ನೂತನ ಕರಪತ್ರಗಳ ವಿನೂತನ ವಿನ್ಯಾಸ!
1. ಸೇವೆಯಲ್ಲಿ ಉಪಯೋಗಿಸುವ ಯಾವ ಸಾಹಿತ್ಯಗಳು ಕುತೂಹಲ ಕೆರಳಿಸುವ ವಿನೂತನ ವಿನ್ಯಾಸವನ್ನು ಹೊಂದಿವೆ?
1 “ದೇವರ ವಾಕ್ಯವೇ ಸತ್ಯ!” ಎಂಬ 2013ರ ಜಿಲ್ಲಾ ಅಧಿವೇಶನದಲ್ಲಿ ಐದು ಹೊಸ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಈ ಸರಣಿಗೆ “ಸತ್ತವರು ಮತ್ತೆ ಬದುಕಿ ಬರುತ್ತಾರಾ?” ಎಂಬ ಶೀರ್ಷಿಕೆಯ ರಾಜ್ಯವಾರ್ತೆ ನಂ. 38 ಸೇರ್ಪಡೆಯಾಯಿತು. ಈ ಎಲ್ಲಾ ಆರು ಕರಪತ್ರಗಳು ಕುತೂಹಲ ಕೆರಳಿಸುವ ವಿನೂತನ ವಿನ್ಯಾಸವನ್ನು ಹೊಂದಿವೆ. ಈ ವಿನೂತನ ವಿನ್ಯಾಸಕ್ಕೆ ಕಾರಣಗಳೇನು? ನಾವು ಮನೆ-ಮನೆ ಸೇವೆಯಲ್ಲಿ ಇದರ ವೈಶಿಷ್ಟ್ಯಗಳನ್ನು ಹೇಗೆ ಸದುಪಯೋಗಿಸಬಹುದು?
2. ವಿನೂತನ ವಿನ್ಯಾಸಕ್ಕೆ ಕಾರಣವೇನು?
2 ವಿನೂತನ ವಿನ್ಯಾಸಕ್ಕೆ ಕಾರಣ: ಮನೆ-ಮನೆ ಸೇವೆಯ ಪರಿಣಾಮಕಾರಿ ನಿರೂಪಣೆಗಳಲ್ಲಿ ಸಾಮಾನ್ಯವಾಗಿ ಈ ನಾಲ್ಕು ಹೆಜ್ಜೆಗಳು ಇರುತ್ತವೆ: (1) ಸಂಭಾಷಣೆಯನ್ನು ಆರಂಭಿಸಲು ಒಂದು ದೃಷ್ಟಿಕೋನ ಪ್ರಶ್ನೆಯನ್ನು ಕೇಳುವುದು. (2) ಶಾಸ್ತ್ರವಚನಗಳಿಂದ ವಿಷಯಗಳನ್ನು ಹಂಚಿಕೊಳ್ಳುವುದು. (3) ಮನೆಯವನಿಗೆ ಓದಲು ಸಾಹಿತ್ಯವನ್ನು ಕೊಡುವುದು. (4) ಮುಂದಿನ ಬಾರಿ ಚರ್ಚಿಸಲು ಒಂದು ಪ್ರಶ್ನೆಯನ್ನು ಬಿಟ್ಟು, ಪುನರ್ಭೇಟಿಗಾಗಿ ಏರ್ಪಾಡು ಮಾಡುವುದು. ಈ ನಾಲ್ಕು ಹೆಜ್ಜೆಗಳನ್ನು ಸುಲಭವಾಗಿ ಅನುಸರಿಸಲು ಈ ಕರಪತ್ರಗಳ ವಿನೂತನ ವಿನ್ಯಾಸವು ನಮಗೆ ನೆರವಾಗುತ್ತದೆ.
3. ಹೊಸ ಕರಪತ್ರಗಳನ್ನು ಸೇವೆಯಲ್ಲಿ ನಾವು ಹೇಗೆ ಕೊಡಬಹುದು?
3 ಇವನ್ನು ಉಪಯೋಗಿಸುವ ವಿಧ: (1) ಮನೆಯವನನ್ನು ವಂದಿಸಿದ ಬಳಿಕ ಕರಪತ್ರದ ಮುಖಪುಟದಲ್ಲಿನ ಆಸಕ್ತಿ ಹುಟ್ಟಿಸುವಂಥ ಪ್ರಶ್ನೆ ಮತ್ತು ಅದಕ್ಕೆ ಉತ್ತರಿಸಲು ಇರುವ ಆಯ್ಕೆಗಳನ್ನು ತೋರಿಸುತ್ತಾ, ಅವನ ಅಭಿಪ್ರಾಯವನ್ನು ಕೇಳಿ. (2) ಕರಪತ್ರವನ್ನು ತೆರೆದು, “ಪವಿತ್ರ ಗ್ರಂಥ ಏನು ಹೇಳುತ್ತದೆ?” ಎಂಬ ಭಾಗವನ್ನು ಪರಿಗಣಿಸುತ್ತಾ ಪರಿಸ್ಥಿತಿ ಅನುಮತಿಸಿದರೆ ಆ ವಚನವನ್ನು ಬೈಬಲ್ನಿಂದಲೇ ಓದಿ. ಮನೆಯವನಿಗೆ ಸಮಯವಿದ್ದರೆ ಅದೇ ಪುಟದ ಕೊನೆಯಲ್ಲಿರುವ ಪ್ರಯೋಜನಗಳನ್ನೂ ಅವನೊಂದಿಗೆ ಚರ್ಚಿಸಿ. (3) ಕರಪತ್ರವನ್ನು ಕೊಡುತ್ತಾ ಉಳಿದ ವಿಷಯಗಳನ್ನು ಬಿಡುವಿದ್ದಾಗ ಓದಲು ಪ್ರೋತ್ಸಾಹಿಸಿ. (4) ಹೊರಡುವ ಮುನ್ನ, ಕರಪತ್ರದ ಹಿಂಬದಿಯಲ್ಲಿರುವ “ಯೋಚಿಸಿ” ಎಂಬ ಭಾಗದಲ್ಲಿನ ಪ್ರಶ್ನೆ ತೋರಿಸಿ ಮತ್ತು ಅದಕ್ಕೆ ಸಂಬಂಧಪಟ್ಟ ಬೈಬಲ್ ಉತ್ತರವನ್ನು ಮುಂದಿನ ಭೇಟಿಯಲ್ಲಿ ಚರ್ಚಿಸಲು ಏರ್ಪಾಡು ಮಾಡಿರಿ.
4. ನೂತನ ಕರಪತ್ರಗಳನ್ನು ಪುನರ್ಭೇಟಿಯಲ್ಲಿ ನಾವು ಹೇಗೆ ಉಪಯೋಗಿಸಬಹುದು?
4 ಪುನರ್ಭೇಟಿ ಮಾಡುವುದೂ ಸುಲಭ. ಕಳೆದ ಬಾರಿ ನೀವು ಕೇಳಿದ ಪ್ರಶ್ನೆಗೆ ಉತ್ತರಿಸಲು ಕರಪತ್ರದ ಹಿಂಬದಿಯಲ್ಲಿ ಕೊಡಲಾದ ವಚನಗಳನ್ನು ಉಪಯೋಗಿಸಿ. ಹೊರಡುವ ಮುನ್ನ, ಸಿಹಿಸುದ್ದಿ ಕಿರುಹೊತ್ತಗೆಯ ಚಿತ್ರವನ್ನು ತೋರಿಸಿ. ನಂತರ ಆ ಕಿರುಹೊತ್ತಗೆಯನ್ನು ಮತ್ತು ಕರಪತ್ರದಲ್ಲಿ ಸೂಚಿಸಿರುವ ಅದರ ಅಧ್ಯಾಯವನ್ನು ಪರಿಚಯಿಸುತ್ತಾ ‘ನಾವೀಗ ಚರ್ಚಿಸಿದ ವಿಷಯದ ಕುರಿತು ಹೆಚ್ಚಿನ ಮಾಹಿತಿ ಈ ಅಧ್ಯಾಯದಲ್ಲಿದೆ’ ಎಂದು ತಿಳಿಸಿ ಅದನ್ನು ಕೊಡಿ. ಮನೆಯವನು ಅದನ್ನು ತೆಗೆದುಕೊಂಡರೆ, ಕಿರುಹೊತ್ತಗೆಯನ್ನು ಮುಂದಿನ ಭೇಟಿಯಲ್ಲಿ ಚರ್ಚಿಸಲು ಏರ್ಪಾಡು ಮಾಡಿರಿ. ಇಷ್ಟು ಮಾಡಿದರೆ, ನೀವೊಂದು ಬೈಬಲ್ ಅಧ್ಯಯನ ಆರಂಭಿಸಿದಂತೆ! ಅಥವಾ ಆ ಕಿರುಹೊತ್ತಗೆಯನ್ನು ಕೊಡುವ ಬದಲಿಗೆ, ಇನ್ನೊಂದು ಕರಪತ್ರವನ್ನು ಕೊಟ್ಟು ಅದನ್ನು ಚರ್ಚಿಸಲು ಪುನರ್ಭೇಟಿಗಾಗಿ ಏರ್ಪಾಡು ಮಾಡಿ.
5. ನಮ್ಮ ಸೇವೆಯಲ್ಲಿ ಕರಪತ್ರಗಳ ಪಾತ್ರವೇನು?
5 ಕಳೆದ 130ಕ್ಕಿಂತ ಹೆಚ್ಚು ವರ್ಷಗಳಿಂದ ನಮ್ಮ ಸೇವೆಯಲ್ಲಿ ಕರಪತ್ರಗಳನ್ನು ಬಳಸುತ್ತಾ ಬಂದಿದ್ದೇವೆ. ಅವುಗಳ ವಿನ್ಯಾಸ ಮತ್ತು ಗಾತ್ರ ಬದಲಾಗುತ್ತಾ ಬಂದಿದ್ದರೂ, ಇಂದಿಗೂ ನಮ್ಮ ಸಾಕ್ಷಿಕಾರ್ಯದಲ್ಲಿ ಅವು ಪರಿಣಾಮಕಾರಿಯಾದ ಸಾಧನಗಳಾಗಿವೆ. ಬೈಬಲ್ ಜ್ಞಾನವನ್ನು ಭೂಮಿಯಾದ್ಯಂತ ಹಂಚುತ್ತಾ ಮುಂದುವರಿಯಲು ಈ ವಿನೂತನ ವಿನ್ಯಾಸವನ್ನು ಸದುಪಯೋಗಿಸೋಣ.—ಜ್ಞಾನೋ. 15:7ಎ.