ಶುಶ್ರೂಷೆಯಲ್ಲಿ ತಾಳ್ಮೆ ತೋರಿಸಿರಿ
1. ಮಾನವಕುಲಕ್ಕೆ ಯೆಹೋವನು ಹೇಗೆ ತಾಳ್ಮೆ ತೋರಿಸಿದ್ದಾನೆ?
1 ಮಾನವಕುಲದೊಂದಿಗೆ ದೇವರ ವ್ಯವಹಾರಗಳಲ್ಲಿ ತಾಳ್ಮೆ ಎದ್ದುಕಾಣುತ್ತದೆ. (ವಿಮೋ. 34:6; ಕೀರ್ತ. 106:41-45; 2 ಪೇತ್ರ 3:9) ಆತನ ಪ್ರೀತಿಪರ ತಾಳ್ಮೆಗೆ ಒಂದು ಅತ್ಯುತ್ತಮ ಉದಾಹರಣೆ, ಭೂವ್ಯಾಪಕವಾಗಿ ರಾಜ್ಯ ಸಾರುವ ಕೆಲಸವೇ ಆಗಿದೆ. ಯೆಹೋವನು ಬಹುಮಟ್ಟಿಗೆ 2,000 ವರ್ಷಗಳಿಂದ ಮಾನವಕುಲಕ್ಕೆ ತಾಳ್ಮೆ ತೋರಿಸುತ್ತಾ ಬಂದಿದ್ದಾನಾದರೂ ಇಂದಿನ ತನಕವೂ ಪ್ರಾಮಾಣಿಕ ಹೃದಯದ ಜನರನ್ನು ತನ್ನತ್ತ ಸೆಳೆಯುತ್ತಾ ಇದ್ದಾನೆ. (ಯೋಹಾ. 6:44) ನಾವು ನಮ್ಮ ಶುಶ್ರೂಷೆಯಲ್ಲಿ ಯೆಹೋವನಂತೆ ಹೇಗೆ ತಾಳ್ಮೆ ತೋರಿಸಬಲ್ಲೆವು?
2. ನಮ್ಮ ಟೆರಿಟೊರಿಯಲ್ಲಿ ಸೇವೆಮಾಡುವಾಗ ನಾವು ಹೇಗೆ ತಾಳ್ಮೆ ತೋರಿಸಬಹುದು?
2 ಮನೆಮನೆ ಶುಶ್ರೂಷೆ: ಜನರು ಈ ತನಕ ಆಸಕ್ತಿ ತೋರಿಸದೆ ಇರುವಂಥ ಟೆರಿಟೊರಿಯಲ್ಲಿ ಎಡೆಬಿಡದೆ ಸಾರುವ ಮೂಲಕ ನಾವು ಕೂಡ ಯೆಹೋವನಂತೆ ತಾಳ್ಮೆ ತೋರಿಸುತ್ತೇವೆ. (ಅ. ಕಾ. 5:42) ನಮ್ಮ ಶುಶ್ರೂಷೆಗೆ ಜನರು ತೋರಿಸುವ ನಿರಾಸಕ್ತಿ, ವಿರೋಧ, ಅಪಹಾಸ್ಯವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತೇವೆ. (ಮಾರ್ಕ 13:12, 13) ಮನೆಯಲ್ಲಿ ಆಸಕ್ತ ಜನರನ್ನು ಕಂಡುಕೊಳ್ಳುವುದು ಕಷ್ಟಕರವಾಗಿರುವಾಗ ಸತ್ಯದ ಬೀಜಗಳಿಗೆ ನೀರುಣಿಸಲು ನಾವು ಪಟ್ಟುಹಿಡಿದು ಪ್ರಯತ್ನಿಸುವ ಮೂಲಕವೂ ತಾಳ್ಮೆ ತೋರಿಸುತ್ತೇವೆ.
3. ಪುನರ್ಭೇಟಿಗಳನ್ನು ಮತ್ತು ಬೈಬಲ್ ಅಧ್ಯಯನಗಳನ್ನು ಮಾಡುವಾಗ ನಮಗೆ ತಾಳ್ಮೆ ಅಗತ್ಯ ಏಕೆ?
3 ಬೈಬಲ್ ಅಧ್ಯಯನಗಳು: ಒಂದು ಗಿಡ ಬೆಳೆಸಲು ತಾಳ್ಮೆ ಅಗತ್ಯ. ನಾವದರ ಆರೈಕೆ ಮಾಡಬಹುದು ಆದರೆ ಅದು ವೇಗವಾಗಿ ಬೆಳೆಯುವಂತೆ ಮಾಡಸಾಧ್ಯವಿಲ್ಲ. (ಯಾಕೋ. 5:7) ಹಾಗೆಯೇ ಆಧ್ಯಾತ್ಮಿಕ ಬೆಳವಣಿಗೆ ನಿಧಾನವಾಗಿ, ಹಂತಹಂತವಾಗಿ ನಡೆಯುತ್ತದೆ. (ಮಾರ್ಕ 4:28) ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ತಮ್ಮ ಸುಳ್ಳು ಧಾರ್ಮಿಕ ನಂಬಿಕೆಗಳನ್ನು ಇಲ್ಲವೆ ಬೈಬಲಾಧರಿತವಲ್ಲದ ಪದ್ಧತಿಗಳನ್ನು ತೊರೆಯಲು ತುಂಬ ಕಷ್ಟವಾಗಬಹುದು. ಆಗ ಅವರು ಬದಲಾವಣೆಗಳನ್ನು ಮಾಡುವಂತೆ ಒತ್ತಡ ಹೇರಿ ಬೆಳವಣಿಗೆಯ ವೇಗ ಹೆಚ್ಚಿಸಲು ನಾವು ಯತ್ನಿಸಬಾರದು. ವಿದ್ಯಾರ್ಥಿಯ ಹೃದಯದಲ್ಲಿ ದೇವರಾತ್ಮ ಕೆಲಸಮಾಡುವಂತೆ ಸಾಕಷ್ಟು ಸಮಯ ಕೊಡಲು ಸಹ ನಮಗೆ ತಾಳ್ಮೆ ಬೇಕು.—1 ಕೊರಿಂ. 3:6, 7.
4. ಅವಿಶ್ವಾಸಿ ಸಂಬಂಧಿಕರಿಗೆ ಪರಿಣಾಮಕಾರಿಯಾಗಿ ಸಾಕ್ಷಿನೀಡಲು ತಾಳ್ಮೆ ಹೇಗೆ ಸಹಾಯಕಾರಿ?
4 ಅವಿಶ್ವಾಸಿ ಸಂಬಂಧಿಕರು: ನಮ್ಮ ಅವಿಶ್ವಾಸಿ ಸಂಬಂಧಿಕರು ಸತ್ಯ ಕಲಿಯಬೇಕೆಂಬ ಉತ್ಕಟ ಇಚ್ಛೆ ನಮ್ಮಲ್ಲಿದ್ದರೂ ಅವರಿಗೆ ಸಾಕ್ಷಿಕೊಡಲು ತಕ್ಕ ಸಂದರ್ಭಕ್ಕಾಗಿ ಕಾಯುವ ಮೂಲಕ ನಾವು ತಾಳ್ಮೆ ತೋರಿಸುತ್ತೇವೆ. ಅಲ್ಲದೆ ಅವರೊಂದಿಗೆ ಮಾತಾಡುವಾಗ ಮಾಹಿತಿಯ ಮಹಾಪೂರವನ್ನೇ ಹರಿಸಿ ತಬ್ಬಿಬ್ಬುಗೊಳಿಸದಂತೆಯೂ ಜಾಗ್ರತೆ ವಹಿಸುತ್ತೇವೆ. (ಪ್ರಸಂ. 3:1, 7) ಈಮಧ್ಯೆ ನಾವು ನಮ್ಮ ಆದರ್ಶ ನಡತೆಯು ಸಾಕ್ಷಿಕೊಡುವಂತೆ ಬಿಡುತ್ತೇವೆ ಹಾಗೂ ಸೌಮ್ಯಭಾವ ಮತ್ತು ಆಳವಾದ ಗೌರವದಿಂದ ನಮ್ಮ ನಂಬಿಕೆಯನ್ನು ತಿಳಿಸಲು ಸಿದ್ಧರಾಗಿರುತ್ತೇವೆ. (1 ಪೇತ್ರ 3:1, 15) ನಿಶ್ಚಯವಾಗಿಯೂ, ತಾಳ್ಮೆಯಿಂದ ಕೂಡಿದ ಶುಶ್ರೂಷೆ ಹೆಚ್ಚು ಪರಿಣಾಮಕಾರಿಯೂ ನಮ್ಮ ಸ್ವರ್ಗೀಯ ತಂದೆಗೆ ಸಂತೋಷ ತರುವಂಥದ್ದೂ ಆಗಿದೆ.