ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಏಪ್ರಿಲ್‌ ಪು. 26-31
  • ಯುವ ಸಹೋದರರೇ, ಮಾರ್ಕ ಮತ್ತು ತಿಮೊತಿ ತರ ಇರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯುವ ಸಹೋದರರೇ, ಮಾರ್ಕ ಮತ್ತು ತಿಮೊತಿ ತರ ಇರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೇವೆ ಮಾಡೋಕೆ ಮಾರ್ಕನ ತರ ಮುಂದೆ ಬನ್ನಿ
  • ತಿಮೊತಿ ತರ ಪ್ರೀತಿ ಕಾಳಜಿ ತೋರಿಸಿ
  • ಪೌಲ ಕೊಟ್ಟ ಸಲಹೆಯಿಂದ ಪ್ರಯೋಜನಪಡಿರಿ
  • ನಾವು ಮಾಡೋ ಸೇವೆ ಆಶೀರ್ವಾದಗಳನ್ನ ತರುತ್ತೆ
  • ‘ಸಭೆಗಳನ್ನ ಬಲಪಡಿಸಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಏಪ್ರಿಲ್‌ ಪು. 26-31

ಅಧ್ಯಯನ ಲೇಖನ 18

ಗೀತೆ 65 ಮುನ್ನಡೆ ಮುನ್ನಡೆ

ಯುವ ಸಹೋದರರೇ, ಮಾರ್ಕ ಮತ್ತು ತಿಮೊತಿ ತರ ಇರಿ

“ಮಾರ್ಕನನ್ನ ನಿನ್ನ ಜೊತೆ ಕರ್ಕೊಂಡು ಬಾ, ಯಾಕಂದ್ರೆ ಅವನು ಸೇವೆಯಲ್ಲಿ ನನಗೆ ತುಂಬ ಸಹಾಯ ಮಾಡ್ತಾನೆ.”—2 ತಿಮೊ. 4:11.

ಈ ಲೇಖನದಲ್ಲಿ ಏನಿದೆ?

ಯೆಹೋವ ದೇವರ ಸೇವೆನ ಜಾಸ್ತಿ ಮಾಡೋಕೆ ಮತ್ತು ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಮಾರ್ಕ ಮತ್ತು ತಿಮೊತಿ ತರ ಯುವ ಸಹೋದರರು ಯಾವ ಗುಣಗಳನ್ನ ಬೆಳೆಸ್ಕೊಬೇಕು ಅಂತ ನೋಡೋಣ.

1-2. ಮಾರ್ಕ ಮತ್ತು ತಿಮೊತಿ ಯೆಹೋವನ ಸೇವೆನ ಜಾಸ್ತಿ ಮಾಡದೆ ಇರೋಕೆ ಯಾವೆಲ್ಲ ಕಾರಣಗಳನ್ನ ಕೊಡಬಹುದಿತ್ತು?

ಯುವ ಸಹೋದರರೇ, ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಮತ್ತು ಸಭೆಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಆಸೆ ಇದ್ಯಾ? ಖಂಡಿತ ಇರುತ್ತೆ. ನಿಮ್ಮಲ್ಲಿ ತುಂಬ ಜನ ಸೇವೆ ಮಾಡೋಕೆ ಮುಂದೆ ಬರ್ತಿರೋದನ್ನ ನೋಡಿ ನಮಗೆ ತುಂಬ ಖುಷಿ ಆಗ್ತಿದೆ! (ಕೀರ್ತ. 110:3) ಆದ್ರೂ ಕೆಲವೊಮ್ಮೆ ಯೆಹೋವನ ಸೇವೆನ ಜಾಸ್ತಿ ಮಾಡೋಕೆ ನಿಮಗೆ ಕಷ್ಟ ಆಗಬಹುದು. ‘ನನಗೆ ಎಲ್ಲಿ ನೇಮಕ ಸಿಗುತ್ತೋ, ಅಲ್ಲಿಗೆ ಹೋದಾಗ ನನ್ನ ಜೀವನ ಹೇಗೆ ಬದಲಾಗುತ್ತೋ’ ಅಂತ ಭಯ ಆಗಬಹುದು. ‘ಆ ನೇಮಕನ ನನ್ನಿಂದ ಚೆನ್ನಾಗಿ ಮಾಡೋಕೆ ಆಗಲ್ವೇನೋ’ ಅಂತ ಅನಿಸಬಹುದು. ನಿಮಗೆ ಈ ರೀತಿ ಅನಿಸ್ತಿದ್ರೆ ಬೇಜಾರು ಮಾಡ್ಕೊಬೇಡಿ. ಈ ತರ ಅನಿಸ್ತಿರೋದು ನಿಮ್ಮೊಬ್ರಿಗೆ ಅಲ್ಲ.

2 ಮಾರ್ಕ ಮತ್ತು ತಿಮೊತಿಗೂ ಹೀಗೆ ಅನಿಸ್ತು. ಅವ್ರಿಗೆ ಭಯ ಆದ್ರೂ, ಅವ್ರ ನೇಮಕನ ಚೆನ್ನಾಗಿ ಮಾಡೋಕಾಗಲ್ಲ ಅಂತ ಅನಿಸಿದ್ರೂ ಅವರು ಯೆಹೋವನ ಸೇವೆ ಮಾಡೋಕೆ ಮುಂದೆ ಬಂದ್ರು. ಮಾರ್ಕ ತನ್ನ ಅಮ್ಮನ ಜೊತೆ ಒಂದು ಒಳ್ಳೇ ಮನೆಲಿ ಆರಾಮಾಗಿ ಇದ್ದಿರಬೇಕು. ಅಪೊಸ್ತಲ ಪೌಲ ಮತ್ತು ಬಾರ್ನಬ ಮೊದಲನೇ ಮಿಷನರಿ ಪ್ರಯಾಣಕ್ಕೆ ತಮ್ಮ ಜೊತೆ ಮಾರ್ಕನನ್ನೂ ಕರೆದ್ರು. (ಅ. ಕಾ. 12:12, 13, 25) ಆಗ ಮಾರ್ಕ ಯೆಹೋವನ ಸೇವೆ ಜಾಸ್ತಿ ಮಾಡೋಕೆ ತನ್ನ ಸ್ವಂತ ಊರನ್ನೇ ಬಿಟ್ಟುಹೋದ. ಮೊದಲು ಅವನು ಅಂತಿಯೋಕ್ಯಕ್ಕೆ ಹೋದ. ಆಮೇಲೆ ಪೌಲ ಮತ್ತು ಬಾರ್ನಬನ ಜೊತೆ ಸೇರಿ ದೂರದೂರದ ಊರುಗಳಿಗೂ ಹೋದ. (ಅ. ಕಾ. 13:1-5) ಪೌಲ ತನ್ನ ಜೊತೆ ಸೇವೆ ಮಾಡೋಕೆ ತಿಮೊತಿನ ಕರೆದಾಗ ತಿಮೊತಿನೂ ತನ್ನ ಅಪ್ಪ-ಅಮ್ಮನ ಜೊತೆ ಇದ್ದಿರಬೇಕು. ಅವನು ಆಗಿನ್ನೂ ಚಿಕ್ಕವನು, ಅಷ್ಟೇನು ಅನುಭವ ಇರ್ಲಿಲ್ಲ. ‘ಇಷ್ಟು ದೊಡ್ಡ ನೇಮಕನ ನನ್ನಿಂದ ಹೇಗೆ ಮಾಡಕ್ಕಾಗುತ್ತೆ’ ಅಂತ ಅವನು ಅಂದ್ಕೊಬಹುದಿತ್ತು. (1 ಕೊರಿಂಥ 16:10, 11 ಮತ್ತು 1 ತಿಮೊತಿ 4:12 ಹೋಲಿಸಿ.) ಆದ್ರೆ ಪೌಲ ಕರೆದಾಗ ಅವನು ಹೋದ. ಇದ್ರಿಂದ ತುಂಬ ಆಶೀರ್ವಾದಗಳನ್ನ ಪಡ್ಕೊಂಡ.—ಅ. ಕಾ. 16:3-5.

3. (ಎ) ಮಾರ್ಕ ಮತ್ತು ತಿಮೊತಿನ ಪೌಲ ತುಂಬ ಪ್ರೀತಿಸ್ತಿದ್ದ ಅಂತ ಹೇಗೆ ಗೊತ್ತಾಗುತ್ತೆ? (2 ತಿಮೊತಿ 4:6, 9, 11) (ಚಿತ್ರಗಳನ್ನ ನೋಡಿ.) (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ತೀವಿ?

3 ಮಾರ್ಕ ಮತ್ತು ತಿಮೊತಿ ಚಿಕ್ಕ ವಯಸ್ಸಲ್ಲೇ ಸಭೆಲಿ ದೊಡ್ಡದೊಡ್ಡ ನೇಮಕಗಳನ್ನ ಮಾಡೋಕೆ ಕಲಿತ್ರು. ಪೌಲನಿಗೆ ಅವ್ರಿಬ್ರ ಮೇಲೆ ತುಂಬ ಪ್ರೀತಿ ಇತ್ತು. ಎಷ್ಟಿತ್ತಂದ್ರೆ ತಾನು ಇನ್ನೇನು ಸಾಯ್ತೀನಿ ಅಂತ ಗೊತ್ತಾದಾಗ ತನ್ನ ಜೊತೆ ಇರೋಕೆ ಅವ್ರನ್ನ ಕರೆಸ್ಕೊಂಡ. (2 ತಿಮೊತಿ 4:6, 9, 11 ಓದಿ.) ಪೌಲನಿಗೆ ಅವ್ರಲ್ಲಿ ಯಾವ ಗುಣಗಳು ಇಷ್ಟ ಆಗಿತ್ತು? ಯುವ ಸಹೋದರರು ಅವ್ರಿಬ್ರ ತರ ಹೇಗಿರಬಹುದು? ಪೌಲ ಕೊಟ್ಟ ಬುದ್ಧಿವಾದದಿಂದ ಇವತ್ತು ಯುವ ಸಹೋದರರು ಏನು ಕಲಿಬಹುದು?

ಚಿತ್ರಗಳು: 1. ಪೌಲ ಮತ್ತು ಬಾರ್ನಬನಿಗೆ ಮಾರ್ಕ ಊಟ ರೆಡಿ ಮಾಡ್ತಿದ್ದಾನೆ. 2. ತಿಮೊತಿ ಹಿರಿಯರ ಮುಂದೆ ಒಂದು ಪತ್ರ ಓದ್ತಿದ್ದಾನೆ.

ಮಾರ್ಕ ಮತ್ತು ತಿಮೊತಿ ಚಿಕ್ಕ ವಯಸ್ಸಲ್ಲೇ ದೊಡ್ಡದೊಡ್ಡ ಜವಾಬ್ದಾರಿಗಳನ್ನ ವಹಿಸ್ಕೊಂಡಿದ್ದಕ್ಕೆ ಪೌಲ ಅವ್ರನ್ನ ತುಂಬ ಮೆಚ್ಕೊಂಡ (ಪ್ಯಾರ 3 ನೋಡಿ)c


ಸೇವೆ ಮಾಡೋಕೆ ಮಾರ್ಕನ ತರ ಮುಂದೆ ಬನ್ನಿ

4-5. ದೇವರ ಸೇವೆ ಮಾಡೋಕೆ ಮತ್ತು ಬೇರೆಯವ್ರಿಗೆ ಸಹಾಯ ಮಾಡೋಕೆ ತನಗೆ ಮನಸ್ಸಿತ್ತು ಅಂತ ಮಾರ್ಕ ಹೇಗೆ ತೋರಿಸ್ಕೊಟ್ಟ?

4 ಸೇವೆ ಮಾಡೋದು ಅಂದ್ರೆ ‘ಬೇರೆಯವ್ರಿಗೆ ಸಹಾಯ ಮಾಡೋದು, ಕಷ್ಟ ಆದ್ರೂ ಸಹಾಯ ಮಾಡೋದನ್ನ ಮುಂದುವರಿಸೋದು’ ಅಂತ ಒಂದು ರೆಫರೆನ್ಸ್‌ ಹೇಳುತ್ತೆ. ಇದನ್ನೇ ಮಾರ್ಕ ಮಾಡಿದ. ಪೌಲ ಮಾರ್ಕನನ್ನ ಎರಡನೇ ಮಿಷನರಿ ಪ್ರಯಾಣಕ್ಕೆ ಕರ್ಕೊಂಡು ಹೋಗದೇ ಇದ್ದಾಗ ಅವನಿಗೆ ತುಂಬ ನೋವಾಗಿರಬೇಕು, ಬೇಜಾರಾಗಿರಬೇಕು. (ಅ. ಕಾ. 15:37, 38) ಹಾಗಂತ ಅವನು ಸಹೋದರ ಸಹೋದರಿಯರಿಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಡಲಿಲ್ಲ.

5 ಮಾರ್ಕ ತನ್ನ ಸಂಬಂಧಿಕನಾಗಿದ್ದ ಬಾರ್ನಬನ ಜೊತೆ ಬೇರೆ ಕಡೆ ಹೋಗಿ ಸೇವೆ ಮಾಡಿದ. ಸುಮಾರು 11 ವರ್ಷಗಳಾದ ಮೇಲೆ ಪೌಲ ರೋಮ್‌ನ ಜೈಲಲ್ಲಿದ್ದಾಗ ಮಾರ್ಕ ಅವನ ಜೊತೆ ಇದ್ದು ಅವನಿಗೆ ಸಹಾಯ ಮಾಡಿದ. (ಫಿಲೆ. 23, 24) ಇದ್ರಿಂದ ಪೌಲನಿಗೆ ಎಷ್ಟು ಖುಷಿ ಆಯ್ತಂದ್ರೆ ‘ನನ್ನನ್ನ ಮಾರ್ಕ ಬಲಪಡಿಸಿದ, ಸಹಾಯ ಮಾಡಿದ’ ಅಂತ ಬರೆದ.—ಕೊಲೊ. 4:10, 11.

6. ತುಂಬ ವರ್ಷ ದೇವರ ಸೇವೆ ಮಾಡಿದವ್ರ ಜೊತೆ ಸಮಯ ಕಳೆದಿದ್ರಿಂದ ಮಾರ್ಕನಿಗೆ ಏನೆಲ್ಲ ಪ್ರಯೋಜನ ಆಯ್ತು? (ಪಾದಟಿಪ್ಪಣಿ ನೋಡಿ.)

6 ತುಂಬ ವರ್ಷಗಳಿಂದ ದೇವರಿಗೆ ನಿಯತ್ತಾಗಿ ಸೇವೆ ಮಾಡಿದವ್ರ ಜೊತೆ ಸಮಯ ಕಳೆದಿದ್ರಿಂದ ಮಾರ್ಕನಿಗೆ ತುಂಬ ಪ್ರಯೋಜನ ಆಯ್ತು. ಅವನು ಪೌಲನ ಜೊತೆ ರೋಮ್‌ನಲ್ಲಿ ಸ್ವಲ್ಪ ಸಮಯ ಇದ್ದು ಆಮೇಲೆ ಬಾಬೆಲ್‌ನಲ್ಲಿದ್ದ ಅಪೊಸ್ತಲ ಪೇತ್ರನ ಜೊತೆ ಸೇವೆ ಮಾಡೋಕೆ ಹೋದ. ಅಲ್ಲಿ ಅವ್ರಿಬ್ರ ಸ್ನೇಹ ಎಷ್ಟು ಗಟ್ಟಿ ಆಯ್ತಂದ್ರೆ ಪೇತ್ರ ಅವನನ್ನ “ನನ್ನ ಮಗ ಮಾರ್ಕ” ಅಂತ ಕರೆದ. (1 ಪೇತ್ರ 5:13) ಹೀಗೆ ಅವ್ರಿಬ್ರೂ ಒಟ್ಟಿಗೆ ಇರುವಾಗ ಪೇತ್ರ ಯೇಸು ಬಗ್ಗೆ, ಆತನು ಮಾಡಿದ ಸೇವೆ ಬಗ್ಗೆ ಮಾರ್ಕನಿಗೆ ಹೇಳಿರಬೇಕು. ಆಮೇಲೆ ಅದನ್ನ ಮಾರ್ಕ ತನ್ನ ಸುವಾರ್ತಾ ಪುಸ್ತಕದಲ್ಲಿ ಬರೆದ.a

7. ಸಹೋದರ ಸ್ಯಾಮ್‌ಸನ್‌ ಯುವಕರಾಗಿದ್ದಾಗ ಮಾರ್ಕನ ತರ ಏನು ಮಾಡಿದ್ರು? (ಚಿತ್ರ ನೋಡಿ.)

7 ಮಾರ್ಕ ಯೆಹೋವನ ಸೇವೆ ಮಾಡ್ತಾ ಇದ್ದ. ದೇವರನ್ನ ಪ್ರೀತಿಸೋ ಸಹೋದರರ ಜೊತೆ ಇರ್ತಿದ್ದ. ನೀವು ಹೇಗೆ ಮಾರ್ಕನ ತರ ಆಗಬಹುದು? ನಿಮಗೆ ಯಾವುದಾದ್ರೂ ಸುಯೋಗ ಅಥವಾ ನೇಮಕ ಸಿಗದೇ ಹೋದಾಗ ಬೇಜಾರು ಮಾಡ್ಕೊಬೇಡಿ, ತಾಳ್ಮೆಯಿಂದ ಇರಿ. ಯೆಹೋವ ದೇವರ ಸೇವೆ ಮಾಡೋಕೆ ಮತ್ತು ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಬೇರೆಬೇರೆ ದಾರಿಗಳನ್ನ ಹುಡುಕಿ. ಸಹೋದರ ಸ್ಯಾಮ್‌ಸನ್‌b ಅವ್ರ ಉದಾಹರಣೆ ನೋಡಿ. ಅವರು ಚಿಕ್ಕವರಾಗಿದ್ದಾಗ ಬೇರೆ ಯುವ ಸಹೋದರರ ಜೊತೆ ತಮ್ಮನ್ನ ಹೋಲಿಸ್ಕೊಳ್ತಿದ್ರು. ತನಗಿಂತ ಮುಂಚೆ ಬೇರೆಯವ್ರಿಗೆ ಸುಯೋಗ ಸಿಕ್ಕಾಗ ಅವ್ರಿಗೆ ತುಂಬ ಬೇಜಾರಾಗ್ತಿತ್ತು. ತನ್ನನ್ನ ಯಾರೂ ಗಮನಿಸ್ತಿಲ್ಲ ಅಂತ ಅವ್ರಿಗೆ ಅನಿಸ್ತಿತ್ತು. ಸ್ವಲ್ಪ ಸಮಯ ಆದ್ಮೇಲೆ ಇದ್ರ ಬಗ್ಗೆ ಅವರು ಹಿರಿಯರ ಹತ್ರ ಹೇಳ್ಕೊಂಡ್ರು. ಆಗ ಒಬ್ಬ ಹಿರಿಯ ‘ಯಾರು ನೋಡ್ಲಿ ಬಿಡ್ಲಿ, ಬೇರೆಯವ್ರಿಗೆ ಸಹಾಯ ಮಾಡೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡ್ತಾ ಇರು’ ಅಂತ ಸಲಹೆ ಕೊಟ್ರು. ಈ ಸಲಹೆ ಅವ್ರ ಮನಸ್ಸಿಗೆ ನಾಟ್ತು. ಅದಕ್ಕೇ ಅವರು ವಯಸ್ಸಾದವ್ರನ್ನ ಮತ್ತು ಯಾರಿಗೆಲ್ಲ ಕೂಟಗಳಿಗೆ ಬರೋಕೆ ಕಷ್ಟ ಆಗ್ತಿತ್ತೋ ಅವ್ರನ್ನೆಲ್ಲ ಕರ್ಕೊಂಡು ಬರ್ತಿದ್ರು. ಈಗ ಹಿರಿಯರಾಗಿರೋ ಸ್ಯಾಮ್‌ಸನ್‌ ಅದನ್ನ ನೆನಸ್ಕೊಂಡು ಏನು ಹೇಳ್ತಾರೆ ನೋಡಿ: “ಸೇವೆ ಮಾಡೋದಂದ್ರೆ ನಿಜವಾಗ್ಲೂ ಏನಂತ ನನಗೀಗ ಅರ್ಥ ಆಗಿದೆ. ಬೇರೆಯವ್ರಿಗೆ ಸಹಾಯ ಮಾಡೋದ್ರಿಂದ ಖುಷಿನೂ ಸಿಕ್ಕಿದೆ.”

ಒಬ್ಬ ಯುವ ಸಹೋದರ ಕಾರಲ್ಲಿ ವಯಸ್ಸಾದ ಸಹೋದರನನ್ನ ಕೂಟಕ್ಕೆ ಕರ್ಕೊಂಡು ಬರ್ತಿದ್ದಾನೆ.

ತುಂಬ ವರ್ಷಗಳಿಂದ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡಿರೋ ಸಹೋದರರ ಜೊತೆ ಸಮಯ ಕಳಿಯೋದ್ರಿಂದ ಯುವ ಸಹೋದರರಿಗೆ ಯಾವ ಪ್ರಯೋಜನ ಸಿಗುತ್ತೆ? (ಪ್ಯಾರ 7 ನೋಡಿ)


ತಿಮೊತಿ ತರ ಪ್ರೀತಿ ಕಾಳಜಿ ತೋರಿಸಿ

8. ಪೌಲ ತನ್ನ ಜೊತೆ ಬೇರೆ ಊರುಗಳಿಗೆ ಹೋಗೋಕೆ ತಿಮೊತಿನ ಯಾಕೆ ಕರೆದ? (ಫಿಲಿಪ್ಪಿ 2:19-22)

8 ಈ ಮುಂಚೆ ತಾನು ವಿರೋಧ, ಹಿಂಸೆ ಅನುಭವಿಸಿದ್ದ ಊರುಗಳಿಗೆ ಮತ್ತೆ ಹೋಗಬೇಕು ಅಂತ ಪೌಲ ಅಂದ್ಕೊಂಡ. ಅದಕ್ಕೇ ಅವನ ಜೊತೆಗೆ ಹೋಗೋಕೆ ತುಂಬ ಧೈರ್ಯ ಇರೋ ಸಹೋದರರು ಬೇಕಿತ್ತು. ಹಾಗಾಗಿ ಅವನು ತುಂಬ ವರ್ಷಗಳಿಂದ ದೇವರ ಸೇವೆ ಮಾಡ್ತಿದ್ದ ಸೀಲನನ್ನ ಆರಿಸ್ಕೊಂಡ. (ಅ. ಕಾ. 15:22, 40) ಆಮೇಲೆ ತಿಮೊತಿನೂ ಕರೆದ. ಯಾಕೆ ಅವನನ್ನ ಕರೆದ? ಯಾಕಂದ್ರೆ ಅವನಿಗೆ ಸಭೆಲಿ ಒಳ್ಳೇ ಹೆಸ್ರಿತ್ತು. (ಅ. ಕಾ. 16:1, 2) ಅಷ್ಟೇ ಅಲ್ಲ, ಅವನಿಗೆ ಜನ್ರ ಮೇಲೆ ನಿಜವಾಗ್ಲೂ ತುಂಬ ಕಾಳಜಿ ಇತ್ತು.—ಫಿಲಿಪ್ಪಿ 2:19-22 ಓದಿ.

9. ತಿಮೊತಿ ಸಹೋದರ ಸಹೋದರಿಯರಿಗೆ ಹೇಗೆ ಪ್ರೀತಿ ಕಾಳಜಿ ತೋರಿಸಿದ?

9 ತಿಮೊತಿಗೆ ತನಗಿಂತ ಬೇರೆಯವ್ರ ಮೇಲೆನೇ ತುಂಬ ಪ್ರೀತಿ, ಕಾಳಜಿ ಇತ್ತು. ಇದನ್ನ ಪೌಲ ಅವನ ಜೊತೆ ಸೇವೆ ಶುರುಮಾಡಿದಾಗ್ಲೇ ನೋಡಿದ. ಅದಕ್ಕೇ ಬೆರೋಯದಲ್ಲಿದ್ದ ಹೊಸ ಶಿಷ್ಯರನ್ನ ತಿಮೊತಿ ಚೆನ್ನಾಗಿ ನೋಡ್ಕೊಳ್ತಾನೆ ಅಂತ ಪೌಲನಿಗೆ ಪೂರ್ತಿ ನಂಬಿಕೆ ಇತ್ತು. ಹಾಗಾಗಿ ಅವನು ತಿಮೊತಿನ ಬೆರೋಯದಲ್ಲೇ ಇರೋಕೆ ಬಿಟ್ಟ. (ಅ. ಕಾ. 17:13, 14) ಸೀಲನೂ ಬೆರೋಯದಲ್ಲೇ ಉಳ್ಕೊಂಡಿದ್ರಿಂದ ತಿಮೊತಿಗೆ ಅವನಿಂದ ತುಂಬ ವಿಷ್ಯಗಳನ್ನ ಕಲಿಯೋಕೆ ಆಗಿರುತ್ತೆ. ಆಮೇಲೆ ಪೌಲ ಥೆಸಲೋನಿಕದಲ್ಲಿದ್ದ ಕ್ರೈಸ್ತರ ನಂಬಿಕೆನ ಗಟ್ಟಿಮಾಡೋಕೆ ತಿಮೊತಿನ ಮಾತ್ರ ಕಳಿಸಿದ. (1 ಥೆಸ. 3:2) ಮುಂದಿನ 15 ವರ್ಷಗಳಲ್ಲಿ ತಿಮೊತಿಗೆ ಸಹೋದರ ಸಹೋದರಿಯರ ಮೇಲಿದ್ದ ಪ್ರೀತಿ ಇನ್ನೂ ಜಾಸ್ತಿ ಆಯ್ತು. ಎಷ್ಟಂದ್ರೆ ಅವರು ಕಷ್ಟ ಅನುಭವಿಸೋದನ್ನ ನೋಡಿ ಅವನು ‘ಕಣ್ಣೀರು ಹಾಕ್ತಿದ್ದ.’ (ರೋಮ. 12:15; 2 ತಿಮೊ. 1:4) ಯುವ ಸಹೋದರರು ಹೇಗೆ ತಿಮೊತಿ ತರ ಇರಬಹುದು?

10. ಬೇರೆಯವ್ರಿಗೆ ಕಾಳಜಿ ತೋರಿಸೋದನ್ನ ವಿಲ್ಸನ್‌ ಹೇಗೆ ಕಲಿತ್ರು?

10 ವಿಲ್ಸನ್‌ ಅನ್ನೋ ಸಹೋದರ ಕೂಡ ಬೇರೆಯವ್ರಿಗೆ ಕಾಳಜಿ ತೋರಿಸೋದನ್ನ ಕಲಿತ್ರು. ಅವರು ಯುವಕರಾಗಿದ್ದಾಗ ವಯಸ್ಸಾಗಿರೋ ಸಹೋದರ ಸಹೋದರಿಯರ ಜೊತೆ ಮಾತಾಡೋಕೆ ತುಂಬ ಕಷ್ಟಪಡ್ತಿದ್ರು. ಮೀಟಿಂಗ್‌ನಲ್ಲಿ ಅವ್ರಿಗೆ ಬರೀ ನಮಸ್ಕಾರ ಹೇಳಿ ಅಲ್ಲಿಂದ ಹೋಗಿಬಿಡ್ತಿದ್ರು. ಆಗ ಒಬ್ಬ ಹಿರಿಯ ವಿಲ್ಸನ್‌ ಹತ್ರ ಬಂದು ಬೇರೆಯವ್ರ ಜೊತೆ ಮಾತು ಶುರುಮಾಡೋಕೆ ಏನು ಮಾಡಬೇಕು ಅಂತ ಹೇಳ್ಕೊಟ್ರು. ಉದಾಹರಣೆಗೆ, ಅವರು ಮಾಡಿರೋ ಯಾವುದಾದ್ರೂ ಒಳ್ಳೇ ವಿಷ್ಯನ ಹೊಗಳ್ತಾ ಮಾತು ಶುರುಮಾಡಬಹುದು, ಅವ್ರಿಗೆ ಏನಿಷ್ಟ ಅಂತ ಯೋಚಿಸಿ ಅದ್ರ ಬಗ್ಗೆ ಮಾತಾಡಬಹುದು ಅಂತ ಹೇಳ್ಕೊಟ್ರು. ವಿಲ್ಸನ್‌ ಆ ಹಿರಿಯ ಹೇಳಿದ್ದನ್ನೇ ಮಾಡಿದ್ರು. ಈಗ ಹಿರಿಯರಾಗಿರೋ ವಿಲ್ಸನ್‌ ಏನು ಹೇಳ್ತಾರೆ ನೋಡಿ: “ನಾನೀಗ ಎಲ್ಲಾ ವಯಸ್ಸಿನವ್ರ ಜೊತೆನೂ ಮುಜುಗರ ಇಲ್ಲದೆ, ಸುಲಭವಾಗಿ ಮಾತಾಡ್ತೀನಿ. ನಂಗೀಗ ಸಹೋದರ ಸಹೋದರಿಯರನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕಾಗ್ತಿದೆ ಅಂತ ಖುಷಿಯಾಗ್ತಿದೆ. ಅವ್ರಿಗೆ ಸಹಾಯ ಮಾಡೋಕೂ ಆಗ್ತಿದೆ.”

11. ಸಭೆಲಿರೋರಿಗೆ ಯುವ ಸಹೋದರರು ಹೇಗೆ ಕಾಳಜಿ ತೋರಿಸಬಹುದು? (ಚಿತ್ರ ನೋಡಿ.)

11 ಯುವ ಸಹೋದರರೇ, ನೀವು ಬೇರೆಯವ್ರಿಗೆ ಕಾಳಜಿ ತೋರಿಸೋದನ್ನ ಕಲಿರಿ. ನೀವು ಕೂಟಗಳಿಗೆ ಹೋದಾಗ ಚಿಕ್ಕವರು, ದೊಡ್ಡವರು ಅನ್ನದೇ ಎಲ್ಲ ಹಿನ್ನೆಲೆಯ ಜನ್ರ ಹತ್ರ ಮಾತಾಡೋಕೆ ಪ್ರಯತ್ನ ಮಾಡಿ. ಅವರು ಹೇಗಿದ್ದಾರೆ ಅಂತ ಕೇಳಿ, ಅವರು ಹೇಳೋದನ್ನ ಕೇಳಿಸ್ಕೊಳ್ಳಿ. ನೀವು ಹೀಗೆ ಮಾಡ್ತಾ ಇದ್ರೆ ಅವ್ರಿಗೆ ಏನು ಸಹಾಯ ಬೇಕು ಅಂತ ಗೊತ್ತಾಗುತ್ತೆ. ಉದಾಹರಣೆಗೆ, ವಯಸ್ಸಾಗಿರೋ ಒಬ್ಬ ದಂಪತಿಗೆ JW ಲೈಬ್ರರಿ ಆ್ಯಪ್‌ ಬಳಸೋಕೆ ಸಹಾಯ ಬೇಕಿರಬಹುದು. ಅಥವಾ ಅವ್ರ ಜೊತೆ ಸೇವೆ ಮಾಡೋಕೆ ಯಾರೂ ಇಲ್ಲದೆ ಇರಬಹುದು. ಹಾಗಿದ್ರೆ ನೀವು ಅವ್ರಿಗೆ JW ಲೈಬ್ರರಿ ಆ್ಯಪ್‌ ಬಳಸೋಕೆ ಸಹಾಯ ಮಾಡಕ್ಕಾಗುತ್ತಾ? ಅಥವಾ ಅವ್ರ ಜೊತೆ ಸೇವೆ ಮಾಡಕ್ಕಾಗುತ್ತಾ? ನೀವು ಹೀಗೆ ಸಭೆಲಿರೋರಿಗೆ ಸಹಾಯ ಮಾಡೋಕೆ ಮುಂದೆ ಬಂದ್ರೆ ನಿಮ್ಮನ್ನ ನೋಡಿ ಬೇರೆಯವರೂ ಕಲಿತಾರೆ.

ಒಬ್ಬ ಯುವ ಸಹೋದರ ಮತ್ತು ವಯಸ್ಸಾದ ಸಹೋದರ ಮನೆಮನೆಗೆ ಹೋಗಿ ಸಿಹಿಸುದ್ದಿ ಸಾರ್ತಿದ್ದಾರೆ. ಆ ವಯಸ್ಸಾದ ಸಹೋದರ ಮನೆಯವ್ರ ಹತ್ರ ಮಾತಾಡ್ತಿದ್ದಾರೆ, ಆ ಯುವ ಸಹೋದರ ಟ್ಯಾಬ್‌ನಿಂದ ಮನೆಯವ್ರಿಗೆ ವಿಡಿಯೋ ತೋರಿಸ್ತಿದ್ದಾನೆ.

ಯುವ ಸಹೋದರರು ಸಭೆಲಿ ಇರೋರಿಗೆ ಬೇರೆಬೇರೆ ರೀತಿಲಿ ಸಹಾಯ ಮಾಡಬಹುದು (ಪ್ಯಾರ 11 ನೋಡಿ)


ಪೌಲ ಕೊಟ್ಟ ಸಲಹೆಯಿಂದ ಪ್ರಯೋಜನಪಡಿರಿ

12. ಪೌಲ ತಿಮೊತಿಗೆ ಕೊಟ್ಟ ಬುದ್ಧಿವಾದದಿಂದ ಯುವ ಸಹೋದರರು ಪ್ರಯೋಜನ ಪಡ್ಕೊಳ್ಳೋಕೆ ಏನು ಮಾಡಬೇಕು?

12 ಜೀವನದಲ್ಲಿ ಖುಷಿಯಾಗಿ ಇರೋಕೆ ಮತ್ತು ಯೆಹೋವನ ಸೇವೆನ ಚೆನ್ನಾಗಿ ಮಾಡೋಕೆ ಪೌಲ ತಿಮೊತಿಗೆ ಒಳ್ಳೊಳ್ಳೆ ಬುದ್ಧಿವಾದಗಳನ್ನ ಕೊಟ್ಟ. (1 ತಿಮೊ. 1:18; 2 ತಿಮೊ. 4:5) ಯುವ ಸಹೋದರರೇ, ಪೌಲ ಕೊಟ್ಟ ಬುದ್ಧಿವಾದದಿಂದ ನಿಮಗೂ ಪ್ರಯೋಜನ ಆಗುತ್ತೆ. ಹೇಗೆ? ಪೌಲ ತಿಮೊತಿಗೆ ಬರೆದ ಎರಡು ಪತ್ರಗಳನ್ನ ನಿಮಗೇ ಬರೆದಿದ್ದಾನೆ ಅಂದ್ಕೊಂಡು ಓದಿ. ಅದ್ರಲ್ಲಿರೋ ಯಾವ ಸಲಹೆನ ನಿಮ್ಮ ಜೀವನದಲ್ಲಿ ಪಾಲಿಸಬೇಕು ಅಂತ ಯೋಚಿಸಿ. ಇದಕ್ಕೆ ಕೆಲವು ಉದಾಹರಣೆಗಳನ್ನ ಈಗ ನೋಡೋಣ.

13. ದೇವರ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ, ಆತನಿಗೆ ನಿಯತ್ತಾಗಿರೋಕೆ ನಾವೇನು ಮಾಡಬೇಕು?

13 “ದೇವರ ಮೇಲೆ ಭಕ್ತಿ ತೋರಿಸೋದನ್ನ ಗುರಿಯಾಗಿ ಇಟ್ಕೊಂಡು ನಿನ್ನನ್ನ ನೀನೇ ತರಬೇತಿ ಮಾಡ್ಕೊ.” (1 ತಿಮೊ. 4:7ಬಿ) ದೇವರ ಮೇಲೆ ಭಕ್ತಿ ತೋರಿಸೋದು ಅಂದ್ರೆ ಏನು? ಇದ್ರ ಅರ್ಥ ದೇವರಿಗೆ ನಿಯತ್ತಾಗಿದ್ದು ಆತನಿಗೆ ಏನಿಷ್ಟಾನೋ ಅದನ್ನೇ ಮಾಡೋದು. ದೇವರ ಮೇಲೆ ಪ್ರೀತಿ, ನಿಯತ್ತು ನಮಗೆ ಹುಟ್ಟಿದಾಗ್ಲೇ ಬಂದುಬಿಡಲ್ಲ. ನಾವು ಅದನ್ನ ಬೆಳೆಸ್ಕೊಳ್ಳೋಕೆ ತುಂಬ ಪ್ರಯತ್ನ ಮಾಡಬೇಕಾಗುತ್ತೆ. ಎಷ್ಟರ ಮಟ್ಟಿಗೆ ಪ್ರಯತ್ನ ಮಾಡಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ “ತರಬೇತಿ ಮಾಡ್ಕೊ” ಅಂತ ಪೌಲ ಬರೆದಾಗ ಅವನ ಮನಸ್ಸಲ್ಲಿ ಏನಿತ್ತು ಅನ್ನೋದನ್ನ ತಿಳ್ಕೊಳ್ಳೋಣ. ಅವನು ಸ್ಪರ್ಧೆಗೆ ತಯಾರಾಗ್ತಿರೋ ಒಬ್ಬ ಓಟಗಾರನನ್ನ ಮನಸ್ಸಲ್ಲಿಟ್ಟು ಅದನ್ನ ಬರೆದ. ಆ ಓಟಗಾರ ತುಂಬ ಶ್ರಮಪಟ್ಟು ತಯಾರಿ ಮಾಡ್ಕೊಬೇಕಾಗುತ್ತೆ. ಗಮನ ಆಕಡೆ ಈಕಡೆ ಹೋಗೋಕೆ ಬಿಡದೆ, ಗುರಿ ಮುಟ್ಟೋಕೆ ಸಹಾಯ ಮಾಡೋ ಒಳ್ಳೇ ರೂಢಿಗಳನ್ನ ಬೆಳೆಸ್ಕೊಬೇಕಾಗುತ್ತೆ. ಅದೇ ತರ ನಾವೂ ಯೆಹೋವನಿಗೆ ಹತ್ರ ಆಗೋಕೆ ಸಹಾಯ ಮಾಡೋ ಗುಣಗಳನ್ನ, ರೂಢಿಗಳನ್ನ ಬೆಳೆಸ್ಕೊಬೇಕು.

14. ಬೈಬಲ್‌ ಓದುವಾಗ ನಮ್ಮ ಗುರಿ ಏನಾಗಿರಬೇಕು? ಉದಾಹರಣೆ ಕೊಡಿ.

14 ಪ್ರತಿದಿನ ಬೈಬಲ್‌ ಓದೋ ರೂಢಿ ಬೆಳೆಸ್ಕೊಳ್ಳಿ. ಯೆಹೋವ ದೇವರಿಗೆ ಹತ್ರ ಆಗೋ ಗುರಿಯಿಂದ ಬೈಬಲನ್ನ ಓದಿ. ಉದಾಹರಣೆಗೆ, ಯೇಸು ಒಬ್ಬ ಶ್ರೀಮಂತ ಯುವ ಅಧಿಕಾರಿಯ ಹತ್ರ ಮಾತಾಡೋ ಘಟನೆಯನ್ನ ನೀವು ಓದ್ತಾ ಇದ್ದೀರ ಅಂತ ಅಂದ್ಕೊಳ್ಳಿ. ಆ ಘಟನೆಯಿಂದ ನೀವು ಯೆಹೋವ ದೇವರ ಬಗ್ಗೆ ಏನು ಕಲಿಬಹುದು ಅಂತ ಯೋಚಿಸಿ. (ಮಾರ್ಕ 10:17-22) ಆ ಯುವಕನಿಗೆ ಯೇಸುನೇ ಮೆಸ್ಸೀಯ ಅಂತ ಗೊತ್ತಿತ್ತು. ಆದ್ರೆ ಅವನು ಯೇಸುವಿನ ಶಿಷ್ಯನಾಗೋಕೆ ಮನಸ್ಸು ಮಾಡಲಿಲ್ಲ. ಆದ್ರೂ ಯೇಸುಗೆ ಅವನ ಮೇಲೆ ‘ಪ್ರೀತಿಯಿತ್ತು,’ ಅವನ ಹತ್ರ ದಯೆಯಿಂದ ಮಾತಾಡಿದನು. ಯಾಕಂದ್ರೆ ಯೆಹೋವನೂ ಅವನನ್ನ ಪ್ರೀತಿಸ್ತಿದ್ದಾನೆ, ಅವನು ತನ್ನ ಸೇವೆ ಮಾಡ್ತಾ ಖುಷಿಯಾಗಿರಬೇಕು ಅಂತ ಆಸೆಪಡ್ತಿದ್ದಾನೆ ಅನ್ನೋದು ಯೇಸುಗೆ ಗೊತ್ತಿತ್ತು. (ಯೋಹಾ. 14:9) ಈ ಘಟನೆನ ಮತ್ತು ನಿಮ್ಮ ಪರಿಸ್ಥಿತಿನ ಮನಸ್ಸಲ್ಲಿಟ್ಟು ‘ಯೆಹೋವನಿಗೆ ಹತ್ರ ಆಗೋಕೆ, ಬೇರೆಯವ್ರಿಗೆ ಸಹಾಯ ಮಾಡೋಕೆ ನಾನು ಇನ್ನೂ ಏನೆಲ್ಲಾ ಮಾಡಬಹುದು’ ಅಂತ ಕೇಳ್ಕೊಳ್ಳಿ.

15. ಯುವ ಸಹೋದರರು ಬೇರೆಯವ್ರಿಗೆ ಮಾದರಿಯಾಗಿ ಇರೋದು ಯಾಕೆ ಮುಖ್ಯ? ಉದಾಹರಣೆ ಕೊಡಿ. (1 ತಿಮೊತಿ 4:12, 13)

15 “ನಂಬಿಗಸ್ತರಿಗೆ ಮಾದರಿಯಾಗಿರು.” (1 ತಿಮೊತಿ 4:12, 13 ಓದಿ.) ಪೌಲ ತಿಮೊತಿಗೆ ಓದೋ, ಕಲಿಸೋ ಕೌಶಲಗಳನ್ನ ಬೆಳೆಸ್ಕೊಂಡ್ರೆ ಸಾಕು ಅಂತ ಹೇಳ್ಲಿಲ್ಲ. ಅದ್ರ ಜೊತೆಗೆ ಪ್ರೀತಿ, ನಂಬಿಕೆ, ನೈತಿಕ ಶುದ್ಧತೆ ಅನ್ನೋ ಗುಣಗಳನ್ನ ಬೆಳೆಸ್ಕೊಳ್ಳೋಕೆ ಹೇಳಿದ. ಯಾಕೆ? ಯಾಕಂದ್ರೆ ನಾವು ಏನು ಹೇಳ್ತೀವಿ ಅನ್ನೋದಕ್ಕಿಂತ ಏನು ಮಾಡ್ತೀವಿ ಅನ್ನೋದು ತುಂಬ ಮುಖ್ಯ. ಉದಾಹರಣೆಗೆ, ಜಾಸ್ತಿ ಸೇವೆ ಮಾಡೋದ್ರ ಬಗ್ಗೆ ನೀವು ಒಂದು ಭಾಷಣ ಕೊಡಬೇಕಾಗಿದೆ ಅಂದ್ಕೊಳ್ಳಿ. ನೀವು ಈಗಾಗ್ಲೇ ನಿಮ್ಮಿಂದ ಆದಷ್ಟು ಜಾಸ್ತಿ ಸೇವೆ ಮಾಡ್ತಾ ಇದ್ರೆ ಆ ವಿಷ್ಯದ ಬಗ್ಗೆ ಧೈರ್ಯವಾಗಿ ಮಾತಾಡೋಕೆ ಆಗುತ್ತೆ. ಅದಷ್ಟೇ ಅಲ್ಲ, ನಿಮ್ಮನ್ನ ನೋಡಿ ಬೇರೆಯವರೂ ಜಾಸ್ತಿ ಸೇವೆ ಮಾಡೋಕೆ ಮುಂದೆ ಬರ್ತಾರೆ.—1 ತಿಮೊ. 3:13.

16. (ಎ) ಯಾವ ಐದು ವಿಷ್ಯಗಳಲ್ಲಿ ಯುವ ಸಹೋದರರು ಮಾದರಿಯಾಗಿರಬೇಕು ಅಂತ ಪೌಲ ಹೇಳಿದ್ದಾನೆ? (ಬಿ) ‘ಮಾತಿನ’ ವಿಷ್ಯದಲ್ಲಿ ಯುವ ಸಹೋದರರು ಹೇಗೆ ಮಾದರಿಯಾಗಿರಬಹುದು?

16 ಪೌಲ 1 ತಿಮೊತಿ 4:12ರಲ್ಲಿ ಯುವಜನರು ಮಾದರಿಯಾಗಿ ಇರಬೇಕಾಗಿರೋ ಐದು ವಿಷ್ಯಗಳ ಬಗ್ಗೆ ಹೇಳಿದ. ಯುವ ಸಹೋದರರೇ, ಅದ್ರಲ್ಲಿರೋ ಒಂದೊಂದು ವಿಷ್ಯದ ಬಗ್ಗೆನೂ ನೀವು ಪ್ರಾಜೆಕ್ಟ್‌ ಮಾಡಿದ್ರೆ ತುಂಬ ಚೆನ್ನಾಗಿರುತ್ತೆ. ಈಗ ನೀವು ‘ಮಾತಿನ’ ವಿಷ್ಯದಲ್ಲಿ ಬೇರೆಯವ್ರಿಗೆ ಮಾದರಿಯಾಗಿ ಇರೋಕೆ ಪ್ರಯತ್ನ ಮಾಡ್ತಿದ್ದೀರ ಅಂದ್ಕೊಳ್ಳಿ. ಹಾಗಾದ್ರೆ ಬೇರೆಯವ್ರನ್ನ ಪ್ರೋತ್ಸಾಹಿಸೋಕೆ, ಬಲಪಡಿಸೋಕೆ ಹೇಗೆ ಮಾತಾಡಬೇಕು ಅಂತ ಯೋಚಿಸಿ. ಉದಾಹರಣೆಗೆ, ಅಪ್ಪ-ಅಮ್ಮ ನಿಮಗೋಸ್ಕರ ಏನೆಲ್ಲ ಮಾಡಿದ್ದಾರೆ ಅಂತ ಯೋಚಿಸಿ ಅವ್ರಿಗೆ ಥ್ಯಾಂಕ್ಸ್‌ ಹೇಳಬಹುದಲ್ವಾ? ಕೂಟದಲ್ಲಿ ಯಾರಾದ್ರೂ ಉತ್ರ ಕೊಟ್ರೆ ಅಥವಾ ನೇಮಕ ಮಾಡಿದ್ರೆ ಅದ್ರಲ್ಲಿ ನಿಮಗೇನು ಇಷ್ಟ ಆಯ್ತು ಅಂತ ಹೇಳಬಹುದಲ್ವಾ? ಅದ್ರ ಜೊತೆಗೆ, ಕೂಟದಲ್ಲಿ ನೀವು ನಿಮ್ಮ ಸ್ವಂತ ಮಾತಲ್ಲಿ ಉತ್ರ ಹೇಳೋಕಾಗುತ್ತಾ ಅಂತ ನೋಡಿ. ನೀವು ಹೀಗೆ ಮಾತಲ್ಲಿ ಮಾದರಿಯಾಗಿರೋಕೆ ಪ್ರಯತ್ನ ಮಾಡ್ತಿದ್ರೆ ‘ನಿಮ್ಮ ಪ್ರಗತಿ ಎಲ್ರಿಗೂ ಸ್ಪಷ್ಟವಾಗಿ ಕಾಣಿಸುತ್ತೆ.’—1 ತಿಮೊ. 4:15.

17. ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಯುವ ಸಹೋದರರಿಗೆ ಯಾವುದು ಸಹಾಯ ಮಾಡುತ್ತೆ? (2 ತಿಮೊತಿ 2:22)

17 ‘ಯೌವನದಲ್ಲಿ ಬರೋ ಆಸೆಗಳಿಂದ ದೂರ ಓಡಿಹೋಗು. ನೀತಿ ಗಳಿಸೋಕೆ ಶ್ರಮ ಹಾಕು.’ (2 ತಿಮೊತಿ 2:22 ಓದಿ.) ಪೌಲ ತಿಮೊತಿಗೆ ‘ನಿನಗೆ ಬರೋ ಆಸೆಗಳು ದೇವರ ಜೊತೆ ನಿನಗಿರೋ ಸ್ನೇಹನ, ನೀನಿಟ್ಟಿರೋ ಗುರಿಗಳನ್ನ ಹಾಳು ಮಾಡದಿರೋ ತರ ನೋಡ್ಕೊ’ ಅಂತ ಹೇಳಿದ. ಯುವ ಸಹೋದರರೇ, ಪೌಲ ಕೊಟ್ಟ ಈ ಬುದ್ಧಿವಾದ ನಿಮಗೂ ಅನ್ವಯಿಸುತ್ತೆ. ನಿಮಗೆ ಬರೋ ಕೆಲವು ಆಸೆಗಳು, ನೀವು ಮಾಡೋ ಕೆಲವು ವಿಷ್ಯಗಳು ತಪ್ಪಲ್ಲದೆ ಇರಬಹುದು. ಆದ್ರೆ ಅವು ದೇವರ ಸೇವೆನ ನೀವು ಕಮ್ಮಿ ಮಾಡೋ ತರ ಮಾಡಿಬಿಡಬಾರದು. ಹಾಗಾಗಿ ಆಟ ಆಡೋದ್ರಲ್ಲಿ, ಇಂಟರ್ನೆಟ್‌ ಬಳಸೋದ್ರಲ್ಲಿ, ವಿಡಿಯೋ ಗೇಮ್ಸ್‌ ಆಡೋದ್ರಲ್ಲಿ ಎಷ್ಟು ಸಮಯ ಹೋಗ್ತಿದೆ ಅಂತ ಯೋಚ್ನೆ ಮಾಡಿ. ಅದ್ರಲ್ಲಿ ಸ್ವಲ್ಪ ಸಮಯನ ದೇವರ ಸೇವೆ ಮಾಡೋಕೆ, ಸಹೋದರ-ಸಹೋದರಿಯರಿಗೆ ಸಹಾಯ ಮಾಡೋಕೆ ಬಳಸಬಹುದಾ ಅಂತ ನೋಡಿ. ಉದಾಹರಣೆಗೆ, ರಾಜ್ಯ ಸಭಾಗೃಹ ಕ್ಲೀನಿಂಗ್‌ ಮಾಡೋಕೆ, ತಳ್ಳುಬಂಡಿ ಸಾಕ್ಷಿಕಾರ್ಯ ಮಾಡೋಕೆ ನಿಮ್ಮಿಂದ ಏನಾದ್ರೂ ಸಹಾಯ ಮಾಡೋಕಾಗುತ್ತಾ ಅಂತ ಯೋಚಿಸಿ. ಈ ತರ ನೀವು ದೇವರ ಸೇವೆನ ಜಾಸ್ತಿ ಮಾಡ್ತಾ ಇದ್ರೆ ನಿಮಗೆ ಹೊಸ ಸ್ನೇಹಿತರು ಸಿಕ್ತಾರೆ. ಅವರು ನಿಮಗೆ ಗುರಿಗಳನ್ನ ಇಡೋಕೆ ಮತ್ತು ಆ ಗುರಿಗಳನ್ನ ಮುಟ್ಟೋಕೆ ಸಹಾಯ ಮಾಡ್ತಾರೆ.

ನಾವು ಮಾಡೋ ಸೇವೆ ಆಶೀರ್ವಾದಗಳನ್ನ ತರುತ್ತೆ

18. ಸೇವೆ ಮಾಡಿದ್ರಿಂದ ಮಾರ್ಕ ಮತ್ತು ತಿಮೊತಿಗೆ ಯಾವೆಲ್ಲ ಆಶೀರ್ವಾದಗಳು ಸಿಕ್ತು?

18 ಮಾರ್ಕ ಮತ್ತು ತಿಮೊತಿ ದೇವರ ಸೇವೆನ ಜಾಸ್ತಿ ಮಾಡೋಕೆ, ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಎಷ್ಟೋ ತ್ಯಾಗಗಳನ್ನ ಮಾಡಿದ್ರು. ಇದ್ರಿಂದ ಅವ್ರಿಗೆ ಒಳ್ಳೊಳ್ಳೇ ಅನುಭವಗಳು ಸಿಕ್ತು, ಜೀವನದಲ್ಲಿ ಅವರು ನಿಜವಾಗ್ಲೂ ಖುಷಿಯಾಗಿದ್ರು. (ಅ. ಕಾ. 20:35) ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಮಾರ್ಕ ಎಷ್ಟೋ ದೂರದೂರದ ಜಾಗಗಳಿಗೆ ಹೋದ. ಅಷ್ಟೇ ಅಲ್ಲ, ಯೇಸುವಿನ ಜೀವನ ಮತ್ತು ಸೇವೆ ಬಗ್ಗೆ ಒಂದು ಅದ್ಭುತವಾದ ಪುಸ್ತಕನೂ ಬರೆದ. ತಿಮೊತಿ ಎಷ್ಟೋ ಹೊಸ ಸಭೆಗಳನ್ನ ಶುರುಮಾಡೋಕೆ ಪೌಲನಿಗೆ ಸಹಾಯ ಮಾಡಿದ, ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಟ್ಟ. ಇವ್ರಿಬ್ಬರ ತ್ಯಾಗ, ಸೇವೆ ನೋಡಿ ಯೆಹೋವ ದೇವರಿಗೆ ನಿಜವಾಗ್ಲೂ ಖುಷಿಯಾಗಿರುತ್ತೆ.

19. (ಎ) ಪೌಲ ತಿಮೊತಿಗೆ ಕೊಟ್ಟ ಬುದ್ಧಿವಾದನ ಯುವಜನರು ಯಾಕೆ ಮನಸ್ಸಿಗೆ ತಗೊಬೇಕು? (ಬಿ) ಅದನ್ನ ಪಾಲಿಸಿದ್ರೆ ನಿಮ್ಮ ಜೀವನ ಹೇಗಿರುತ್ತೆ?

19 ಪೌಲ ತಿಮೊತಿಗೆ ಬರೆದ ಪತ್ರಗಳನ್ನ ಓದಿದ್ರೆ ಅವನಿಗೆ ತಿಮೊತಿ ಮೇಲೆ ಎಷ್ಟು ಪ್ರೀತಿ ಇತ್ತು ಅಂತ ಗೊತ್ತಾಗುತ್ತೆ. ಯುವಜನರೇ, ಆ ಪತ್ರಗಳಿಂದ ಯೆಹೋವ ದೇವರು ನಿಮ್ಮನ್ನ ಎಷ್ಟು ಪ್ರೀತಿಸ್ತಿದ್ದಾನೆ ಅಂತಾನೂ ಗೊತ್ತಾಗುತ್ತೆ. ನೀವು ಆತನ ಸೇವೆ ಮಾಡ್ತಾ ಖುಷಿಖುಷಿಯಾಗಿ ಇರಬೇಕು ಅನ್ನೋದೇ ಆತನ ಆಸೆ. ಹಾಗಾಗಿ ಪೌಲ ಕೊಟ್ಟ ಬುದ್ಧಿವಾದನ ಮನಸ್ಸಿಗೆ ತಗೊಳ್ಳಿ. ದೇವರ ಸೇವೆನ ಜಾಸ್ತಿ ಮಾಡೋ, ಸಹೋದರ-ಸಹೋದರಿಯರಿಗೆ ಸಹಾಯ ಮಾಡೋ ಆಸೆ ಬೆಳೆಸ್ಕೊಳ್ಳಿ. ನೀವು ಹೀಗೆ ಮಾಡಿದ್ರೆ ನಿಮ್ಮ ಜೀವನದಲ್ಲಿ ಈಗ್ಲೂ ಖುಷಿ ಸಿಗುತ್ತೆ, ಮುಂದೆ ಸಿಗೋ ‘ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಂಡಿರೋಕೂ’ ಆಗುತ್ತೆ.—1 ತಿಮೊ. 6:18, 19.

ನೀವೇನು ಹೇಳ್ತೀರಾ?

  • ಮಾರ್ಕನಿಂದ ನೀವೇನು ಕಲಿತ್ರಿ?

  • ತಿಮೊತಿ ತರ ನೀವು ಬೇರೆಯವ್ರಿಗೆ ಹೇಗೆ ಕಾಳಜಿ ತೋರಿಸಬೇಕಂತ ಇದ್ದೀರ?

  • ಪೌಲ ಕೊಟ್ಟ ಯಾವ ಬುದ್ಧಿವಾದ ಒಬ್ಬ ಯುವ ಸಹೋದರನಿಗೆ ದೇವರ ಸೇವೆನ ಜಾಸ್ತಿ ಮಾಡೋಕೆ ಸಹಾಯ ಮಾಡುತ್ತೆ?

ಗೀತೆ 135 ಯೆಹೋವನ ಸ್ನೇಹಪರ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

a ಪೇತ್ರ ತುಂಬ ಭಾವನೆಗಳಿರೋ ವ್ಯಕ್ತಿಯಾಗಿದ್ದ. ಅದಕ್ಕೇ ಅವನು ಮಾರ್ಕನ ಹತ್ರ ಯೇಸು ಏನು ಹೇಳಿದನು, ಏನು ಮಾಡಿದನು ಅನ್ನೋದಷ್ಟೇ ಅಲ್ಲ, ಯೇಸುಗೆ ಹೇಗೆ ಅನಿಸ್ತಿತ್ತು ಅನ್ನೋದನ್ನೂ ವಿವರಿಸಿರಬೇಕು. ಅದಕ್ಕೇ ಮಾರ್ಕ ತನ್ನ ಪುಸ್ತಕದಲ್ಲಿ ಯೇಸುಗೆ ಹೇಗನಿಸ್ತು, ಆಗ ಆತನು ಏನು ಮಾಡಿದನು ಅನ್ನೋದನ್ನ ವಿವರವಾಗಿ ಬರೆದಿದ್ದಾನೆ.—ಮಾರ್ಕ 3:5; 7:34; 8:12.

b ಕೆಲವ್ರ ಹೆಸ್ರು ಬದಲಾಗಿದೆ.

c ಚಿತ್ರ ವಿವರಣೆ: ಪೌಲ ಮತ್ತು ಬಾರ್ನಬ ಕರೆದಾಗ ಮಾರ್ಕ ಅವ್ರ ಜೊತೆ ಮಿಷನರಿ ಪ್ರಯಾಣಕ್ಕೆ ಹೋಗ್ತಿದ್ದಾನೆ. ತಿಮೊತಿ ಸಭೆಗಳನ್ನ ಭೇಟಿಮಾಡೋಕೆ ಮುಂದೆ ಬಂದು ಅಲ್ಲಿರೋ ಸಹೋದರರ ನಂಬಿಕೆನ ಗಟ್ಟಿ ಮಾಡ್ತಿದ್ದಾನೆ, ಅವ್ರಿಗೆ ಪ್ರೋತ್ಸಾಹ ಕೊಡ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ