ಬೈಬಲ್ ಅಧ್ಯಯನವೊಂದನ್ನು ನಡೆಸುವ ಗುರಿಯನ್ನಿಡಿ
1‘ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ.’ (ಯೋಹಾ. 4:35) ಯೇಸು ಕ್ರಿಸ್ತನ ಈ ಮಾತುಗಳು ಇಂದು ಕ್ರೈಸ್ತ ಶುಶ್ರೂಷಕರು ಎದುರಿಸುವ ಸನ್ನಿವೇಶಕ್ಕೆ ಖಂಡಿತವಾಗಿಯೂ ಅನ್ವಯಿಸುತ್ತವೆ.
2ಯೆಹೋವನ ಮಾರ್ಗಗಳ ಕುರಿತು ಕಲಿಯಲು ಮನಸ್ಸುಳ್ಳ ಪ್ರಾಮಾಣಿಕ ಹೃದಯದ ಜನರನ್ನು ನಾವು ಇನ್ನೂ ಕಂಡುಕೊಳ್ಳುತ್ತಿದ್ದೇವೆ. ಇದಕ್ಕೆ ಪ್ರತಿವರ್ಷ ದೀಕ್ಷಾಸ್ನಾನ ಪಡೆಯುವ ಹೊಸ ಶಿಷ್ಯರ ಸಂಖ್ಯೆಯೇ ಸಾಕ್ಷಿ. ನೀವು ನಿಜವಾಗಿಯೂ ಒಂದು ಬೈಬಲ್ ಅಧ್ಯಯನ ನಡೆಸಲು ಬಯಸುವಲ್ಲಿ, ಏನು ಮಾಡಬಹುದು?
3ಒಂದು ಗುರಿಯಿಡಿರಿ: ಮೊದಲಾಗಿ, ಒಂದು ಬೈಬಲ್ ಅಧ್ಯಯನ ಆರಂಭಿಸುವ ಮತ್ತು ಅದನ್ನು ಕ್ರಮವಾಗಿ ನಡೆಸುವ ಗುರಿಯಿಡಿ. ಕ್ಷೇತ್ರ ಶುಶ್ರೂಷೆಯಲ್ಲಿ ತೊಡಗಿರುವಾಗ ನಿಮ್ಮ ಈ ಗುರಿಯನ್ನು ಮನಸ್ಸಿನಲ್ಲಿಡಿ. ನಮ್ಮ ಕ್ರೈಸ್ತ ನೇಮಕದಲ್ಲಿ ಸಾರುವುದು ಮಾತ್ರವಲ್ಲ ಕಲಿಸುವುದೂ ಒಳಗೊಂಡಿದೆ. ಆದ್ದರಿಂದ ನಾವೆಲ್ಲರೂ ಬೈಬಲ್ ಅಧ್ಯಯನ ಕಾರ್ಯದಲ್ಲಿ ಹೆಚ್ಚೆಚ್ಚಾಗಿ ಪಾಲ್ಗೊಳ್ಳಲು ಪ್ರಯತ್ನಿಸಬೇಕು.—ಮತ್ತಾ. 24:14; 28:19, 20.
4ಮನಸ್ಸಿನಲ್ಲಿಡಬೇಕಾದ ಇತರ ಅಂಶಗಳು: ರಾಜ್ಯ ಪ್ರಚಾರಕರು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದು ಪ್ರಾಮುಖ್ಯ. ಆಧ್ಯಾತ್ಮಿಕ ಸಹಾಯಕ್ಕಾಗಿ ಪ್ರಾರ್ಥಿಸಿದ ಜನರನ್ನು ನಾವು ಕೆಲವೊಮ್ಮೆ ಭೇಟಿಯಾಗುತ್ತೇವೆ. ಇಂತಹ ಜನರನ್ನು ಕಂಡುಹಿಡಿದು, ಅವರಿಗೆ ಕಲಿಸಲು ಯೆಹೋವನು ನಮ್ಮನ್ನು ಉಪಯೋಗಿಸುವುದು ಎಂಥ ಆಶೀರ್ವಾದ!—ಹಗ್ಗಾ. 2:7; ಅ. ಕೃ. 10:1, 2.
5ಒಬ್ಬ ಸಹೋದರಿಯು ಒಂದು ಬೈಬಲ್ ಅಧ್ಯಯನಕ್ಕಾಗಿ ಪ್ರಾರ್ಥಿಸಿದಳು. ಅನಂತರ ತನ್ನ ಕೆಲಸದ ಸ್ಥಳದಲ್ಲಿ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್ನ ಪ್ರತಿಗಳನ್ನು ಪ್ರದರ್ಶಿಸಿದಳು. ಒಬ್ಬ ಸ್ತ್ರೀಯು ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಓದಿ, ಅನಂತರ ಅದರಲ್ಲಿದ್ದ ಕೂಪನ್ ಅನ್ನು ತುಂಬಿಸಲು ಪ್ರಾರಂಭಿಸಿದಾಗ ಈ ಸಹೋದರಿಯು ಆಕೆಯೊಂದಿಗೆ ಮಾತಾಡಿದಳು. ಹೀಗೆ ಒಂದು ಬೈಬಲ್ ಅಧ್ಯಯನ ಪ್ರಾರಂಭಿಸಲು ಶಕ್ತಳಾದಳು.
6ಬೈಬಲ್ ಅಧ್ಯಯನ ಪ್ರಾರಂಭಿಸುವುದರಲ್ಲಿ ಮತ್ತು ನಡೆಸುವುದರಲ್ಲಿ ಪರಿಣಾಮಕಾರಿಯಾಗಿರುವ ಜೊತೆ ಪ್ರಚಾರಕರು, ಒಂದು ಬೈಬಲ್ ಅಧ್ಯಯನ ನಡೆಸುವ ನಿಮ್ಮ ಗುರಿಯನ್ನು ತಲುಪಲು ಸಹಾಯ ನೀಡಬಲ್ಲರು. ಬೈಬಲ್ ಅಧ್ಯಯನವೊಂದನ್ನು ಪಡೆಯಲಿಕ್ಕಾಗಿ ನೀವು ಮಾಡುತ್ತಿರುವ ಪ್ರಯತ್ನಗಳನ್ನು ಆಶೀರ್ವದಿಸುವಂತೆ ಯೆಹೋವನಿಗೆ ಪ್ರಾರ್ಥಿಸಿರಿ. ನಿಮ್ಮ ಈ ಗುರಿಯನ್ನು ತಲಪಲಿಕ್ಕಾಗಿ ಲಭ್ಯವಿರುವ ಎಲ್ಲಾ ಸಹಾಯದ ಪೂರ್ಣ ಪ್ರಯೋಜನ ಪಡೆದುಕೊಳ್ಳಿರಿ. ಬಹುಶಃ ಅತಿ ಬೇಗನೆ ಒಂದು ಬೈಬಲ್ ಅಧ್ಯಯನ ನಡೆಸುವ ಸಂತೋಷವನ್ನು ನೀವು ಅನುಭವಿಸುವಿರಿ.