ಎಲ್ಲರನ್ನು ಆಮಂತ್ರಿಸಿ
1. ಅಧಿವೇಶನಕ್ಕೆ ನಾವು ಜನರನ್ನು ಯಾವಾಗಿನಿಂದ ಆಮಂತ್ರಿಸುತ್ತೇವೆ?
1 ಸಾಕಷ್ಟು ಶ್ರಮವಹಿಸಿ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗಾಗಿ ಒಂದು ವಿಶೇಷ ಭೋಜನವನ್ನು ಏರ್ಪಡಿಸಿದ್ದೀರೆಂದು ಭಾವಿಸಿ. ಅವರನ್ನು ನೀವು ಎಷ್ಟೊಂದು ಉತ್ಸಾಹದಿಂದ ಆಮಂತ್ರಿಸುತ್ತೀರಲ್ಲವೇ? ಮುಂದೆ ಬರಲಿರುವ ಅಧಿವೇಶನದಲ್ಲಿ ಕೊಡುವ ಆಧ್ಯಾತ್ಮಿಕ ಆಹಾರವನ್ನು ತಯಾರಿಸಲು ಸಹ ಸಾಕಷ್ಟು ಶ್ರಮವಹಿಸಲಾಗಿದೆ. ಅಧಿವೇಶನ ಆರಂಭವಾಗುವ ಮೂರು ವಾರಗಳ ಮುಂಚಿತವಾಗಿ ಜನರನ್ನು ಆಮಂತ್ರಿಸುವ ಸುಯೋಗವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಆದ್ದರಿಂದ ಜನರನ್ನು ಹುರುಪಿನಿಂದ ಆಮಂತ್ರಿಸೋಣ. ಇದಕ್ಕಾಗಿ ನಮಗೆ ಯಾವುದು ಸಹಾಯ ಮಾಡುತ್ತದೆ?
2. ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಯಾವುದು ನಮ್ಮನ್ನು ಪ್ರೋತ್ಸಾಹಿಸುತ್ತದೆ?
2 ಅಧಿವೇಶನಗಳಲ್ಲಿ ಯೆಹೋವನು ಕೊಡುವ ಮಾರ್ಗದರ್ಶನದಿಂದ ವೈಯಕ್ತಿಕವಾಗಿ ನಮಗಾಗುವ ಪ್ರಯೋಜನವನ್ನು ಪದಗಳಲ್ಲಿ ಬರೆಯಲಾಗದು. ಈ ಏರ್ಪಾಡಿಗೆ ಗಣ್ಯತೆ ಇರುವುದಾದರೆ ನಾವು ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸುವೆವು. (ಯೆಶಾ. 65:13, 14) ನಮ್ಮ ಅಧಿವೇಶನದ ಅಭಿಯಾನ ವ್ಯರ್ಥವಾಗುವುದಿಲ್ಲ ಎನ್ನುವುದನ್ನು ಮರೆಯದಿರಿ. (“ಅಭಿಯಾನ ವ್ಯರ್ಥವಾಗುವುದಿಲ್ಲ” ಎಂಬ ಚೌಕವನ್ನು ನೋಡಿ.) ನಾವು ಆಮಂತ್ರಿಸಿದವರಲ್ಲಿ ಎಲ್ಲರೂ ಅಧಿವೇಶನಕ್ಕೆ ಹಾಜರಾಗದಿದ್ದರೂ ಕೆಲವರಾದರೂ ಖಂಡಿತ ಹಾಜರಾಗುತ್ತಾರೆ. ಆಮಂತ್ರಿಸಿದ ಜನರು ಅಧಿವೇಶನಕ್ಕೆ ಬರಲಿ ಬರದೇ ಇರಲಿ, ಅಭಿಯಾನದಲ್ಲಿ ಪ್ರಯಾಸಪಟ್ಟು ಕೆಲಸ ಮಾಡುವ ಮೂಲಕ ಯೆಹೋವನಿಗೆ ಮಹಿಮೆ ತರುವೆವು ಮತ್ತು ಆತನ ಉದಾರತೆಯನ್ನು ಅನುಕರಿಸುವೆವು.—ಕೀರ್ತ. 145:3, 7; ಪ್ರಕ. 22:17.
3. ಆಮಂತ್ರಣ ಪತ್ರಗಳನ್ನು ಹೇಗೆ ವಿತರಿಸಲಾಗುವುದು
3 ಹೆಚ್ಚು ಆಮಂತ್ರಣ ಪತ್ರಗಳನ್ನು ವಿತರಿಸಲು ಸಭೆಯಾಗಿ ಯಾವೆಲ್ಲಾ ಹೆಜ್ಜೆ ತೆಗೆದುಕೊಳ್ಳಬೇಕೆಂದು ಹಿರಿಯರ ಮಂಡಲಿಯು ತೀರ್ಮಾನಿಸುತ್ತದೆ. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅದನ್ನು ಅಲ್ಲೇ ಇಟ್ಟು ಬರಬೇಕಾ, ಸಭೆಯ ಸೇವಾಕ್ಷೇತ್ರದಲ್ಲಿ ನಡೆಯುವ ಸಾರ್ವಜನಿಕ ಸಾಕ್ಷಿಕಾರ್ಯದ ಮೂಲಕ ವಿತರಿಸಬೇಕಾ ಎಂದು ಸಹ ತೀರ್ಮಾನಿಸುತ್ತದೆ. ಶನಿವಾರ, ಭಾನುವಾರಗಳಲ್ಲಿ ಆಮಂತ್ರಣ ಪತ್ರಗಳನ್ನು ಕೊಡುವಾಗ ಸೂಕ್ತವಾದಲ್ಲಿ ಪತ್ರಿಕೆಗಳನ್ನೂ ಕೊಡಿ. ಅಭಿಯಾನದಲ್ಲಿ ಹುರುಪಿನಿಂದ ಭಾಗವಹಿಸಿ, ಯೆಹೋವನು ಏರ್ಪಡಿಸಿರುವ ಈ ಆಧ್ಯಾತ್ಮಿಕ ಔತಣವನ್ನು ಸವಿಯಲು ಹೆಚ್ಚು ಸಂಖ್ಯೆಯಲ್ಲಿ ಜನರು ಹಾಜರಾಗುವುದನ್ನು ನೋಡುವಾಗ ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ.