ಪ್ರಶ್ನಾ ಚೌಕ
◼ ಒಬ್ಬರಿಗೆ ನಮ್ಮ ಸಾಹಿತ್ಯ ಕೊಡಬೇಕೋ ಬೇಡವೋ ಎನ್ನುವುದನ್ನು ಹೇಗೆ ನಿರ್ಣಯಿಸುವುದು?
ವ್ಯಕ್ತಿಯ ಆಸಕ್ತಿ ಗ್ರಹಿಸುವುದು ಅತಿಮುಖ್ಯ. ಆತ ನಿಜವಾಗಿಯೂ ಆಸಕ್ತಿ ತೋರಿಸಿದರೆ ಎರಡು ಪತ್ರಿಕೆ, ಬ್ರೋಷರ್, ಪುಸ್ತಕ ಅಥವಾ ಆ ತಿಂಗಳ ನೀಡುವಿಕೆಯನ್ನು ಕೊಡಬಹುದು. ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆ ಕೊಡಲು ಅವನು ಶಕ್ತನಲ್ಲ ಎಂದು ತೋರಿಬಂದರೂ ಅವನಿಗೆ ಸಾಹಿತ್ಯ ಕೊಡಬಹುದು. (ಯೋಬ 34:19; ಪ್ರಕ. 22:17) ಆದರೆ ಅದರ ಮೌಲ್ಯ ಗ್ರಹಿಸದವರ ಕೈಯಲ್ಲಿ ನಮ್ಮ ಅಮೂಲ್ಯ ಸಾಹಿತ್ಯಗಳನ್ನು ಕೊಡೆವು.—ಮತ್ತಾ. 7:6.
ಮನೆಯವರಿಗೆ ಆಸಕ್ತಿಯಿದೆ ಎಂದು ನಾವು ಹೇಗೆ ಗ್ರಹಿಸಬಲ್ಲೆವು? ನಮ್ಮೊಂದಿಗೆ ಮಾತಾಡಲು ಅವರಿಗೆ ಇಷ್ಟವಿದೆ ಎಂದು ತೋರಿದರೆ ಆಸಕ್ತಿಯಿದೆ ಎಂದರ್ಥ. ನಾವು ಮಾತಾಡುವಾಗ ಅವರು ಗಮನಕೊಟ್ಟು ಆಲಿಸುತ್ತಿದ್ದರೆ, ನಮ್ಮ ಪ್ರಶ್ನೆಗಳಿಗೆ ಸ್ಪಂದಿಸುತ್ತಿದ್ದರೆ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರೆ... ಅವರು ನಮ್ಮ ಸಂಭಾಷಣೆಯಲ್ಲಿ ಒಳಗೂಡುತ್ತಿದ್ದಾರೆ ಎಂದರ್ಥ. ನಾವು ಬೈಬಲ್‌ನಿಂದ ಓದಿ ತೋರಿಸುವಾಗ ಅವರು ಗಮನಕೊಟ್ಟು ಕೇಳಿಸಿಕೊಳ್ಳುತ್ತಾರಾದರೆ ದೇವರ ವಾಕ್ಯವನ್ನು ಮಾನ್ಯಮಾಡುತ್ತಾರೆ ಅಂತ ಗೊತ್ತಾಗುತ್ತದೆ. ಪತ್ರಿಕೆಯನ್ನು ಓದಲು ಅವರಿಗೆ ಆಸಕ್ತಿಯಿದೆಯಾ ಎಂದು ನೇರವಾಗಿ ಕೇಳಬಹುದು. ಒಬ್ಬರ ಆಸಕ್ತಿಯನ್ನು ತೂಗಿನೋಡುವುದರಲ್ಲಿ ಪ್ರಚಾರಕರು ವಿವೇಚನೆ ಬಳಸಬೇಕು. ಉದಾಹರಣೆಗೆ, ಬೀದಿ ಸಾಕ್ಷಿಕಾರ್ಯ ಮಾಡುವಾಗ ನಾವು ಕಂಡವರಿಗೆಲ್ಲ ನಮ್ಮ ಪತ್ರಿಕೆ, ಬ್ರೋಷರ್, ಪುಸ್ತಕಗಳನ್ನು ಕೊಡುವುದಿಲ್ಲ. ಒಬ್ಬನಿಗೆ ಆಸಕ್ತಿ ಇದೆಯೋ ಇಲ್ಲವೋ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲವಾದರೆ ಅವರಿಗೆ ಕರಪತ್ರ ಅಥವಾ ಟ್ರ್ಯಾಕ್ಟ್ ಕೊಟ್ಟರೆ ಸಾಕು.
ಸಾಹಿತ್ಯ ಕೌಂಟರ್‌ನಿಂದ ಪ್ರಚಾರಕನು ಎಷ್ಟು ಸಾಹಿತ್ಯ ತೆಗೆದುಕೊಳ್ಳಬಹುದು ಎನ್ನುವುದು ಶುಶ್ರೂಷೆಯಲ್ಲಿ ಅವನು ಎಷ್ಟು ಬಳಸುತ್ತಾನೆ ಎನ್ನುವುದರ ಮೇಲೆ ಅವಲಂಬಿತವಾಗಿರಬೇಕೇ ವಿನಃ ಅವನು ಎಷ್ಟು ಕಾಣಿಕೆ ಕೊಡಬಲ್ಲನು ಎನ್ನುವುದರ ಮೇಲಲ್ಲ. ನಾವು ಕಾಣಿಕೆ ಕೊಡುವುದು ಸಾಹಿತ್ಯಗಳಿಗಲ್ಲ ಲೋಕವ್ಯಾಪಕ ಸಾಕ್ಷಿ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳ ಬೆಂಬಲಕ್ಕಾಗಿ ಎನ್ನುವುದನ್ನು ಮನಸ್ಸಿನಲ್ಲಿಡಬೇಕು. ನಮ್ಮ ಆರ್ಥಿಕ ಸ್ಥಿತಿ ಏನೇ ಆಗಿರಲಿ ನಮಗೆ ಗಣ್ಯತೆಯಿದ್ದರೆ ರಾಜ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಬೆಂಬಲಿಸಲು ನಮ್ಮಲ್ಲಿ ಇರುವುದರಲ್ಲೇ ಉದಾರವಾಗಿ ಕೊಡುವೆವು. ನಮ್ಮಲ್ಲಿ ಮಿಕ್ಕಿದೆಯೆಂದು ಕಾಣಿಕೆ ಹಾಕುವುದಿಲ್ಲ. (ಮಾರ್ಕ 12:41-44; 2 ಕೊರಿಂ. 9:7) ಅಲ್ಲದೆ ನಮಗೆ ಬೇಕಾದಷ್ಟು ಸಾಹಿತ್ಯಗಳನ್ನು ಮಾತ್ರ ತೆಗೆದುಕೊಳ್ಳುವೆವು. ಕಾಣಿಕೆಯಾಗಿ ಬಂದ ಹಣವನ್ನು ವ್ಯರ್ಥಮಾಡುವುದಿಲ್ಲ.
[ಪುಟ 2ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಬ್ಬರ ಆಸಕ್ತಿಯನ್ನು ತೂಗಿನೋಡುವುದರಲ್ಲಿ ಪ್ರಚಾರಕರು ವಿವೇಚನೆ ಬಳಸಬೇಕು.