ಬುಧವಾರ, ಜುಲೈ 16
ವಿವೇಕಿಗಳ ಆಲೋಚನೆಗಳು ವ್ಯರ್ಥ ಅಂತ ಯೆಹೋವನಿಗೆ ಗೊತ್ತು.—1 ಕೊರಿಂ. 3:20.
ನಾವು ಲೋಕದ ಜನ್ರ ತರ ಯೋಚ್ನೆ ಮಾಡಿದ್ರೆ ಯೆಹೋವ ದೇವರನ್ನ ಬಿಟ್ಟುಹೋಗಿಬಿಡ್ತೀವಿ. ಆತನ ನೀತಿನಿಯಮಗಳಿಗೆ ಒಂಚೂರೂ ಬೆಲೆ ಕೊಡಲ್ಲ. (1 ಕೊರಿಂ. 3:19.) “ಲೋಕದ ವಿವೇಕ” ಬೈಬಲ್ ಯಾವುದನ್ನ ತಪ್ಪು ಅಂತ ಹೇಳುತ್ತೋ ಅದು ತಪ್ಪಲ್ಲ ಅಂತ ಯೋಚ್ನೆ ಮಾಡೋ ತರ ಮಾಡಿಬಿಡುತ್ತೆ. ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರಿಗೂ ಇದೇ ತರ ಆಯ್ತು. ಪೆರ್ಗಮ ಮತ್ತು ಥುವತೈರ ಸಭೆಯಲ್ಲಿದ್ದ ಕ್ರೈಸ್ತರು ಮೂರ್ತಿಪೂಜೆ, ಲೈಂಗಿಕ ಅನೈತಿಕತೆ ಮಾಡ್ತಿದ್ರು. ಇದು ಆ ಊರಲ್ಲಿ ತುಂಬ ಸಾಮಾನ್ಯವಾಗಿತ್ತು. ಆದ್ರೆ ಆ ತಪ್ಪುಗಳನ್ನ ಮಾಡ್ತಿದ್ದ ಕ್ರೈಸ್ತರನ್ನ ಆ ಸಭೆಯವರು ಸಹಿಸ್ಕೊಂಡು ಸುಮ್ನೆ ಇದ್ರು. ಅದಕ್ಕೆ ಯೇಸು ಆ ಎರಡೂ ಸಭೆಗಳನ್ನ ಖಂಡಿಸಿದನು. (ಪ್ರಕ. 2:14, 20) ಇವತ್ತು ನಮಗೂ ಲೋಕದ ಜನ್ರ ತರ ಯೋಚ್ನೆ ಮಾಡೋಕೆ ಒತ್ತಡ ಬರುತ್ತೆ. ಉದಾಹರಣೆಗೆ, ‘ನಮಗಿಷ್ಟ ಬಂದ ಹಾಗೆ ಜೀವನ ಮಾಡಬಹುದು, ಬೈಬಲಲ್ಲಿರೋ ನೈತಿಕ ನಿಯಮಗಳೆಲ್ಲ ಈ ಕಾಲಕ್ಕೆ ಸರಿಹೋಗಲ್ಲ’ ಅಂತ ನಮ್ಮ ಕುಟುಂಬದವರು ಅಥವಾ ಪರಿಚಯ ಇರೋರು ನಮಗೆ ಹೇಳಬಹುದು. ‘ಅವರು ಹೇಳ್ತಿರೋದೆಲ್ಲ ಸರಿ,’ ‘ಬೈಬಲಲ್ಲಿ ಇರೋದನ್ನ ಪಾಲಿಸಿಲ್ಲಾಂದ್ರೆ ಏನೂ ತೊಂದ್ರೆ ಆಗಲ್ಲ’ ಅಂತ ಅನಿಸೋ ಹಾಗೆ ಅವರು ಮಾಡಿಬಿಡಬಹುದು. ಕೆಲವ್ರಿಗೆ ‘ಯೆಹೋವ ಕೊಟ್ಟಿರೋ ನಿರ್ದೇಶನ ಅರ್ಧಂಬರ್ಧ ಇದೆ, ಇನ್ನೂ ಸ್ವಲ್ಪ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ರೆ ಚೆನ್ನಾಗಿ ಇರ್ತಿತ್ತು’ ಅಂತ ಅನಿಸಬಹುದು. ಆಗ ‘ಬೈಬಲಲ್ಲಿ ಬರೆದಿರೋ ವಿಷ್ಯಗಳನ್ನ ಅವರು ಮೀರಿ ಹೋಗಿಬಿಡಬಹುದು.’—1 ಕೊರಿಂ. 4:6. w23.07 16 ¶10-11
ಗುರುವಾರ, ಜುಲೈ 17
ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.—ಜ್ಞಾನೋ. 17:17.
ಯೇಸುವಿನ ತಾಯಿ, ಮರಿಯಳಿಗೆ ಬಲ ಬೇಕಿತ್ತು. ಅವಳಿಗಿನ್ನೂ ಮದುವೆನೇ ಆಗಿರ್ಲಿಲ್ಲ, ಆದ್ರು ಅವಳು ಗರ್ಭಿಣಿ ಆಗ್ತಾಳೆ ಅಂತ ಸುದ್ದಿ ಸಿಕ್ಕಿದ್ದಾಗ ಅವಳಿಗೆ ಎಷ್ಟು ಗಾಬರಿಯಾಗಿರಬೇಕು ಅಲ್ವಾ? ಇದುವರೆಗೂ ಅವಳು ಯಾವ ಮಕ್ಕಳನ್ನೂ ಬೆಳೆಸಿರಲಿಲ್ಲ. ಅದ್ರಲ್ಲೂ ಮೆಸ್ಸೀಯನನ್ನ ಅವಳು ಬೆಳೆಸಬೇಕಾಗಿತ್ತು. ಅವಳಿಗೆ ಇನ್ನೂ ಮದುವೆ ಆಗದೆ ಇದ್ದಿದ್ರಿಂದ ‘ನಾನು ಗರ್ಭಿಣಿ’ ಅಂತ ಯೋಸೇಫನಿಗೆ ಹೇಳೋಕೆ ಎಷ್ಟು ಕಷ್ಟ ಆಗಿರಬೇಕು ಅಂತ ಅವಳ ಜಾಗದಲ್ಲಿ ನಿಂತು ಯೋಚಿಸಿ. ಈಗ ಮರಿಯಗೆ ಖಂಡಿತ ಯಾರದ್ದಾದ್ರೂ ಸಹಾಯ ಬೇಕಾಗಿರುತ್ತೆ ಅಲ್ವಾ? (ಲೂಕ 1:26-33) ಮರಿಯಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅದನ್ನ ಮಾಡಿ ಮುಗಿಸೋಕೆ ಅವಳಿಗೆ ಬೇರೆಯವ್ರ ಸಹಾಯ ಬೇಕೇ ಬೇಕಿತ್ತು. ಅದನ್ನ ಅವಳು ಪಡ್ಕೊಂಡಳು. ಅದಕ್ಕೆ ಅವಳು ಗಬ್ರಿಯೇಲನ ಹತ್ರ ಜಾಸ್ತಿ ವಿಷ್ಯ ಕೇಳಿ ತಿಳ್ಕೊಂಡಳು. (ಲೂಕ 1:34) ಅಷ್ಟೇ ಅಲ್ಲ, ಅವಳು ತನ್ನ ಸಂಬಂಧಿಕಳಾದ ಎಲಿಸಬೆತ್‌ನ ನೋಡೋಕೆ “ಬೆಟ್ಟಗುಡ್ಡಗಳ ಪ್ರದೇಶವಾಗಿದ್ದ” ಯೆಹೂದದ ಒಂದು ಪಟ್ಟಣಕ್ಕೆ ಹೋದಳು. ಎಲಿಸಬೆತ್ ಮರಿಯಳನ್ನ ನೋಡಿದ ತಕ್ಷಣ ಖುಷಿಪಟ್ಟಳು, ಅವಳನ್ನ ಹೊಗಳಿದಳು. ಅಷ್ಟೇ ಅಲ್ಲ, ಮರಿಯಳ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಒಂದು ಭವಿಷ್ಯವಾಣಿ ಹೇಳೋ ತರ ಯೆಹೋವ ಅವಳನ್ನ ಪ್ರೇರಿಸಿದನು. (ಲೂಕ 1:39-45) ಇದನ್ನೆಲ್ಲ ಕೇಳಿದಾಗ ಮರಿಯಾಗೆ ಪ್ರೋತ್ಸಾಹ ಸಿಕ್ತಾ? ಹೌದು. “ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ” ಅಂತ ಅವಳು ಹೇಳಿದಳು. (ಲೂಕ 1:46-51) ಹೀಗೆ ಗಬ್ರಿಯೇಲ ಮತ್ತು ಎಲಿಸಬೆತ್‌ನಿಂದ ಯೆಹೋವ ದೇವರು ಮರಿಯಗೆ ಸಹಾಯ ಮಾಡಿದನು. w23.10 14-15 ¶10-12
ಶುಕ್ರವಾರ, ಜುಲೈ 18
ಅಷ್ಟೇ ಅಲ್ಲ ತನ್ನ ತಂದೆ ಅಂದ್ರೆ ದೇವರಿಗೋಸ್ಕರ ನಮ್ಮನ್ನ ರಾಜರಾಗಿ, ಪುರೋಹಿತರಾಗಿ ಮಾಡ್ತಾನೆ.—ಪ್ರಕ. 1:6.
ಯೇಸುವಿನ ಶಿಷ್ಯರಲ್ಲಿ 1,44,000 ಜನ ಮಾತ್ರ ಪವಿತ್ರ ಶಕ್ತಿಯಿಂದ ಅಭಿಷೇಕ ಆಗಿದ್ದಾರೆ. ಅವ್ರಿಗೆ ಯೆಹೋವನ ಜೊತೆ ವಿಶೇಷವಾದ ಸಂಬಂಧ ಇದೆ. ಅವರು ಮುಂದೆ ಯೇಸು ಜೊತೆ ಸ್ವರ್ಗದಲ್ಲಿ ಪುರೋಹಿತರಾಗಿ ಸೇವೆ ಮಾಡ್ತಾರೆ. (ಪ್ರಕ. 14:1) ಅವರು ಭೂಮಿಯಲ್ಲಿ ಇರುವಾಗಲೇ ಯೆಹೋವ ಅವ್ರನ್ನ ತನ್ನ ಮಕ್ಕಳಾಗಿ ದತ್ತು ತಗೊಂಡಾಗ ಅವರು ಪವಿತ್ರ ಸ್ಥಳಕ್ಕೆ ಹೋದ ಹಾಗಿರುತ್ತೆ. (ರೋಮ. 8:15-17) ಅತಿ ಪವಿತ್ರ ಸ್ಥಳ ಅಂದ್ರೆ ಅದು ಯೆಹೋವ ಇರೋ ಜಾಗ. ಅದು ಸ್ವರ್ಗ. ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ ಮಧ್ಯ ಇದ್ದ “ಪರದೆ” ಯೇಸುವಿನ ದೇಹನ ಸೂಚಿಸುತ್ತೆ. ಯೆಹೋವನ ಆಧ್ಯಾತ್ಮಿಕ ಆಲಯದ ಶ್ರೇಷ್ಠ ಮಹಾ ಪುರೋಹಿತನಾಗಿ ಯೇಸು ಸ್ವರ್ಗಕ್ಕೆ ಹೋಗಬೇಕಾದ್ರೆ ಪರದೆ ತರ ಇದ್ದ ತನ್ನ ಮಾನವ ದೇಹವನ್ನ ತ್ಯಾಗ ಮಾಡಬೇಕಿತ್ತು. ತನ್ನ ಮಾನವ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ಅಭಿಷಿಕ್ತ ಕ್ರೈಸ್ತರಿಗೆಲ್ಲ ಸ್ವರ್ಗಕ್ಕೆ ಹೋಗೋಕೆ ಅವಕಾಶ ಆತನು ಮಾಡ್ಕೊಟ್ಟನು. ಅಭಿಷಿಕ್ತರು ಸ್ವರ್ಗಕ್ಕೆ ಹೋಗಬೇಕಂದ್ರೆ ಅವರು ಕೂಡ ಯೇಸು ತರ ಮಾನವ ಶರೀರನ ಬಿಟ್ಟುಹೋಗಬೇಕು.—ಇಬ್ರಿ. 10:19, 20; 1 ಕೊರಿಂ. 15:50. w23.10 28 ¶13