ಅಧ್ಯಯನ ಲೇಖನ 32
ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!
ನಾವು ತಾಳ್ಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ
‘ದೇವರು ನಿಮ್ಮನ್ನ ಬಲಪಡಿಸ್ತಾನೆ. ಎಲ್ಲ ತರದ ಅಪಾರ ಕೃಪೆ ತೋರಿಸ್ತಾನೆ. ನೀವು ನಂಬಿಗಸ್ತರಾಗಿ ಉಳಿಯೋಕೆ ಸಹಾಯ ಮಾಡ್ತಾನೆ. ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.’—1 ಪೇತ್ರ 5:10.
ಈ ಲೇಖನದಲ್ಲಿ ಏನಿದೆ?
ನಾವೆಲ್ಲ ತಾಳ್ಕೊಳ್ಳೋಕೆ ಯೆಹೋವ ಕೆಲವು ವಿಷ್ಯಗಳನ್ನ ಕೊಟ್ಟು ಸಹಾಯ ಮಾಡಿದ್ದಾನೆ. ಅವುಗಳಿಂದ ನಾವು ಹೇಗೆ ಪ್ರಯೋಜ್ನ ಪಡ್ಕೊಳ್ಳೋದು ಅಂತ ನೋಡೋಣ.
1. (ಎ) ನಮಗೆ ತಾಳ್ಮೆ ಯಾಕೆ ಬೇಕು? (ಬಿ) ಯಾರು ನಮಗೆ ಸಹಾಯ ಮಾಡ್ತಾರೆ? (1 ಪೇತ್ರ 5:10)
ಈ ಕೊನೆ ದಿನಗಳಲ್ಲಿ ಜೀವನ ಕಣ್ಣೀರಲ್ಲೇ ಕೈ ತೊಳೆಯೋ ತರ ಆಗಿಬಿಟ್ಟಿದೆ. ಅದಕ್ಕೆ ಯೆಹೋವನ ಜನ್ರಿಗೆ ತಾಳ್ಮೆಬೇಕು. ನಮ್ಮಲ್ಲಿ ಕೆಲವರು ವಾಸಿಯಾಗದ ಕಾಯಿಲೆಯಿಂದ ನರಳ್ತಿದ್ದಾರೆ. ಇನ್ನು ಕೆಲವರು ತಮ್ಮ ಆಪ್ತರನ್ನ ಕಳ್ಕೊಂಡಿರೋ ದುಃಖದಲ್ಲಿ ಮುಳುಗಿ ಹೋಗಿದ್ದಾರೆ. ಬೇರೆ ಕೆಲವ್ರಿಗೆ ತಮ್ಮ ಕುಟುಂಬದಿಂದ ಅಥವಾ ಸರ್ಕಾರದ ಅಧಿಕಾರಿಗಳಿಂದ ವಿರೋಧ, ಹಿಂಸೆ ಬರ್ತಿದೆ. (ಮತ್ತಾ. 10:18, 36, 37) ನೀವು ಈಗ ಎಂಥದ್ದೇ ಕಷ್ಟವನ್ನ ಎದುರಿಸ್ತಾ ಇರಲಿ, ಯೆಹೋವ ಖಂಡಿತ ನಿಮಗೆ ತಾಳ್ಕೊಳ್ಳೋಕೆ ಸಹಾಯ ಮಾಡ್ತಾನೆ.—1 ಪೇತ್ರ 5:10 ಓದಿ.
2. ತಾಳ್ಕೊಳ್ಳೋಕೆ ನಮಗೆ ಶಕ್ತಿ ಎಲ್ಲಿಂದ ಸಿಗುತ್ತೆ?
2 ವಿರೋಧ, ಹಿಂಸೆ, ಕಷ್ಟ ಮತ್ತು ಪ್ರಲೋಭನೆಗಳು ಬಿರುಗಾಳಿ ತರ ನಮ್ಮ ಮೇಲೆ ಬರುತ್ತೆ. ಆದ್ರೆ ಈ ಬಿರುಗಾಳಿ ಮಧ್ಯೆನೂ ಪ್ರಯತ್ನ ಬಿಡದೆ ಮುಂದೆ ಹೋಗೋಕೆ, ನಮ್ಮ ನಿರೀಕ್ಷೆಯನ್ನ ಕಾಪಾಡ್ಕೊಳ್ಳೋಕೆ ತಾಳ್ಮೆ ನಮಗೆ ಸಹಾಯ ಮಾಡುತ್ತೆ. ಕ್ರೈಸ್ತರಿಗೆ ಈ ತಾಳ್ಮೆ ಅನ್ನೋ ಗುಣ ತಮ್ಮ ಸ್ವಂತ ಶಕ್ತಿಯಿಂದ ಬರಲ್ಲ. ಇದನ್ನ ಯೆಹೋವನೇ ನಮಗೆ ಕೊಡಬೇಕು. ಅದಕ್ಕೆ ಬೈಬಲ್, “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಯೆಹೋವನೇ ನಮಗೆ ಕೊಡ್ತಾನೆ ಅಂತ ಹೇಳುತ್ತೆ. (2 ಕೊರಿಂ. 4:7) ನಾವು ತಾಳ್ಕೊಳ್ಳೋಕೆ ಯೆಹೋವ ನಮಗೆ ಯಾವ ನಾಲ್ಕು ವಿಷ್ಯಗಳನ್ನ ಕೊಟ್ಟಿದ್ದಾನೆ ಮತ್ತು ಇದ್ರಿಂದ ಪ್ರಯೋಜ್ನ ಪಡೆಯೋಕೆ ನಾವೇನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.
ಪ್ರಾರ್ಥನೆ
3. ಪ್ರಾರ್ಥನೆ ಒಂದು ಅದ್ಭುತ ವರ ಅಂತ ಯಾಕೆ ಹೇಳಬಹುದು?
3 ನಾವು ತಾಳ್ಕೊಳ್ಳೋಕೆ ಯೆಹೋವ ನಮಗೆ ಒಂದು ಅದ್ಭುತ ವರ ಕೊಟ್ಟಿದ್ದಾನೆ. ಅದೇ ಪ್ರಾರ್ಥನೆ! ನಾವು ಪಾಪಿಗಳಾಗಿದ್ರೂ ದೇವ್ರ ಜೊತೇಲಿ ಆರಾಮಾಗಿ ಮಾತಾಡಬಹುದು. (ಇಬ್ರಿ. 4:16) ಇದ್ರ ಬಗ್ಗೆ ಸ್ವಲ್ಪ ಯೋಚ್ನೆ ಮಾಡಿ. ನಾವು ಯಾವುದೇ ಸಮಯದಲ್ಲೂ ಯಾವುದೇ ವಿಷ್ಯದ ಬಗ್ಗೆ ದೇವ್ರಿಗೆ ಪ್ರಾರ್ಥಿಸಬಹುದು. ಯಾವುದೇ ಭಾಷೆಯಲ್ಲೂ, ಯಾವುದೇ ಜಾಗದಿಂದ ಬೇಕಾದ್ರೂ ಪ್ರಾರ್ಥನೆ ಮಾಡಬಹುದು. ನಾವು ಒಬ್ರೇ ಇದ್ದಾಗ್ಲೂ, ಜೈಲಲ್ಲಿ ಇರುವಾಗ್ಲೂ ದೇವ್ರಿಗೆ ಪ್ರಾರ್ಥಿಸಬಹುದು. (ಯೋನ 2:1, 2; ಅ. ಕಾ. 16:25, 26) ಒಂದುವೇಳೆ ನಮ್ಮ ಕಷ್ಟದ ಬಗ್ಗೆ ಹೇಳೋಕೆ ಬಾಯಿಂದ ಪದಗಳೇ ಬರ್ತಿಲ್ಲ ಅಂದ್ರೂ ಯೆಹೋವ ನಮ್ಮ ಮನಸ್ಸಿನ ಭಾಷೆನ ಅರ್ಥ ಮಾಡ್ಕೊಳ್ತಾನೆ. (ರೋಮ. 8:26, 27) ಇದನ್ನೆಲ್ಲಾ ನೋಡಿದ್ರೆ ಪ್ರಾರ್ಥನೆ ನಿಜಕ್ಕೂ ಒಂದು ಅದ್ಭುತ ವರ ಅಂತ ನಿಮಗೆ ಅನಿಸಲ್ವಾ?
4. ‘ತಾಳ್ಕೊಳ್ಳೋಕೆ ಸಹಾಯ ಮಾಡಪ್ಪ’ ಅಂತ ನಾವು ಮಾಡೋ ಪ್ರಾರ್ಥನೆ ಯೆಹೋವನ ಇಷ್ಟದ ಪ್ರಕಾರ ಇದೆ ಅಂತ ಯಾಕೆ ಹೇಳಬಹುದು?
4 “ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ” ಅಂತ ಬೈಬಲ್ ನಮಗೆ ಮಾತು ಕೊಟ್ಟಿದೆ. (1 ಯೋಹಾ. 5:14) ‘ತಾಳ್ಕೊಳ್ಳೋಕೆ ನನಗೆ ಸಹಾಯ ಮಾಡಪ್ಪ’ ಅಂತ ನಾವು ಯೆಹೋವನನ್ನ ಕೇಳಬಹುದಾ? ಖಂಡಿತ ಕೇಳ್ಬಹುದು. ಯಾಕಂದ್ರೆ ನಾವು ಈ ತರ ಕೇಳೋದು ಆತನ ಇಷ್ಟದ ಪ್ರಕಾರನೇ ಇದೆ. ಯಾಕಂದ್ರೆ ನಾವು ಕಷ್ಟಗಳನ್ನ ತಾಳ್ಕೊಂಡಾಗ ಯೆಹೋವ ದೇವರು ತನ್ನನ್ನ ಹಂಗಿಸೋ ಸೈತಾನನಿಗೆ ಸರಿಯಾಗಿ ಉತ್ರ ಕೊಡೋಕಾಗುತ್ತೆ. (ಜ್ಞಾನೋ. 27:11) “ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವ್ರಿಗೆ ಸಹಾಯ ಮಾಡೋಕೆ” ಯೆಹೋವ ತುದಿಗಾಲಲ್ಲಿ ಇದ್ದಾನೆ ಅಂತ ಬೈಬಲ್ ಹೇಳುತ್ತೆ. (2 ಪೂರ್ವ. 16:9) ಆದ್ರಿಂದ ಯೆಹೋವನು ನಾವು ತಾಳ್ಕೊಳ್ಳೋಕೆ ಖಂಡಿತ ಸಹಾಯ ಮಾಡ್ತಾನೆ. ಯಾಕಂದ್ರೆ ಆತನಿಗೆ ನಮಗೆ ಸಹಾಯ ಮಾಡೋ ಶಕ್ತಿನೂ ಇದೆ, ಆಸೆನೂ ಇದೆ.—ಯೆಶಾ. 30:18; 41:10; ಲೂಕ 11:13.
5. ಪ್ರಾರ್ಥನೆ ಮಾಡೋದ್ರಿಂದ ನಮಗೆ ಹೇಗೆ ಶಾಂತಿ ಸಮಾಧಾನ ಸಿಗುತ್ತೆ? (ಯೆಶಾಯ 26:3)
5 ಕಷ್ಟಗಳ ಬಗ್ಗೆ ಪ್ರಾರ್ಥನೆ ಮಾಡಿದಾಗ ‘ನಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಮಗೆ ಕೊಡ್ತಾನೆ, ನಮ್ಮ ಹೃದಯನ, ಯೋಚ್ನೆನ ಕಾಯ್ತಾನೆ’ ಅಂತ ಬೈಬಲ್ ಹೇಳುತ್ತೆ. (ಫಿಲಿ. 4:7) ಏನಿದ್ರ ಅರ್ಥ ಅಂತ ಸ್ವಲ್ಪ ಯೋಚನೆ ಮಾಡಿ. ಯೆಹೋವನನ್ನ ಆರಾಧನೆ ಮಾಡದೇ ಇರೋರು ಕೂಡ ಕಷ್ಟಗಳು ಬಂದಾಗ ಶಾಂತಿ ಪಡ್ಕೊಳ್ಳೋಕೆ ಬೇರೆ-ಬೇರೆ ಪ್ರಯತ್ನ ಮಾಡ್ತಾರೆ. ಉದಾಹರಣೆಗೆ, ಚಿಂತೆಯಲ್ಲಿ ಇರೋರು ಕೂಡ ಧ್ಯಾನ ಮಾಡೋದ್ರಲ್ಲೇ ಮುಳುಗಿ ಹೋಗಿ ತಮ್ಮ ಮನಸ್ಸನ್ನೆಲ್ಲ ಖಾಲಿ ಮಾಡ್ಕೊಳ್ತಾರೆ. ಆದ್ರೆ ಈ ತರ ಮನಸ್ಸನ್ನೆಲ್ಲ ಖಾಲಿ ಮಾಡ್ಕೊಳ್ಳೋದ್ರಿಂದ ಅವ್ರಿಗೆ ದೊಡ್ಡ ಅಪಾಯ ಆಗುತ್ತೆ. (ಮತ್ತಾಯ 12:43-45 ಹೋಲಿಸಿ.) ಆದ್ರೆ ಯೆಹೋವ ದೇವ್ರಿಗೆ ನಾವು ಪ್ರಾರ್ಥನೆ ಮಾಡಿದಾಗ ನಮಗೆ ಬೇರೆಲ್ಲೂ ಸಿಗದಷ್ಟು ಹೆಚ್ಚಿನ ಶಾಂತಿ ಕೊಡ್ತಾನೆ. ಕಷ್ಟಗಳು ಬಂದಾಗ ನಾವು ಆತನಿಗೆ ಪ್ರಾರ್ಥನೆ ಮಾಡಿದ್ರೆ ನಮ್ಮ ಭಾರನೆಲ್ಲ ಆತನ ಮೇಲೆ ಹಾಕ್ತಿದೀವಿ ಅಂತ ತೋರಿಸ್ತೀವಿ. ಅದಕ್ಕೇ ಆತನು ನಮಗೆ ‘ಕೊನೆ ಆಗದ ಶಾಂತಿಯನ್ನ’ ಕೊಡ್ತಾನೆ. (ಯೆಶಾಯ 26:3 ಓದಿ.) ನಮಗೆ ಶಾಂತಿ ಕೊಡೋಕಂತ ನಾವು ಬೈಬಲಿಂದ ಇಲ್ಲಿ ತನಕ ಕಲಿತಿರೋ ಕೆಲವೊಂದು ಸಮಾಧಾನ ಕೊಡೋ ಸತ್ಯಗಳನ್ನ ನಮ್ಮ ನೆನಪಿಗೆ ಯೆಹೋವ ತರ್ತಾನೆ. ಈ ಸತ್ಯಗಳು ಆತನು ನಮ್ಮನ್ನ ತುಂಬಾ ಪ್ರೀತಿಸ್ತಾನೆ, ಚೆನ್ನಾಗಿ ನೋಡ್ಕೊಳ್ತಾನೆ ಅಂತ ನೆನಪಿಸುತ್ತೆ. ಹಾಗಾಗಿ ನಮ್ಮ ಮನಸ್ಸು ಮತ್ತು ಹೃದಯ ಶಾಂತಿಯಿಂದ ಇರುತ್ತೆ.—ಕೀರ್ತ. 62:1, 2.
6. ನೀವು ಪ್ರಾರ್ಥನೆಯಲ್ಲಿ ಏನೆಲ್ಲ ಕೇಳಬಹುದು ಮತ್ತು ಹೇಳಬಹುದು? (ಚಿತ್ರ ನೋಡಿ.)
6 ನೀವೇನು ಮಾಡಬಹುದು. ನಿಮಗೆ ಕಷ್ಟ ಪರೀಕ್ಷೆಗಳು ಬಂದಾಗ ‘ನಿಮಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕಿ,’ ‘ಶಾಂತಿ ಕೊಡಿ’ ಅಂತ ಪ್ರಾರ್ಥಿಸಿ. (ಕೀರ್ತ. 55:22) ‘ಈ ಸಮಸ್ಯೆನ ಚೆನ್ನಾಗಿ ನಿಭಾಯಿಸೋಕೆ ಬೇಕಾಗಿರೋ ವಿವೇಕ ಕೊಡಿ’ ಅಂತಾನೂ ಕೇಳ್ಕೊಳ್ಳಿ. (ಜ್ಞಾನೋ. 2:10, 11) ಇದ್ರ ಜೊತೆಗೆ ‘ತಾಳ್ಮೆ ಕೊಡಿ’ ಅಂತ ಆತನ ಹತ್ರ ಅಂಗಲಾಚಿ. ಅದೇ ಸಮಯದಲ್ಲಿ ಆತನಿಗೆ ಧನ್ಯವಾದ ಹೇಳೋಕೆ ಮರೀಬೇಡಿ. ಈ ಕಷ್ಟಗಳ ಮಧ್ಯದಲ್ಲೂ ಯೆಹೋವನು ನಿಮ್ಮ ಕೈಯನ್ನ ಹೇಗೆ ಹಿಡೀತಿದ್ದಾನೆ ಅಂತ ಕಂಡುಹಿಡಿಯಿರಿ. ಆಗ ನೀವು ಆತನಿಗೆ ಥ್ಯಾಂಕ್ಸ್ ಹೇಳ್ತೀರ. ಕಷ್ಟಗಳ ಮೇಲೆನೇ ಕಣ್ಣಿಟ್ಟು ಆತನು ನಿಮ್ಮ ಕೈ ಹಿಡಿದಿರೋದನ್ನ ಮರೆತು ಬಿಡಬೇಡಿ.—ಕೀರ್ತ. 16:5, 6.
ಪ್ರಾರ್ಥನೆ ಮಾಡಿದ್ರೆ ನೀವು ಯೆಹೋವನ ಜೊತೆ ಮಾತಾಡಿದಂತೆ, ಬೈಬಲ್ ಓದಿದ್ರೆ ಆತನು ನಿಮ್ಮ ಜೊತೆ ಮಾತಾಡಿದಂತೆ (ಪ್ಯಾರ 6 ನೋಡಿ)b
ದೇವರ ವಾಕ್ಯವಾದ ಬೈಬಲ್
7. ಬೈಬಲ್‌ನ ಚೆನ್ನಾಗಿ ಓದೋದ್ರಿಂದ ತಾಳ್ಕೊಳ್ಳೋಕೆ ಹೇಗೆ ಬಲ ಸಿಗುತ್ತೆ?
7 ನಾವು ತಾಳ್ಕೊಳ್ಳೋಕೆ ಯೆಹೋವ ದೇವರು ನಮಗೆ ತನ್ನ ವಾಕ್ಯವಾದ ಬೈಬಲನ್ನ ಕೊಟ್ಟಿದ್ದಾನೆ. ಆತನು ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿದ್ದಾನೆ ಅಂತ ಎಷ್ಟೋ ವಚನಗಳು ತೋರಿಸುತ್ತೆ. ಒಂದು ಉದಾಹರಣೆ ನೋಡಿ, ಮತ್ತಾಯ 6:8 “ನೀವು ಕೇಳೋ ಮುಂಚೆನೇ ನಿಮಗೆ ಏನು ಬೇಕಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೊತ್ತು” ಅಂತ ಹೇಳುತ್ತೆ. ಈ ಮಾತನ್ನ ಯಾರು ಹೇಳಿದ್ದು? ಬೇರೆ ಎಲ್ರಿಗಿಂತಲೂ ಯೆಹೋವನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋ ಯೇಸುನೇ ಹೇಳಿದ್ದು. ಆದ್ರಿಂದ ನಿಮಗೆ ಕಷ್ಟ ಬಂದಾಗ ನಿಜವಾಗ್ಲೂ ಯೆಹೋವನು ನಿಮ್ಮ ಬಗ್ಗೆ ಯೋಚನೆ ಮಾಡ್ತಾನಾ, ಸಹಾಯ ಮಾಡ್ತಾನಾ ಅಂತ ಯಾವತ್ತೂ ಡೌಟ್ ಪಡಬೇಡಿ. ಯೆಹೋವನು ಖಂಡಿತ ನಿಮಗೆ ಸಹಾಯ ಮಾಡೋಕೆ ಸಿದ್ಧನಾಗಿದ್ದಾನೆ ಅಂತ ಬೈಬಲಲ್ಲಿರೋ ಎಷ್ಟೋ ವಚನಗಳು ತೋರಿಸುತ್ತೆ. ಅದನ್ನೆಲ್ಲಾ ನೀವು ಓದೋದಾದ್ರೆ ತಾಳ್ಕೊಳ್ಳೋಕೆ ಬೇಕಾಗಿರೋ ಬಲ ಸಿಗುತ್ತೆ.—ಕೀರ್ತ. 94:19.
8. (ಎ) ತಾಳ್ಕೊಳ್ಳೋಕೆ ಸಹಾಯ ಮಾಡೋ ಒಂದು ಬೈಬಲ್ ತತ್ವನ ಹೇಳಿ. (ಬಿ) ಅಗತ್ಯ ಇದ್ದಾಗ ಬೈಬಲ್ ವಚನಗಳು ನೆನಪಿಗೆ ಬರಬೇಕು ಅಂದ್ರೆ ನಾವು ಏನು ಮಾಡಬೇಕು?
8 ತಾಳ್ಕೊಳ್ಳೋಕೆ ಬೈಬಲಿನಲ್ಲಿರೋ ಸಲಹೆಗಳು ಸಹಾಯ ಮಾಡುತ್ತೆ. ಜೀವನದಲ್ಲಿ ಒಳ್ಳೊಳ್ಳೆ ನಿರ್ಧಾರ ಮಾಡೋಕೆ ಬೇಕಾಗಿರೋ ವಿವೇಕನ ಈ ಸಲಹೆಗಳು ಕೊಡುತ್ತೆ. (ಜ್ಞಾನೋ. 2:6, 7) ಉದಾಹರಣೆಗೆ, ನಾಳೆ ಬಗ್ಗೆ ಚಿಂತೆ ಮಾಡೋ ಬದಲು ಪ್ರತಿದಿನ ಸಹಾಯಕ್ಕಾಗಿ ಯೆಹೋವನ ಮೇಲೆ ಆತ್ಕೊಳ್ಳಿ ಅಂತ ಬೈಬಲ್ ನಮ್ಮನ್ನ ಪ್ರೋತ್ಸಾಹಿಸುತ್ತೆ. (ಮತ್ತಾ. 6:34) ನಮಗೆ ಬೈಬಲನ್ನ ಓದಿ ಧ್ಯಾನ ಮಾಡೋ ರೂಢಿ ಇರೋದಾದ್ರೆ, ಕಷ್ಟ ಬಂದಾಗ ನಮಗೆ ಸಹಾಯ ಮಾಡೋ ಬೈಬಲ್ ಸಲಹೆಗಳು, ವಚನಗಳು ತಕ್ಷಣ ನಮ್ಮ ನೆನಪಿಗೆ ಬರುತ್ತೆ. ಇದ್ರಿಂದ ನಾವು ತಾಳ್ಕೊಳ್ಳೋಕೆ ಆಗುತ್ತೆ.
9. ಬೈಬಲಲ್ಲಿರೋ ನಿಜ ಜೀವನ ಕಥೆಗಳನ್ನ ಓದೋದ್ರಿಂದ ನಮಗೇನು ಸಹಾಯ ಆಗುತ್ತೆ?
9 ಯೆಹೋವನ ಮೇಲೆ ನಂಬಿಕೆ ಇಟ್ಟು ಆತನ ಸಹಾಯ ಪಡ್ಕೊಂಡ ಎಷ್ಟೋ ಜನ್ರ ನಿಜ ಜೀವನದ ಅನುಭವಗಳು ಬೈಬಲಲ್ಲಿದೆ. (ಇಬ್ರಿ. 11:32-34; ಯಾಕೋ. 5:17) ಅವರ ಜೀವನ ಕಥೆಗಳನ್ನೆಲ್ಲ ನಾವು ಓದಿ, ಧ್ಯಾನ ಮಾಡೋದಾದ್ರೆ ಯೆಹೋವನ ಮೇಲೆ ನಮಗಿರೋ ನಂಬಿಕೆ ಬೆಟ್ಟದಷ್ಟು ಜಾಸ್ತಿ ಆಗುತ್ತೆ. ಯೆಹೋವನು “ನಮ್ಮ ಆಶ್ರಯ, ನಮ್ಮ ಬಲ, ಕಷ್ಟ ಬಂದಾಗ ಸುಲಭವಾಗಿ ಸಿಗೋ ಸಹಾಯ” ಅಂತ ಮನವರಿಕೆ ಆಗುತ್ತೆ. (ಕೀರ್ತ. 46:1) ಹಿಂದೆ ಯೆಹೋವನ ಆರಾಧಕರು ಹೇಗೆಲ್ಲ ನಿಯತ್ತಾಗಿದ್ರು ಅಂತ ನಾವು ಯೋಚಿಸಬೇಕು. ಆಗ ನಾವೂ ಅವ್ರ ತರಾನೇ ನಿಯತ್ತಾಗಿರೋಕೆ, ತಾಳ್ಕೊಳ್ಳೋಕೆ ಸಹಾಯ ಆಗುತ್ತೆ.—ಯಾಕೋ. 5:10, 11.
10. ಬೈಬಲಿಂದ ನಿಮಗೆ ಪೂರ್ತಿ ಪ್ರಯೋಜನ ಸಿಗಬೇಕಂದ್ರೆ ನೀವೇನು ಮಾಡಬೇಕು?
10 ನೀವೇನು ಮಾಡಬಹುದು. ಪ್ರತಿದಿನ ಬೈಬಲ್ ಓದಿ, ನಿಮಗೆ ಸಹಾಯ ಆಗೋ ವಚನಗಳನ್ನೆಲ್ಲ ಒಂದು ಕಡೆ ಬರೆದಿಡಿ ಅಥವಾ ಮಾರ್ಕ್ ಮಾಡಿ. ತುಂಬ ಜನ, ‘ಪ್ರತಿದಿನ ಬೆಳಿಗ್ಗೆ ದಿನದ ವಚನ ಓದೋದ್ರಿಂದ ತುಂಬ ಪ್ರೋತ್ಸಾಹ ಸಿಕ್ಕಿದೆ’ ಅಂತ ಹೇಳಿದ್ದಾರೆ. ಸಹೋದರಿ ಮೇರಿa ಅವ್ರ ತಂದೆ-ತಾಯಿ ಇಬ್ರಿಗೂ ಕ್ಯಾನ್ಸರ್ ಬಂತು. ಅವರಿಬ್ರೂ ಇನ್ನೇನು ತೀರಿ ಹೋಗೋ ಪರಿಸ್ಥಿತಿಯಲ್ಲಿದ್ರು. ಈ ಕಷ್ಟದ ಪರಿಸ್ಥಿತಿಯನ್ನ ನಿಭಾಯಿಸೋಕೆ ಸಹೋದರಿ ಮೇರಿಗೆ ದಿನದ ವಚನ ಸಹಾಯ ಮಾಡ್ತು. ಹೇಗೆ? ಅವರು ಹೀಗೆ ಹೇಳ್ತಾರೆ: “ಪ್ರತಿದಿನ ಬೆಳಿಗ್ಗೆ ನಾನು ದಿನದ ವಚನ ಓದಿ ಅದರ ಬಗ್ಗೆ ಧ್ಯಾನ ಮಾಡ್ತಿದ್ದೆ. ಇದ್ರಿಂದ ನನಗಿರೋ ಸಮಸ್ಯೆಗಳ ಬಗ್ಗೆನೇ ಯೋಚನೆ ಮಾಡಿ ಚಿಂತೆಯಲ್ಲಿ ಮುಳುಗೋ ಬದಲು ಯೆಹೋವ ದೇವರ ಬಗ್ಗೆ, ಬೈಬಲಲ್ಲಿ ಹೇಳಿರೋ ಒಳ್ಳೊಳ್ಳೆ ವಿಷ್ಯಗಳ ಬಗ್ಗೆ ಯೋಚನೆ ಮಾಡಿ ಸಮಾಧಾನವಾಗಿರೋಕೆ ನನಗೆ ಸಹಾಯ ಆಯ್ತು.”—ಕೀರ್ತ. 61:2.
ಕ್ರೈಸ್ತ ಕುಟುಂಬ
11. ನಮ್ಮ ತರಾನೇ ಇರೋ ಕಷ್ಟಗಳನ್ನ ನಮ್ಮ ಸಹೋದರರು ಚೆನ್ನಾಗಿ ತಾಳ್ಕೊಳ್ತಿದ್ದಾರೆ ಅಂತ ತಿಳ್ಕೊಂಡಾಗ ನಮಗೆ ಹೇಗನಿಸುತ್ತೆ?
11 ನಾವು ತಾಳ್ಕೊಳ್ಳೋಕೆ ಬೇಕಾಗಿರೋ ಸಹಾಯ ಪಡ್ಕೊಳೋಕೆ ಅಂತಾನೇ ಯೆಹೋವ ದೇವರು ನಮಗೆ ಕ್ರೈಸ್ತ ಕುಟುಂಬ ಕೊಟ್ಟಿದ್ದಾನೆ. “ಲೋಕದ ಎಲ್ಲಾ ಕಡೆ ಇರೋ ನಿಮ್ಮ ಸಹೋದರರು ಇಂಥ ಕಷ್ಟಗಳನ್ನೇ ಅನುಭವಿಸ್ತಿದ್ದಾರೆ” ಅಂತ ಬೈಬಲ್ ಹೇಳುತ್ತೆ. (1 ಪೇತ್ರ 5:9) ಇದರ ಅರ್ಥ ಏನಂದ್ರೆ, ಕಷ್ಟಗಳನ್ನ ಪಡ್ತಿರೋದು ನಾವು ಒಬ್ರೇ ಅಲ್ಲ. ನಮ್ಮ ತರಾನೇ ನಮ್ಮ ಸಹೋದರರು ಕೂಡ ಕಷ್ಟಗಳನ್ನ ಎದುರಿಸ್ತಿದ್ದಾರೆ. ಇದ್ರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದ್ರೆ ನಮಗೆ ಅದೆಂಥದ್ದೇ ಕಷ್ಟ ಬರಲಿ, ಆ ಕಷ್ಟನ ನಮ್ಮ ಸಹೋದರರು ಕೂಡ ಎದುರಿಸ್ತಿದ್ದಾರೆ ಅಂತ ಅರ್ಥ ಮಾಡ್ಕೊಳ್ತೀವಿ. ಆ ಕಷ್ಟಗಳ ಮಧ್ಯನೂ ಅವರು ನಿಯತ್ತಾಗಿದ್ದಾರೆ, ತಾಳ್ಕೊಂಡಿದ್ದಾರೆ ಅಂತ ತಿಳ್ಕೊಳ್ತೀವಿ. ಇದು ನಾವೂ ತಾಳ್ಕೊಳ್ಳೋಕೆ ಬೇಕಿರೋ ಶಕ್ತಿ ಕೊಡುತ್ತೆ.—ಅ. ಕಾ. 14:22.
12. (ಎ) ನಮ್ಮ ಸಹೋದರರು ನಮಗೆ ಹೇಗೆ ಸಹಾಯ ಮಾಡ್ತಾರೆ? (ಬಿ) ನಾವು ಅವ್ರಿಗೆ ಹೇಗೆ ಸಹಾಯ ಮಾಡಬಹುದು? (2 ಕೊರಿಂಥ 1:3, 4)
12 ನಾವು ತಾಳ್ಕೊಳ್ಳೋಕೆ ಸಹೋದರರು ಪ್ರೋತ್ಸಾಹ ಕೊಡ್ತಾರೆ. ಅಪೊಸ್ತಲ ಪೌಲನಿಗೂ ಪ್ರೋತ್ಸಾಹ ಕೊಟ್ರು. ಅಪೊಸ್ತಲ ಪೌಲ ಗೃಹಬಂಧನದಲ್ಲಿದ್ದಾಗ ಸಹೋದರ ಸಹೋದರಿಯರು ಅವನಿಗೆ ಸಹಾಯ ಮಾಡಿದ್ರು. ಅದಕ್ಕೆ ಅವನು ಅವ್ರಲ್ಲಿ ಪ್ರತಿಯೊಬ್ರ ಹೆಸರು ಹೇಳಿ ಅವ್ರಿಗೆ ಥ್ಯಾಂಕ್ಸ್ ಹೇಳಿದ. ಅವರು ಅವನಿಗೆ ಪ್ರೋತ್ಸಾಹ, ಸಾಂತ್ವನ ಮತ್ತು ಬೇಕಾಗಿರೋ ಸಹಾಯ ಕೊಟ್ರು. (ಫಿಲಿ. 2:25, 29, 30; ಕೊಲೊ. 4:10, 11) ಇವತ್ತು ಕೂಡ ನಮಗೆ ಸಹಾಯ ಬೇಕಿದ್ದಾಗ ನಮ್ಮ ಸಹೋದರರು ಬಂದು ಬೇಕಾಗಿರೋ ಪ್ರೋತ್ಸಾಹ ಕೊಡ್ತಾರೆ. ಅವ್ರಿಗೆ ಕಷ್ಟ ಬಂದಾಗ ನಾವು ಹೋಗಿ ಪ್ರೋತ್ಸಾಹ ಮತ್ತು ಸಹಾಯ ಮಾಡ್ತೀವಿ.—2 ಕೊರಿಂಥ 1:3, 4 ಓದಿ.
13. ತಾಳ್ಕೊಳ್ಳೋಕೆ ಸಹೋದರಿ ಮಾಯಾಗೆ ಯಾವುದು ಸಹಾಯ ಮಾಡ್ತು?
13 2020ರಲ್ಲಿ ರಷ್ಯಾದಲ್ಲಿರೋ ಸಹೋದರಿ ಮಾಯಾ ಅವರ ಮನೆಗೆ ಪೊಲೀಸರು ಬಂದು ಪೂರ್ತಿ ಚೆಕ್ ಮಾಡಿದ್ರು. ಇವರು ಬೇರೆಯವ್ರ ಹತ್ರ ಬೈಬಲ್ ಬಗ್ಗೆ ಮಾತಾಡ್ತಾರೆ ಅಂತ ಇವ್ರ ಮೇಲೆ ಕೇಸ್ ಕೂಡ ಹಾಕಿದ್ರು. ಆಗ ಆ ಸಹೋದರಿಗೆ ಹೇಗನಿಸ್ತು ಗೊತ್ತಾ? “ನನಗೆ ತುಂಬಾ ಭಯ, ಚಿಂತೆ ಆಯ್ತು, ನೋವಲ್ಲೇ ಮುಳುಗೋದೆ. ಆದ್ರೆ ನಮ್ಮ ಸಹೋದರ ಸಹೋದರಿಯರು ನನಗೆ ಆಗಾಗ ಫೋನ್ ಮಾಡ್ತಿದ್ರು, ಮೆಸೇಜ್ ಕಳಿಸ್ತಿದ್ರು, ಪತ್ರ ಬರಿತಿದ್ರು. ಇದನ್ನೆಲ್ಲಾ ನೋಡ್ದಾಗ ನನಗೆ ಪ್ರೀತಿ ತೋರಿಸೋ ಎಷ್ಟು ದೊಡ್ಡ ಕುಟುಂಬ ಇದೆ ಅಂತ ಅರ್ಥ ಆಯ್ತು. ನಮ್ಮ ಸಹೋದರರು ನನ್ನನ್ನ ತುಂಬ ಪ್ರೀತಿಸ್ತಾರೆ ಅಂತ ನನಗೀಗ ಇನ್ನು ಚೆನ್ನಾಗಿ ಅರ್ಥ ಆಗಿದೆ.”
14. ನಮ್ಮ ಸಹೋದರ ಸಹೋದರಿಯರು ಸಹಾಯ ಮಾಡಬೇಕಂದ್ರೆ ನಾವೇನು ಮಾಡಬೇಕು? (ಚಿತ್ರ ನೋಡಿ.)
14 ನೀವೇನು ಮಾಡಬಹುದು. ನೀವು ಒಂದು ಕಷ್ಟನ ತಾಳ್ಕೊಳ್ಳುವಾಗ ನಮ್ಮ ಸಹೋದರರ ಜೊತೆ ಮಾತಾಡೋದು, ಸಮಯ ಕಳೆಯೋದು ತುಂಬ ಮುಖ್ಯ ಅಂತ ನೆನಪಿಡಿ. ಒಂದುವೇಳೆ ನಿಮಗೆ ಏನಾದ್ರು ಸಹಾಯ ಬೇಕಿದ್ರೆ ಹಿರಿಯರ ಹತ್ರ ಕೇಳೋಕೆ ಹಿಂದೆ ಮುಂದೆ ನೋಡಬೇಡಿ. ಯಾಕಂದ್ರೆ ಅವರು ‘ಬಿರುಗಾಳಿಯಿಂದ ಮರೆಮಾಡೋ ಆಸರೆ ತರ, ಭಾರಿ ಮಳೆಯಾಗುವಾಗ ಸಿಗೋ ಆಶ್ರಯದ ತರ ಇರ್ತಾರೆ.’ (ಯೆಶಾ. 32:2) ಅದೇ ಸಮಯದಲ್ಲಿ, ನಮ್ಮ ಸಹೋದರ ಸಹೋದರಿಯರಿಗೂ ಕಷ್ಟಗಳಿವೆ, ಅವರು ಅವನ್ನ ತಾಳ್ಕೊಳ್ತಿದ್ದಾರೆ ಅನ್ನೋದನ್ನ ನೆನಪಲ್ಲಿಡಿ. ನಿಮ್ಮ ಕೈಯಲ್ಲಿ ಏನಾದ್ರೂ ಚಿಕ್ಕ ಪುಟ್ಟ ಸಹಾಯ ಮಾಡೋಕಾದ್ರೆ ಅದನ್ನ ಮಾಡಿ. ಆಗ ನಿಮಗೂ ಖುಷಿ ಆಗುತ್ತೆ, ನಿಮ್ಮ ಕಷ್ಟನ ತಾಳ್ಕೊಳ್ಳೋಕೆ ಬೇಕಾಗಿರೋ ಬಲನೂ ಸಿಗುತ್ತೆ.—ಅ. ಕಾ. 20:35.
ಸಹೋದರ ಸಹೋದರಿಯರ ಜೊತೆ ಟೈಮ್ ಕಳೆಯಿರಿ (ಪ್ಯಾರ 14 ನೋಡಿ)c
ನಿರೀಕ್ಷೆ
15. (ಎ) ನಿರೀಕ್ಷೆ ಯೇಸುಗೆ ಹೇಗೆ ಸಹಾಯ ಮಾಡ್ತು? (ಬಿ) ನಮಗೆ ಹೇಗೆ ಸಹಾಯ ಮಾಡುತ್ತೆ? (ಇಬ್ರಿಯ 12:2)
15 ನಾವು ತಾಳ್ಕೊಳ್ಳೋಕೆ ಸಹಾಯ ಮಾಡ್ಬೇಕು ಅಂತಾನೇ ಯೆಹೋವ ದೇವರು ನಮಗೆ ನಿರೀಕ್ಷೆ ಕೊಟ್ಟಿದ್ದಾನೆ. (ರೋಮ. 15:13) ನಿರೀಕ್ಷೆ ಯೇಸುಗೂ ಸಹಾಯ ಮಾಡ್ತು. ತಾನು ಸಾಯೋ ದಿನ ಯೇಸು ತನ್ನ ನಿರೀಕ್ಷೆ ಬಗ್ಗೆ ಯೋಚಿಸಿದ್ರಿಂದ ನಿಯತ್ತಾಗಿರೋಕೆ ಬಲ ಸಿಕ್ತು. (ಇಬ್ರಿಯ 12:2 ಓದಿ.) ‘ನಾನು ನಿಯತ್ತಾಗಿರೋದಾದ್ರೆ ಯೆಹೋವನ ಬಗ್ಗೆ ಸೈತಾನ ಹೇಳಿದ್ದೆಲ್ಲ ಸುಳ್ಳು’ ಅಂತ ಸಾಬೀತು ಮಾಡ್ಬಹುದು ಅಂತ ಯೇಸು ಅರ್ಥ ಮಾಡ್ಕೊಂಡನು. ಅಷ್ಟೇ ಅಲ್ಲ, ನಾನು ಸ್ವರ್ಗಕ್ಕೆ ವಾಪಸ್ ಹೋಗಿ ತಂದೆ ಜೊತೆ ಇರ್ಬಹುದು, ಅಭಿಷಿಕ್ತರ ಜೊತೆ ಕೈ ಜೋಡಿಸಿ ರಾಜನಾಗಿ ಆಳ್ವಿಕೆ ಮಾಡಬಹುದು ಅಂತ ಯೋಚಿಸಿದನು. ಅದಕ್ಕೇ ಕೊನೆವರೆಗೂ ನಿಯತ್ತಾಗಿದ್ದನು. ನಾವು ಕೂಡ ಹೊಸ ಲೋಕದಲ್ಲಿ ನಮಗೆ ಸಿಗೋ ಶಾಶ್ವತ ಜೀವನದ ನಿರೀಕ್ಷೆ ಬಗ್ಗೆ ಯೋಚಿಸ್ತಾ ಇರಬೇಕು. ಆಗ ಈ ಸೈತಾನನ ಲೋಕದಲ್ಲಿ ನಮಗೆ ಎಂಥದ್ದೇ ಕಷ್ಟ ಬಂದ್ರೂ ಅದನ್ನ ಧೈರ್ಯವಾಗಿ ತಾಳ್ಕೊಳ್ಳೋಕೆ ಬೇಕಾಗಿರೋ ಸಹಾಯ ಸಿಗುತ್ತೆ.
16. (ಎ) ಸಹೋದರಿ ಆ್ಯನಾಗೆ ತಾಳ್ಕೊಳ್ಳೋಕೆ ನಿರೀಕ್ಷೆ ಹೇಗೆ ಸಹಾಯ ಮಾಡ್ತು? (ಬಿ) ಆಕೆ ಹೇಳಿದ ಮಾತಿಂದ ನೀವೇನು ಕಲಿತ್ರಿ?
16 ರಷ್ಯಾದಲ್ಲಿರೋ ಆ್ಯನಾ ಅನ್ನೋ ಸಹೋದರಿಗೆ ದೇವರ ಆಳ್ವಿಕೆಯ ನಿರೀಕ್ಷೆ ಹೇಗೆ ಸಹಾಯ ಮಾಡ್ತು ಅಂತ ನೋಡಿ. ಸಹೋದರಿಯ ಗಂಡನನ್ನ ಅರೆಸ್ಟ್ ಮಾಡಿ ಜೈಲಲ್ಲಿ ಹಾಕಿದ್ರು. “ನಾನು ನಮಗಿರೋ ನಿರೀಕ್ಷೆ ಬಗ್ಗೆ ಪ್ರಾರ್ಥಿಸ್ತಿದ್ದೆ, ಧ್ಯಾನಿಸ್ತಿದ್ದೆ. ಇದೆಲ್ಲ ಮಾಡಿದ್ರಿಂದ ನಾನು ಕುಗ್ಗಿ ಹೋಗದೆ ಇರೋಕೆ ಸಾಧ್ಯ ಆಯ್ತು. ನಮಗಿರೋ ಕಷ್ಟಗಳೇ ಕೊನೆಯಲ್ಲ. ಈ ಕಷ್ಟಗಳ ನಂತರ ನಮಗೆ ಯೆಹೋವ ದೇವರು ಕೊಡೋ ಆಶೀರ್ವಾದ ಸಿಗುತ್ತೆ ಅಂತ ಅರ್ಥ ಮಾಡ್ಕೊಂಡೆ. ತುಂಬ ಬೇಗ ಯೆಹೋವ, ಶತ್ರುಗಳ ವಿರುದ್ಧ ಜಯ ಸಾಧಿಸ್ತಾನೆ, ನಮ್ಮನ್ನ ಆಶೀರ್ವದಿಸ್ತಾನೆ” ಅಂತ ಸಹೋದರಿ ಆ್ಯನಾ ಹೇಳ್ತಾರೆ.
17. ಯೆಹೋವನು ಕೊಟ್ಟ ನಿರೀಕ್ಷೆಗೆ ನಾವು ಋಣಿಯಾಗಿದ್ದೀವಿ ಅಂತ ಹೇಗೆ ತೋರಿಸಬಹುದು? (ಚಿತ್ರ ನೋಡಿ.)
17 ನೀವೇನು ಮಾಡಬಹುದು. ದೇವರ ಆಳ್ವಿಕೆಯಲ್ಲಿ ಜೀವನ ಹೇಗಿರುತ್ತೆ ಅನ್ನೋದರ ಬಗ್ಗೆ ಯೋಚನೆ ಮಾಡೋಕೆ ಸ್ವಲ್ಪ ಟೈಮ್ ತಗೊಳ್ಳಿ. ದೇವರ ಹೊಸ ಲೋಕದಲ್ಲಿ ನಿಮ್ಮ ಜೀವನ ಹೇಗಿರುತ್ತೆ, ಅಲ್ಲಿ ನಿಮಗೆ ಯಾವೆಲ್ಲ ಆಶೀರ್ವಾದ ಸಿಗುತ್ತೆ ಅಂತ ಸ್ವಲ್ಪ ಊಹಿಸ್ಕೊಳ್ಳಿ. ನೀವು ಇದನ್ನ ಮಾಡಿದ್ರೆ ನಿಮಗೆ ಈಗಿರೋ “ಕಷ್ಟಗಳು ಸ್ವಲ್ಪ ಕಾಲಕ್ಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು” ಅಂತ ನಿಮಗೆ ಅನ್ಸುತ್ತೆ. (2 ಕೊರಿಂ. 4:17) ಇದ್ರ ಜೊತೆಗೆ, ನಿಮ್ಮ ಕೈಯಲ್ಲಾದಷ್ಟು ಮಟ್ಟಿಗೆ ಬೇರೆಯವ್ರಿಗೆ ದೇವರ ಆಳ್ವಿಕೆ ಬಗ್ಗೆ ಹೇಳಿ. ಯಾಕಂದ್ರೆ ಅವರು ಕಣ್ಣೀರಲ್ಲೇ ಕೈ ತೊಳೆಯೋ ಪರಿಸ್ಥಿತಿಯಲ್ಲಿದ್ದಾರೆ. ದೇವರು ಆ ಕಷ್ಟಗಳನ್ನೆಲ್ಲ ತೆಗೆಯೋಕೆ ಏನು ಮಾಡ್ತಾನೆ ಅಂತ ಅವ್ರಿಗೆ ಕಿಂಚಿತ್ತೂ ಗೊತ್ತಿಲ್ಲ. ಆದ್ರೆ ನೀವು ಅವ್ರ ಹತ್ರ ದೇವರ ಆಳ್ವಿಕೆಯ ಬಗ್ಗೆ ಸ್ವಲ್ಪ ಮಾತಾಡಿದ್ರೂ ಅವ್ರಿಗೆ ನಿರೀಕ್ಷೆ ಮೂಡುತ್ತೆ.
ಯೆಹೋವ ತರೋ ಹೊಸ ಲೋಕದ ಬಗ್ಗೆ ಯೋಚ್ನೆ ಮಾಡೋಕೆ ನೀವು ಟೈಮ್ ಮಾಡ್ಕೊಳ್ಳಿ (ಪ್ಯಾರ 17 ನೋಡಿ)d
18. ಯೆಹೋವನು ಕೊಟ್ಟಿರೋ ಮಾತಿನಲ್ಲಿ ನಾವು ಯಾಕೆ ನಂಬಿಕೆ ಇಡಬಹುದು?
18 ಯೋಬ ತನಗೆ ಬಂದ ಕಷ್ಟಗಳನ್ನೆಲ್ಲ ಚೆನ್ನಾಗಿ ತಾಳ್ಕೊಂಡ ಮೇಲೆ ಯೆಹೋವ ದೇವರ ಬಗ್ಗೆ ಏನು ಹೇಳಿದ ಗೊತ್ತಾ? “ನಿನ್ನಿಂದ ಮಾಡಕ್ಕಾಗದೇ ಇರೋದು ಯಾವುದೂ ಇಲ್ಲ, ನೀನು ಅಂದ್ಕೊಂಡಿದ್ದನ್ನ ಮಾಡ್ತೀಯ ಅಂತ ನನಗೀಗ ಗೊತ್ತಾಯ್ತು” ಅಂತ ಹೇಳಿದ. (ಯೋಬ 42:2) ಯೆಹೋವನು ಅಂದ್ಕೊಂಡಿದ್ದನ್ನ ಯಾರೂ ತಡೆಯೋಕೆ ಆಗಲ್ಲ ಅಂತ ಅರ್ಥ ಮಾಡ್ಕೊಂಡ. ಇದನ್ನ ನಾವೂ ಅರ್ಥ ಮಾಡ್ಕೊಂಡ್ರೆ ತಾಳ್ಕೊಳ್ಳೋಕೆ ಬೇಕಾಗಿರೋ ಬಲ ನಮಗೆ ಸಿಗುತ್ತೆ. ಉದಾಹರಣೆಗೆ ನೋಡಿ, ಒಬ್ಬ ಸ್ತ್ರೀಗೆ ಒಂದು ಕಾಯಿಲೆ ಇದೆ ಅಂತ ಅಂದ್ಕೊಳ್ಳಿ. ಎಷ್ಟೊಂದು ಡಾಕ್ಟರ್ಸ್ ಆಕೆಯನ್ನ ನೋಡಿದ್ದಾರೆ. ಆದ್ರೆ ಯಾರಿಗೂ ಆಕೆಗೆ ಸರಿಯಾಗಿರೋ ಚಿಕಿತ್ಸೆ ಕೊಡೋಕೆ ಆಗಿಲ್ಲ. ಆದ್ರೆ ಆಮೇಲೆ ಒಬ್ಬ ಅನುಭವ ಇರೋ ಒಳ್ಳೆ ಡಾಕ್ಟರ್ ಬಂದು ಆಕೆಗೆ ಏನು ಕಾಯಿಲೆ ಇದೆ ಅಂತ ಚೆನ್ನಾಗಿ ಅರ್ಥ ಮಾಡ್ಕೊಂಡು ಅದನ್ನ ವಿವರಿಸಿ ಹೇಳ್ತಾನೆ. ಆಕೆ ಹುಷಾರಾಗೋಕೆ ಏನು ಮಾಡಬೇಕು ಅಂತ ಹೇಳ್ತಾನೆ. ಈಗ ಅವಳಿಗೆ ಹೇಗೆ ಅನ್ಸುತ್ತೆ? ಸ್ವಲ್ಪ ಖುಷಿ ಸಿಗುತ್ತೆ. ಇನ್ನು ಆಕೆಗೆ ಇರೋ ಕಾಯಿಲೆ ಹೋಗಿಲ್ಲ. ಆದ್ರೂ ಡಾಕ್ಟರ್ ಕೊಡೋ ಚಿಕಿತ್ಸೆಯಿಂದ ಮುಂದೆ ಆ ಕಾಯಿಲೆ ಹೋಗುತ್ತೆ ಅಂತ ಗೊತ್ತಾಗಿದ್ರಿಂದ ಈಗ ಅವಳು ಖುಷಿಯಾಗಿ ಇರೋಕಾಗುತ್ತೆ. ಅದೇ ತರಾನೇ ದೇವರ ಆಳ್ವಿಕೆಯಲ್ಲಿ ಏನೆಲ್ಲಾ ಆಗುತ್ತೆ ಅನ್ನೋದ್ರ ಬಗ್ಗೆ ನಾವು ಯೋಚನೆ ಮಾಡೋದಾದ್ರೆ, ಈಗಿರೋ ಕಷ್ಟವನ್ನ ನಾವು ಧೈರ್ಯವಾಗಿ ತಾಳ್ಕೊಳ್ಳೋಕೆ ಸಹಾಯ ಆಗುತ್ತೆ.
19. ನಾವು ತಾಳ್ಕೊಬೇಕಾದ್ರೆ ಏನು ಮಾಡಬೇಕು ಅಂತ ಕಲಿತ್ವಿ?
19 ನಾವು ತಾಳ್ಕೊಳ್ಳೋಕೆ ಸಹಾಯ ಮಾಡಬೇಕಂತಾನೇ ಯೆಹೋವನು ನಮಗೆ ಪ್ರಾರ್ಥನೆ ಅನ್ನೋ ಅದ್ಭುತ ವರವನ್ನ, ತನ್ನ ವಾಕ್ಯವಾದ ಬೈಬಲನ್ನ, ಕ್ರೈಸ್ತ ಕುಟುಂಬ ಮತ್ತು ನಿರೀಕ್ಷೆನ ಕೊಟ್ಟಿದ್ದಾನೆ. ನಾವು ಈ ಲೇಖನದಲ್ಲಿ ಕಲಿತಂತೆ ಈ ಎಲ್ಲ ವಿಷ್ಯಗಳನ್ನ ಚೆನ್ನಾಗಿ ಬಳಸಬೇಕು. ಆಗ ನಮಗೆ ಅದೆಂಥದ್ದೇ ಕಷ್ಟ ಬಂದ್ರೂ ಯೆಹೋವನು ನಮಗೆ ಸಹಾಯ ಮಾಡ್ತಾನೆ. ಈ ಸೈತಾನನ ಲೋಕ ಮತ್ತು ಈ ಕಷ್ಟಗಳೆಲ್ಲ ಕಣ್ಮರೆ ಆಗೋ ತನಕ ನಾವು ತಾಳ್ಮೆಯಿಂದ ಮುಂದೆ ಹೋಗೋಕೆ ಬಲ ಕೊಡ್ತಾನೆ.—ಫಿಲಿ. 4:13.
ಗೀತೆ 122 ಸ್ಥಿರವಾಗಿ ನಿಲ್ಲೋಣ
a ಈ ಲೇಖನದಲ್ಲಿ ಕೆಲವ್ರ ಹೆಸ್ರು ಬದಲಾಗಿದೆ.
b ಚಿತ್ರ ವಿವರಣೆ: ವಯಸ್ಸಾದ ಸಹೋದರ ವರ್ಷಗಳಿಂದ ತಾಳ್ಮೆ ತೋರಿಸ್ತಾ ನಿಯತ್ತಾಗಿ ಸೇವೆ ಮಾಡ್ತಿದ್ದಾರೆ.
c ಚಿತ್ರ ವಿವರಣೆ: ವಯಸ್ಸಾದ ಸಹೋದರ ವರ್ಷಗಳಿಂದ ತಾಳ್ಮೆ ತೋರಿಸ್ತಾ ನಿಯತ್ತಾಗಿ ಸೇವೆ ಮಾಡ್ತಿದ್ದಾರೆ.
d ಚಿತ್ರ ವಿವರಣೆ: ವಯಸ್ಸಾದ ಸಹೋದರ ವರ್ಷಗಳಿಂದ ತಾಳ್ಮೆ ತೋರಿಸ್ತಾ ನಿಯತ್ತಾಗಿ ಸೇವೆ ಮಾಡ್ತಿದ್ದಾರೆ.