ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಮಾರ್ಚ್‌ ಪು. 26-31
  • ಯೆಹೋವನ ಕೈ ಮೋಟುಗೈ ಅಲ್ವೇ ಅಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಕೈ ಮೋಟುಗೈ ಅಲ್ವೇ ಅಲ್ಲ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮೋಶೆ ಮತ್ತು ಇಸ್ರಾಯೇಲ್ಯರಿಂದ ಕಲಿಯೋ ಪಾಠ
  • ಹಣಕಾಸಿನ ಸಮಸ್ಯೆ ಎದುರಿಸುವಾಗ
  • ‘ವಯಸ್ಸಾದ್ಮೇಲೆ ಹೇಗಪ್ಪಾ ಜೀವನ’ ಅನ್ನೋ ಚಿಂತೆ!
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಮಾರ್ಚ್‌ ಪು. 26-31

ಅಧ್ಯಯನ ಲೇಖನ 13

ಗೀತೆ 107 ಯೆಹೋವನ ಅಪ್ಪಟ ಪ್ರೀತಿ

ಯೆಹೋವನ ಕೈ ಮೋಟುಗೈ ಅಲ್ವೇ ಅಲ್ಲ!

“ಯೆಹೋವನ ಕೈ ಮೋಟುಗೈನಾ?”—ಅರ. 11:23, ಪಾದಟಿಪ್ಪಣಿ.

ಈ ಲೇಖನದಲ್ಲಿ ಏನಿದೆ?

ನಾವು ಬದುಕೋಕೆ ಬೇಕಾಗಿರೋದನ್ನ ಯೆಹೋವ ಕೊಟ್ಟೆ ಕೊಡ್ತಾನೆ ಅಂತ ನಂಬೋಕೆ ಮತ್ತು ಈಗಾಗಲೇ ನಮ್ಮಲ್ಲಿರೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ನೋಡೋಣ.

1. ಈಜಿಪ್ಟಿಂದ ಇಸ್ರಾಯೇಲ್ಯರನ್ನ ಬಿಡಿಸ್ಕೊಂಡು ಬರುವಾಗ ಮೋಶೆ ಹೇಗೆಲ್ಲ ನಂಬಿಕೆ ತೋರಿಸಿದ?

ನಂಬಿಕೆ ತೋರಿಸಿದ ಎಷ್ಟೋ ಜನ್ರ ಹೆಸ್ರು ಇಬ್ರಿಯ ಪುಸ್ತಕದಲ್ಲಿದೆ. ಅದ್ರಲ್ಲಿ ಮೋಶೆ ತೋರಿಸಿದ ನಂಬಿಕೆಯನ್ನ ಮರೆಯೋಕೆ ಆಗಲ್ಲ. (ಇಬ್ರಿ. 3:2-5; 11:23-25) ಮೋಶೆ ಭಯಂಕರವಾದ ಫರೋಹನ ಸೈನ್ಯನ ನೋಡಿ ನಡುಗಲಿಲ್ಲ. ಯೆಹೋವನ ಮೇಲೆ ನಂಬಿಕೆ ಇಟ್ಟು ಇಸ್ರಾಯೇಲ್ಯರನ್ನ ಈಜಿಪ್ಟಿಂದ ಹೊರಗೆ ಕರ್ಕೊಂಡು ಬಂದ. ಅವ್ರೆಲ್ರನ್ನ ಕೆಂಪು ಸಮುದ್ರ ದಾಟಿಸಿದ, ಕಾಡಲ್ಲಿ ಮುನ್ನಡೆಸಿದ. (ಇಬ್ರಿ. 11:27-29) ಆದ್ರೆ ಹೋಗ್ತಾ ಹೋಗ್ತಾ ಯೆಹೋವನ ಮೇಲೆ ಇಸ್ರಾಯೇಲ್ಯರು ನಂಬಿಕೆ ಕಳ್ಕೊಂಡ್ರೂ ಮೋಶೆ ಮಾತ್ರ ನಂಬಿಕೆ ಕಳ್ಕೊಳ್ಳಿಲ್ಲ. ಅವನಿಟ್ಟ ನಂಬಿಕೆ ಸುಳ್ಳಾಯ್ತಾ? ಇಲ್ಲ. ಬರಡು ಭೂಮಿ ತರ ಇದ್ದ ಜಾಗದಲ್ಲಿ ಯೆಹೋವ ಆ ಲಕ್ಷಾಂತ್ರ ಜನ್ರಿಗೆ ಊಟ ನೀರು ಕೊಟ್ಟು ಕಾಪಾಡಿದನು.a—ವಿಮೋ. 15:22-25; ಕೀರ್ತ. 78:23-25.

2. ‘ನನ್ನ ಕೈ ಮೋಟುಗೈನಾ’ ಅಂತ ಯೆಹೋವ ಮೋಶೆ ಹತ್ರ ಯಾಕೆ ಕೇಳಿದನು? (ಅರಣ್ಯಕಾಂಡ 11:21-23)

2 ಮೋಶೆಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಇತ್ತು ಅನ್ನೋದ್ರಲ್ಲಿ ಡೌಟೇ ಇಲ್ಲ. ಮೋಶೆ ಇಸ್ರಾಯೇಲ್ಯರನ್ನ ಬಿಡಿಸ್ಕೊಂಡು ಬಂದು ಒಂದು ವರ್ಷ ಆಗಿದೆ. ಈಗ ಮೋಶೆಗೆ ‘ಈ ಕಾಡಲ್ಲಿ ಇಷ್ಟು ಲಕ್ಷಾಂತ್ರ ಜನ್ರಿಗೆ ಮಾಂಸ ಕೊಡೋಕೆ ಯೆಹೋವನ ಕೈಯಲ್ಲಿ ಆಗುತ್ತಾ’ ಅಂತ ಡೌಟ್‌ ಬರುತ್ತೆ. ಅದಕ್ಕೆ ಯೆಹೋವ ಮೋಶೆಗೆ, ‘ನನ್ನ ಕೈ ಮೋಟುಗೈನಾ?’ ಅಂತ ಕೇಳಿದನು. (ಅರಣ್ಯಕಾಂಡ 11:21-23, ಪಾದಟಿಪ್ಪಣಿ ಓದಿ.) ಇಲ್ಲಿ ‘ಯೆಹೋವನ ಕೈ’ ಅಂತ ಹೇಳಿದ್ರೆ, ಪವಿತ್ರ ಶಕ್ತಿ ಅಥವಾ ತನ್ನ ಕೆಲಸ ಮಾಡೋಕೆ ಯೆಹೋವ ಬಳಸೋ ಶಕ್ತಿಯನ್ನು ಸೂಚಿಸುತ್ತೆ. ಒಂದರ್ಥದಲ್ಲಿ ಯೆಹೋವ ಮೋಶೆ ಹತ್ರ ‘ನಾನು ಏನು ಹೇಳ್ತಿದ್ದೀನೋ ಅದನ್ನ ನನ್ನ ಕೈಯಲ್ಲಿ ಮಾಡಕ್ಕಾಗಲ್ಲ ಅಂತ ನೀನು ಅಂದ್ಕೊಳ್ತಿದ್ಯಾ?’ ಅಂತ ಕೇಳಿದ ತರ ಇತ್ತು.

3. ಮೋಶೆ ಮತ್ತು ಇಸ್ರಾಯೇಲ್ಯರ ಬಗ್ಗೆ ಇರೋ ಈ ಘಟನೆ ಬಗ್ಗೆ ನಾವ್ಯಾಕೆ ತಿಳ್ಕೊಬೇಕು?

3 ‘ನನ್ನ ಮತ್ತು ನನ್ನ ಕುಟುಂಬನ ಯೆಹೋವ ನಿಜವಾಗ್ಲೂ ನೋಡ್ಕೊಳ್ತಾನಾ?’ ಅಂತ ನಿಮಗೆ ಯಾವತ್ತಾದ್ರೂ ಡೌಟ್‌ ಬಂದಿದ್ಯಾ? ನಿಮಗೆ ಬಂದಿದ್ಯೋ ಇಲ್ವೋ, ಒಂದ್ಸಲ ಮೋಶೆಗೆ ಮತ್ತು ಇಸ್ರಾಯೇಲ್ಯರಿಗೆ ಆ ಡೌಟ್‌ ಬಂದ್ಬಿಡ್ತು. ಈ ಲೇಖನದಲ್ಲಿ ಇಸ್ರಾಯೇಲ್ಯರು ಮತ್ತು ಮೋಶೆ ಯಾಕೆ ಯೆಹೋವನಲ್ಲಿ ನಂಬಿಕೆ ಕಳ್ಕೊಂಡ್ರು? ಯೆಹೋವನ ಕೈ ಮೋಟುಗೈ ಅಲ್ವೇ ಅಲ್ಲ ಅಂತ ನಂಬೋಕೆ ಯಾವ ವಚನಗಳು ಸಹಾಯ ಮಾಡುತ್ತೆ ಅಂತ ನೋಡೋಣ.

ಮೋಶೆ ಮತ್ತು ಇಸ್ರಾಯೇಲ್ಯರಿಂದ ಕಲಿಯೋ ಪಾಠ

4. ಇಸ್ರಾಯೇಲ್ಯರು ಯಾಕೆ ಯೆಹೋವನ ಮೇಲೆ ನಂಬಿಕೆ ಇಡದೆ ಡೌಟ್‌ ಪಡೋಕೆ ಶುರು ಮಾಡಿದ್ರು?

4 ಇಸ್ರಾಯೇಲ್ಯರು ಯಾಕೆ ಯೆಹೋವನ ಮೇಲೆ ನಂಬಿಕೆ ಇಡದೆ ಡೌಟ್‌ ಪಡೋಕೆ ಶುರು ಮಾಡಿದ್ರು? ಈಜಿಪ್ಟಿಂದ ಇಸ್ರಾಯೇಲ್ಯರು ಬರುವಾಗ, ಅವ್ರ ಜೊತೇಲಿ “ಇಸ್ರಾಯೇಲ್ಯರಲ್ಲದ ಬೇರೆ ಜನ್ರು” ಕೂಡ ಬಂದ್ರು. (ವಿಮೋ. 12:38, ಪಾದಟಿಪ್ಪಣಿ; ಧರ್ಮೋ. 8:15) ಇವ್ರೆಲ್ಲಾ ಈಗ ಸುಮಾರು ಸಮಯದಿಂದ ಕಾಡಲ್ಲೇ ಇದ್ದಾರೆ. ಇಸ್ರಾಯೇಲ್ಯರಲ್ಲದ ಜನ್ರಿಗೆ ಇಷ್ಟು ಸಮಯ ಅದೇ ಮನ್ನ ತಿಂದು ತಿಂದು ಬೇಸತ್ತು ಹೋಗಿದೆ. (ಅರ. 11:4-6) ಇವ್ರ ಜೊತೆ ಇಸ್ರಾಯೇಲ್ಯರೂ ಸೇರ್ಕೊಂಡು ಗೊಣಗೋಕೆ ಶುರು ಮಾಡಿದ್ರು. ಇವ್ರೆಲ್ರಿಗೂ ಈಜಿಪ್ಟ್‌ನಲ್ಲಿ ಸಿಗ್ತಾ ಇದ್ದ ಆಹಾರ ಬೇಕು ಅಂತ ಆಸೆ ಬಂತು, ಅವ್ರೆಲ್ಲ ಮೋಶೆ ಬೆನ್ನತ್ತಿದ್ರು. ಅವ್ರ ಈ ಪರದಾಟ ನೋಡಿದ ಮೋಶೆಗೆ ‘ಇವ್ರಿಗೆಲ್ಲಾ ಮಾಂಸ ತಂದ್ಕೊಡೋ ದೊಡ್ಡ ಭಾರ ನನ್ನ ತಲೆ ಮೇಲೆ ಬಿತ್ತಾ’ ಅಂತ ಅನಿಸ್ತು.—ಅರ. 11:13, 14.

5-6. (ಎ) ಬೇರೆ ಜನ್ರು ಇಸ್ರಾಯೇಲ್ಯರ ಮೇಲೆ ಯಾವ ಪ್ರಭಾವ ಬೀರಿದ್ರು? (ಬಿ) ಇದ್ರಿಂದ ನಾವೇನು ಕಲಿಬಹುದು?

5 ಬೇರೆ ಜನ್ರು ಯೆಹೋವ ಕೊಡ್ತಿರೋದ್ರಲ್ಲಿ ತೃಪ್ತಿ ಪಡದೇ ಗೊಣಗೋಕೆ ಶುರು ಮಾಡಿದ್ರು. ‘ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು’ ಅನ್ನೋ ತರ ಇಸ್ರಾಯೇಲ್ಯರು ಕೂಡ ಅವ್ರನ್ನ ನೋಡಿ ಗೊಣಗೋಕೆ ಶುರು ಮಾಡಿದ್ರು. ಯೆಹೋವನ ಮೇಲೆ ನಂಬಿಕೆ ಕಳ್ಕೊಂಡ್ರು. ನಮ್ಮ ಜೊತೇಲಿ ಇರೋರು ಯೆಹೋವ ಮಾಡಿರೋದಕ್ಕೆ ಕೃತಜ್ಞತೆ ತೋರಿಸದೆ, ಅದ್ರಲ್ಲಿ ತೃಪ್ತಿ ಪಡದೇ ಇರೋದನ್ನ ನೋಡಿದಾಗ ನಾವು ಅದೇ ಗುಣನ ಕಲಿತು ಬಿಡಬಹುದು. ‘ಮುಂಚೆ ನನ್ನ ಜೀವನ ಎಷ್ಟು ಚೆನ್ನಾಗಿತ್ತು’ ಅಂತ ಅಂದ್ಕೊಬಹುದು ಅಥವಾ ಬೇರೆಯವ್ರನ್ನ ನೋಡಿ ಹೊಟ್ಟೆಕಿಚ್ಚು ಪಡಬಹುದು. ಆದ್ರೆ ನಮ್ಮ ಪರಿಸ್ಥಿತಿ ಹೇಗೆ ಇರ್ಲಿ, ಇರೋದ್ರಲ್ಲೇ ತೃಪ್ತಿ ಪಡೋಕೆ ಕಲಿತ್ರೆ ಯಾವಾಗ್ಲೂ ಖುಷಿಯಾಗಿ ಇರ್ತೀವಿ.

6 ಯೆಹೋವ ಇಸ್ರಾಯೇಲ್ಯರಿಗೆ ಮಾತು ಕೊಟ್ಟಿದ್ದು ‘ಕಾಡಲ್ಲಿರುವಾಗ ನಿಮಗೆ ಬೇಕಾಗಿರೋದನ್ನೆಲ್ಲ ಕೊಡ್ತೀನಿ ಅಂತ ಅಲ್ಲ. ಮಾತು ಕೊಟ್ಟ ದೇಶಕ್ಕೆ ಹೋದ್ಮೇಲೆ ನಿಮಗೆ ಅಗತ್ಯ ಇರೋದನ್ನೆಲ್ಲ ಕೊಡ್ತೀನಿ, ನೀವು ಅಂದ್ಕೊಳ್ಳೋದಕ್ಕಿಂತ ತುಂಬ ಚೆನ್ನಾಗಿ ನೋಡ್ಕೊಳ್ತೀನಿ’ ಅಂತ. ಈ ಮಾತಿನ ಬಗ್ಗೆ ಇಸ್ರಾಯೇಲ್ಯರು ಯೋಚ್ನೆ ಮಾಡಿ ಅದ್ರ ಮೇಲೆ ನಂಬಿಕೆ ಇಡಬೇಕಿತ್ತು. ಅದೇ ತರ ಹೊಸ ಲೋಕದಲ್ಲಿ ನಮಗೂ ‘ತುಂಬಾ ವಿಷಯಗಳನ್ನ ಕೊಡ್ತೀನಿ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ನಾವು ಅದ್ರ ಬಗ್ಗೆ ಯೋಚ್ನೆ ಮಾಡಬೇಕೇ ಹೊರತು ಈಗ ನಮ್ಮ ಹತ್ರ ಏನಿಲ್ಲ ಅನ್ನೋದ್ರ ಬಗ್ಗೆ ಅಲ್ಲ. ಅಷ್ಟೇ ಅಲ್ಲ ಯೆಹೋವನ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸ್ಕೊಳ್ಳೋಕ್ಕೆ ಸಹಾಯ ಮಾಡೋ ಬೈಬಲ್‌ ವಚನಗಳ ಬಗ್ಗೆನೂ ಯೋಚ್ನೆ ಮಾಡಬೇಕು.

7. ಯೆಹೋವನ ಕೈ ಮೋಟುಗೈ ಅಲ್ಲ ಅಂತ ನಾವು ಹೇಗೆ ಹೇಳಬಹುದು?

7 ಆದ್ರೂ ಯೆಹೋವ ಮೋಶೆಗೆ ‘ನನ್ನ ಕೈ ಮೋಟುಗೈನಾ’ ಅಂತ ಯಾಕೆ ಕೇಳಿದನು? ಈ ತರ ಕೇಳೋ ಮೂಲಕ ಯೆಹೋವ ಎರಡು ವಿಷ್ಯಗಳನ್ನ ಮೋಶೆಗೆ ಅರ್ಥ ಮಾಡಿಸಿದನು. ಒಂದು, ಆತನ ಶಕ್ತಿಗೆ ಮಿತಿನೇ ಇಲ್ಲ. ಎರಡು, ಆತನು ತನ್ನ ಶಕ್ತಿನ ಎಲ್ಲಿ ಬೇಕಾದ್ರು, ಹೇಗೆ ಬೇಕಾದ್ರೂ ಬಳಸಬಹುದು. ಹೀಗೆ ಯೆಹೋವ “ತನ್ನ ಬಲಿಷ್ಠ ಕೈಯಿಂದ, ಚಾಚಿದ ತೋಳುಗಳಿಂದ” ಇಸ್ರಾಯೇಲ್ಯರು ಕಾಡಿನ ಯಾವುದೋ ಒಂದು ಮೂಲೆಲಿದ್ರೂ ಅವ್ರಿಗೆ ಮಾಂಸ ಕೊಡೋಷ್ಟು ಶಕ್ತಿ ಇದೆ ಅಂತ ತೋರಿಸಿದನು. (ಕೀರ್ತ. 136:11, 12) ಹಾಗಾಗಿ ಜೀವನದಲ್ಲಿ ಕಷ್ಟಗಳು ಬರುವಾಗ ಯೆಹೋವ ಖಂಡಿತ ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬೇಕು.—ಕೀರ್ತ. 138:6, 7.

8. ಇಸ್ರಾಯೇಲ್ಯರು ಮಾಡಿದ ತಪ್ಪನ್ನ ನಾವು ಮಾಡದೇ ಇರೋಕೆ ಯಾವ ಗುಣನ ಬೆಳೆಸ್ಕೊಬಾರದು? (ಚಿತ್ರ ನೋಡಿ.)

8 ಯೆಹೋವ ಮಾತು ಕೊಟ್ಟ ತರಾನೇ ಇಸ್ರಾಯೇಲ್ಯರಿಗೆ ಮಾಂಸ ಕೊಟ್ಟನು. ಲೆಕ್ಕ ಇಲ್ಲದಷ್ಟು ಲಾವಕ್ಕಿಗಳನ್ನ ಅವ್ರಿಗೆ ಕೊಟ್ಟನು. ಯೆಹೋವ ಮಾಡಿದ ಈ ಅದ್ಭುತಕ್ಕೆ ಥ್ಯಾಂಕ್ಸ್‌ ಹೇಳೋದನ್ನ ಬಿಟ್ಟು, ಒಂದು ಕ್ಷಣನೂ ಸುಮ್ನಿರದೇ ಅತಿಯಾಸೆಯಿಂದ ಲಾವಕ್ಕಿಗಳನ್ನ ಕೂಡಿಸ್ಕೊಳ್ಳೋದ್ರಲ್ಲೇ ಮುಳುಗಿ ಹೋದ್ರು. ಇದನ್ನ ನೋಡಿ ಯೆಹೋವನಿಗೆ ತುಂಬ ಕೋಪ ಬಂತು. ಅದಕ್ಕೇ ‘ಆಹಾರಕ್ಕಾಗಿ ಅತಿಯಾಸೆ ಪಟ್ಟವ್ರಿಗೆ’ ಶಿಕ್ಷೆ ಕೊಟ್ಟನು. (ಅರ. 11:31-34) ಈ ಉದಾಹರಣೆಯಿಂದ ನಾವು ಒಂದು ಒಳ್ಳೇ ಪಾಠ ಕಲಿಬಹುದು. ನಾವು ಯಾವತ್ತೂ ಯಾವ ವಿಷಯದಲ್ಲೂ ಅತಿಯಾಸೆ ಪಡಬಾರದು. ನಾವು ಬಡವರಾಗಿರಲಿ, ಶ್ರೀಮಂತರಾಗಿರಲಿ ಯೆಹೋವ ಮತ್ತು ಯೇಸು ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಂಡು “ಸ್ವರ್ಗದಲ್ಲಿ ಆಸ್ತಿ” ಮಾಡ್ಕೋಬೇಕು. (ಮತ್ತಾ. 6:19, 20; ಲೂಕ 16:9) ಆಗ ನಮಗೆ ಬೇಕಾಗಿರೋದನ್ನ ಯೆಹೋವ ಸರಿಯಾದ ಸಮಯದಲ್ಲಿ ಕೊಟ್ಟೇ ಕೊಡ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ.

ಇಸ್ರಾಯೇಲ್ಯರು ಕಾಡಲ್ಲಿ ರಾತ್ರಿ ಸಿಕ್ಕಾಪಟ್ಟೆ ಲಾವಕ್ಕಿಗಳನ್ನ ಕೂಡಿಸ್ಕೊಳ್ತಾ ಇದ್ದಾರೆ

ಯೆಹೋವ ಲಾವಕ್ಕಿಗಳನ್ನ ಕೊಟ್ಟಾಗ ಇಸ್ರಾಯೇಲ್ಯರು ಯಾವ ಗುಣ ತೋರಿಸಿದ್ರು? ಇದ್ರಿಂದ ನಾವೇನು ಕಲಿಬಹುದು? (ಪ್ಯಾರ 8 ನೋಡಿ)


9. ಯೆಹೋವ ಏನು ಮಾಡ್ತಾನೆ ಅಂತ ನಾವು ಭರವಸೆಯಿಂದ ಇರಬಹುದು?

9 ಇವತ್ತೂ ಯೆಹೋವ ತನ್ನ ಜನ್ರಿಗೆ ಉದಾರವಾಗಿ ಸಹಾಯ ಮಾಡ್ತಾನೆ. ಆತನು ಸಹಾಯ ಮಾಡ್ತಾನೆ ಅಂದ ತಕ್ಷಣ ‘ನಮಗೆ ಜೀವನದಲ್ಲಿ ಕಷ್ಟನೇ ಬರಲ್ಲ, ಬೇಕಾಗಿರೋ ಊಟ ಬಟ್ಟೆ ಎಲ್ಲ ಅದ್ಭುತವಾಗಿ ನಮ್ಮ ಮುಂದೆ ಬಂದ್ಬಿಡುತ್ತೆ’ ಅಂತಲ್ಲ.b ನಮಗೆ ಏನೇ ಕಷ್ಟ ಬಂದ್ರು ಯೆಹೋವ ಯಾವತ್ತೂ ಕೈ ಬಿಡಲ್ಲ, ಎಲ್ಲಾ ಕಷ್ಟಗಳಲ್ಲೂ ನಮ್ಮನ್ನ ಕಾದು ಕಾಪಾಡ್ತಾನೆ ಅಂತ ಅದರರ್ಥ. ನಾವು ಜೀವನದಲ್ಲಿ ಸಾಮಾನ್ಯವಾಗಿ, (1) ಹಣಕಾಸಿನ ಸಮಸ್ಯೆ ಎದುರಿಸ್ತೀವಿ. (2) ‘ವಯಸ್ಸಾದ್ಮೇಲೆ ಜೀವನ ಹೇಗಪ್ಪಾ’ ಅಂತ ಚಿಂತೆ ಮಾಡ್ತೀವಿ. ಈ ಎರಡು ಸನ್ನಿವೇಶಗಳಲ್ಲಿ ಯೆಹೋವ ನಮ್ಮನ್ನ ನೋಡ್ಕೊಳ್ತಾನೆ ಅಂತ ನಾವು ನಂಬೋದು ಹೇಗೆ ಅಂತ ನೋಡೋಣ.

ಹಣಕಾಸಿನ ಸಮಸ್ಯೆ ಎದುರಿಸುವಾಗ

10. ನಮಗೆ ಹಣಕಾಸಿನ ತೊಂದ್ರೆ ಹೇಗೆಲ್ಲ ಬರಬಹುದು?

10 ಲೋಕದ ಅಂತ್ಯ ಹತ್ರ ಆಗ್ತಾ ಇದ್ದ ಹಾಗೆ ಹಣಕಾಸಿನ ಸಮಸ್ಯೆ ಮುಗಿಲು ಮುಟ್ಟುತ್ತೆ ಅನ್ನೋದ್ರಲ್ಲಿ ಯಾವುದೇ ಡೌಟ್‌ ಇಲ್ಲ. ಬದಲಾಗ್ತಿರೋ ಸರ್ಕಾರಗಳು, ಯುದ್ಧಗಳು, ವಿಪತ್ತುಗಳು, ಹೊಸಹೊಸ ಕಾಯಿಲೆಗಳು ಮುಂದೆ ಇನ್ನೂ ಜಾಸ್ತಿ ಆಗುತ್ತೆ. ಈ ಪರಿಸ್ಥಿತಿಗಳಿಂದ ಖರ್ಚು ಜಾಸ್ತಿ ಆಗಬಹುದು, ನಾವು ಕೆಲಸ ಕಳ್ಕೊಬಹುದು. ಆಗ ನಮ್ಮ ಆಸ್ತಿ, ಮನೆ ಎಲ್ಲವನ್ನ ಬಿಟ್ಟು ಹೋಗಬೇಕಾಗಿ ಬರಬಹುದು. ನಾವಿರೋ ಜಾಗದಲ್ಲೇ ಹೊಸ ಕೆಲಸ ಹುಡುಕಬೇಕಾಗಿ ಬರಬಹುದು ಅಥವಾ ಇಡೀ ಕುಟುಂಬ ಕೆಲಸ ಹುಡ್ಕೊಂಡು ಬೇರೆ ಊರಿಗೆ ಹೋಗಬೇಕಾಗುತ್ತೆ. ಇಂಥ ಸಂದರ್ಭದಲ್ಲಿ ಯೆಹೋವನ ಮೇಲೆ ನಂಬಿಕೆ ಇಟ್ಟು ನಿರ್ಧಾರ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

11. ಹಣಕಾಸಿನ ಸಮಸ್ಯೆನ ಎದುರಿಸೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? (ಲೂಕ 12:29-31)

11 ಪ್ರಾರ್ಥನೆ ಮಾಡೋದು ತುಂಬ ಮುಖ್ಯ, ಅದು ನಿಮಗೆ ತುಂಬ ಸಹಾಯ ಮಾಡುತ್ತೆ. (ಜ್ಞಾನೋ. 16:3) ‘ಕಷ್ಟ ಬಂದಾಗ “ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟು” ಒಳ್ಳೆ ನಿರ್ಧಾರಗಳನ್ನ ಮಾಡೋಕೆ ವಿವೇಕ ಕೊಡಪ್ಪ’ ಅಂತ ಯೆಹೋವನ ಹತ್ರ ಪ್ರಾರ್ಥನೆ ಮಾಡಿ. (ಲೂಕ 12:29-31 ಓದಿ.) ‘ಅತಿಯಾಸೆ ಪಡದೇ ಏನಿದ್ಯೋ ಅದ್ರಲ್ಲಿ ಸಂತೃಪ್ತಿ ಕಂಡ್ಕೊಳ್ಳೋಕೆ ಸಹಾಯ ಮಾಡಪ್ಪಾ’ ಅಂತ ಕೇಳಿ. (1 ತಿಮೊ. 6:7, 8) ಇದ್ರ ಜೊತೆಗೆ ಹಣಕಾಸಿನ ಸಮಸ್ಯೆಗಳನ್ನ ಹೇಗೆ ಚೆನ್ನಾಗಿ ನಿಭಾಯಿಸಬಹುದು ಅನ್ನೋದ್ರ ಬಗ್ಗೆ jw.org ವೆಬ್‌ಸೈಟ್‌ನಲ್ಲಿ ಹಲವಾರು ಲೇಖನಗಳಿವೆ. ಅದನ್ನ ಓದಿ ತುಂಬಾ ಜನ ಪ್ರಯೋಜನ ಪಡ್ಕೊಂಡಿದ್ದಾರೆ. ಆ ಲೇಖನಗಳನ್ನ ನೀವೂ ಹುಡುಕಿ ಓದಿ.

12. ಕೆಲ್ಸ ಹುಡುಕೋ ಮುಂಚೆ ಒಬ್ಬ ಕ್ರೈಸ್ತ ಯಾವ ಪ್ರಶ್ನೆಗಳನ್ನ ಕೇಳ್ಕೊಳ್ಬೇಕು?

12 ಕೆಲವರು ಕೆಲಸ ಮಾಡೋಕಂತ ಅವ್ರ ಕುಟುಂಬನ ಬಿಟ್ಟು ದೂರದ ಜಾಗಕ್ಕೆ ಹೋಗಿದ್ದಾರೆ. ‘ಈ ತರ ಮಾಡಿದ್ದು ತಪ್ಪಾಯ್ತು’ ಅಂತ ಅವ್ರಿಗೆ ಆಮೇಲೆ ಅರ್ಥ ಆಗಿದೆ. ನೀವು ಒಂದು ಹೊಸ ಕೆಲಸನ ಒಪ್ಕೊಳ್ಳೋ ಮುಂಚೆ ಎಷ್ಟು ಹಣ ಸಿಗುತ್ತೆ ಅಂತ ಮಾತ್ರ ನೋಡ್ದೆ, ಅದ್ರಿಂದ ನಿಮಗೆ ಯೆಹೋವನ ಜೊತೆ ಇರೋ ಸಂಬಂಧ ಹಾಳಾಗುತ್ತಾ ಅಂತಾನೂ ಯೋಚ್ನೆ ಮಾಡಿ. (ಲೂಕ 14:28) ಅದಕ್ಕೆ ನೀವು ಹೀಗೆ ಕೇಳ್ಕೊಳ್ಳಿ, ‘ನಾನು ಕೆಲಸಕ್ಕೆ ಅಂತ ಮನೆಯಿಂದ ದೂರ ಹೋದ್ರೆ ನನ್ನ ಮದುವೆ ಜೀವನ ಏನಾಗಬಹುದು? ಸೇವೆಗೆ, ಕೂಟಗಳಿಗೆ ಹೋಗೋಕಾಗುತ್ತಾ? ಸಹೋದರರ ಜೊತೇಲಿ ಸಮಯ ಕಳಿಯೋಕೆ ಆಗುತ್ತಾ?’ ಒಂದುವೇಳೆ ನಿಮಗೆ ಮಕ್ಕಳಿದ್ರೆ ನೀವಂತೂ ಈ ಪ್ರಶ್ನೆಯನ್ನ ಕೇಳ್ಕೊಬೇಕು: ‘ನಾನು ಮನೇಲಿಲ್ಲ ಅಂದ್ರೆ ಮಕ್ಕಳಿಗೆ “ಯೆಹೋವ ಹೇಳೋ ತರಾನೇ . . . ಕಲಿಸ್ತಾ, ತರಬೇತಿ ಕೊಡ್ತಾ” ಇರೋಕ್ಕಾಗುತ್ತಾ?’ (ಎಫೆ. 6:4) ನೀವು ನಿರ್ಧಾರ ಮಾಡ್ವಾಗ ಬೈಬಲ್‌ ಹೇಳೋ ತರ ನಡ್ಕೊಳದೇ ಇರೋ ಸಂಬಂಧಿಕರು ಸ್ನೇಹಿತರು, ಕುಟುಂಬದವರು ಏನ್‌ ಹೇಳ್ತಾರೆ ಅಂತ ಯೋಚ್ನೆ ಮಾಡೋದಕ್ಕಿಂತ ಯೆಹೋವ ಏನ್‌ ಹೇಳ್ತಾನೆ ಅಂತ ಯೋಚ್ನೆ ಮಾಡೋದು ತುಂಬಾ ಮುಖ್ಯ.c ಏಷ್ಯಾದಲ್ಲಿರೋ ಟೋನಿ ಅನ್ನೋ ಸಹೋದರನಿಗೆ ಬೇರೆ ದೇಶಕ್ಕೆ ಹೋಗಿ ಕೆಲಸ ಮಾಡೋ ಎಷ್ಟೋ ಒಳ್ಳೊಳ್ಳೇ ಆಫರ್‌ ಬಂತು. ಆದ್ರೆ ಅವರು ಅದ್ರ ಬಗ್ಗೆ ಪ್ರಾರ್ಥನೆ ಮಾಡಿ, ಹೆಂಡ್ತಿ ಹತ್ರ ಮಾತಾಡಿದ ಮೇಲೆ ಆ ಎಲ್ಲ ಆಫರ್‌ನ ಬೇಡ ಅಂತ ಅಂದ್ರು. ಹಣಕಾಸಿನ ಸಮಸ್ಯೆನ ನಿಭಾಯಿಸೋಕೆ ಖರ್ಚನ್ನ ಕಡಿಮೆ ಮಾಡಿದ್ರು. ಈಗ ಟೋನಿ ಹೇಳೋದು, “ನಾನು ಈ ತರ ಮಾಡಿದ್ರಿಂದ ಎಷ್ಟೋ ಜನ್ರಿಗೆ ಯೆಹೋವನ ಬಗ್ಗೆ ಕಲಿಸೋಕಾಗಿದೆ ಮತ್ತು ನನ್ನ ಮಕ್ಕಳು ಸತ್ಯದಲ್ಲಿ ಚೆನ್ನಾಗಿ ಬೆಳಿತಾ ಇದ್ದಾರೆ. ನಾವು ಎಲ್ಲಿವರೆಗೂ ಮತ್ತಾಯ 6:33 ಹೇಳೋ ತರ ಜೀವನ ಮಾಡ್ತೀವೋ, ಅಲ್ಲಿವರೆಗೂ ಯೆಹೋವ ನಮ್ಮ ಕುಟುಂಬನ ನೋಡ್ಕೊಳ್ತಾನೆ ಅಂತ ನಾವೀಗ ಅರ್ಥ ಮಾಡ್ಕೊಂಡಿದ್ದೀವಿ.”

‘ವಯಸ್ಸಾದ್ಮೇಲೆ ಹೇಗಪ್ಪಾ ಜೀವನ’ ಅನ್ನೋ ಚಿಂತೆ!

13. ವಯಸ್ಸಾದ್ಮೇಲೆ ನಮ್ಮನ್ನ ನಾವು ನೋಡ್ಕೊಳ್ಳೋಕೆ ಈಗಿಂದಾನೇ ಏನು ಮಾಡಬಹುದು?

13 ‘ವಯಸ್ಸಾದ್ಮೇಲೆ ನನ್ನ ಜೀವನ ಹೇಗಪ್ಪ’ ಅಂತ ಯೋಚ್ನೆ ಮಾಡುವಾಗ್ಲೂ ಯೆಹೋವನ ಮೇಲೆ ನಮಗೆ ನಂಬಿಕೆ ಇದೆ ಅಂತ ತೋರಿಸಿ ಕೊಡಬೇಕು. ನಾವು ಕಷ್ಟಪಟ್ಟು ಕೆಲಸ ಮಾಡಿ ಭವಿಷ್ಯಕ್ಕೋಸ್ಕರ ಸ್ವಲ್ಪ ಕೂಡಿಸಿ ಇಡಬೇಕು ಅಂತ ಬೈಬಲ್‌ ಪ್ರೋತ್ಸಾಹಿಸುತ್ತೆ. (ಜ್ಞಾನೋ. 6:6-11) ನಮ್ಮ ಕೈಲಾದ್ರೆ ಭವಿಷ್ಯಕ್ಕೋಸ್ಕರ ಸ್ವಲ್ಪ ಕೂಡಿಸಿಡೋದ್ರಲ್ಲಿ ತಪ್ಪಿಲ್ಲ. ಹಣ ಸ್ವಲ್ಪ ಮಟ್ಟಿಗೆ ಸಂರಕ್ಷಣೆ ಕೊಡುತ್ತೆ ಅಂತಾನೂ ಬೈಬಲ್‌ ಹೇಳುತ್ತೆ. (ಪ್ರಸಂ. 7:12) ನೆನಪಿಡಿ, ಹಣ ನಮ್ಮ ಜೀವನದಲ್ಲಿ ಒಂದು ಭಾಗ ಆಗಿರಬೇಕೇ ಹೊರತೂ ಅದೇ ನಮ್ಮ ಜೀವನ ಆಗಬಾರದು!

14. ‘ವಯಸ್ಸಾದ್ಮೇಲೆ ಜೀವನ ಹೇಗಪ್ಪಾ’ ಅಂತ ಅತಿಯಾಗಿ ಚಿಂತೆ ಮಾಡದೇ ಇರೋಕೆ ಇಬ್ರಿಯ 13:5 ಹೇಗೆ ಸಹಾಯ ಮಾಡುತ್ತೆ?

14 “ದೇವರ ದೃಷ್ಟಿಯಲ್ಲಿ ಶ್ರೀಮಂತರಾಗೋದು ಬಿಟ್ಟು” ಹಣ-ಆಸ್ತಿ ಕೂಡಿಸಿ ಇಡೋದು ಮೂರ್ಖತನ ಅಂತ ಯೇಸು ಒಂದು ಉದಾಹರಣೆಯಲ್ಲಿ ಹೇಳಿದನು. (ಲೂಕ 12:16-21) ನಾಳೆ ಏನಾಗುತ್ತೆ ಅಂತ ನಮಗೆ ಯಾರಿಗೂ ಗೊತ್ತಿಲ್ಲ. (ಜ್ಞಾನೋ. 23:4, 5; ಯಾಕೋ. 4:13-15) ನಾವು ಯೇಸುವಿನ ಶಿಷ್ಯರಾಗಿರೋದ್ರಿಂದ ನಮಗೆ ಬೇರೆ ಬೇರೆ ರೀತಿಯ ಕಷ್ಟಗಳೂ ಬರುತ್ತೆ. ಆಗ ನಮ್ಮ ಹತ್ರ ಇರೋ ಎಲ್ಲಾನೂ ‘ಬಿಟ್ಕೊಡೋಕೆ’ ನಾವು ರೆಡಿ ಇರ್ಬೇಕು ಅಂತ ಯೇಸು ಹೇಳಿದನು. (ಲೂಕ 14:33) ಒಂದನೇ ಶತಮಾನದಲ್ಲಿದ್ದ ಯೂದಾಯದ ಕ್ರೈಸ್ತರಿಗೂ ಈ ತರ ಕಷ್ಟ ಬಂತು, ಅವರು ಆಸ್ತಿಪಾಸ್ತಿಯನ್ನ ಕಳ್ಕೊಂಡ್ರೂ ಸಂತೋಷವಾಗಿದ್ರು. (ಇಬ್ರಿ. 10:34) ಇವತ್ತೂ ಎಷ್ಟೋ ಸಹೋದರರು ವೋಟ್‌ ಹಾಕದೆ ಇದ್ದಿದ್ದಕ್ಕೆ ತಮ್ಮ ಆಸ್ತಿನೆಲ್ಲ ಕಳ್ಕೊಂಡಿದ್ದಾರೆ. (ಪ್ರಕ. 13:16, 17) ಇಂಥ ಕಷ್ಟದಲ್ಲೂ ಯೆಹೋವನಿಗೆ ನಿಯತ್ತಾಗಿರೋಕೆ ಅವ್ರಿಗೆ ಯಾವುದು ಸಹಾಯ ಮಾಡಿದೆ ಗೊತ್ತಾ? “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈ ಬಿಡಲ್ಲ” ಅಂತ ಯೆಹೋವ ಹೇಳಿರೋ ಮಾತು ಅವ್ರಿಗೆ ಸಹಾಯ ಮಾಡಿದೆ. (ಇಬ್ರಿಯ 13:5 ಓದಿ.) ವಯಸ್ಸಾದ್ಮೇಲೆ ನಮ್ಮ ಜೀವನ ನೋಡ್ಕೊಳ್ಳೋಕೆ ಈಗ್ಲೇ ಒಂದು ಪ್ಲಾನ್‌ ಮಾಡಬಹುದು. ಆದ್ರೆ ನೆನಸದೆ ಇರೋ ಕಷ್ಟಗಳು ಬಂದ್ರೆ ಯೆಹೋವ ಖಂಡಿತ ಸಹಾಯ ಮಾಡ್ತಾನೆ ಅಂತ ಪೂರ್ತಿ ಭರವಸೆ ಇಡಬೇಕು.

15. ಕ್ರೈಸ್ತ ಅಪ್ಪಅಮ್ಮ ಮಕ್ಕಳನ್ನ ಯಾವ ತರ ನೋಡಬೇಕು? (ಚಿತ್ರ ನೋಡಿ.)

15 ಕೆಲವು ದೇಶಗಳಲ್ಲಿ, ‘ವಯಸ್ಸಾದ್ಮೇಲೆ ನಮ್ಮನ್ನು ಯಾರಾದ್ರೂ ನೋಡ್ಕೊಬೇಕಲ್ವಾ’ ಅನ್ನೋ ಕಾರಣಕ್ಕೆ ಗಂಡ ಹೆಂಡತಿ ಮಕ್ಕಳನ್ನ ಮಾಡ್ಕೊತಾರೆ, ಚೆನ್ನಾಗಿ ಬೆಳೆಸ್ತಾರೆ. ಒಂದು ರೀತಿಲಿ ಅವರು ಮಕ್ಕಳನ್ನ “ರಿಟೈರ್‌ಮೆಂಟ್‌ ಪ್ಲಾನ್‌” ತರ ನೋಡ್ತಾರೆ. ಆದ್ರೆ ಬೈಬಲ್‌, ಅಪ್ಪಅಮ್ಮ ಮಕ್ಕಳ ಅಗತ್ಯನ ನೋಡ್ಕೊಬೇಕು ಅಂತ ಹೇಳುತ್ತೆ. (2 ಕೊರಿಂ. 12:14) ನಿಜ, ವಯಸ್ಸಾದ್ಮೇಲೆ ಮೇಲೆ ಅಪ್ಪಅಮ್ಮನಿಗೆ ಸಹಾಯ ಬೇಕಾಗುತ್ತೆ. ಅದಕ್ಕೇ ಇವತ್ತು ಎಷ್ಟೋ ಮಕ್ಕಳು ಖುಷಿಖುಷಿಯಿಂದ ಅವ್ರ ಅಪ್ಪಅಮ್ಮನಿಗೆ ಬೇಕಾದ ಏರ್ಪಾಡು ಮಾಡ್ತಾರೆ. (1 ತಿಮೊ. 5:4) ಆದ್ರೆ ಅಪ್ಪಅಮ್ಮ, ಮಕ್ಕಳು ಬೆಳೆದು ದೊಡ್ಡವರಾಗಿ ನಮಗೆ ಹಣದ ಸಹಾಯ ಮಾಡ್ಲಿ ಅಂತ ಆಸೆ ಪಡೋ ಬದ್ಲು, ಆ ಮಕ್ಕಳು ಬೆಳೆದು ಯೆಹೋವನ ಒಳ್ಳೆ ಆರಾಧಕರಾಗಲಿ ಅಂತ ಆಸೆಪಟ್ರೆ ಚೆನ್ನಾಗಿರುತ್ತೆ.—3 ಯೋಹಾ. 4.

ಒಂದು ದಂಪತಿ ತಮ್ಮ ಮಗಳು ಮತ್ತು ಅಳಿಯನಿಗೆ ವಿಡಿಯೋ ಕಾಲ್‌ ಮಾಡಿ ಖುಷಿಯಾಗಿ ಮಾತಾಡ್ತಾ ಇದ್ದಾರೆ. ಅವ್ರ ಮಗಳು ಮತ್ತು ಅಳಿಯ ಕಟ್ಟಡ ಕಟ್ಟೋ ಕೆಲಸ ಮಾಡುವಾಗ ಹಾಕೊಳ್ಳೋ ರೇಡಿಯಮ್‌ ಜಾಕೆಟ್‌ ಹಾಕೊಂಡಿದ್ದಾರೆ.

ಯೆಹೋವನ ಮೇಲೆ ನಂಬಿಕೆ ಇಟ್ಟಿರೋ ಗಂಡ ಹೆಂಡತಿ ಭವಿಷ್ಯದ ಬಗ್ಗೆ ನಿರ್ಧಾರ ಮಾಡೋ ಮುಂಚೆ ಬೈಬಲ್‌ ಏನು ಹೇಳುತ್ತೆ ಅಂತ ನೋಡ್ತಾರೆ (ಪ್ಯಾರ 15 ನೋಡಿ)d


16. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳೋಕೆ ಅಪ್ಪಅಮ್ಮ ಹೇಗೆ ಸಹಾಯ ಮಾಡಬಹುದು? (ಎಫೆಸ 4:28)

16 ನಿಮ್ಮ ಮಕ್ಕಳು ಅವ್ರ ಕಾಲ ಮೇಲೆ ಅವರು ನಿಂತ್ಕೊಳ್ಳೋಕೆ ನೀವು ತರಬೇತಿ ಕೊಡೋದು ಒಳ್ಳೇದು. ಆದ್ರೆ ನೀವು ಎಲ್ಲಾ ಸಮಯದಲ್ಲೂ ಯೆಹೋವನ ಮೇಲೆ ಆತ್ಕೊಳ್ತೀರ ಅನ್ನೋದನ್ನ ಅವರು ನಿಮ್ಮ ಮಾದರಿ ನೋಡಿ ಕಲಿಯೋ ತರ ಮಾಡಿ. ಕಷ್ಟಪಟ್ಟು ಕೆಲಸ ಮಾಡೋದು ಮುಖ್ಯ ಅನ್ನೋದನ್ನ ಅವರಿನ್ನೂ ಚಿಕ್ಕವರಿರುವಾಗ್ಲೇ ತಿಳಿಸಿಕೊಡಿ. (ಜ್ಞಾನೋ. 29:21; ಎಫೆಸ 4:28 ಓದಿ.) ಬೆಳಿತಾ ಹೋದ ಹಾಗೆ ಸ್ಕೂಲಲ್ಲಿ ಚೆನ್ನಾಗಿ ಓದೋಕೆ, ಬರಿಯೋಕೆ ಸಹಾಯ ಮಾಡಿ. ನಿಮ್ಮ ಮಕ್ಕಳು ಮುಂದೆ ಏನ್‌ ಓದಿದ್ರೆ ಚೆನ್ನಾಗಿರುತ್ತೆ ಅಂತ ಅರ್ಥ ಮಾಡ್ಕೊಳೋಕೆ ಬೈಬಲ್‌ ತತ್ವಗಳನ್ನ ನೀವು ಹುಡುಕಿ ತಿಳ್ಕೊಳಿ. ಆಮೇಲೆ ಅವ್ರಿಗೆ ಸಹಾಯ ಮಾಡಿ. ಆಗ ನಿಮ್ಮ ಮಕ್ಕಳು ಕೆಲ್ಸದ ವಿಷ್ಯದಲ್ಲಿ ಒಂದು ಒಳ್ಳೆ ತೀರ್ಮಾನ ಮಾಡೋಕೆ ಆಗುತ್ತೆ. ಜೊತೇಲಿ ಯೆಹೋವನಿಗೆ ಹೆಚ್ಚು ಸೇವೆ ಮಾಡೋಕೆ, ಸಾಧ್ಯ ಆದ್ರೆ ಪಯನೀಯರ್‌ ಸೇವೆ ಮಾಡೋಕೂ ಆಗುತ್ತೆ.

17. ನಾವು ಏನಂತ ನಂಬಬೇಕು?

17 ಯಾರೆಲ್ಲ ಯೆಹೋವ ಹೇಳೋ ತರ ನಡ್ಕೊಳ್ತಾರೋ ಅವ್ರೆಲ್ಲ ‘ನಮಗೆ ಸಹಾಯ ಮಾಡೋ ಶಕ್ತಿ ಮತ್ತು ಮನಸ್ಸು ಎರಡೂ ಯೆಹೋವನಿಗಿದೆ’ ಅಂತ ನಂಬ್ತಾರೆ. ಅಂತ್ಯ ಹತ್ರ ಆಗ್ತಿರೋ ಈ ಸಮಯದಲ್ಲಿ ನಾವೆಲ್ರೂ ಯೆಹೋವನ ಮೇಲೆ ನಮಗಿರೋ ನಂಬಿಕೆನ ಜಾಸ್ತಿ ಮಾಡ್ಕೊಬೇಕು. ಅದೇನೇ ಆದ್ರೂ ‘ನಮಗೆ ಬೇಕಾಗಿರೋದನ್ನ ಕೊಡೋಕೆ ಯೆಹೋವ ಖಂಡಿತ ತನ್ನ ಶಕ್ತಿಯನ್ನ ಬಳಸೇ ಬಳಸ್ತಾನೆ’ ಅಂತ ನಾವು ಪೂರ್ತಿ ನಂಬಬೇಕು. ಯಾಕಂದ್ರೆ ಯೆಹೋವನ ಕೈ ಮೋಟುಗೈ ಅಲ್ವೇ ಅಲ್ಲ, ಆದ್ರಿಂದ ಆತನು ನಮಗೆ ಉದಾರವಾಗಿ ಸಹಾಯ ಮಾಡ್ತಾನೆ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ!

ನೀವೇನು ಹೇಳ್ತೀರಾ?

  • ಮೋಶೆ ಮತ್ತು ಇಸ್ರಾಯೇಲ್ಯರಿಂದ ನೀವೇನು ಕಲಿತ್ರಿ?

  • ಹಣದ ಸಮಸ್ಯೆ ಬಂದಾಗ ಯೆಹೋವನ ಮೇಲೆ ನಂಬಿಕೆ ಇದೆ ಅಂತ ಹೇಗೆ ತೋರಿಸಬಹುದು?

  • ‘ವಯಸ್ಸಾದ್ಮೇಲೆ ನನ್ನ ಜೀವನ ಹೇಗಪ್ಪ’ ಅಂತ ಚಿಂತೆ ಆದಾಗ ಯೆಹೋವನ ಮೇಲೆ ನಂಬಿಕೆ ಇದೆ ಅಂತ ಹೇಗೆ ತೋರಿಸಬಹುದು?

ಗೀತೆ 150 ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ

a ಕಾವಲಿನಬುರುಜು ಅಕ್ಟೋಬರ್‌ 2023ರ “ವಾಚಕರಿಂದ ಪ್ರಶ್ನೆಗಳು” ಅನ್ನೋ ಲೇಖನ ನೋಡಿ.

b ಕಾವಲಿನಬುರುಜು ಸೆಪ್ಟೆಂಬರ್‌ 15, 2014ರ “ವಾಚಕರಿಂದ ಪ್ರಶ್ನೆಗಳು” ಅನ್ನೋ ಲೇಖನ ನೋಡಿ.

c ಕಾವಲಿನಬುರುಜು ಏಪ್ರಿಲ್‌ 15, 2014ರ “ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು” ಅನ್ನೋ ಲೇಖನ ನೋಡಿ.

d ಚಿತ್ರ ವಿವರಣೆ: ಯೆಹೋವನ ಮೇಲೆ ನಂಬಿಕೆ ಇಟ್ಟಿರೋ ಗಂಡ ಹೆಂಡ್ತಿ ತಮ್ಮ ಮಗಳತ್ರ ಫೋನಲ್ಲಿ ಮಾತಾಡ್ತಾ ಇದ್ದಾರೆ. ಮಗಳು ಮತ್ತು ಅವಳ ಗಂಡ ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಸೇವೆ ಮಾಡ್ತಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ