ನೀವು ನಿಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳಬಲ್ಲಿರೋ?
1. ಸಾರಲಿಕ್ಕಾಗಿರುವ ನಮ್ಮ ಕಾಲತಖ್ತೆಯನ್ನು ನಾವು ಏಕೆ ಹೊಂದಿಸಿಕೊಳ್ಳಬೇಕು?
1 ಸತ್ಯ ಕ್ರೈಸ್ತರಾದ ನಾವು ‘ಮನುಷ್ಯರನ್ನು ಹಿಡಿಯುವ ಬೆಸ್ತರಾಗಲು’ ಕೊಡಲ್ಪಟ್ಟ ಆಮಂತ್ರಣವನ್ನು ಸ್ವೀಕರಿಸಿದ್ದೇವೆ. (ಮತ್ತಾ. 4:19) ಅಕ್ಷರಶಃ ಬೆಸ್ತರು ಮೀನು ಹಿಡಿಯುವ ಕೆಲಸಕ್ಕೆ ಅವರ ಸಮಯವನ್ನು ಹೊಂದಿಸಿಕೊಳ್ಳುವಂತೆ ನಾವು ಸಹ ಜನರು ಮನೆಯಲ್ಲಿರುವ ಸಂದರ್ಭಗಳಲ್ಲಿ ಸಾರಲು ನಮ್ಮ ಸಮಯವನ್ನು ಹೊಂದಿಸಿಕೊಳ್ಳುವುದಾದರೆ ಮನುಷ್ಯರನ್ನು ಹಿಡಿಯುವ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಿದೆ. ಮುಂಬರುವ ತಿಂಗಳುಗಳಲ್ಲಿ ಅನೇಕ ಪ್ರದೇಶಗಳಲ್ಲಿ ಹಗಲುಹೊತ್ತು ದೀರ್ಘವಾಗಿರುತ್ತದೆ. ಸಂಜೆಹೊತ್ತು ಹೆಚ್ಚಿನ ಜನರು ಮನೆಯಲ್ಲಿರುತ್ತಾರೆ. ಅನೇಕವೇಳೆ, ಅವರು ಹಾಯಾಗಿರುತ್ತಾರೆ ಮತ್ತು ಸಂದರ್ಶಕರನ್ನು ಬರಮಾಡುವ ಮನಸ್ಸುಳ್ಳವರಾಗಿರುತ್ತಾರೆ. ಅಂತಹ ಸಮಯಗಳಲ್ಲಿ ಸಾರಲು ನೀವು ನಿಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳಬಲ್ಲಿರೋ?—1 ಕೊರಿಂ. 9:23.
2. ಸುವಾರ್ತೆಯನ್ನು ನಾವು ಹೆಚ್ಚಿನ ಜನರಿಗೆ ತಲಪಿಸಲು ಸಾಧ್ಯವಿರುವ ಕೆಲವು ವಿಧಗಳಾವುವು?
2 ಸಂಜೆ ಸಾಕ್ಷಿಕಾರ್ಯ: ಸಂಜೆ ವೇಳೆಯಲ್ಲಿ ಸಾರಲು ಮುಂಚಿತವಾಗಿ ಯೋಜಿಸುವುದು ಅನೇಕ ಜನರಿಗೆ ಸುವಾರ್ತೆಯನ್ನು ತಲಪಿಸಲು ನಮ್ಮನ್ನು ಶಕ್ತರನ್ನಾಗಿ ಮಾಡಬಲ್ಲದು. (ಜ್ಞಾನೋ. 21:5, NW) ಯುವಜನರು ಸಂಜೆ ಶಾಲೆ ಮುಗಿದ ನಂತರ ಸಾರಲು ಸಾಧ್ಯವಾಗಬಹುದು. ಇತರರು ಕೆಲಸದ ನಂತರ ಹಾಗೆ ಮಾಡಬಹುದು. ಕೆಲವು ಪುಸ್ತಕ ಅಧ್ಯಯನ ಗುಂಪುಗಳು ತಮ್ಮ ಪುಸ್ತಕ ಅಧ್ಯಯನಕ್ಕೆ ಮುಂಚೆ ಒಂದು ತಾಸು ಸಾರಲು ಏರ್ಪಾಡು ಮಾಡಬಹುದು.
3. ನೀವು ನಿಮ್ಮ ಟೆರಿಟೊರಿಯಲ್ಲಿ ಯಾವ ವಿಧಗಳಲ್ಲಿ ಸಂಜೆ ಸಮಯದಲ್ಲಿ ಸಾರಬಹುದು?
3 ಸಂಜೆಯಲ್ಲಿ ಮನೆಯಿಂದ ಮನೆಗೆ ಸಾರುವುದರಿಂದ, ಸಾಮಾನ್ಯವಾಗಿ ಬೇರೆ ಸಮಯಗಳಲ್ಲಿ ಮನೆಯಲ್ಲಿರದವರೊಂದಿಗೆ ಮಾತಾಡಲು ಸಾಧ್ಯವಾಗಬಹುದು. ಅನೇಕ ಕ್ಷೇತ್ರಗಳಲ್ಲಿ, ಬೀದಿ ಸಾಕ್ಷಿಕಾರ್ಯ ಮತ್ತು ಇತರ ರೀತಿಯ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಈ ಸಮಯದಲ್ಲಿ ಮಾಡಬಹುದು. ಮಾತ್ರವಲ್ಲ, ಅನೇಕರು ಸಾಯಂಕಾಲದ ಸಮಯವು ಪುನರ್ಭೇಟಿಗಳನ್ನು ಮಾಡಲು ಮತ್ತು ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಲು ಅತ್ಯುತ್ತಮ ಸಮಯವಾಗಿದೆಯೆಂದು ಕಂಡುಕೊಂಡಿದ್ದಾರೆ.
4. ಸಂಜೆ ಸಾಕ್ಷಿಕಾರ್ಯದಲ್ಲಿ ತೊಡಗಿರುವಾಗ ವಿವೇಚನೆ ಮತ್ತು ಪರಿಗಣನೆ ತೋರಿಸುವವರಾಗಿರುವುದು ಏಕೆ ಪ್ರಾಮುಖ್ಯವಾಗಿದೆ?
4 ವಿವೇಚನೆಯು ಅಗತ್ಯ: ಸಂಜೆ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವಾಗ ಒಳ್ಳೇ ವಿವೇಚನಾಶಕ್ತಿಯನ್ನು ಉಪಯೋಗಿಸಬೇಕು. ಬಹಳ ತಡವಾಗಿ, ಬಹುಶಃ ಮನೆಯವರು ಮಲಗಲು ಸಿದ್ಧರಾಗುತ್ತಿರುವ ಸಮಯದಲ್ಲಿ ಅವರನ್ನು ಭೇಟಿಮಾಡುವುದರ ಬದಲಿಗೆ, ನಮ್ಮ ಸಾಕ್ಷಿಕಾರ್ಯವನ್ನು ಸಾಯಂಕಾಲದ ಆರಂಭದ ತಾಸುಗಳಿಗೆ ಸೀಮಿತಗೊಳಿಸುವುದು ಅತ್ಯುತ್ತಮ. (ಫಿಲಿ. 2:4) ಮನೆಯ ಬಾಗಿಲನ್ನು ತಟ್ಟುವಾಗ, ಮನೆಯವರಿಗೆ ನೀವು ಸರಿಯಾಗಿ ಕಾಣುವ ಸ್ಥಳದಲ್ಲಿ ನಿಂತುಕೊಳ್ಳಿರಿ ಮತ್ತು ನಿಮ್ಮನ್ನು ಸ್ಪಷ್ಟವಾಗಿ ಪರಿಚಯಿಸಿಕೊಳ್ಳಿರಿ. ಕೂಡಲೇ ನಿಮ್ಮ ಭೇಟಿಯ ಉದ್ದೇಶವನ್ನು ತಿಳಿಸಿರಿ. ನೀವು ಭೇಟಿಮಾಡಿರುವ ಸಮಯವು ಮನೆಯವರು ಊಟಮಾಡುತ್ತಿರುವ ಅಥವಾ ತದ್ರೀತಿಯ ಉಚಿತವಲ್ಲದ ಸಮಯವಾಗಿರುವುದಾದರೆ ಬೇರೊಂದು ಸಮಯದಲ್ಲಿ ಬರಲು ಅನುಮತಿ ಪಡೆಯಿರಿ. ಯಾವಾಗಲೂ ಇತರರ ಕಡೆಗೆ ಪರಿಗಣನೆಯುಳ್ಳವರಾಗಿರಿ.—ಮತ್ತಾ. 7:12.
5. ಸಾರುವಾಗ ಎದುರಾಗಬಹುದಾದ ಸಂಭಾವ್ಯ ಅಪಾಯಗಳಿಂದ ನಾವು ಹೇಗೆ ದೂರವಿರಸಾಧ್ಯವಿದೆ?
5 ಸಂಭಾವ್ಯ ಅಪಾಯಕರ ಪರಿಸ್ಥಿತಿಗಳ ಬಗ್ಗೆಯೂ ನಾವು ಯಾವಾಗಲೂ ಎಚ್ಚರಿಕೆಯಿಂದಿರಬೇಕು. ಕತ್ತಲುಗವಿದ ಬಳಿಕ ನೀವು ಸಾಕ್ಷಿಕಾರ್ಯವನ್ನು ಮಾಡುವುದಾದರೆ, ಇಬ್ಬಿಬ್ಬರಾಗಿ ಅಥವಾ ಒಂದು ಗುಂಪಿನಲ್ಲಿ ಪ್ರಯಾಣಿಸುವುದು ವಿವೇಕಪ್ರದ ವಿಷಯವಾಗಿದೆ. ನೀವು ಒಂಟಿಗರಾಗಿರದಂಥ ಮತ್ತು ಸಾಕಷ್ಟು ಬೆಳಕಿರುವ ರಸ್ತೆಗಳನ್ನೇ ಉಪಯೋಗಿಸಿರಿ. ನಿಮಗೆ ಸುರಕ್ಷಿತವೆನಿಸುವ ಸ್ಥಳಗಳಲ್ಲಿ ಮಾತ್ರ ಸಾಕ್ಷಿಕಾರ್ಯವನ್ನು ಮಾಡಿರಿ. ಕತ್ತಲಾದ ಬಳಿಕ ಸುರಕ್ಷಿತವಾಗಿರದ ಸ್ಥಳಗಳಿಂದ ದೂರವಿರಿ.—ಜ್ಞಾನೋ. 22:3.
6. ಸಂಜೆ ಸಾಕ್ಷಿಕಾರ್ಯದಿಂದ ಯಾವ ಹೆಚ್ಚಿನ ಪ್ರಯೋಜನಗಳು ಸಿಗಸಾಧ್ಯವಿದೆ?
6 ಸಂಜೆ ಸಾಕ್ಷಿಕಾರ್ಯವು ಆಕ್ಸಿಲಿಯರಿ ಮತ್ತು ರೆಗ್ಯುಲರ್ ಪಯನೀಯರರೊಂದಿಗೆ ಸೇವೆಯಲ್ಲಿ ಕೆಲಸಮಾಡಲು ನಮಗೆ ಅವಕಾಶಕೊಡಬಹುದು. (ರೋಮಾ. 1:12) ಸೇವೆಯ ಈ ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳಲು ನೀವು ನಿಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳಬಲ್ಲಿರೋ?