ಅಧ್ಯಯನ ಲೇಖನ 30
ಗೀತೆ 97 ವಾಕ್ಯವೇ ಜೀವಕ್ಕೆ ಆಧಾರ
ಬೈಬಲಲ್ಲಿರೋ ಸರಳ ಸತ್ಯಗಳಿಂದ ಈಗ್ಲೂ ಪಾಠ ಕಲಿಬಹುದಾ?
“ನಿಮಗೆ ಈ ವಿಷ್ಯಗಳೆಲ್ಲ ಗೊತ್ತಿದ್ರೂ, ನೀವು ಸತ್ಯದಲ್ಲಿ ಬಲವಾಗಿದ್ರೂ ಇದರ ಬಗ್ಗೆ ನಿಮಗೆ ನೆನಪು ಹುಟ್ಟಿಸ್ತಾ ಇರ್ತಿನಿ.” —2 ಪೇತ್ರ 1:12
ಈ ಲೇಖನದಲ್ಲಿ ಏನಿದೆ?
ನಾವು ಮೊದಮೊದ್ಲು ಬೈಬಲಿಂದ ಕೆಲವು ಸರಳ ಸತ್ಯಗಳನ್ನ ಕಲಿತ್ವಿ. ಅದ್ರಿಂದ ನಾವು ಈಗ್ಲೂ ಯಾವೆಲ್ಲ ಪಾಠಗಳನ್ನ ಕಲಿಬಹುದು ಅಂತ ನೋಡೋಣ.
1. ಮೊದಮೊದಲು ನೀವು ಸತ್ಯ ಕಲಿತಾಗ ನಿಮ್ಮ ಜೀವನ ಹೇಗೆ ಬದಲಾಯ್ತು?
ನಾವು ಬೈಬಲಿಂದ ಮೊದಮೊದಲು ಕಲಿತ ಮುಖ್ಯವಾದ ಸತ್ಯಗಳು ನಮ್ಮ ಜೀವನಾನೇ ಬದಲಾಯಿಸ್ತು. ಉದಾಹರಣೆಗೆ, ದೇವರ ಹೆಸರು ಯೆಹೋವ ಅಂತ ಕಲಿತ್ವಿ. ಇದ್ರಿಂದ ಆತನ ಫ್ರೆಂಡ್ ಆಗಬೇಕು ಅಂತ ನಿರ್ಧಾರ ಮಾಡಿದ್ವಿ. (ಯೆಶಾ. 42:8) ಸತ್ತಮೇಲೆ ಏನಾಗುತ್ತೆ ಅನ್ನೋ ಸತ್ಯ ಕಲಿತ್ವಿ, ತೀರಿ ಹೋಗಿರೋ ನಮ್ಮವರು ನರಳ್ತಿಲ್ಲ ಅಂತ ಅರ್ಥ ಮಾಡ್ಕೊಂಡು ನೆಮ್ಮದಿ ಪಡ್ಕೊಂಡ್ವಿ. (ಪ್ರಸಂ. 9:10) ಮುಂದೆ ದೇವರು ಇಡೀ ಭೂಮಿನ ಪರದೈಸ್ ಮಾಡ್ತಾನೆ ಅಂತ ಕಲಿತ್ವಿ, ಇದ್ರಿಂದ ನಾಳೆ ಏನಾಗುತ್ತೋ ಅಂತ ಚಿಂತೆ ಮಾಡೋದನ್ನ ನಿಲ್ಲಿಸಿದ್ವಿ. ನಾವು ಬರೀ 70-80 ವರ್ಷ ಅಲ್ಲ, ಮುಂದೆ ಶಾಶ್ವತವಾಗಿ ಬದುಕಬಹುದು ಅಂತ ತಿಳ್ಕೊಂಡ್ವಿ. ಆ ಶಾಶ್ವತ ಜೀವನಕ್ಕಾಗಿ ನಾವೆಲ್ಲ ಈಗ ಕಾಯ್ತಾ ಇದ್ದೀವಿ.—ಕೀರ್ತ. 37:29; 90:10.
2. ಸತ್ಯದಲ್ಲಿ ಬಲವಾಗಿರೋರು ಕೂಡ ಬೈಬಲಿನ ಸರಳ ಸತ್ಯಗಳಿಂದ ಪ್ರಯೋಜನ ಪಡಿಬಹುದು ಅಂತ ಹೇಗೆ ಹೇಳಬಹುದು? (2 ಪೇತ್ರ 1:12, 13)
2 ಆ ಮುಖ್ಯವಾದ ಸರಳ ಸತ್ಯಗಳನ್ನ ನಾವು ಯಾವತ್ತೂ ಮಾಮೂಲಿಯಾಗಿ ನೋಡಬಾರದು ಅಂತ ಪೇತ್ರನಿಂದ ಗೊತ್ತಾಗುತ್ತೆ. ಪೇತ್ರ ತನ್ನ ಎರಡನೇ ಪತ್ರನ, ‘ಸತ್ಯದಲ್ಲಿ ಬಲವಾಗಿರೋ’ ಕ್ರೈಸ್ತರಿಗೆ ಬರೆದ. (2 ಪೇತ್ರ 1:12, 13 ಓದಿ.) ಆ ಟೈಮಲ್ಲಿ ಸಭೆಯಲ್ಲೇ ಸುಳ್ಳು ಬೋಧಕರು ಮತ್ತು ದೇವರ ಮೇಲೆ ಭಯಭಕ್ತಿ ಇಲ್ಲದವರು ಇದ್ರು. ಇವ್ರಿಂದ ಸಭೆಗೆ ತುಂಬ ಹಾನಿ ಆಗ್ತಿತ್ತು. (2 ಪೇತ್ರ 2:1-3) ಹಾಗಾಗಿ ಅಲ್ಲಿ ನಿಯತ್ತಾಗಿ ಸೇವೆ ಮಾಡ್ತಿದ್ದವ್ರನ್ನ ಬಲಪಡಿಸಬೇಕು ಅಂತ ಪೇತ್ರ ಅಂದ್ಕೊಂಡ. ಅದಕ್ಕೆ ಅವನು ಏನು ಮಾಡಿದ ಗೊತ್ತಾ? ಅವರು ಮೊದಮೊದಲು ಕಲಿತ ಸರಳ ಸತ್ಯಗಳನ್ನ ಮತ್ತೆ ನೆನಪಿಸಿದ. ಇದ್ರಿಂದ ಅವರು ಕೊನೇ ತನಕ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡೋಕೆ ಆಯ್ತು.
3. ಬೈಬಲಿಂದ ಕಲಿತ ಸರಳ ಸತ್ಯಗಳ ಬಗ್ಗೆ ನಾವೆಲ್ರೂ ಆಗಾಗ ಯೋಚನೆ ಮಾಡ್ತಾ ಇರಬೇಕು ಯಾಕೆ? ಉದಾಹರಣೆ ಕೊಡಿ.
3 ನಾವು ಸತ್ಯದಲ್ಲಿ ಬಲವಾಗ್ತಾ ಹೋದಂತೆ ಬೈಬಲ್ನ ಸರಳ ಸತ್ಯಗಳಿಂದ ಇನ್ನು ಎಷ್ಟೋ ಪಾಠಗಳನ್ನ ಕಲಿತೀವಿ. ಅದು ಹೇಗೆ ಅಂತ ಒಂದು ಉದಾಹರಣೆ ನೋಡಿ. ತಾಯಿ ಅಡುಗೆ ಮಾಡೋದಕ್ಕೂ ಈಗಷ್ಟೇ ಅಡುಗೆ ಕಲ್ತಿರೋ ಮಗಳು ಅಡುಗೆ ಮಾಡೋದಕ್ಕೂ ವ್ಯತ್ಯಾಸ ಇದೆ. ಮಗಳು ಕೆಲವು ಪದಾರ್ಥಗಳನ್ನ ಬಳಸಿ ಒಂದು ಅಡುಗೆ ಮಾಡೋಕೆ ಕಲ್ತಿರಬಹುದು. ಆದ್ರೆ ತಾಯಿ ಅದೇ ಪದಾರ್ಥಗಳನ್ನ ಬಳಸಿ ಬೇರೆಬೇರೆ ಅಡುಗೆ ಮಾಡೋದು ಹೇಗೆ ಅಂತ ಕಲ್ತಿರ್ತಾಳೆ. ಅದೇ ತರ ಸತ್ಯಕ್ಕೆ ಹೊಸದಾಗಿ ಬಂದೋರಿಗೂ ತುಂಬ ವರ್ಷಗಳಿಂದ ಸತ್ಯದಲ್ಲಿರೋರಿಗೂ ವ್ಯತ್ಯಾಸ ಇರುತ್ತೆ. ಅನುಭವ ಇರೋರು ಒಂದು ವಚನದಿಂದ ಬೇರೆಬೇರೆ ಪಾಠಗಳನ್ನ ಕಲಿತಾರೆ. ಅದು ಹೇಗೆ? ನಾವು ಸತ್ಯಕ್ಕೆ ಬಂದಾಗಿಂದ ಇವತ್ತಿನವರೆಗೂ ನೋಡಿದ್ರೆ, ನಮ್ಮ ಪರಿಸ್ಥಿತಿ, ನಮ್ಮ ನೇಮಕ ಎಲ್ಲಾ ಬದಲಾಗಿದೆ. ಹಾಗಾಗಿ ಹಿಂದೆ ಕಲಿತ ಒಂದು ಸತ್ಯನ ನಮ್ಮ ಇವತ್ತಿನ ಪರಿಸ್ಥಿತಿಗೆ ಅನ್ವಯಿಸಿ ನೋಡಿದಾಗ ನಾವು ಹೊಸಹೊಸ ಪಾಠಗಳನ್ನ ಕಲಿತೀವಿ. ಅಂಥ ಮೂರು ಸರಳ ಸತ್ಯಗಳನ್ನ ಮತ್ತು ಅದ್ರಿಂದ ನಾವು ಯಾವ ಪಾಠಗಳನ್ನ ಕಲಿಬಹುದು ಅಂತ ಈಗ ನೋಡೋಣ.
ಯೆಹೋವನೇ ಸೃಷ್ಟಿಕರ್ತ!
4. ಯೆಹೋವನೇ ಸೃಷ್ಟಿಕರ್ತ ಅಂತ ತಿಳ್ಕೊಂಡಿರೋದ್ರಿಂದ ನಮಗೆ ಯಾವ ಪ್ರಯೋಜನ ಸಿಕ್ಕಿದೆ?
4 “ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ.” (ಇಬ್ರಿ. 3:4) ನಾವಿರೋ ಈ ಭೂಮಿನ ಮತ್ತು ಇಲ್ಲಿರೋ ಪ್ರತಿಯೊಂದು ಜೀವಿನ ಸೃಷ್ಟಿ ಮಾಡಿದ್ದು ಯೆಹೋವ ದೇವರೇ! ಆದ್ರಿಂದ ಆತನಿಗೆ ನಮ್ಮ ಬಗ್ಗೆ ಇಂಚಿಂಚೂ ಗೊತ್ತಿದೆ. ನಮ್ಮ ಮೇಲೆ ಪ್ರೀತಿ ಇರೋದ್ರಿಂದ ನಮಗೆ ಯಾವುದು ಒಳ್ಳೆಯದು ಅಂತ ಆತನಿಗೆ ಚೆನ್ನಾಗಿ ಗೊತ್ತಿದೆ. ಯೆಹೋವನೇ ನಮ್ಮ ಸೃಷ್ಟಿಕರ್ತ ಅನ್ನೋ ಸರಳ ಸತ್ಯನ ನಾವು ತಿಳ್ಕೊಂಡಿರೋದ್ರಿಂದ ನಮ್ಮ ಜೀವನದ ಉದ್ದೇಶ ಏನಂತ ನಮಗೆ ಅರ್ಥ ಆಗಿದೆ ಅಲ್ವಾ?
5. ಯಾವ ಸತ್ಯ ನಾವು ದೀನತೆ ಕಲಿಯೋಕೆ ಸಹಾಯ ಮಾಡುತ್ತೆ? (ಯೆಶಾಯ 45:9-12)
5 ಯೆಹೋವನೇ ಎಲ್ಲಾನೂ ಸೃಷ್ಟಿ ಮಾಡಿದ್ದು ಅನ್ನೋ ಸತ್ಯನ ನಾವು ಆಗಾಗ ನೆನಪಿಸಿಕೊಂಡ್ರೆ ದೀನತೆ ಕಲಿತೀವಿ. ಉದಾಹರಣೆಗೆ, ಯೋಬ ಹೇಗೆ ಕಲಿತ ನೋಡಿ. ಒಂದು ಸಲ ಯೆಹೋವನ ಬಗ್ಗೆ ಮತ್ತು ಬೇರೆಯವ್ರ ಬಗ್ಗೆ ಅವನು ತಪ್ಪಾಗಿ ಮಾತಾಡಿಬಿಟ್ಟ. ಆಗ ಯೆಹೋವ, ‘ನಾನೇ ಎಲ್ಲಾನೂ ಸೃಷ್ಟಿ ಮಾಡಿದ್ದು’ ಅಂತ ಅವನಿಗೆ ನೆನಪಿಸಿದ್ರು. (ಯೋಬ 38:1-4) ಇದ್ರಿಂದ ಯೋಬನಿಗೆ ಯೆಹೋವ ತುಂಬ ದೊಡ್ಡವನು, ಆತನು ಮಾಡೋದೆಲ್ಲ ಸರಿಯಾಗೇ ಇರುತ್ತೆ ಅಂತ ಅರ್ಥ ಆಯ್ತು. ಅದಕ್ಕೇ ಮನುಷ್ಯರು ಯಾವತ್ತೂ ದೇವರಿಗಿಂತ ವಿವೇಕಿಗಳು ಅಂತ ಅಂದ್ಕೊಬಾರದು ಅಂತ ಯೆಶಾಯ ಬರೆದಿದ್ದಾನೆ.—ಯೆಶಾಯ 45:9-12 ಓದಿ.
6. ಯೆಹೋವನ ಅಪಾರ ಶಕ್ತಿ ಮತ್ತು ವಿವೇಕದ ಬಗ್ಗೆ ಮುಖ್ಯವಾಗಿ ಯಾವಾಗ ಯೋಚನೆ ಮಾಡೋದು ಒಳ್ಳೆಯದು? (ಚಿತ್ರಗಳನ್ನ ನೋಡಿ.)
6 ಸುಮಾರು ವರ್ಷಗಳಿಂದ ಸತ್ಯದಲ್ಲಿ ಇರೋರು ಹೋಗ್ತಾಹೋಗ್ತಾ ಯೆಹೋವನ ಮೇಲೆ ಭರವಸೆ ಇಡೋದಕ್ಕಿಂತ ತಮ್ಮ ಮೇಲೇನೇ ಭರವಸೆ ಇಡೋ ಸಾಧ್ಯತೆ ಇದೆ. (ಯೋಬ 37:23, 24) ಆದ್ರೆ ಅಂಥ ಟೈಮಲ್ಲಿ ಯೆಹೋವನಿಗಿರೋ ಅಪಾರ ಶಕ್ತಿ ಮತ್ತು ವಿವೇಕದ ಬಗ್ಗೆ ಯೋಚನೆ ಮಾಡಬೇಕು. ಯಾಕೆ? (ಯೆಶಾ. 40:22; 55:8, 9) ಈ ತರ ಯೋಚನೆ ಮಾಡಿದ್ರೆ ಅವರು ದೀನತೆ ತೋರಿಸೋಕೆ ಕಲೀತಾರೆ. ತಮ್ಮ ಯೋಚನೆಗಿಂತ ಯೆಹೋವನ ಯೋಚನೆನೇ ಉನ್ನತ ಅಂತ ಅರ್ಥ ಮಾಡ್ಕೊಳ್ತಾರೆ.
ನಮ್ಮ ಸ್ವಂತ ಯೋಚನೆಗಳು ಮತ್ತು ಸಲಹೆಗಳ ಬಗ್ಗೆ ಸರಿಯಾಗಿ ಯೋಚಿಸಲು ಯಾವುದು ನಮಗೆ ಸಹಾಯ ಮಾಡುತ್ತೆ? (ಪ್ಯಾರ 6 ನೋಡಿ)d
7. ಸಂಘಟನೆಯಲ್ಲಿ ಆಗ್ತಿರೋ ಬದಲಾವಣೆಗಳನ್ನ ಒಪ್ಕೊಳ್ಳೋಕೆ ರಾಹೇಲ್ ಏನು ಮಾಡಿದಳು?
7 ಸ್ಲೊವೇನಿಯಾ ದೇಶದಲ್ಲಿರೋ ರಾಹೇಲ್ ಅನ್ನೋ ಸಹೋದರಿ ಯೆಹೋವನೇ ಸೃಷ್ಟಿಕರ್ತ ಅಂತ ಆಗಾಗ ನೆನಪಿಸ್ಕೊಳ್ತಾರೆ. ಇದ್ರಿಂದ ಸಂಘಟನೆಲಿ ಆಗೋ ಬದಲಾವಣೆನ ಒಪ್ಕೊಳ್ಳೋಕೆ ಅವ್ರಿಗೆ ಸುಲಭ ಆಗಿದೆ. “ಸಂಘಟನೆಲಿ ಕೆಲವು ಬದಲಾವಣೆ ಆದಾಗ ಅದನ್ನ ಒಪ್ಕೊಳ್ಳೋಕೆ ಮೊದಮೊದಲು ನನಗೆ ಕಷ್ಟ ಆಗ್ತಿತ್ತು. 2023 ಆಡಳಿತ ಮಂಡಳಿಯ ಅಪ್ಡೇಟ್ 8ರಲ್ಲಿ ಸಹೋದರರು ಇನ್ಮೇಲೆ ಗಡ್ಡ ಬಿಡಬಹುದು ಅಂತ ಹೇಳಿದ್ದನ್ನ ನೋಡಿದ್ದೆ. ಆದ್ರೂ ಗಡ್ಡ ಬಿಟ್ಟಿರೋ ಸಹೋದರ ಸ್ಟೇಜ್ ಮೇಲೆ ಭಾಷಣ ಕೊಡೋದನ್ನ ನೋಡಿದಾಗ ನಂಗೆ ಜೀರ್ಣ ಮಾಡ್ಕೊಳೋಕೆ ಆಗ್ಲಿಲ್ಲ. ಅದಕ್ಕೆ, ಈ ಬದಲಾವಣೆನ ಒಪ್ಕೊಳ್ಳೋಕೆ ನಂಗೆ ಸಹಾಯ ಮಾಡಪ್ಪ ಅಂತ ಪ್ರಾರ್ಥಿಸಿದೆ. ಯೆಹೋವ, ಈ ಇಡೀ ಆಕಾಶ ಭೂಮಿನ ಇಷ್ಟು ಚೆನ್ನಾಗಿ ನಡೆಸ್ತಿದ್ದಾನೆ ಅಂದ್ಮೇಲೆ ಈ ಸಂಘಟನೆನೂ ಚೆನ್ನಾಗಿ ನಡೆಸುತ್ತಾನೆ ಅಲ್ವಾ ಅಂತ ಅರ್ಥ ಮಾಡ್ಕೊಂಡೆ” ಅಂತ ರಾಹೇಲ್ ಹೇಳ್ತಾಳೆ. ಸಂಘಟನೆಯಲ್ಲಿ ಆಗ್ತಿರೋ ಬದಲಾವಣೆಗಳನ್ನ ಒಪ್ಕೊಳ್ಳೋಕೆ ನಿಮಗೆ ಕಷ್ಟ ಆಗ್ತಿದ್ರೆ ಏನು ಮಾಡಬೇಕು? ಯೆಹೋವನಿಗೆ ನಿಮಗಿಂತ ಜಾಸ್ತಿ ವಿವೇಕ ಇದೆ. ಆತನು ಎಲ್ಲಾನೂ ಸರಿಯಾಗಿ ಸೃಷ್ಟಿ ಮಾಡಿದ್ದಾನೆ ಅನ್ನೋ ವಿಷಯದ ಬಗ್ಗೆ ಯೋಚನೆ ಮಾಡಿ.—ರೋಮ. 11:33-36.
ದೇವರು ಯಾಕೆ ಕಷ್ಟಗಳನ್ನ ಹಾಗೆ ಬಿಟ್ಟಿದ್ದಾನೆ?
8. ದೇವರು ಕಷ್ಟನ ತೆಗೆಯದೆ ಇರೋಕೆ ಕಾರಣ ಏನು ಅಂತ ತಿಳ್ಕೊಂಡಿದ್ರಿಂದ ನಮಗೇನು ಪ್ರಯೋಜ್ನ ಆಗಿದೆ?
8 ಈ ಪ್ರಶ್ನೆಗೆ ಜನ್ರ ಹತ್ರ ಉತ್ತರ ಇಲ್ಲ. ಹಾಗಾಗಿ ಕೆಲವರು ದೇವರ ಮೇಲೆ ಕೋಪ ಮಾಡ್ಕೊಂಡಿದ್ದಾರೆ. ಇನ್ನು ಕೆಲವರು, ‘ದೇವರೇ ಇಲ್ಲ!’ ಅಂದ್ಕೊಂಡಿದ್ದಾರೆ. (ಜ್ಞಾನೋ. 19:3) ಆದ್ರೆ ನಮ್ಮ ಕಷ್ಟಗಳಿಗೆ ಯೆಹೋವ ಕಾರಣ ಅಲ್ಲ, ಆದಾಮ ಹವ್ವಳಿಂದ ಸಿಕ್ಕಿರೋ ಪಾಪ ಮತ್ತು ಅಪರಿಪೂರ್ಣತೆನೇ ಕಾರಣ ಅಂತ ನಮಗೆ ಗೊತ್ತು. ಅಷ್ಟೇ ಅಲ್ಲ, ಯೆಹೋವ ಈ ತರ ತಾಳ್ಮೆ ತೋರಿಸ್ತಾ ಇರೋದ್ರಿಂದಾನೇ ಇವತ್ತು ಲಕ್ಷಾಂತರ ಜನ ಸತ್ಯ ಕಲಿಯೋಕೆ ಆಗಿದೆ. ಜೊತೆಗೆ ಈ ಕಷ್ಟಗಳನ್ನ ದೇವರು ಹೇಗೆ ತೆಗೆದುಹಾಕ್ತಾನೆ ಅಂತಾನೂ ತಿಳ್ಕೊಳೋಕೆ ಆಗಿದೆ. (2 ಪೇತ್ರ 3:9, 15) ಈ ಎಲ್ಲ ಸತ್ಯಗಳು ನಾವು ಆತನನ್ನ ಜಾಸ್ತಿ ಪ್ರೀತಿಸೋಕೆ ಸಹಾಯ ಮಾಡಿದೆ.
9. (ಎ) ‘ಯೆಹೋವ ಕಷ್ಟಗಳನ್ನ ಇನ್ನೂ ಯಾಕೆ ತೆಗೀತಿಲ್ಲ’ ಅಂತ ನಮಗೆ ಯಾವಾಗೆಲ್ಲಾ ಅನಿಸಬಹುದು? (ಬಿ) ಅಂಥ ಟೈಮಲ್ಲಿ ನಾವೇನು ಯೋಚ್ನೆ ಮಾಡಬೇಕು?
9 ಯೆಹೋವ ಎಲ್ಲ ಕಷ್ಟಗಳನ್ನ ತೆಗೆದು ಹಾಕೋವರೆಗೂ ನಾವು ತಾಳ್ಮೆಯಿಂದ ಕಾಯಬೇಕು. ಆದ್ರೆ ನಮಗೆ ಅಥವಾ ನಾವು ಇಷ್ಟಪಡೋರಿಗೆ ಕಾಯಿಲೆ, ಅನ್ಯಾಯ ಅಥವಾ ಸಾಯೋ ಪರಿಸ್ಥಿತಿ ಬಂದ್ರೆ ಯೆಹೋವ ಇದನ್ನೆಲ್ಲಾ ನೋಡಿಕೊಂಡು ಯಾಕೆ ಇನ್ನು ಸುಮ್ಮನಿದ್ದಾನೆ ಅಂತ ನಮಗೆ ಅನಿಸಬಹುದು. (ಹಬ. 1:2, 3) ಆದ್ರೆ ಅಂಥ ಟೈಮಲ್ಲಿ ಯೆಹೋವ ಕಷ್ಟಗಳನ್ನ ಯಾಕೆ ಇನ್ನೂ ತೆಗೆದುಹಾಕಿಲ್ಲ ಅನ್ನೋ ಕಾರಣಗಳ ಬಗ್ಗೆ ನಾವು ಯೋಚನೆ ಮಾಡಬೇಕು.a (ಕೀರ್ತ. 34:19) ಅಷ್ಟೇ ಅಲ್ಲ, ಯೆಹೋವ ಎಲ್ಲಾ ಕಷ್ಟಗಳನ್ನ ತುಂಬ ಬೇಗ ತೆಗೆದು ಹಾಕೋಕೆ ಕಾಯ್ತಿದ್ದಾನೆ ಅನ್ನೋದ್ರ ಬಗ್ಗೆನೂ ಯೋಚನೆ ಮಾಡಬೇಕು.
10. ಅಮ್ಮನ ಕಳ್ಕೊಂಡಿರೋ ನೋವನ್ನ ಸಹಿಸಿಕೊಳ್ಳೋಕೆ ಸಹೋದರಿ ಆ್ಯನ್ಗೆ ಯಾವುದು ಸಹಾಯ ಮಾಡ್ತು?
10 ಯೆಹೋವ ಕಷ್ಟಗಳನ್ನ ಇನ್ನೂ ಯಾಕೆ ತೆಗೀತಿಲ್ಲ ಅನ್ನೋ ಸತ್ಯನ ತಿಳ್ಕೊಂಡ್ರೆ ತಾಳ್ಕೊಳ್ಳೋಕೆ ಸಹಾಯ ಆಗುತ್ತೆ. ಮಯೋಟಿ ದ್ವೀಪದಲ್ಲಿರೋ ಸಹೋದರಿ ಆ್ಯನ್ ಅವ್ರ ಅನುಭವ ನೋಡಿ. ಅವರು ಹೇಳೋದು, “ಸ್ವಲ್ಪ ವರ್ಷಗಳ ಹಿಂದೆ ನಮ್ಮ ಅಮ್ಮ ತೀರಿಕೊಂಡಾಗ ನಂಗೆ ತುಂಬ ನೋವಾಯ್ತು. ಆದ್ರೆ ಈ ಕಷ್ಟಕ್ಕೆ ಯೆಹೋವ ಕಾರಣ ಅಲ್ಲ ಅಂತ ನಾನು ಆಗಾಗ ನೆನಪಿಸ್ಕೊಳ್ತಾ ಇದ್ದೆ. ಕಷ್ಟಗಳನ್ನ ತೆಗೆದು ಹಾಕೋಕೆ, ತೀರಿ ಹೋಗಿರೋರನ್ನ ಮತ್ತೆ ಜೀವಂತವಾಗಿ ಎಬ್ಬಿಸೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ ಅಂತ ನೆನಪಿಸ್ಕೊಂಡೆ. ಅಮ್ಮನ ಕಳ್ಕೊಂಡಿರೋ ನೋವಿದ್ರೂ ಈ ತರ ಯೋಚನೆ ಮಾಡ್ತಿರೋದ್ರಿಂದ ನನಗೆ ಶಾಂತಿ, ನೆಮ್ಮದಿ ಸಿಕ್ಕಿದೆ.”
11. ಯೆಹೋವ ಇನ್ನೂ ಕಷ್ಟಗಳನ್ನ ತೆಗೆಯದೇ ಇರೋದು ಸಿಹಿಸುದ್ದಿ ಸಾರೋಕೆ ಹೇಗೆ ಅವಕಾಶ ಮಾಡಿಕೊಟ್ಟಿದೆ?
11 ಯೆಹೋವ ಕಷ್ಟಗಳನ್ನ ಇನ್ನೂ ಯಾಕೆ ತೆಗೀತಿಲ್ಲ ಅಂತ ತಿಳ್ಕೊಂಡ್ರೆ ಜಾಸ್ತಿ ಸಿಹಿಸುದ್ದಿ ಸಾರಬೇಕು ಅಂತ ನಮಗೆ ಅನಿಸುತ್ತೆ. ಜನರು ಪಶ್ಚಾತ್ತಾಪ ಪಟ್ಟು ರಕ್ಷಣೆ ಪಡಿಬೇಕು ಅಂತ ಯೆಹೋವ ತಾಳ್ಮೆಯಿಂದ ಇದ್ದಾನೆ ಅಂತ ಪೇತ್ರ ಹೇಳಿದ. ಅದಾದ್ಮೇಲೆ “ನಿಮ್ಮ ನಡತೆ ಹೇಗಿರಬೇಕು, ಏನು ಮಾಡಬೇಕು ಅನ್ನೋದಕ್ಕೆ ಗಮನ ಕೊಡಿ. ನೀವು ಪವಿತ್ರರಾಗಿ ನಡ್ಕೊಬೇಕು. ನಿಮಗೆ ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡಬೇಕು” ಅಂತ ಹೇಳಿದ. (2 ಪೇತ್ರ 3:11) “ದೇವರ ಮೇಲೆ ಭಕ್ತಿ ಇದೆ” ಅಂತ ತೋರಿಸೋ ಕೆಲಸಗಳಲ್ಲಿ ಸಿಹಿಸುದ್ದಿ ಸಾರೋದೂ ಸೇರಿದೆ. ಯೆಹೋವನ ತರನೇ ನಾವು ಎಲ್ಲ ಮನುಷ್ಯರನ್ನ ಪ್ರೀತಿಸ್ತೀವಿ. ಅವರೆಲ್ರೂ ಹೊಸ ಲೋಕದಲ್ಲಿ ಬದುಕಿ ಬಾಳಬೇಕು ಅಂತ ಇಷ್ಟಪಡ್ತೀವಿ. ಜನರು ಸತ್ಯನ ಕಲಿತು ತನ್ನನ್ನ ಆರಾಧಿಸಬೇಕು ಅಂತ ಸ್ವಲ್ಪ ಟೈಮ್ ಕೊಟ್ಟು ಯೆಹೋವ ಅವರಿಗೆ ಸಹಾಯ ಮಾಡ್ತಿದ್ದಾನೆ. ಹಾಗಾಗಿ ನಾವು ಯೆಹೋವನ ಜೊತೆ ಸೇರಿ ಅಂತ್ಯ ಬರೋ ಮುಂಚೆ ಎಷ್ಟಾಗುತ್ತೋ ಅಷ್ಟು ಜನ್ರಿಗೆ ಸಿಹಿಸುದ್ದಿ ಸಾರೋಣ.—1 ಕೊರಿಂ. 3:9.
ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ
12. ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅನ್ನೋ ಸತ್ಯಾನ ತಿಳ್ಕೊಂಡಿರೋದ್ರಿಂದ ಏನು ಪ್ರಯೋಜನ?
12 “ಕೊನೇ ದಿನಗಳಲ್ಲಿ” ಜನ್ರಲ್ಲಿ ಎಂಥ ಗುಣಗಳಿರುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು. (2 ತಿಮೊ. 3:1-5) ಇವತ್ತು ಜನರಲ್ಲಿ ಅದೇ ಗುಣಗಳು ಎದ್ದು ಕಾಣ್ತಿವೆ. ಜನ ನೀಚ ಕೆಲಸಗಳಿಗೆ ಇಳಿತಿರೋದನ್ನ ನೋಡಿದ್ರೆ ಬೈಬಲ್ ಹೇಳಿರೋದೆಲ್ಲ ಸತ್ಯ ಅಂತ ನಮಗೆ ಗೊತ್ತಾಗುತ್ತೆ. ಇದ್ರಿಂದ ನಂಬಿಕೆ ಹೆಚ್ಚಾಗುತ್ತೆ. —2 ತಿಮೊ. 3:13-15.
13. ಯೇಸು ಹೇಳಿದ ಉದಾಹರಣೆಯನ್ನ ಮನಸ್ಸಲ್ಲಿಟ್ಟು ನಾವು ನಮ್ಮನ್ನ ಯಾವ ಪ್ರಶ್ನೆಗಳು ಕೇಳ್ಕೋಬೇಕು?
13 ನಾವು ಕೊನೇ ದಿನಗಳಲ್ಲಿ ಜೀವಿಸ್ತಿದ್ದೀವಿ ಅನ್ನೋ ಸತ್ಯಾನ ತಿಳ್ಕೊಂಡ್ರೆ ನಮಗಿರೋ ಸ್ವಲ್ಪ ಟೈಮನ್ನ ಚೆನ್ನಾಗಿ ಬಳಸ್ತೀವಿ. ಅದು ಹೇಗೆ ಅಂತ ಲೂಕ 12:15-21ರಲ್ಲಿ (ಓದಿ) ಯೇಸು ಹೇಳಿದ ಉದಾಹರಣೆ ತಿಳಿಸುತ್ತೆ. ಅಲ್ಲಿ, ಒಬ್ಬ ಶ್ರೀಮಂತ ವ್ಯಕ್ತಿಯನ್ನ ‘ಬುದ್ಧಿ ಇಲ್ಲದವನು’ ಅಂತ ಕರೆದಿದೆ. ಯಾಕೆ? ಆ ವ್ಯಕ್ತಿ ಶ್ರೀಮಂತನಾಗಿದ್ದಕ್ಕೆ ಅಲ್ಲ. ಬದಲಿಗೆ ಅವನಿಗೆ ಯಾವುದು ಮುಖ್ಯ, ಯಾವುದನ್ನ ಮೊದಲು ಮಾಡಬೇಕು ಅಂತ ಗೊತ್ತಿಲ್ಲದೇ ಇದಿದ್ದಕ್ಕೆ! ಆ ವ್ಯಕ್ತಿ ‘ದೇವರ ದೃಷ್ಟಿಯಲ್ಲಿ ಶ್ರೀಮಂತನಾಗೋದು ಬಿಟ್ಟು, ತನಗೋಸ್ಕರ ಹಣ-ಆಸ್ತಿ ಕೂಡಿಸಿಕೊಳ್ಳೋದ್ರಲ್ಲೇ’ ಟೈಮ್ ಕಳೆದು ಬಿಟ್ಟ. ಬದಲಾಗೋಕೆ ಅವನಿಗೆ ಈಗ ಟೈಮ್ ಇತ್ತಾ? ಇಲ್ಲ. ಯೇಸು ಅವನಿಗೆ, “ಇವತ್ತು ರಾತ್ರಿನೇ ನಿನ್ನ ಪ್ರಾಣ ಹೋಗುತ್ತೆ” ಅಂತ ಹೇಳಿದನು. ಈ ಉದಾಹರಣೆಯಿಂದ ನಾವು ಯಾವ ಪಾಠ ಕಲಿತೀವಿ? ಈ ಲೋಕ ಬೇಗ ಅಂತ್ಯ ಆಗುತ್ತೆ. ಅದಕ್ಕೆ ನಾವು ಹೀಗೆ ಕೇಳಿಕೊಳ್ಳಬೇಕು: ‘ನಾನು ಇಟ್ಟಿರೋ ಗುರಿ, ಮಾಡ್ತಿರೋ ಕೆಲಸ ನನಗಿರೋ ಸ್ವಲ್ಪ ಟೈಮ್ನ ಚೆನ್ನಾಗಿ ಬಳಸ್ತಿದ್ದೀನಿ ಅಂತ ತೋರಿಸುತ್ತಾ? ನಾನು ನನ್ನ ಮಕ್ಕಳಿಗೆ ಎಂಥ ಗುರಿಗಳನ್ನ ಇಡೋಕೆ ಹೇಳ್ತಿದೀನಿ? ನನ್ನ ಸಮಯ, ಶಕ್ತಿ ಮತ್ತು ಹಣ ಬಳಸಿ ನಾನು ದೇವರ ದೃಷ್ಟಿಲಿ ಶ್ರೀಮಂತನಾಗ್ತಾ ಇದ್ದೀನಾ ಅಥವಾ ಈ ಲೋಕದಲ್ಲಿ ಶ್ರೀಮಂತನಾಗ್ತಾ ಇದ್ದೀನಾ?’
14. (ಎ) ಕೊನೇ ದಿನಗಳಲ್ಲಿ ಜೀವನ ಮಾಡ್ತಿದ್ದೀವಿ ಅಂತ ಯೋಚಿಸಿದ್ರಿಂದ ಮಿಕ್ಕಿಗೆ ಹೇಗೆ ಸಹಾಯ ಆಯ್ತು? (ಬಿ) ಅದು ನಮಗೆ ಹೇಗೆ ಸಹಾಯ ಆಗುತ್ತೆ?
14 ನಾವು ಕೊನೇ ದಿನದಲ್ಲಿ ಜೀವಿಸ್ತಿದ್ದೀವಿ ಅನ್ನೋದಕ್ಕೆ ಆಧಾರಗಳನ್ನ ಹುಡುಕಿ, ಚೆನ್ನಾಗಿ ಅರ್ಥ ಮಾಡ್ಕೋಬೇಕು. ಆಗ ನಾವು ಜೀವನ ಮಾಡೋ ರೀತಿನೇ ಬದಲಾಗುತ್ತೆ, ಸರಿಯಾಗಿರೋ ನಿರ್ಧಾರಗಳನ್ನ ಮಾಡ್ತೀವಿ. ಸಹೋದರಿ ಮಿಕ್ಕಿ ವಿಷ್ಯದಲ್ಲೂ ಇದು ನಿಜ ಆಯ್ತು. ಅವರು ಹೇಳೋದು, “ನಾನು ಸ್ಕೂಲ್ ಮುಗಿಸಿದ ಮೇಲೆ ಪ್ರಾಣಿಗಳ ಬಗ್ಗೆ ಜಾಸ್ತಿ ಓದಬೇಕು ಅಂತ ಅಂದ್ಕೊಂಡೆ. ಆದ್ರೆ ಅದೇ ಟೈಮಲ್ಲಿ ಪಯನೀಯರ್ ಸೇವೆ ಮಾಡಬೇಕು, ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋ ಗುರಿಗಳೂ ನನಗಿತ್ತು. ಇದ್ರ ಬಗ್ಗೆ ನಮ್ಮ ಸಭೆಲಿರೋ ಕೆಲವು ಸಹೋದರ ಸಹೋದರಿಯರನ್ನ ಕೇಳಿದೆ. ಅದಕ್ಕೆ ಅವರು ನಂಗೆ, ‘ನೀನು ಒಂದೇ ಸಲ ಇದನ್ನೆಲ್ಲ ಮಾಡೋಕೆ ಆಗುತ್ತಾ? ಮೊದಲು ಯಾವುದು ಮಾಡಬೇಕು ಅಂತ ಯೋಚನೆ ಮಾಡು’ ಅಂತ ಹೇಳಿದ್ರು. ನಾವೀಗ ಕೊನೆ ದಿನಗಳಲ್ಲಿ ಜೀವಿಸ್ತಿದ್ದೀವಿ. ಈ ಲೋಕ ಬೇಗ ಅಂತ್ಯ ಆಗುತ್ತೆ. ಹಾಗಾಗಿ ಹೊಸ ಲೋಕದಲ್ಲಿ ಎಷ್ಟು ಬೇಕೋ ಅಷ್ಟು ಪ್ರಾಣಿಗಳ ಬಗ್ಗೆ ಕಲಿಯೋಕೆ ನಿನಗೆ ತುಂಬ ಟೈಮ್ ಇರುತ್ತೆ ಅಂತಾನೂ ನೆನಪಿಸಿದ್ರು. ಅವರು ಹೇಳಿದ ಮಾತಿಂದ ನನಗೆ ತುಂಬ ಸಹಾಯ ಆಯ್ತು. ಅದಕ್ಕೆ ನಾನು ಜಾಸ್ತಿ ಓದದೆ, ಒಂದು ಚಿಕ್ಕ ಕೋರ್ಸ್ ಮಾಡಿದೆ. ಇದ್ರಿಂದ ಒಂದು ಚಿಕ್ಕ ಕೆಲಸ ಮಾಡ್ಕೊಂಡು ಪಯನೀಯರ್ ಸೇವೆ ಮಾಡೋಕಾಯ್ತು. ಆಮೇಲೆ ಅಗತ್ಯ ಇರೋ ಕಡೆ ಅಂದ್ರೆ ಈಕ್ವೆಡಾರ್ಗೆ ಹೋಗಿ ಸೇವೆ ಮಾಡೋಕೂ ಆಯ್ತು.” ಮಿಕ್ಕಿ ಮತ್ತು ಅವರ ಗಂಡ ಈಗ ಅಲ್ಲಿ ಸರ್ಕಿಟ್ ಸೇವೆ ಮಾಡ್ತಿದ್ದಾರೆ.
15. ಜನ ಆಸಕ್ತಿ ತೋರಿಸಿಲ್ಲ ಅಂದ್ರೂ ಸಿಹಿಸುದ್ದಿ ಸಾರೋದು ಮುಖ್ಯ ಅಂತ ಯಾಕೋಬನ ಉದಾಹರಣೆ ಹೇಗೆ ತೋರಿಸುತ್ತೆ? (ಚಿತ್ರ ನೋಡಿ.)
15 ನಾವು ಸಿಹಿಸುದ್ದಿ ಸಾರಿದಾಗ ಕೆಲವರು ಕಿವಿಗೇ ಹಾಕೊಳ್ಳಲ್ಲ. ಹಾಗಂತ ನೀವು ಬೇಜಾರಾಗಬೇಡಿ. ಜನ ಒಂದಲ್ಲ ಒಂದು ದಿನ ಬದಲಾಗ್ತಾರೆ ಅಂತ ನಂಬಿ! ಯೇಸುವಿನ ಮಲತಮ್ಮನಾದ ಯಾಕೋಬ ಬದಲಾದ. ಅವನು ಯೇಸು ಜೊತೇನೇ ಬೆಳೆದ, ಯೇಸು ಮೆಸ್ಸೀಯ ಆಗಿದನ್ನ ಮತ್ತು ಬೇರೆಯವ್ರಿಗೆ ಚೆನ್ನಾಗಿ ಕಲಿಸ್ತಾ ಇದ್ದಿದ್ದನ್ನ ಕಣ್ಣಾರೆ ನೋಡಿದ್ದ. ಆದ್ರೂ ಎಷ್ಟೋ ವರ್ಷಗಳ ತನಕ ಅವನು ಯೇಸುವಿನ ಶಿಷ್ಯನೇ ಆಗ್ಲಿಲ್ಲ. ಯೇಸು ಸತ್ತು ಜೀವಂತವಾಗಿ ಮತ್ತೆ ಎದ್ದು ಬಂದ ಮೇಲೇನೇ ಅವನು ಯೇಸು ಶಿಷ್ಯನಾದ, ಹುರುಪಿಂದ ಸೇವೆ ಮಾಡೋಕೆ ಶುರು ಮಾಡಿದ.b (ಯೋಹಾ. 7:5; ಗಲಾ. 2:9) ಹಾಗಾಗಿ ನಾವೂ ಸಂಬಂಧಿಕರಿಗೆ ಸಿಹಿಸುದ್ದಿ ಸಾರೋದು ತುಂಬ ಮುಖ್ಯ. ಅಷ್ಟೇ ಅಲ್ಲ, ಈ ಹಿಂದೆ ಯಾರು ಆಸಕ್ತಿ ತೋರಿಸಿಲ್ವೋ ಅವ್ರಿಗೂ ಮತ್ತೆ ಹೋಗಿ ಸಿಹಿಸುದ್ದಿ ಸಾರಬೇಕು. ನಾವು ಈಗ ಹೇಳೋ ಸಿಹಿಸುದ್ದಿ ಅವರು ಮುಂದೆ ಒಂದಿನ ಬದಲಾಗೋಕೆ ಸಹಾಯ ಮಾಡಬಹುದು. ಮಹಾಸಂಕಟ ಶುರುವಾದ ಮೇಲೂ ಅವರಿಗೆ ಬದಲಾಗೋಕೆ ಅವಕಾಶ ಇದೆ ಅನ್ನೋದನ್ನ ಮರೀಬೇಡಿ.c
ಸತ್ಯದಲ್ಲಿಲ್ಲದ ನಮ್ಮ ಸಂಬಂಧಿಕರಿಗೆ ಸಿಹಿಸುದ್ದಿ ಸಾರೋಕೆ ಯಾವುದು ನಮ್ಮನ್ನ ಪ್ರೋತ್ಸಾಹಿಸುತ್ತೆ? (ಪ್ಯಾರ 15 ನೋಡಿ)e
ಮರುಜ್ಞಾಪನೆಗಳಿಗೆ ಕೃತಜ್ಞತೆ ತೋರಿಸಿ
16. ಯೆಹೋವ ಕೊಡ್ತಿರೋ ಮರುಜ್ಞಾಪನೆಗಳಿಂದ ನಿಮಗೇನು ಪ್ರಯೋಜನ ಆಗಿದೆ? (“ಸರಳ ಸತ್ಯಗಳನ್ನ ಬಳಸಿ ಸಹಾಯ ಮಾಡಿ” ಅನ್ನೋ ಚೌಕ ನೋಡಿ.)
16 ನಮ್ಮ ಸಂಘಟನೆ ಕೊಡೋ ಎಷ್ಟೋ ಸಾಹಿತ್ಯಗಳು ಹೊಸಬರಿಗೆ ಅಂತಾನೇ ಇರುತ್ತೆ. ಉದಾಹರಣೆಗೆ, ಸಾರ್ವಜನಿಕ ಭಾಷಣಗಳು, jw.org ವೆಬ್ಸೈಟಲ್ಲಿರೋ ವಿಡಿಯೋಗಳು, ಲೇಖನಗಳು ಮತ್ತು ಸಾರ್ವಜನಿಕ ಪತ್ರಿಕೆಗಳು. ಇವನ್ನೆಲ್ಲ ಸತ್ಯದಲ್ಲಿ ಇಲ್ಲದೇ ಇರೋರಿಗೆ ಅಂತಾನೇ ಮಾಡಿರ್ತಾರೆ. ಅದ್ರಲ್ಲಿರೋ ಎಷ್ಟೋ ವಿಷ್ಯಗಳು ನಮಗೆ ಈಗಾಗ್ಲೇ ಗೊತ್ತಿರುತ್ತೆ. ಆದ್ರೆ ಅದನ್ನ ನಾವು ಮತ್ತೆ ಓದೋದ್ರಿಂದ ಯೆಹೋವನ ಮೇಲೆ ಇನ್ನೂ ಜಾಸ್ತಿ ಪ್ರೀತಿ ಬೆಳೆಸ್ಕೋಬಹುದು. ಬೈಬಲ್ ಮೇಲೆ ಇನ್ನೂ ಜಾಸ್ತಿ ನಂಬಿಕೆ ಇಡಬಹುದು. ಅಷ್ಟೇ ಅಲ್ಲ, ಬೈಬಲ್ನಲ್ಲಿರೋ ಸರಳ ಸತ್ಯನ ಜನರಿಗೆ ಇನ್ನೂ ಚೆನ್ನಾಗಿ ಕಲಿಸಬಹುದು.—ಕೀರ್ತ. 19:7.
17. ಯಾವೆಲ್ಲ ಸಂದರ್ಭದಲ್ಲಿ ನಾವು ಬೈಬಲಿನ ಸರಳ ಸತ್ಯಗಳ ಬಗ್ಗೆ ಯೋಚನೆ ಮಾಡೋದು ಒಳ್ಳೆಯದು?
17 ಸುಮಾರು ವರ್ಷಗಳಿಂದ ಸತ್ಯದಲ್ಲಿರೋರಿಗೆ ಬೈಬಲಿಂದ ಯಾವುದಾದ್ರೂ ಹೊಸ ತಿಳುವಳಿಕೆ ಸಿಕ್ಕಿದ್ರೆ ತುಂಬನೇ ಖುಷಿ ಆಗುತ್ತೆ. ಹಾಗಂತ ನಾವು ಮೊದಮೊದಲು ಸತ್ಯಕ್ಕೆ ಬರೋಕೆ ಸಹಾಯ ಮಾಡಿದ ಬೈಬಲಿನ ಸರಳ ಸತ್ಯಗಳನ್ನ ಯಾವತ್ತೂ ಮಾಮೂಲಿಯಾಗಿ ನೋಡಬಾರದು. ನಿಮಗೆ ಯಾವತ್ತಾದ್ರೂ ‘ಸಂಘಟನೆ ಹೇಳೋದಕ್ಕಿಂತ ನನ್ನ ಯೋಚನೆನೇ ಸರಿ’ ಅಂತ ಅನಿಸಿದ್ಯಾ? ಒಂದುಸಲ ದೀನತೆಯಿಂದ ಈ ಸಂಘಟನೆನ ಯಾರು ನಡೆಸ್ತಿದ್ದಾರೆ ಅಂತ ಯೋಚನೆ ಮಾಡಿ. ಸರ್ವಶಕ್ತ, ತುಂಬ ವಿವೇಕ ಇರೋ ಸೃಷ್ಟಿಕರ್ತನಾದ ಯೆಹೋವ ಅಂತ ಅರ್ಥ ಮಾಡ್ಕೊಳ್ಳಿ. ನೀವಾಗಲಿ, ನೀವು ಇಷ್ಟಪಡೋರಾಗಲಿ ಕಷ್ಟ ಅನುಭವಿಸ್ತಿದ್ದೀರಾ? ಯೆಹೋವ ಈ ಕಷ್ಟಗಳನ್ನ ಇನ್ನೂ ಯಾಕೆ ತೆಗೆದಿಲ್ಲ ಅಂತ ಯೋಚಿಸಿ. ಜೀವನದಲ್ಲಿ ಏನು ಮಾಡಬೇಕು, ಯಾವ ಗುರಿ ಇಡಬೇಕು ಅಂತ ಯೋಚನೆ ಮಾಡ್ತಿದ್ದೀರಾ? ನಾವು ಕೊನೇ ದಿನಗಳಲ್ಲಿ ಜೀವಿಸ್ತಿದ್ದೀವಿ, ಸಿಹಿಸುದ್ದಿ ಸಾರೋಕೆ ಇನ್ನೂ ಸ್ವಲ್ಪ ಟೈಮ್ ಅಷ್ಟೇ ಇದೆ ಅಂತ ನೆನಪು ಮಾಡ್ಕೊಳಿ. ಯೆಹೋವ ಕೊಡ್ತಿರೋ ಈ ಎಲ್ಲ ಮರುಜ್ಞಾಪನೆಗಳು ನಿಮ್ಮನ್ನ ಬಲಪಡಿಸಲಿ, ಹುರಿದುಂಬಿಸಲಿ ಹಾಗೂ ವಿವೇಚನೆಯಿಂದ ಜೀವನ ನಡೆಸೋಕೆ ಸಹಾಯ ಮಾಡಲಿ.
ಗೀತೆ 95 ಬೆಳಕು ಪ್ರಕಾಶವಾಯ್ತು
a ಜೂನ್ 1, 2007ರ ಕಾವಲಿನಬುರುಜುವಿನ ಪುಟ 12-16ರಲ್ಲಿರೋ “ದೇವರು ಏಕೆ ಎಲ್ಲ ಕಷ್ಟಸಂಕಟವನ್ನು ಬೇಗನೇ ಅಂತ್ಯಗೊಳಿಸುವನು?” ಅನ್ನೋ ಲೇಖನ ನೋಡಿ.
c ಮೇ 2024ರ ಕಾವಲಿನಬುರುಜುವಿನ ಪುಟ 8-13ರಲ್ಲಿರೋ “ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?” ಅನ್ನೋ ಲೇಖನ ನೋಡಿ.
d ಚಿತ್ರ ವಿವರಣೆ: ಒಬ್ಬ ಹಿರಿಯನು ಕೊಟ್ಟ ಸಲಹೆಯನ್ನ ಹಿರಿಯ ಮಂಡಲಿ ಒಪ್ಪುತ್ತಿಲ್ಲ. ನಂತರ ಆ ಹಿರಿಯ ನಕ್ಷತ್ರ ತುಂಬಿದ ಆಕಾಶ ನೋಡ್ತಾ ಯೆಹೋವನು ಎಷ್ಟು ವಿವೇಕಿ ಮತ್ತು ಸರ್ವಶಕ್ತ ಅಲ್ವಾ ಅಂತ ಯೋಚಿಸ್ತಾನೆ. ತನ್ನ ಇಷ್ಟಕ್ಕಿಂತ ಯೆಹೋವನ ಇಷ್ಟಾನೇ ಮುಖ್ಯ ಅಂತ ಅರ್ಥ ಮಾಡ್ಕೊಳ್ತಾನೆ.
e ಚಿತ್ರ ವಿವರಣೆ: ಒಬ್ಬ ಸಾಕ್ಷಿ ತನ್ನ ವೈಯಕ್ತಿಕ ಅಧ್ಯಯನದಲ್ಲಿ, ನಾವು ಕೊನೇ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅನ್ನೋದಕ್ಕೆ ಆಧಾರ ಹುಡುಕ್ತಾ ಇದ್ದಾಳೆ. ಆಮೇಲೆ ತನ್ನ ತಂಗಿಗೆ ಫೋನ್ ಮಾಡಿ ಸಿಹಿಸುದ್ದಿ ಸಾರ್ತಿದ್ದಾಳೆ.