ಅಧ್ಯಯನ ಲೇಖನ 10
ಗೀತೆ 88 ನಿನ್ನ ದಾರಿಗಳನ್ನ ನನಗೆ ಕಲಿಸು
ಯೇಸುನ ನೋಡಿ ಯೆಹೋವನ ತರ ಯೋಚ್ನೆ ಮಾಡಿ
“ಕ್ರಿಸ್ತನು ಮನುಷ್ಯನಾಗಿದ್ದಾಗ ತುಂಬ ಕಷ್ಟ ಅನುಭವಿಸಿದ್ದ. ಅದಕ್ಕೇ ನೀವೂ ಕ್ರಿಸ್ತನ ತರ ಯೋಚ್ನೆ ಮಾಡೋಕೆ ನಿಮ್ಮನ್ನೇ ತಯಾರಿ ಮಾಡ್ಕೊಳ್ಳಿ.” —1 ಪೇತ್ರ 4:1.
ಈ ಲೇಖನದಲ್ಲಿ ಏನಿದೆ?
ಯೇಸು ಯೋಚಿಸ್ತಿದ್ದ ರೀತಿಯಿಂದ ಪೇತ್ರ ಏನು ಕಲಿತ, ನಾವೇನು ಕಲಿಬಹುದು ಅಂತ ನೋಡೋಣ.
1-2. (ಎ) ಯೆಹೋವನನ್ನ ಪ್ರೀತಿಸೋದ್ರಲ್ಲಿ ಏನೆಲ್ಲಾ ಸೇರಿದೆ? (ಬಿ) ಯೇಸು ಯೆಹೋವನನ್ನ ಪೂರ್ಣ ಮನಸ್ಸಿಂದ ಪ್ರೀತಿಸಿದನು ಅಂತ ಹೇಗೆ ಹೇಳಬಹುದು?
ಯೆಹೋವ ಕೊಟ್ಟಿರೋ ಎಲ್ಲ ನಿಯಮಗಳಲ್ಲಿ ತುಂಬ ಮುಖ್ಯವಾದ ನಿಯಮ ಯಾವುದು? “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು” ಅನ್ನೋ ನಿಯಮನೇ ತುಂಬ ಮುಖ್ಯ ಅಂತ ಯೇಸುನೂ ಒಪ್ಕೊಂಡನು. (ಲೂಕ 10:27) ನಾವು ನಮ್ಮನ್ನೇ, ನಮ್ಮ ಜೀವನನೇ ಯೆಹೋವನಿಗೋಸ್ಕರ ಮುಡಿಪಾಗಿಡೋ ಮೂಲಕ ಆತನನ್ನ ಪ್ರೀತಿಸ್ತೀವಿ ಅಂತ ತೋರಿಸ್ಕೊಡ್ತೀವಿ. ಅದ್ರಲ್ಲಿ ನಮ್ಮ ಆಸೆಗಳು, ಭಾವನೆಗಳು, ನಾವು ತೋರಿಸೋ ಭಕ್ತಿ, ನಮ್ಮಲ್ಲಿರೋ ಶಕ್ತಿ ಎಲ್ಲ ಸೇರಿದೆ. ನಾವು ಯೆಹೋವನನ್ನ ಪೂರ್ಣ ಮನಸ್ಸಿಂದನೂ ಪ್ರೀತಿಸಬೇಕು. ಇದ್ರಲ್ಲಿ ನಾವು ಹೇಗೆ ಯೋಚ್ನೆ ಮಾಡ್ತೀವಿ ಅನ್ನೋದೂ ಸೇರಿದೆ. ಯೆಹೋವ ದೇವರ ಯೋಚ್ನೆಗಳನ್ನೆಲ್ಲ ನಾವು ಯಾವತ್ತೂ ಪೂರ್ತಿಯಾಗಿ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ ನಿಜ. ಆದ್ರೆ “ನಾವು ಕ್ರಿಸ್ತನ ಮನಸ್ಸನ್ನ” ತಿಳ್ಕೊಂಡ್ರೆ ಯೆಹೋವ ಹೇಗೆ ಯೋಚ್ನೆ ಮಾಡ್ತಾನೆ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಯಾಕಂದ್ರೆ ಯೇಸು ಯೆಹೋವನ ತರಾನೇ ಯೋಚ್ನೆ ಮಾಡ್ತಿದ್ದನು.—1 ಕೊರಿಂ. 2:16.
2 ಯೇಸು ಯೆಹೋವನನ್ನ ಪೂರ್ಣ ಮನಸ್ಸಿಂದ ಪ್ರೀತಿಸಿದನು. ‘ನನ್ನ ಬಗ್ಗೆ ಯೆಹೋವನ ಇಷ್ಟ ಏನು, ಯೆಹೋವನ ಯೋಚ್ನೆ ಏನು’ ಅಂತ ಅರ್ಥ ಮಾಡ್ಕೊಂಡನು. ಅದ್ರ ಪ್ರಕಾರ ನಡ್ಕೊಳೋಕೆ ಏನು ಮಾಡೋಕೂ ರೆಡಿ ಇದ್ದನು. ಅದಕ್ಕೇ ತನ್ನ ಪ್ರಾಣಾನೇ ಕೊಟ್ಟಬಿಟ್ಟನು. ಯೆಹೋವ ಇಷ್ಟ ಪಡೋ ತರ ನಡ್ಕೊಳ್ಳೋದೇ ಯೇಸುಗೆ ತನ್ನ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯ ಆಗಿತ್ತು. ಯಾವ ವಿಷ್ಯಾನೂ ಇದಕ್ಕೆ ಅಡ್ಡ ಬರೋ ತರ ಯೇಸು ಬಿಟ್ಕೊಡಲಿಲ್ಲ.
3. (ಎ) ಪೇತ್ರ ಯೇಸುವಿಂದ ಏನು ಕಲಿತ? (ಬಿ) ಆಗಿನ ಕಾಲದ ಕ್ರೈಸ್ತರು ಏನು ಮಾಡಬೇಕು ಅಂತ ಪೇತ್ರ ಹೇಳಿದ? (1 ಪೇತ್ರ 4:1)
3 ಪೇತ್ರ ಮತ್ತೆ ಬೇರೆ ಅಪೊಸ್ತಲರು ಯೇಸು ಜೊತೆ ಸಮಯ ಕಳೆದ್ರು. ಇದ್ರಿಂದ ಅವರು ಯೇಸು ಹೇಗೆ ಯೋಚ್ನೆ ಮಾಡ್ತಾನೆ ಅಂತ ಕಣ್ಣಾರೆ ನೋಡಿದ್ರು, ಅವರೂ ಅದೇ ತರ ಯೋಚ್ನೆ ಮಾಡೋಕೆ ಕಲಿತ್ರು. ಅದಕ್ಕೇ ಪೇತ್ರ ತನ್ನ ಮೊದಲನೇ ಪತ್ರದಲ್ಲಿ ಕ್ರಿಸ್ತನ ತರ ಯೋಚ್ನೆ ಮಾಡೋಕೆ ಮನಸ್ಸನ್ನ ತಯಾರಿ ಮಾಡ್ಕೊಳ್ಳಿ ಅಂತ ಬರೆದ. (1 ಪೇತ್ರ 4:1 ಓದಿ.) “ತಯಾರಿ ಮಾಡ್ಕೊಳ್ಳಿ” ಅಂತ ಪೇತ್ರ ಹೇಳಿದಾಗ ಆ ಕಾಲದ ಸೈನಿಕರು ಯುದ್ಧಕ್ಕೆ ಆಯುಧಗಳನ್ನ ಹಿಡ್ಕೊಂಡು ತಯಾರಿ ಮಾಡ್ಕೊಳ್ಳೋದು ಅವನ ಮನಸ್ಸಲ್ಲಿತ್ತು. ಸೈನಿಕನ ಹತ್ರ ಆಯುಧಗಳಿರುತ್ತೆ ಸರಿ, ನಮ್ಮ ಆಯುಧ ಯಾವುದು? ಕ್ರಿಸ್ತನ ತರ ಯೋಚ್ನೆ ಮಾಡೋದೇ ನಮ್ಮ ಆಯುಧ! ಇದನ್ನ ನಾವು ಕಲಿತುಬಿಟ್ರೆ ನಮ್ಮಲ್ಲಿರೋ ಪಾಪದ ವಿರುದ್ಧ ಮತ್ತು ಈ ಸೈತಾನನ ಲೋಕದ ವಿರುದ್ಧ ಗೆಲ್ಲೋಕೆ ನಾವು ಪೂರ್ತಿ ರೆಡಿ ಇರ್ತೀವಿ.—2 ಕೊರಿಂ. 10:3-5; ಎಫೆ. 6:12.
4. ಈ ಲೇಖನದಲ್ಲಿ ಏನು ಕಲಿತೀವಿ?
4 ಯೇಸು ಹೇಗೆ ಯೋಚ್ನೆ ಮಾಡ್ತಿದ್ದನು ಮತ್ತು ನಾವು ಹೇಗೆ ಆತನ ತರ ಯೋಚಿಸೋಕೆ ಕಲಿಬಹುದು ಅಂತ ನೋಡೋಣ. ಈ ಲೇಖನದಲ್ಲಿ ನಾವು (1) ಯೆಹೋವನ ತರ ಯೋಚ್ನೆ ಮಾಡೋಕೆ, (2) ದೀನತೆ ತೋರಿಸೋಕೆ, (3) ಯಾವಾಗ್ಲೂ ಚೆನ್ನಾಗಿ ಯೋಚ್ನೆ ಮಾಡ್ತಾ ಇರೋಕೆ ಏನು ಮಾಡಬೇಕು ಅಂತ ಕಲಿತೀವಿ.
ಯೆಹೋವನ ತರ ಯೋಚ್ನೆ ಮಾಡಿ
5. ಪೇತ್ರ ಯಾವಾಗ ಯೆಹೋವನ ತರ ಯೋಚ್ನೆ ಮಾಡೋಕೆ ತಪ್ಪಿಹೋದ?
5 ಒಂದ್ಸಲ ಪೇತ್ರ ಯೆಹೋವನ ತರ ಯೋಚ್ನೆ ಮಾಡೋಕೆ ತಪ್ಪಿಹೋದ. ಯೇಸು ತನ್ನ ಅಪೊಸ್ತಲರಿಗೆ ‘ನಾನು ಯೆರೂಸಲೇಮಿಗೆ ಹೋಗಬೇಕು, ಅಲ್ಲಿ ಧರ್ಮಗುರುಗಳಿಗೆ ನನ್ನನ್ನ ಹಿಡಿದುಕೊಡ್ತಾರೆ, ನಂಗೆ ಚಿತ್ರಹಿಂಸೆ ಕೊಡ್ತಾರೆ, ನನ್ನನ್ನ ಕೊಲ್ತಾರೆ’ ಅಂತ ಹೇಳಿದ. (ಮತ್ತಾ. 16:21) ಪೇತ್ರನಿಗೆ ಯೇಸುನೇ ಮೆಸ್ಸೀಯ ಅಂತ ಗೊತ್ತಿತ್ತು. ಮೆಸ್ಸೀಯನಾಗಿರೋ ಯೇಸುನ ಕೊಲ್ಲೋಕೆ ಯೆಹೋವ ಬಿಟ್ಕೊಡಲ್ಲ ಅಂತ ಪೇತ್ರ ಅಂದ್ಕೊಂಡ. (ಮತ್ತಾ. 16:16) ಅದಕ್ಕೇ ಯೇಸುನ ಪಕ್ಕಕ್ಕೆ ಕರೆದು, “ಸ್ವಾಮಿ, ಏನ್ ಹೇಳ್ತಾ ಇದ್ದೀಯ. ನಿನಗೆ ಯಾವತ್ತೂ ಹಾಗೆ ಆಗಬಾರದು” ಅಂತ ಹೇಳಿದ. (ಮತ್ತಾ. 16:22) ಪೇತ್ರ ಯೆಹೋವನ ಯೋಚ್ನೆನ ಅರ್ಥ ಮಾಡ್ಕೊಳೋಕೆ ತಪ್ಪಿಹೋದ. ಅದಕ್ಕೇ ಅವನ ಮತ್ತು ಯೇಸುವಿನ ಯೋಚ್ನೆ ಬೇರೆ ಬೇರೆ ಆಗಿತ್ತು.
6. ಯೆಹೋವನ ತರನೇ ಯೋಚ್ನೆ ಮಾಡ್ತಿದ್ದೀನಿ ಅಂತ ಯೇಸು ಹೇಗೆ ತೋರಿಸಿದನು?
6 ಯೇಸು ಯಾವಾಗ್ಲೂ ತನ್ನ ತಂದೆ ಯೆಹೋವನ ತರನೇ ಯೋಚ್ನೆ ಮಾಡ್ತಿದ್ದನು. ಅದಕ್ಕೇ ಯೇಸು ಪೇತ್ರನಿಗೆ “ಸಾಕು ನಿಲ್ಲಿಸು ಸೈತಾನ! ದೇವರ ಇಷ್ಟ ಮಾಡೋಕೆ ನೀನು ಬಿಡ್ತಾ ಇಲ್ಲ. ನೀನು ದೇವ್ರ ತರ ಯೋಚ್ನೆ ಮಾಡೋದು ಬಿಟ್ಟು ಮನುಷ್ಯರ ತರ ಯೋಚ್ನೆ ಮಾಡ್ತಾ ಇದ್ದೀಯ” ಅಂತ ಹೇಳಿದನು. (ಮತ್ತಾ. 16:23) ಪೇತ್ರ ಒಳ್ಳೆ ಉದ್ದೇಶದಿಂದನೇ ಯೇಸುಗೆ ಸಲಹೆ ಕೊಟ್ಟಿರಬಹುದು. ಆದ್ರೂ ಯೇಸು ಅದನ್ನ ಒಪ್ಕೊಳ್ಳಲಿಲ್ಲ. ಯಾಕಂದ್ರೆ ಯೆಹೋವನ ಇಷ್ಟದ ಪ್ರಕಾರ ನಡ್ಕೊಳ್ಳೋಕೆ ತಾನು ಕಷ್ಟಪಟ್ಟು ಸಾಯಬೇಕು ಅನ್ನೋದು ಯೇಸುಗೆ ಗೊತ್ತಿತ್ತು. ಈ ಘಟನೆಯಿಂದ ಪೇತ್ರ ಮನುಷ್ಯರ ತರ ಯೋಚ್ನೆ ಮಾಡದೆ ಯೆಹೋವನ ತರ ಯೋಚ್ನೆ ಮಾಡೋದೇ ಮುಖ್ಯ ಅಂತ ಅರ್ಥ ಮಾಡ್ಕೊಂಡ. ಇದು ನಮಗೂ ಒಳ್ಳೆ ಪಾಠ ಅಲ್ವಾ?
7. ಯೆಹೋವ ದೇವರ ಯೋಚ್ನೆಗೆ ತಕ್ಕ ಹಾಗೆ ಪೇತ್ರ ತನ್ನ ಯೋಚ್ನೆನ ಬದಲಾಯಿಸ್ಕೊಂಡ ಅಂತ ಹೇಗೆ ತೋರಿಸ್ಕೊಟ್ಟ? (ಚಿತ್ರ ನೋಡಿ.)
7 ಪೇತ್ರ ತನಗೆ ಯೆಹೋವನ ಯೋಚ್ನೆ ಪ್ರಕಾರ ನಡ್ಕೊಳ್ಳೋಕೆ ಮನಸ್ಸಿದೆ ಅಂತ ಆಮೇಲೆ ತೋರಿಸ್ಕೊಟ್ಟ. ಅದನ್ನ ಹೇಗೆ ಹೇಳಬಹುದು? ಆ ಸಮಯದಲ್ಲಿ ಸುನ್ನತಿ ಆಗದೇ ಇರೋರೂ ತನ್ನ ಆರಾಧನೆ ಮಾಡಬೇಕು ಅಂತ ಯೆಹೋವ ಬಯಸಿದನು. ಇವ್ರಿಗೆ ಸಿಹಿಸುದ್ದಿ ಸಾರೋಕೆ ಯೆಹೋವ ಪೇತ್ರನನ್ನ ಆರಿಸ್ಕೊಳ್ತಾನೆ. ಆದ್ರೆ ಯೆಹೂದ್ಯರಿಗೆ ಸುನ್ನತಿ ಆಗದೇ ಇರೋರನ್ನ ಕಂಡ್ರೆ ಆಗ್ತಿರಲಿಲ್ಲ. ಹಾಗಾಗಿ ಪೇತ್ರನಿಗೆ ಅವ್ರಿಗೆ ಸಾರೋದು ಅಷ್ಟೇನೂ ಸುಲಭ ಆಗಿರಲಿಲ್ಲ. ಅದಕ್ಕೇ ಅವನು ತನ್ನ ಮನಸ್ಸನ್ನ ಮೊದ್ಲೇ ತಯಾರಿ ಮಾಡ್ಕೊಬೇಕಿತ್ತು. ಯೆಹೋವನ ಯೋಚ್ನೆ ಏನಂತ ತಿಳ್ಕೊಂಡು, ತನ್ನ ಯೋಚ್ನೆನ ಅದ್ರ ಪ್ರಕಾರ ಬದಲಾಯಿಸ್ಕೊಬೇಕಿತ್ತು. ಇದನ್ನೆಲ್ಲಾ ಅವನು ಮಾಡಿದ್ರಿಂದ “ಹಿಂದೆಮುಂದೆ ನೋಡದೆ” ತನಗೆ ಕೊಟ್ಟ ಕೆಲಸನ ಹೋಗಿ ಮಾಡಿದ. (ಅ. ಕಾ. 10:28, 29) ಯೆಹೋವ ಹೇಳಿದ ತರಾನೇ ಪೇತ್ರ ಕೊರ್ನೇಲ್ಯನಿಗೆ, ಅವನ ಕುಟುಂಬದವ್ರಿಗೆ ಸಿಹಿಸುದ್ದಿ ಸಾರಿದ. ಅವ್ರೆಲ್ಲ ದೀಕ್ಷಾಸ್ನಾನ ತಗೊಂಡ್ರು.—ಅ. ಕಾ. 10:21-23, 34, 35, 44-48.
ಪೇತ್ರ ಕೊರ್ನೇಲ್ಯನ ಮನೆ ಒಳಗೆ ಹೋಗ್ತಿದ್ದಾನೆ (ಪ್ಯಾರ 7 ನೋಡಿ)
8. ನಾವು ಯೆಹೋವ ದೇವರ ತರಾನೇ ಯೋಚ್ನೆ ಮಾಡ್ತಿದ್ದೀವಿ ಅಂತ ಹೇಗೆ ತೋರಿಸ್ಕೊಡಬಹುದು? (1 ಪೇತ್ರ 3:8)
8 ಸ್ವಲ್ಪ ವರ್ಷ ಆದ್ಮೇಲೆ ಪೇತ್ರ ಅಲ್ಲಿದ್ದ ಕ್ರೈಸ್ತರಿಗೆ “ನಿಮ್ಮೆಲ್ರ ಯೋಚ್ನೆ ಒಂದೇ ತರ ಇರಬೇಕು” ಅಂತ ಹೇಳಿದ. (1 ಪೇತ್ರ 3:8 ಓದಿ.) ಯೆಹೋವ ತನ್ನ ಯೋಚ್ನೆ ಏನು ಅಂತ ಬೈಬಲಲ್ಲಿ ಬರೆಸಿದ್ದಾನೆ. ನಾವು ಅದನ್ನ ಓದಿ ಆತನ ಯೋಚ್ನೆಗೆ ತಕ್ಕ ಹಾಗೆ ನಮ್ಮ ಯೋಚ್ನೆಯನ್ನ ಹೊಂದಿಸ್ಕೊಬೇಕು. ಆಗ ನಾವೂ ಮತ್ತು ನಮ್ಮ ಸಹೋದರ ಸಹೋದರಿಯರೂ ಒಂದೇ ತರ ಯೋಚ್ನೆ ಮಾಡೋಕೆ ಆಗುತ್ತೆ. ಉದಾಹರಣೆಗೆ, ಯೇಸು ತನ್ನ ಶಿಷ್ಯರಿಗೆ ‘ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡಿ’ ಅಂದನು. (ಮತ್ತಾ. 6:33) ಇದನ್ನ ಮನಸ್ಸಲ್ಲಿಟ್ಟು ನಮ್ಮ ಸಭೆಲಿರೋ ಯಾರಾದ್ರೂ ಪಯನೀಯರ್ ಸೇವೆನ ಅಥವಾ ಬೇರೆ ಯಾವುದಾದ್ರೂ ಪೂರ್ಣ ಸಮಯದ ಸೇವೆನ ಮಾಡೋಕೆ ಮುಂದೆ ಬಂದ್ರೆ ನಾವು ಏನು ಮಾಡಬೇಕು? ‘ಮೊದ್ಲು ನಿನ್ನ ಜೀವನಕ್ಕಂತ ಏನಾದ್ರೂ ಮಾಡ್ಕೋ, ಮುಂದೆ ನಿಂಗೆ ನಿಮ್ಮ ಮನೆಯವ್ರಿಗೆ ಹೆಚ್ಚು ಕಮ್ಮಿಯಾದ್ರೆ ಯಾರು ನೋಡ್ಕೋತಾರೆ’ ಅಂತೆಲ್ಲ ಸಲಹೆ ಕೊಟ್ರೆ ಸರಿ ಇರುತ್ತಾ? ಆ ತರ ಹೇಳೋ ಬದ್ಲು ‘ನೀನು ಒಳ್ಳೆ ಗುರಿ ಇಟ್ಟಿದ್ದೀಯ, ಒಳ್ಳೆ ಕೆಲ್ಸ ಮಾಡ್ತಿದ್ದೀಯ, ನಾನೂ ನನ್ನ ಕೈಯಲ್ಲಾದ ಸಹಾಯ ಮಾಡ್ತೀನಿ’ ಅಂತ ಹೇಳಿ ಅವ್ರನ್ನ ಪ್ರೋತ್ಸಾಹಿಸಿ.
ದೀನತೆ ತೋರಿಸಿ
9-10. ಯೇಸುಗೆ ತುಂಬ ದೀನತೆ ಇತ್ತು ಅಂತ ಹೇಗೆ ಹೇಳಬಹುದು?
9 ತಾನು ಸಾಯೋ ಹಿಂದಿನ ರಾತ್ರಿ ಯೇಸು ಪೇತ್ರನಿಗೆ ಮತ್ತು ಬೇರೆ ಅಪೊಸ್ತಲರಿಗೆ ದೀನತೆ ವಿಷ್ಯದಲ್ಲಿ ಒಂದು ಮುಖ್ಯವಾದ ಪಾಠ ಕಲಿಸಿದನು. ಪೇತ್ರ ಮತ್ತು ಯೋಹಾನನಿಗೆ ಆ ರಾತ್ರಿ ಊಟಕ್ಕೆ ಬೇಕಾದ ಎಲ್ಲಾ ಏರ್ಪಾಡನ್ನ ಮಾಡಿ ಅಂತ ಯೇಸು ಹೇಳಿದನು. ಅದು ತಾನು ಮನುಷ್ಯನಾಗಿ ತನ್ನ ಶಿಷ್ಯರ ಜೊತೆ ಮಾಡೋ ಕೊನೇ ಊಟ ಆಗಿತ್ತು. ಈ ಊಟಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡುವಾಗ ಅತಿಥಿಗಳಿಗೆ ಕಾಲು ತೊಳಿಯೋಕೆ ಬೇಕಾದ ನೀರು, ಪಾತ್ರೆ ಮತ್ತೆ ಬಟ್ಟೆನ ಕೂಡ ಅವ್ರೇ ಇಟ್ಟಿರಬಹುದು. ಆದ್ರೆ ದೀನತೆಯಿಂದ ಕಾಲನ್ನ ತೊಳಿಯೋಕೆ ಯಾರು ರೆಡಿ ಇದ್ರು?
10 ಆ ರಾತ್ರಿ ಊಟ ಮಾಡೋ ಮುಂಚೆ ಯೇಸು ತನ್ನ ಅಂಗಿ ಬಿಚ್ಚಿ ಪಕ್ಕಕ್ಕಿಟ್ಟು, ಒಂದು ಬಟ್ಟೆ ತಗೊಂಡು ಅದನ್ನ ಸೊಂಟಕ್ಕೆ ಕಟ್ಕೊಳ್ತಾನೆ. ಆಮೇಲೆ ಯೇಸು ಪಾತ್ರೆಲಿ ನೀರು ತಗೊಂಡು ಒಬ್ಬ ಸೇವಕನ ತರ 12 ಶಿಷ್ಯರ ಕಾಲನ್ನ ತೊಳೀತಾನೆ. ನಂಬಿಕೆ ದ್ರೋಹ ಮಾಡಲಿದ್ದ ಯೂದನ ಕಾಲನ್ನೂ ತೊಳೀತಾನೆ. ಇದನ್ನ ನೋಡಿದಾಗ ಶಿಷ್ಯರಿಗೆ ತುಂಬ ಆಶ್ಚರ್ಯ ಆಯ್ತು. (ಯೋಹಾ. 13:4, 5) ಎಲ್ರ ಕಾಲನ್ನ ತೊಳಿಯೋಕೆ ತುಂಬ ಸಮಯ ಹಿಡಿದ್ರೂ ಯೇಸು ದೀನತೆಯಿಂದ ಅದನ್ನ ಮಾಡಿದನು. ಆಮೇಲೆ ಯೇಸು ಅವ್ರಿಗೆ ತಾಳ್ಮೆಯಿಂದ, “ನಾನು ಯಾಕೆ ನಿಮ್ಮ ಕಾಲು ತೊಳೆದೆ ಅಂತ ನಿಮಗೆ ಅರ್ಥ ಆಯ್ತಾ? ನೀವು ನನ್ನನ್ನ ‘ಗುರು’ ಅಂತ ‘ಪ್ರಭು’ ಅಂತ ಕರಿತೀರ. ನೀವು ಆ ತರ ಕರಿಯೋದು ಸರಿನೇ. ನಿಮ್ಮ ಗುರು, ಪ್ರಭು ಆಗಿರೋ ನಾನೇ ನಿಮ್ಮ ಕಾಲು ತೊಳೆದಿರುವಾಗ ನೀವು ಸಹ ಒಬ್ಬರ ಕಾಲನ್ನ ಇನ್ನೊಬ್ರು ತೊಳಿಲೇಬೇಕು” ಅಂತ ಹೇಳಿದನು.—ಯೋಹಾ. 13:12-14.
ದೀನತೆಯಲ್ಲಿ ನಾವು ನಮ್ಮ ಬಗ್ಗೆ ಮತ್ತು ಬೇರೆಯವ್ರ ಬಗ್ಗೆ ಏನು ಯೋಚ್ನೆ ಮಾಡ್ತೀವಿ ಅನ್ನೋದೂ ಸೇರಿದೆ
11. ಪೇತ್ರ ದೀನತೆ ಕಲಿತ ಅಂತ ನಮಗೆ ಹೇಗೆ ಗೊತ್ತಾಗುತ್ತೆ? (1 ಪೇತ್ರ 5:5) (ಚಿತ್ರ ನೋಡಿ.)
11 ಯೇಸುನ ನೋಡಿ ಪೇತ್ರ ದೀನತೆ ಕಲಿತ. ಯೇಸು ಸ್ವರ್ಗಕ್ಕೆ ಹೋದ್ಮೇಲೆ ಪೇತ್ರ ಒಬ್ಬ ಹುಟ್ಟು ಕುಂಟನನ್ನ ವಾಸಿ ಮಾಡಿದ. (ಅ. ಕಾ. 1:8, 9; 3:2, 6-8) ಜನ ಪೇತ್ರನ ಹತ್ರ ಓಡಿಬಂದು ಇದನ್ನೆಲ್ಲ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾ ನಿಂತ್ರು. (ಅ. ಕಾ. 3:11) ‘ಸಿಕ್ಕಿದ್ದೇ ಚಾನ್ಸ್, ಇದನ್ನೆಲ್ಲ ಬಳಸ್ಕೊಂಡು ಫೇಮಸ್ ಆಗ್ಬಿಡೋಣ’ ಅಂತ ಪೇತ್ರ ಅಂದ್ಕೊಂಡ್ನಾ? ಪೇತ್ರ ಹುಟ್ಟಿ ಬೆಳೆದ ಜಾಗದಲ್ಲಿ ಹೆಸ್ರಿಗೆ, ಸ್ಥಾನಮಾನಕ್ಕೆ ತುಂಬ ಬೆಲೆ ಕೊಡ್ತಿದ್ರು. ಇದೆಲ್ಲ ಗೊತ್ತಿದ್ರೂ ಪೇತ್ರ ಆ ಅವಕಾಶವನ್ನ ತನಗಾಗಿ ಬಳಸ್ಕೊಳ್ಳಲಿಲ್ಲ. ಬದ್ಲಿಗೆ ಎಲ್ಲ ಗೌರವ ಮತ್ತು ಕೀರ್ತಿನ ದೀನತೆಯಿಂದ ಯೆಹೋವ ಮತ್ತೆ ಯೇಸುಗೆ ಕೊಟ್ಟ. ಅದಕ್ಕೇ “ನಮಗೆ ಯೇಸುವಿನ ಹೆಸ್ರಲ್ಲಿ ನಂಬಿಕೆ ಇದೆ. ನೀವು ನೋಡ್ತಿರೋ ಈ ವ್ಯಕ್ತಿ ಆತನ ಹೆಸ್ರಿನ ಮೂಲಕನೇ ಚೆನ್ನಾಗಿ ಆಗಿದ್ದಾನೆ” ಅಂತ ಪೇತ್ರ ಎಲ್ಲಾ ಜನ್ರ ಮುಂದೆ ಹೇಳಿದ. (ಅ. ಕಾ. 3:12-16) ಮುಂದೆ ಪೇತ್ರ ಕ್ರೈಸ್ತರಿಗೆ ಪತ್ರ ಬರಿವಾಗ ದೀನತೆ ಬೆಳೆಸ್ಕೊಳ್ಳಿ ಅಂತ ಸಲಹೆ ಕೊಟ್ಟ. ಅವನು ಮೂಲಭಾಷೆಯಲ್ಲಿ ಇದನ್ನ ಹೇಗೆ ಹೇಳಿದ್ದಾನೆ ಗೊತ್ತಾ? ದೀನತೆಯನ್ನ ಬಟ್ಟೆ ತರ ಹಾಕೊಳಿ ಅಂತ ಹೇಳಿದ್ದಾನೆ. ಇದು ಯೇಸು ಸೊಂಟಕ್ಕೆ ಬಟ್ಟೆ ಕಟ್ಕೊಂಡು ಶಿಷ್ಯರ ಕಾಲು ತೊಳೆದಿದ್ದನ್ನ ನೆನಪಿಸುತ್ತೆ ಅಲ್ವಾ?—1 ಪೇತ್ರ 5:5 ಓದಿ.
ಪೇತ್ರ ಅದ್ಭುತ ಮಾಡಿದ ಮೇಲೆ ಗೌರವ ಮತ್ತು ಕೀರ್ತಿನ ಯೆಹೋವ ಮತ್ತು ಯೇಸುಗೆ ಕೊಟ್ಟ. ನಾವೂ ಬೇರೆಯವ್ರಿಗೆ ಸಹಾಯ ಮಾಡ್ವಾಗ ಹೊಗಳಿಕೆಗೋಸ್ಕರ ಕಾಯದೇ ದೀನತೆ ತೋರಿಸಬೇಕು (ಪ್ಯಾರ 11-12 ನೋಡಿ)
12. ದೀನತೆ ಬೆಳೆಸ್ಕೊಳ್ಳೋದ್ರಲ್ಲಿ ಏನೆಲ್ಲ ಸೇರಿದೆ?
12 ಪೇತ್ರನ ತರ ನಾವು ಹೇಗೆ ದೀನತೆ ಬೆಳೆಸ್ಕೊಬಹುದು? ದೀನತೆ ಅನ್ನೋದು ಬರೀ ಮಾತಲ್ಲಿ ಮಾತ್ರ ಕಾಣಿಸೋದಲ್ಲ ಅಂತ ನೆನಪಿಡಬೇಕು. ಯಾಕಂದ್ರೆ ಪೇತ್ರ ಬಳಸಿರೋ “ತಗ್ಗಿಬಗ್ಗಿ ನಡಿರಿ” ಅನ್ನೋ ಪದದಲ್ಲಿ ನಾವು ಯೋಚ್ನೆ ಮಾಡೋ ರೀತಿನೂ ಸೇರಿದೆ. ನಾವು ಬೇರೆಯವ್ರಿಗೆ ಸಹಾಯ ಮಾಡೋಕೆ ಯೆಹೋವನ ಮೇಲೆ ಮತ್ತೆ ಜನ್ರ ಮೇಲೆ ನಮಗಿರೋ ಪ್ರೀತಿನೇ ಕಾರಣ ಆಗಿರಬೇಕು. ಬದಲಿಗೆ ಅವರು ನಮ್ಮನ್ನ ಮೆಚ್ಕೊಂಡು ಹಾಡಿ ಹೊಗಳಬೇಕು ಅನ್ನೋದಲ್ಲ. ನಮ್ಮಲ್ಲಿ ನಿಜವಾಗ್ಲೂ ದೀನತೆ ಇದ್ರೆ ನಮಗೆ ಗೌರವ ಸಿಗ್ಲಿ, ಸಿಗ್ದೇ ಇರ್ಲಿ, ನಾವು ಯೆಹೋವನ ಸೇವೆ ಮಾಡ್ತಾ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾ ಇರ್ತೀವಿ.—ಮತ್ತಾ. 6:1-4.
‘ಚೆನ್ನಾಗಿ ಯೋಚ್ನೆ ಮಾಡ್ತಾ ಇರಿ’
13. “ಚೆನ್ನಾಗಿ ಯೋಚ್ನೆ” ಮಾಡೋದು ಅಂದ್ರೆ ಏನು?
13 ಚೆನ್ನಾಗಿ ಯೋಚ್ನೆ ಮಾಡೋದು ಅಂದ್ರೆ ಏನು? (1 ಪೇತ್ರ 4:7) ಚೆನ್ನಾಗಿ ಯೋಚ್ನೆ ಮಾಡೋ ಒಬ್ಬ ಕ್ರೈಸ್ತ ಒಂದು ನಿರ್ಧಾರ ಮಾಡೋ ಮುಂಚೆ ಅದ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ತಿಳ್ಕೊಳ್ಳೋಕೆ ತನ್ನ ಕೈಲಾದ ಎಲ್ಲ ಪ್ರಯತ್ನ ಮಾಡ್ತಾನೆ. ಹೀಗೆ ತನ್ನ ಜೀವನದಲ್ಲಿ ಅವನಿಗೆ ಯೆಹೋವನಿಗಿಂತ ಬೇರೆ ಯಾವುದೂ ಮುಖ್ಯ ಅಲ್ಲ ಅಂತ ಚೆನ್ನಾಗಿ ಗೊತ್ತಿರುತ್ತೆ. ‘ನನಗೇ ಎಲ್ಲ ಗೊತ್ತು’ ಅಂತ ಯೋಚ್ನೆ ಮಾಡದೇ ತನ್ನ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ತಾನೆ. ಅಷ್ಟೇ ಅಲ್ಲ ಪ್ರಾರ್ಥನೆಲಿ ಯೆಹೋವನ ಹತ್ರ ಸಹಾಯ ಕೇಳ್ತಾ ಆತನ ಮೇಲೆ ಆತ್ಕೊಳ್ತಾನೆ.
14. ಒಂದ್ಸಲ ಪೇತ್ರ ಏನು ಮಾಡ್ಬಿಟ್ಟ? ಯಾಕೆ?
14 ಯೇಸು ತಾನು ಸಾಯೋ ಹಿಂದಿನ ರಾತ್ರಿ ತನ್ನೆಲ್ಲ ಅಪೊಸ್ತಲರಿಗೆ “ನೀವೆಲ್ರೂ ಈ ರಾತ್ರಿ ನನ್ನನ್ನ ಬಿಟ್ಟು ಓಡಿಹೋಗ್ತೀರ” ಅಂತ ಎಚ್ಚರಿಸಿದನು. ಪೇತ್ರ ಈ ಮಾತನ್ನ ಒಪ್ಪದೇ “ಬೇರೆ ಎಲ್ರೂ ಬಿಟ್ಟು ಹೋದ್ರೂ ನಾನು ಮಾತ್ರ ನಿನ್ನನ್ನ ಬಿಟ್ಟು ಹೋಗಲ್ಲ” ಅಂದ. ಆ ರಾತ್ರಿ ಯೇಸು ತನ್ನ ಶಿಷ್ಯರಿಗೆ “ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು” ಅನ್ನೋ ಬುದ್ಧಿ ಮಾತನ್ನ ಹೇಳಿದನು. (ಮತ್ತಾ. 26:31, 33, 41) ಒಂದುವೇಳೆ ಪೇತ್ರ ಈ ಸಲಹೆ ಪಾಲಿಸಿದಿದ್ರೆ ‘ನಾನು ಯೇಸುವಿನ ಶಿಷ್ಯ’ ಅಂತ ಎಲ್ರ ಮುಂದೆ ಧೈರ್ಯವಾಗಿ ಹೇಳ್ತಿದ್ದ. ಆದ್ರೆ ಪೇತ್ರ ಈ ಸಲಹೆಯನ್ನ ಪಾಲಿಸಲಿಲ್ಲ. ಅದಕ್ಕೇ ಯೇಸು ಯಾರು ಅಂತಾನೇ ನನಗೆ ಗೊತ್ತಿಲ್ಲ ಅಂತ ಹೇಳಿಬಿಟ್ಟ. ಆಮೇಲೆ ಹೋಗಿ ಪಶ್ಚಾತ್ತಾಪಪಟ್ಟ.—ಮತ್ತಾ. 26:69-75.
15. ಯೇಸು ತಾನು ಸಾಯೋ ಹಿಂದಿನ ರಾತ್ರಿನೂ ಯೆಹೋವನ ಮೇಲೆ ಆತ್ಕೊಂಡ ಅಂತ ಹೇಗೆ ಹೇಳಬಹುದು?
15 ಯೆಹೋವನ ಮೇಲೆ ಯೇಸು ಪೂರ್ತಿ ಆತ್ಕೊಂಡನು. ಯೇಸು ಒಬ್ಬ ಪರಿಪೂರ್ಣ ವ್ಯಕ್ತಿ ಆಗಿದ್ರೂ ಸಹಾಯಕ್ಕೋಸ್ಕರ ಪದೇಪದೇ ಪ್ರಾರ್ಥನೆ ಮಾಡ್ತಾ ಇದ್ದನು. ಇದ್ರಿಂದ ಯೆಹೋವನ ಯೋಚ್ನೆ ಪ್ರಕಾರನೇ ನಡ್ಕೊಳೋಕೆ ಬೇಕಾದ ಧೈರ್ಯ ಮತ್ತೆ ಬಲ ಆತನಿಗೆ ಸಿಕ್ತು. (ಮತ್ತಾ. 26:39, 42, 44; ಯೋಹಾ. 18:4, 5) ಯೇಸು ಈ ತರ ಪದೇಪದೇ ಪ್ರಾರ್ಥನೆ ಮಾಡಿದ್ದನ್ನ ಕಣ್ಣಾರೆ ನೋಡಿದ ಪೇತ್ರ ಪ್ರಾರ್ಥನೆ ಎಷ್ಟು ಮುಖ್ಯ ಅಂತ ಅರ್ಥ ಮಾಡ್ಕೊಂಡ. ಅದನ್ನ ಅವನು ಜೀವನ ಪೂರ್ತಿ ಮರಿಲಿಲ್ಲ!
16. ಪೇತ್ರ ಚೆನ್ನಾಗಿ ಯೋಚ್ನೆ ಮಾಡೋಕೆ ಕಲಿತ ಅಂತ ಹೇಗೆ ತೋರಿಸ್ಕೊಟ್ಟ? (1 ಪೇತ್ರ 4:7)
16 ಹೋಗ್ತಾಹೋಗ್ತಾ ಪೇತ್ರ ಪ್ರಾರ್ಥನೆ ಮಾಡ್ತಾ ಯೆಹೋವನ ಮೇಲೆ ಆತ್ಕೊಳೋಕೆ ಅಭ್ಯಾಸ ಮಾಡ್ಕೊಂಡ. ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ್ಮೇಲೆ ಪೇತ್ರನಿಗೆ ಮತ್ತು ಬೇರೆ ಅಪೊಸ್ತಲರಿಗೆ ‘ನಿಮಗೆ ಪವಿತ್ರ ಶಕ್ತಿ ಸಿಗುತ್ತೆ, ಆಗ ನೀವು ಎಲ್ಲ ಕಡೆ ಸಿಹಿಸುದ್ದಿ ಸಾರೋಕೆ ಆಗುತ್ತೆ’ ಅಂತ ಹೇಳಿದನು. ಆದ್ರೆ ಅದು ಸಿಗೋ ತನಕ ಯೆರೂಸಲೇಮಲ್ಲೇ ಇದ್ದು ಕಾಯೋಕೆ ಅವ್ರಿಗೆ ಹೇಳಿದನು. (ಲೂಕ 24:49; ಅ. ಕಾ. 1:4, 5) ಈ ತರ ಕಾಯ್ತಾ ಇರುವಾಗ ಪೇತ್ರ ಏನು ಮಾಡಿದ ಗೊತ್ತಾ? ಪೇತ್ರ ಮತ್ತೆ ಬೇರೆ ಕ್ರೈಸ್ತರು “ಪ್ರಾರ್ಥನೆ ಮಾಡ್ತಾ ಇದ್ರು” ಅಂತ ಬೈಬಲ್ ಹೇಳುತ್ತೆ. (ಅ. ಕಾ. 1:13, 14) ಆಮೇಲೆ ಪೇತ್ರ ಬರೆದ ಮೊದಲ ಪತ್ರದಲ್ಲಿ ಆಗಿದ್ದ ಕ್ರೈಸ್ತರಿಗೆ ಚೆನ್ನಾಗಿ ಯೋಚ್ನೆ ಮಾಡಿ, ಪ್ರಾರ್ಥನೆ ಮಾಡಿ ಯೆಹೋವನ ಮೇಲೆ ಆತ್ಕೊಳಿ ಅಂತ ಬುದ್ಧಿವಾದ ಹೇಳಿದ. (1 ಪೇತ್ರ 4:7 ಓದಿ) ಹೀಗೆ ಪೇತ್ರ ಯೆಹೋವನ ಮೇಲೆ ಆತ್ಕೊಳ್ಳೋಕೆ ಕಲಿತ ಮತ್ತು ಕ್ರೈಸ್ತ ಸಭೆಗೆ ಒಂದು ಕಂಬ ಆದ.—ಗಲಾ. 2:9.
17. ನಾವೆಲ್ರೂ ಏನು ಮಾಡ್ತಾನೇ ಇರಬೇಕು? (ಚಿತ್ರ ನೋಡಿ.)
17 ನಾವು ಚೆನ್ನಾಗಿ ಯೋಚ್ನೆ ಮಾಡಬೇಕು ಅಂದ್ರೆ ಯೆಹೋವನಿಗೆ ಪ್ರಾರ್ಥನೆ ಮಾಡಿ ಸಹಾಯ ಕೇಳ್ತಾ ಇರಬೇಕು. ನಮಗೆ ಎಷ್ಟೇ ಶಕ್ತಿ ಸಾಮರ್ಥ್ಯ ಇದ್ರೂ, ಎಷ್ಟೇ ಬುದ್ಧಿ ಇದ್ರೂ, ‘ಇದೇನು ದೊಡ್ಡ ಸಮಸ್ಯೆ ಅಲ್ಲ ಅಂತ ಅನಿಸಿದ್ರೂ’ ಯಾವಾಗ್ಲೂ ಪ್ರಾರ್ಥನೆ ಮಾಡೋದು ಮುಖ್ಯ. ಹಾಗಾಗಿ ತೀರ್ಮಾನಗಳನ್ನ ಮಾಡುವಾಗ ಅದ್ರಲ್ಲೂ ದೊಡ್ಡ ದೊಡ್ಡ ತೀರ್ಮಾನ ಮಾಡುವಾಗಂತೂ ಪ್ರಾರ್ಥನೆ ಮಾಡ್ಲೇಬೇಕು. ಯಾಕಂದ್ರೆ ನಮಗೆ ಯಾವುದು ಒಳ್ಳೇದು ಅಂತ ನಮಗಿಂತ ಜಾಸ್ತಿ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನು ನಮ್ಮನ್ನ ಚೆನ್ನಾಗಿ ಮಾರ್ಗದರ್ಶಿಸ್ತಾನೆ.
ಪೇತ್ರ ಪ್ರಾರ್ಥನೆ ಮಾಡಿ ಯೆಹೋವನ ಮೇಲೆ ಆತ್ಕೊಂಡ. ನಾವೂ ಮುಖ್ಯವಾದ ನಿರ್ಧಾರಗಳನ್ನ ಮಾಡುವಾಗ ಪ್ರಾರ್ಥನೆ ಮಾಡಬೇಕು (ಪ್ಯಾರ 17 ನೋಡಿ)a
18. ಪೇತ್ರನಿಂದ ನಾವೇನು ಕಲಿತೀವಿ?
18 ಯೆಹೋವನಲ್ಲಿ ಇರೋ ಗುಣಗಳನ್ನ ತೋರಿಸೋ ಸಾಮರ್ಥ್ಯನ ಆತನೇ ನಮಗೆ ಕೊಟ್ಟಿದ್ದಾನೆ. (ಆದಿ. 1:26) ನಿಜ, ನಾವು ಯೆಹೋವನನ್ನ ಪರಿಪೂರ್ಣವಾಗಿ ಅನುಕರಿಸೋಕೆ ಆಗಲ್ಲ. (ಯೆಶಾ. 55:9) ಆದ್ರೆ ಪೇತ್ರನ ತರ ನಾವು ನಮ್ಮ ಕೈಲಾದಷ್ಟು ಪ್ರಯತ್ನ ಹಾಕಿ ನಮ್ಮ ಯೋಚ್ನೆನ ಯೆಹೋವನ ಯೋಚ್ನೆಗೆ ಹೊಂದಿಸ್ಕೊಬಹುದು. ಹಾಗಾಗಿ ನಾವೂ ಯೆಹೋವನ ತರ ಯೋಚ್ನೆ ಮಾಡೋಕೆ ಕಲಿಯೋಣ, ದೀನತೆ ತೋರಿಸೋಣ, ಪ್ರಾರ್ಥನೆ ಮಾಡ್ತಾ ಯೆಹೋವನ ಮೇಲೆ ಆತ್ಕೊಳ್ಳೋಣ.
ಗೀತೆ 38 ಮಾಡುವನು ಸ್ಥಿರ ನೀಡುವನು ಬಲ!
a ಚಿತ್ರ ವಿವರಣೆ: ಇಂಟರ್‌ವ್ಯೂಗೆ ಹೋಗೋ ಮುಂಚೆ ಒಬ್ಬ ಸಹೋದರಿ ಹೊರಗಡೆ ಕೂತ್ಕೊಂಡು ಪ್ರಾರ್ಥನೆ ಮಾಡ್ತಿದ್ದಾಳೆ.