“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”
1. ನಮ್ಮ ಸಾರುವಿಕೆಯಲ್ಲಿ ಯಾವುದು ಎದ್ದುಕಾಣಬೇಕು?
1 ಕ್ರೈಸ್ತ ಸೇವೆಯಲ್ಲಿ ನಾವೆಂದೂ ಮೈಗಳ್ಳರೂ ನಿರುತ್ಸಾಹಿಗಳೂ ಆಗಿರಬಾರದು. ಏಕೆಂದರೆ, ‘ಪವಿತ್ರಾತ್ಮದಿಂದ ಪ್ರಜ್ವಲಿಸುವಂತೆ’ ಮತ್ತು ‘ಯೆಹೋವನಿಗಾಗಿ ದುಡಿದು ಸೇವೆಸಲ್ಲಿಸುವಂತೆ’ ನಮ್ಮನ್ನು ಉತ್ತೇಜಿಸಲಾಗಿದೆ. (ರೋಮ. 12:11) ಆದರೆ ಶುಶ್ರೂಷೆಗಾಗಿ ನಮಗಿರುವ ಹುರುಪನ್ನು ಕುಂದಿಸಿಬಿಡುವ ಅನೇಕ ವಿಷಯಗಳಿವೆ. ಆದುದರಿಂದ ರಾಜ್ಯ ಸೇವೆಗಾಗಿ ನಮ್ಮ ಹುರುಪನ್ನು, ಹುಮ್ಮಸ್ಸನ್ನು “ಬೆಂಕಿಯ ಹಾಗೆ ಪ್ರಜ್ವಲಿಸುವಂತೆ” ಮಾಡಲು ನಾವೇನು ಮಾಡಬೇಕು?—2 ತಿಮೊ. 1:6, 7.
2. ವೈಯಕ್ತಿಕ ಬೈಬಲ್ ಅಧ್ಯಯನ ಮತ್ತು ಹುರುಪಿನ ಶುಶ್ರೂಷೆ ಹೇಗೆ ಒಂದಕ್ಕೊಂದು ಸಂಬಂಧಿಸಿದೆ?
2 ವೈಯಕ್ತಿಕ ಬೈಬಲ್ ಅಧ್ಯಯನ: ದೇವರ ವಾಕ್ಯವನ್ನು ಪ್ರೀತಿಸಿ, ಅದರಲ್ಲಿರುವ ಸತ್ಯಗಳಿಂದ ಗಾಢವಾಗಿ ಪ್ರಭಾವಿತನಾಗುವ ವ್ಯಕ್ತಿ ಪರಿಣಾಮಕಾರಿ ರಾಜ್ಯ ಪ್ರಚಾರಕನಾಗುತ್ತಾನೆ. (ಕೀರ್ತ. 119:97) ವೈಯಕ್ತಿಕ ಬೈಬಲ್ ಅಧ್ಯಯನದಲ್ಲಿ ಸಿಗುವ ನಿಕ್ಷೇಪಗಳು ನಮ್ಮ ಹೃದಯವನ್ನು ಪ್ರಚೋದಿಸಿ ಹುರುಪನ್ನು ಹೆಚ್ಚಿಸುತ್ತವೆ. ಅಂಥ ಸತ್ಯಗಳ ದಾತನಾದ ದೇವರ ಮೇಲಿನ ಪ್ರೀತಿ ಮತ್ತು ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ನಮಗಿರುವ ಅಪೇಕ್ಷೆಯು ನಾವಾತನನ್ನು ಕೊಂಡಾಡಿ ಆತನ ಹೆಸರನ್ನು ಪ್ರಚುರಪಡಿಸುವಂತೆ ಪ್ರಚೋದಿಸುತ್ತದೆ. (ಇಬ್ರಿ. 13:15) ನಾವು ಸುವಾರ್ತೆಯನ್ನು ಕಟ್ಟಾಸಕ್ತಿಯಿಂದ ಪ್ರಸ್ತುತಪಡಿಸುವ ರೀತಿ ನಾವದನ್ನು ಎಷ್ಟು ಆಳವಾಗಿ ಗಣ್ಯಮಾಡುತ್ತೇವೆ ಎಂಬುದರ ಪ್ರತಿಬಿಂಬ.
3. ದೇವರಾತ್ಮವು ನಮ್ಮ ಶುಶ್ರೂಷೆಯನ್ನು ಹೇಗೆ ಪ್ರಭಾವಿಸಬಲ್ಲದು?
3 ದೇವರಾತ್ಮಕ್ಕಾಗಿ ಪ್ರಾರ್ಥಿಸಿರಿ: ಪರಿಣಾಮಕಾರಿ ಶುಶ್ರೂಷೆ ನಮ್ಮ ಸ್ವಂತ ಬಲದಿಂದ ಸಾಧ್ಯವಿಲ್ಲ. ದೇವರಾತ್ಮ ಸರಾಗವಾಗಿ ಹರಿಯುವುದರಿಂದ ಫಲಿಸುವ ಯಥಾರ್ಥ ಹುರುಪು ನಮ್ಮಲ್ಲಿರಬೇಕು. (1 ಪೇತ್ರ 4:11) ‘ಬಲಾಢ್ಯನಾದ’ ಯೆಹೋವನಿಗೆ ಹೆಚ್ಚು ಸಮೀಪವಾಗುವುದರಿಂದ ಧೈರ್ಯದಿಂದ ಸಾಕ್ಷಿಕೊಡಲು ನಮಗೆ ಆಧ್ಯಾತ್ಮಿಕ ಬಲ ಸಿಗುತ್ತದೆ. (ಯೆಶಾ. 40:26, 29-31) ಅಪೊಸ್ತಲ ಪೌಲನು ಶುಶ್ರೂಷೆಯಲ್ಲಿ ತೊಂದರೆಗಳನ್ನು ಎದುರಿಸಿದಾಗ ‘ದೇವರಿಂದ ಸಹಾಯ ಪಡೆದನು.’ (ಅ. ಕಾ. 26:21, 22) ಯೆಹೋವನ ಬಲವರ್ಧಕ ಪವಿತ್ರಾತ್ಮವು ಶುಶ್ರೂಷೆಯಲ್ಲಿ ಹೆಚ್ಚು ಹುರುಪುಳ್ಳವರಾಗಿರುವಂತೆ ನಮಗೂ ಸಹಾಯಮಾಡಬಲ್ಲದು. ಆದುದರಿಂದ ನಾವು ಅದಕ್ಕಾಗಿ ಪ್ರಾರ್ಥಿಸಬೇಕು.—ಲೂಕ 11:9-13.
4. ಹುರುಪು ಯಾವ ಒಳ್ಳೇ ಫಲಿತಾಂಶಗಳನ್ನು ತರಬಲ್ಲದು, ಆದರೂ ನಾವು ಯಾವ ಜಾಗ್ರತೆ ವಹಿಸಬೇಕು?
4 ರಾಜ್ಯ ಸಾರುವಿಕೆಗೆ ನಮಗಿರುವ ತೀವ್ರ ಹುರುಪು ಅನೇಕವೇಳೆ ಜೊತೆ ಕ್ರೈಸ್ತರ ಹುರುಪನ್ನೂ ತೀವ್ರಗೊಳಿಸುತ್ತದೆ. (2 ಕೊರಿಂ. 9:2) ಉತ್ಸಾಹ ಮತ್ತು ನಿಶ್ಚಯದಿಂದ ತಿಳಿಸಲಾಗುವ ಸಂದೇಶಕ್ಕೆ ಜನರು ಪ್ರತಿಕ್ರಿಯಿಸುವ ಸಂಭಾವ್ಯವೂ ಹೆಚ್ಚು. ಆದರೆ ಹುರುಪಿನ ಜೊತೆಗೆ ಜಾಣ್ಮೆ, ನ್ಯಾಯಸಮ್ಮತತೆ ಮತ್ತು ಸೌಮ್ಯಭಾವವೂ ಬೇಕು. (ತೀತ 3:2) ನಾವು ಯಾವಾಗಲೂ ಮನೆಯವನಿಗೆ ಮರ್ಯಾದೆ ತೋರಿಸಿ, ಅವನ ಆಯ್ಕೆಯ ಸ್ವಾತಂತ್ರ್ಯವನ್ನು ಮಾನ್ಯಮಾಡಬೇಕು.
5. ಯಾವ ಪ್ರೇರಿತ ಸಲಹೆಯನ್ನು ನಾವು ಅನ್ವಯಿಸಬೇಕು?
5 ರಾಜ್ಯ ಘೋಷಕರಾದ ನಾವು ಯಾವಾಗಲೂ ‘ಪವಿತ್ರಾತ್ಮದಿಂದ ಪ್ರಜ್ವಲಿಸೋಣ.’ ನಮ್ಮ ಹುರುಪನ್ನು ಹೆಚ್ಚಿಸುವ ಸಲುವಾಗಿ ವೈಯಕ್ತಿಕ ಬೈಬಲ್ ಅಧ್ಯಯನವನ್ನು ಮಾಡೋಣ ಮತ್ತು ಪ್ರಬಲವಾದ ಪವಿತ್ರಾತ್ಮವನ್ನು ಒದಗಿಸುವ ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸೋಣ. ಹೀಗೆ, ನಾವು “ಪವಿತ್ರಾತ್ಮದಿಂದಲೂ ಬಲವಾದ ನಿಶ್ಚಿತಾಭಿಪ್ರಾಯದಿಂದಲೂ” ನಮ್ಮ ಶುಶ್ರೂಷೆಯನ್ನು ಹುರುಪಿನಿಂದ ಪೂರೈಸಲು ಸಾಧ್ಯವಾಗುವುದು.—1 ಥೆಸ. 1:5.