳ್ಳುತ್ತಾ ಒಬ್ಬ ಸಹೋದರನು ಒಪ್ಪಿಕೊಳ್ಳುವುದು: “ನಾನು ಬೈಬಲಿನಿಂದ ಕಲಿತಿದ್ದ ಪ್ರಾಯಶಃ ಎಲ್ಲಾ ವಿಷಯಗಳ ವಿವರಣೆಗಳೊಂದಿಗೆ ಅಮ್ಮನನ್ನು ಮುಳುಗಿಸಿಬಿಡುತ್ತಿದ್ದೆ, ಮತ್ತು ಇದು ಅನೇಕಸಲ ವಾಗ್ವಾದಗಳಿಗೆ ನಡೆಸಿತು; ವಿಶೇಷವಾಗಿ ನನ್ನ ತಂದೆಯೊಂದಿಗೆ.” ಬೈಬಲಿನ ಸಂದೇಶದಲ್ಲಿ ಒಬ್ಬ ಸಂಬಂಧಿಕನು ಆಸಕ್ತಿಯನ್ನು ವ್ಯಕ್ತಪಡಿಸುವಾಗಲೂ, ಆ ವ್ಯಕ್ತಿಗೆ ಹೆಚ್ಚನ್ನು ತಿಳಿದುಕೊಳ್ಳಬೇಕು ಎಂಬ ಹಂಬಲಿಕೆ ಉಂಟಾಗುವ ರೀತಿಯಲ್ಲಿ ಉತ್ತರವನ್ನು ಕೊಡಿರಿ. (ಜ್ಞಾನೋ. 25:7) ಶುಶ್ರೂಷೆಯಲ್ಲಿ ನೀವು ಅಪರಿಚಿತರೊಂದಿಗೆ ಮಾತಾಡುತ್ತಿರುವಾಗ ತೋರಿಸುವ ಗೌರವ, ಕರುಣೆ ಮತ್ತು ತಾಳ್ಮೆಯನ್ನು ಸಂಬಂಧಿಕರೊಂದಿಗೂ ಯಾವಾಗಲೂ ತೋರಿಸಿರಿ.—ಕೊಲೊ. 4:6.
5. ನಾವು ಸಂಬಂಧಿಕರಿಗೆ ಸಾಕ್ಷಿಕೊಡುವಾಗ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದಲ್ಲಿ ನಾವೇನು ಮಾಡಬೇಕು?
5 ಒಂದು ಸಮಯದಲ್ಲಿ, ಯೇಸುವಿನ ಸಂಬಂಧಿಕರು ಅವನಿಗೆ ಹುಚ್ಚುಹಿಡಿದದೆ ಎಂದು ಭಾವಿಸಿದ್ದರು. (ಮಾರ್ಕ 3:21) ಅನಂತರವಾದರೋ ಅವರಲ್ಲಿ ಕೆಲವರು ವಿಶ್ವಾಸಿಗಳಾದರು. (ಅ. ಕೃ. 1:14) ನೀವು ನಿಮ್ಮ ಸಂಬಂಧಿಕರೊಂದಿಗೆ ಸತ್ಯವನ್ನು ಹಂಚಿಕೊಳ್ಳಲು ಮಾಡಿದ ಆರಂಭದ ಪ್ರಯತ್ನಗಳು ಅಷ್ಟು ಸ್ವೀಕರಿಸಲ್ಪಡದಿದ್ದರೂ ಪ್ರಯತ್ನವನ್ನು ಬಿಟ್ಟುಬಿಡಬೇಡಿ. ಪರಿಸ್ಥಿತಿಗಳು ಮತ್ತು ಮನೋಭಾವಗಳು ಬದಲಾಗಸಾಧ್ಯವಿದೆ. ಅವರ ಕುತೂಹಲವನ್ನು ಕೆರಳಿಸಬಹುದಾದ ಒಂದು ಅಂಶವನ್ನು ಹಂಚಿಕೊಳ್ಳಲು ಮತ್ತೊಂದು ಸಂದರ್ಭಕ್ಕಾಗಿ ಹುಡುಕುತ್ತಿರಿ. ನಿತ್ಯಜೀವಕ್ಕೆ ನಡೆಸುವ ದಾರಿಯಲ್ಲಿ ಅವರು ನಡೆಯಲಾರಂಭಿಸುವಂತೆ ಅವರಿಗೆ ಸಹಾಯಮಾಡುವ ಸಂತೋಷ ನಿಮ್ಮದಾಗಬಹುದು.—ಮತ್ತಾ. 7:13, 14.