ಬೋಧನಾ ರೀತಿ ಉತ್ತಮಗೊಳಿಸಲು ಮೂರು ಸಲಹೆ
1. ನಮ್ಮ ಬೋಧನಾ ರೀತಿಯನ್ನು ಉತ್ತಮಗೊಳಿಸಬೇಕು ಏಕೆ?
1 ಯೆಹೋವನ ಸಾಕ್ಷಿಗಳೆಲ್ಲ ಬೋಧಕರೇ. ಪ್ರಥಮ ಬಾರಿ ಸಾಕ್ಷಿಕೊಡುತ್ತಿರಲಿ, ಪುನರ್ಭೇಟಿ ಮಾಡುತ್ತಿರಲಿ, ಅಧ್ಯಯನ ಮಾಡುತ್ತಿರಲಿ ಮಾಹಿತಿ ದಾಟಿಸುತ್ತಿದ್ದೇವೆ. ಆ ಮಾಹಿತಿ ಅಂಥಿಂಥದ್ದಲ್ಲ. “ಪವಿತ್ರ ಬರಹಗಳನ್ನು” ಚೆನ್ನಾಗಿ ಅರ್ಥಮಾಡಿಕೊಂಡು ಜನರನ್ನು ‘ರಕ್ಷಣೆಗೆ’ ನಡೆಸುವಂಥದ್ದು. (2 ತಿಮೊ. 3:15) ಎಂಥ ಸದವಕಾಶ ನಮ್ಮದು! ಹಾಗಾಗಿ ನಮ್ಮ ಬೋಧನಾ ರೀತಿಯನ್ನು ಉತ್ತಮಗೊಳಿಸಲು ಮೂರು ಸಲಹೆಗಳು ಇಲ್ಲಿವೆ.
2. ನಾವು ಹೇಗೆ ಸರಳವಾಗಿ ಬೋಧಿಸಬಲ್ಲೆವು?
2 ಸರಳತೆ: ನಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ಗೊತ್ತಿರುವಾಗ ಅದರ ಬಗ್ಗೆ ತುಂಬ ಮಾತಾಡಿಕೊಂಡು ಹೋಗುತ್ತೇವೆ. ಆ ವಿಷಯದ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದ ವ್ಯಕ್ತಿಗೆ ಅದನ್ನು ಗ್ರಹಿಸಲು ಕಷ್ಟವಾಗುತ್ತದೆಂದು ಮರೆತುಬಿಡುತ್ತೇವೆ. ಹಾಗಾಗಿ ಬೈಬಲ್ ಅಧ್ಯಯನ ಮಾಡುವಾಗ ಅನಗತ್ಯ ವಿವರಗಳನ್ನು ಸೇರಿಸಬೇಡಿ. ಮುಖ್ಯ ಅಂಶಗಳೆಡೆಗೆ ಗಮನ ಸೆಳೆಯಿರಿ. ತುಂಬ ಮಾತಾಡಿದಾಕ್ಷಣ ಅದು ಉತ್ತಮ ಬೋಧನಾ ರೀತಿಯಾಗುವುದಿಲ್ಲ. (ಜ್ಞಾನೋ. 10:19) ಮುಖ್ಯ ವಚನಗಳನ್ನು ಮಾತ್ರ ಓದುವುದು ಉತ್ತಮ. ಒಂದು ವಚನ ಓದಿದ ಮೇಲೆ ಚರ್ಚಿಸುತ್ತಿರುವ ವಿಷಯಕ್ಕೆ ಸಂಬಂಧಪಟ್ಟ ಅಂಶಕ್ಕೆ ಮಾತ್ರ ಗಮನಕೊಡಿ. ಮತ್ತಾಯ 5–7 ಅಧ್ಯಾಯಗಳಲ್ಲಿರುವ ಪರ್ವತ ಪ್ರಸಂಗದಲ್ಲಿ ಯೇಸು ಅತ್ಯಮೂಲ್ಯ ಸತ್ಯಗಳ ಬಗ್ಗೆ ಮಾತಾಡಿದನು. ಆದರೆ ಅವನ್ನು ಹೆಚ್ಚು ಪದಪ್ರಯೋಗ ಮಾಡದೆ ಸರಳವಾಗಿ ಬೋಧಿಸಿದನು.
3. ದೃಷ್ಟಾಂತ/ಚಿತ್ರಗಳಿಂದ ಯಾವ ಪ್ರಯೋಜನಗಳಿವೆ? ಎಂಥ ದೃಷ್ಟಾಂತಗಳು ಅತ್ಯುತ್ತಮ?
3 ದೃಷ್ಟಾಂತ/ಚಿತ್ರ: ದೃಷ್ಟಾಂತ/ಚಿತ್ರಗಳು ಯೋಚನಾ ಪ್ರೇರಕ, ಭಾವಪ್ರಚೋದಕ, ವಿಷಯವನ್ನು ನೆನಪಿನಲ್ಲಿಡಲು ಸಹಾಯಕ. ಒಳ್ಳೇ ದೃಷ್ಟಾಂತಗಳನ್ನು ಕೊಡಲು ನಿಮ್ಮಲ್ಲಿ ಕಥೆ ಹೇಳುವ ಕೌಶಲವೇನೂ ಇರಬೇಕಾಗಿಲ್ಲ. ಯೇಸು ಹೆಚ್ಚಾಗಿ ಚಿಕ್ಕಚಿಕ್ಕದಾದ ಸರಳ ದೃಷ್ಟಾಂತಗಳನ್ನೇ ಬಳಸಿದನು. (ಮತ್ತಾ. 7:3-5; 18:2-4) ಕಾಗದದ ಮೇಲೆ ಬಿಡಿಸಿದ ಸರಳ ಚಿತ್ರಗಳೂ ತುಂಬ ಸಹಾಯಕಾರಿ. ಮೊದಲೇ ತಯಾರಿ ಮಾಡಿದರೆ ಒಳ್ಳೇ ದೃಷ್ಟಾಂತಗಳು ಮನಸ್ಸಿಗೆ ಹೊಳೆಯುತ್ತವೆ.
4. ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಲ್ಲೆವು?
4 ಪ್ರಶ್ನೆಗಳು: ಪ್ರಶ್ನೆಗಳು ನಿಮ್ಮ ವಿದ್ಯಾರ್ಥಿಯನ್ನು ಯೋಚಿಸುವಂತೆ ಮಾಡುತ್ತವೆ. ಹಾಗಾಗಿ ಪ್ರಶ್ನೆ ಕೇಳಿದ ಮೇಲೆ ಸ್ವಲ್ಪ ಕಾಯಿರಿ. ನೀವೇ ತಕ್ಷಣ ಉತ್ತರ ಹೇಳಿಬಿಟ್ಟರೆ ನಿಮ್ಮ ವಿದ್ಯಾರ್ಥಿಗೆ ಏನರ್ಥವಾಗಿದೆ ಎಂದು ತಿಳಿದುಕೊಳ್ಳಲು ಆಗಲಿಕ್ಕಿಲ್ಲ. ವಿದ್ಯಾರ್ಥಿ ತಪ್ಪು ಉತ್ತರ ಕೊಟ್ಟರೆ ಅದನ್ನು ತಿದ್ದಿ ನೀವೇ ಸರಿಯಾದ ಉತ್ತರ ಹೇಳಬೇಡಿ. ಇನ್ನು ಕೆಲವು ಪ್ರಶ್ನೆಗಳನ್ನು ಹಾಕಿ ವಿದ್ಯಾರ್ಥಿಯಿಂದಲೇ ಉತ್ತರ ಬರುವಂತೆ ಮಾಡಿ. (ಮತ್ತಾ. 17:24-27) ನಾವ್ಯಾರೂ ಪರಿಪೂರ್ಣ ಬೋಧಕರಲ್ಲ. ಆದ್ದರಿಂದ ನಮ್ಮ ಬೋಧನಾ ರೀತಿಗೆ ಸದಾ ಗಮನಕೊಡುವಂತೆ ಬೈಬಲ್ ಪ್ರೋತ್ಸಾಹಿಸುತ್ತದೆ. ಹೀಗೆ ಮಾಡುವುದರಿಂದ ನಮಗೂ ನಮ್ಮ ಬೋಧನೆಗೆ ಕಿವಿಗೊಡುವವರಿಗೂ ಶಾಶ್ವತ ಪ್ರಯೋಜನಗಳು ಸಿಗುವವು.—1 ತಿಮೊ. 4:16.