ಅಧ್ಯಯನ ಲೇಖನ 15
ಗೀತೆ 28 ಯೆಹೋವನ ಸ್ನೇಹವನ್ನು ಗಳಿಸೋಣ
“ನಾವು ದೇವರಿಗೆ ಹತ್ತಿರ ಆಗೋದೇ ಒಳ್ಳೇದು!”
“ನನ್ನ ಪ್ರಕಾರ, ದೇವರಿಗೆ ಹತ್ತಿರ ಆಗೋದೇ ಒಳ್ಳೇದು.”—ಕೀರ್ತ. 73:28.
ಈ ಲೇಖನದಲ್ಲಿ ಏನಿದೆ?
ನಾವು ದೇವ್ರಿಗೆ ಹತ್ರ ಆಗೋದು ಹೇಗೆ, ದೇವ್ರಿಗೆ ಹತ್ರ ಆಗೋದ್ರಿಂದ ನಮಗೆ ಏನೆಲ್ಲಾ ಪ್ರಯೋಜ್ನ ಸಿಗುತ್ತೆ ಅಂತ ನೋಡೋಣ.
1-2. (ಎ) ಒಬ್ರನ್ನ ಫ್ರೆಂಡ್ ಮಾಡ್ಕೊಳೋಕೆ ಏನೆಲ್ಲಾ ಮಾಡ್ಬೇಕು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
ನಿಮಗೆ ಯಾರಾದ್ರೂ ಕ್ಲೋಸ್ ಫ್ರೆಂಡ್ ಇದ್ದಾರಾ? ನೀವು ಅವ್ರನ್ನ ಹೇಗೆ ಫ್ರೆಂಡ್ ಮಾಡ್ಕೊಂಡ್ರಿ? ನೀವು ಅವ್ರ ಜೊತೆ ಒಂದೇ ದಿನದಲ್ಲಿ ಫ್ರೆಂಡ್ ಆಗಿಲ್ಲ ಅಲ್ವಾ? ಅವ್ರೊಟ್ಟಿಗೆ ತುಂಬಾ ಸಮಯ ಕಳೆದಿರ್ತೀರ, ಅವ್ರಿಗೆ ಜೀವನದಲ್ಲಿ ಏನು ಕಷ್ಟ ಇದೆ, ಅವ್ರಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತೆಲ್ಲಾ ತಿಳ್ಕೊಂಡಿರ್ತೀರ! ಅಷ್ಟೇ ಅಲ್ಲ ಅವ್ರಲ್ಲಿರೋ ಒಳ್ಳೆ ಗುಣಗಳನ್ನ ನೋಡ್ದಾಗ ನಾನೂ ಅವ್ರ ತರ ಇರ್ಬೇಕು ಅಂತ ನಿಮಗೆ ಅನ್ಸುತ್ತೆ. ಹೀಗೆ ನೀವು ಅವ್ರನ್ನ ಫ್ರೆಂಡ್ ಮಾಡ್ಕೊಂಡಿರ್ತೀರ ತಾನೇ!
2 ಅದೇ ತರ ನಾವು ಯೆಹೋವನನ್ನ ಫ್ರೆಂಡ್ ಮಾಡ್ಕೋಬೇಕಂದ್ರೂ ಟೈಮ್ ಕೊಡಬೇಕು, ಪ್ರಯತ್ನ ಹಾಕಬೇಕು. ನಾವು ಹೇಗೆ ಯೆಹೋವನನ್ನ ಫ್ರೆಂಡ್ ಮಾಡ್ಕೊಬಹುದು? ಆತನನ್ನ ಫ್ರೆಂಡ್ ಮಾಡ್ಕೊಳ್ಳೋದ್ರಿಂದ ಏನೆಲ್ಲ ಪ್ರಯೋಜ್ನ ಸಿಗುತ್ತೆ? ಅಂತ ಈ ಲೇಖನದಲ್ಲಿ ಕಲಿಯೋಣ. ಮೊದ್ಲು ಯಾಕೆ ನಾವು ಯೆಹೋವನನ್ನ ಬೆಸ್ಟ್ ಫ್ರೆಂಡ್ ಆಗಿ ಮಾಡ್ಕೊಬೇಕು ಅಂತ ನೋಡೋಣ.
3. ಯೆಹೋವನ ಜೊತೆ ಕ್ಲೋಸ್ ಫ್ರೆಂಡ್ ಆಗೋದು ಯಾಕೆ ಒಳ್ಳೇದು ಅಂತ ಆಗಾಗ ಯೋಚ್ನೆ ಮಾಡೋದು ಯಾಕೆ ಮುಖ್ಯ?
3 ಯೆಹೋವನ ಜೊತೆ ನಮಗಿರೋ ಸ್ನೇಹ ಯಾಕೆ ಒಳ್ಳೇದು ಅಂತ ಆಗಾಗ ಯೋಚ್ನೆ ಮಾಡೋದು ತುಂಬ ಮುಖ್ಯ. (ಕೀರ್ತ. 63:6-8) ಯಾಕೆ ಗೊತ್ತಾ? ಇವತ್ತು ಎಷ್ಟೋ ಜನ್ರಿಗೆ ಆರೋಗ್ಯ ಕಾಪಾಡ್ಕೊಳ್ಳೋಕೆ ಪ್ರತಿದಿನ ಸಾಕಷ್ಟು ನೀರು ಕುಡಿಬೇಕು, ಒಳ್ಳೆ ಆಹಾರ ತಿನ್ನಬೇಕು, ವ್ಯಾಯಾಮ ಮಾಡಬೇಕು, ಸಾಕಷ್ಟು ನಿದ್ರೆ ಮಾಡಬೇಕು ಅಂತ ಗೊತ್ತು. ಆದ್ರೆ ಇದನ್ನ ಎಲ್ರೂ ಮಾಡ್ತಿದ್ದಾರಾ? ಎಷ್ಟೊಂದು ಜನ ಇದ್ರ ಬಗ್ಗೆ ತಲೆನೇ ಕೆಡಿಸ್ಕೊಳ್ತಿಲ್ಲ! ಹಾಗಾಗಿ ಅವ್ರ ಆರೋಗ್ಯ ದಿನೇದಿನೇ ಹಾಳಾಗ್ತಿದೆ. ಆದ್ರೆ ಇನ್ನು ಕೆಲವರು ಇದನ್ನೆಲ್ಲಾ ಮಾಡೋದು ಯಾಕೆ ಒಳ್ಳೇದು ಅಂತ ಯೋಚಿಸಿರೋದ್ರಿಂದ ಇದನ್ನ ಮಾಡ್ತಾ ಅವ್ರ ಆರೋಗ್ಯನ ಕಾಪಾಡ್ಕೊಂಡಿದ್ದಾರೆ. ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ಳೋ ವಿಷ್ಯನೂ ಹೀಗೇನೇ. ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ಳೋದು ಒಳ್ಳೇದು ಅಂತ ಗೊತ್ತಿದ್ರೆ ಮಾತ್ರ ಸಾಕಾಗಲ್ಲ. ಅದು ಯಾಕೆ ಒಳ್ಳೇದು ಅಂತ ಆಗಾಗ ಯೋಚ್ನೆ ಮಾಡ್ತಾ ಇರಬೇಕು. ಹೀಗೆ ಮಾಡಿದ್ರೆ ದಿನೇದಿನೇ ನಾವು ಆತನಿಗೆ ಹತ್ರ ಆಗ್ತಾ ಇರ್ತೀವಿ.—ಕೀರ್ತ. 119:27-30.
4. ಕೀರ್ತನೆ 73:28ರಲ್ಲಿ ಕೀರ್ತನೆಗಾರ ಏನಂತ ಹೇಳಿದ್ದಾನೆ?
4 ಕೀರ್ತನೆ 73:28 ಓದಿ. 73ನೇ ಕೀರ್ತನೆಯನ್ನ ಬರೆದವನು ಒಬ್ಬ ಲೇವಿಯನಾಗಿದ್ದ. ಅವನು ಆಲಯದಲ್ಲಿ ಸಂಗೀತ ನುಡಿಸ್ತಿದ್ದ. ಅವನು ಎಷ್ಟೋ ವರ್ಷಗಳಿಂದ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡಿರಬಹುದು. ಆದ್ರೂ ಯೆಹೋವನಿಗೆ ಹತ್ರ ಆಗೋದೇ ಒಳ್ಳೇದು ಅಂತ ಆಗಾಗ ನೆನಪಿಸ್ಕೊಳ್ತಾ ಇದ್ದ. ಬೇರೆಯವ್ರಿಗೂ ಇದನ್ನ ನೆನಪಿಸ್ತಿದ್ದ. ಅದೇ ತರ ನಾವೂ ನೆನಪಿಸ್ಕೊಳ್ಳೋದ್ರಿಂದ ತುಂಬ ಪ್ರಯೋಜ್ನ ಸಿಗುತ್ತೆ. ಏನೆಲ್ಲಾ ಪ್ರಯೋಜ್ನ ಸಿಗುತ್ತೆ ಅಂತ ನೋಡೋಣ.
ಸ್ನೇಹದಿಂದ ಸಂತೋಷ!
5. (ಎ) ಯೆಹೋವನಿಗೆ ಹತ್ರ ಆಗೋದಕ್ಕೂ ನೀವು ಸಂತೋಷವಾಗಿ ಇರೋದಕ್ಕೂ ಏನು ಸಂಬಂಧ? (ಬಿ) ಜ್ಞಾನೋಕ್ತಿ 2:6-16ನ್ನ ಮನಸ್ಸಲ್ಲಿಟ್ಟು ಯೆಹೋವನ ವಿವೇಕದ ಮಾತುಗಳಿಂದ ನಿಮಗೆ ಹೇಗೆ ಪ್ರಯೋಜ್ನ ಆಗುತ್ತೆ ಅನ್ನೋದಕ್ಕೆ ಉದಾಹರಣೆಗಳನ್ನ ಕೊಡಿ.
5 ನಾವು ಯೆಹೋವನಿಗೆ ಜಾಸ್ತಿ ಹತ್ರ ಆದಷ್ಟು ನಮ್ಮ ಸಂತೋಷನೂ ಜಾಸ್ತಿ ಆಗುತ್ತೆ. (ಕೀರ್ತ. 65:4) ಇದು ನಿಜ ಅನ್ನೋದಕ್ಕೆ ತುಂಬಾ ಕಾರಣಗಳಿವೆ. ಒಂದು ಕಾರಣ ಏನಂದ್ರೆ, ದೇವ್ರ ವಾಕ್ಯವಾದ ಬೈಬಲಲ್ಲಿರೋ ವಿವೇಕದ ಮಾತುಗಳನ್ನ ನಾವು ಪಾಲಿಸಿದ್ರೆ ಕೆಟ್ಟ ಸಹವಾಸದಿಂದ ದೂರ ಇರ್ತೀವಿ. ಅಷ್ಟೇ ಅಲ್ಲ, ಗಂಭೀರ ತಪ್ಪುಗಳನ್ನ ಮಾಡದ ಹಾಗೆ ಹುಷಾರಾಗಿ ಇರ್ತೀವಿ. (ಜ್ಞಾನೋಕ್ತಿ 2:6-16 ಓದಿ.) ಅದಕ್ಕೆ ಬೈಬಲ್ “ವಿವೇಕ ಪಡ್ಕೊಳ್ಳುವವನು, ವಿವೇಚನಾ ಶಕ್ತಿಯನ್ನ ಸಂಪಾದಿಸುವವನು ಖುಷಿಯಾಗಿ ಇರ್ತಾನೆ” ಅಂತ ಹೇಳುತ್ತೆ.—ಜ್ಞಾನೋ. 3:13.
6. ಕೀರ್ತನೆಗಾರ ಯಾಕೆ ಸಂತೋಷ ಕಳ್ಕೊಂಡ?
6 ಯೆಹೋವನ ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಂಡ ಜನ್ರಿಗೂ ಕೆಲವೊಮ್ಮೆ ಬೇಜಾರಾಗುತ್ತೆ, ನೋವಾಗುತ್ತೆ. 73ನೇ ಕೀರ್ತನೆ ಬರೆದವನಿಗೂ ಹೀಗೇ ಆಯ್ತು. ಅವನು ಒಂದ್ಸಲ ತಪ್ಪಾಗಿ ಯೋಚ್ನೆ ಮಾಡಿ ತನ್ನ ಸಂತೋಷನ ಕಳ್ಕೊಂಡ. ಅವನು ಕೆಟ್ಟವ್ರನ್ನ ನೋಡಿ, ‘ಇವರು ದೇವ್ರ ಮೇಲೆ ನಂಬಿಕೆನೇ ಇಟ್ಟಿಲ್ಲ. ದೇವ್ರ ಮಾತನ್ನ ಕೇಳೋದೇ ಇಲ್ಲ. ಹಿಂಸೆ ಮಾಡ್ತಾರೆ, ಅಹಂಕಾರ ತೋರಿಸ್ತಾರೆ. ಆದ್ರೂ ಜೀವನದಲ್ಲಿ ಚೆನ್ನಾಗಿದ್ದಾರೆ, ಆರೋಗ್ಯವಾಗಿದ್ದಾರೆ, ಶ್ರೀಮಂತರಾಗಿದ್ದಾರೆ. ಇವ್ರಿಗೆ ಕಷ್ಟಾನೇ ಬರ್ತಿಲ್ಲ’ ಅಂದ್ಕೊಂಡ. (ಕೀರ್ತ. 73:3-7, 12) ಹೀಗೆ ಯೋಚ್ನೆ ಮಾಡ್ತಾ ಮಾಡ್ತಾ ಅವನು ‘ಯೆಹೋವನ ಸೇವೆ ಮಾಡೋದ್ರಿಂದ ಏನೂ ಉಪಯೋಗ ಇಲ್ಲ’ ಅಂತ ಅಂದ್ಕೊಂಡ. ಅವನು ಎಷ್ಟು ಕುಗ್ಗಿಹೋದ ಅಂದ್ರೆ, “ನಾನು ನನ್ನ ಹೃದಯನ ಶುದ್ಧವಾಗಿ ಇಟ್ಕೊಂಡು, ನಾನು ನನ್ನನ್ನೇ ನಿರಪರಾಧಿ ಅಂತ ಸಾಬೀತು ಮಾಡಿದ್ದು ಎಲ್ಲ ವ್ಯರ್ಥ ಆಯ್ತು” ಅಂತ ಅಂದ.—ಕೀರ್ತ. 73:13.
7. ನೋವಲ್ಲೇ ಮುಳುಗಿ ಹೋಗದೇ ಇರೋಕೆ ನಾವೇನು ಮಾಡಬೇಕು? (ಚಿತ್ರ ನೋಡಿ.)
7 ಆದ್ರೆ ಕೀರ್ತನೆಗಾರ ತನ್ನ ನೋವಲ್ಲೇ ಮುಳುಗಿ ಹೋಗಿಲ್ಲ. ಅದ್ರಿಂದ ಹೊರಗೆ ಬರೋಕೆ ಅವನು ಪ್ರಯತ್ನ ಹಾಕಿದ. ಅವನು “ದೇವರ ಆರಾಧನಾ ಸ್ಥಳಕ್ಕೆ” ಹೋದ. (ಕೀರ್ತ. 73:17-19) ಅಲ್ಲಿ ಅವನಿಗೆ ತನ್ನ ಯೋಚ್ನೆನ ಸರಿ ಮಾಡ್ಕೊಳ್ಳೋಕೆ ಯೆಹೋವ ಸಹಾಯ ಮಾಡಿದನು. ಅದೇ ತರ ನಾವು ದುಃಖದಲ್ಲಿದ್ದಾಗ ಯೆಹೋವನ ಹತ್ರ ಹೋಗಬೇಕು. ಅಂದ್ರೆ ಆತನ ಮಾರ್ಗದರ್ಶನೆಗಾಗಿ ಬೇಡ್ಕೊಬೇಕು. ಯಾಕಂದ್ರೆ ನಮ್ಮ ಬೆಸ್ಟ್ ಫ್ರೆಂಡ್ ಆಗಿರೋ ಯೆಹೋವನಿಗೆ ನಮ್ಮ ನೋವು ಏನಂತ ಗೊತ್ತಿರುತ್ತೆ. ಆತನು ತನ್ನ ವಾಕ್ಯದಿಂದ, ಸಭೆಯಿಂದ ಕೊಡೋ ಸಹಾಯನ ಸ್ವೀಕರಿಸಬೇಕು. ಆಗ ಆ ಕಷ್ಟನ ಸಹಿಸ್ಕೊಳೋಕೆ ಬೇಕಾಗಿರೋ ಶಕ್ತಿ ಸಿಗುತ್ತೆ. ನಮಗೆ ಎಂಥ ಚಿಂತೆನೇ ಇದ್ರೂ ಯೆಹೋವ ದೇವರು ನಮಗೆ ಸಾಂತ್ವನ ಕೊಟ್ಟು ಧೈರ್ಯ ತುಂಬ್ತಾನೆ.—ಕೀರ್ತ. 94:19.a
73ನೇ ಕೀರ್ತನೆಯನ್ನ ಬರೆದಿರೋ ಲೇವಿಯ ‘ದೇವರ ಆರಾಧನಾ ಸ್ಥಳದಲ್ಲಿ’ ನಿಂತಿದ್ದಾನೆ (ಪ್ಯಾರ 7 ನೋಡಿ)
ಜೀವನಕ್ಕೆ ಅರ್ಥ ಸಿಗುತ್ತೆ
8. ನಾವು ದೇವ್ರಿಗೆ ಹತ್ರ ಆಗೋದ್ರಿಂದ ಇನ್ನೂ ಏನೆಲ್ಲಾ ಪ್ರಯೋಜ್ನ ಸಿಗುತ್ತೆ?
8 ನಾವು ದೇವ್ರಿಗೆ ಹತ್ರ ಆದ್ರೆ ಇನ್ನೂ ಎರಡು ರೀತೀಲಿ ನಮಗೆ ಪ್ರಯೋಜ್ನ ಆಗುತ್ತೆ. ಒಂದು, ಈಗ್ಲೂ ನಾವು ಜೀವನ ಚೆನ್ನಾಗಿ ನಡೆಸಬಹುದು. ಎರಡು, ಮುಂದೇನೂ ನಮ್ಮ ಜೀವನ ಚೆನ್ನಾಗಿರುತ್ತೆ. (ಯೆರೆ. 29:11) ಇದನ್ನ ನಾವು ಒಂದೊಂದಾಗಿ ನೋಡೋಣ ಬನ್ನಿ.
9. ನಾವು ಯೆಹೋವನಿಗೆ ಹತ್ರ ಆಗೋದ್ರಿಂದ ಈಗ್ಲೂ ಜೀವನದಲ್ಲಿ ಹೇಗೆ ಸಂತೋಷವಾಗಿ ಇರ್ತೀವಿ?
9 ನಾವು ಯೆಹೋವನಿಗೆ ಹತ್ರ ಆಗೋದ್ರಿಂದ ಈಗ್ಲೂ ನಮ್ಮ ಜೀವನ ಹೇಗೆ ಚೆನ್ನಾಗಿರುತ್ತೆ ಅನ್ನೋದ್ರ ಬಗ್ಗೆ ನೋಡೋಣ. ತುಂಬ ಜನ ‘ದೇವರೇ ಇಲ್ಲ, ನಮ್ಮ ಜೀವನಕ್ಕೆ ಏನೂ ಅರ್ಥ ಇಲ್ಲ, ಮುಂದೊಂದು ದಿನ ಈ ಭೂಮೀಲಿ ಮನುಷ್ಯರೇ ಇರಲ್ಲ. ಎಲ್ಲಾ ಸರ್ವನಾಶ ಆಗಿ ಹೋಗ್ತಾರೆ. ಹಾಗಾಗಿ ನಾವೀಗ ಮಾಡೋದೆಲ್ಲಾ ವ್ಯರ್ಥ’ ಅಂದ್ಕೊಂಡಿದ್ದಾರೆ. ಆದ್ರೆ ನಾವು ಬೈಬಲ್‌ನ ಚೆನ್ನಾಗಿ ಓದಿ ಅರ್ಥ ಮಾಡ್ಕೊಂಡಿರೋದ್ರಿಂದ ದೇವರು ಇದ್ದಾನೆ ಅಂತ ಗೊತ್ತಾಗಿದೆ. ನಾವು ಆತನಿಗೋಸ್ಕರ ಮಾಡೋದು ಯಾವುದೂ ವ್ಯರ್ಥ ಆಗಲ್ಲ, ಯಾಕಂದ್ರೆ “ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವದಿಸ್ತಾನೆ” ಅಂತ ಅರ್ಥ ಮಾಡ್ಕೊಂಡಿದ್ದೀವಿ. (ಇಬ್ರಿ. 11:6) ದೇವರು ನಮ್ಮನ್ನ ಸೃಷ್ಟಿ ಮಾಡಿರೋದು ನಾವು ಆತನನ್ನ ಆರಾಧಿಸಬೇಕಂತ. ಹಾಗಾಗಿ ನಾವು ಆತನನ್ನ ಆರಾಧಿಸಿದಾಗ ಮಾತ್ರ ನಮಗೆ ಜೀವನದಲ್ಲಿ ಸಂತೃಪ್ತಿ, ಸಂತೋಷ ಸಿಗುತ್ತೆ.—ಧರ್ಮೋ. 10:12, 13.
10. ದೇವ್ರಿಗೆ ಹತ್ರ ಆಗಿರೋರ ಭವಿಷ್ಯದ ಬಗ್ಗೆ ಕೀರ್ತನೆ 37:29 ಏನು ಹೇಳುತ್ತೆ?
10 ನಾವು ಯೆಹೋವನಿಗೆ ಹತ್ರ ಆದ್ರೆ ಮುಂದೇನೂ ನಮ್ಮ ಜೀವನ ಹೇಗೆ ಚೆನ್ನಾಗಿರುತ್ತೆ ಅಂತ ನೋಡೋಣ. ಇವತ್ತು ತುಂಬ ಜನ ಅವರು ಬದುಕೋ 60, 70 ವರ್ಷದ ಬಗ್ಗೆ ಮಾತ್ರ ಯೋಚ್ನೆ ಮಾಡ್ತಾರೆ. ಅವ್ರ ಬಗ್ಗೆ, ಅವ್ರ ಮನೆ, ಕೆಲ್ಸ, ಹೆಂಡ್ತಿ ಮಕ್ಕಳ ಬಗ್ಗೆ ಮಾತ್ರ ಯೋಚಿಸ್ತಾರೆ. ಜಾಸ್ತಿ ಅಂದ್ರೆ, ‘ವಯಸ್ಸಾದ ಮೇಲೆ ನನಗೇ ಅಂತ ಏನಾದ್ರೂ ಕೂಡಿಸಿಡಬೇಕು’ ಅಂತ ಯೋಚಿಸ್ತಾರೆ ಅಷ್ಟೇ. ಆದ್ರೆ ಅವ್ರಿಗೋಸ್ಕರ ದೇವರೇನು ಮಾಡ್ತಾನೆ ಅನ್ನೋದ್ರ ಬಗ್ಗೆ ತಿಳ್ಕೊಳ್ಳೋಕೇ ಹೋಗಲ್ಲ. ಆದ್ರೆ ಯೆಹೋವನ ಆರಾಧಕರಾದ ನಾವು ಆತ ನಮ್ಮನ್ನ ಮುಂದೇನೂ ನೋಡಿಕೊಳ್ತಾನೆ ಅಂತ ನಂಬಿಕೆ ಇಟ್ಟಿದ್ದೀವಿ. (ಕೀರ್ತ. 25:3-5; 1 ತಿಮೊ. 6:17) ಪರದೈಸಲ್ಲಿ ನಾವು ಆತನನ್ನ ಆರಾಧಿಸ್ತಾ ಯಾವಾಗ್ಲೂ ಸಂತೋಷವಾಗಿರೋ ತರ ಯೆಹೋವ ನೋಡ್ಕೊಳ್ತಾನೆ. ಹೀಗೆ ನಮಗೆ ಮುಂದೆ ತುಂಬ ಆಶೀರ್ವಾದಗಳನ್ನ ಕೊಡ್ತಾನೆ.—ಕೀರ್ತನೆ 37:29 ಓದಿ.
11. (ಎ) ನಾವು ಯೆಹೋವನಿಗೆ ಹತ್ರ ಆಗೋದ್ರಿಂದ ಇನ್ನೂ ಏನೆಲ್ಲಾ ಪ್ರಯೋಜ್ನ ಇದೆ? (ಬಿ) ನಾವು ಹತ್ರ ಆದ್ರೆ ಆತನಿಗೆ ಹೇಗನಿಸುತ್ತೆ?
11 ನಾವಿಲ್ಲಿ ತನಕ ಯೆಹೋವನಿಗೆ ಹತ್ರ ಆಗೋದ್ರಿಂದ ಏನೆಲ್ಲಾ ಪ್ರಯೋಜ್ನ ಆಗುತ್ತೆ ಅಂತ ನೋಡಿದ್ವಿ. ಆದ್ರೆ ಇದಿಷ್ಟೇ ಅಲ್ಲ, ಇನ್ನೂ ಎಷ್ಟೋ ಪ್ರಯೋಜ್ನಗಳಿವೆ. ಉದಾಹರಣೆಗೆ, ನಾವು ಪಶ್ಚಾತ್ತಾಪಪಟ್ರೆ ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸ್ತಾನೆ. (ಯೆಶಾ. 1:18) ಹಾಗಾಗಿ ನಾವು ತಪ್ಪು ಮಾಡಿದ್ದೀವಿ ಅಂತ ಕೊರಗ್ತಾ ಕೂರಲ್ಲ. (ಕೀರ್ತ. 32:1-5) ನಾವು ಯೆಹೋವನಿಗೆ ಹತ್ರ ಆದ್ರೆ ಯೆಹೋವ ನಮ್ಮನ್ನ ನೋಡಿ ಖುಷಿ ಪಡ್ತಾನೆ. (ಜ್ಞಾನೋ. 23:15) ಈಗಾಗ್ಲೇ ನೀವು ಯೆಹೋವನ ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಂಡಿರೋದ್ರಿಂದ ಬೇರೆ ಪ್ರಯೋಜ್ನಗಳನ್ನೂ ನೋಡಿರ್ತೀರ. ಆದ್ರೆ ಪ್ರಶ್ನೆ ಏನಂದ್ರೆ, ಈ ಸ್ನೇಹನ ಕಾಪಾಡ್ಕೊಳ್ಳೋದು ಹೇಗೆ?
ದೇವ್ರ ಜೊತೆ ಸ್ನೇಹ ಕಾಪಾಡ್ಕೊಳ್ಳೋದು ಹೇಗೆ?
12. ದೇವ್ರ ಜೊತೆ ಸ್ನೇಹ ಬೆಳೆಸ್ಕೊಳ್ಳೋಕೆ ಏನೆಲ್ಲಾ ಮಾಡಿದ್ರಿ?
12 ನಿಮಗೆ ದೀಕ್ಷಾಸ್ನಾನ ಆಗಿದೆ ಅಂದ್ರೆ ಯೆಹೋವ ದೇವ್ರ ಜೊತೆ ಈಗಾಗ್ಲೇ ನಿಮಗೆ ಆಪ್ತ ಸ್ನೇಹ ಇದೆ ಅಂತರ್ಥ. ಈ ಸ್ನೇಹ ಬೆಳೆಸ್ಕೊಳ್ಳೋಕೆ ನೀವು ಏನೆಲ್ಲ ಮಾಡಿದ್ರಿ ಅಂತ ಯೋಚ್ನೆ ಮಾಡಿ. ಯೆಹೋವ ದೇವ್ರ ಬಗ್ಗೆ, ಯೇಸು ಕ್ರಿಸ್ತನ ಬಗ್ಗೆ ಸತ್ಯ ಕಲಿತ್ರಿ. ಹಿಂದೆ ಮಾಡಿರೋ ಪಾಪಗಳಿಗೆ ಪಶ್ಚಾತ್ತಾಪ ಪಟ್ರಿ. ದೇವ್ರ ಮೇಲೆ ನಿಮಗೆಷ್ಟು ನಂಬಿಕೆ ಇದೆ ಅಂತ ತೋರಿಸಿದ್ರಿ. ಅಷ್ಟೇ ಅಲ್ಲ, ಯೆಹೋವ ದೇವ್ರಿಗೆ ಇಷ್ಟ ಆಗೋ ವಿಷ್ಯಗಳನ್ನೇ ಮಾಡ್ತಾ ಬಂದ್ರಿ. ಈಗ ಆತನ ಜೊತೆ ಇರೋ ಸ್ನೇಹನ ಕಾಪಾಡ್ಕೊಳ್ಳೋಕೂ ನೀವಿದನ್ನೆಲ್ಲ ಬಿಡದೇ ಮಾಡ್ತಾ ಮುಂದುವರಿಬೇಕು.—ಕೊಲೊ. 2:6.
13. ಯೆಹೋವನ ಜೊತೆ ಇರೋ ಸ್ನೇಹ ಕಾಪಾಡ್ಕೊಳ್ಳೋಕೆ ನಾವು ಯಾವ ಮೂರು ವಿಷ್ಯಗಳನ್ನ ಮಾಡ್ತಾ ಇರಬೇಕು?
13 ದೇವ್ರ ಜೊತೆ ಸ್ನೇಹ ಕಾಪಾಡ್ಕೊಳ್ಳೋಕೆ ನಮಗೆ ಮೂರು ವಿಷ್ಯಗಳು ಸಹಾಯ ಮಾಡುತ್ತೆ. (1) ನಾವು ಬೈಬಲ್ ಓದಿ, ಚೆನ್ನಾಗಿ ಅಧ್ಯಯನ ಮಾಡಬೇಕು. ಬರೀ ಜ್ಞಾನ ಪಡ್ಕೊಳ್ಳೋಕೆ ನಾವು ಬೈಬಲ್ ಓದೋದಲ್ಲ. ಬದಲಿಗೆ ದೇವರು ಹೇಗೆ ಯೋಚ್ನೆ ಮಾಡ್ತಾನೆ, ನಾವೇನು ಮಾಡಬೇಕು ಅಂತ ಆತನು ಇಷ್ಟಪಡ್ತಾನೆ ಅಂತ ತಿಳ್ಕೊಂಡು ಅದೇ ತರ ಜೀವನ ಮಾಡೋಕೆ ಪ್ರಯತ್ನ ಮಾಡಬೇಕು. (ಎಫೆ. 5:15-17) (2) ಯೆಹೋವ ನಿಮ್ಮ ಜೀವನದಲ್ಲಿ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ ಅಂತ ಯೋಚ್ನೆ ಮಾಡಿ, ಆತನ ಮೇಲಿರೋ ನಂಬಿಕೆನ ಜಾಸ್ತಿ ಮಾಡ್ಕೊಬೇಕು. (3) ಯೆಹೋವ ದೇವ್ರಿಗೆ ನೋವು ಮಾಡೋ ವಿಷ್ಯಗಳನ್ನ ನಾವು ದ್ವೇಷಿಸಬೇಕು. ಅಂಥ ವಿಷ್ಯಗಳನ್ನ ಮಾಡೋ ಜನ್ರಿಂದ ದೂರ ಇರಬೇಕು.—ಕೀರ್ತ. 1:1; 101:3.
14. ಯೆಹೋವನ ಮನಸ್ಸನ್ನ ಖುಷಿ ಪಡಿಸೋಕೆ ನಾವು ಪ್ರತಿದಿನ ಏನೆಲ್ಲಾ ಮಾಡಬಹುದು? (1 ಕೊರಿಂಥ 10:31) (ಚಿತ್ರಗಳನ್ನ ನೋಡಿ.)
14 ಒಂದನೇ ಕೊರಿಂಥ 10:31 ಓದಿ. ಯೆಹೋವ ದೇವ್ರ ಮನಸ್ಸಿಗೆ ಖುಷಿ ಕೊಡೋ ವಿಷ್ಯಗಳನ್ನ ನಾವು ಯಾವಾಗ್ಲೂ ಮಾಡ್ತಾ ಇರಬೇಕು. ನಾವು ತಪ್ಪದೇ ಕೂಟಗಳಿಗೆ ಹೋದ್ರೆ, ಸೇವೆಗೆ ಹೋದ್ರೆ ಯೆಹೋವನಿಗೆ ತುಂಬ ಖುಷಿಯಾಗುತ್ತೆ ನಿಜ. ಆದ್ರೆ ಇದಿಷ್ಟೇ ಸಾಕಾಗಲ್ಲ. ನಾವು ಪ್ರತಿದಿನ ಯೆಹೋವ ದೇವ್ರಿಗೆ ಖುಷಿ ಕೊಡೋ ತರನೇ ನಡ್ಕೋಬೇಕು. ಉದಾಹರಣೆಗೆ, ನಾವು ಎಲ್ಲಾ ವಿಷ್ಯಗಳಲ್ಲಿ ಪ್ರಾಮಾಣಿಕರಾಗಿರಬೇಕು. ನಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಬೇಕು. ಇದನ್ನೆಲ್ಲ ನೋಡಿದಾಗ ಯೆಹೋವ ದೇವ್ರಿಗೆ ತುಂಬ ಖುಷಿಯಾಗುತ್ತೆ. (2 ಕೊರಿಂ. 8:21; 9:7) ಅದ್ರ ಜೊತೆಗೆ ಆತನು ಕೊಟ್ಟಿರೋ ಜೀವ ಅನ್ನೋ ಉಡುಗೊರೆಗೆ ನಾವು ತುಂಬ ಬೆಲೆ ಕೊಡಬೇಕು ಅಂತ ಆತನು ಇಷ್ಟಪಡ್ತಾನೆ. ನಾವೇನು ತಿಂತೀವಿ, ಏನು ಕುಡಿತೀವಿ, ನಮ್ಮ ಆರೋಗ್ಯ ಕಾಪಾಡ್ಕೊಳ್ಳೋಕೆ ನಾವು ಏನೇನು ಮಾಡ್ತೀವಿ ಅಂತ ಆತನು ಗಮನಿಸ್ತಾ ಇರ್ತಾನೆ. ಇದನ್ನೆಲ್ಲಾ ನಾವು ಸರಿಯಾಗಿ ಮಾಡಿದಾಗ ಆತನ ಜೊತೆ ನಮಗಿರೋ ಸ್ನೇಹ ಇನ್ನೂ ಗಟ್ಟಿಯಾಗುತ್ತೆ. ಹೀಗೆ ಚಿಕ್ಕಪುಟ್ಟ ವಿಷ್ಯದಲ್ಲೂ ನಾವು ಆತನಿಗೆ ಇಷ್ಟ ಆಗೋ ತರಾನೇ ನಡ್ಕೊಂಡ್ರೆ, ಆತನಿಗೆ ನಮ್ಮ ಮೇಲೆ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ.—ಲೂಕ 16:10.
ಅತಿಥಿಸತ್ಕಾರ ಮಾಡೋದು, ಹುಷಾರಾಗಿ ಗಾಡಿ ಓಡಿಸೋದು, ಆರೋಗ್ಯ ಕಾಪಾಡ್ಕೊಳ್ಳೋಕೆ ಒಳ್ಳೇ ಊಟ ಮಾಡೋದು, ವ್ಯಾಯಾಮ ಮಾಡೋದು ಯೆಹೋವ ದೇವ್ರಿಗೆ ಖುಷಿ ತರುತ್ತೆ (ಪ್ಯಾರ 14 ನೋಡಿ)
15. ನಾವು ಬೇರೆಯವ್ರ ಜೊತೆ ಹೇಗೆ ನಡ್ಕೋಬೇಕು ಅಂತ ಯೆಹೋವ ಇಷ್ಟ ಪಡ್ತಾನೆ?
15 ಯೆಹೋವ ದೇವರು ನೀತಿವಂತರಿಗೂ ಅನೀತಿವಂತರಿಗೂ ದಯೆ ತೋರಿಸ್ತಾನೆ. (ಮತ್ತಾ. 5:45) ನಾವೂ ಆತನ ತರ ಎಲ್ರಿಗೂ ದಯೆ ತೋರಿಸಬೇಕು ಅಂತ ಆತನು ಇಷ್ಟಪಡ್ತಾನೆ. ಅದಕ್ಕೆ ಬೈಬಲ್ “ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, . . . ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು” ಅಂತ ಹೇಳುತ್ತೆ. (ತೀತ 3:2) ಇದನ್ನ ನಾವು ಮನಸ್ಸಲ್ಲಿಟ್ರೆ ಜನ ಯೆಹೋವನನ್ನ ನಂಬ್ತಿಲ್ಲ ಅಂದ ತಕ್ಷಣ ನಾವು ಅವ್ರನ್ನ ಕೀಳಾಗಿ ನೋಡಲ್ಲ. (2 ತಿಮೊ. 2:23-25) ಹೀಗೆ ನಾವು ಜನ್ರ ಜೊತೆ ದಯೆಯಿಂದ ನಡ್ಕೊಂಡ್ರೆ ಯೆಹೋವ ದೇವ್ರಿಗೆ ಇನ್ನೂ ಹತ್ರ ಆಗ್ತೀವಿ.
ನಮ್ಮ ತಪ್ಪನ್ನ ತಿದ್ಕೊಂಡ್ರೆ ದೇವ್ರಿಗೆ ಹತ್ರ ಆಗೋ ಅವಕಾಶ ಇದೆ
16. ಕೀರ್ತನೆ 73 ಬರೆದವನಿಗೆ ಸ್ವಲ್ಪ ಸಮಯ ಆದ್ಮೇಲೆ ಹೇಗನಿಸ್ತು?
16 ಈ ಹಿಂದೆ ನಾವು ಮಾಡಿದ ತಪ್ಪನ್ನ ನೆನಸ್ಕೊಂಡು ‘ಯೆಹೋವ ದೇವರು ನನ್ನನ್ನ ಪ್ರೀತಿಸಲ್ಲ’ ಅಂತ ಕೆಲವೊಮ್ಮೆ ಅಂದ್ಕೊಬಹುದು. ಕೀರ್ತನೆ 73ನ್ನ ಬರೆದಿರೋ ಕೀರ್ತನೆಗಾರನಿಗೂ ಒಂದು ರೀತಿಲಿ ಹೀಗೇ ಅನಿಸ್ತು. ಅವನು ದೇವ್ರ ಜೊತೆ ತನಗಿರೋ ಸಂಬಂಧನ ನೆನಪಿಸ್ಕೊಂಡು, “ನನ್ನ ಕಾಲು ಇನ್ನೇನು ದಾರಿ ತಪ್ಪಿ ಹೋಗ್ತಿತ್ತು, ನನ್ನ ಪಾದ ಜಾರಿ ಇನ್ನೇನು ಬೀಳ್ತಿದ್ದೆ” ಅಂತ ಹೇಳಿದ. (ಕೀರ್ತ. 73:2) ನಾನು ‘ನೊಂದುಹೋಗಿದ್ದೆ,’ “ಮೂರ್ಖನಾಗಿದ್ದೆ,” “ಬುದ್ಧಿಯಿಲ್ಲದ ಮೃಗದ ತರ ಇದ್ದೆ” ಅಂತ ತನ್ನ ತಪ್ಪನ್ನ ಒಪ್ಕೊಳ್ತಾನೆ. (ಕೀರ್ತ. 73:21, 22) ಹಾಗಂತ ಅವನು ‘ಯೆಹೋವ ದೇವರು ನನ್ನನ್ನ ಕ್ಷಮಿಸೋದೇ ಇಲ್ಲ, ಪ್ರೀತಿಸೋದೇ ಇಲ್ಲ’ ಅನ್ನೋ ನಿರ್ಧಾರಕ್ಕೆ ಬಂದುಬಿಟ್ನಾ?
17. (ಎ) ಕೀರ್ತನೆಗಾರ ತುಂಬಾ ಕುಗ್ಗಿ ಹೋಗಿದ್ದಾಗ ಏನು ಮಾಡಿದ? (ಬಿ) ನಾವು ಅವನಿಂದ ಏನು ಕಲೀಬಹುದು? (ಚಿತ್ರಗಳನ್ನ ನೋಡಿ.)
17 ಆ ಕೀರ್ತನೆಗಾರನಿಗೆ ‘ಯೆಹೋವ ನನ್ನ ಕೈ ಬಿಟ್ಟಿದ್ದಾನೆ, ನನ್ನನ್ನ ಪ್ರೀತಿಸ್ತಿಲ್ಲ’ ಅಂತ ಅನಿಸಿದ್ದು ಸ್ವಲ್ಪ ಸಮಯಕ್ಕಷ್ಟೇ. ಅವನು ತುಂಬ ಕುಗ್ಗಿ ಹೋಗಿದ್ದ ಸಮಯದಲ್ಲೂ ಯೆಹೋವ ದೇವ್ರಿಗೆ ಹತ್ರ ಆಗಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡ. ಅವನು ಹೇಳಿರೋ ಮಾತಿಂದಾನೇ ಇದು ನಮಗೆ ಗೊತ್ತಾಗುತ್ತೆ. ಅವನು, “ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ, ನೀನು ನನ್ನ ಬಲಗೈಯನ್ನ ಹಿಡ್ಕೊಂಡು ಇರ್ತಿಯ. ನೀನು ಸಲಹೆ ಕೊಟ್ಟು ನನಗೆ ದಾರಿ ತೋರಿಸ್ತೀಯ, ಆಮೇಲೆ ನೀನು ನನಗೆ ಸನ್ಮಾನ ಮಾಡಿಸ್ತೀಯ” ಅಂತ ಹೇಳಿದ್ದಾನೆ. (ಕೀರ್ತ. 73:23, 24) ನಾವೂ ಎಷ್ಟೋ ಸಲ ಕುಗ್ಗಿ ಹೋಗ್ತೀವಿ, ದುಃಖದಲ್ಲಿ ಮುಳುಗಿ ಹೋಗ್ತೀವಿ. ಆಗೆಲ್ಲಾ ದೊಡ್ಡ ಬಂಡೆ ತರ ಇರೋ ಯೆಹೋವನನ್ನ ಹಿಡ್ಕೋಬೇಕು. (ಕೀರ್ತ. 73:26; 94:18) ಒಂದುವೇಳೆ ನಾವು ಗಂಭೀರ ಪಾಪ ಮಾಡಿದ್ರೆ ‘ಯೆಹೋವ ನಮ್ಮನ್ನ ಪ್ರೀತಿಸೋದಿಲ್ಲ’ ಅಂತ ಅಂದ್ಕೊಬಾರದು. ನಾವು ಆತನ ಹತ್ರ ವಾಪಸ್ ಹೋಗಬೇಕು. ‘ಆತನು ಯಾವಾಗ್ಲೂ ಕ್ಷಮಿಸೋಕೆ ಸಿದ್ಧನಾಗಿ ಇರ್ತಾನೆ’ ಅನ್ನೋದನ್ನ ಮನಸ್ಸಲ್ಲಿ ಇಡಬೇಕು. (ಕೀರ್ತ. 86:5) ಎಲ್ಲಾ ಟೈಮಲ್ಲೂ ನಾವು ಯೆಹೋವನಿಗೆ ಹತ್ರವಾಗೇ ಇರಬೇಕು. ಅದ್ರಲ್ಲೂ ನಾವು ಕುಗ್ಗಿ ಹೋದಾಗಂತೂ ಯೆಹೋವ ದೇವ್ರನ್ನ ಬಿಟ್ಟು ಕದಲಬಾರದು.—ಕೀರ್ತ. 103:13, 14.
ನಾವು ತುಂಬ ಕುಗ್ಗಿ ಹೋದಾಗ ದೇವ್ರಿಗೆ ಇನ್ನೂ ಹತ್ರ ಆಗಬೇಕು ಅಂತ ನೆನಪಿಡಿ. ಆಗ ಪ್ರಾರ್ಥನೆ ಮಾಡೋದನ್ನ, ಕೂಟಗಳಿಗೆ ಹೋಗೋದನ್ನ ತಪ್ಪಿಸಬಾರದು (ಪ್ಯಾರ 17 ನೋಡಿ)
ಯೆಹೋವನಿಗೆ ಯಾವಾಗ್ಲೂ ಹತ್ರವಾಗೇ ಇರಿ
18. ಯೆಹೋವ ದೇವ್ರ ಸ್ನೇಹಕ್ಕೆ ಮಿತಿನೇ ಇಲ್ಲ ಅಂತ ನಾವು ಯಾಕೆ ಹೇಳಬಹುದು?
18 ನೀವು ಯೆಹೋವನಿಗೆ ಎಷ್ಟು ಹತ್ರ ಆಗಬಹುದು ಗೊತ್ತಾ? ಆತನ ಸ್ನೇಹಕ್ಕೆ ಮಿತಿನೇ ಇಲ್ಲ. ಅದಕ್ಕೇ ಬೈಬಲ್ ದೇವರ ವಿವೇಕ, ಜ್ಞಾನ, ಕೆಲಸಗಳು ಅಪಾರ, ಅಗಾಧ ಅಂತ ಹೇಳುತ್ತೆ. ಹಾಗಾಗಿ ನಾವು ಆತನ ಬಗ್ಗೆ ಜೀವನಪೂರ್ತಿ ತಿಳ್ಕೊಳ್ತಾ ಇರ್ಬಹುದು, ಅದಕ್ಕೆ ಕೊನೆನೇ ಇಲ್ಲ.—ರೋಮ. 11:33.
19. ಕೀರ್ತನೆ 73 ನಮಗೆ ಏನಂತ ಧೈರ್ಯ ತುಂಬುತ್ತೆ?
19 ಕೀರ್ತನೆ 79:13 “ನಿನ್ನ ಜನರಾಗಿರೋ ನಾವು, ನಿನ್ನ ಕುರಿಗಳಾಗಿರೋ ನಾವು, ನಿನಗೆ ಯಾವಾಗ್ಲೂ ಧನ್ಯವಾದ ಹೇಳ್ತೀವಿ, ತಲೆಮಾರು ತಲೆಮಾರುಗಳ ತನಕ ನಿನ್ನನ್ನ ಹಾಡಿ ಹೊಗಳ್ತೀವಿ” ಅಂತ ಹೇಳುತ್ತೆ. ನಾವು ಹೀಗೆ ಯೆಹೋವನನ್ನ ಹೊಗಳ್ತಾ ಆತನಿಗೆ ಹತ್ರವಾಗೇ ಇದ್ರೆ ಶಾಶ್ವತ ಆಶೀರ್ವಾದ ಪಡ್ಕೊಳ್ತೀವಿ. ಅಷ್ಟೇ ಅಲ್ಲ, ಕೀರ್ತನೆಗಾರನ ತರ “ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ, ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ. ಯಾವಾಗ್ಲೂ ಆತನೇ ನನ್ನ ಪಾಲು” ಅಂತ ಆತನನ್ನ ಹಾಡಿ ಹೊಗಳ್ತೀವಿ.—ಕೀರ್ತ. 73:26.
ಗೀತೆ 32 ಯೆಹೋವನ ಪಕ್ಷಕ್ಕೆ ಬನ್ನಿ!
a ತುಂಬಾ ಸಮಯದಿಂದ ದುಃಖದಲ್ಲಿ ಮುಳುಗಿ ಹೋಗಿರೋರು, ಕುಗ್ಗಿ ಹೋಗಿರೋರು, ಕೆಲವೊಮ್ಮೆ ಡಾಕ್ಟರ್ ಸಹಾಯ ಪಡ್ಕೊಬೇಕಾಗುತ್ತೆ. ಇದ್ರ ಬಗ್ಗೆ ಹೆಚ್ಚಿನ ಮಾಹಿತಿ ಪಡ್ಕೊಳೋಕೆ ಕಾವಲಿನಬುರುಜು, ನಂ. 1 2023 ನೋಡಿ.