ಮನೆಯಿಂದ ಮನೆಗೆ ಸಾಕ್ಷಿನೀಡುವುದು
1. ಮನೆಮನೆಯ ಸಾಕ್ಷಿಕಾರ್ಯದ ಕುರಿತು ಯಾವ ಪ್ರಶ್ನೆಯೇಳುತ್ತದೆ ಮತ್ತು ಏಕೆ?
1 “ಸತ್ಯವನ್ನು ವಿವಿಧ ವಿಧಾನಗಳಲ್ಲಿ ಪ್ರಚುರಪಡಿಸುವುದರಲ್ಲಿ ಅನುಭವವುಳ್ಳವರು, ಈ ಸಮಯದಲ್ಲಿ ಮಿಲೇನಿಯಲ್ ಡಾನ್ ಪುಸ್ತಕದೊಂದಿಗೆ ಮಾಡುವ ಮನೆಮನೆಯ ಕಾರ್ಯಾಚರಣೆಯೇ ಸತ್ಯವನ್ನು ಸಾರುವುದರಲ್ಲಿ ಹೆಚ್ಚು ಪರಿಣಾಮಕಾರಿಯಾದ ವಿಧಾನವಾಗಿದೆ ಎಂದು ಒಪ್ಪಿಕೊಳ್ಳುವರು.” ಸೈಅನ್ಸ್ ವಾಚ್ ಟವರ್ 1983, ಜುಲೈ 1ರ ಸಂಚಿಕೆಯಲ್ಲಿರುವ ಈ ಹೇಳಿಕೆಯು ಮನೆಮನೆ ಸೇವೆಯ ಮೌಲ್ಯವನ್ನು ಎತ್ತಿತೋರಿಸಿತು. ಲೋಕದ ಎಲ್ಲೆಡೆಯು ಇರುವ ಜನರು ಮನೆಮನೆಯ ಸಾಕ್ಷಿಕಾರ್ಯವನ್ನು ಯೆಹೋವನ ಸಾಕ್ಷಿಗಳ ಗುರುತುಚಿಹ್ನೆಯಾಗಿ ಕಾಣುತ್ತಾರೆ. ಆದರೆ ಈಗ ಕೆಲವು ಕ್ಷೇತ್ರಗಳಲ್ಲಿ ಜನರನ್ನು ಮನೆಗಳಲ್ಲಿ ಕಂಡುಕೊಳ್ಳುವುದು ತೀರಾ ಕಷ್ಟಕರವಾಗಿರುವುದರಿಂದ ಈ ವಿಧಾನವು ಈಗಲೂ ಪರಿಣಾಮಕಾರಿಯಾಗಿದೆಯೋ?
2. ಮನೆಮನೆಯ ಸಾಕ್ಷಿಕಾರ್ಯಕ್ಕೆ ಯಾವ ಶಾಸ್ತ್ರಾಧಾರವಿದೆ?
2 ಶಾಸ್ತ್ರೀಯ ಮತ್ತು ಪ್ರಮುಖ: ಮನೆಮನೆ ಸಾಕ್ಷಿಕಾರ್ಯವು ಶಾಸ್ತ್ರಾಧಾರಿತವಾಗಿದೆ. ಯೇಸು ತನ್ನ 70 ಮಂದಿ ಶಿಷ್ಯರಿಗೆ ಇಬ್ಬಿಬ್ಬರಾಗಿ ಜನರ ಮನೆಗಳಿಗೆ ಹೋಗುವಂತೆ ಆಜ್ಞಾಪಿಸಿದನು. (ಲೂಕ 10:5-7) ಯೇಸುವಿನ ಮರಣದ ಸ್ವಲ್ಪ ಸಮಯದ ನಂತರ, ಅವನ ಶಿಷ್ಯರ ಕುರಿತು ತಿಳಿಸುತ್ತಾ ಬೈಬಲ್ ಹೇಳುವುದು: “[ಅವರು] ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶ ಮಾಡುತ್ತಾ . . . ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃ. 5:42) ಅಪೊಸ್ತಲ ಪೌಲನು ಕೂಡ ಹುರುಪಿನಿಂದ ಮನೆಮನೆಯಲ್ಲಿ ಉಪದೇಶಿಸಿದನು.—ಅ. ಕೃ. 20:20.
3. ಮನೆಮನೆಯ ಸಾಕ್ಷಿಕಾರ್ಯದಿಂದ ಸಿಗುವ ಕೆಲವು ಪ್ರಯೋಜನಗಳಾವುವು?
3 ಸುವಾರ್ತೆಯನ್ನು ಪ್ರಚುರಪಡಿಸುವುದರಲ್ಲಿ ಮನೆಮನೆ ಸಾಕ್ಷಿಕಾರ್ಯವು ಇಂದು ಕೂಡ ಒಂದು ಪ್ರಧಾನ ವಿಧಾನವಾಗಿಯೇ ಮುಂದುವರೆದಿದೆ. ಇದು ನಾವು ಯೋಗ್ಯ ವ್ಯಕ್ತಿಗಳನ್ನು ವ್ಯವಸ್ಥಿತ ಮತ್ತು ಕ್ರಮಬದ್ಧ ರೀತಿಯಲ್ಲಿ ‘ಹುಡುಕುವಂತೆ’ ಸಾಧ್ಯಮಾಡುತ್ತದೆ. (ಮತ್ತಾ. 10:11, NW) ಮನೆಗಳಲ್ಲಿ ಸಾಮಾನ್ಯವಾಗಿ ಜನರು ಹಾಯಾಗಿರುವರು. ಅವರೊಂದಿಗೆ ಮುಖಮುಖಿಯಾಗಿ ಮಾತಾಡುವುದು—ಅವರ ಮಾತುಗಳನ್ನು ಆಲಿಸುವುದು, ಅವರ ಮುಖಭಾವಗಳನ್ನು ನೋಡುವುದು, ಅವರ ಸುತ್ತುಗಟ್ಟುಗಳನ್ನು ಗಮನಿಸುವುದು—ನಾವು ಅವರ ಚಿಂತೆಗಳು ಮತ್ತು ಆಸಕ್ತಿಗಳನ್ನು ವಿವೇಚಿಸಿ ತಿಳಿದುಕೊಳ್ಳುವಂತೆ ಅನುಮತಿಸುತ್ತದೆ. ಇದು ಸಾಮಾನ್ಯವಾಗಿ ಹೆಚ್ಚು ದೀರ್ಘ ಸಂಭಾಷಣೆಯಲ್ಲಿ ಒಳಗೂಡುವ ಅವಕಾಶವನ್ನು ನಮಗೆ ಕೊಡುತ್ತದೆ.
4. ಮನೆಮನೆ ಸಾಕ್ಷಿಕಾರ್ಯವನ್ನು ನಾವು ಹೇಗೆ ಹೆಚ್ಚು ಫಲಪ್ರದವಾಗಿ ಮಾಡಸಾಧ್ಯವಿದೆ?
4 ವೈಯಕ್ತಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಿರಿ: ಅಪೋಸ್ತಲ ಪೌಲನು “ಸುವಾರ್ತೆಗೋಸ್ಕರ” ವೈಯಕ್ತಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಸಿದ್ಧನಿದ್ದನು. (1 ಕೊರಿಂ. 9:23) ನಾವು ಸಹ, ಹೆಚ್ಚಾಗಿ ಜನರು ಮನೆಯಲ್ಲಿರುವಾಗ ಅಂದರೆ ಸಾಯಂಕಾಲ ಸಮಯದಲ್ಲಿ, ವಾರಾಂತ್ಯಗಳಲ್ಲಿ ಇಲ್ಲವೆ ರಜಾದಿನಗಳಲ್ಲಿ ಸಾರಲು ನಮ್ಮ ಕಾಲತಖ್ತೆಯನ್ನು ಹೊಂದಿಸಿಕೊಳ್ಳಬಹುದು. ಮನೆಯಲ್ಲಿಲ್ಲದವರ ದಾಖಲೆಯನ್ನಿಟ್ಟುಕೊಂಡು, ದಿನದ ಬೇರೆ ಸಮಯದಲ್ಲಿ ಅಥವಾ ವಾರದ ಮತ್ತೊಂದು ದಿನದಲ್ಲಿ ಅವರನ್ನು ಭೇಟಿಮಾಡಲು ಪ್ರಯತ್ನಿಸಿ.
5. ಆರೋಗ್ಯದ ನಿಮಿತ್ತ ಇತಿಮಿತಿಗಳಿರುವವರನ್ನು ಮನೆಮನೆಯ ಸಾಕ್ಷಿಕಾರ್ಯದಲ್ಲಿ ಹೇಗೆ ಒಳಗೂಡಿಸಬಹುದು?
5 ಆರೋಗ್ಯದ ನಿಮಿತ್ತ ಇತಿಮಿತಿಗಳಿರುವವರು ಕೂಡ ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಬಹುದು. ಅದಕ್ಕಾಗಿ ನಾವು ಅಂಥವರನ್ನು ಸುಲಭವಾಗಿ ತಲಪಲುಸಾಧ್ಯವಿರುವಂಥ ಮನೆಗಳಿಗೆ ಕರೆದುಕೊಂಡು ಹೋಗಬಹುದು ಮತ್ತು ಅವರಿಗೆ ಅನುಕೂಲಕರವಾಗಿರುವ ವೇಗದಲ್ಲಿ ಸೇವೆಮಾಡುವಂತೆ ಬಿಡಬಹುದು. ಒಬ್ಬ ಸಹೋದರಿಗೆ ಉಸಿರಾಟದ ಸಮಸ್ಯೆಯಿದ್ದ ಕಾರಣ ಅರ್ಧ ತಾಸಿಗೆ ಒಂದು ಮನೆಯಲ್ಲಿ ಮಾತ್ರ ಮಾತಾಡಲು ಸಾಧ್ಯವಾಗಿತ್ತು. ಹೀಗಿದ್ದರೂ, ಅವಳು ಗುಂಪಿನೊಂದಿಗೆ ಜೊತೆಗೂಡಿ ಸಾಕ್ಷಿಕಾರ್ಯದಲ್ಲಿ ಭಾಗವಹಿಸಿದ ಬಳಿಕ, ಅವಳಿಗೆಷ್ಟು ಸಂತೋಷ ಮತ್ತು ಸಂತೃಪ್ತಿಯಾಗಿದ್ದಿರಬೇಕು!
6. ಮನೆಮನೆಯ ಸಾಕ್ಷಿಕಾರ್ಯವನ್ನು ನಮ್ಮ ಸೇವೆಯ ಕ್ರಮವಾದ ವೈಶಿಷ್ಟ್ಯವಾಗಿ ಮಾಡಿಕೊಳ್ಳಬೇಕು ಏಕೆ?
6 ಮನೆಮನೆಯ ಸಾಕ್ಷಿಕಾರ್ಯದ ಮೂಲಕ ಅನೇಕ ಕುರಿಸದೃಶ ಜನರನ್ನು ಕಂಡುಕೊಳ್ಳಲಾಗುತ್ತಿದೆ. ಒಬ್ಬ ಪ್ರಚಾರಕನು ಬಾಗಿಲು ತಟ್ಟಿದಾಗ ಕೇಳಿಸಿಕೊಂಡದ್ದು: “ಒಳಗೆ ಬನ್ನಿ. ನೀವು ಯಾರೆಂದು ನಾನು ಬಲ್ಲೆ. ನನಗೆ ಸಹಾಯಮಾಡಲು ಯಾರನ್ನಾದರು ಕಳುಹಿಸಿಕೊಡುವಂತೆ ದೇವರಿಗೆ ಪ್ರಾರ್ಥಿಸುತ್ತಿದ್ದೆ, ಆಗ ಬಾಗಿಲು ತಟ್ಟುವ ಶಬ್ದವು ನನ್ನ ಕಿವಿಗೆ ಬಿತ್ತು. ಆತನು ನನ್ನ ಪ್ರಾರ್ಥನೆಯನ್ನು ಆಲಿಸಿ ನಿಮ್ಮನ್ನು ಕಳುಹಿಸಿದ್ದಾನೆ.” ಈ ರೀತಿಯ ಫಲಿತಾಂಶಗಳು ಯೆಹೋವನು ಸಾಕ್ಷಿಕಾರ್ಯದ ಈ ವಿಧಾನವನ್ನು ಆಶೀರ್ವದಿಸುತ್ತಿದ್ದಾನೆ ಎಂಬುದಕ್ಕೆ ಪುರಾವೆಯನ್ನು ಕೊಡುತ್ತವೆ. (ಮತ್ತಾ. 11:19) ಆದುದರಿಂದ, ಮನೆಮನೆಯ ಸಾಕ್ಷಿಕಾರ್ಯವನ್ನು ನಿಮ್ಮ ಸೇವೆಯ ಕ್ರಮವಾದ ಒಂದು ವೈಶಿಷ್ಟ್ಯವಾಗಿ ಮಾಡಿಕೊಳ್ಳಲು ದೃಢನಿಶ್ಚಯದಿಂದಿರಿ.