ಯುದ್ಧ ಮತ್ತು ಹೊಡೆದಾಟಗಳಿದ್ರೂ ಶಾಂತಿಯಿಂದ ಇರೋದು ಹೇಗೆ?
ಈ ಹಿಂದೆ ಮಿಲಿಟರಿಯಲ್ಲಿದ್ದ ಗ್ಯಾರಿ ಅನ್ನೋರು ಏನ್ ಹೇಳ್ತಾರೆ ನೋಡಿ: “ಬೈಬಲ್ ಕಲಿಯೋಕೆ ಮುಂಚೆ ಪ್ರಪಂಚದಲ್ಲಿ ಯಾಕಿಷ್ಟು ಹಿಂಸೆ, ಅನ್ಯಾಯ, ಸಮಸ್ಯೆಗಳು ಇದೆ ಅಂತ ಗೊತ್ತಿರಲಿಲ್ಲ. ಆದ್ರೆ ಈಗ ನಂಗೆ ನೆಮ್ಮದಿ ಇದೆ. ಯಾಕಂದ್ರೆ ಯೆಹೋವ ದೇವರು ಈ ಕೆಟ್ಟ ವಿಷ್ಯಗಳನ್ನೆಲ್ಲ ತೆಗೆದುಹಾಕಿ ಭೂಮಿಯಲ್ಲಿ ಶಾಂತಿ ತರ್ತಾನೆ ಅಂತ ಗೊತ್ತಾಗಿದೆ.”
ಬೈಬಲ್ ಗ್ಯಾರಿಗೆ ಸಹಾಯ ಮಾಡಿದ ತರನೇ ಬೇರೆಯವ್ರಿಗೂ ಹೇಗೆ ಸಹಾಯ ಮಾಡಿದೆ ಅಂತ ನೋಡೋಣ ಬನ್ನಿ.
ಬೈಬಲ್ ಹೇಳೋದು: “ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ.”—ಕೀರ್ತನೆ 86:5.
ಈ ವಚನ ಹೇಗೆ ಸಹಾಯ ಮಾಡ್ತು? “ಈ ವಚನ ಯೆಹೋವ ದೇವರು ಕರುಣಾಮಯಿ ಅಂತ ನಂಗೆ ಅರ್ಥಮಾಡಿಸ್ತು. ಈ ಹಿಂದೆ ನಾನು ಯುದ್ಧದಲ್ಲಿ ಹೋರಾಡಿ ಮಾಡಿರೋ ತಪ್ಪನ್ನೆಲ್ಲ ಕ್ಷಮಿಸೋಕೆ ಆತನು ರೆಡಿ ಇದ್ದಾನೆ ಅಂತ ನಂಗೊತ್ತು.”—ವಿಲ್ಮಾರ್, ಕೊಲಂಬಿಯಾ.
ಬೈಬಲ್ ಹೇಳೋದು: “ನಾನು ಹೊಸ ಆಕಾಶವನ್ನ, ಹೊಸ ಭೂಮಿಯನ್ನ ಸೃಷ್ಟಿ ಮಾಡಲಿದ್ದೀನಿ, ಆಗ ಹಳೇ ಸಂಗತಿಗಳು ನೆನಪಿಗೆ ಬರಲ್ಲ, ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.”—ಯೆಶಾಯ 65:17.
ಈ ವಚನ ಹೇಗೆ ಸಹಾಯ ಮಾಡ್ತು? “ಮಿಲಿಟರಿಲಿದ್ದಾಗ ನಾನು ನೋಡಿದ, ಕೇಳಿದ ವಿಷ್ಯಗಳಿಂದ ನಂಗೆಷ್ಟು ಆಘಾತ ಆಗಿತ್ತಂದ್ರೆ ಒತ್ತಡ, ಖಿನ್ನತೆಯಲ್ಲಿ ಮುಳುಗಿ ಬಿಟ್ಟಿದ್ದೆ. ಆದ್ರೆ ಯೆಹೋವ ದೇವರು ಆದಷ್ಟು ಬೇಗ ನನಗಾಗಿರೋ ಕಹಿ ಅನುಭವಗಳನ್ನ ಮರಿಯೋಕೆ ಸಹಾಯ ಮಾಡ್ತಾನೆ ಅಂತ ಈ ವಚನ ನೆನಪು ಮಾಡುತ್ತೆ. ಇನ್ಯಾವತ್ತೂ ಆ ವಿಷ್ಯಗಳು ನನ್ನ ನೆನಪಿಗೂ ಬರಲ್ಲ ಅಂತ ನೆನಸ್ಕೊಂಡಾಗ ನಂಗೆ ತುಂಬ ಖುಷಿ ಆಗುತ್ತೆ!”—ಜ಼ಾಫಿರಾ, ಅಮೆರಿಕ.
ಬೈಬಲ್ ಹೇಳೋದು: “ಅವನ ಕಾಲದಲ್ಲಿ ನೀತಿವಂತರು ಅಭಿವೃದ್ಧಿ ಆಗ್ತಾರೆ, ಚಂದ್ರ ಇರೋ ತನಕ ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ.”—ಕೀರ್ತನೆ 72:7.
ಈ ವಚನ ಹೇಗೆ ಸಹಾಯ ಮಾಡ್ತು? “ಈ ವಚನದ ಬಗ್ಗೆ ನಾನು ಯಾವಾಗ್ಲೂ ಯೋಚ್ನೆ ಮಾಡ್ತೀನಿ. ಯುದ್ಧ ಮತ್ತು ಅದ್ರಿಂದ ಆಗೋ ಅನಾಹುತಗಳು ಇನ್ನೇನು ಸ್ವಲ್ಪ ಸಮಯದಲ್ಲಿ ಇಲ್ಲದೇ ಹೋಗುತ್ತೆ. ಆಗ ನಮ್ಮ ಕುಟುಂಬದವ್ರಿಗೆ, ಫ್ರೆಂಡ್ಸ್ಗೆ ಏನಾಗುತ್ತೋ ಅಂತ ನಾವು ಚಿಂತೆ ಮಾಡೋ ಅಗತ್ಯ ಇರಲ್ಲ.”—ಒಲೆಕ್ಸಾಂದ್ರ, ಉಕ್ರೇನ್.
ಬೈಬಲ್ ಹೇಳೋದು: “ಸತ್ತವರು ಬದುಕಿ ಬರ್ತಾರೆ, . . . ಮಣ್ಣಲ್ಲಿ ನೆಲೆಸಿರುವವರೇ, ಎದ್ದೇಳಿ, ಸಂತೋಷದಿಂದ ಜೈಕಾರ ಹಾಕಿ!”—ಯೆಶಾಯ 26:19.
ಈ ವಚನ ಹೇಗೆ ಸಹಾಯ ಮಾಡ್ತು? “ಬೇರೆ ಬುಡಕಟ್ಟು ಜನಾಂಗದವರು ಟುಟ್ಸಿ ಜನಾಂಗದವ್ರನ್ನ ಕೊಂದಾಗ ನಾನು ನನ್ನ ಕುಟುಂಬದಲ್ಲಿ ತುಂಬ ಜನ್ರನ್ನ ಕಳ್ಕೊಂಡೆ. ಆದ್ರೆ ನಾನು ಮತ್ತೆ ಅವ್ರನ್ನೆಲ್ಲ ನೋಡಬಹುದು ಅಂತ ಈ ವಚನ ನಂಗೆ ಧೈರ್ಯ ಕೊಡ್ತು. ಅವ್ರೆಲ್ಲ ಜೀವಂತವಾಗಿ ಎದ್ದು ಬಂದಾಗ ಅವರು ಖುಷಿಯಿಂದ ಕೂಗೋದನ್ನ ಕೇಳಿಸ್ಕೊಳ್ಳೋಕೆ ನಾನು ಕಾಯ್ತಾ ಇದ್ದೀನಿ.”—ಮೇರಿ, ರುವಾಂಡಾ.
ಬೈಬಲ್ ಹೇಳೋದು: “ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ. . . . ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.”—ಕೀರ್ತನೆ 37:10, 11.
ಈ ವಚನ ಹೇಗೆ ಸಹಾಯ ಮಾಡ್ತು? “ಯುದ್ಧ ಮುಗಿದ್ರೂ ಅನ್ಯಾಯ ಆಗ್ತಾನೇ ಇದೆ, ಕೆಟ್ಟ ಜನ್ರು ಇನ್ನೂ ಇದ್ದಾರೆ. ಆದ್ರೆ ಈ ವಚನ ನಂಗೆ ತುಂಬ ಸಹಾಯ ಮಾಡ್ತು. ಯೆಹೋವ ಎಲ್ಲವನ್ನ ನೋಡ್ತಿದ್ದಾನೆ ಮತ್ತು ನಂಗೆ ಏನ್ ಅನಿಸ್ತಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಆತನು, ತುಂಬ ಬೇಗ ಕೆಟ್ಟ ವಿಷ್ಯಗಳನ್ನೆಲ್ಲ ನಾಶ ಮಾಡ್ತೀನಿ, ಇನ್ಮುಂದೆ ಅದು ನೆನಪಿಗೂ ಬರಲ್ಲ ಅಂತ ಮಾತುಕೊಟ್ಟಿದ್ದಾನೆ.”—ಡೇಲರ್, ತಜಿಕಿಸ್ತಾನ್.
ಈ ಪತ್ರಿಕೆಲಿ ತಮ್ಮ ಅನುಭವಗಳನ್ನ ಹೇಳಿದವ್ರೆಲ್ರೂ ಯೆಹೋವನ ಸಾಕ್ಷಿಗಳು. ಇವ್ರ ತರನೇ ಲಕ್ಷಾಂತರ ಯೆಹೋವನ ಸಾಕ್ಷಿಗಳು ಶಾಂತಿಯಿಂದ ಇರೋಕೆ ಬೈಬಲಿಂದ ಕಲ್ತಿದ್ದಾರೆ. ಜಾತಿ, ದೇಶ, ಬಣ್ಣ, ಹಿನ್ನೆಲೆ ನೋಡಿ ಭೇದಭಾವ ಮಾಡದೇ ಇರೋಕೆ, ಯಾರ ಮೇಲೂ ದ್ವೇಷ ಇಟ್ಕೊಳ್ಳದೇ ಇರೋಕೆ ಕಲ್ತಿದ್ದಾರೆ. (ಎಫೆಸ 4:31, 32) ಯೆಹೋವನ ಸಾಕ್ಷಿಗಳು ರಾಜಕೀಯ ವಿಷ್ಯದಲ್ಲಿ ತಲೆಹಾಕಲ್ಲ. ಅವರು ಹಿಂಸೆ ತುಂಬಿರೋ ಯಾವ ಕೆಲಸಕ್ಕೂ ಕೈಹಾಕಲ್ಲ.—ಯೋಹಾನ 18:36.
ಪ್ರಪಂಚದಲ್ಲಿರೋ ಎಲ್ಲ ಯೆಹೋವನ ಸಾಕ್ಷಿಗಳು ಒಬ್ರಿಗೊಬ್ರು ತುಂಬ ಪ್ರೀತಿ ತೋರಿಸ್ತಾರೆ, ಕಷ್ಟದಲ್ಲಿದ್ದಾಗ ಅವ್ರಿಗೆ ಸಹಾಯ ಮಾಡ್ತಾರೆ. (ಯೋಹಾನ 13:35) ಈ ಮುಂಚೆ ತಮ್ಮ ಅನುಭವ ಹೇಳಿದ ಒಲೆಕ್ಸಾಂದ್ರ ತಮ್ಮ ದೇಶದಲ್ಲಿ ಯುದ್ಧ ಆಗ್ತಾ ಇದ್ದಿದ್ರಿಂದ ಅವ್ರ ಅಕ್ಕನ ಕರ್ಕೊಂಡು ದೇಶ ಬಿಟ್ಟು ಓಡಿ ಹೋಗಬೇಕಾಯ್ತು. ಆಮೇಲೆ ಏನಾಯ್ತು ಅಂತ ಅವ್ರೇ ಹೇಳ್ತಾರೆ ಕೇಳಿ: “ನಾವು ನಮ್ಮ ದೇಶದ ಗಡಿನ ದಾಟಿದ ತಕ್ಷಣ ಆ ದೇಶದ ಯೆಹೋವನ ಸಾಕ್ಷಿಗಳು ನಮ್ಮನ್ನ ಸ್ವಾಗತಿಸೋಕೆ ಕಾಯ್ತಾ ನಿಂತಿದ್ರು. ನಿರಾಶ್ರಿತರಾಗಿದ್ದ ನಮಗೆ ಆ ದೇಶದಲ್ಲಿ ಜೀವನ ಮಾಡೋಕೆ ತುಂಬ ಸಹಾಯ ಮಾಡಿದ್ರು.”
ನಮ್ಮ ಕೂಟಗಳಿಗೆ ನಾವು ನಿಮ್ಮನ್ನ ಪ್ರೀತಿಯಿಂದ ಸ್ವಾಗತಿಸ್ತೀವಿ. ಅಲ್ಲಿ ನಾವು ಬೈಬಲಿಂದ ಒಳ್ಳೊಳ್ಳೆ ವಿಷ್ಯಗಳನ್ನ ಕಲಿತೀವಿ ಮತ್ತು ಅದೇ ತರ ಜೀವನ ಮಾಡೋದು ಹೇಗೆ ಅಂತನೂ ಕಲಿತೀವಿ. ನಿಮಗೆ ಹತ್ರದಲ್ಲಿ ಕೂಟ ಎಲ್ಲಿ ನಡೆಯುತ್ತೆ ಅಂತ ತಿಳ್ಕೊಳ್ಳೋಕೆ ಅಥವಾ ಒಬ್ಬ ಯೆಹೋವನ ಸಾಕ್ಷಿ ಜೊತೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪ್ರಕಾಶನದಿಂದ ಉಚಿತವಾಗಿ ಬೈಬಲ್ ಬಗ್ಗೆ ಚರ್ಚೆ ಮಾಡೋಕೆ jw.org ಅನ್ನು ಭೇಟಿಮಾಡಿ.