ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಮೇ ಪು. 2-7
  • ಪ್ರಕಟನೆ ಪುಸ್ತಕದಿಂದ ನಮಗೇನು ಪಾಠ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆ ಪುಸ್ತಕದಿಂದ ನಮಗೇನು ಪಾಠ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಇಷ್ಟಪಡೋ ಆರಾಧನೆ
  • ಹಿಂಸೆ ವಿರೋಧಗಳನ್ನ ಸಹಿಸಿಕೊಳ್ಳೋಕೆ ತಯಾರಾಗಿರಿ
  • ಯೆಹೋವ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡಿ
  • ಭವಿಷ್ಯವಾಣಿಯಲ್ಲಿರೋ ಮಾತುಗಳ ಪ್ರಕಾರ ನಡೆಯಿರಿ
  • ಪ್ರಕಟನೆ ಪುಸ್ತಕದ ಹರ್ಷಚಿತ್ತ ವಾಚಕರಾಗಿರಿ
    ಕಾವಲಿನಬುರುಜು—1999
  • ನಮ್ಮ ಭವಿಷ್ಯ ಹೇಗಿರುತ್ತೆ ಅಂತ ಪ್ರಕಟನೆ ಪುಸ್ತಕ ಹೇಳುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!
    2006 ನಮ್ಮ ರಾಜ್ಯದ ಸೇವೆ
  • ಪ್ರಕಟನೆ ಪುಸ್ತಕದಲ್ಲಿರುವ ವಿಷಯಗಳು ಏನನ್ನ ಸೂಚಿಸುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಮೇ ಪು. 2-7

ಅಧ್ಯಯನ ಲೇಖನ 19

ಪ್ರಕಟನೆ ಪುಸ್ತಕದಿಂದ ನಮಗೇನು ಪಾಠ?

“ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು . . . ಖುಷಿಯಾಗಿ ಇರ್ತಾರೆ.”—ಪ್ರಕ. 1:3.

ಗೀತೆ 109 ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!

ಕಿರುನೋಟa

1-2. ಪ್ರಕಟನೆ ಪುಸ್ತಕದಲ್ಲಿರೋ ವಿಷಯಗಳನ್ನ ನಾವ್ಯಾಕೆ ತಿಳಿದುಕೊಳ್ಳಬೇಕು ಅನ್ನೋಕೆ ಒಂದು ಕಾರಣ ಕೊಡಿ.

ನೀವು ನಿಮ್ಮ ಫ್ರೆಂಡ್ಸ್‌ ಅಥವಾ ಸಂಬಂಧಿಕರ ಮನೆಗೆ ಹೋದಾಗ ಅವರು ನಿಮಗೆ ಒಂದು ಫೋಟೋ ಆಲ್ಬಮ್‌ನ ನೋಡೋಕೆ ಕೊಡ್ತಾರೆ ಅಂದುಕೊಳ್ಳಿ. ಆ ಫೋಟೋಗಳಲ್ಲಿ ಇರೋ ತುಂಬ ಜನರ ಪರಿಚಯ ನಿಮಗಿರಲ್ಲ. ಆದ್ರೆ ಯಾವುದೋ ಒಂದು ಫೋಟೋದಲ್ಲಿ ನೀವು ಇದ್ದೀರ ಅಂದುಕೊಳ್ಳಿ. ಆಗ ನೀವು ಆ ಫೋಟೋನ ಸೂಕ್ಷ್ಮವಾಗಿ ಗಮನಿಸುತ್ತೀರ ಅಲ್ವಾ? ಅದರಲ್ಲಿ ನಿಮ್ಮ ಜೊತೆ ಯಾರೆಲ್ಲಾ ನಿಂತಿದ್ದಾರೆ, ಅವತ್ತು ಏನೆಲ್ಲಾ ನಡಿತು ಅಂತ ನೆನಪು ಮಾಡಿಕೊಳ್ತೀರ.

2 ಪ್ರಕಟನೆ ಪುಸ್ತಕ ಆ ಫೋಟೋ ತರಾನೇ ಇದೆ. ಹೀಗೆ ಹೇಳೋಕೆ ಎರಡು ಕಾರಣಗಳಿವೆ. ಒಂದು, ಈ ಪ್ರಕಟನೆ ಪುಸ್ತಕನ ನಮಗೋಸ್ಕರನೇ ಬರೆಯಲಾಗಿದೆ. ಅದು ಆ ಪುಸ್ತಕದ ಮೊದಲನೇ ವಚನದಲ್ಲೇ ಗೊತ್ತಾಗುತ್ತೆ. ಅಲ್ಲಿ ಹೀಗಿದೆ: “ಈ ಮಾತುಗಳನ್ನ ಯೇಸು ಹೇಳಿದನು. ಇದನ್ನ ಯೇಸುಗೆ ಹೇಳಿದ್ದು ದೇವರು. ಮುಂದೆ ಏನಾಗುತ್ತೆ ಅಂತ ತನ್ನ ದಾಸರಿಗೆ ಗೊತ್ತಾಗೋಕೆ ಈ ವಿಷ್ಯಗಳನ್ನ ಹೇಳಿದನು.” (ಪ್ರಕ. 1:1) ಅದರರ್ಥ ಈ ಪುಸ್ತಕವನ್ನ ಭೂಮಿಯಲ್ಲಿರೋ ಎಲ್ಲಾ ಜನರಿಗೋಸ್ಕರ ಅಲ್ಲ, ದೇವರ ಸೇವಕರಾದ ನಮಗೋಸ್ಕರನೇ ಬರೆಯಲಾಗಿದೆ. ಅಷ್ಟೇ ಅಲ್ಲ, ಈ ಪುಸ್ತಕದಲ್ಲಿರೋ ಭವಿಷ್ಯವಾಣಿಯನ್ನ ನೆರವೇರಿಸೋದ್ರಲ್ಲಿ ನಮ್ಮ ಪಾಲೂ ಇದೆ. ಇದು ಆ “ಫೋಟೋದಲ್ಲಿ” ನಾವಿರೋ ತರ ಇದೆ.

3-4. ಪ್ರಕಟನೆ ಪುಸ್ತಕದಲ್ಲಿರೋ ಭವಿಷ್ಯವಾಣಿಗಳು ಯಾವಾಗ ನೆರವೇರುತ್ತೆ ಮತ್ತು ನಾವೇನು ಮಾಡಬೇಕು?

3 ಎರಡನೇ ಕಾರಣ ಏನಂದ್ರೆ ಈ ಭವಿಷ್ಯವಾಣಿಗಳು ನೆರವೇರುತ್ತಾ ಇರೋದು ನಮ್ಮ ಕಾಲದಲ್ಲಿ. ಈ ಭವಿಷ್ಯವಾಣಿಗಳು ಯಾವಾಗ ನೆರವೇರುತ್ತೆ ಅನ್ನೋದರ ಬಗ್ಗೆ ಅಪೊಸ್ತಲ ಯೋಹಾನ ಹೀಗೆ ಹೇಳಿದ: “ಪವಿತ್ರಶಕ್ತಿ ನನ್ನನ್ನ ಒಡೆಯನ ದಿನಕ್ಕೆ ಕರ್ಕೊಂಡು ಹೋಯ್ತು.” (ಪ್ರಕ. 1:10) ಇದನ್ನ ಯೋಹಾನ ಕ್ರಿಸ್ತಶಕ 96ರಲ್ಲಿ ಬರೆದ. ಆಗ “ಒಡೆಯನ ದಿನ” ಇನ್ನೂ ಶುರುವಾಗಿರಲಿಲ್ಲ. (ಮತ್ತಾ. 25:14, 19; ಲೂಕ 19:12) ಬೈಬಲ್‌ನಲ್ಲಿರೋ ಭವಿಷ್ಯವಾಣಿ ಹೇಳೋ ಹಾಗೆ ಯೇಸು ಸ್ವರ್ಗದಲ್ಲಿ ರಾಜ ಆದಾಗ ಅಂದ್ರೆ 1914ರಲ್ಲಿ ಆ ದಿನ ಶುರುವಾಯ್ತು. ಅವತ್ತಿಂದ ಹಿಡಿದು ಇವತ್ತಿನ ತನಕ ಪ್ರಕಟನೆ ಪುಸ್ತಕದಲ್ಲಿರೋ ಭವಿಷ್ಯವಾಣಿಗಳು ನೆರವೇರುತ್ತಾ ಇದೆ. ಈಗ ನಾವು ಜೀವಿಸ್ತಾ ಇರೋದು ‘ಒಡೆಯನ ದಿನದಲ್ಲಿ’ ಅನ್ನೋದ್ರಲ್ಲಿ ಎರಡು ಮಾತಿಲ್ಲ.

4 ಹಾಗಾಗಿ ಪ್ರಕಟನೆ 1:3ರಲ್ಲಿ ಯೆಹೋವ ಪ್ರೀತಿಯಿಂದ ಕೊಟ್ಟಿರೋ ಸಲಹೆಗೆ ನಾವು ಗಮನ ಕೊಡಬೇಕು. ಅಲ್ಲಿ ಹೀಗೆ ಹೇಳುತ್ತೆ: “ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು, ಅದನ್ನ ಕೇಳಿಸ್ಕೊಳ್ಳುವವರು, ಅದ್ರಲ್ಲಿ ಬರೆದ ಹಾಗೆ ನಡಿಯುವವರು ಖುಷಿಯಾಗಿ ಇರ್ತಾರೆ. ಯಾಕಂದ್ರೆ ಈ ಮಾತುಗಳೆಲ್ಲ ನಿಜ ಆಗೋ ಸಮಯ ಹತ್ರ ಇದೆ.” ಹಾಗಾದ್ರೆ ಈ ಪುಸ್ತಕದಲ್ಲಿ ಹೇಳಿರೋ ಯಾವ ಕೆಲವು ಮಾತುಗಳನ್ನ ‘ಜೋರಾಗಿ ಓದಬೇಕು,’ ‘ಕೇಳಿಸಿಕೊಳ್ಳಬೇಕು’ ಮತ್ತು ಯಾವ ತರ ‘ನಡೆದುಕೊಳ್ಳಬೇಕು’ ಅಂತ ಈಗ ನೋಡೋಣ.

ಯೆಹೋವ ಇಷ್ಟಪಡೋ ಆರಾಧನೆ

5. ಯೇಸು ಕೊಟ್ಟ ಸಲಹೆಗಳಿಂದ ನಮಗೇನು ಗೊತ್ತಾಗುತ್ತೆ?

5 ಸಭೆಗಳಲ್ಲಿ ಏನು ನಡೀತಾ ಇದೆ ಅಂತ ಯೇಸುವಿಗೆ ಚೆನ್ನಾಗಿ ಗೊತ್ತು. ಪ್ರಕಟನೆ ಪುಸ್ತಕದ ಮೊದಲನೇ ಅಧ್ಯಾಯವನ್ನ ಓದುವಾಗಲೇ ಇದು ನಮಗೆ ಗೊತ್ತಾಗುತ್ತೆ. (ಪ್ರಕ. 1:12-16, 20; 2:1) ಉದಾಹರಣೆಗೆ, ಏಷ್ಯಾ ಮೈನರ್‌ನಲ್ಲಿದ್ದ ಏಳು ಸಭೆಗಳಿಗೆ ಆತನು ನಿರ್ದೇಶನಗಳನ್ನ ಕೊಟ್ಟನು. ಪ್ರತಿಯೊಂದು ಸಭೆಯವರು ಯೆಹೋವನಿಗೆ ಇಷ್ಟ ಆಗೋ ತರ ಆರಾಧನೆ ಮಾಡೋಕೆ ಏನು ಮಾಡಬೇಕು ಅಂತ ನಿರ್ದಿಷ್ಟವಾಗಿ ತಿಳಿಸಿದನು. ಅಷ್ಟೇ ಅಲ್ಲ, ನಮ್ಮ ನಾಯಕನಾದ ಯೇಸು ಈಗಲೂ ನಮ್ಮನ್ನ ನೋಡ್ತಾ ಇದ್ದಾನೆ, ಆತನಿಂದ ನಾವು ಏನನ್ನೂ ಮುಚ್ಚಿಡೋಕೆ ಆಗಲ್ಲ. ನಾವು ಯೆಹೋವನಿಗೆ ಇಷ್ಟ ಆಗೋ ತರ ಆರಾಧನೆ ಮಾಡುತ್ತಿದ್ದೀವಾ ಇಲ್ವಾ ಅಂತ ಯೇಸುಗೆ ಚೆನ್ನಾಗಿ ಗೊತ್ತು. ಯೆಹೋವನ ಆರಾಧನೆಯನ್ನ ಸರಿಯಾಗಿ ಮಾಡಬೇಕಂದ್ರೆ ನಾವೇನು ಮಾಡಬೇಕು ಅಂತನೂ ಆತನಿಗೆ ಗೊತ್ತು. ಯೇಸು ಆ ಸಭೆಗಳಿಗೆ ಕೊಟ್ಟ ನಿರ್ದೇಶನಗಳಿಂದ ನಮಗೂ ಪ್ರಯೋಜನಗಳಿವೆ. ಹಾಗಾಗಿ ಅದರ ಬಗ್ಗೆ ನಾವೀಗ ನೋಡೋಣ.

6. (ಎ) ಪ್ರಕಟನೆ 2:3, 4ರಲ್ಲಿ ಯೇಸು ಹೇಳಿದ ತರ ಎಫೆಸ ಸಭೆಯವರಲ್ಲಿ ಯಾವ ಕೊರತೆ ಇತ್ತು? (ಬಿ) ಇದರಿಂದ ನಮಗೇನು ಪಾಠ?

6 ಪ್ರಕಟನೆ 2:3, 4 ಓದಿ. ಯೆಹೋವ ದೇವರ ಮೇಲೆ ಮೊದಲಿದ್ದ ಪ್ರೀತಿ ಕಮ್ಮಿಯಾಗೋಕೆ ಬಿಡಬಾರದು. ಯೇಸು ಎಫೆಸದವರಿಗೆ ಕೊಟ್ಟ ಸಲಹೆಯಿಂದ ನಮಗೇನು ಗೊತ್ತಾಗುತ್ತೆ ಅಂದ್ರೆ ಅವರು ತುಂಬ ಕಷ್ಟಗಳನ್ನ ಸಹಿಸಿಕೊಳ್ತಾ ಇದ್ರು. ಎಷ್ಟೇ ವಿರೋಧ, ಕಷ್ಟಗಳಿದ್ರೂ ಅವರು ಯೆಹೋವನ ಸೇವೆಯನ್ನ ಬಿಡದೇ ಮಾಡ್ತಾ ಇದ್ರು. ಆದ್ರೆ ಅವರಿಗೆ ಯೆಹೋವನ ಮೇಲೆ ಮೊದಲಿದ್ದ ಪ್ರೀತಿ ಈಗ ಇರಲಿಲ್ಲ. ಆ ಪ್ರೀತಿನ ಅವರು ಮತ್ತೆ ಬೆಳೆಸಿಕೊಳ್ಳಬೇಕಿತ್ತು. ಆಗ ಮಾತ್ರ ಯೆಹೋವ ಅವರ ಆರಾಧನೆಯನ್ನ ಇಷ್ಟಪಡುತ್ತಿದ್ದನು. ಅವರ ತರಾನೇ ನಾವೂ ಕಷ್ಟಗಳನ್ನ ಸಹಿಸಿಕೊಳ್ಳುತ್ತೀವಿ. ಆದ್ರೆ ಯೆಹೋವ ದೇವರು ನಾವು ಏನನ್ನ ಸಹಿಸಿಕೊಳ್ತೀವಿ ಅನ್ನೋದನ್ನ ಮಾತ್ರ ಅಲ್ಲ, ಯಾಕೆ ಸಹಿಸಿಕೊಳ್ತಿದ್ದೀವಿ ಅನ್ನೋದನ್ನೂ ನೋಡ್ತಾನೆ. ನಾವು ಯೆಹೋವ ಕೊಟ್ಟಿರೋ ವಿಷಯಗಳಿಗೆ ಕೃತಜ್ಞರಾಗಿರೋದ್ರಿಂದ ಮತ್ತು ಆತನ ಮೇಲಿರೋ ಪ್ರೀತಿಯಿಂದ ಆತನನ್ನ ಆರಾಧಿಸಬೇಕು ಅಂತ ಯೆಹೋವ ಬಯಸ್ತಾನೆ.—ಜ್ಞಾನೋ. 16:2; ಮಾರ್ಕ 12:29, 30.

7. (ಎ) ಸಾರ್ದಿಸ್‌ ಸಭೆಯಲ್ಲಿ ಯಾವ ಸಮಸ್ಯೆ ಇತ್ತು ಅಂತ ಪ್ರಕಟನೆ 3:1-3 ಹೇಳುತ್ತೆ? (ಬಿ) ಇದ್ರಿಂದ ನಮಗೇನು ಪಾಠ?

7 ಪ್ರಕಟನೆ 3:1-3 ಓದಿ. ಯಾವಾಗ್ಲೂ ಎಚ್ಚರವಾಗಿರಬೇಕು. ಸಾರ್ದಿಸ್‌ ಸಭೆಯವರು ಮುಂಚೆ ಯೆಹೋವನ ಸೇವೆಯಲ್ಲಿ ಪಾದರಸದ ತರ ಚುರುಕಾಗಿದ್ರು. ಆದ್ರೆ ಬರುತ್ತಾ ಬರುತ್ತಾ ಯೆಹೋವನ ಸೇವೆ ಮಾಡೋದನ್ನ ಕಡಿಮೆ ಮಾಡಿದ್ರು. ಹಾಗಾಗಿ ಯೇಸು ಆ ಸಭೆಗೆ “ಎದ್ದೇಳು” ಅಂತ ಹೇಳಿದನು. ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವ ನಮ್ಮ ಕೆಲಸನ ಮರೆಯಲ್ಲ ನಿಜ, ಹಾಗಂತ ‘ಈಗಾಗಲೇ ನಾವು ತುಂಬ ಸೇವೆ ಮಾಡಿಬಿಟ್ಟಿದ್ದೀವಿ, ಈಗ ನಾವು ಮಾಡಲಿಲ್ಲ ಅಂದ್ರೂ ನಡೆಯುತ್ತೆ’ ಅಂತ ಅಂದುಕೊಳ್ಳಬಾರದು. (ಇಬ್ರಿ. 6:10) ಮುಂಚಿನ ತರ ಈಗ ಸೇವೆ ಮಾಡೋಕೆ ನಮಗೆ ಕಷ್ಟ ಆಗುತ್ತಿರಬಹುದು. ಆದ್ರೂ ‘ಒಡೆಯನ ಕೆಲಸದಲ್ಲಿ’ ಬಿಝಿಯಾಗಿರಬೇಕು ಮತ್ತು ಕೊನೇ ತನಕ ಎಚ್ಚರವಾಗಿರಬೇಕು.—1 ಕೊರಿಂ. 15:58; ಮತ್ತಾ. 24:13; ಮಾರ್ಕ 13:33.

8. ಪ್ರಕಟನೆ 3:15-17ರಲ್ಲಿ ಯೇಸು ಲವೊದಿಕೀಯ ಸಭೆಯವರಿಗೆ ಕೊಟ್ಟ ಸಲಹೆಯಿಂದ ನಮಗೇನು ಪಾಠ?

8 ಪ್ರಕಟನೆ 3:15-17 ಓದಿ. ಹುರುಪಿಂದ ಮತ್ತು ಮನಸಾರೆ ಯೆಹೋವನ ಸೇವೆ ಮಾಡಬೇಕು. ಲವೊದಿಕೀಯ ಸಭೆಯವರು ಯೆಹೋವನನ್ನು ಆರಾಧಿಸುವುದರಲ್ಲಿ ‘ಉಗುರುಬೆಚ್ಚಗಿದ್ರು.’ ಅದಕ್ಕೆ ಯೇಸು ಅವರಿಗೆ ನಿಮ್ಮ “ಪರಿಸ್ಥಿತಿ ಹಾಳಾಗಿ ಹೋಗಿದೆ” ಅಂತ ಹೇಳಿದನು. ಅವರು ಯೆಹೋವನನ್ನು ಹುರುಪು-ಹುಮ್ಮಸ್ಸಿಂದ ಆರಾಧಿಸಬೇಕಿತ್ತು. (ಪ್ರಕ. 3:19) ಇದರಿಂದ ನಮಗೇನು ಪಾಠ? ನಮಗೆ ಯೆಹೋವನ ಸೇವೆಯಲ್ಲಿ ಹುರುಪು ಕಮ್ಮಿಯಾಗಿದ್ರೆ ಅದನ್ನ ಜಾಸ್ತಿ ಮಾಡಿಕೊಳ್ಳಬೇಕು. ಯೆಹೋವ ಮತ್ತು ಆತನ ಸಂಘಟನೆ ನಮಗಾಗಿ ಏನೆಲ್ಲಾ ಮಾಡಿದ್ದಾರೆ ಅನ್ನೋದನ್ನ ನೆನಪಿಸಿಕೊಳ್ಳಬೇಕು. (ಪ್ರಕ. 3:18) ನಾವು ಶ್ರೀಮಂತರಾಗಬೇಕು ಅನ್ನೋ ಆಸೆಯಿಂದ ಹಣದ ಹಿಂದೆ ಹೋದರೆ ಯೆಹೋವನ ಸೇವೆಯನ್ನ ಹಗುರವಾಗಿ ತೆಗೆದುಕೊಂಡುಬಿಡ್ತೀವಿ.

9. ಥುವತೈರ ಮತ್ತು ಪೆರ್ಗಮ ಸಭೆಗೆ ಬಂದ ಹಾಗೆ ನಮಗೂ ಯಾವ ಸಮಸ್ಯೆ ಬರಬಹುದು?

9 ಧರ್ಮಭ್ರಷ್ಟರ ಬೋಧನೆಗಳಿಂದ ದೂರವಿರಬೇಕು. ಪೆರ್ಗಮ ಸಭೆಯಲ್ಲಿದ್ದ ಕೆಲವರು ಸಹೋದರರ ಮಧ್ಯೆ ಇದ್ದ ಒಗ್ಗಟ್ಟನ್ನ ಮುರಿಯುತ್ತಿದ್ದರು. ಇದನ್ನ ನೋಡಿ ಯೇಸು ಅವರನ್ನ ಗದರಿಸಿದನು. (ಪ್ರಕ. 2:14-16) ಆದ್ರೆ ಥುವತೈರ ಸಭೆಯವರು ‘ಸೈತಾನನಿಂದ ಬರೋ ಸುಳ್ಳು ಬೋಧನೆಗಳ’ ತಂಟೆಗೂ ಹೋಗುತ್ತಿರಲಿಲ್ಲ. ಅದಕ್ಕೆ ಯೇಸು ಅವರಿಗೆ, ಹೀಗೇ “ಮಾಡ್ತಾ ಇರಿ” ಅಂತ ಪ್ರಶಂಸಿಸಿದನು. (ಪ್ರಕ. 2:24-26) ಈ ಸಭೆಗಳಲ್ಲಿದ್ದ ಕೆಲವರ ನಂಬಿಕೆ ಕಡಿಮೆಯಾಗಿದ್ರಿಂದ ಅವರು ಧರ್ಮಭ್ರಷ್ಟರ ಮಾತನ್ನ ಕೇಳೋಕೆ ಶುರುಮಾಡಿದ್ರು. ಆದ್ರೆ ಅವರು ಪಶ್ಚಾತ್ತಾಪ ಪಡಬೇಕಿತ್ತು. ನಾವು ಕೂಡ ಧರ್ಮಭ್ರಷ್ಟರ ಬೋಧನೆಗಳನ್ನ ಕೇಳಿಸಿಕೊಳ್ಳಬಾರದು. ಈ ಧರ್ಮಭ್ರಷ್ಟರು “ದೇವಭಕ್ತಿಯ ವೇಷ” ಹಾಕಿಕೊಂಡಿರುತ್ತಾರೆ ಅಷ್ಟೇ. ಆದ್ರೆ ‘ಅದಕ್ಕೆ ತಕ್ಕ ಹಾಗೆ ಜೀವನ ಮಾಡಲ್ಲ.’ (2 ತಿಮೊ. 3:5) ನಾವು ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಿದ್ರೆ ಸುಳ್ಳು ಬೋಧನೆಗಳನ್ನ ಕಂಡುಹಿಡಿದು ಅದರಿಂದ ದೂರ ಇರುತ್ತೀವಿ.—2 ತಿಮೊ. 3:14-17; ಯೂದ 3, 4.

10. ಪೆರ್ಗಮ ಮತ್ತು ಥುವತೈರ ಸಭೆಗೆ ಯೇಸು ಕೊಟ್ಟ ಸಲಹೆಯಿಂದ ನಾವೇನು ಕಲಿಬಹುದು?

10 ಎಲ್ಲಾ ತರದ ಅನೈತಿಕತೆಯಿಂದ ದೂರವಿರಬೇಕು. ಪೆರ್ಗಮ ಮತ್ತು ಥುವತೈರ ಸಭೆಯಲ್ಲಿ ಕೆಲವರು ಅನೈತಿಕ ವಿಷಯಗಳನ್ನ ಮಾಡಿದ್ರಿಂದ ಯೇಸು ಅವರನ್ನ ಗದರಿಸಿದನು. (ಪ್ರಕ. 2:14, 20) ಇದ್ರಿಂದ ನಮಗೇನು ಗೊತ್ತಾಗುತ್ತೆ ಅಂದ್ರೆ ನಾವು ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇರಬಹುದು ಅಥವಾ ಈಗಾಗಲೇ ಎಷ್ಟೋ ಸುಯೋಗಗಳು ಸಿಕ್ಕಿರಬಹುದು. (1 ಸಮು. 15:22; 1 ಪೇತ್ರ 2:16) ಹಾಗಂತ ನಾವು ಅನೈತಿಕ ವಿಷಯಗಳನ್ನು ಮಾಡಿದ್ರೂ ಯೆಹೋವ ನಮ್ಮನ್ನ ಕ್ಷಮಿಸಿಬಿಡ್ತಾನೆ ಅಂತ ಅಂದುಕೊಳ್ಳಬಾರದು. ಈ ಲೋಕದ ನೈತಿಕತೆ ನೆಲಕಚ್ಚಿದ್ರೂ ನಾವು ಯೆಹೋವನ ನೈತಿಕ ಮಟ್ಟಗಳನ್ನ ಪಾಲಿಸಬೇಕು ಅಂತ ಯೆಹೋವ ಬಯಸ್ತಾನೆ.—ಎಫೆ. 6:11-13.

11. ನಾವು ಇಲ್ಲಿ ತನಕ ಏನು ಕಲಿತ್ವಿ? (“ನಮಗಿರೋ ಪಾಠಗಳು” ಅನ್ನೋ ಚೌಕ ನೋಡಿ.)

11 ನಾವು ಇಲ್ಲಿ ತನಕ ಏನು ಕಲಿತ್ವಿ? ನಮ್ಮ ಆರಾಧನೆ ಯೆಹೋವನಿಗೆ ಇಷ್ಟ ಆಗಬೇಕಾದ್ರೆ ಏನು ಮಾಡಬೇಕು ಅಂತ ಕಲಿತ್ವಿ. ಒಂದುವೇಳೆ ಯೆಹೋವನಿಗೆ ಇಷ್ಟ ಇಲ್ಲದಿರೋ ಕೆಲಸಗಳನ್ನ ನಾವು ಮಾಡ್ತಾ ಇದ್ರೆ ಅದನ್ನ ಆದಷ್ಟು ಬೇಗ ಬಿಟ್ಟುಬಿಡಬೇಕು. (ಪ್ರಕ. 2:5, 16; 3:3, 16) ಇಲ್ಲಾಂದ್ರೆ ಯೆಹೋವ ನಮ್ಮ ಆರಾಧನೆಯನ್ನ ಮೆಚ್ಚಲ್ಲ. ಯೇಸು ಏಷ್ಯಾ ಮೈನರ್‌ನಲ್ಲಿದ್ದ ಸಭೆಗಳಿಗೆ ಕೊಟ್ಟ ಸಲಹೆಗಳಿಂದ ನಾವು ಇನ್ನೂ ತುಂಬ ವಿಷಯಗಳನ್ನ ಕಲಿಬಹುದು. ಅದೇನು ಅಂತ ಈಗ ನಾವು ನೋಡೋಣ.

ನಮಗಿರೋ ಪಾಠಗಳು

  • ಯೆಹೋವ ದೇವರ ಮೇಲೆ ಮೊದಲಿದ್ದ ಪ್ರೀತಿ ಕಮ್ಮಿಯಾಗೋಕೆ ಬಿಡಬಾರದು

  • ಯಾವಾಗ್ಲೂ ಎಚ್ಚರವಾಗಿರಬೇಕು

  • ಹುರುಪಿಂದ ಮತ್ತು ಮನಸಾರೆ ಯೆಹೋವನ ಸೇವೆ ಮಾಡಬೇಕು

  • ಧರ್ಮಭ್ರಷ್ಟರ ಬೋಧನೆಗಳಿಂದ ದೂರವಿರಬೇಕು

  • ಎಲ್ಲಾ ತರದ ಅನೈತಿಕತೆಯಿಂದ ದೂರವಿರಬೇಕು

ಹಿಂಸೆ ವಿರೋಧಗಳನ್ನ ಸಹಿಸಿಕೊಳ್ಳೋಕೆ ತಯಾರಾಗಿರಿ

ಸೈತಾನ ಘಟಸರ್ಪದ ತರ ಭೂಮಿಯಲ್ಲಿರೋ ದೇವಜನರ ಮೇಲೆ ಆಕ್ರಮಣ ಮಾಡ್ತಿದ್ದಾನೆ. ಚಿತ್ರಗಳು: 1. 1918ರಲ್ಲಿ ಜೈಲಿಗೆ ಹಾಕಲಾದ ಎಂಟು ಅಭಿಷಿಕ್ತ ಸಹೋದರರು. 2. ನಾಜ಼ಿ ಶಿಬಿರದಲ್ಲಿ ಒಬ್ಬ ಅಧಿಕಾರಿ ಸಹೋದರರ ಮೇಲೆ ಕಿರಿಚಾಡುತ್ತಾ ಅವರನ್ನ ತಳ್ಳುತ್ತಿದ್ದಾನೆ. 3. ಬಂದೂಕು ಹಿಡಿದಿರೋ ಅಧಿಕಾರಿಗಳು ಒಬ್ಬ ಸಹೋದರನನ್ನ ಬಂಧಿಸುತ್ತಿದ್ದಾರೆ. 4. ದಕ್ಷಿಣ ಕೊರಿಯಾದಲ್ಲಿರೋ ಒಬ್ಬ ಸಹೋದರನನ್ನ ಹಗ್ಗದಿಂದ ಕಟ್ಟಿಹಾಕಿ ಅವನ ಕೈಗೆ ಕೋಳ ಹಾಕಿದ್ದಾರೆ.

ಸೈತಾನನನ್ನು ಸ್ವರ್ಗದಿಂದ ಭೂಮಿಗೆ ತಳ್ಳಿದ ಮೇಲೆ ದೇವಜನರನ್ನ ಹೇಗೆಲ್ಲಾ ಆಕ್ರಮಣ ಮಾಡಿದ್ದಾನೆ? (ಪ್ಯಾರ 12-16 ನೋಡಿ)

12. ಯೇಸು ಸ್ಮುರ್ನ ಮತ್ತು ಫಿಲದೆಲ್ಫಿಯ ಸಭೆಗೆ ಹೇಳಿದ ಮಾತುಗಳಿಂದ ನಾವೇನು ಕಲಿತೀವಿ? (ಪ್ರಕಟನೆ 2:10)

12 ಯೇಸು ಸ್ಮುರ್ನ ಮತ್ತು ಫಿಲದೆಲ್ಫಿಯ ಸಭೆಗೆ ಏನು ಹೇಳಿದನು ಅಂತ ನೋಡೋಣ. ಆತನು ಅಲ್ಲಿದ್ದ ಕ್ರೈಸ್ತರಿಗೆ, ಮುಂದೆ ಬರೋ ಹಿಂಸೆನ ನೆನಸಿಕೊಂಡು ನೀವು ಭಯಪಡಬೇಡಿ, ಕೊನೇ ತನಕ ಸಹಿಸಿಕೊಂಡ್ರೆ ನಿಮಗೆ ಬಹುಮಾನ ಸಿಗುತ್ತೆ ಅಂತ ಹೇಳಿದನು. (ಪ್ರಕಟನೆ 2:10 ಓದಿ. 3:10) ಇದ್ರಿಂದ ನಮಗೇನು ಗೊತ್ತಾಗುತ್ತೆ ಅಂದ್ರೆ ಮುಂದೆ ನಮಗೂ ಹಿಂಸೆ ವಿರೋಧಗಳು ಬರುತ್ತೆ, ನಾವೂ ಇವನ್ನೆಲ್ಲಾ ಸಹಿಸಿಕೊಳ್ಳೋಕೆ ತಯಾರಾಗಿರಬೇಕು. (ಮತ್ತಾ. 24:9, 13; 2 ಕೊರಿಂ. 12:10) ಈ ಸಲಹೆ ನಮಗ್ಯಾಕೆ ತುಂಬ ಮುಖ್ಯ?

13-14. ಪ್ರಕಟನೆ 12ನೇ ಅಧ್ಯಾಯದಲ್ಲಿರೋ ಘಟನೆಗಳು ನಡೆದಾಗ ಯೆಹೋವನ ಜನರಿಗೆ ಏನಾಯ್ತು?

13 ‘ಒಡೆಯನ ದಿನದಲ್ಲಿ’ ಅಥವಾ ನಮ್ಮ ಕಾಲದಲ್ಲಿ ದೇವಜನರಿಗೆ ಹಿಂಸೆ ಬರುತ್ತೆ ಅಂತ ಪ್ರಕಟನೆ ಪುಸ್ತಕದಲ್ಲಿದೆ. ಸ್ವರ್ಗದಲ್ಲಿ ದೇವರ ಸರ್ಕಾರ ಶುರುವಾದ ತಕ್ಷಣ ಅಲ್ಲಿ ಯುದ್ಧ ಆರಂಭವಾಯ್ತು ಅಂತ ಪ್ರಕಟನೆ ಪುಸ್ತಕದ 12ನೇ ಅಧ್ಯಾಯ ಹೇಳುತ್ತೆ. ಮೀಕಾಯೇಲ ಅಂದ್ರೆ ಯೇಸು ಕ್ರಿಸ್ತ ತನ್ನ ಸೈನ್ಯದ ಜೊತೆ ಸೈತಾನ ಮತ್ತು ಅವನ ಕೆಟ್ಟ ದೂತರ ವಿರುದ್ಧ ಯುದ್ಧ ಮಾಡಿದನು. (ಪ್ರಕ. 12:7, 8) ಆ ಯುದ್ಧದಲ್ಲಿ ದೇವರ ವೈರಿಗಳು ಸೋತುಹೋದ್ರು ಮತ್ತು ಅವರನ್ನ ಭೂಮಿಗೆ ತಳ್ಳಲಾಯಿತು. ಇದ್ರಿಂದ ಜನರಿಗೆ ತುಂಬ ಕಷ್ಟ ಬಂತು. (ಪ್ರಕ. 12:9, 12) ಆಗ ಯೆಹೋವನ ಜನರಿಗೆ ಏನಾಯ್ತು?

14 ಸೈತಾನನಿಗೆ ಈಗ ಸ್ವರ್ಗಕ್ಕೆ ವಾಪಸ್‌ ಹೋಗೋಕೆ ಆಗಲ್ಲ, ಅದಕ್ಕೆ ಅವನು ಭೂಮಿಯಲ್ಲಿ ಉಳಿದಿರೋ ಅಭಿಷಿಕ್ತರ ಮೇಲೆ ತನ್ನ ಕೋಪ ತೋರಿಸ್ತಿದ್ದಾನೆ. ಈ ಅಭಿಷಿಕ್ತರು ಮುಂದೆ ದೇವರ ಸರ್ಕಾರದಲ್ಲಿ ರಾಜರಾಗಿ ಆಳುತ್ತಾರೆ ಮತ್ತು ಈಗ ‘ಯೇಸು ಬಗ್ಗೆ ಸಾಕ್ಷಿ ಹೇಳ್ತಿದ್ದಾರೆ’ ಅಂತ ಅವನಿಗೆ ಚೆನ್ನಾಗಿ ಗೊತ್ತು. ಅದಕ್ಕೆ ಅವನು ಅವರಿಗೆ ಹಿಂಸೆ ಕೊಡೋಕೆ ಮತ್ತು ಅವರನ್ನ ವಿರೋಧಿಸೋಕೆ ಶುರುಮಾಡಿದ. (ಪ್ರಕ. 12:17; 2 ಕೊರಿಂ. 5:20; ಎಫೆ. 6:19, 20) ಅವನು ಏನೇನು ಮಾಡಿದ ಅಂತ ಈಗ ನೋಡೋಣ.

15. ಪ್ರಕಟನೆ 11ನೇ ಅಧ್ಯಾಯದಲ್ಲಿ ಹೇಳಿರೋ ‘ಇಬ್ರು ಸಾಕ್ಷಿಗಳು’ ಯಾರು ಮತ್ತು ಅವರಿಗೆ ಏನಾಯ್ತು?

15 ಸಿಹಿಸುದ್ದಿ ಸಾರೋ ಕೆಲಸನ ಮುಂದೆ ನಿಂತು ಮಾಡುತ್ತಿದ್ದ ಅಭಿಷಿಕ್ತರ ಮೇಲೆ ಸೈತಾನ ಮೊದಲು ಆಕ್ರಮಣ ಮಾಡಿದ. ಆ ಸಹೋದರರನ್ನ ಪ್ರಕಟನೆ ಪುಸ್ತಕದಲ್ಲಿ ‘ಇಬ್ರು ಸಾಕ್ಷಿಗಳು’ ಅಂತ ಹೇಳಲಾಗಿದೆ. ಆ “ಇಬ್ರು ಸಾಕ್ಷಿಗಳನ್ನ” ಕೊಲ್ಲಲಾಗುತ್ತೆ ಅಂತಾನೂ ಅಲ್ಲಿ ಹೇಳಲಾಗಿದೆ.b (ಪ್ರಕ. 11:3, 7-11) ಈ ಭವಿಷ್ಯವಾಣಿ ನಿಜ ಆಯ್ತು. 1918ರಲ್ಲಿ ಸಂಘಟನೆಯಲ್ಲಿ ಮುಂದಾಳತ್ವ ವಹಿಸುತ್ತಿದ್ದ 8 ಸಹೋದರರ ಮೇಲೆ ಸುಳ್ಳಾರೋಪ ಹಾಕಿ ಜೈಲಿಗೆ ಹಾಕಲಾಯ್ತು ಮತ್ತು ಅವರಲ್ಲಿ ಒಬ್ಬೊಬ್ಬರಿಗೂ ತುಂಬ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಹೀಗೆ ಒಂದರ್ಥದಲ್ಲಿ ಅಭಿಷಿಕ್ತರು ಮಾಡುತ್ತಿದ್ದ ಕೆಲಸ ನಿಂತುಹೋಯ್ತು ಅಥವಾ ಅದನ್ನ ‘ಕೊಲ್ಲಲಾಯ್ತು.’

16. 1919ರಲ್ಲಿ ಏನಾಯ್ತು ಮತ್ತು ಸೈತಾನ ಆಗಿಂದ ಏನು ಮಾಡ್ತಿದ್ದಾನೆ?

16 ಪ್ರಕಟನೆ 11ನೇ ಅಧ್ಯಾಯದಲ್ಲಿ ಈ ‘ಇಬ್ರು ಸಾಕ್ಷಿಗಳು’ ಸ್ವಲ್ಪ ಸಮಯದಲ್ಲೇ ಮತ್ತೆ ಎದ್ದು ಬರ್ತಾರೆ ಅಂತ ಭವಿಷ್ಯವಾಣಿ ಹೇಳಿತ್ತು. ಇಲ್ಲಿ ಹೇಳಿದ ತರ ಮುಂದಿನ ವರ್ಷದಲ್ಲೇ ಅಂದ್ರೆ 1919ರ ಮಾರ್ಚ್‌ ತಿಂಗಳಲ್ಲೇ, ಜೈಲಿಗೆ ಹಾಕಿದ್ದ ಆ ಅಭಿಷಿಕ್ತ ಸಹೋದರರನ್ನ ಬಿಡುಗಡೆ ಮಾಡಲಾಯಿತು ಮತ್ತು ಅವರ ಮೇಲೆ ಹಾಕಿದ್ದ ಎಲ್ಲಾ ಸುಳ್ಳಾರೋಪಗಳು ರದ್ದಾಯಿತು. ನಮ್ಮ ಸಹೋದರರು ಜೈಲಿಂದ ಹೊರಗೆ ಬಂದ ತಕ್ಷಣ ಸಿಹಿಸುದ್ದಿ ಸಾರೋದನ್ನ ಮತ್ತೆ ಶುರುಮಾಡಿದ್ರು. ಆದ್ರೂ ಸೈತಾನ ದೇವಜನರ ಮೇಲೆ ಆಕ್ರಮಣ ಮಾಡೋದನ್ನ ನಿಲ್ಲಿಸಿಲ್ಲ. ಅವತ್ತಿಂದ ಇವತ್ತಿನ ತನಕ ಅವರ ಮೇಲೆ ಹಿಂಸೆ, ವಿರೋಧಗಳ ‘ನದಿ’ ಹರಿಸಿದ್ದಾನೆ. (ಪ್ರಕ. 12:15) ಅದಕ್ಕೆ ಇದನ್ನೆಲ್ಲಾ ಸಹಿಸಿಕೊಳ್ಳೋಕೆ ನಮಗೆ “ತಾಳ್ಮೆ, ನಂಬಿಕೆ ಬೇಕು.”—ಪ್ರಕ. 13:10.

ಯೆಹೋವ ಕೊಟ್ಟಿರೋ ಕೆಲಸನ ಚೆನ್ನಾಗಿ ಮಾಡಿ

17. ಸೈತಾನ ಹಿಂಸೆ ಕೊಡ್ತಾ ಇದ್ರೂ ದೇವಜನರಿಗೆ ಯಾರಿಂದ ಸಹಾಯ ಸಿಕ್ತಾ ಇದೆ?

17 ಪ್ರಕಟನೆ 12ನೇ ಅಧ್ಯಾಯದಲ್ಲಿ ದೇವಜನರಿಗೆ, ಅವರು ನಿರೀಕ್ಷಿಸದೇ ಇರೋ ರೀತಿಯಲ್ಲಿ ಸಹಾಯ ಸಿಗುತ್ತೆ ಅಂತ ಇದೆ. ಇದು ಒಂದರ್ಥದಲ್ಲಿ ಹಿಂಸೆ ಅನ್ನೋ ನದಿಯ “ನೀರನ್ನ” “ಭೂಮಿ ಬಾಯಿ ತೆಗೆದು” ನುಂಗಿದ ಹಾಗಿರುತ್ತೆ. (ಪ್ರಕ. 12:16) ಇಲ್ಲಿ ಹೇಳಿದ ತರಾನೇ ಈಗ ನಡಿತಾ ಇದೆ. ಸೈತಾನ ದೇವಜನರಿಗೆ ಹಿಂಸೆ ತರುತ್ತಿದ್ರೂ ಅವನ ಲೋಕದಲ್ಲಿರೋ ಕೆಲವು ಅಧಿಕಾರಿಗಳೇ ನಮಗೆ ಸಹಾಯ ಮಾಡ್ತಾ ಇದ್ದಾರೆ. ಎಷ್ಟೋ ಸಲ ಯೆಹೋವನ ಸಾಕ್ಷಿಗಳು ಕೋರ್ಟ್‌ ಕೇಸುಗಳನ್ನ ಗೆದ್ದಿದ್ದಾರೆ. ಇದ್ರಿಂದ ಯೆಹೋವನ ಜನರಿಗೆ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಸಿಕ್ಕಿದೆ ಮತ್ತು ಯೆಹೋವ ಕೊಟ್ಟ ಕೆಲಸನ ಅವರಿಂದ ಮಾಡೋಕೆ ಆಗ್ತಿದೆ. (1 ಕೊರಿಂ. 16:9) ಆ ಕೆಲಸ ಯಾವುದು?

ಒಬ್ಬ ದೇವದೂತ ಭೂಮಿಯಲ್ಲಿರೋ ಜನರಿಗೆ ಸಿಹಿಸುದ್ದಿ ಸಾರುತ್ತಿದ್ದಾನೆ. ಅವನ ಹಿಂದೆ ನಿಂತಿರೋ ಏಳು ದೇವದೂತರಲ್ಲಿ ಒಬ್ಬ ದೇವದೂತ ತನ್ನ ತುತ್ತೂರಿ ಊದುತ್ತಿದ್ದಾನೆ. ಚಿತ್ರಗಳು: 1. ಸಹೋದರರು ದೊಡ್ಡ ಫಲಕಗಳನ್ನ ಕೈಯಲ್ಲಿ ಹಿಡ್ಕೊಂಡಿದ್ದಾರೆ ಮತ್ತು ಕತ್ತಲ್ಲಿ ನೇತುಹಾಕಿಕೊಂಡಿದ್ದಾರೆ. ಕೆಲವು ಫಲಕಗಳಲ್ಲಿ “ಧರ್ಮವು ಒಂದು ಪಾಶ ಮತ್ತು ವಂಚನೆ” ಮತ್ತು “ದೇವರ ಮತ್ತು ರಾಜನಾದ ಕ್ರಿಸ್ತನ ಸೇವೆ ಮಾಡಿರಿ” ಅಂತ ಬರೆದಿದೆ. 2. ಒಬ್ಬ ದಂಪತಿ ಹರ್ಮಗೆದೋನ್‌ ಬಗ್ಗೆ ಇರೋ ಫೆಬ್ರವರಿ 1, 2012ರ “ಕಾವಲಿನಬುರುಜು” ಪತ್ರಿಕೆಯನ್ನ ಕೊಡ್ತಿದ್ದಾರೆ. 3. ಒಬ್ಬ ವ್ಯಕ್ತಿ “ಸಮೀಪವಿದೆ ಸುಂದರ ಲೋಕ” ಅನ್ನೋ ನಂ. 2, 2021ರ “ಕಾವಲಿನಬುರುಜು” ಪತ್ರಿಕೆಯನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ.

ದೇವಜನರು ಯಾವ ಎರಡು ಸಂದೇಶಗಳನ್ನ ಸಾರುತ್ತಿದ್ದಾರೆ? (ಪ್ಯಾರ 18-19 ನೋಡಿ)

18. ಈ ಕೊನೇ ದಿನಗಳಲ್ಲಿ ನಾವು ಯಾವ ಮುಖ್ಯ ಕೆಲಸವನ್ನ ಮಾಡಬೇಕಿದೆ?

18 ಅಂತ್ಯ ಬರೋ ಮುಂಚೆ ದೇವಜನರು ‘ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ’ ಇಡೀ ಲೋಕಕ್ಕೆ ಸಾರುತ್ತಾರೆ ಅಂತ ಯೇಸು ಭವಿಷ್ಯವಾಣಿ ಹೇಳಿದ್ದನು. (ಮತ್ತಾ. 24:14) ಈ ಕೆಲಸ ಮಾಡೋಕೆ ಅವರಿಗೆ ಯಾರು ಸಹಾಯ ಮಾಡುತ್ತಿದ್ದಾರೆ? ಪ್ರಕಟನೆ ಪುಸ್ತಕದಲ್ಲಿ ಒಬ್ಬ ದೇವದೂತ “ಭೂಮಿ ಮೇಲೆ ವಾಸ ಮಾಡ್ತಿದ್ದವ್ರಿಗೆ ಅಂದ್ರೆ ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ ಶಾಶ್ವತವಾಗಿರೋ ಸಿಹಿಸುದ್ದಿಯನ್ನ ಹೇಳ್ತಾ ಇದ್ದ” ಅಂತ ಹೇಳುತ್ತೆ. ಹಾಗಾಗಿ ಸಿಹಿಸುದ್ದಿ ಸಾರೋಕೆ ದೇವಜನರಿಗೆ ದೇವದೂತರು ಸಹಾಯಮಾಡುತ್ತಾರೆ ಅಂತ ಇದ್ರಿಂದ ಗೊತ್ತಾಗುತ್ತೆ.—ಪ್ರಕ. 14:6.

19. ಯೆಹೋವನ ಜನರು ಇನ್ಯಾವ ಸಂದೇಶ ಸಾರಬೇಕಿದೆ?

19 ದೇವಜನರು ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಮಾತ್ರ ಅಲ್ಲ, ನ್ಯಾಯತೀರ್ಪಿನ ಸಂದೇಶವನ್ನೂ ಸಾರುತ್ತಾರೆ. ಈ ಸಂದೇಶವನ್ನು ‘ಆಲಿಕಲ್ಲಿನ ಮತ್ತು ಬೆಂಕಿಯ ಮಳೆಗೆ’ ಹೋಲಿಸಲಾಗಿದೆ. ಪ್ರಕಟನೆ 8-10ನೇ ಅಧ್ಯಾಯಗಳಲ್ಲಿ ಹೇಳಿರೋ ದೇವದೂತರು, ದೇವರ ಸರ್ಕಾರಕ್ಕೆ ಬೆಂಬಲ ಕೊಡದವರಿಗೆ ಕಷ್ಟಗಳು ಬರುತ್ತೆ ಅಂತ ಪ್ರಕಟಿಸುತ್ತಾ ಇದ್ದಾರೆ. (ಪ್ರಕ. 8:7, 13) ದೇವದೂತರು ಮಾಡುತ್ತಿರೋ ಈ ಕೆಲಸಕ್ಕೆ ದೇವಜನರು ಬೆಂಬಲ ಕೊಡುತ್ತಿದ್ದಾರೆ. ಅಂತ್ಯ ಹತ್ರ ಇರೋದ್ರಿಂದ ಯೆಹೋವನ ಕೋಪದ ದಿನ ಬರುವುದಕ್ಕಿಂತ ಮುಂಚೆ ಜನರು ತಿದ್ದಿಕೊಳ್ಳಬೇಕು, ಬದಲಾಗಬೇಕು ಅಂತ ಯೆಹೋವನ ಸಾಕ್ಷಿಗಳು ಜನರಿಗೆ ಸಾರುತ್ತಾ ಇದ್ದಾರೆ. (ಚೆಫ. 2:2, 3) ಆದ್ರೆ ಈ ಸಂದೇಶ ತುಂಬ ಜನರಿಗೆ ಇಷ್ಟ ಆಗಲ್ಲ, ಹಾಗಾಗಿ ಈ ಸಂದೇಶ ಸಾರೋಕೆ ನಮಗೆ ತುಂಬ ಧೈರ್ಯ ಬೇಕು. ಅದರಲ್ಲೂ ಮಹಾ ಸಂಕಟದ ಸಮಯದಲ್ಲಿ ನಮಗೆ ಇನ್ನೂ ಜಾಸ್ತಿ ಧೈರ್ಯ ಬೇಕಾಗುತ್ತೆ. ಯಾಕಂದ್ರೆ ಆಗ ನಾವು ಕೊನೇ ನ್ಯಾಯತೀರ್ಪಿನ ಸಂದೇಶ ಸಾರುತ್ತೀವಿ ಮತ್ತು ಜನರು ನಮ್ಮನ್ನ ವಿರೋಧಿಸುತ್ತಾರೆ.—ಪ್ರಕ. 16:21.

ಭವಿಷ್ಯವಾಣಿಯಲ್ಲಿರೋ ಮಾತುಗಳ ಪ್ರಕಾರ ನಡೆಯಿರಿ

20. ಮುಂದಿನ ಎರಡು ಲೇಖನಗಳಲ್ಲಿ ನಾವು ಯಾವುದರ ಬಗ್ಗೆ ಕಲಿತೀವಿ?

20 ಪ್ರಕಟನೆ ಪುಸ್ತಕದಲ್ಲಿರೋ ಭವಿಷ್ಯವಾಣಿಯ ನೆರವೇರಿಕೆಯಲ್ಲಿ ನಮ್ಮ ಪಾಲೂ ಇದೆ. ಹಾಗಾಗಿ ನಾವು ಭವಿಷ್ಯವಾಣಿಯಲ್ಲಿರೋ “ಮಾತುಗಳನ್ನ” ಕೇಳಿ ಅದರ ತರ ನಡೆದುಕೊಳ್ಳಬೇಕು. (ಪ್ರಕ. 1:3) ಹಾಗಾದ್ರೆ ನಾವು ನಂಬಿಕೆಯಿಂದ ಹಿಂಸೆನ ತಾಳಿಕೊಳ್ಳೋಕೆ ಮತ್ತು ಈ ಸಂದೇಶನ ಧೈರ್ಯದಿಂದ ಸಾರೋಕೆ ಯಾವುದು ಸಹಾಯ ಮಾಡುತ್ತೆ? ಪ್ರಕಟನೆ ಪುಸ್ತಕದಲ್ಲಿ, ದೇವರ ವೈರಿಗಳಿಗೆ ಮುಂದೆ ಏನಾಗುತ್ತೆ ಮತ್ತು ನಾವು ಯೆಹೋವನಿಗೆ ನಂಬಿಗಸ್ತರಾಗಿದ್ರೆ ನಮಗೆ ಏನೆಲ್ಲಾ ಆಶೀರ್ವಾದಗಳು ಸಿಗುತ್ತೆ ಅಂತ ಇದೆ. ಈ ಎರಡು ವಿಷಯಗಳನ್ನ ನಾವು ಮನಸ್ಸಲ್ಲಿ ಇಟ್ಟುಕೊಂಡ್ರೆ ನಮಗೆ ಸಹಾಯ ಆಗುತ್ತೆ. ಈ ವಿಷಯಗಳ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.

ನಿಮ್ಮ ಉತ್ತರವೇನು?

  • ಯೇಸು ಏಳು ಸಭೆಗಳಿಗೆ ಕೊಟ್ಟ ನಿರ್ದೇಶನಗಳಿಂದ ನಮಗೇನು ಪಾಠ?

  • ಹಿಂಸೆಗಳನ್ನು ತಾಳಿಕೊಳ್ಳೋಕೆ ನಾವು ಯಾಕೆ ತಯಾರಾಗಿರಬೇಕು?

  • ಈ ಅಂತ್ಯದ ಸಮಯದಲ್ಲಿ ದೇವಜನರು ಯಾವ ಕೆಲಸ ಮಾಡಬೇಕಾಗಿದೆ?

ಗೀತೆ 27 ಯೆಹೋವನ ಪಕ್ಷವಹಿಸು!

a ನಾವು ಇಲ್ಲಿ ತನಕ ನೋಡಿರದ, ಕೇಳಿರದ ಎಷ್ಟೋ ವಿಷಯಗಳು ನಮ್ಮ ಕಾಲದಲ್ಲಿ ನಡಿತಾ ಇವೆ. ಪ್ರಕಟನೆ ಪುಸ್ತಕದ ಭವಿಷ್ಯವಾಣಿಗಳು ನೆರವೇರುತ್ತಾ ಇದೆ. ಈ ಲೇಖನದಲ್ಲಿ ಮತ್ತು ಮುಂದೆ ಬರುವ 2 ಲೇಖನಗಳಲ್ಲಿ ಪ್ರಕಟನೆ ಪುಸ್ತಕದಿಂದ ಕೆಲವು ಮುಖ್ಯ ವಿಷಯಗಳನ್ನ ಕಲಿಯೋಣ. ನಮ್ಮ ಆರಾಧನೆಯನ್ನ ಯೆಹೋವ ಒಪ್ಪಬೇಕಾದ್ರೆ ಏನು ಮಾಡಬೇಕು ಅಂತ ಅದ್ರಲ್ಲಿ ಇದೆ. ಅಲ್ಲಿ ಹೇಳಿರೋ ತರ ನಾವು ನಡೆದುಕೊಂಡ್ರೆ ಯೆಹೋವ ನಮ್ಮ ಆರಾಧನೆಯನ್ನ ಮೆಚ್ಚುತ್ತಾನೆ.

b ನವೆಂಬರ್‌ 15, 2014ರ ಕಾವಲಿನಬುರುಜುವಿನ ಪುಟ 30ರಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ