ನಿಮ್ಮಿಂದ ಅನೌಪಚಾರಿಕ ಸಾಕ್ಷಿಕೊಡಲು ಖಂಡಿತ ಸಾಧ್ಯ!
1. (ಎ) ಅನೌಪಚಾರಿಕ ಸಾಕ್ಷಿ ಅಂದರೇನು? (ಬಿ) ಈ ಕೂಟಕ್ಕೆ ಹಾಜರಿರುವವರಲ್ಲಿ ಎಷ್ಟು ಮಂದಿ ಅನೌಪಚಾರಿಕ ಸಾಕ್ಷಿಯ ಮೂಲಕ ಸತ್ಯ ತಿಳಿದುಕೊಂಡಿರಿ?
1 ನಿಮ್ಮ ಸಭೆಯಲ್ಲಿ ಎಷ್ಟು ಮಂದಿ ಅನೌಪಚಾರಿಕ ಸಾಕ್ಷಿಯ ಮೂಲಕ ಸತ್ಯ ತಿಳಿದುಕೊಂಡರು? ನಿಮಗೆ ಗೊತ್ತಾದರೆ ಆಶ್ಚರ್ಯವಾದೀತು. ನಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಭೇಟಿಯಾಗುವ ಜನರಿಗೆ ಸಾಕ್ಷಿಕೊಡುವುದೇ ಅನೌಪಚಾರಿಕ ಸಾಕ್ಷಿ. ಉದಾಹರಣೆಗೆ ಪ್ರಯಾಣಿಸುವಾಗ, ಸಂಬಂಧಿಕರನ್ನೊ ನೆರೆಯವರನ್ನೊ ಭೇಟಿಯಾದಾಗ, ಶಾಪ್ಪಿಂಗ್ ಮಾಡುವಾಗ ಮಾತ್ರವಲ್ಲ ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ ಮುಂತಾದ ಸ್ಥಳಗಳಲ್ಲಿ ನಾವು ಸಾಕ್ಷಿಕೊಡಬಹುದು. ದೀಕ್ಷಾಸ್ನಾನ ಪಡೆದಿರುವ 200 ಮಂದಿ ಸಾಕ್ಷಿಗಳ ಒಂದು ಗುಂಪಿನಲ್ಲಿ 40% ಮಂದಿ ಸತ್ಯವನ್ನು ತಿಳಿದುಕೊಂಡದ್ದು ಅನೌಪಚಾರಿಕ ಸಾಕ್ಷಿಯ ಮೂಲಕವೇ! ಸಾರುವಿಕೆಯ ಈ ವಿಧಾನವು ಎಷ್ಟು ಪರಿಣಾಮಕಾರಿಯೆಂದು ಇದರಿಂದ ತಿಳಿದುಬರುತ್ತದಲ್ಲವೇ?
2. ಅನೌಪಚಾರಿಕ ಸಾಕ್ಷಿಕಾರ್ಯದ ಯಾವ ಉದಾಹರಣೆಗಳು ಬೈಬಲಿನಲ್ಲಿವೆ?
2 ಪ್ರಥಮ ಶತಮಾನದ ಸೌವಾರ್ತಿಕರು ಅನೇಕ ಸಲ ಅನೌಪಚಾರಿಕ ಸಾಕ್ಷಿಕೊಟ್ಟರು. ಉದಾಹರಣೆಗೆ ಯೇಸು ಸಮಾರ್ಯದ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ, ಯಾಕೋಬನ ಬಾವಿಯಿಂದ ನೀರು ಸೇದುತ್ತಿದ್ದ ಸ್ತ್ರೀಯೊಬ್ಬಳಿಗೆ ಸಾಕ್ಷಿಕೊಟ್ಟನು. (ಯೋಹಾ. 4:6-26) ಫಿಲಿಪ್ಪನು, ಇಥಿಯೋಪ್ಯದ ಆಸ್ಥಾನ ಅಧಿಕಾರಿಗೆ ಸಾಕ್ಷಿ ಕೊಟ್ಟನು. ಯೆಶಾಯನ ಪುಸ್ತಕ ಓದುತ್ತಿದ್ದ ಆ ಅಧಿಕಾರಿಗೆ ಫಿಲಿಪ್ಪನು, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೊ?” ಎಂದು ಕೇಳಿ ಮಾತು ಆರಂಭಿಸಿದನು. (ಅ. ಕಾ. 8:26-38) ಅಪೊಸ್ತಲ ಪೌಲನು ಫಿಲಿಪ್ಪಿಯಲ್ಲಿ ಸೆರೆಮನೆಯಲ್ಲಿದ್ದಾಗ ಅದರ ಯಜಮಾನನಿಗೆ ಸಾಕ್ಷಿಕೊಟ್ಟನು. (ಅ. ಕಾ. 16:23-34) ಸಮಯಾನಂತರ ಪೌಲನು ಗೃಹ ಬಂಧನದಲ್ಲಿದ್ದಾಗ, “ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿ . . . ಅವರಿಗೆ ದೇವರ ರಾಜ್ಯದ ಕುರಿತು ಸಾರುತ್ತಿದ್ದನು ಮತ್ತು ಕರ್ತನಾದ ಯೇಸು ಕ್ರಿಸ್ತನ ಕುರಿತು ಬೋಧಿಸುತ್ತಿದ್ದನು.” (ಅ. ಕಾ. 28:30, 31) ನೀವೂ ಅನೌಪಚಾರಿಕ ಸಾಕ್ಷಿ ಕೊಡಬಲ್ಲಿರಿ. ನಿಮಗೆ ನಾಚಿಕೆ ಸ್ವಭಾವ ಇದ್ದರೂ ಅದನ್ನು ಮಾಡಬಲ್ಲಿರಿ. ಹೇಗೆ?
3. ನಾಚಿಕೆ ಸ್ವಭಾವವನ್ನು ಹೇಗೆ ಮೆಟ್ಟಿನಿಲ್ಲಬಲ್ಲೆವು?
3 ಅನೌಪಚಾರಿಕ ಸಾಕ್ಷಿಕೊಡಲು ಆರಂಭಿಸಿ: ನಮ್ಮಲ್ಲಿ ಹೆಚ್ಚಿನವರಿಗೆ ಅಪರಿಚಿತರೊಂದಿಗೆ ಮಾತು ಆರಂಭಿಸಲು ತುಂಬ ಕಷ್ಟವೆನಿಸುತ್ತದೆ. ಪರಿಚಯವಿದ್ದರೂ ಸತ್ಯದ ಬಗ್ಗೆ ಮಾತೆತ್ತಲು ಮುಜುಗರ. ಆದರೆ ನಾವು ಯೆಹೋವನ ಒಳ್ಳೇತನ, ಆತನು ತನ್ನ ಸೇವಕರಿಗೆ ಕೊಟ್ಟಿರುವ ಅಮೂಲ್ಯ ಸತ್ಯಗಳು, ಲೋಕದ ಜನರ ವಿಪತ್ಕಾರಕ ಪರಿಸ್ಥಿತಿಯ ಬಗ್ಗೆ ಯೋಚಿಸುವಲ್ಲಿ ಇತರರೊಂದಿಗೆ ಮಾತಾಡಲು ಬೇಕಾದ ಸ್ಫೂರ್ತಿ ಸಿಗುವುದು. (ಯೋನ 4:11; ಕೀರ್ತ. 40:5; ಮತ್ತಾ. 13:52) ಅಷ್ಟುಮಾತ್ರವಲ್ಲದೆ, “ಧೈರ್ಯ” ಕೊಡುವಂತೆ ನಾವು ಯೆಹೋವನ ಬಳಿ ಕೋರಬಹುದು. (1 ಥೆಸ. 2:2) ಗಿಲ್ಯಡ್ ವಿದ್ಯಾರ್ಥಿಯೊಬ್ಬರು, “ಜನರೊಂದಿಗೆ ಮಾತಾಡಲು ಕಷ್ಟವಾದಾಗಲೆಲ್ಲ ನನಗೆ ಪ್ರಾರ್ಥನೆ ಸಹಾಯಮಾಡುತ್ತದೆ” ಎಂದು ಹೇಳಿದರು. ಮಾತಾಡಲು ನೀವು ಹಿಂದೆಮುಂದೆ ನೋಡುತ್ತಿರುವಲ್ಲಿ, ಚಿಕ್ಕದಾದ ಮೌನ ಪ್ರಾರ್ಥನೆ ಮಾಡಿ.—ನೆಹೆ. 2:4.
4. ನಾವು ಆರಂಭದಲ್ಲಿ ಯಾವ ಗುರಿ ಇಡಬಹುದು? ಏಕೆ?
4 ‘ಅನೌಪಚಾರಿಕ ಸಾಕ್ಷಿ’ ಎಂಬ ಪದಗಳೇ ಸೂಚಿಸುವಂತೆ ನಮ್ಮ ಸಂಭಾಷಣೆಯನ್ನು ಔಪಚಾರಿಕವಾದ ಪೀಠಿಕೆಯನ್ನು ಕೊಟ್ಟೊ ವಚನ ಓದಿಯೋ ಆರಂಭಿಸಬೇಕಾಗಿಲ್ಲ. ಮಾತು ಆರಂಭಿಸಿದ ಕೂಡಲೆ ಸಾಕ್ಷಿಯನ್ನೇ ಕೊಡಬೇಕೆಂದು ಯೋಚಿಸದೆ ಸಾದಾ ಸಂಭಾಷಣೆ ಆರಂಭಿಸುವ ಗುರಿಯನ್ನಿಡಿ. ಹೀಗೆ ಸಂಭಾಷಣೆ ಆರಂಭಿಸಿ ಮಧ್ಯದಲ್ಲಿ ಸುವಾರ್ತೆ ಬಗ್ಗೆ ತಿಳಿಸಲು ಬೇಕಾದ ಆತ್ಮವಿಶ್ವಾಸ ಮೂಡಿದೆಯೆಂದು ಅನೇಕ ಪ್ರಚಾರಕರು ವರದಿಸಿದ್ದಾರೆ. ಇದರಿಂದ ನಿಮಗೂ ಸಹಾಯವಾಗಬಹುದು. ಮಾತು ಮುಂದುವರಿಸಲು ಇಷ್ಟವಿಲ್ಲದ ವ್ಯಕ್ತಿಗಳೊಂದಿಗೆ ಬಲವಂತವಾಗಿ ಮಾತಾಡಬೇಕಾಗಿಲ್ಲ. ವಿನಯದಿಂದ ಮಾತು ನಿಲ್ಲಿಸಿ ನಿಮ್ಮಷ್ಟಕ್ಕೆ ಇದ್ದುಬಿಡಿ.
5. ನಾಚಿಕೆ ಸ್ವಭಾವದ ಸಹೋದರಿಯೊಬ್ಬಳು ಹೇಗೆ ಅನೌಪಚಾರಿಕ ಸಾಕ್ಷಿಕೊಡುತ್ತಾಳೆ?
5 ನಾಚಿಕೆ ಸ್ವಭಾವದ ಸಹೋದರಿಯೊಬ್ಬಳು ಮಾರ್ಕೆಟಿಗೆ ಹೋದಾಗ ತನ್ನ ಪಕ್ಕದಲ್ಲಿರುವ ವ್ಯಕ್ತಿಗೆ ಸಾಕ್ಷಿಕೊಡಲು ಪ್ರಯತ್ನಿಸುತ್ತಾಳೆ. ಮೊದಲು ಅವರ ಮುಖ ನೋಡಿ, ಸ್ನೇಹಭರಿತ ನಗುಬೀರುತ್ತಾಳೆ. ಅವರು ನಕ್ಕರೆ ಸಹೋದರಿ ಏನಾದರೂ ಹೇಳುತ್ತಾರೆ. ಆಗ ಆ ವ್ಯಕ್ತಿಯೂ ಒಳ್ಳೇ ರೀತಿಯಲ್ಲಿ ಮಾತಾಡಿದರೆ, ಸಹೋದರಿಗೆ ಮುಂದೆ ಮಾತಾಡಲು ಆತ್ಮವಿಶ್ವಾಸ ಮೂಡುತ್ತದೆ. ಅವರು ಮಾತಾಡುವಾಗ ಗಮನಕೊಟ್ಟು ಕಿವಿಗೊಡುತ್ತಾಳೆ. ಹೀಗೆ ಅವರಿಗೆ ಸುವಾರ್ತೆಯ ಯಾವ ಅಂಶ ಹೆಚ್ಚು ಇಷ್ಟವಾಗಬಹುದೆಂದು ಗ್ರಹಿಸಲು ಪ್ರಯತ್ನಿಸುತ್ತಾಳೆ. ಈ ರೀತಿ ಮಾತು ಆರಂಭಿಸಿ ಆಕೆ ತುಂಬ ಸಾಹಿತ್ಯ ನೀಡಿದ್ದಾಳೆ. ಒಂದು ಬೈಬಲ್ ಅಧ್ಯಯನವನ್ನೂ ಆರಂಭಿಸಿದ್ದಾಳೆ.
6. ಅನೌಪಚಾರಿಕ ಸನ್ನಿವೇಶದಲ್ಲಿ ನಾವು ಹೇಗೆ ಸಂಭಾಷಣೆ ಆರಂಭಿಸಬಹುದು?
6 ಸಂಭಾಷಣೆ ಆರಂಭಿಸುವುದು ಹೇಗೆ? ಸಂಭಾಷಣೆ ಆರಂಭಿಸಲು ನಾವೇನು ಹೇಳಬಹುದು? ಬಾವಿ ಬಳಿಯಿದ್ದ ಸ್ತ್ರೀಯೊಂದಿಗೆ ಯೇಸು ಮಾತು ಆರಂಭಿಸಿದ್ದು ಕುಡಿಯಲಿಕ್ಕಾಗಿ ನೀರು ಕೇಳಿಯೇ. (ಯೋಹಾ. 4:7) ನಾವು ಸಹ ಸ್ನೇಹದಿಂದ ವಂದಿಸಿಯೋ ಪ್ರಶ್ನೆ ಕೇಳಿಯೋ ಸಂಭಾಷಣೆ ಆರಂಭಿಸಬಹುದು. ಆ ಕೂಡಲೇ ದೇವರ ರಾಜ್ಯ ಇಲ್ಲವೇ ಬೈಬಲ್ ಬಗ್ಗೆ ಹೇಳಬೇಕಾಗಿಲ್ಲ. ವ್ಯಕ್ತಿಯ ಮನಸ್ಸಲ್ಲಿ ಪೂರ್ವಗ್ರಹವಿದೆಯೆಂದು ಗೊತ್ತಾದಾಗಲಂತೂ ಸ್ನೇಹಭಾವದಿಂದಲೇ ಸಂಭಾಷಣೆ ಮುಂದುವರಿಸಬೇಕು. ಆಮೇಲೆ ಮಾತಾಡುತ್ತಾ ಮಾತಾಡುತ್ತಾ ಬೈಬಲಿನಿಂದ ಒಂದು ವಿಷಯವನ್ನು ತಿಳಿಸಿ ಸತ್ಯದ ಬೀಜವನ್ನು ಬಿತ್ತುವ ಅವಕಾಶ ಸಿಗಬಹುದು. (ಪ್ರಸಂ. 11:6) ಇನ್ನೂ ಕೆಲವು ಪ್ರಚಾರಕರು, ಕುತೂಹಲ ಕೆರಳಿಸುವ ಮಾತನ್ನು ಹೇಳಿ ವ್ಯಕ್ತಿ ಮರಳಿ ಪ್ರಶ್ನಿಸುವಂತೆ ಮಾಡುತ್ತಾರೆ. ನೀವೂ ಹಾಗೆ ಮಾಡಬಲ್ಲಿರಿ. ಉದಾಹರಣೆಗೆ ಡಾಕ್ಟರ್ಗಾಗಿ ಕಾಯುತ್ತಾ ಇರುವಾಗ, “ಕಾಯಿಲೆಗಳೇ ಇಲ್ಲದ ಸಮಯ ಬಂದಾಗ ಎಷ್ಟು ಚೆನ್ನಾಗಿರುತ್ತೆ” ಎಂಬ ವಾಕ್ಯದೊಂದಿಗೆ ಮಾತು ಆರಂಭಿಸಬಲ್ಲಿರಿ.
7. ಚೆನ್ನಾಗಿ ಗಮನಿಸುವವರಾಗಿದ್ದರೆ ಅನೌಪಚಾರಿಕ ಸಾಕ್ಷಿಕೊಡಲು ಹೇಗೆ ಸುಲಭವಾಗುತ್ತದೆ?
7 ನಾವು ಚೆನ್ನಾಗಿ ಗಮನಿಸುವವರಾಗಿದ್ದರೆ ಸಂಭಾಷಣೆ ಆರಂಭಿಸಲು ಸುಲಭವಾಗುವುದು. ಮಕ್ಕಳು ಶಿಷ್ಟಾಚಾರದಿಂದ ವರ್ತಿಸುವುದನ್ನು ನೀವು ಗಮನಿಸುವಲ್ಲಿ ಅವರ ತಂದೆ/ತಾಯಿಯನ್ನು ಪ್ರಶಂಸಿಸಿ ಅವರಿಗೆ “ನಿಮ್ಮ ಮಕ್ಕಳನ್ನು ಹೇಗೆ ಇಷ್ಟು ಚೆನ್ನಾಗಿ ಬೆಳೆಸಿದ್ದೀರಿ?” ಎಂದು ಕೇಳಿ. ಸಹೋದರಿಯೊಬ್ಬಳು ತನ್ನ ಸಹೋದ್ಯೋಗಿಗಳು ಚರ್ಚಿಸುತ್ತಿರುವ ವಿಷಯಗಳಿಗೆ ಗಮನಕೊಟ್ಟು, ಅವರಿಗೆ ಯಾವ ವಿಷಯಗಳಲ್ಲಿ ಆಸಕ್ತಿಯಿದೆ ಎಂದು ತಿಳಿದುಕೊಳ್ಳುತ್ತಾಳೆ. ಬಳಿಕ ಆ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಅವರೊಂದಿಗೆ ಹಂಚುತ್ತಾಳೆ. ಸಹೋದ್ಯೋಗಿಯೊಬ್ಬಳ ಮದುವೆ ಬಗ್ಗೆ ಆಕೆಗೆ ಗೊತ್ತಾದಾಗ ಮದುವೆ ಯೋಜನೆಗಳನ್ನು ಹೇಗೆ ಮಾಡುವುದೆಂದು ಚರ್ಚಿಸಿದ ಎಚ್ಚರ! ಪತ್ರಿಕೆಯನ್ನು ಆಕೆಗೆ ಕೊಟ್ಟಳು. ಇದು ಮುಂದೆ ಬೈಬಲ್ ಚರ್ಚೆಗಳಿಗೆ ನಡೆಸಿತು.
8. ಸಂಭಾಷಣೆ ಆರಂಭಿಸಲು ನಮ್ಮ ಸಾಹಿತ್ಯವನ್ನು ಹೇಗೆ ಬಳಸಬಹುದು?
8 ಸಂಭಾಷಣೆ ಆರಂಭಿಸುವ ಇನ್ನೊಂದು ವಿಧ, ಇತರರ ದೃಷ್ಟಿಗೆ ಬೀಳುವಂಥ ರೀತಿಯಲ್ಲಿ ನಮ್ಮ ಸಾಹಿತ್ಯವನ್ನು ಓದುವುದೇ ಆಗಿದೆ. ಒಬ್ಬ ಸಹೋದರನು ಕಾವಲಿನಬುರುಜು ಇಲ್ಲವೇ ಎಚ್ಚರ! ಪತ್ರಿಕೆಯಲ್ಲಿರುವ, ಆಸಕ್ತಿಕರ ಶೀರ್ಷಿಕೆಯ ಲೇಖನವೊಂದನ್ನು ತೆರೆದು, ಮೌನವಾಗಿ ಓದಲಾರಂಭಿಸುತ್ತಾನೆ. ಹತ್ತಿರದಲ್ಲಿರುವ ಯಾರಾದರೂ ಪತ್ರಿಕೆಯನ್ನು ನೋಡುತ್ತಿದ್ದಾರೆಂದು ಅವನಿಗೆ ಗೊತ್ತಾದರೆ ಅವರಿಗೊಂದು ಪ್ರಶ್ನೆ ಕೇಳುತ್ತಾನೆ ಅಥವಾ ಲೇಖನದ ಬಗ್ಗೆ ಏನಾದರೂ ಹೇಳುತ್ತಾನೆ. ಅನೇಕಸಲ ಇದು ಸಂಭಾಷಣೆಗೆ ಮಾತ್ರವಲ್ಲ ಆಮೇಲೆ ಸಾಕ್ಷಿಕೊಡಲೂ ದಾರಿಮಾಡಿಕೊಟ್ಟಿದೆ. ನಮ್ಮ ಪ್ರಕಾಶನವನ್ನು ಬೇರೆಯವರ ಕಣ್ಣಿಗೆ ಬೀಳುವಂಥ ಸ್ಥಳದಲ್ಲಿ ಇಟ್ಟರೂ, ಜೊತೆ ಕಾರ್ಮಿಕರು ಇಲ್ಲವೇ ಸಹಪಾಠಿಗಳ ಕುತೂಹಲ ಕೆರಳಿ ಅವರು ಅದರ ಬಗ್ಗೆ ನಿಮ್ಮ ಬಳಿ ವಿಚಾರಿಸಬಹುದು.
9, 10. (ಎ) ಅನೌಪಚಾರಿಕವಾಗಿ ಸಾಕ್ಷಿಕೊಡಲು ನಾವಾಗಿಯೇ ಹೇಗೆ ಅವಕಾಶಗಳನ್ನು ಕಲ್ಪಿಸಿಕೊಳ್ಳಬಹುದು? (ಬಿ) ನೀವಿದನ್ನು ಹೇಗೆ ಮಾಡಿದ್ದೀರಿ?
9 ನಾವಾಗಿಯೇ ಅವಕಾಶ ಕಲ್ಪಿಸಿಕೊಳ್ಳುವುದು ಹೇಗೆ? ಅನೌಪಚಾರಿಕ ಸಾಕ್ಷಿಕಾರ್ಯವೆಂದರೆ ಅವಕಾಶ ಸಿಕ್ಕಿದರೆ ಮಾತ್ರ ಕೊಡುವ ಸಾಕ್ಷಿಯೆಂದು ನಾವೆಣಿಸಬಾರದು. ಸಾರುವ ಕೆಲಸವು ತುಂಬ ತುರ್ತಿನದ್ದಾಗಿರುವುದರಿಂದ ನಮ್ಮ ದೈನಂದಿನ ಕೆಲಸಕಾರ್ಯಗಳ ಮಧ್ಯೆ ಸಾಕ್ಷಿಕೊಡಲು ನಾವಾಗಿಯೇ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ದಿನವಿಡೀ ನಿಮಗೆ ಸಿಗುವ ಜನರ ಬಗ್ಗೆ ಮುಂದಾಗಿ ಯೋಚಿಸಿ. ಅವರೊಂದಿಗೆ ಸ್ನೇಹಭರಿತ ಸಂಭಾಷಣೆ ಹೇಗೆ ಆರಂಭಿಸಬಹುದೆಂದು ಯೋಚಿಸಿರಿ. ಒಂದು ಬೈಬಲನ್ನೂ ಆಸಕ್ತಿ ತೋರಿಸುವವರಿಗೆ ಕೊಡಬಹುದಾದ ಸಾಹಿತ್ಯವನ್ನೂ ನಿಮ್ಮ ಬಳಿ ಇಟ್ಟುಕೊಳ್ಳಿ. (1 ಪೇತ್ರ 3:15) “ಟ್ರ್ಯಾಕ್ಟ್ ಪ್ಯಾಕ್” ಅನ್ನು ಕೊಂಡೊಯ್ಯುವುದು ಪ್ರಾಯೋಗಿಕವೆಂದು ಕೆಲವರಿಗನಿಸಿದೆ.—km 6/07 ಪು. 3.
10 ಹೊಸ ಉಪಾಯಗಳನ್ನು ಕಂಡುಹಿಡಿಯುವ ಮೂಲಕ ಅನೇಕ ಪ್ರಚಾರಕರು ಅನೌಪಚಾರಿಕ ಸಾಕ್ಷಿಕೊಡುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದಾರೆ. ಬಿಗಿ ಭದ್ರತೆಯುಳ್ಳ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಸಹೋದರಿಯೊಬ್ಬಳು ಅಲ್ಲಿನ ವಿನೋದವಿಹಾರದ ಸ್ಥಳದಲ್ಲಿರುವ ಚಿತ್ರಬಂಧಗಳನ್ನು ಬಳಸಿ ಸುಂದರ ಪ್ರಕೃತಿ ದೃಶ್ಯಗಳನ್ನು ರಚಿಸುತ್ತಾಳೆ. ಜನರು ಆ ದೃಶ್ಯಗಳನ್ನು ನೋಡಲು ನಿಂತು ಅವೆಷ್ಟು ಸುಂದರವಾಗಿವೆ ಎಂದು ಹೇಳುವಾಗ ಆಕೆ ಸಂಭಾಷಣೆ ಆರಂಭಿಸಲು ಆ ಅವಕಾಶವನ್ನು ಬಳಸುತ್ತಾಳೆ. ‘ನೂತನ ಆಕಾಶ ಮತ್ತು ನೂತನ ಭೂಮಿಯ’ ಕುರಿತ ಬೈಬಲಿನ ವಾಗ್ದಾನದ ಬಗ್ಗೆ ಹೇಳುತ್ತಾಳೆ. (ಪ್ರಕ. 21:1-4) ನೀವು ಸಹ ಅವಕಾಶಗಳನ್ನು ಕಲ್ಪಿಸಿಕೊಳ್ಳಬಲ್ಲಿರೋ?
11. ನಾವು ಅನೌಪಚಾರಿಕ ಸಾಕ್ಷಿಕೊಟ್ಟ ಆಸಕ್ತ ವ್ಯಕ್ತಿಯನ್ನು ಹೇಗೆ ಸಂಪರ್ಕಿಸಬಹುದು?
11 ಆಸಕ್ತರನ್ನು ಪುನಃ ಭೇಟಿಯಾಗುವುದು ಹೇಗೆ? ಚೆನ್ನಾಗಿ ಕಿವಿಗೊಡುವವರು ಸಿಗುವಲ್ಲಿ ಅವರನ್ನು ಪುನಃ ಭೇಟಿಮಾಡಲು ಪ್ರಯತ್ನಿಸಿ. ಸೂಕ್ತವಾಗಿರುವಲ್ಲಿ ನೀವು ಅವರಿಗೆ, “ನಿಮ್ಮೊಟ್ಟಿಗೆ ಮಾತಾಡಿ ತುಂಬ ಸಂತೋಷವಾಯಿತು. ನಿಮ್ಮನ್ನು ಪುನಃ ಸಂಪರ್ಕಿಸುವುದು ಹೇಗೆ?” ಎಂದು ಕೇಳಿ. ಕೆಲವು ಟೆರಿಟೊರಿಗಳಲ್ಲಿ ಜನರು ತೋರಿಸುವ ಆಸಕ್ತಿ ನೈಜವೋ ಎಂದು ತಿಳಿದುಕೊಳ್ಳುವುದು ಪ್ರಾಮುಖ್ಯ. ಏಕೆಂದರೆ ಕೆಲವೊಂದು ಕಡೆಗಳಲ್ಲಿ ವಿರೋಧಿಗಳು ಆಸಕ್ತಿಯ ಸೋಗು ಹಾಕಿ ಪ್ರಚಾರಕರನ್ನು ಸಿಕ್ಕಿಸಿಹಾಕಿದ್ದಾರೆ. ನೀವು ಆಸಕ್ತ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಿಲ್ಲದಿರುವಲ್ಲಿ ಸೂಕ್ತವಾದ ಸಭೆಯವರು ಅವರನ್ನು ಸಂಪರ್ಕಿಸಲು ಏರ್ಪಾಡು ಮಾಡಿ. ಅಂದರೆ ತಡಮಾಡದೆ ನಿಮ್ಮ ಸಭಾ ಸೆಕ್ರಿಟರಿಗೆ ಪ್ಲೀಸ್ ಫಾಲೋ ಅಪ್ (S-43) ಫಾರ್ಮ್ ಅನ್ನು ಒಪ್ಪಿಸಬೇಕು.
12. (ಎ) ನಾವು ಅನೌಪಚಾರಿಕವಾಗಿ ಸಾಕ್ಷಿಕೊಟ್ಟ ಸಮಯವನ್ನು ಬರೆದಿಟ್ಟು, ವರದಿಮಾಡಬೇಕು ಏಕೆ? (ಬಿ) ಅನೌಪಚಾರಿಕ ಸಾಕ್ಷಿಕೊಡುವುದರಿಂದ ಯಾವ ಫಲಿತಾಂಶಗಳು ಸಿಕ್ಕಿವೆ? (“ಅನೌಪಚಾರಿಕ ಸಾಕ್ಷಿಕಾರ್ಯದಲ್ಲೂ ಫಲ ಖಚಿತ!” ಚೌಕ ನೋಡಿ.)
12 ನಾವು ಅನೌಪಚಾರಿಕವಾಗಿ ಸಾಕ್ಷಿಕೊಟ್ಟ ಸಮಯವನ್ನು ವರದಿಸಬೇಕು. ಆದುದರಿಂದ ಅದು ದಿನಕ್ಕೆ ಕೆಲವೇ ನಿಮಿಷಗಳಾಗಿದ್ದರೂ ಸರಿ ಬರೆದಿಡಲು ಮರೆಯಬೇಡಿ. ಸ್ವಲ್ಪ ಯೋಚಿಸಿ: ಜಗತ್ತಿನಾದ್ಯಂತ ಪ್ರತಿಯೊಬ್ಬ ಪ್ರಚಾರಕನು ಪ್ರತಿ ದಿನ 5 ನಿಮಿಷ ಅನೌಪಚಾರಿಕ ಸಾಕ್ಷಿಕೊಟ್ಟರೂ, ಅದೆಲ್ಲವನ್ನು ಸೇರಿಸಿದಾಗ ಒಂದು ತಿಂಗಳಲ್ಲಿ ಅದು 1,70,00,000ಕ್ಕಿಂತಲೂ ಹೆಚ್ಚು ತಾಸು ಆಗುತ್ತದೆ!
13. ಅನೌಪಚಾರಿಕವಾಗಿ ಸಾಕ್ಷಿಕೊಡಲು ನಮ್ಮನ್ನು ಯಾವುದು ಪ್ರಚೋದಿಸಬೇಕು?
13 ಅನೌಪಚಾರಿಕ ಸಾಕ್ಷಿಕೊಡಲು ನಮಗಿರುವ ಅತಿ ದೊಡ್ಡ ಕಾರಣಗಳು ದೇವರ ಮತ್ತು ನೆರೆಯವರ ಮೇಲಣ ಪ್ರೀತಿಯೇ. (ಮತ್ತಾ. 22:37-39) ಯೆಹೋವನ ಗುಣಗಳು ಮತ್ತು ಉದ್ದೇಶಗಳಿಗಾಗಿ ಕೃತಜ್ಞತೆ ತುಂಬಿದ ಹೃದಯವು ಆತನ ‘ರಾಜ್ಯದ ಮಹಾಪ್ರಭಾವದ’ ಕುರಿತು ಮಾತಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. (ಕೀರ್ತ. 145:7, 10-12) ನಮ್ಮ ನೆರೆಯವರ ಬಗ್ಗೆ ನಿಜವಾದ ಚಿಂತೆಯಿದ್ದರೆ, ಉಳಿದಿರುವ ಕೊಂಚ ಸಮಯದಲ್ಲಿ ಸುವಾರ್ತೆ ತಿಳಿಸಲಿಕ್ಕಾಗಿರುವ ಸೂಕ್ತ ಸಂದರ್ಭ ಕೈಜಾರಿ ಹೋಗುವಂತೆ ಬಿಡದಿರುವೆವು. (ರೋಮ. 10:13, 14) ಮುಂದಾಲೋಚನೆ ಮತ್ತು ತಯಾರಿಯೊಂದಿಗೆ ಸ್ವಲ್ಪ ಎಚ್ಚರಿಕೆವಹಿಸಿದರೆ ನಮಗೆಲ್ಲರಿಗೂ ಅನೌಪಚಾರಿಕವಾಗಿ ಸಾಕ್ಷಿಕೊಡಲು ಖಂಡಿತ ಸಾಧ್ಯವಾಗುವುದು. ಈ ಸಾಕ್ಷಿಕಾರ್ಯದಿಂದ ಪ್ರಾಮಾಣಿಕ ಹೃದಯದ ವ್ಯಕ್ತಿಗಳಿಗೆ ಸತ್ಯವನ್ನು ಪರಿಚಯಿಸುವ ಆನಂದ ನಮ್ಮದಾಗಬಲ್ಲದು.
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ನೀವೇ ಮುಂದಾಗಿ ಒಬ್ಬ ವ್ಯಕ್ತಿಯೊಂದಿಗೆ ಸಾದಾ ಸಂಭಾಷಣೆ ಆರಂಭಿಸುವ ಗುರಿಯನ್ನಿಡುವುದು ನಿಮಗೆ ಸಹಾಯಕಾರಿ ಆಗಿರಬಹುದು
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಹೊಸ ಹೊಸ ಉಪಾಯಗಳನ್ನು ಬಳಸಿ ಅನೇಕ ಪ್ರಚಾರಕರು ಅನೌಪಚಾರಿಕವಾಗಿ ಸಾಕ್ಷಿಕೊಡುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದಾರೆ
[ಪುಟ 5ರಲ್ಲಿರುವ ಚೌಕ]
ಸಂಭಾಷಣೆ ಆರಂಭಿಸಲು ಸಲಹೆಗಳು
◼ ಸಂಭಾಷಣೆ ಆರಂಭಿಸಲು ಸಹಾಯಕ್ಕಾಗಿ ಪ್ರಾರ್ಥಿಸಿ
◼ ಸ್ನೇಹಭರಿತರೂ, ಅವಸರದಲ್ಲಿಲ್ಲದಂತೆ ತೋರುವವರನ್ನೂ ಮಾತಾಡಿಸಿ
◼ ಮುಖ ನೋಡಿ, ನಸುನಗು ಬೀರಿ, ನಿಮ್ಮಿಬ್ಬರಿಗೂ ಆಸಕ್ತಿಕರವಾದ ಒಂದು ವಿಷಯದ ಬಗ್ಗೆ ಏನಾದರೂ ಹೇಳಿ
◼ ಚೆನ್ನಾಗಿ ಕಿವಿಗೊಡುವವರಾಗಿರಿ
[ಪುಟ 6ರಲ್ಲಿರುವ ಚೌಕ]
ಅನೌಪಚಾರಿಕ ಸಾಕ್ಷಿಕಾರ್ಯದಲ್ಲೂ ಫಲ ಖಚಿತ!
• ಒಬ್ಬ ಸಹೋದರನು ತನ್ನ ಕಾರನ್ನು ಗ್ಯಾರೇಜಿನಲ್ಲಿ ರಿಪೇರಿಗೆ ಕೊಟ್ಟು ಅಲ್ಲೇ ಕಾಯುತ್ತಿದ್ದಾಗ ಸುತ್ತಮುತ್ತಲಿದ್ದವರಿಗೆ ಸಾಕ್ಷಿಕೊಟ್ಟನು. ನಂತರ ಅಧಿವೇಶನದ ಸಾರ್ವಜನಿಕ ಭಾಷಣಕ್ಕೆ ಆಮಂತ್ರಿಸುವ ಕರಪತ್ರಗಳನ್ನೂ ಕೊಟ್ಟನು. ಮುಂದಿನ ವರ್ಷದ ಅಧಿವೇಶನದಲ್ಲಿ ಒಬ್ಬ ವ್ಯಕ್ತಿ ಬಂದು ಪ್ರೀತಿಯಿಂದ ವಂದಿಸಿದಾಗ ಸಹೋದರನಿಗೆ ಅವನ ಪರಿಚಯ ಸಿಗಲಿಲ್ಲ. ಒಂದು ವರ್ಷದ ಹಿಂದೆ ಸಹೋದರನು ಆ ಗ್ಯಾರೇಜಿನಲ್ಲಿ ಕರಪತ್ರಗಳನ್ನು ಕೊಟ್ಟಾಗ ಈತನು ಒಂದನ್ನು ಪಡಕೊಂಡಿದ್ದ! ಅವನು ಆ ಅಧಿವೇಶನದ ಸಾರ್ವಜನಿಕ ಭಾಷಣಕ್ಕೆ ಹಾಜರಾಗಿ ಅಲ್ಲಿ ಬೈಬಲ್ ಅಧ್ಯಯನಕ್ಕಾಗಿ ತನ್ನ ಹೆಸರನ್ನು ಕೊಟ್ಟಿದ್ದ. ಬಳಿಕ ಅವನೂ ಅವನ ಹೆಂಡತಿಯೂ ದೀಕ್ಷಾಸ್ನಾನ ಪಡೆದಿದ್ದರು.
• ಅನೌಪಚಾರಿಕ ಸಾಕ್ಷಿಯಿಂದಾಗಿಯೇ ಸತ್ಯವನ್ನು ಕಲಿತ ಸಹೋದರಿಯೊಬ್ಬಳು, ತನ್ನ ಮೂವರು ಮಕ್ಕಳಿಂದಾಗಿ ತನಗೆ ಭೇಟಿಯಾಗಲು ಸಾಧ್ಯವಾಗುವ ಜನರನ್ನು ತನ್ನ ವಿಶೇಷ ಟೆರಿಟೊರಿಯಾಗಿ ಪರಿಗಣಿಸುತ್ತಾಳೆ. ಶಿಕ್ಷಕ-ಪೋಷಕರ ಮೀಟಿಂಗ್ಗಳಲ್ಲೂ ಬೇರೆ ಸಂದರ್ಭಗಳಲ್ಲೂ ಶಾಲೆಯಲ್ಲಿ ನೆರೆಹೊರೆಯವರನ್ನು, ಹೆತ್ತವರನ್ನು ಭೇಟಿಯಾಗಲು ಆಕೆಗೆ ಸಾಧ್ಯವಾಗುತ್ತದೆ. ಆಕೆ ತನ್ನನ್ನು ಪರಿಚಯಿಸಿಕೊಳ್ಳುವಾಗೆಲ್ಲ, ತನ್ನ ಮಕ್ಕಳನ್ನು ಬೆಳೆಸುವುದರಲ್ಲಿ ಬೈಬಲ್ ತನಗೆ ಅಮೂಲ್ಯವಾದ ಸಹಾಯ ನೀಡುತ್ತದೆಂಬ ಸರಳವಾದ ಹೃತ್ಪೂರ್ವಕ ಮಾತೊಂದನ್ನು ಹೇಳುತ್ತಾಳೆ. ಬಳಿಕ ಬೇರಾವುದೋ ವಿಷಯದ ಬಗ್ಗೆ ಮಾತಾಡಲಾರಂಭಿಸುತ್ತಾಳೆ. ಆದರೆ ಹೀಗೆ ಮಾಡಿ ಮಾತುಕತೆ ಆರಂಭಿಸಿದ್ದರಿಂದ, ಮುಂದೆ ನಡೆಯುವ ಚರ್ಚೆಗಳಲ್ಲಿ ಬೈಬಲಿನ ವಿಷಯ ಮಾತಾಡಲು ಆಕೆಗೆ ಸುಲಭವಾಗುತ್ತದೆ. ಈ ವಿಧಾನ ಬಳಸಿ ಆಕೆ 12 ಮಂದಿಗೆ ದೀಕ್ಷಾಸ್ನಾನ ಪಡೆಯಲು ಸಹಾಯಮಾಡಿದ್ದಾಳೆ.
• ವಿಮೆ ಏಜೆಂಟ್ ಒಬ್ಬರು ಸಹೋದರಿಯೊಬ್ಬಳನ್ನು ಭೇಟಿಮಾಡಲು ಬಂದಿದ್ದಾಗ ಆಕೆ ಸಾಕ್ಷಿಕೊಡಲು ಆ ಅವಕಾಶ ಬಳಸಿಕೊಂಡಳು. ಒಳ್ಳೇ ಆರೋಗ್ಯ, ಸಂತೋಷ, ಶಾಶ್ವತ ಜೀವನದ ಗ್ಯಾರಂಟಿ ಪಡೆಯಲು ಇಷ್ಟವಿದೆಯೋ ಎಂದು ಅವನಿಗೆ ಕೇಳಿದಳು. ಅದಕ್ಕೆ ಅವನು ಹೌದೆಂದು ಉತ್ತರಿಸಿ, ಆಕೆ ಯಾವ ವಿಮಾ ಪಾಲಿಸಿ ಬಗ್ಗೆ ಮಾತಾಡುತ್ತಿದ್ದಾಳೆಂದು ಕೇಳಿದನು. ಆಕೆ ಬೈಬಲಿನ ವಾಗ್ದಾನಗಳನ್ನು ತೋರಿಸಿ, ಒಂದು ಪ್ರಕಾಶನವನ್ನು ಅವನಿಗೆ ನೀಡಿದಳು. ಅವನದನ್ನು ಒಂದೇ ಸಾಯಂಕಾಲದೊಳಗೆ ಓದಿ ಮುಗಿಸಿದನು. ಅವನೊಂದಿಗೆ ಬೈಬಲ್ ಅಧ್ಯಯನ ಆರಂಭಿಸಲಾಯಿತು, ಅವನು ಕೂಟಗಳಿಗೆ ಹಾಜರಾಗಲಾರಂಭಿಸಿ ಬಳಿಕ ದೀಕ್ಷಾಸ್ನಾನ ತೆಗೆದುಕೊಂಡನು.
• ಪ್ರಯಾಣಿಸುತ್ತಿದ್ದಾಗ ಸಹೋದರಿಯೊಬ್ಬಳು ತನ್ನ ಪಕ್ಕದಲ್ಲಿ ಕೂತುಕೊಂಡಿದ್ದ ಸ್ತ್ರೀಯೊಂದಿಗೆ ಮಾತಾಡಲಾರಂಭಿಸಿ ಆಕೆಗೆ ಸಾಕ್ಷಿಕೊಟ್ಟಳು. ಪ್ರಯಾಣದ ಅಂತ್ಯದಲ್ಲಿ ಸಹೋದರಿ ಆಕೆಗೆ ತನ್ನ ವಿಳಾಸ ಹಾಗೂ ಫೋನ್ ನಂಬರ್ ಕೊಟ್ಟು, ಮುಂದಿನ ಬಾರಿ ಯೆಹೋವನ ಸಾಕ್ಷಿಗಳು ಅವಳ ಮನೆಗೆ ಬಂದಾಗ ಬೈಬಲ್ ಅಧ್ಯಯನಕ್ಕಾಗಿ ವಿನಂತಿಸುವಂತೆ ಪ್ರೋತ್ಸಾಹಿಸಿದಳು. ಮರುದಿನವೇ ಇಬ್ಬರು ಸಾಕ್ಷಿಗಳು ಆ ಸ್ತ್ರೀಯ ಮನೆಗೆ ಬಂದರು. ಆಕೆ ಬೈಬಲ್ ಅಧ್ಯಯನ ಆರಂಭಿಸಿ, ಬೇಗನೆ ಪ್ರಗತಿಮಾಡಿ, ದೀಕ್ಷಾಸ್ನಾನ ಪಡೆದಳು. ಸ್ವಲ್ಪ ಸಮಯದೊಳಗೆ ಅವಳೇ ಮೂರು ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದಳು!
• 100 ವರ್ಷದ ಅಂಧ ಸಹೋದರರೊಬ್ಬರು ವೃದ್ಧರಿಗೆಂದೇ ಇರುವ ನರ್ಸಿಂಗ್ ಹೋಮ್ನಲ್ಲಿ ವಾಸಿಸುತ್ತಾರೆ. ಅವರು “ನಮಗೆ ರಾಜ್ಯ ಖಂಡಿತ ಬೇಕು” ಎಂದು ಹೇಳುತ್ತಿರುತ್ತಾರೆ. ಅಲ್ಲಿನ ನರ್ಸುಗಳು ಮತ್ತು ಇತರ ನಿವಾಸಿಗಳು ಆ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಆ ವೃದ್ಧ ಸಹೋದರರಿಗೆ ರಾಜ್ಯ ಅಂದರೇನು ಎಂದು ವಿವರಿಸಲು ಅವಕಾಶ ಸಿಗುತ್ತದೆ. ಅಲ್ಲಿ ಕೆಲಸಮಾಡುತ್ತಿರುವ ಸ್ತ್ರೀಯೊಬ್ಬಳು ಅವರಿಗೆ, ‘ಪರದೈಸಿನಲ್ಲಿ ನೀವೇನು ಮಾಡುವಿರಿ?’ ಎಂದು ಕೇಳಿದಳು. “ನನಗೆ ಕಣ್ಣು ಬರುವುದು, ಪುನಃ ನಡೆಯುವೆ, ನನ್ನ ಗಾಲಿಕುರ್ಚಿಯನ್ನು ಸುಟ್ಟುಹಾಕುವೆ” ಎಂದು ಉತ್ತರಿಸಿದರು. ಸಹೋದರರು ಅಂಧರಾಗಿರುವುದರಿಂದ ಪತ್ರಿಕೆಗಳನ್ನು ಗಟ್ಟಿಯಾಗಿ ಓದಿಹೇಳುವಂತೆ ಆ ಸ್ತ್ರೀಗೆ ಕೇಳುತ್ತಾರೆ. ಸಹೋದರರ ಮಗಳು ಒಮ್ಮೆ ಭೇಟಿಮಾಡಲು ಬಂದಾಗ, ತಾನು ಆ ಪತ್ರಿಕೆಗಳನ್ನು ಮನೆಗೆ ತಕ್ಕೊಂಡು ಹೋಗಬಹುದಾ ಎಂದು ಆ ಸ್ತ್ರೀ ಕೇಳಿದಳು. ಒಬ್ಬ ನರ್ಸ್ ಆ ಮಗಳಿಗೆ ಹೀಗಂದರು: “‘ನಮಗೆ ರಾಜ್ಯ ಖಂಡಿತ ಬೇಕು’ ಎಂಬುದು ನಮ್ಮ ನರ್ಸಿಂಗ್ ಹೋಮ್ನಲ್ಲೀಗ ಎಲ್ಲರ ಬಾಯಲ್ಲೂ ಇರುವ ಹೊಸ ಮಾತು.”
• ರೆಸ್ಟಾರೆಂಟ್ನಲ್ಲಿ ಲೈನ್ನಲ್ಲಿ ಸಹೋದರಿಯೊಬ್ಬಳು ನಿಂತಿದ್ದಳು. ಹತ್ತಿರದಲ್ಲಿ ಕೂತುಕೊಂಡಿದ್ದ ವೃದ್ಧರ ಗುಂಪೊಂದು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುತ್ತಿರುವುದು ಆಕೆಯ ಕಿವಿಗೆಬಿತ್ತು. ಅವರಲ್ಲೊಬ್ಬರು, ಸರ್ಕಾರವು ನಮ್ಮ ಸಮಸ್ಯೆಗಳನ್ನು ಬಗೆಹರಿಸಲಾರದೆಂದು ಹೇಳಿದರು. ನಮ್ಮ ಸಹೋದರಿ ‘ಇದು ಒಳ್ಳೇ ಅವಕಾಶ’ ಎಂದು ತನ್ನಲ್ಲೇ ಅಂದುಕೊಂಡು, ಒಂದು ಚಿಕ್ಕ ಪ್ರಾರ್ಥನೆ ಮಾಡಿ ಅವರ ಬಳಿ ಹೋದಳು. ತನ್ನ ಪರಿಚಯಮಾಡಿಕೊಂಡ ಬಳಿಕ ಆಕೆ, ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸುವ ಒಂದು ಸರ್ಕಾರವಿದೆ ಅದು ದೇವರ ರಾಜ್ಯ ಎಂದು ಹೇಳಿದಳು. ಅವಳ ಬಳಿ ಇದ್ದ ಬ್ರೋಷರೊಂದನ್ನು ನೀಡಿದಳು. ಆಗಲೇ ಮ್ಯಾನೇಜರ್ ಅವರ ಹತ್ತಿರ ಬಂದ. ಅಲ್ಲಿಂದ ಹೊರಡುವಂತೆ ತನಗೀಗ ಹೇಳುವನೆಂದು ಸಹೋದರಿ ನೆನಸಿದಳು. ಆದರೆ ಅವನು, ತಾನು ಸಂಭಾಷಣೆ ಕೇಳುತ್ತಾ ಇದ್ದೆ, ತನಗೂ ಒಂದು ಬ್ರೋಷರ್ ಬೇಕೆಂದು ಹೇಳಿದನು. ಅಲ್ಲೇ ಕೆಲಸಮಾಡುತ್ತಿದ್ದ ಉದ್ಯೋಗಿಯೊಬ್ಬಳೂ ಇವರ ಮಾತು ಕೇಳುತ್ತಾ ಇದ್ದಳು. ಅವಳು ಕಣ್ಣೀರಿಡುತ್ತಾ ಇವರ ಹತ್ತಿರ ಬಂದಳು. ಅವಳು ಹಿಂದೆ ಬೈಬಲ್ ಅಧ್ಯಯನ ಮಾಡುತ್ತಿದ್ದಳು. ಈಗ ಅದನ್ನು ಪುನಃ ಆರಂಭಿಸಲು ಇಚ್ಛಿಸಿದಳು.