“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
1. “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕವನ್ನು ಯಾವ ಉದ್ದೇಶದಿಂದ ಪ್ರಕಾಶಿಸಲಾಗಿದೆ?
1 ಜನವರಿ 4ರ ವಾರದಿಂದ ಆರಂಭಿಸಿ ಸಭಾ ಬೈಬಲ್ ಅಧ್ಯಯನದಲ್ಲಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂಬ ಹೊಸ ಪುಸ್ತಕವನ್ನು ಅಧ್ಯಯನಮಾಡಲು ನಾವೆಷ್ಟು ತವಕದಿಂದ ಎದುರುನೋಡುತ್ತಿದ್ದೇವೆ! ಯೆಹೋವನನ್ನು ಪ್ರೀತಿಸುವ ಪ್ರತಿಯೊಬ್ಬರನ್ನು ಸಂಬೋಧಿಸಿ ಆಡಳಿತ ಮಂಡಲಿ ಬರೆದಿರುವ ಪತ್ರದ ಕೊನೆಯಲ್ಲಿ ಈ ಮಾತುಗಳಿವೆ: “ಈ ಪುಸ್ತಕವು ನಿಮ್ಮ ಜೀವನದಲ್ಲಿ ಸತ್ಯವನ್ನು ಅನ್ವಯಿಸಿಕೊಳ್ಳುತ್ತಾ ಮುಂದುವರಿಯಲು ಮತ್ತು ಹೀಗೆ ‘ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ . . . ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು’ ಸಹಾಯಮಾಡುವುದು ಎಂಬುದು ನಮ್ಮ ಯಥಾರ್ಥ ನಿರೀಕ್ಷೆಯಾಗಿದೆ.—ಯೂದ 21.”
2. ಈ ಹೊಸ ಪುಸ್ತಕ ನಮ್ಮ ಬದುಕಿನ ಯಾವೆಲ್ಲಾ ಕ್ಷೇತ್ರಗಳಲ್ಲಿ ಸಹಾಯಕರ?
2 ನಿರೀಕ್ಷಿಸಿ: ಸಹವಾಸ, ಮನೋರಂಜನೆ, ಅಧಿಕಾರಕ್ಕೆ ಗೌರವ, ವೈಯಕ್ತಿಕ ರೂಢಿಗಳು, ಮದುವೆ, ಮಾತು, ಪದ್ಧತಿಗಳೇ ಮುಂತಾದ ಕ್ಷೇತ್ರಗಳಲ್ಲಿ ಬೈಬಲ್ ಮೂಲತತ್ತ್ವಗಳು ಹೇಗೆ ಅನ್ವಯವಾಗುತ್ತವೆ ಎಂಬದನ್ನು ಈ ಪುಸ್ತಕದ ಅಧ್ಯಯನದಲ್ಲಿ ಚರ್ಚಿಸಲಾಗುವುದು. ನಮ್ಮ ಮನಸ್ಸಾಕ್ಷಿ ದೇವರ ವಾಕ್ಯದಲ್ಲಿರುವ ನೀತಿಯುತವಾದ ಉನ್ನತ ಮಟ್ಟಗಳಿಗೆ ಅನುಸಾರವಾಗಿ ಇನ್ನಷ್ಟೂ ರೂಪಿಸಲ್ಪಡುವುದು. (ಕೀರ್ತ. 19:7, 8) ಯೆಹೋವನ ಆಲೋಚನಾ ರೀತಿಯ ಕುರಿತ ನಮ್ಮ ತಿಳಿವಳಿಕೆ ಹೆಚ್ಚಿದಂತೆ ಆತನನ್ನು ಮೆಚ್ಚಿಸುವ ನಮ್ಮ ಅಪೇಕ್ಷೆಯೂ ಹೆಚ್ಚೆಚ್ಚು ಬಲಗೊಳ್ಳುವುದು. ಇದು, ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಆತನಿಗೆ ವಿಧೇಯರಾಗಿರಲು ಸ್ಫೂರ್ತಿಯಾಗಿರುವುದು.—ಜ್ಞಾನೋ. 27:11; 1 ಯೋಹಾ. 5:3.
3. ಪ್ರತಿ ವಾರವೂ ಅಧ್ಯಯನದಲ್ಲಿ ಭಾಗವಹಿಸಲು ನಾವೇಕೆ ಸರ್ವಪ್ರಯತ್ನ ಮಾಡಬೇಕು?
3 ತಪ್ಪದೆ ಭಾಗವಹಿಸಿರಿ: ಅಧ್ಯಯನಕ್ಕಾಗಿ ತಯಾರಿಸುವಾಗ ನಿಮ್ಮ ಧ್ಯೇಯ ಸಭಾ ಮಧ್ಯದಲ್ಲಿ ದೇವರನ್ನು ಸ್ತುತಿಸುವುದೇ ಆಗಿರಲಿ. (ಇಬ್ರಿ. 13:15) ಇಡೀ ಸಭೆಯು ಈ ಹೊಸ ಅಧ್ಯಯನ ಪುಸ್ತಕವನ್ನು ಕೂಡಿ ಚರ್ಚಿಸಲಿದೆ. ಪ್ರತಿ ವಾರ ಚಿಕ್ಕ ಚಿಕ್ಕ ಭಾಗಗಳನ್ನು ಚರ್ಚಿಸಲಾಗುವುದರಿಂದ ನಾವು ಅಧ್ಯಯನಕ್ಕಾಗಿ ಕೂಲಂಕಷವಾಗಿ ತಯಾರಿಸಲು ಸಾಧ್ಯವಿದೆ. ಇದು ನಾವು ಕಲಿತದ್ದನ್ನು ಕೂಟದಲ್ಲಿ ಹಂಚಿಕೊಳ್ಳಲು ಬೇಕಾದ ಧೈರ್ಯ ಕೊಡುವುದು. ನಾವು ಒಳ್ಳೇ ತಯಾರಿ ಮಾಡಿ ಕೊಡುವ ಚುಟುಕಾದ ಉತ್ತರಗಳು ಪರಸ್ಪರ ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಇತರರನ್ನು ಪ್ರೇರಿಸುವುದು ಮತ್ತು ಬೋಧಪ್ರದವಾದ ಉತ್ಸಾಹಭರಿತ ಚರ್ಚೆಗೆ ನೆರವು ನೀಡುವುದು. (ಇಬ್ರಿ. 10:24) ಅಲ್ಲದೆ, ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಹೇಳಿಕೆಗಳನ್ನು ಮಾಡುವಾಗ ನಮ್ಮ ಆನಂದವೂ ಉಕ್ಕೇರುವುದು.
4. ಯೆಹೋವನ ಆಜ್ಞೆಗಳನ್ನು ಕೈಗೊಂಡು ನಡೆಯುವುದು ಅತ್ಯಗತ್ಯವೇಕೆ?
4 ಯೇಸು ತನ್ನ ಮಾನವ ಜೀವನದ ಕಡೇ ರಾತ್ರಿಯಂದು, ಯೆಹೋವನ ಪ್ರೀತಿಯಲ್ಲಿ ಉಳಿಯಲು ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವುದು ಅತ್ಯಗತ್ಯವೆಂದು ತಿಳಿಸಿದನು. (ಯೋಹಾ. 15:10) ದಿನನಿತ್ಯದ ಜೀವನದಲ್ಲಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವ ಮತ್ತು ‘ದೇವರ ಪ್ರೀತಿಯಲ್ಲಿ ನಮ್ಮನ್ನು ಕಾಪಾಡಿಕೊಳ್ಳುವ’ ದೃಢನಿಶ್ಚಯವು “ದೇವರ ಪ್ರೀತಿ” ಪುಸ್ತಕದ ನೆರವಿನಿಂದ ಹಿಂದೆಂದಿಗಿಂತಲೂ ಹೆಚ್ಚು ಬಲಗೊಳ್ಳುವುದು.—ಯೂದ 21.