ಸಾರಲಿಕ್ಕಾಗಿ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಿರಿ
1 ಕ್ರೈಸ್ತ ಸಭೆಯು ವಿಭಿನ್ನವಾದ ಸನ್ನಿವೇಶಗಳಲ್ಲಿರುವ ಜನರಿಂದ ರಚಿತವಾಗಿದೆ. ಆದರೂ, ಯೆಹೋವನನ್ನು ಸ್ತುತಿಸುವ ನಮ್ಮ ದೃಢನಿರ್ಧಾರದಲ್ಲಿ ನಾವೆಲ್ಲರೂ ಐಕ್ಯದಿಂದಿದ್ದೇವೆ. (ಕೀರ್ತ. 79:13) ಒಂದುವೇಳೆ ಅನಾರೋಗ್ಯ ಅಥವಾ ಕಷ್ಟಕರವಾದ ಪರಿಸ್ಥಿತಿಗಳು ನಾವು ಸುವಾರ್ತೆ ಸಾರುವುದರಲ್ಲಿ ಪಾಲ್ಗೊಳ್ಳುವುದನ್ನು ಸೀಮಿತಗೊಳಿಸುವುದಾದರೆ, ಸಾರಲಿಕ್ಕಾಗಿ ಸಂದರ್ಭಗಳನ್ನು ನಾವು ಹೇಗೆ ಸೃಷ್ಟಿಸಿಕೊಳ್ಳಸಾಧ್ಯವಿದೆ?
2 ದೈನಂದಿನ ಚಟುವಟಿಕೆಗಳ ಸಮಯದಲ್ಲಿ: ಯೇಸು ಜನರೊಂದಿಗಿನ ತನ್ನ ಪ್ರತಿದಿನದ ವ್ಯವಹಾರಗಳನ್ನು ಸಾಕ್ಷಿನೀಡಲಿಕ್ಕಾಗಿ ಸದುಪಯೋಗಿಸಿದನು. ಅವನು ತೆರಿಗೆಯ ಕಛೇರಿಯನ್ನು ದಾಟಿಹೋಗುತ್ತಿದ್ದಾಗ ಮತ್ತಾಯನೊಂದಿಗೆ ಮಾತಾಡಿದನು, ಪ್ರಯಾಣ ಮಾಡುತ್ತಿದ್ದಾಗ ಜಕ್ಕಾಯನೊಂದಿಗೆ ಮಾತಾಡಿದನು ಮತ್ತು ಒಂದು ಬಾವಿಯ ಬಳಿಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಸಮಾರ್ಯದ ಒಬ್ಬ ಸ್ತ್ರೀಯೊಂದಿಗೆ ಮಾತಾಡಿದನು. (ಮತ್ತಾ. 9:9; ಲೂಕ 19:1-5; ಯೋಹಾ. 4:6-10) ನಾವು ಸಹ ನಮ್ಮ ದೈನಂದಿನ ಚಟುವಟಿಕೆಗಳ ಸಮಯದಲ್ಲಿ ಯಾರಾರೊಂದಿಗೆ ಮಾತಾಡುತ್ತೇವೊ ಅವರೆಲ್ಲರಿಗೆ ಸಾಕ್ಷಿನೀಡಸಾಧ್ಯವಿದೆ. ಬೈಬಲನ್ನು, ಟ್ರ್ಯಾಕ್ಟ್ಗಳನ್ನು ಮತ್ತು ಬ್ರೋಷರ್ಗಳನ್ನು ಸದಾ ನಮ್ಮೊಂದಿಗೆ ಇಟ್ಟುಕೊಂಡಿರುವುದು, ನಮ್ಮ ನಿರೀಕ್ಷೆಯ ಕುರಿತು ಮಾತಾಡಲು ಸಿದ್ಧರಾಗಿರುವಂತೆ ನಮ್ಮನ್ನು ಉತ್ತೇಜಿಸುವುದು.—1 ಪೇತ್ರ 3:15.
3 ನಿಮಗೆ ನಡೆಯಲು ಅಥವಾ ಪ್ರಯಾಣಿಸಲು ಕಷ್ಟಕರವಾಗಿರುವುದು, ಮನೆಯಿಂದ ಮನೆಯ ಸೇವೆಯಲ್ಲಿನ ನಿಮ್ಮ ಭಾಗವಹಿಸುವಿಕೆಯನ್ನು ಸೀಮಿತಗೊಳಿಸುತ್ತದೊ? ಹಾಗಿರುವಲ್ಲಿ, ನಿಮ್ಮನ್ನು ಭೇಟಿಯಾಗುವ ವೈದ್ಯಕೀಯ ಸಿಬ್ಬಂದಿಗಳು ಮತ್ತು ನೀವು ಯಾರನ್ನು ಸಂಧಿಸುತ್ತೀರೊ ಅವರೆಲ್ಲರಿಗೆ ಸಾಕ್ಷಿನೀಡಲು ಸಿಗುವ ಸಂದರ್ಭಗಳನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳಿರಿ. (ಅ. ಕೃ. 28:30, 31) ಪರಿಸ್ಥಿತಿಗಳಿಂದಾಗಿ ನೀವು ಮನೆಯಲ್ಲೇ ಇರಬೇಕಾಗಿದ್ದಲ್ಲಿ, ಟೆಲಿಫೋನ್ ಅಥವಾ ಪತ್ರದ ಮೂಲಕ ಸಾಕ್ಷಿನೀಡಲು ಪ್ರಯತ್ನಿಸಿದ್ದೀರೊ? ಒಬ್ಬ ಸಹೋದರಿಯು ಸಾಕ್ಷಿಗಳಾಗಿರದ ತನ್ನ ಕುಟುಂಬ ಸದಸ್ಯರಿಗೆ ಕ್ರಮವಾಗಿ ಪತ್ರವನ್ನು ಬರೆಯುತ್ತಾಳೆ. ಅದರಲ್ಲಿ ಅವಳು ಬೈಬಲಿನಿಂದ ಉತ್ತೇಜನದಾಯಕವಾದ ವಿಚಾರಗಳನ್ನು ಮತ್ತು ಸಾಕ್ಷಿನೀಡುವಾಗ ತನಗಾದಂಥ ಅನುಭವಗಳನ್ನು ಸೇರಿಸುತ್ತಾಳೆ.
4 ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ: ಯೆಹೋವನನ್ನು ಸ್ತುತಿಸಲು ನಮಗಿರುವ ಅಪೇಕ್ಷೆಯು, ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಸಹ ಸತ್ಯದ ಬೀಜಗಳನ್ನು ಬಿತ್ತಲು ಅವಕಾಶಗಳನ್ನು ಮಾಡಿಕೊಳ್ಳುವಂತೆ ನಮ್ಮನ್ನು ಪ್ರೇರಿಸುವುದು. ಎಂಟು ವರುಷದವನಾಗಿದ್ದ ಒಬ್ಬ ಪ್ರಚಾರಕನು ಎಚ್ಚರ! ಪತ್ರಿಕೆಯಲ್ಲಿ ಚಂದ್ರನ ಕುರಿತು ತಾನು ಓದಿದ ವಿಷಯವನ್ನು ತನ್ನ ಕ್ಲಾಸ್ನಲ್ಲಿ ತಿಳಿಸಿದನು. ಅವನ ಶಿಕ್ಷಕಿಯು ಅವನು ಈ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡನೆಂಬುದನ್ನು ತಿಳಿದುಕೊಂಡ ಬಳಿಕ, ಸಾಕ್ಷಿಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಿದಾಗಲ್ಲೆಲ್ಲ ಅವುಗಳನ್ನು ಸ್ವೀಕರಿಸಿದಳು. ಕೆಲಸದ ಸ್ಥಳದಲ್ಲಿ ಎಲ್ಲರಿಗೆ ಕಾಣುವಂಥ ಜಾಗದಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಕೇವಲ ಇಡುವುದು ತಾನೇ, ಇತರರು ಪ್ರಶ್ನೆಗಳನ್ನು ಕೇಳುವಂತೆ ಪ್ರಚೋದಿಸಿ, ಸಾಕ್ಷಿನೀಡಲು ನಮಗೆ ಸಂದರ್ಭವನ್ನು ಕೊಡಬಹುದು.
5 ನೀವು ದೈನಂದಿನ ಚಟುವಟಿಕೆಗಳ ಸಮಯದಲ್ಲಿ ಸಾರಲಿಕ್ಕಾಗಿ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಸಾಧ್ಯವಿದೆಯೊ? ನಮ್ಮ ಸನ್ನಿವೇಶಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ನಾವು ಪ್ರತಿದಿನವೂ ‘ದೇವರಿಗೆ ಸ್ತೋತ್ರಯಜ್ಞವನ್ನು ಸಮರ್ಪಿಸಲು’ ಪ್ರಯತ್ನಿಸೋಣ.—ಇಬ್ರಿ. 13:15.