ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಸೆಪ್ಟೆಂಬರ್‌ ಪು. 2-7
  • ಸಹೋದರ ಸಹೋದರಿಯರನ್ನ ನಂಬಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಹೋದರ ಸಹೋದರಿಯರನ್ನ ನಂಬಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಹೋದರ ಸಹೋದರಿಯರಿಲ್ಲದೆ ನಾವು ಇರೋಕಾಗಲ್ಲ
  • ಸಹೋದರ ಸಹೋದರಿಯರನ್ನ ನಂಬೋಕೆ ಪ್ರೀತಿ ಬೇಕು
  • ಬೇರೆಯವರನ್ನ ನಂಬಿ ನಮಗೆ ಮಾದರಿಯಾದವರು
  • ಸಹೋದರ ಸಹೋದರಿಯರನ್ನ ಮತ್ತೆ ನಂಬಿ
  • ಸಂತೋಷಕರ ಜೀವನಕ್ಕೆ ಭರವಸೆಯು ಅತ್ಯಮೂಲ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯೆಹೋವನ ಮೇಲಿನ ನಿಮ್ಮ ಭರವಸೆಯನ್ನು ಬಲಪಡಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯೆಹೋವ ಮಾಡೋದೆಲ್ಲ ಸರಿಯಾಗೇ ಇರುತ್ತೆ ಅಂತ ನಂಬಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಸೆಪ್ಟೆಂಬರ್‌ ಪು. 2-7

ಅಧ್ಯಯನ ಲೇಖನ 37

ಸಹೋದರ ಸಹೋದರಿಯರನ್ನ ನಂಬಿ

“ಪ್ರೀತಿ ಇರುವವನು . . . ಎಲ್ಲವನ್ನ ನಂಬ್ತಾನೆ, ಎಲ್ಲವನ್ನ ನಿರೀಕ್ಷಿಸ್ತಾನೆ.”—1 ಕೊರಿಂ. 13:4, 7.

ಗೀತೆ 63 ಸದಾ ನಿಷ್ಠರು

ಕಿರುನೋಟa

1. ಇವತ್ತು ಜನ್ರು ಯಾಕೆ ಬೇರೆಯವರ ಮೇಲೆ ನಂಬಿಕೆ ಕಳಕೊಂಡಿದ್ದಾರೆ?

ಸೈತಾನನ ಲೋಕದಲ್ಲಿರೋ ಜನರಿಗೆ ಇವತ್ತು ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅಂತನೇ ಗೊತ್ತಾಗ್ತಿಲ್ಲ. ಯಾಕಂದ್ರೆ ಅವರು ವ್ಯಾಪಾರ ವ್ಯವಹಾರಗಳಲ್ಲಿ ಮೋಸ ಹೋಗ್ತಿದ್ದಾರೆ. ರಾಜಕಾರಣಿಗಳು ಮತ್ತು ಧರ್ಮಗುರುಗಳು ಅವರನ್ನ ಯಾಮಾರಿಸ್ತಿದ್ದಾರೆ. ಇದ್ರಿಂದ ಅವರು ತಮ್ಮ ಸ್ನೇಹಿತರನ್ನ, ಅಕ್ಕಪಕ್ಕದವರನ್ನ ಅಷ್ಟೇ ಯಾಕೆ ತಮ್ಮ ಸ್ವಂತ ಮನೆಯವರನ್ನ ಕೂಡ ನಂಬೋಕೆ ಹಿಂದೆಮುಂದೆ ನೋಡ್ತಾರೆ. ಆದ್ರೆ ಇದನ್ನೆಲ್ಲ ನೋಡಿ ನಾವು ಆಶ್ಚರ್ಯ ಪಡಬೇಕಾಗಿಲ್ಲ. ಯಾಕಂದ್ರೆ “ಕೊನೇ ದಿನಗಳಲ್ಲಿ . . . , ನಂಬಿಕೆದ್ರೋಹ ಮಾಡುವವರು . . . ಬೇರೆಯವ್ರ ಹೆಸ್ರು ಹಾಳು ಮಾಡುವವರು, . . . ಮಿತ್ರದ್ರೋಹಿಗಳು” ಇರ್ತಾರೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. ಇನ್ನೊಂದು ಮಾತಲ್ಲಿ ಹೇಳೋದಾದ್ರೆ ಎಲ್ಲರನ್ನ ಮೋಸ ಮಾಡ್ತಿರೋ ಈ ಲೋಕದ ದೇವರಾದ ಸೈತಾನನ ತರನೇ ಜನ್ರು ನಡಕೊಳ್ತಾರೆ ಅಂತ ಹೇಳಿತ್ತು.—2 ತಿಮೊ. 3:1-4; 2 ಕೊರಿಂ. 4:4.

2. (ಎ) ನಾವು ಯಾರನ್ನ ಪೂರ್ತಿಯಾಗಿ ನಂಬ್ತೀವಿ? (ಬಿ) ಯಾರನ್ನ ನಂಬೋಕೆ ಕೆಲವೊಮ್ಮ ನಮಗೆ ಕಷ್ಟ ಆಗಬಹುದು?

2 ಆದ್ರೆ ನಾವು ಈ ಲೋಕದ ಜನ್ರ ತರ ಇಲ್ಲ. ನಾವು ಕ್ರೈಸ್ತರು. ಯೆಹೋವನನ್ನು ಪೂರ್ತಿಯಾಗಿ ನಂಬ್ತೀವಿ. (ಯೆರೆ. 17:7, 8) ಯಾಕಂದ್ರೆ ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ಆತನು ತನ್ನ ಸ್ನೇಹಿತರ “ಕೈಯನ್ನ . . . ಯಾವತ್ತೂ ಬಿಡಲ್ಲ” ಅಂತ ನಮಗೆ ಗೊತ್ತು. (ಕೀರ್ತ. 9:10) ಯೇಸು ಕೂಡ ನಮಗಾಗಿ ತನ್ನ ಜೀವವನ್ನೇ ಕೊಟ್ಟನು. ಹಾಗಾಗಿ ಆತನನ್ನೂ ನಾವು ನಂಬ್ತೀವಿ. (1 ಪೇತ್ರ 3:18) ಇಲ್ಲಿ ತನಕ ಬೈಬಲ್‌ ನಮಗೆ ಸರಿಯಾದ ಮಾರ್ಗದರ್ಶನ ಕೊಡ್ತಾ ಬಂದಿದೆ. (2 ತಿಮೊ. 3:16, 17) ಹಾಗಾಗಿ ಅದನ್ನೂ ನಾವು ನಂಬ್ತೀವಿ. ಯೆಹೋವ, ಯೇಸು ಮತ್ತು ಬೈಬಲನ್ನ ನಂಬೋಕೆ ನಮಗೆ ಕಷ್ಟ ಅನಿಸಲ್ಲ. ಆದ್ರೆ ಕೆಲವೊಮ್ಮೆ ನಮ್ಮ ಸಹೋದರ ಸಹೋದರಿಯರನ್ನ ನಂಬೋಕೆ ನಮಗೆ ಕಷ್ಟ ಆಗಬಹುದು. ಆದ್ರೂ ನಾವು ಅವರನ್ನ ನಂಬಬೇಕು. ಯಾಕೆ ಅಂತ ಈಗ ನೊಡೋಣ.

ಸಹೋದರ ಸಹೋದರಿಯರಿಲ್ಲದೆ ನಾವು ಇರೋಕಾಗಲ್ಲ

ಬೇರೆಬೇರೆ ಹಿನ್ನೆಲೆಯಿಂದ ಬಂದ ಕೆಲವು ಸಹೋದರ ಸಹೋದರಿಯರ ಅಧಿವೇಶನದಲ್ಲಿ ಖುಷಿಖುಷಿಯಾಗಿ ಒಟ್ಟಿಗೆ ಫೋಟೋ ತಗೊಳ್ತಿದ್ದಾರೆ.

ಎಷ್ಟೋ ಸಹೋದರ ಸಹೋದರಿಯರು ನಮ್ಮ ತರಾನೇ ಯೆಹೋವ ದೇವರನ್ನ ಪ್ರೀತಿಸ್ತಾರೆ. ಅವರನ್ನ ನಾವು ನಂಬಬಹುದು (ಪ್ಯಾರ 3 ನೋಡಿ)

3. ನಮಗೆ ಯಾವ ದೊಡ್ಡ ಸುಯೋಗ ಇದೆ? (ಮಾರ್ಕ 10:29, 30)

3 ಯೆಹೋವ, ಭೂಮಿ ಮೇಲಿರೋ ತನ್ನ ಕುಟುಂಬಕ್ಕೆ ನಮ್ಮನ್ನ ಸೇರಿಸಿಕೊಂಡಿರೋದು ಎಷ್ಟು ದೊಡ್ಡ ಸುಯೋಗ ಅಲ್ವಾ! ಇದ್ರಿಂದ ನಮಗೆ ತುಂಬ ಆಶೀರ್ವಾದಗಳು ಸಿಕ್ಕಿವೆ! (ಮಾರ್ಕ 10:29, 30 ಓದಿ.) ಇಡೀ ಲೋಕದಲ್ಲಿರೋ ನಮ್ಮ ಸಹೋದರ ಸಹೋದರಿಯರು ಯೆಹೋವನನ್ನು ಪ್ರೀತಿಸ್ತಾರೆ ಮತ್ತು ಆತನ ನೀತಿ ನಿಯಮಗಳನ್ನ ಪಾಲಿಸೋಕೆ ಇಷ್ಟಪಡ್ತಾರೆ. ನಮ್ಮ ದೇಶ, ಭಾಷೆ, ಸಂಸ್ಕೃತಿ ಬೇರೆಬೇರೆ ಆಗಿದ್ರೂ ನಾವೆಲ್ರೂ ಒಬ್ರನೊಬ್ರು ಪ್ರೀತಿಸ್ತೀವಿ. ಕೆಲವೊಮ್ಮೆ ನಮ್ಮ ಸಹೋದರ ಸಹೋದರಿಯರನ್ನ ಮೊದಲನೇ ಸಲ ಭೇಟಿ ಆಗ್ತಿರೋದಾದ್ರೂ ತುಂಬ ವರ್ಷಗಳಿಂದ ನಮಗೆ ಅವರ ಪರಿಚಯ ಇದೆಯೇನೋ ಅಂತ ಅನಿಸುತ್ತೆ. ನಮ್ಮ ಪ್ರೀತಿಯ ಅಪ್ಪ ಯೆಹೋವನನ್ನು ನಮ್ಮ ಸಹೋದರ ಸಹೋದರಿಯರ ಜೊತೆ ಸೇರಿ ಆರಾಧಿಸೋಕೆ, ಆತನ ಸೇವೆ ಮಾಡೋಕೆ ನಮಗೆ ತುಂಬ ಇಷ್ಟ.—ಕೀರ್ತ. 133:1.

4. ಸಹೋದರ ಸಹೋದರಿಯರು ಇಲ್ಲದೆ ನಾವು ಯಾಕೆ ಇರೋಕಾಗಲ್ಲ?

4 ನಾವು ಮುಂಚೆಗಿಂತ ಈಗ ನಮ್ಮ ಸಹೋದರ ಸಹೋದರಿಯರ ಜೊತೆ ಒಗ್ಗಟ್ಟಿಂದ ಇರಬೇಕು. ಎಷ್ಟೋ ಸಲ ನಮಗೆ ಕಷ್ಟಗಳು ಬಂದಾಗ ಅವರು ನಮ್ಮ ಜೊತೆಗಿದ್ದು ನಮ್ಮ ಭಾರಗಳನ್ನ ಹೊತ್ಕೊಂಡಿದ್ದಾರೆ. (ರೋಮ. 15:1; ಗಲಾ. 6:2) ಯೆಹೋವನ ಸೇವೆ ಮಾಡ್ತಾ ಇರೋಕೆ, ಆತನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಅವರು ನಮಗೆ ಸಹಾಯ ಮಾಡಿದ್ದಾರೆ, ಪ್ರೋತ್ಸಾಹ ಕೊಟ್ಟಿದ್ದಾರೆ. (1 ಥೆಸ. 5:11; ಇಬ್ರಿ. 10:23-25) ಇವರು ನಮ್ಮ ಜೊತೆ ಇಲ್ಲ ಅಂದಿದ್ರೆ ಸೈತಾನನನ್ನ, ಈ ಲೋಕನ ನಮ್ಮಿಂದ ಎದುರಿಸೋಕೆ ಆಗ್ತಿತ್ತಾ? ಇಲ್ಲ. ಸೈತಾನ ಆದಷ್ಟು ಬೇಗ ನಮ್ಮ ಮೇಲೆ ಆಕ್ರಮಣ ಮಾಡ್ತಾನೆ. ಆಗ ನಮ್ಮ ಸಹೋದರ ಸಹೋದರಿಯರು ನಮ್ಮ ಜೊತೆ ಇಲ್ಲಾಂದ್ರೆ ನಮ್ಮ ಪರಿಸ್ಥಿತಿ ಹೇಗಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ. ಅವರು ಈಗ ನಮ್ಮ ಜೊತೆ ಇರೋದಕ್ಕೆ ನಾವು ಎಷ್ಟು ಋಣಿಗಳಾಗಿರಬೇಕು ಅಲ್ವಾ!

5. ಸಹೋದರ ಸಹೋದರಿಯರನ್ನ ನಂಬೋಕೆ ಕೆಲವರು ಯಾಕೆ ಹಿಂದೆಮುಂದೆ ನೋಡ್ತಾರೆ?

5 ಕೆಲವೊಮ್ಮೆ ನಮ್ಮ ಸಹೋದರ ಸಹೋದರಿಯರು ನಮ್ಮ ವೈಯಕ್ತಿಕ ವಿಷಯವನ್ನ ಬೇರೆಯವರಿಗೆ ಹೇಳಿಬಿಟ್ರೆ ಅಥವಾ ಕೊಟ್ಟ ಮಾತನ್ನ ಅವರು ಉಳಿಸಿಕೊಳ್ಳದೆ ಇದ್ರೆ ನಮಗೆ ಅವರ ಮೇಲೆ ನಂಬಿಕೆ ಇಡೋಕೆ ಕಷ್ಟ ಆಗುತ್ತೆ. ಅಷ್ಟೇ ಅಲ್ಲ, ಅವರು ನಮಗೆ ಏನಾದ್ರೂ ಅಂದುಬಿಟ್ರೆ ಅಥವಾ ನಮಗೆ ಬೇಜಾರಾಗೋ ತರ ನಡೆದುಕೊಂಡುಬಿಟ್ರೆ ಅವರನ್ನ ನಂಬೋಕೆ ಹಿಂದೆಮುಂದೆ ನೋಡ್ತೀವಿ. ಆದ್ರೂ ನಾವು ಅವರನ್ನ ನಂಬಬೇಕು. ಆ ತರ ನಂಬಿಕೆ ಬೆಳೆಸಿಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ನೊಡೋಣ.

ಸಹೋದರ ಸಹೋದರಿಯರನ್ನ ನಂಬೋಕೆ ಪ್ರೀತಿ ಬೇಕು

6. ನಮ್ಮ ಸಹೋದರ ಸಹೋದರಿಯರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ? (1 ಕೊರಿಂಥ 13:4-8)

6 ಪ್ರೀತಿ ಇಲ್ಲದೆ ನಂಬಿಕೆ ಹುಟ್ಟಲ್ಲ. ಪ್ರೀತಿ ಇದ್ರೆ ಬೇರೆಯವರ ಜೊತೆ ನಾವು ಹೇಗೆ ನಡಕೊಳ್ತೀವಿ ಅಂತ ಒಂದನೇ ಕೊರಿಂಥ 13ನೇ ಅಧ್ಯಾಯದಲ್ಲಿ ಹೇಳುತ್ತೆ. ಒಬ್ಬರನ್ನ ನಂಬೋಕೆ ಅಥವಾ ಕಳೆದುಕೊಂಡಿರೋ ನಂಬಿಕೆಯನ್ನ ಮತ್ತೆ ಬೆಳೆಸಿಕೊಳ್ಳೋಕೆ ಈ ಗುಣ ಸಹಾಯ ಮಾಡುತ್ತೆ. (1 ಕೊರಿಂಥ 13:4-8 ಓದಿ.) ಉದಾಹರಣೆಗೆ, 4ನೇ ವಚನದಲ್ಲಿ “ಪ್ರೀತಿ ಇರುವವನು ತಾಳ್ಮೆ ಮತ್ತು ದಯೆ ತೋರಿಸ್ತಾನೆ” ಅಂತ ಹೇಳುತ್ತೆ. ನಾವು ಎಷ್ಟೋ ಸಲ ಯೆಹೋವನಿಗೆ ಕೋಪ ಬರೋ ತರ ನಡಕೊಂಡಿದ್ದೀವಿ. ಆದ್ರೂ ಯೆಹೋವ ತಾಳ್ಮೆ ತೋರಿಸಿದ್ದಾನೆ. ಅದೇ ತರ ಸಹೋದರ ಸಹೋದರಿಯರು ನಮ್ಮ ಮನಸ್ಸನ್ನ ನೋಯಿಸಿದ್ರೆ ಅಥವಾ ಬೇಜಾರು ಮಾಡಿದ್ರೆ ನಾವೂ ಅವರಿಗೆ ತಾಳ್ಮೆ ತೋರಿಸಬೇಕು. ವಚನ 5ರಲ್ಲಿ “[ಪ್ರೀತಿ ಇರುವವನು] ಬೇಗ ಸಿಟ್ಟು ಮಾಡ್ಕೊಳಲ್ಲ, ಅನ್ಯಾಯ ಆಗಿರೋ ಲೆಕ್ಕ ಇಟ್ಕೊಳಲ್ಲ” ಅಂತ ಹೇಳುತ್ತೆ. ಹಾಗೆ ನಮ್ಮ ಸಹೋದರ ಸಹೋದರಿಯರು ಮಾಡಿದ ಒಂದೊಂದು ತಪ್ಪನ್ನೂ ನಾವು “ಲೆಕ್ಕ ಇಟ್ಕೊಳಲ್ಲ.” ಪ್ರಸಂಗಿ 7:9ರಲ್ಲಿ ಹೇಳೋ ಹಾಗೆ ನಾವು ‘ತಟ್ಟಂತ ಕೋಪ ಮಾಡ್ಕೊಬಾರದು.’ ಅದರ ಜೊತೆಗೆ ‘ಸೂರ್ಯ ಮುಳುಗೋ ತನಕ ಕೋಪ ಇಟ್ಕೊಬಾರದು’ ಅಂತ ಎಫೆಸ 4:26ರಲ್ಲಿರೋ ಬುದ್ಧಿಮಾತನ್ನ ಪಾಲಿಸಬೇಕು.

7. ಮತ್ತಾಯ 7:1-5ರಲ್ಲಿರೋ ತತ್ವಗಳು ಸಭೆಯವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ?

7 ಯೆಹೋವ ನಮ್ಮ ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸ್ತಾನೆ, ಅವರು ಮಾಡಿದ ತಪ್ಪುಗಳನ್ನ ಲೆಕ್ಕ ಇಟ್ಟುಕೊಳ್ಳಲ್ಲ. ನಾವೂ ಯೆಹೋವನ ತರಾನೇ ಅವರನ್ನ ಪ್ರೀತಿಸಬೇಕು. ಆಗ ನಮಗೆ ಅವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಆಗುತ್ತೆ. (ಕೀರ್ತ. 130:3) ನಾವು ಅವರು ಮಾಡಿದ ತಪ್ಪಿನ ಬಗ್ಗೆನೇ ಯೋಚನೆ ಮಾಡಬಾರದು. ಅವರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. ಅವರಿಂದ ಏನೆಲ್ಲ ಒಳ್ಳೇದನ್ನ ಮಾಡೋಕಾಗುತ್ತೆ ಅನ್ನೋದರ ಮೇಲೆ ಗಮನ ಕೊಡಬೇಕು. ಅವರಿಗೂ ಒಳ್ಳೇದು ಮಾಡೋ ಮನಸ್ಸಿದೆ. ಅವರು ಬೇಕುಬೇಕಂತ ನಮ್ಮ ಮನಸ್ಸನ್ನ ನೋಯಿಸಿಲ್ಲ ಅಂತ ನಂಬಬೇಕು. (ಮತ್ತಾಯ 7:1-5 ಓದಿ.) ಯಾಕಂದ್ರೆ ಪ್ರೀತಿ ಇರುವವನು “ಎಲ್ಲವನ್ನ ನಂಬ್ತಾನೆ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂ. 13:7) ಹಾಗಾದ್ರೆ ನಾವು ಎಲ್ರನ್ನೂ ಕಣ್ಣುಮುಚ್ಚಿ ನಂಬಬೇಕು ಅಂತ ಯೆಹೋವ ಹೇಳ್ತಿದ್ದಾನಾ? ಖಂಡಿತ ಇಲ್ಲ. ಯಾರು ನಮ್ಮ ನಂಬಿಕೆಯನ್ನ ಉಳಿಸಿಕೊಳ್ತಾರೋ ಅವರನ್ನ ನಾವು ನಂಬಬೇಕು ಅಂತ ಆತನು ಬಯಸ್ತಾನೆ.b

8. ಸಹೋದರ ಸಹೋದರಿಯರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು?

8 ಗೌರವ, ಮರ್ಯಾದೆನ ನಾವು ಹೇಗೆ ಒಬ್ಬರ ಹತ್ರ ಕೇಳಿ ಪಡಕೊಳ್ಳೋಕೆ ಆಗಲ್ವೋ ಅದೇ ತರ ನಂಬಿಕೆಯನ್ನೂ ಒಬ್ಬರ ಹತ್ರ ಕೇಳಿ ಪಡಕೊಳ್ಳೋಕೆ ಆಗಲ್ಲ. ಅದನ್ನ ಸಂಪಾದಿಸಬೇಕು. ಅದಕ್ಕೆ ಸಮಯ ಹಿಡಿಯುತ್ತೆ. ಹಾಗಾದ್ರೆ ಸಹೋದರ ಸಹೋದರಿಯರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು? ಅವರ ಬಗ್ಗೆ ಚೆನ್ನಾಗಿ ತಿಳುಕೊಳ್ಳಿ. ಕೂಟಗಳಲ್ಲಿ ಅವರ ಜೊತೆ ಚೆನ್ನಾಗಿ ಮಾತಾಡಿ. ಅವರ ಜೊತೆ ಸೇವೆ ಮಾಡಿ. ಹಾಗೆ ಮಾಡಿದಾಗ ಅವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಆಗುತ್ತೆ. ಮೊದಲೇ ಎಲ್ಲ ವಿಷಯಗಳನ್ನೂ ಅವರ ಹತ್ರ ಹೇಳಿಕೊಳ್ಳಬೇಡಿ. ಅವರು ನಿಜವಾಗಲೂ ನಿಮ್ಮ ನಂಬಿಕೆ ಉಳಿಸಿಕೊಳ್ತಾರಾ ಅಂತ ಸ್ವಲ್ಪ ಸಮಯ ಕಾದು ನೋಡಿ. ಆಮೇಲೆ ಅವರ ಜೊತೆಗಿರೋ ನಿಮ್ಮ ಸ್ನೇಹ ಗಟ್ಟಿಯಾಗ್ತಾ ಹೋದಹಾಗೆ ನಿಮ್ಮ ಮನಸ್ಸಲ್ಲಿ ಇರೋದನ್ನ ಅವರ ಹತ್ರ ಹೇಳಿಕೊಳ್ಳಬಹುದು. (ಲೂಕ 16:10) ಒಂದುವೇಳೆ ಆ ಸಹೋದರ ಅಥವಾ ಸಹೋದರಿ ನಮ್ಮ ನಂಬಿಕೆನ ಉಳಿಸಿಕೊಳ್ಳಲಿಲ್ಲ ಅಂದ್ರೆ ಅಥವಾ ನಂಬಿಕೆದ್ರೋಹ ಮಾಡಿದ್ರೆ ಏನು ಮಾಡೋದು? ತಕ್ಷಣ ಕೋಪ ಮಾಡಿಕೊಂಡು ಅವರ ಸಹವಾಸನೇ ಬೇಡಪ್ಪ ಅಂತ ಅಂದ್ಕೊಬಾರದು. ಸ್ವಲ್ಪ ದಿನ ಆದಮೇಲೆ ಎಲ್ಲಾ ಸರಿಹೋಗುತ್ತೆ. ಹಾಗಾಗಿ ತಾಳ್ಮೆ ತೋರಿಸಿ. ಅಷ್ಟೇ ಅಲ್ಲ ಯಾರೋ ಒಬ್ಬರು ಹೀಗೆ ಮಾಡಿದ್ರು ಅಂತ ಸಭೆಯಲ್ಲಿರೋ ಎಲ್ಲರ ಮೇಲೂ ನಾವು ಸಂಶಯ ಪಡಬಾರದು. ಯೆಹೋವನ ಸೇವಕರಲ್ಲಿ ತುಂಬ ಜನರಿಗೆ ಹೀಗಾಗಿದೆ. ಹಾಗಂತ ಅವರು, ಇನ್ನುಮೇಲೆ ಯಾರನ್ನೂ ನಂಬಬಾರದು ಅಂತ ಅಂದುಕೊಳ್ಳಲಿಲ್ಲ. ಅವರ ಉದಾಹರಣೆಗಳನ್ನ ನಾವೀಗ ನೋಡೋಣ.

ಬೇರೆಯವರನ್ನ ನಂಬಿ ನಮಗೆ ಮಾದರಿಯಾದವರು

ಚಿತ್ರಗಳು: 1. ಹನ್ನ ಪ್ರಾರ್ಥನೆ ಮಾಡ್ತಿರುವಾಗ ಏಲಿ ಅವಳ ಮೇಲೆ ಅನುಮಾನ ಪಡ್ತಿದ್ದಾನೆ. 2. ಪುಟ್ಟ ಸಮುವೇಲನನ್ನ ಹನ್ನ ಏಲಿ ಹತ್ರ ಕರೆದುಕೊಂಡು ಬರ್ತಿದ್ದಾಳೆ.

ಏಲಿ ತನ್ನ ಮನಸ್ಸಿಗೆ ನೋವು ಮಾಡಿದ್ರೂ, ಹನ್ನ ಯೆಹೋವ ಮಾಡಿದ ಏರ್ಪಾಡಿನ ಮೇಲೆ ನಂಬಿಕೆ ಇಟ್ಟಳು (ಪ್ಯಾರ 9 ನೋಡಿ)

9. (ಎ) ಯೆಹೋವ ನೇಮಿಸಿದ ವ್ಯಕ್ತಿ ತಪ್ಪು ಮಾಡ್ತಾ ಇದ್ರೂ ಯೆಹೋವ ಮಾಡಿರೋ ಏರ್ಪಾಡಿನ ಮೇಲೆ ತನಗೆ ನಂಬಿಕೆ ಇದೆ ಅಂತ ಹನ್ನ ಹೇಗೆ ತೋರಿಸಿದಳು? (ಬಿ) ಹನ್ನಳಿಂದ ನಾವೇನು ಕಲಿಬಹುದು? (ಚಿತ್ರ ನೋಡಿ.)

9 ನಮಗೆ ಮಾದರಿಯಾಗಿ ಇರಬೇಕಾದ ಸಹೋದರರೇ ನಮ್ಮ ಮನಸ್ಸನ್ನ ನೋಯಿಸಿದ್ರೆ ಏನು ಮಾಡೋದು? ಆಗ ನಾವು ಹನ್ನಳನ್ನ ನೆನಪಿಸಿಕೊಳ್ಳಬೇಕು. ಅವಳ ಕಾಲದಲ್ಲಿ ಏಲಿ ಮಹಾ ಪುರೋಹಿತನಾಗಿದ್ದ. ಒಬ್ಬ ಮಹಾ ಪುರೋಹಿತನಾಗಿ ಏಲಿ, ಇಸ್ರಾಯೇಲ್ಯರು ಯೆಹೋವನಿಗೆ ಹತ್ರ ಆಗೋಕೆ ಸಹಾಯ ಮಾಡಬೇಕಿತ್ತು. ಅವನ ಮಕ್ಕಳು ದೇವಾಲಯದಲ್ಲಿ ಪುರೋಹಿತರಾಗಿದ್ರು. ಆದ್ರೆ ಯೆಹೋವನಿಗೆ ಇಷ್ಟ ಆಗದ ಕೆಟ್ಟ ಕೆಲಸಗಳನ್ನ ಮಾಡ್ತಿದ್ರು. ಇದನ್ನೆಲ್ಲ ನೋಡಿನೂ ಏಲಿ ಅವರನ್ನ ತಿದ್ದಲಿಲ್ಲ. ಹಾಗಿದ್ರೂ ಯೆಹೋವ ತಕ್ಷಣ ಅವನನ್ನ ಮಹಾ ಪುರೋಹಿತನ ಸ್ಥಾನದಿಂದ ಇಳಿಸಲಿಲ್ಲ. ಇದನ್ನೆಲ್ಲ ನೋಡಿ ಹನ್ನ, ‘ಏಲಿ ಇರೋ ಆಲಯಕ್ಕೆ ನಾನು ಹೋಗಲ್ಲ’ ಅಂತ ಅಂದುಕೊಳ್ಳಲಿಲ್ಲ. ಅಷ್ಟೇ ಅಲ್ಲ, ಒಂದು ಸಲ ಹನ್ನ ದೇವಾಲಯದಲ್ಲಿ ಯೆಹೋವನ ಹತ್ರ ತನ್ನ ದುಃಖ ತೋಡಿಕೊಳ್ತಿದ್ದಾಗ ಅವಳು ಕುಡಿದು ಬಂದಿದ್ದಾಳೆ ಅಂದ್ಕೊಂಡು ಏಲಿ ಅವಳನ್ನ ಬೈದುಬಿಟ್ಟ. (1 ಸಮು. 1:12-16) ಇಷ್ಟೆಲ್ಲಾ ಆದ್ರೂ ಹನ್ನ ತನಗೊಂದು ಗಂಡು ಮಗುವಾದ್ರೆ ದೇವಾಲಯದಲ್ಲಿ ಸೇವೆ ಮಾಡೋಕೆ ಬಿಡ್ತೀನಿ ಅಂತ ಯೆಹೋವನಿಗೆ ಹೇಳಿದಳು. ಅಂದ್ರೆ ಏಲಿ ಇದ್ದ ದೇವಾಲಯಕ್ಕೇ ತಂದುಬಿಡ್ತೀನಿ ಅಂತ ಯೆಹೋವನಿಗೆ ಮಾತು ಕೊಟ್ಟಳು. (1 ಸಮು. 1:11) ಯೆಹೋವ ಸರಿಯಾದ ಸಮಯಕ್ಕೆ ಏಲಿಯ ಮಕ್ಕಳನ್ನ ಶಿಕ್ಷಿಸಿದನು. ಎಲ್ಲವನ್ನೂ ಸರಿಮಾಡಿದನು. (1 ಸಮು. 4:17) ಹನ್ನ ತನ್ನ ಮೇಲೆ ನಂಬಿಕೆ ಇಟ್ಟಿದ್ರಿಂದ ಅವಳನ್ನ ಆಶೀರ್ವದಿಸಿದನು. ಅವಳಿಗೆ ಸಮುವೇಲನನ್ನ ಕೊಟ್ಟನು.—1 ಸಮು. 1:17-20.

10. ಕೆಲವರು ತನಗೆ ದ್ರೋಹ ಮಾಡಿದ್ರಿಂದ ಯಾರನ್ನೂ ನಂಬಬಾರದು ಅಂತ ದಾವೀದ ಅಂದುಕೊಂಡನಾ ವಿವರಿಸಿ?

10 ನಿಮ್ಮ ಸ್ನೇಹಿತರಲ್ಲಿ ಯಾರಾದ್ರೂ ನಿಮಗೆ ದ್ರೋಹ ಮಾಡಿದ್ದಾರಾ? ಹಾಗಿದ್ರೆ ರಾಜ ದಾವೀದನಿಗೆ ಏನಾಯ್ತು ಅಂತ ನೋಡಿ. ದಾವೀದನ ಮಗ ಅಬ್ಷಾಲೋಮ, ತನ್ನ ತಂದೆಯಿಂದ ರಾಜನ ಸ್ಥಾನ ಕಿತ್ತುಕೊಳ್ಳಬೇಕು ಅಂತ ಪ್ರಯತ್ನಪಟ್ಟ. ಅವನ ಜೊತೆ ದಾವೀದನ ಸ್ನೇಹಿತನಾಗಿದ್ದ ಅಹೀತೋಫೆಲನೂ ಸೇರಿಕೊಂಡ. ತನ್ನ ಸ್ವಂತ ಮಗ ಮತ್ತು ತನ್ನ ಪ್ರಾಣ ಸ್ನೇಹಿತ ತನ್ನ ಬೆನ್ನಿಗೆ ಚೂರಿ ಹಾಕೋಕೆ ಪಿತೂರಿ ಮಾಡ್ತಿರೋದನ್ನ ನೋಡಿ ದಾವೀದನಿಗೆ ಎಷ್ಟು ಬೇಜಾರಾಗಿರಬೇಕು ಅಲ್ವಾ? ಆದ್ರೂ ದಾವೀದ ಅವರ ಮೇಲಿದ್ದ ಬೇಜಾರಿಂದ ಇನ್ನು ಮೇಲೆ ಯಾರನ್ನೂ ನಂಬಬಾರದು ಅಂತ ಅಂದುಕೊಳ್ಳಲಿಲ್ಲ. ಅವನು ಹೂಷೈನ ನಂಬಿದ. ಹೂಷೈ ತಾನೊಬ್ಬ ಒಳ್ಳೇ ಸ್ನೇಹಿತ ಅಂತ ತೋರಿಸಿಕೊಟ್ಟ. ತನ್ನ ಪ್ರಾಣನ ಪಣಕ್ಕಿಟ್ಟು ದಾವೀದನಿಗೆ ಸಹಾಯ ಮಾಡಿದ.—2 ಸಮು. 17:1-16.

11. ಅಬೀಗೈಲ್‌ ಮೇಲೆ ತನಗೆ ನಂಬಿಕೆ ಇದೆ ಅಂತ ನಾಬಾಲನ ಸೇವಕ ಹೇಗೆ ತೋರಿಸಿದ?

11 ನಾಬಾಲನ ಸೇವಕನ ಉದಾಹರಣೆ ನೋಡಿ. ದಾವೀದ ಮತ್ತು ಅವನ ಸೈನಿಕರು ಇಸ್ರಾಯೇಲ್ಯನಾಗಿದ್ದ ನಾಬಾಲನ ಸೇವಕರಿಗೆ ಯಾವ ತೊಂದರೆನೂ ಆಗದ ಹಾಗೆ ನೋಡಿಕೊಂಡಿದ್ರು. ನಾಬಾಲ ಶ್ರೀಮಂತ ಆಗಿದ್ದ. ಒಂದಿನ ದಾವೀದನ ಕಡೆಯವರು ನಾಬಾಲನ ಹತ್ರ ಹೋಗಿ ಸ್ವಲ್ಪ ಊಟ ಕೊಡು ಅಂತ ಕೇಳಿಕೊಂಡ್ರು. ಆದ್ರೆ ನಾಬಾಲ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಆಗ ದಾವೀದನಿಗೆ ತುಂಬ ಕೋಪ ಬಂತು. ನಾಬಾಲನ ಮನೆಯಲ್ಲಿದ್ದ ಎಲ್ಲ ಗಂಡಸರನ್ನೂ ಸಾಯಿಸಿಬಿಡಬೇಕು ಅಂತ ದಾವೀದ ಅಂದುಕೊಂಡ. ಇದನ್ನ ಕೇಳಿ ನಾಬಾಲನ ಸೇವಕ ನಾಬಾಲನ ಹೆಂಡತಿಯಾದ ಅಬೀಗೈಲ್‌ ಹತ್ರ ಹೋಗಿ ಹೇಳಿದ. ತನ್ನ ಜೀವವನ್ನ ಕಾಪಾಡಿಕೊಳ್ಳೋಕೆ ಆ ಸೇವಕ ಎಲ್ಲಾದ್ರೂ ಓಡಿ ಹೋಗಬಹುದಿತ್ತು. ಆದ್ರೆ ಅವನು ಅಬೀಗೈಲ್ನ ನಂಬಿದ. ಅವಳು ಎಲ್ಲವನ್ನೂ ಸರಿ ಮಾಡ್ತಾಳೆ, ಬುದ್ಧಿವಂತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನು ಅಂದುಕೊಂಡಿದ್ದು ಸುಳ್ಳಾಗಲಿಲ್ಲ. ಅಬೀಗೈಲ್‌ ದಾವೀದನ ಹತ್ರ ಧೈರ್ಯವಾಗಿ ಮಾತಾಡಿ ಅವನಿಂದ ಆಗ್ತಿದ್ದ ಅನಾಹುತವನ್ನ ತಪ್ಪಿಸಿದಳು ಮತ್ತು ತನ್ನ ಮನೆಯವರನ್ನೆಲ್ಲ ಕಾಪಾಡಿದಳು. (1 ಸಮು. 25:2-35) ತಾನು ಹೇಳೋದನ್ನ ದಾವೀದ ಅರ್ಥಮಾಡಿಕೊಳ್ತಾನೆ ಅಂತ ನಂಬಿದಳು.

12. ತನ್ನ ಶಿಷ್ಯರು ತಪ್ಪುಗಳನ್ನ ಮಾಡಿದ್ರೂ ಅವರ ಮೇಲೆ ನಂಬಿಕೆ ಇದೆ ಅಂತ ಯೇಸು ಹೇಗೆ ತೋರಿಸಿಕೊಟ್ಟನು?

12 ತನ್ನ ಶಿಷ್ಯರು ತುಂಬ ಸಲ ತಪ್ಪು ಮಾಡಿದ್ರೂ ಯೇಸು ಅವರನ್ನ ನಂಬಿದನು. (ಯೋಹಾ. 15:15, 16) ಯಾಕೋಬ ಮತ್ತು ಯೋಹಾನ ಸ್ವರ್ಗದಲ್ಲಿ ತಮಗೆ ವಿಶೇಷ ಸ್ಥಾನ ಬೇಕು ಅಂತ ಕೇಳಿಕೊಂಡಾಗ ಯೇಸು ಅವರ ಉದ್ದೇಶ ಸರಿ ಇಲ್ಲ, ಅವರು ಇನ್ಮೇಲೆ ಅಪೊಸ್ತಲರಾಗಿ ಇರೋಕೆ ಲಾಯಕ್ಕಿಲ್ಲ ಅಂತ ಹೇಳಿ ಅವರನ್ನ ಕಳಿಸಿಬಿಡಲಿಲ್ಲ. (ಮಾರ್ಕ 10:35-40) ಅಷ್ಟೇ ಅಲ್ಲ, ಸೈನಿಕರು ಯೇಸುನ ಹಿಡುಕೊಳ್ಳೋಕೆ ಬಂದಾಗಲೂ ಆತನ ಶಿಷ್ಯರು ಆತನನ್ನು ಬಿಟ್ಟು ಓಡಿಹೋದ್ರು. (ಮತ್ತಾ. 26:56) ಆದ್ರೂ ಯೇಸು ಅವರನ್ನ ನಂಬಿದನು. ಅವರು ಅಪರಿಪೂರ್ಣರು ಅಂತ ಅರ್ಥಮಾಡಿಕೊಂಡು “ಕೊನೇ ತನಕ ಅವ್ರನ್ನ ಪ್ರೀತಿಸ್ತಾನೇ ಇದ್ದನು.” (ಯೋಹಾ. 13:1) ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ತನ್ನ 11 ಅಪೊಸ್ತಲರಿಗೆ ತುಂಬ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಕೊಟ್ಟನು. ಶಿಷ್ಯರನ್ನಾಗಿ ಮಾಡೋಕೆ ಮತ್ತು ತನ್ನ ಕುರಿಗಳನ್ನ ನೋಡಿಕೊಳ್ಳೋಕೆ ಅವರಿಗೆ ಹೇಳಿದನು. (ಮತ್ತಾ. 28:19, 20; ಯೋಹಾ. 21:15-17) ಯೇಸು ಅವರ ಮೇಲಿಟ್ಟ ನಂಬಿಕೆ ಸುಳ್ಳಾಗಲಿಲ್ಲ. ಅವರೆಲ್ಲರೂ ಸಾಯೋ ತನಕ ಯೇಸು ತಮ್ಮ ಮೇಲೆ ಇಟ್ಟಿದ್ದ ನಂಬಿಕೆನ ಉಳಿಸಿಕೊಂಡ್ರು. ಅಪರಿಪೂರ್ಣ ಮನುಷ್ಯರನ್ನ ನಂಬೋದ್ರಲ್ಲಿ ಹನ್ನ, ದಾವೀದ, ನಾಬಾಲನ ಸೇವಕ, ಅಬೀಗೈಲ್‌ ಮತ್ತು ಯೇಸು ಒಳ್ಳೇ ಮಾದರಿಯಾಗಿದ್ದಾರೆ.

ಸಹೋದರ ಸಹೋದರಿಯರನ್ನ ಮತ್ತೆ ನಂಬಿ

13. ಬೇರೆಯವರನ್ನ ನಂಬೋಕೆ ನಮಗೆ ಯಾವಾಗ ಕಷ್ಟ ಆಗುತ್ತೆ?

13 ನೀವು ಒಬ್ಬ ಸಹೋದರನನ್ನ ನಂಬಿ ಅವರ ಹತ್ರ ಕೆಲವು ವಿಷಯಗಳನ್ನ ಹೇಳಿರುತ್ತೀರ ಅಂತ ಅಂದ್ಕೊಳ್ಳಿ. ‘ಈ ವಿಷಯನ ಯಾರಿಗೂ ಹೇಳಬೇಡಿ’ ಅಂತನೂ ಹೇಳಿರುತ್ತೀರ. ಆದ್ರೂ ಅವರು ಅದನ್ನ ಬೇರೆಯವರಿಗೆ ಹೇಳಿಬಿಟ್ರೆ ನಿಮಗೆ ಹೇಗೆ ಅನಿಸುತ್ತೆ? ನೀವು ಅವರ ಮೇಲೆ ಇಟ್ಟಿದ್ದ ನಂಬಿಕೆ ನುಚ್ಚುನೂರು ಆಗಿಬಿಡುತ್ತೆ ಅಲ್ವಾ? ಒಬ್ಬ ಸಹೋದರಿಗೂ ಹೀಗೇ ಆಯ್ತು. ಅವರು ಒಬ್ಬ ಹಿರಿಯನನ್ನ ನಂಬಿ ತಮ್ಮ ವೈಯಕ್ತಿಕ ವಿಷ್ಯನ ಅವರ ಹತ್ರ ಹೇಳಿದ್ರು. ಆದ್ರೆ ಆ ಸಹೋದರ ಅದನ್ನ ತಮ್ಮ ಹೆಂಡತಿಗೆ ಹೇಳಿಬಿಟ್ಟಿದ್ರು. ಮಾರನೇ ದಿನ ಆ ಹಿರಿಯನ ಹೆಂಡತಿ ಆ ಸಹೋದರಿಗೆ ಧೈರ್ಯ ತುಂಬೋಕೆ ಫೋನ್‌ ಮಾಡಿದ್ರು. ತನ್ನ ವಿಷಯನೆಲ್ಲ ಆ ಹಿರಿಯ ತಮ್ಮ ಹೆಂಡತಿಗೆ ಹೇಳಿದ್ರಿಂದ ಆ ಸಹೋದರಿಗೆ ತುಂಬ ಬೇಜಾರಾಯ್ತು. ಇನ್ಮೇಲೆ ಆ ಹಿರಿಯನನ್ನ ನಂಬಲೇಬಾರದು ಅಂತ ಅವರಿಗೆ ಅನಿಸ್ತು. ಹಾಗಂತ ಇನ್ಮೇಲೆ ಯಾರನ್ನೂ ನಂಬಲೇಬಾರದು ಅಂತ ಅಂದುಕೊಳ್ಳಲಿಲ್ಲ. ಇದರ ಬಗ್ಗೆ ಇನ್ನೊಬ್ಬ ಹಿರಿಯನ ಹತ್ರ ಹೋಗಿ ಮಾತಾಡಿದ್ರು. ಆ ಹಿರಿಯ ಸಹೋದರಿಗೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಸಹಾಯ ಮಾಡಿದ್ರು.

14. ಹಿರಿಯರನ್ನ ಮತ್ತೆ ನಂಬೋಕೆ ಒಬ್ಬ ಸಹೋದರನಿಗೆ ಯಾವುದು ಸಹಾಯ ಮಾಡ್ತು?

14 ತುಂಬ ವರ್ಷಗಳಿಂದ ಒಬ್ಬ ಸಹೋದರ ಇಬ್ಬರು ಹಿರಿಯರ ಮೇಲೆ ಬೇಜಾರು ಮಾಡಿಕೊಂಡಿದ್ದನು. ಅವ್ರನ್ನ ಯಾವತ್ತೂ ನಂಬಲೇಬಾರದು ಅಂತ ಅವನು ಅಂದುಕೊಂಡಿದ್ದನು. ಆದ್ರೆ ಅವನು ತುಂಬ ಗೌರವಿಸ್ತಿದ್ದ ಒಬ್ಬ ಸಹೋದರ, “ನಮ್ಮ ವೈರಿ ಸೈತಾನ, ಸಹೋದರರಲ್ಲ” ಅಂತ ಹೇಳಿದ್ದ ಮಾತನ್ನ ನೆನಪಿಸಿಕೊಂಡ. ಅವನು ಇದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದ ಮೇಲೆ ಪ್ರಾರ್ಥನೆ ಮಾಡಿದ. ಆಮೇಲೆ ಆ ಹಿರಿಯರ ಹತ್ರ ಮಾತಾಡಿ ಸಮಾಧಾನ ಮಾಡಿಕೊಂಡ ಮತ್ತು ಅವರನ್ನ ಮತ್ತೆ ನಂಬೋಕೆ ಶುರುಮಾಡಿದ.

15. ಒಬ್ಬರ ಮೇಲೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಯಾಕೆ ಸಮಯ ಹಿಡಿಯುತ್ತೆ? ಉದಾಹರಣೆ ಕೊಡಿ.

15 ಸುಯೋಗಗಳನ್ನ ಕಳಕೊಂಡಾಗ ನಮಗೆ ತುಂಬ ನೋವಾಗುತ್ತೆ. ಗ್ರೆಟ್‌ ಅನ್ನೋ ಸಹೋದರಿಗೂ ಹೀಗೇ ಆಯ್ತು. 1930ರಂದು ನಾಜ಼ಿ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಕೆಲಸ ಬ್ಯಾನ್‌ ಆಗಿತ್ತು. ಆದ್ರೂ ಈ ಸಹೋದರಿ ಮತ್ತು ಅವರ ಅಮ್ಮ ನಂಬಿಕೆಯಿಂದ ಯೆಹೋವನ ಸೇವೆ ಮಾಡ್ತಿದ್ರು. ಗ್ರೆಟ್‌ ಕಾವಲಿನಬುರುಜು ಪತ್ರಿಕೆನ ಟೈಪ್‌ ಮಾಡ್ತಿದ್ದಳು. ಆದ್ರೆ ಅವರ ಅಪ್ಪ ಯೆಹೋವನ ಸಾಕ್ಷಿಗಳನ್ನ ವಿರೋಧಿಸ್ತಾರೆ ಅಂತ ಸಹೋದರರಿಗೆ ಗೊತ್ತಾದಾಗ ಇನ್ಮೇಲೆ ಅವಳು ಪತ್ರಿಕೆಗಳನ್ನ ಟೈಪ್‌ ಮಾಡೋದು ಬೇಡ ಅಂತ ಅವಳಿಗೆ ಹೇಳಿಬಿಟ್ರು. ಯಾಕಂದ್ರೆ ಅವರ ಅಪ್ಪ ಎಲ್ಲಿ ವಿರೋಧಿಗಳಿಗೆ ಸಭೆ ಬಗ್ಗೆ ಮಾಹಿತಿ ಕೊಟ್ಟುಬಿಡ್ತಾರೋ ಅಂತ ಹೆದರಿಕೊಂಡಿದ್ರು. 2ನೇ ಮಹಾಯುದ್ಧ ಮುಗಿಯೋ ತನಕ ಸಹೋದರರು ಅವಳಿಗೆ ಪತ್ರಿಕೆಗಳನ್ನ ಓದೋಕೂ ಕೊಡ್ತಿರಲಿಲ್ಲ. ಅವಳು ದಾರಿಯಲ್ಲಿ ಸಿಕ್ಕಿದ್ರೂ ಮಾತಾಡಿಸೋಕೆ ಹಿಂದೆಮುಂದೆ ನೋಡ್ತಿದ್ರು. ಇದ್ರಿಂದ ಅವಳ ಮನಸ್ಸಿಗೆ ತುಂಬ ನೋವಾಯ್ತು. ಸಹೋದರರ ಮೇಲಿದ್ದ ನಂಬಿಕೆನೂ ಕಳಕೊಂಡುಬಿಟ್ಟಳು. ಸಹೋದರರು ಮಾಡಿದ್ದನ್ನೆಲ್ಲ ಮರೆತು ಮತ್ತೆ ಅವರ ಮೇಲೆ ನಂಬಿಕೆ ಇಡೋಕೆ ತುಂಬ ಸಮಯ ಹಿಡಿತು ಅಂತ ಗ್ರೆಟ್‌ ಹೇಳ್ತಾಳೆ. ಸಹೋದರರು ಮಾಡಿದ್ದನ್ನ ಯೆಹೋವ ಕ್ಷಮಿಸಿರ್ತಾನೆ ಅಂತ ಅವಳು ಅರ್ಥ ಮಾಡಿಕೊಂಡಳು. ಹಾಗಾಗಿ ಅವಳೂ ಆ ಸಹೋದರರನ್ನ ಕ್ಷಮಿಸಿದಳು.c

“ನಮ್ಮ ವೈರಿ ಸೈತಾನ, ಸಹೋದರರಲ್ಲ”

16. ಕಷ್ಟ ಆದ್ರೂ ನಮ್ಮ ಸಹೋದರ ಸಹೋದರಿಯರನ್ನ ಮತ್ತೆ ನಂಬೋಕೆ ನಾವು ಯಾಕೆ ಪ್ರಯತ್ನ ಮಾಡಬೇಕು?

16 ನಿಮಗೂ ಯಾವತ್ತಾದರೂ ಹೀಗೆ ಅನಿಸಿದೆಯಾ? ಒಬ್ಬರನ್ನ ಮತ್ತೆ ನಂಬೋಕೆ ಕಷ್ಟ ಆಗಿದೆಯಾ? ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ ನಿಜ. ಆದ್ರೆ ಹಾಗೆ ಮಾಡೋದ್ರಿಂದ ತುಂಬ ಪ್ರಯೋಜನ ಇದೆ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ಯಾವತ್ತೋ ಒಂದು ದಿನ ಏನೋ ತಿಂದು ನಿಮ್ಮ ಹೊಟ್ಟೆ ಕೆಟ್ಟೋಯ್ತು ಅಂತ ಹೇಳಿ ಜೀವನದಲ್ಲಿ ಇನ್ಯಾವತ್ತೂ ನೀವು ಊಟನೇ ಮಾಡಲ್ವಾ? ಇಲ್ಲ ತಾನೇ? ಹಾಗೇ ಯಾರೋ ಒಬ್ಬ ಸಹೋದರ ಅಥವಾ ಸಹೋದರಿ ನಿಮ್ಮ ನಂಬಿಕೆನ ಉಳಿಸಿಕೊಳ್ಳಲಿಲ್ಲ ಅಂತ ಹೇಳಿ ಎಲ್ರೂ ಹಾಗೇ ಅಂತ ನಾವು ಹೇಳೋಕಾಗುತ್ತಾ? ಇಲ್ಲ. ನಾವೆಲ್ರೂ ಅಪರಿಪೂರ್ಣರು, ಹಾಗಾಗಿ ನಾವು ಮತ್ತೆ ಅವರನ್ನ ನಂಬೋಕೆ ಕಲಿಬೇಕು. ಆಗ ನಾವು ಖುಷಿಯಾಗಿ ಇರ್ತೀವಿ ಮತ್ತು ಬೇರೆಯವರು ನಮ್ಮನ್ನ ನೋಡಿ ಎಲ್ರನ್ನೂ ನಂಬೋಕೆ ಕಲಿತಾರೆ.

17. ನಂಬಿಕೆ ಅನ್ನೋದು ಯಾಕೆ ಮುಖ್ಯ? ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

17 ಈ ಸೈತಾನನ ಲೋಕದಲ್ಲಿ ನಂಬಿಕೆ ಉಳಿಸಿಕೊಳ್ಳೋ ಜನ ಸಿಗೋದು ತುಂಬ ಕಡಿಮೆ. ಆದ್ರೆ ನಾವು ನಮ್ಮ ಸಹೋದರ ಸಹೋದರಿಯರನ್ನ ನಂಬಬಹುದು. ಯಾಕಂದ್ರೆ ನಾವು ಅವರನ್ನ ಪ್ರೀತಿಸ್ತೀವಿ. ಅವರೂ ನಮ್ಮನ್ನ ಪ್ರೀತಿಸ್ತಾರೆ. ಇದ್ರಿಂದ ನಾವೆಲ್ಲರೂ ಖುಷಿ ಖುಷಿಯಾಗಿ ಇರ್ತೀವಿ. ಈಗಷ್ಟೇ ಅಲ್ಲ, ಮುಂದೆ ಕಷ್ಟಗಳು ಬಂದಾಗಲೂ ನಾವೆಲ್ಲ ಜೊತೆಯಾಗಿ ಇರ್ತೀವಿ. ಒಂದುವೇಳೆ ಯಾರೋ ನಿಮ್ಮ ನಂಬಿಕೆಯನ್ನ ನುಚ್ಚುನೂರು ಮಾಡಿದ್ರಿಂದ ನಿಮ್ಮ ಮನಸ್ಸಿಗೆ ವಾಸಿಯಾಗದ ಗಾಯ ಆಗಿದ್ರೆ ಏನು ಮಾಡ್ತಿರಾ? ಆಗ ಯೆಹೋವನ ತರ ಯೋಚನೆ ಮಾಡೋಕೆ ಪ್ರಯತ್ನ ಮಾಡಿ. ಬೈಬಲ್‌ ತತ್ವಗಳನ್ನ ಪಾಲಿಸಿ, ಸಹೋದರ ಸಹೋದರಿಯರನ್ನ ಇನ್ನೂ ಜಾಸ್ತಿ ಪ್ರೀತಿಸೋಕೆ ಶುರುಮಾಡಿ. ಬೈಬಲಲ್ಲಿರೋ ಯೆಹೋವನ ಸೇವಕರ ಉದಾಹರಣೆಗಳಿಂದ ಕಲಿರಿ. ಆಗ ಸಹೋದರ ಸಹೋದರಿಯರನ್ನ ನಂಬೋಕೆ ಆಗುತ್ತೆ. ಇದ್ರಿಂದ ನಮಗೆ ‘ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತರು’ ತುಂಬ ಜನ ಸಿಗ್ತಾರೆ. (ಜ್ಞಾನೋ. 18:24) ಬೇರೆಯವರು ನಮ್ಮ ನಂಬಿಕೆಯನ್ನ ಉಳಿಸಿಕೊಳ್ಳಬೇಕು ಅಂತ ನಾವು ಹೇಗೆ ಬಯಸ್ತೀವೋ ಹಾಗೇ ನಾವೂ ಬೇರೆಯವರ ನಂಬಿಕೆಯನ್ನ ಉಳಿಸಿಕೊಳ್ಳಬೇಕು. ಅದಕ್ಕೆ ನಾವೇನು ಮಾಡಬೇಕು ಅಂತ ಮುಂದಿನ ಲೇಖನದಲ್ಲಿ ನೋಡೋಣ.

ನಿಮ್ಮ ಉತ್ತರವೇನು?

  • ನಾವು ಯಾಕೆ ನಮ್ಮ ಸಹೋದರ ಸಹೋದರಿಯರನ್ನ ನಂಬಬೇಕು?

  • ಬೇರೆಯವರನ್ನ ನಂಬೋಕೆ ಬೈಬಲಲ್ಲಿರೋ ಯಾರ ಮಾದರಿ ನಮಗೆ ಸಹಾಯ ಮಾಡುತ್ತೆ?

  • ಒಬ್ಬ ಸಹೋದರ ಅಥವಾ ಸಹೋದರಿ ನಮ್ಮ ನಂಬಿಕೆನ ನುಚ್ಚುನೂರು ಮಾಡಿದ್ರೆ ಏನು ಮಾಡಬೇಕು?

ಗೀತೆ 122 ಲಕ್ಷಾಂತರ ಸೋದರರು

a ಕೆಲವೊಮ್ಮೆ ನಮ್ಮ ಸಹೋದರ ಸಹೋದರಿಯರು ನಾವು ಅವರ ಮೇಲೆ ಇಟ್ಟಿರೋ ನಂಬಿಕೆನ ಉಳಿಸಿಕೊಳ್ಳದೆ ಹೋಗಬಹುದು. ಹಾಗಂತ ಇನ್ಯಾವತ್ತೂ ಅವರನ್ನ ನಂಬಲೇಬಾರದು ಅಂತ ನಾವು ಅಂದುಕೊಳ್ಳಬಾರದು. ಅವರ ಮೇಲೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಪ್ರಯತ್ನಿಸಬೇಕು. ಅದಕ್ಕೆ ಕೆಲವು ಬೈಬಲ್‌ ತತ್ವಗಳು ಮತ್ತು ಹಿಂದಿನ ಕಾಲದವರ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ. ಅದನ್ನ ನಾವು ಈ ಲೇಖನದಲ್ಲಿ ನೊಡೋಣ.

b ಸಭೆಯಲ್ಲೂ ಕೆಲವರು ನಂಬಿಕೆ ದ್ರೋಹ ಮಾಡಬಹುದು ಅಂತ ಬೈಬಲ್‌ ಎಚ್ಚರಿಕೆ ಕೊಡುತ್ತೆ. (ಯೂದ 4) ಕೆಲವೊಮ್ಮೆ ಸಹೋದರ ಸಹೋದರಿಯರನ್ನ ತಪ್ಪು ದಾರಿಗೆ ಎಳೆಯೋಕೆ ಅವರು “ತಪ್ಪುತಪ್ಪಾಗಿ ಏನೇನೋ ಕಲಿಸ್ತಾರೆ” ಅಂತ ಬೈಬಲಲ್ಲಿ ಮುಂಚೆನೇ ಎಚ್ಚರಿಕೆ ಕೊಟ್ಟಿತ್ತು. (ಅ. ಕಾ. 20:30) ಅಂಥವರ ಮಾತನ್ನ ನಾವು ಕೇಳಲೂಬಾರದು ಅವರನ್ನ ನಂಬಲೂಬಾರದು.

c ಗ್ರೆಟ್‌ ಸಹೋದರಿಯ ಅನುಭವವನ್ನ ತಿಳಿದುಕೊಳ್ಳೋಕೆ 1974ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ ಪುಟ 129-131 (ಇಂಗ್ಲಿಷ್‌) ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ