ಬೋಧಿಸುವ ಕಲೆಯನ್ನು ಬೆಳೆಸಿಕೊಳ್ಳಲು 2015ರ ಶುಶ್ರೂಷಾ ಶಾಲೆಯಿಂದ ಸಹಾಯ
1 “ಯೆಹೋವನೇ, ನನ್ನ ಬಂಡೆಯೇ, ನನ್ನ ವಿಮೋಚಕನೇ, ನನ್ನ . . . ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಮೆಚ್ಚಿಕೆಯಾಗಿರಲಿ” ಎಂದು ಕೀರ್ತನೆಗಾರ ದಾವೀದನು ಬರೆದನು. (ಕೀರ್ತ. 19:14, ಪವಿತ್ರ ಗ್ರಂಥ) ನಮ್ಮ ಮಾತುಗಳನ್ನೂ ಯೆಹೋವನು ಮೆಚ್ಚಬೇಕೆನ್ನುವುದು ನಮ್ಮ ಆಸೆ. ಆದ್ದರಿಂದ ಸಭೆಯಲ್ಲಿ ಮತ್ತು ಸೇವೆಯಲ್ಲಿ ಸತ್ಯದ ಬಗ್ಗೆ ಮಾತಾಡಲು ನಮಗಿರುವ ಅವಕಾಶವನ್ನು ಅಮೂಲ್ಯವಾಗಿ ನೋಡುತ್ತೇವೆ. ಯೆಹೋವನು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೂಲಕ ಈ ಸುಯೋಗವನ್ನು ನಾವು ಚೆನ್ನಾಗಿ ಮಾಡಲು ತರಬೇತಿ ನೀಡುತ್ತಿದ್ದಾನೆ. ಈ ತರಬೇತಿ ಪ್ರತಿ ವಾರ ಸುಮಾರು 1,11,000 ಸಭೆಗಳಲ್ಲಿ ನಡೆಯುತ್ತಿದೆ. ಇದರಿಂದ ಎಲ್ಲಾ ಹಿನ್ನೆಲೆ, ಸಾಮರ್ಥ್ಯಗಳ ಸಹೋದರ ಸಹೋದರಿಯರು ಸುವಾರ್ತೆಯನ್ನು ಧೈರ್ಯವಾಗಿ, ಜಾಣ್ಮೆಯಿಂದ ಮತ್ತು ಜನರಿಗೆ ಇಷ್ಟವಾಗುವಂಥ ರೀತಿಯಲ್ಲಿ ಸಾರುತ್ತಿದ್ದಾರೆ.—ಅ. ಕಾ. 19:8; ಕೊಲೊ. 4:6.
2 ಬೈಬಲಿನ ಕಿರುಪರಿಚಯ ಮತ್ತು ಚರ್ಚೆಗಾಗಿ ಬೈಬಲ್ ವಿಷಯಗಳು ಎಂಬ ಪುಸ್ತಿಕೆಗಳಿಂದ 2015ರ ಶಾಲಾ ಶೆಡ್ಯೂಲ್ನಲ್ಲಿರುವ ಕೆಲವು ನೇಮಕಗಳನ್ನು ಆರಿಸಲಾಗಿದೆ. ಇದರೊಂದಿಗೆ, ಬೈಬಲ್ ಮುಖ್ಯಾಂಶಗಳು ಮತ್ತು ನೇಮಕ ನಂ. 1ಕ್ಕೆ ಕೊಟ್ಟಿರುವ ಸಮಯದಲ್ಲಿ ಹೊಂದಾಣಿಕೆ ಮಾಡಲಾಗಿದೆ. ಈ ಹೊಂದಾಣಿಕೆಗಳನ್ನು ಮತ್ತು ನೇಮಕಗಳನ್ನು ಹೇಗೆ ಮಾಡಬೇಕೆಂಬ ನಿರ್ದೇಶನಗಳನ್ನು ಮುಂದಿನ ಪ್ಯಾರಗಳು ತಿಳಿಸುತ್ತವೆ.
3 ಬೈಬಲ್ ಮುಖ್ಯಾಂಶಗಳು: ಈ ನೇಮಕವನ್ನು 8 ನಿಮಿಷಗಳಲ್ಲಿ ನಿರ್ವಹಿಸಬೇಕು. ಮೊದಲು ನೇಮಕ ಪಡೆದ ಸಹೋದರನು ತನ್ನ ಹೇಳಿಕೆಯನ್ನು ಕೇವಲ ಎರಡು ನಿಮಿಷಗಳಲ್ಲಿ ಕೊಡಬೇಕು. ಈ ಸಮಯದಲ್ಲಿ ವಾರದ ಬೈಬಲ್ ವಾಚನದಿಂದ ಸಭೆಗೆ ಪ್ರಯೋಜನವಾಗುವ ಒಂದೇ ಒಂದು ಆಸಕ್ತಿಕರ ಅಂಶವನ್ನು ತಿಳಿಸಬೇಕು. ಇದಕ್ಕಾಗಿ ಚೆನ್ನಾಗಿ ತಯಾರಿ ಮಾಡಿರಬೇಕು. ನಂತರ, ಉಳಿದಿರುವ ಆರು ನಿಮಿಷಗಳಲ್ಲಿ ಸಭಿಕರು ತಮ್ಮ ಹೇಳಿಕೆಗಳನ್ನು ನೀಡಬಹುದು. ಈ ಹೇಳಿಕೆಗಳು ಮೊದಲಿನಂತೆ 30 ಸೆಕೆಂಡುಗಳ ಒಳಗೆ ಇರಬೇಕು. ಈ ಕೆಲವೇ ಸೆಕೆಂಡುಗಳಲ್ಲಿ ಅರ್ಥಪೂರ್ಣ ವಿಷಯ ಹೇಳಲು ಸಭಿಕರು ಸಹ ಒಳ್ಳೆಯ ತಯಾರಿ ಮಾಡಬೇಕು. ಇದರಿಂದ ನಮಗೆ ಒಳ್ಳೆಯ ತರಬೇತಿ ಸಿಗುತ್ತದೆ. ಜೊತೆಗೆ, ಇತರರಿಗೂ ತಾವು ತಯಾರಿಸಿದ ಅಂಶವನ್ನು ಹೇಳಲು ಅವಕಾಶ ಸಿಗುತ್ತದೆ.
4 ನೇಮಕ ನಂ. 1: ಇನ್ನು ಮುಂದೆ ಬೈಬಲ್ ಓದುವ ನೇಮಕವನ್ನು ಮೂರು ನಿಮಿಷದೊಳಗೆ ಮಾಡಬೇಕು. ಓದಲಿರುವ ವಚನಗಳು ಕೂಡ ಸ್ವಲ್ಪವೇ ಇರುತ್ತದೆ. ಈ ನೇಮಕ ಪಡೆಯುವ ಸಹೋದರರು ಅನೇಕ ಬಾರಿ ಗಟ್ಟಿಯಾಗಿ ಓದಿ ತಯಾರಿ ಮಾಡಿರಬೇಕು. ಜೊತೆಗೆ, ಪದಗಳನ್ನು ಸರಾಗವಾಗಿ ಮತ್ತು ಸ್ಪಷ್ಟವಾಗಿ ಓದಲು ಹೆಚ್ಚು ಗಮನ ಕೊಡಬೇಕು. ಹೀಗೆ ಮಾಡುವುದರಿಂದ, ಬೈಬಲಿನಲ್ಲಿರುವ ವಿಷಯವನ್ನು ಸಭಿಕರಿಗೆ ಅರ್ಥವಾಗುವ ರೀತಿಯಲ್ಲಿ ಓದಬಹುದು. ಓದುವುದು ನಮ್ಮ ಆರಾಧನೆಯ ಮುಖ್ಯ ಭಾಗ. ಆದ್ದರಿಂದ ಎಲ್ಲರೂ ಚೆನ್ನಾಗಿ ಓದಲು ಪ್ರಯತ್ನ ಮಾಡಬೇಕು. ನಮ್ಮ ಸಭೆಯಲ್ಲಿರುವ ಎಷ್ಟೋ ಚಿಕ್ಕ ಮಕ್ಕಳು ಚೆನ್ನಾಗಿ ಓದುವುದನ್ನು ನೋಡುವಾಗ ನಮಗೆಲ್ಲ ಎಷ್ಟು ಖುಷಿಯಾಗುತ್ತಲ್ವಾ? ಅಷ್ಟು ಚೆನ್ನಾಗಿ ಓದಲು ಅವರಿಗೆ ಸಹಾಯ ಮಾಡುತ್ತಿರುವ ಅವರ ಹೆತ್ತವರನ್ನು ನಾವೆಲ್ಲರೂ ಮೆಚ್ಚಲೇಬೇಕು.
5 ನೇಮಕ ನಂ. 2: ಇದು ಐದು ನಿಮಿಷಗಳ ಅಭಿನಯ. ಸಹೋದರಿಯರು ಮಾಡುತ್ತಾರೆ. ನೇಮಿಸಲಾಗುವ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು. ಒಂದುವೇಳೆ ಈ ವಿಷಯವನ್ನು ಬೈಬಲಿನ ಕಿರುಪರಿಚಯ ಅಥವಾ ಚರ್ಚೆಗಾಗಿ ಬೈಬಲ್ ವಿಷಯಗಳು ಪುಸ್ತಿಕೆಯಿಂದ ಆರಿಸಿರುವುದಾದರೆ, ಅದನ್ನು ಕ್ಷೇತ್ರ ಸೇವೆಯಲ್ಲಿ ಹೇಗೆ ಉಪಯೋಗಿಸಬಹುದು ಎಂದು ತೋರಿಸಬೇಕು. ಈ ಅಭಿನಯ, ತಮ್ಮ ಸಭೆಯ ಕ್ಷೇತ್ರದಲ್ಲಿ ಎದುರಾಗುವಂಥ ಸನ್ನಿವೇಶಗಳಲ್ಲಿ ಏನು ಮಾಡಬೇಕೆಂದು ತೋರಿಸುವ ರೀತಿಯಲ್ಲಿರಬೇಕು. ಒಂದುವೇಳೆ ಈ ವಿಷಯ ಬೈಬಲಿನಲ್ಲಿನ ವ್ಯಕ್ತಿಯ ಬಗ್ಗೆ ಇರುವುದಾದರೆ ಮೊದಲು ಆ ವ್ಯಕ್ತಿಯ ಬಗ್ಗೆ ಬೈಬಲಿನಲ್ಲಿರುವ ಪೂರ್ಣ ಮಾಹಿತಿಯನ್ನು ಪಡೆಯಬೇಕು. ಯಾವ್ಯಾವ ವಚನಗಳನ್ನು ಉಪಯೋಗಿಸಬೇಕೆಂದು ಮೊದಲೇ ಯೋಚಿಸಬೇಕು. ಆ ವ್ಯಕ್ತಿಯ ಉದಾಹರಣೆಯಿಂದ ನಾವೇನನ್ನು ಕಲಿಯಬಹುದೆಂದು ತಿಳಿಸಬೇಕು. ಈ ಮುಖ್ಯ ವಿಷಯಕ್ಕೆ ಸಂಬಂಧಿಸಿದ ಬೇರೆ ವಚನಗಳು ಇರುವುದಾದರೆ ಅದನ್ನು ಬೇಕಾದರೂ ಸೇರಿಸಬಹುದು. ಸಹಾಯಕಿಯನ್ನು ಶಾಲೆಯ ಮೇಲ್ವಿಚಾರಕನೇ ನೇಮಿಸುತ್ತಾನೆ.
6 ನೇಮಕ ನಂ. 3: ಇದು ಸಹ ಐದು ನಿಮಿಷದ ನೇಮಕ. ಇದನ್ನು ಒಬ್ಬ ಸಹೋದರ ಅಥವಾ ಸಹೋದರಿ ಮಾಡುತ್ತಾರೆ. ಇದನ್ನು ಒಬ್ಬ ಸಹೋದರಿಗೆ ನೇಮಿಸಿದರೆ ಅವರು ನೇಮಕ ನಂ. 2ರಲ್ಲಿರುವ ನಿರ್ದೇಶನಗಳನ್ನು ಪಾಲಿಸಬೇಕು. ಆದರೆ ಒಬ್ಬ ಸಹೋದರನಿಗೆ ನೇಮಿಸಿದಾಗ ಅದರ ವಿಷಯಭಾಗ ಬೈಬಲಿನಲ್ಲಿನ ಯಾವುದಾದರೂ ವ್ಯಕ್ತಿಯ ಬಗ್ಗೆ ಇರುವುದಾದರೆ ಅದನ್ನು ಭಾಷಣದ ರೂಪದಲ್ಲಿ ಕೊಡಬೇಕು. ಸಭಿಕರಿಗೆ ಸಹಾಯವಾಗುವ ರೀತಿಯಲ್ಲಿ ಈ ಭಾಷಣವನ್ನು ತಯಾರಿಸಬೇಕು. ನೇಮಿಸಿರುವ ಮುಖ್ಯ ವಿಷಯವನ್ನು ವಿದ್ಯಾರ್ಥಿ ವಿವರಿಸಬೇಕು, ಯಾವ ವಚನಗಳನ್ನು ಉಪಯೋಗಿಸಬೇಕೆಂದು ಯೋಚಿಸಬೇಕು ಮತ್ತು ಆ ವ್ಯಕ್ತಿಯ ಉದಾಹರಣೆಯಿಂದ ನಾವೇನನ್ನು ಕಲಿಯಬಹುದೆಂದು ಹೇಳಬೇಕು.
7 ನೇಮಕ ನಂ. 3ರಲ್ಲಿ ಹೊಸ ಏರ್ಪಾಡು: ಈ ನೇಮಕದ ಮುಖ್ಯ ವಿಷಯ ಬೈಬಲಿನ ಕಿರುಪರಿಚಯ ಅಥವಾ ಚರ್ಚೆಗಾಗಿ ಬೈಬಲ್ ವಿಷಯಗಳು ಪುಸ್ತಿಕೆಯ ಆಧರಿತವಾಗಿದ್ದು, ಸಹೋದರನು ನಿರ್ವಹಿಸುವುದಾದರೆ ಅದನ್ನು ಕುಟುಂಬ ಆರಾಧನೆ ಅಥವಾ ಸಾರುವ ಸನ್ನಿವೇಶದಲ್ಲಿ ಅಭಿನಯಿಸಬೇಕು. ಸಾಮಾನ್ಯವಾಗಿ ಶಾಲಾ ಮೇಲ್ವಿಚಾರಕನೇ ಒಬ್ಬ ಸಹಾಯಕನನ್ನು ಮತ್ತು ಸನ್ನಿವೇಶವನ್ನು ನೇಮಿಸುತ್ತಾನೆ. ಸಹಾಯಕರಾಗಿ ವಿದ್ಯಾರ್ಥಿಯ ಕುಟುಂಬದವರಲ್ಲಿ ಒಬ್ಬರನ್ನು ಅಥವಾ ಸಭೆಯಲ್ಲಿರುವ ಒಬ್ಬ ಸಹೋದರನನ್ನು ನೇಮಿಸಬೇಕು. ಮುಖ್ಯ ವಿಷಯಕ್ಕೆ ಸಂಬಂಧಿಸಿದ ಬೈಬಲ್ ನಿಯಮಗಳನ್ನು ಒತ್ತಿ ಹೇಳುವ ಇತರ ವಚನಗಳನ್ನೂ ಉಪಯೋಗಿಸಬಹುದು. ಆಗಾಗ ಈ ನೇಮಕವನ್ನು ಒಬ್ಬ ಹಿರಿಯನಿಗೆ ಕೊಟ್ಟರೆ ಒಳ್ಳೆಯದು. ಹಿರಿಯರು ತಮ್ಮ ಸಹಾಯಕನನ್ನು ಮತ್ತು ಸನ್ನಿವೇಶವನ್ನು ಸ್ವತಃ ಆಯ್ಕೆ ಮಾಡಬಹುದು. ಹಿರಿಯರು ತಮ್ಮ ಕುಟುಂಬ ಸದಸ್ಯರು ಅಥವಾ ಸಹೋದರನೊಂದಿಗೆ ಈ ನೇಮಕವನ್ನು ಮಾಡುವಾಗ ಅವರಲ್ಲಿನ ಬೋಧನಾ ಕಲೆಯನ್ನು ಸಭಿಕರು ನೋಡಿ ಪ್ರಯೋಜನ ಪಡೆಯುತ್ತಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
8 ಸಲಹೆ: ಪ್ರತಿ ನೇಮಕದ ನಂತರ ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಯನ್ನು ಪ್ರಶಂಸಿಸಲು ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕವನ್ನು ಉಪಯೋಗಿಸುತ್ತಾ ಸಲಹೆ ನೀಡಲು ಎರಡು ನಿಮಿಷ ತೆಗೆದುಕೊಳ್ಳಬಹುದು. ಆರಂಭದಲ್ಲಿ ವಿದ್ಯಾರ್ಥಿ ನಿರ್ವಹಿಸಲಿರುವ ನೇಮಕದ ಕುರಿತು ತಿಳಿಸುವಾಗ ಮೇಲ್ವಿಚಾರಕನು ಅವನು ಯಾವ ಅಂಶದಲ್ಲಿ ಕೆಲಸ ಮಾಡುತ್ತಿದ್ದಾನೆಂದು ಸಭಿಕರಿಗೆ ತಿಳಿಸುವುದಿಲ್ಲ. ಪ್ರತಿಯೊಂದು ನೇಮಕದ ನಂತರ ಮೇಲ್ವಿಚಾರಕನು ವಿದ್ಯಾರ್ಥಿಯನ್ನು ಪ್ರಶಂಸಿಸಬೇಕು. ವಿದ್ಯಾರ್ಥಿಯು ಯಾವ ಅಂಶದ ಮೇಲೆ ಕೆಲಸ ಮಾಡುವಂತೆ ನೇಮಿಸಲಾಗಿತ್ತೆಂದು ಆಗ ತಿಳಿಸಬೇಕು. ನಂತರ, ಆ ವಿಷಯವನ್ನು ಅವನು ಹೇಗೆ ಉತ್ತಮ ರೀತಿಯಲ್ಲಿ ಮಾಡಿ ತೋರಿಸಿದನೆಂದು ಇಲ್ಲವೆ ವಿದ್ಯಾರ್ಥಿ ಯಾಕೆ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕೆಂದು ತಿಳಿಸಬೇಕು.
9 ವಿದ್ಯಾರ್ಥಿಗೆ ಕೊಡಬಹುದಾದ ಸಲಹೆಗಳ ಪಟ್ಟಿ ಶುಶ್ರೂಷಾ ಶಾಲೆ ಪುಸ್ತಕದ 79ರಿಂದ 81ನೇ ಪುಟದಲ್ಲಿದೆ. ವಿದ್ಯಾರ್ಥಿ ನೇಮಕವನ್ನು ಮಾಡಿದ ನಂತರ ಮೇಲ್ವಿಚಾರಕನು ಅವನ ಪುಸ್ತಕದಲ್ಲಿ ಗುರುತಿಸಬೇಕು ಮತ್ತು ಕೊಡಲಾದ ಅಭ್ಯಾಸ ಪಾಠವನ್ನು ಮಾಡಿದ್ದಾರಾ ಎಂದು ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಕೇಳಬೇಕು. ಕೂಟದ ನಂತರ ಅಥವಾ ಬೇರೆ ಸಮಯದಲ್ಲಿ ಅವರು ನೇಮಕದಲ್ಲಿ ಮಾಡಿದ ಉತ್ತಮ ವಿಷಯಗಳಿಗಾಗಿ ಶ್ಲಾಘಿಸಬೇಕು ಮತ್ತು ಇತರ ಸಲಹೆ ಸೂಚನೆಗಳನ್ನು ಕೊಡಬೇಕು. ಶಾಲೆಯಲ್ಲಿ ಕೊಡಲಾಗುವ ಸಲಹೆಗಳನ್ನು ವಿದ್ಯಾರ್ಥಿಯು ಆಧ್ಯಾತ್ಮಿಕ ಪ್ರಗತಿ ಮಾಡಲು ತನಗೆ ಸಿಕ್ಕಿದ ಪ್ರೋತ್ಸಾಹ ಎಂದು ಭಾವಿಸಬೇಕು.—1 ತಿಮೊಥೆಯ 4:15.
10 ವಿದ್ಯಾರ್ಥಿ ತನಗೆ ಕೊಡಲಾದ ಸಮಯವನ್ನು ಮೀರುವುದಾದರೆ ಶಾಲೆಯ ಮೇಲ್ವಿಚಾರಕನು ಸಮಯ ಮೀರುತ್ತಿದೆ ಎಂಬ ಸೂಚನೆ ಕೊಡಬೇಕು. ಅವರು ಬೆಲ್ ಮೂಲಕ ಅಥವಾ ಬೇರೊಂದು ವಿಧಾನದ ಮೂಲಕ ವಿದ್ಯಾರ್ಥಿಗೆ ಸಮಯ ಮೀರುತ್ತಿದೆ ಎಂದು ತಿಳಿಸಬೇಕು. ಈ ವಿಷಯ ತಿಳಿದ ಕೂಡಲೇ ವಿದ್ಯಾರ್ಥಿ ತಾನು ಹೇಳುತ್ತಿರುವ ವಾಕ್ಯವನ್ನು ವಿವೇಚನೆಯಿಂದ ಮುಗಿಸಿ, ವೇದಿಕೆಯಿಂದ ಇಳಿದು ಬರಬೇಕು.—ಶುಶ್ರೂಷಾ ಶಾಲೆ ಪುಸ್ತಕದ ಪುಟ 282, ಪ್ಯಾರ 4ನ್ನು ನೋಡಿ.
11 ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸೇರಲು ಸಾಧ್ಯವಾಗುವವರೆಲ್ಲರೂ ಬೇಗನೆ ಸೇರುವಂತೆ ಉತ್ತೇಜಿಸುತ್ತೇವೆ. (ಶುಶ್ರೂಷಾ ಶಾಲೆ ಪುಸ್ತಕದ ಪುಟ 282, ಪ್ಯಾರ 6ನ್ನು ನೋಡಿ.) ದೇವರ ರಾಜ್ಯದ ಸುವಾರ್ತೆಯ ಕುರಿತು ಧೈರ್ಯದಿಂದ, ದೃಢ ಭರವಸೆಯಿಂದ, ಪ್ರೀತಿಯಿಂದ ಸಾರಲು ಮತ್ತು ಕಲಿಸಲು ಈ ಶಾಲೆ ನಮ್ಮೆಲ್ಲರಿಗೂ ಸಹಾಯಮಾಡಿದೆ. ಆದ್ದರಿಂದ ಈ ದೇವಪ್ರಭುತ್ವಾತ್ಮಕ ಶಿಕ್ಷಣದಿಂದ ಪ್ರಯೋಜನ ಪಡೆಯುತ್ತಿರುವ ನಾವೆಲ್ಲರೂ ಯೆಹೋವನನ್ನು ಸದಾ ಸರ್ವದಾ ಸ್ತುತಿಸುತ್ತಿರೋಣ. ಹೀಗೆ ಯೆಹೋವನ ಮನಸ್ಸನ್ನು ಸಂತೋಷಪಡಿಸೋಣ.— ಕೀರ್ತ. 148:12, 13; ಯೆಶಾ. 50:4.
[ಪುಟ 5ರಲ್ಲಿರುವ ಚಿತ್ರ]
ಪ್ರಗತಿ ಮಾಡಲು ಸಲಹೆಗಳನ್ನು ಸ್ವೀಕರಿಸಿ ಪಾಲಿಸಿ