“ಕೃತಜ್ಞತೆಯುಳ್ಳವರಾಗಿರ್ರಿ”
1 ಯೇಸು ಹತ್ತು ಮಂದಿ ಕುಷ್ಠರೋಗಿಗಳನ್ನು ವಾಸಿಮಾಡಿದಾಗ ಅವರಲ್ಲಿ ಒಬ್ಬನು ಮಾತ್ರ ಉಪಕಾರ ಸಲ್ಲಿಸುವುದಕ್ಕೆ ಹಿಂದಿರುಗಿ ಬಂದನು. ಆಗ ಯೇಸು ಅವನಿಗೆ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ?” ಎಂದು ಕೇಳಿದನು. (ಲೂಕ 17:11-19) ಉದಾರಿಯೂ ಪ್ರೀತಿಪರನೂ ಆಗಿರುವ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರು ನಮಗೆ ಕೊಟ್ಟಿರುವ ಎಲ್ಲ ಒಳ್ಳೇ ದಾನಗಳಿಗಾಗಿ ಮತ್ತು ಕುಂದಿಲ್ಲದ ವರಗಳಿಗಾಗಿ ನಾವು ಗಣ್ಯತೆಯುಳ್ಳವರೂ ಕೃತಜ್ಞತೆಯುಳ್ಳವರೂ ಆಗಿರುವುದು ತುಂಬ ಪ್ರಾಮುಖ್ಯವಲ್ಲವೆ?—ಕೊಲೊ. 3:15; ಯಾಕೋ. 1:17.
2 ಯಾವ ಕೆಲವು ಸಂಗತಿಗಳಿಗಾಗಿ ನಾವು ಕೃತಜ್ಞರಾಗಿರಬೇಕು? ಮಾನವಕುಲಕ್ಕೆ ದೇವರು ಒದಗಿಸಿದ ಅತಿ ದೊಡ್ಡ ದಾನವಾದ ವಿಮೋಚನಾ ಮೌಲ್ಯಕ್ಕಾಗಿ ನಾವು ಕೃತಜ್ಞರು. (ಯೋಹಾ. 3:16) ಯೆಹೋವನು ನಮ್ಮನ್ನು ತನ್ನ ಕಡೆಗೆ ಎಳೆದದ್ದಕ್ಕಾಗಿಯೂ ನಾವು ಆಭಾರಿಗಳು. (ಯೋಹಾ. 6:44) ಕೃತಜ್ಞರಾಗಿರಲು ಇನ್ನೊಂದು ಕಾರಣ ನಮ್ಮ ಕ್ರೈಸ್ತ ಐಕ್ಯವೇ ಆಗಿದೆ. (ಕೀರ್ತ. 133:1-3) ಯೆಹೋವನಿಂದ ನಿಮಗೆ ದೊರೆತಂಥ ಇನ್ನೂ ಅನೇಕ ದಾನಗಳು ನಿಮ್ಮ ನೆನಪಿಗೆ ಬರುತ್ತವೆ ಎಂಬುದು ನಿಶ್ಚಯ. ಯೆಹೋವನು ತಮ್ಮ ಪರವಾಗಿ ಮಾಡಿದ ಕೆಲಸಗಳನ್ನು ಮರೆತುಬಿಟ್ಟ ಕೃತಜ್ಞತೆಯಿಲ್ಲದ ಇಸ್ರಾಯೇಲ್ಯರಂತಾಗಲು ನಾವು ಎಂದಿಗೂ ಬಯಸುವುದಿಲ್ಲ.—ಕೀರ್ತ. 106:12, 13.
3 ಕೃತಜ್ಞತೆಯನ್ನು ತೋರಿಸಿರಿ: ಎಲ್ಲ ಹತ್ತು ಮಂದಿ ಕುಷ್ಠರೋಗಿಗಳು ತಮಗೆ ಯೇಸು ಮಾಡಿದ್ದನ್ನು ಗಣ್ಯಮಾಡಿದ್ದಿರಬಹುದಾದರೂ ಒಬ್ಬನು ಮಾತ್ರ ಕೃತಜ್ಞತೆಯನ್ನು ವ್ಯಕ್ತಪಡಿಸಿದನು. (ಲೂಕ 17:15) ಅದೇ ರೀತಿಯಲ್ಲಿ, ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ ನಾವು ಗಣ್ಯತೆಯನ್ನು ತೋರಿಸುತ್ತೇವೆ. ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಮಾಡಿದ ಎಲ್ಲವುಗಳಿಗಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರುವುದಾದರೆ, ಇತರರಿಗೆ ಆತನ ಕುರಿತು ತಿಳಿಸುವ ಮೂಲಕ ಆತನ ಪ್ರೀತಿ ಮತ್ತು ಉದಾರತೆಯನ್ನು ಅನುಕರಿಸುವಂತೆ ನಮ್ಮ ಹೃದಯವು ಪ್ರೇರೇಪಿಸಲ್ಪಡುವುದು. (ಲೂಕ 6:45) ಹೀಗೆ ಯೆಹೋವನು ‘ನಮ್ಮ ಹಿತಕ್ಕಾಗಿ ಮಾಡಿದ ಆಲೋಚನೆಗಳನ್ನು ಮತ್ತು ಅದ್ಭುತಕಾರ್ಯಗಳನ್ನು’ ನಾವು ಇತರರಿಗೆ ತಿಳಿಸುವಾಗ ಯೆಹೋವನ ಕಡೆಗಿನ ನಮ್ಮ ಪ್ರೀತಿ ಹಾಗೂ ಗಣ್ಯತೆಯು ಬೆಳೆಯುವುದು.—ಕೀರ್ತ. 40:5.
4 ಇತರರಲ್ಲಿ ಗಣ್ಯತೆಯನ್ನು ಹುಟ್ಟಿಸಿರಿ: ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ನಮ್ಮ ಮಕ್ಕಳಿಗೂ ಬೈಬಲ್ ವಿದ್ಯಾರ್ಥಿಗಳಿಗೂ ಸಹಾಯಮಾಡಲು ನಾವು ಮಾರ್ಗಗಳಿಗಾಗಿ ಹುಡುಕಬೇಕು. ಇದನ್ನು ಮಾಡಲು ಹೆತ್ತವರಿಗೆ ಅನೇಕ ಸಂದರ್ಭಗಳಿವೆ. ಉದಾಹರಣೆಗೆ, ತಮ್ಮ ಮಕ್ಕಳೊಂದಿಗೆ ಯೆಹೋವನ ಸೃಷ್ಟಿಯನ್ನು ನೋಡಿ ಆನಂದಿಸುತ್ತಿರುವಾಗ ಗಣ್ಯತೆಯನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯಮಾಡಸಾಧ್ಯವಿದೆ. (ರೋಮಾ. 1:20) ಬೈಬಲ್ ಅಧ್ಯಯನವನ್ನು ನಡೆಸುತ್ತಿರುವಾಗ ನಮ್ಮ ವಿದ್ಯಾರ್ಥಿಗೆ, “ಇದರಿಂದ ಯೆಹೋವನ ಬಗ್ಗೆ ನಿಮಗೇನು ತಿಳಿಯುತ್ತದೆ?” ಎಂದು ಕೇಳಬಹುದು. ವಿದ್ಯಾರ್ಥಿಯ ಗಣ್ಯತೆಯು ಹೆಚ್ಚಾದಂತೆ ಯೆಹೋವನ ಕಡೆಗಿನ ಅವನ ಪ್ರೀತಿಯೂ ಆತನನ್ನು ಮೆಚ್ಚಿಸಬೇಕೆಂಬ ಅವನ ದೃಢನಿಶ್ಚಯವೂ ಹೆಚ್ಚಾಗುವುದು.
5 ಈ ಕಡೇ ದಿವಸಗಳಲ್ಲಿ ಹೆಚ್ಚಿನವರು ಗಣ್ಯತೆಯಿಲ್ಲದವರೂ ಕೃತಜ್ಞತೆಯಿಲ್ಲದವರೂ ಆಗಿದ್ದಾರೆ. (2 ತಿಮೊ. 3:1, 2) ತನ್ನ ಭಕ್ತರು ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸುತ್ತಿರುವುದನ್ನು ಯೆಹೋವನು ನೋಡುವಾಗ ಆತನಿಗೆ ಬಹಳಷ್ಟು ಸಂತೋಷವಾಗುತ್ತದೆ!—ಯಾಕೋ. 1:22-25.