ಜೋಪಾನವಾಗಿಡಿ
ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ನಮ್ಮ ರಾಜ್ಯದ ಸೇವೆಯಲ್ಲಿ ಕಂಡುಬಂದ ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದರ ಬಗ್ಗೆ ಮುದ್ರಿಸಲ್ಪಟ್ಟ ಸರಣಿ ಲೇಖನಗಳ ಮುಖ್ಯ ಅಂಶಗಳು ಈ ಪುರವಣಿಯಲ್ಲಿ ಒಂದು ಸಂಕಲನವಾಗಿ ಕೊಡಲ್ಪಟ್ಟಿವೆ. ಈ ಪುರವಣಿಯನ್ನು ಜೋಪಾನವಾಗಿಡುವಂತೆ ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವಾಗ ಇದನ್ನು ನೋಡಿಕೊಳ್ಳುವಂತೆ ನಿಮ್ಮೆಲ್ಲರನ್ನೂ ಪ್ರೋತ್ಸಾಹಿಸುತ್ತೇವೆ. ಮಾತ್ರವಲ್ಲದೆ, ಈ ಪುರವಣಿಯಲ್ಲಿರುವ ಅಂಶಗಳನ್ನು ಕ್ಷೇತ್ರ ಸೇವೆಗಾಗಿರುವ ಕೂಟಗಳಲ್ಲಿ ಎತ್ತಿತೋರಿಸಬಹುದು ಹಾಗೂ ಸೇವಾ ಮೇಲ್ವಿಚಾರಕರು ಪುಸ್ತಕ ಅಧ್ಯಯನ ಗುಂಪುಗಳನ್ನು ಭೇಟಿಮಾಡುವಾಗ ನೀಡುವ ಭಾಷಣಗಳಿಗೆ ಆಧಾರವಾಗಿ ಉಪಯೋಗಿಸಬಹುದು.
ಭಾಗ 1: ಬೈಬಲ್ ಅಧ್ಯಯನ ಎಂದರೇನು?
ಶಿಫಾರಸ್ಸುಮಾಡಲ್ಪಟ್ಟಿರುವ ಪ್ರಕಾಶನಗಳಲ್ಲಿ ಒಂದರಿಂದ ಬೈಬಲನ್ನು ಬಳಸುತ್ತಾ ನೀವು ಕ್ರಮವಾಗಿ ಮತ್ತು ವ್ಯವಸ್ಥಿತ ರೀತಿಯಲ್ಲಿ—ಸಂಕ್ಷಿಪ್ತವಾದರೂ ಸರಿ—ಬೈಬಲ್ ಚರ್ಚೆಗಳನ್ನು ನಡೆಸುತ್ತಿರುವಲ್ಲಿ, ನೀವೊಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದೀರಿ. ಬೈಬಲ್ ಅಧ್ಯಯನವನ್ನು ಹೇಗೆ ಮಾಡುತ್ತೇವೆಂದು ಪ್ರದರ್ಶಿಸಿದ ನಂತರ, ಅಧ್ಯಯನವು ಇನ್ನೂ ಎರಡು ಸಲ ನಡೆಸಲ್ಪಟ್ಟಿರುವಲ್ಲಿ ಮತ್ತು ಅದು ಮುಂದುವರಿಯುವಂತೆ ತೋರುವಲ್ಲಿ, ಅದನ್ನು ಒಂದು ಅಧ್ಯಯನವೆಂದು ವರದಿಸಬಹುದು.—km-KA 7/04 ಪು. 1.
ಶಿಫಾರಸ್ಸು ಮಾಡಲ್ಪಟ್ಟಿರುವ ಪ್ರಕಾಶನಗಳು
◼ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
◼ ನಿತ್ಯಜೀವಕ್ಕೆ ನಡೆಸುವ ಜ್ಞಾನ
◼ ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
◼ ನೀವು ದೇವರ ಸ್ನೇಹಿತರಾಗಿರಬಲ್ಲಿರಿ! (ಇಂಗ್ಲಿಷ್)—ಇದನ್ನು ಸೀಮಿತ ಶಿಕ್ಷಣ ಅಥವಾ ಕಡಿಮೆ ಓದುವ ಸಾಮರ್ಥ್ಯವಿರುವ ಜನರೊಂದಿಗೆ ಅಧ್ಯಯನ ಮಾಡಲಿಕ್ಕಾಗಿ ಉಪಯೋಗಿಸಬಹುದು.
ಭಾಗ 2: ಅಧ್ಯಯನವನ್ನು ನಡೆಸಲು ತಯಾರಿಮಾಡುವುದು
ವಿದ್ಯಾರ್ಥಿಯ ಹೃದಯವನ್ನು ಸ್ಪರ್ಶಿಸುವಂಥ ರೀತಿಯಲ್ಲಿ ನಾವು ಮಾಹಿತಿಯನ್ನು ಪ್ರಸ್ತುತಪಡಿಸಬೇಕು. ಇದು ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರ್ಣವಾಗಿ ತಯಾರಿಸುವುದನ್ನು ಅವಶ್ಯಪಡಿಸುತ್ತದೆ.—km-KA 8/04 ಪು. 1.
ತಯಾರಿಸುವ ವಿಧ
◼ ಮೊದಲು ಅಧ್ಯಾಯ ಅಥವಾ ಪಾಠದ ಶೀರ್ಷಿಕೆ, ಉಪ-ಶೀರ್ಷಿಕೆಗಳು ಮತ್ತು ದೃಶ್ಯ ಸಹಾಯಕಗಳನ್ನು ಪರಿಶೀಲಿಸಿರಿ.
◼ ಮುದ್ರಿತ ಪ್ರಶ್ನೆಗಳಿಗಾಗಿರುವ ಉತ್ತರಗಳನ್ನು, ಮುಖ್ಯ ಪದಗಳು ಮತ್ತು ಪದಗುಚ್ಛಗಳನ್ನು ಗುರುತಿಸುವ ಮೂಲಕ ಗೊತ್ತುಪಡಿಸಿ.
◼ ಅಧ್ಯಯನದ ಸಮಯದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯಾವ ವಚನಗಳನ್ನು ಓದಬೇಕೆಂದು ನಿರ್ಣಯಿಸಿರಿ. ಅಧ್ಯಯನ ಮಾಡುವ ಪ್ರಕಾಶನದ ಅಂಚಿನಲ್ಲಿ ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳಿ.
◼ ಮುಖ್ಯಾಂಶಗಳ ಸಂಕ್ಷಿಪ್ತ ಪುನರ್ವಿಮರ್ಶೆಯನ್ನು ತಯಾರಿಸಿ.
ವ್ಯಕ್ತಿಯ ಅಗತ್ಯಗಳಿಗೆ ಪಾಠವನ್ನು ಅಳವಡಿಸಿರಿ
◼ ವಿದ್ಯಾರ್ಥಿಯ ಮತ್ತು ಅವನ ಅಗತ್ಯಗಳ ಕುರಿತು ಪ್ರಾರ್ಥಿಸಿರಿ.
◼ ವಿದ್ಯಾರ್ಥಿಯು ಅರ್ಥಮಾಡಿಕೊಳ್ಳಲು ಅಥವಾ ಸ್ವೀಕರಿಸಲು ಕಷ್ಟಕರವಾಗಿ ಕಂಡುಕೊಳ್ಳಬಹುದಾದ ಅಂಶಗಳನ್ನು ಮುಂಗಾಣಲು ಪ್ರಯತ್ನಿಸಿ.
◼ ನೀವು ಪರಿಗಣಿಸಬೇಕಾದದ್ದು: ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲಾಗುವಂತೆ ಅವನು ಯಾವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಅಥವಾ ಯಾವ ವಿಷಯದಲ್ಲಿ ಕೆಲಸಮಾಡಬೇಕಾಗಿದೆ? ನಾನು ಅವನ ಹೃದಯವನ್ನು ಹೇಗೆ ತಲಪಬಲ್ಲೆ?
◼ ಅಗತ್ಯಕ್ಕನುಸಾರ, ಒಂದು ಅಂಶವನ್ನು ಅಥವಾ ಒಂದು ಶಾಸ್ತ್ರವಚನವನ್ನು ವಿದ್ಯಾರ್ಥಿಯು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಒಂದು ದೃಷ್ಟಾಂತವನ್ನೋ, ವಿವರಣೆಯನ್ನೋ ಅಥವಾ ಪ್ರಶ್ನೆಗಳ ಒಂದು ಸರಮಾಲೆಯನ್ನೋ ತಯಾರಿಸಿರಿ.
ಭಾಗ 3: ಶಾಸ್ತ್ರವಚನಗಳ ಪರಿಣಾಮಕಾರಿ ಉಪಯೋಗ
ನಾವು ಬೈಬಲ್ ಅಧ್ಯಯನಗಳನ್ನು ನಡೆಸುವುದು ‘ಶಿಷ್ಯರನ್ನಾಗಿ ಮಾಡುವ’ ಉದ್ದೇಶದಿಂದ. ಇದನ್ನು ನಾವು, ಜನರು ದೇವರ ವಾಕ್ಯದ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಹಾಗೂ ತಮ್ಮ ಜೀವಿತಗಳಲ್ಲಿ ಅವುಗಳನ್ನು ಅನ್ವಯಿಸಿಕೊಳ್ಳಲು ಸಹಾಯಮಾಡುವ ಮೂಲಕ ಮಾಡುತ್ತೇವೆ. (ಮತ್ತಾ. 28:19, 20; 1 ಥೆಸ. 2:13) ಆದುದರಿಂದ, ಅಧ್ಯಯನವು ಶಾಸ್ತ್ರವಚನಗಳ ಮೇಲೆ ಕೇಂದ್ರೀಕೃತವಾಗಿರಬೇಕು.—km-KA 11/04 ಪು. 4.
ದೇವರ ವಾಕ್ಯದಿಂದ ಬೋಧಿಸಿರಿ
◼ ವಿದ್ಯಾರ್ಥಿಯು ತನ್ನ ಸ್ವಂತ ಬೈಬಲಿನಲ್ಲಿ ವಚನಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಡಿರಿ.
◼ ನಮ್ಮ ನಂಬಿಕೆಗಳಿಗೆ ಶಾಸ್ತ್ರೀಯ ಆಧಾರವನ್ನು ಕೊಡುವ ವಚನಗಳನ್ನು ತೆರೆದು ಓದಿರಿ ಮತ್ತು ಚರ್ಚಿಸಿರಿ.
◼ ಪ್ರಶ್ನೆಗಳನ್ನು ಉಪಯೋಗಿಸಿರಿ. ಬೈಬಲ್ ವಚನಗಳನ್ನು ನೀವು ವಿದ್ಯಾರ್ಥಿಗೆ ವಿವರಿಸುವ ಬದಲು, ಅವುಗಳನ್ನು ಅವರೇ ನಿಮಗೆ ವಿವರಿಸುವಂತೆ ಮಾಡಿ.
◼ ಸರಳವಾಗಿರಲಿ. ಒಂದು ವಚನದ ಪ್ರತಿಯೊಂದು ಅಂಶವನ್ನೂ ವಿವರಿಸಲು ಹೋಗಬೇಡಿ. ವಿಷಯವನ್ನು ಸ್ಪಷ್ಟಪಡಿಸಲು ಬೇಕಾಗಿರುವಷ್ಟು ವಿವರಣೆಯನ್ನು ಮಾತ್ರ ಕೊಡಿರಿ.
◼ ಪ್ರಾಯೋಗಿಕ ಅನ್ವಯವನ್ನು ಮಾಡಿರಿ. ಬೈಬಲ್ ವಚನಗಳು ವೈಯಕ್ತಿಕವಾಗಿ ವಿದ್ಯಾರ್ಥಿಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಅವನಿಗೆ ತೋರಿಸಿರಿ.
ಭಾಗ 4: ತಯಾರಿಸಲಿಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿನೀಡುವುದು
ಪಾಠವನ್ನು ಮುಂಚಿತವಾಗಿಯೇ ಓದುವ, ಉತ್ತರಗಳಿಗೆ ಅಡಿಗೆರೆ ಹಾಕುವ ಮತ್ತು ಅವುಗಳನ್ನು ಸ್ವಂತ ಮಾತುಗಳಲ್ಲಿ ಹೇಗೆ ವ್ಯಕ್ತಪಡಿಸಬಲ್ಲೆ ಎಂದು ಯೋಚಿಸುವ ಒಬ್ಬ ವಿದ್ಯಾರ್ಥಿಯು ವೇಗವಾಗಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾನೆ. ಆದುದರಿಂದ, ಕ್ರಮವಾದ ಅಧ್ಯಯನವು ಸ್ಥಾಪಿಸಲ್ಪಟ್ಟ ಕೂಡಲೆ, ತಯಾರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗೆ ತೋರಿಸಲಿಕ್ಕಾಗಿ ಅವನೊಟ್ಟಿಗೆ ಕುಳಿತು ಒಂದು ಪಾಠವನ್ನು ತಯಾರಿಸಿರಿ. ಹೆಚ್ಚಿನ ವಿದ್ಯಾರ್ಥಿಗಳೊಂದಿಗೆ, ಇಡೀ ಅಧ್ಯಾಯವನ್ನು ಅಥವಾ ಪಾಠವನ್ನು ಒಟ್ಟಿಗೆ ತಯಾರಿಸುವುದು ಸಹಾಯಕಾರಿಯಾಗಿರಬಹುದು.—km-KA 12/04 ಪು. 1.
ಉತ್ತರಗಳಿಗೆ ಅಡಿಗೆರೆ ಹಾಕುವುದು ಮತ್ತು ಟಿಪ್ಪಣಿ ಬರೆಯುವುದು
◼ ಮುದ್ರಿತ ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿರಿ.
◼ ನೀವು ಅಧ್ಯಯನ ಪ್ರಕಾಶನದ ನಿಮ್ಮ ಸ್ವಂತ ಪ್ರತಿಯಲ್ಲಿ ಮುಖ್ಯ ಪದಗಳು ಅಥವಾ ವಾಕ್ಯಗಳಿಗೆ ಮಾತ್ರ ಹಾಕಿರುವ ಅಡಿಗೆರೆಗಳನ್ನು ವಿದ್ಯಾರ್ಥಿಗೆ ತೋರಿಸಿರಿ.
◼ ಸೂಚಿಸಲ್ಪಟ್ಟಿರುವ ಪ್ರತಿಯೊಂದು ವಚನವು ಪ್ಯಾರಗ್ರಾಫ್ನಲ್ಲಿರುವ ಒಂದು ಅಂಶವನ್ನು ಬೆಂಬಲಿಸುತ್ತದೆ ಎಂಬುದನ್ನು ಮನಗಾಣುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ ಮತ್ತು ಅವನ ಅಧ್ಯಯನ ಪ್ರಕಾಶನದ ಮಾರ್ಜಿನ್ನಲ್ಲಿ ಚುಟುಕಾದ ಟಿಪ್ಪಣಿಗಳನ್ನು ಹೇಗೆ ಬರೆದುಕೊಳ್ಳುವುದು ಎಂಬುದನ್ನು ಅವನಿಗೆ ತೋರಿಸಿರಿ.
ಸಂಕ್ಷಿಪ್ತ ಮೇಲ್ನೋಟ ಮತ್ತು ಪುನರ್ವಿಮರ್ಶೆ
◼ ಕೂಲಂಕಷವಾಗಿ ತಯಾರಿಸಲು ಹೋಗುವ ಮುಂಚೆ, ಪಾಠದ ಶೀರ್ಷಿಕೆ, ಉಪ-ಶೀರ್ಷಿಕೆಗಳು ಮತ್ತು ಚಿತ್ರಗಳನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ವಿದ್ಯಾರ್ಥಿಗೆ ತೋರಿಸಿರಿ.
◼ ತನ್ನ ತಯಾರಿಯ ಅವಧಿಯ ಅಂತ್ಯದಲ್ಲಿ, ಮುಖ್ಯ ಅಂಶಗಳನ್ನು ಪುನರ್ವಿಮರ್ಶಿಸುವಂತೆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿರಿ.
ಭಾಗ 5: ಎಷ್ಟು ವಿಷಯಭಾಗವನ್ನು ಆವರಿಸಬೇಕೆಂಬುದನ್ನು ನಿರ್ಧರಿಸುವುದು
ಎಷ್ಟು ವಿಷಯಭಾಗವು ಆವರಿಸಲ್ಪಡಬೇಕು ಎಂಬುದು ಬೋಧಕರ ಮತ್ತು ವಿದ್ಯಾರ್ಥಿಯ ಸಾಮರ್ಥ್ಯ ಹಾಗೂ ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿರುವುದು.—km-KA 1/05 ಪು. 1.
ಬಲವಾದ ನಂಬಿಕೆಯನ್ನು ಕಟ್ಟಿರಿ
◼ ಒಂದು ನಿರ್ದಿಷ್ಟ ಅವಧಿಯಲ್ಲಿ ತುಂಬ ವಿಷಯಭಾಗವನ್ನು ಆವರಿಸುವ ಉದ್ದೇಶದಿಂದ ವಿದ್ಯಾರ್ಥಿಗೆ ಸ್ಪಷ್ಟವಾಗಿ ಅರ್ಥವಿವರಣೆ ಮಾಡುವುದನ್ನು ತ್ಯಾಗಮಾಡಬೇಡಿ.
◼ ವಿದ್ಯಾರ್ಥಿಯು ಏನನ್ನು ಕಲಿಯುತ್ತಿದ್ದಾನೋ ಅದನ್ನು ಅವನು ಅರ್ಥಮಾಡಿಕೊಂಡು ಸ್ವೀಕರಿಸಲಿಕ್ಕಾಗಿ ಅಗತ್ಯವಿರುವಷ್ಟು ಸಮಯವನ್ನು ಅವನೊಂದಿಗೆ ಕಳೆಯಿರಿ.
◼ ನಾವು ಬೋಧಿಸುವ ವಿಷಯಗಳಿಗೆ ಆಧಾರವನ್ನು ಒದಗಿಸುವ ಪ್ರಮುಖ ಶಾಸ್ತ್ರವಚನಗಳನ್ನು ಪರಿಗಣಿಸಲು ಸಾಕಷ್ಟು ಸಮಯವನ್ನು ವಿನಿಯೋಗಿಸಿರಿ.
ಅಧ್ಯಯನದ ಸಮಯದಲ್ಲಿ ಅಪಕರ್ಷಿತರಾಗಬೇಡಿ
◼ ಒಬ್ಬ ವಿದ್ಯಾರ್ಥಿಗೆ ತನ್ನ ವೈಯಕ್ತಿಕ ವಿಷಯಗಳ ಕುರಿತು ಹೆಚ್ಚು ಸಮಯ ಮಾತಾಡಲಿಕ್ಕಿರುವುದಾದರೆ, ಇದನ್ನು ಅಧ್ಯಯನದ ನಂತರ ಮಾತಾಡಲು ನೀವು ಏರ್ಪಾಡು ಮಾಡಬೇಕಾಗಬಹುದು.
◼ ಅಧ್ಯಯನದ ಸಮಯದಲ್ಲಿ ಅಧಿಕವಾಗಿ ಮಾತಾಡಬೇಡಿರಿ. ವಿದ್ಯಾರ್ಥಿಯು ಮೂಲಭೂತ ಬೈಬಲ್ ಬೋಧನೆಗಳ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವುದನ್ನು ತಡೆಗಟ್ಟದಿರುವ ಸಲುವಾಗಿ, ಹೆಚ್ಚಿನ ವಿಷಯಗಳು ಮತ್ತು ಅನುಭವಗಳ ಕುರಿತು ಚರ್ಚಿಸುವುದನ್ನು ಮಿತವಾಗಿರಿಸಿ.
ಭಾಗ 6: ವಿದ್ಯಾರ್ಥಿಯು ಒಂದು ಪ್ರಶ್ನೆಯನ್ನು ಎಬ್ಬಿಸುವಾಗ
ಒಮ್ಮೆ ಒಂದು ಬೈಬಲ್ ಅಧ್ಯಯನವು ಸ್ಥಾಪಿಸಲ್ಪಟ್ಟ ಅನಂತರ, ಒಂದರಿಂದ ಮತ್ತೊಂದು ವಿಷಯವಸ್ತುವಿಗೆ ಹಾರುವ ಬದಲು, ಬೈಬಲ್ ಬೋಧನೆಗಳನ್ನು ಕ್ರಮವಾದ ರೀತಿಯಲ್ಲಿ ಪರಿಗಣಿಸುವುದು ಹೆಚ್ಚು ಉತ್ತಮ. ಇದು ನಿಷ್ಕೃಷ್ಟ ಜ್ಞಾನದ ಬುನಾದಿಯನ್ನು ಕಟ್ಟಲು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಮಾಡಲು ವಿದ್ಯಾರ್ಥಿಗೆ ಸಹಾಯಮಾಡುವುದು.—km-KA 2/05 ಪು. 6.
ವಿವೇಚನಾಶೀಲರಾಗಿರಿ
◼ ಪರಿಗಣಿಸಲ್ಪಡುತ್ತಿರುವ ಅಧ್ಯಯನ ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ಆ ಸಮಯದಲ್ಲೇ ಉತ್ತರಿಸಬಹುದು.
◼ ಅಧ್ಯಯನ ಭಾಗಕ್ಕೆ ಸಂಬಂಧಿಸಿಲ್ಲದ ಅಥವಾ ಸಂಶೋಧನೆಯನ್ನು ಅಗತ್ಯಪಡಿಸುವ ಪ್ರಶ್ನೆಗಳನ್ನು ಮತ್ತೊಂದು ಸಮಯದಲ್ಲಿ ಪರಿಗಣಿಸಸಾಧ್ಯವಿದೆ. ಇಂತಹ ಪ್ರಶ್ನೆಗಳನ್ನು ಬರೆದುಕೊಳ್ಳುವುದು ಸಹಾಯಕರವಾಗಿರಬಹುದು.
◼ ಒಂದು ನಿರ್ದಿಷ್ಟ ಬೋಧನೆಯನ್ನು ಸ್ವೀಕರಿಸುವುದು ವಿದ್ಯಾರ್ಥಿಗೆ ಕಷ್ಟಕರವಾಗಿರುವುದಾದರೆ, ಆ ವಿಷಯದ ಕುರಿತು ಸವಿವರವಾಗಿ ಚರ್ಚಿಸುವ ಹೆಚ್ಚಿನ ಮಾಹಿತಿಯನ್ನು ಪರಿಗಣಿಸಿರಿ.
◼ ವಿದ್ಯಾರ್ಥಿಗೆ ಇನ್ನೂ ಮನದಟ್ಟು ಆಗಿರದಿದ್ದರೆ, ಆ ವಿಷಯವನ್ನು ಮತ್ತೊಂದು ಸಮಯದಲ್ಲಿ ಚರ್ಚಿಸೋಣವೆಂದು ತಿಳಿಸಿ ಅಧ್ಯಯನವನ್ನು ಮುಂದುವರಿಸಿರಿ.
ವಿನಯಶೀಲರಾಗಿರಿ
◼ ನಿಮಗೆ ಒಂದು ಪ್ರಶ್ನೆಗೆ ಉತ್ತರವು ತಿಳಿದಿಲ್ಲವಾದರೆ, ಅನಿಷ್ಕೃಷ್ಟವಾದ ಉತ್ತರವನ್ನು ಕೊಡುವ ಪ್ರಯತ್ನವನ್ನು ಮಾಡಬೇಡಿರಿ.
◼ ಸಂಶೋಧನೆಯನ್ನು ಹೇಗೆ ಮಾಡುವುದು ಎಂಬುದನ್ನು ವಿದ್ಯಾರ್ಥಿಗೆ ಪ್ರಗತಿಪರವಾಗಿ ತೋರಿಸಿಕೊಡಿ.
ಭಾಗ 7: ಅಧ್ಯಯನಕ್ಕಾಗಿ ಕೂಡಿರುವಾಗ ಪ್ರಾರ್ಥಿಸುವುದು
ಬೈಬಲ್ ವಿದ್ಯಾರ್ಥಿಗಳು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಬೇಕಾದರೆ ಯೆಹೋವನ ಆಶೀರ್ವಾದವು ಅವಶ್ಯ. ಆದುದರಿಂದ, ಸ್ವಲ್ಪಕಾಲದಿಂದ ನಡೆಸಲ್ಪಡುತ್ತಿರುವ ಒಂದು ಅಧ್ಯಯನವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಮುಕ್ತಾಯಗೊಳಿಸುವುದು ಯೋಗ್ಯವಾಗಿದೆ.—km-KA 3/05 ಪು. 8.
ಪ್ರಾರ್ಥನೆಯನ್ನು ಪರಿಚಯಿಸುವ ವಿಧ
◼ ಧಾರ್ಮಿಕ ವ್ಯಕ್ತಿಗಳೊಂದಿಗೆ ಮೊದಲ ಅಧ್ಯಯನದಿಂದಲೇ ಪ್ರಾರ್ಥನೆಯನ್ನು ಮಾಡಲಾರಂಭಿಸಸಾಧ್ಯವಿದೆ.
◼ ಇತರ ವಿದ್ಯಾರ್ಥಿಗಳ ವಿಷಯದಲ್ಲಿಯಾದರೋ, ಪ್ರಾರ್ಥನೆಯನ್ನು ಯಾವಾಗ ಪರಿಚಯಿಸುವುದು ಎಂಬುದನ್ನು ನಾವು ವಿವೇಚಿಸಿ ತೀರ್ಮಾನಿಸಬೇಕು.
◼ ಪ್ರಾರ್ಥನೆಯನ್ನು ಏಕೆ ಮಾಡಬೇಕು ಎಂಬುದನ್ನು ವಿವರಿಸಲಿಕ್ಕಾಗಿ ಕೀರ್ತನೆ 25:4, 5 ಮತ್ತು 1 ಯೋಹಾನ 5:14ನ್ನು ಉಪಯೋಗಿಸಸಾಧ್ಯವಿದೆ.
◼ ಯೆಹೋವನಿಗೆ ಯೇಸು ಕ್ರಿಸ್ತನ ಮೂಲಕ ಪ್ರಾರ್ಥನೆಯನ್ನು ಮಾಡಬೇಕು ಎಂಬುದನ್ನು ತೋರಿಸಲಿಕ್ಕಾಗಿ ಯೋಹಾನ 15:16ನ್ನು ಉಪಯೋಗಿಸಸಾಧ್ಯವಿದೆ.
ಪ್ರಾರ್ಥನೆಯಲ್ಲಿ ಒಳಗೂಡಿಸಬಹುದಾದ ವಿಷಯಗಳು
◼ ಉಪದೇಶದ ಮೂಲನಾಗಿರುವ ಯೆಹೋವನಿಗೆ ಸ್ತುತಿಯನ್ನು ಸಲ್ಲಿಸುವುದು ಉತ್ತಮ.
◼ ವಿದ್ಯಾರ್ಥಿಯಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸಿರಿ.
◼ ಯೆಹೋವನು ಉಪಯೋಗಿಸುತ್ತಿರುವ ಸಂಘಟನೆಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಿರಿ.
◼ ತಾನು ಕಲಿಯುತ್ತಿರುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಯು ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ಕೇಳಿಕೊಳ್ಳಿ.
ಭಾಗ 8: ವಿದ್ಯಾರ್ಥಿಯನ್ನು ಸಂಘಟನೆಯ ಕಡೆಗೆ ನಿರ್ದೇಶಿಸುವುದು
ಬೈಬಲ್ ಅಧ್ಯಯನವನ್ನು ನಡೆಸುವಾಗ ನಮ್ಮ ಗುರಿಯು ವಿದ್ಯಾರ್ಥಿಗೆ ಕೇವಲ ತಾತ್ವಿಕ ವಿಚಾರವನ್ನು ಕಲಿಸುವುದಷ್ಟೇ ಅಲ್ಲ ಬದಲಿಗೆ ಕ್ರೈಸ್ತ ಸಭೆಯ ಭಾಗವಾಗುವಂತೆ ಅವರಿಗೆ ಸಹಾಯಮಾಡುವುದೂ ಅದರಲ್ಲಿ ಸೇರಿದೆ. ಪ್ರತಿ ವಾರ ಅಧ್ಯಯನದ ಸಮಯದಲ್ಲಿ ಯೆಹೋವನ ಸಂಘಟನೆಯ ಕುರಿತು ಒಂದು ಅಂಶವನ್ನು ಹಂಚಿಕೊಳ್ಳಲು ಕೊಂಚ ಸಮಯವನ್ನು ಬದಿಗಿರಿಸಿರಿ.—km-KA 4/05 ಪು. 8.
ಸಭಾ ಕೂಟಗಳು
◼ ಪ್ರತಿಯೊಂದು ಸಭಾ ಕೂಟದ ಬಗ್ಗೆ ವರ್ಣಿಸಿರಿ. ಮೊದಲ ಅಧ್ಯಯನದಿಂದಲೇ ಕೂಟಗಳಿಗೆ ಹಾಜರಾಗುವಂತೆ ಅವರನ್ನು ಆಮಂತ್ರಿಸಿರಿ.
◼ ಕೂಟಗಳಲ್ಲಿ ತಿಳಿಸಲ್ಪಟ್ಟ ಮುಖ್ಯ ಅಂಶಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ.
◼ ಜ್ಞಾಪಕಾಚರಣೆ, ಸಮ್ಮೇಳನಗಳು, ಅಧಿವೇಶನಗಳು ಮತ್ತು ಸರ್ಕಿಟ್ ಮೇಲ್ವಿಚಾರಕರ ಭೇಟಿಗಳಿಗಾಗಿ ಉತ್ಸಾಹವನ್ನು ಹೆಚ್ಚಿಸಿರಿ.
◼ ನಮ್ಮ ಸಾಹಿತ್ಯಗಳಲ್ಲಿರುವ ಚಿತ್ರಗಳನ್ನು ಉಪಯೋಗಿಸುತ್ತಾ, ಕೂಟಗಳು ಹೇಗೆ ನಡೆಸಲ್ಪಡುತ್ತವೆ ಎಂಬುದನ್ನು ಅವರು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಸಹಾಯಮಾಡಿರಿ.
◼ ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರನ್ನು ಓದುವಂತೆ ಅವರನ್ನು ಉತ್ತೇಜಿಸಿರಿ.
ಗಣ್ಯತೆಯನ್ನು ಬೆಳೆಸಲಿಕ್ಕಾಗಿ ವಿಡಿಯೋಗಳನ್ನು ಉಪಯೋಗಿಸಿರಿ
◼ ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಘಟನೆ
◼ ನಮ್ಮ ಸಹೋದರರ ಇಡೀ ಬಳಗ
◼ ದೈವಿಕ ಬೋಧನೆಯಿಂದ ಐಕ್ಯಗೊಳಿಸಲ್ಪಟ್ಟವರು
◼ ಭೂಮಿಯ ಕಟ್ಟಕಡೆಯ ವರೆಗೆ
ಭಾಗ 9: ಅನೌಪಚಾರಿಕವಾಗಿ ಸಾಕ್ಷಿನೀಡಲಿಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು
ಬೈಬಲ್ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯಗಳಲ್ಲಿ ನಂಬಿಕೆಯಿಡಲು ಆರಂಭಿಸುವಾಗ ಇತರರೊಂದಿಗೆ ಅದರ ಕುರಿತು ಮಾತಾಡಲು ಪ್ರಚೋದಿತರಾಗುತ್ತಾರೆ.—km-KA 5/05 ಪು. 1.
ಸಾಕ್ಷಿನೀಡುವಂತೆ ಅವರನ್ನು ಉತ್ತೇಜಿಸಿರಿ
◼ ಅಧ್ಯಯನಕ್ಕೆ ಕುಳಿತುಕೊಳ್ಳುವಂತೆ ಆಮಂತ್ರಿಸಸಾಧ್ಯವಿರುವ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಅವರಿಗಿದ್ದಾರೋ?
◼ ಅವರ ಸಹೋದ್ಯೋಗಿಗಳು, ಸಹಪಾಠಿಗಳು ಅಥವಾ ಇತರ ಪರಿಚಯಸ್ಥರು ಆಸಕ್ತಿಯನ್ನು ತೋರಿಸಿದ್ದಾರೋ?
ತಮ್ಮ ನಂಬಿಕೆಗಳನ್ನು ಹಂಚಿಕೊಳ್ಳುವಂತೆ ಅವರನ್ನು ತರಬೇತುಗೊಳಿಸಿ
◼ ಅಧ್ಯಯನದ ಸಮಯದಲ್ಲಿ ಸೂಕ್ತವಾದ ಅಂಶಗಳನ್ನು ಚರ್ಚಿಸುತ್ತಿರುವಾಗ, “ಈ ಸತ್ಯವನ್ನು ನಿಮ್ಮ ಕುಟುಂಬದ ಸದಸ್ಯರಿಗೆ ವಿವರಿಸಲು ನೀವು ಬೈಬಲನ್ನು ಹೇಗೆ ಉಪಯೋಗಿಸುವಿರಿ?” ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗೆ ಕೇಳಿರಿ.
◼ ದೇವರ ಹಾಗೂ ಆತನ ಉದ್ದೇಶದ ಬಗ್ಗೆ ಇತರರೊಂದಿಗೆ ಮಾತಾಡುವಾಗ ಗೌರವಪೂರ್ವಕವಾಗಿಯೂ ದಯೆಯಿಂದಲೂ ಮಾತಾಡುವ ಅಗತ್ಯವನ್ನು ಗಣ್ಯಮಾಡುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ.
◼ ನಮ್ಮ ಬೈಬಲ್ ಆಧಾರಿತ ನಂಬಿಕೆಗಳು ಹಾಗೂ ಚಟುವಟಿಕೆಗಳನ್ನು ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಒಬ್ಬ ವಿದ್ಯಾರ್ಥಿಯು ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರನ್ನು ಉಪಯೋಗಿಸಸಾಧ್ಯವಿದೆ.
ಭಾಗ 10: ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು
ಒಬ್ಬ ಬೈಬಲ್ ವಿದ್ಯಾರ್ಥಿಯು ಅಸ್ನಾತ ಪ್ರಚಾರಕನಾಗಲು ಅರ್ಹನಾಗಿದ್ದಾನೆ ಎಂದು ಹಿರಿಯರು ನಿರ್ಧರಿಸಿದಾಗ, ಅವನು ಸಭೆಯೊಂದಿಗೆ ಬಹಿರಂಗವಾಗಿ ಸಾರುವ ಕೆಲಸದಲ್ಲಿ ಭಾಗವಹಿಸಲು ಆರಂಭಿಸಬಹುದು.—km-KA 6/05 ಪು. 1.
ಒಟ್ಟಿಗೆ ತಯಾರಿಸುವುದು
◼ ಸೂಚಿತ ನಿರೂಪಣೆಗಳನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬುದನ್ನು ಹೊಸ ಪ್ರಚಾರಕನಿಗೆ ತೋರಿಸಿಕೊಡಿರಿ.
◼ ಸ್ಥಳಿಕ ಕ್ಷೇತ್ರಕ್ಕೆ ಸೂಕ್ತವಾಗಿರುವಂಥ ಒಂದು ಸರಳವಾದ ನಿರೂಪಣೆಯನ್ನು ಆರಿಸಿಕೊಳ್ಳಲು ಅವನಿಗೆ ಸಹಾಯಮಾಡಿರಿ.
◼ ಶುಶ್ರೂಷೆಯಲ್ಲಿ ಬೈಬಲನ್ನು ಉಪಯೋಗಿಸುವಂತೆ ಅವನನ್ನು ಉತ್ತೇಜಿಸಿರಿ.
◼ ಒಟ್ಟಿಗೆ ಪೂರ್ವಾಭಿನಯಿಸಿರಿ. ಸಾಮಾನ್ಯವಾಗಿ ಎದುರಾಗುವ ಪ್ರತಿಕ್ರಿಯೆಗಳನ್ನು ಹೇಗೆ ಜಾಣ್ಮೆಯಿಂದ ನಿಭಾಯಿಸಬಹುದು ಎಂಬುದನ್ನು ತೋರಿಸಿಕೊಡಿರಿ.
ಒಟ್ಟಿಗೆ ಸಾರುವುದು
◼ ನೀವಿಬ್ಬರೂ ಒಟ್ಟಿಗೆ ತಯಾರಿಸಿರುವ ನಿರೂಪಣೆಯನ್ನು ನೀವು ಹೇಗೆ ನೀಡುತ್ತೀರೆಂಬುದನ್ನು ವಿದ್ಯಾರ್ಥಿಯು ಮೊದಲು ಗಮನಿಸಲಿ.
◼ ವಿದ್ಯಾರ್ಥಿಯ ವ್ಯಕ್ತಿತ್ವ ಮತ್ತು ಸಾಮರ್ಥ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳಿರಿ. ಕೆಲವು ಸಂದರ್ಭಗಳಲ್ಲಿ, ನಿರೂಪಣೆಯ ಕೇವಲ ಒಂದು ಭಾಗವನ್ನು ಅವನು ನೀಡಿದರೆ ಸಾಕು.
◼ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವಂತೆ ಒಂದು ಕಾಲತಖ್ತೆಯನ್ನು ಇಟ್ಟುಕೊಳ್ಳಲು ಹೊಸ ಪ್ರಚಾರಕನಿಗೆ ಸಹಾಯಮಾಡಿರಿ.
ಭಾಗ 11: ಪುನರ್ಭೇಟಿಗಳನ್ನು ಮಾಡುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡುವುದು
ಪುನರ್ಭೇಟಿಗಾಗಿ ಸಿದ್ಧತೆಯು ಪ್ರಥಮ ಭೇಟಿಯಲ್ಲಿಯೇ ಆರಂಭಗೊಳ್ಳುತ್ತದೆ. ವಿದ್ಯಾರ್ಥಿಯು ಯಾರೊಂದಿಗೆ ಮಾತಾಡುತ್ತಾನೊ ಅವರಲ್ಲಿ ಯಥಾರ್ಥ ಆಸಕ್ತಿಯನ್ನು ತೋರಿಸುವಂತೆ ಅವನನ್ನು ಉತ್ತೇಜಿಸಿರಿ. ಮನೆಯವರ ಹೃದಯದಲ್ಲಿರುವ ವಿಚಾರವನ್ನು ಹೊರತರಲು, ಅವರ ಹೇಳಿಕೆಯನ್ನು ಗಮನಕೊಟ್ಟು ಆಲಿಸಲು ಮತ್ತು ಅವರಿಗೆ ಯಾವ ವಿಷಯಗಳು ಆಸಕ್ತಿಯನ್ನು ಉಂಟುಮಾಡುತ್ತವೆ ಎಂಬುದನ್ನು ಗುರುತಿಸಲು ವಿದ್ಯಾರ್ಥಿಗೆ ಪ್ರಗತಿಪರವಾಗಿ ತರಬೇತಿ ನೀಡಿರಿ.—km-KA 7/05 ಪು. 1.
ಹಿಂದಿರುಗಿ ಹೋಗಲು ತಯಾರಿಮಾಡುವುದು
◼ ಆರಂಭದ ಭೇಟಿಯನ್ನು ಪುನರ್ವಿಮರ್ಶಿಸಿರಿ ಮತ್ತು ಮನೆಯವನ ಆಸಕ್ತಿಯನ್ನು ಕೆರಳಿಸುವಂಥ ಒಂದು ಅಂಶವನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯಮಾಡಿ.
◼ ಅಧ್ಯಯನಕ್ಕಾಗಿ ಉಪಯೋಗಿಸುವ ಸಾಹಿತ್ಯದಲ್ಲಿರುವ ಯಾವುದಾದರೊಂದು ಪ್ಯಾರಗ್ರಾಫ್ನೊಂದಿಗೆ ಒಂದು ಬೈಬಲ್ ವಚನವನ್ನು ಎತ್ತಿತೋರಿಸುವ ಒಂದು ಸಂಕ್ಷಿಪ್ತ ನಿರೂಪಣೆಯನ್ನು ತಯಾರಿಸಿರಿ.
◼ ಚರ್ಚೆಯ ಕೊನೆಯಲ್ಲಿ ಕೇಳಸಾಧ್ಯವಿರುವ ಒಂದು ಪ್ರಶ್ನೆಯನ್ನು ತಯಾರಿಸಿರಿ.
ಆಸಕ್ತಿಯನ್ನು ಬೆಳೆಸಲು ತಪ್ಪದೆ ಹಿಂದಿರುಗಿರಿ
◼ ಯಾರೆಲ್ಲ ಆಸಕ್ತಿಯನ್ನು ತೋರಿಸುತ್ತಾರೊ ಅವರನ್ನು ತಪ್ಪದೆ ಪುನಃ ಭೇಟಿಯಾಗುವಂತೆ ವಿದ್ಯಾರ್ಥಿಯನ್ನು ಉತ್ತೇಜಿಸಿರಿ.
◼ ಕಂಡುಕೊಳ್ಳಲು ಕಷ್ಟಕರವಾಗಿರುವಂಥ ಜನರನ್ನು ತಲಪುವುದರಲ್ಲಿ ಪಟ್ಟುಹಿಡಿದು ಪ್ರಯತ್ನಿಸುವ ಅಗತ್ಯವನ್ನು ಮನಗಾಣುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ.
◼ ಪುನರ್ಭೇಟಿಗೆ ಸಮಯವನ್ನು ಹೇಗೆ ನಿಶ್ಚಯಿಸಿಕೊಳ್ಳುವುದು ಎಂಬುದನ್ನು ವಿದ್ಯಾರ್ಥಿಗೆ ತೋರಿಸಿಕೊಡಿರಿ ಮತ್ತು ಮಾತುಕೊಟ್ಟ ಪ್ರಕಾರವೇ ಹಿಂದಿರುಗುವ ಅಗತ್ಯವನ್ನು ಮನಗಾಣಲು ಅವನಿಗೆ ಸಹಾಯಮಾಡಿರಿ.
ಭಾಗ 12: ಬೈಬಲ್ ಅಧ್ಯಯನಗಳನ್ನು ಆರಂಭಿಸಿ, ನಡೆಸಲು ವಿದ್ಯಾರ್ಥಿಗಳಿಗೆ ಸಹಾಯಮಾಡುವುದು
ನೀವು ಯೇಸುವಿನ ಮಾದರಿಯನ್ನು ಅನುಕರಿಸುತ್ತಾ, ನಿಮ್ಮ ಸ್ವಂತ ಶುಶ್ರೂಷೆಯಲ್ಲಿ ಒಂದು ಯೋಗ್ಯವಾದ ಮಾದರಿಯನ್ನು ಇಡುವುದು ಪ್ರಾಮುಖ್ಯವಾಗಿದೆ. ಶುಶ್ರೂಷೆಯಲ್ಲಿನ ನಿಮ್ಮ ಮಾದರಿಯನ್ನು ನಿಮ್ಮ ವಿದ್ಯಾರ್ಥಿಯು ಗಮನಿಸುವಾಗ, ಪುನರ್ಭೇಟಿಗಳನ್ನು ಮಾಡುವ ಉದ್ದೇಶವು ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿಯೇ ಎಂಬುದನ್ನು ಅವನು ಅರ್ಥಮಾಡಿಕೊಳ್ಳುವನು.—km-KA 8/05 ಪು. 1.
ಅಧ್ಯಯನದ ಪ್ರಸ್ತಾಪವನ್ನು ಮಾಡುವುದು
◼ ಸಾಮಾನ್ಯವಾಗಿ, ಅಧ್ಯಯನದ ಏರ್ಪಾಡಿನ ಸಂಪೂರ್ಣ ವಿವರಣೆಯನ್ನು ನೀಡುವ ಅಗತ್ಯವಿಲ್ಲ ಎಂದು ವಿದ್ಯಾರ್ಥಿಗೆ ವಿವರಿಸಿರಿ.
◼ ಅನೇಕವೇಳೆ, ಅಧ್ಯಯನ ಪ್ರಕಾಶನದಿಂದ ಒಂದು ಇಲ್ಲವೆ ಎರಡು ಪ್ಯಾರಗ್ರಾಫ್ಗಳನ್ನು ಉಪಯೋಗಿಸುತ್ತಾ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸುವುದು ಉತ್ತಮವಾಗಿದೆ.
◼ ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ಕೊಡಲ್ಪಟ್ಟಿರುವ ಸಲಹೆಗಳಲ್ಲಿ ಒಂದನ್ನು ಪುನರ್ವಿಮರ್ಶಿಸಿರಿ ಮತ್ತು ಪೂರ್ವಾಭಿನಯಿಸಿರಿ.—km-KA 8/05 ಪು. 8; km-KA 1/02 ಪು. 6.
ವಿದ್ಯಾರ್ಥಿಗಳನ್ನು ಬೋಧಕರಾಗುವಂತೆ ತರಬೇತುಗೊಳಿಸುವುದು
◼ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿರಿ.
◼ ಹೊಸ ಪ್ರಚಾರಕರನ್ನು ನಿಮ್ಮೊಂದಿಗೆ ಬೈಬಲ್ ಅಧ್ಯಯನಗಳಿಗೆ ಬರುವಂತೆ ಆಮಂತ್ರಿಸಿರಿ ಮತ್ತು ಅವರು ಬೋಧಿಸುವುದರಲ್ಲಿ ಸ್ವಲ್ಪ ಮಟ್ಟಿಗೆ ಭಾಗವಹಿಸಬಹುದು.