ಬೈಬಲಿನ ದೃಷ್ಟಿಕೋನ
ಮಕ್ಕಳು ತಮ್ಮ ಸ್ವಂತ ಧರ್ಮವನ್ನು ಆರಿಸಿಕೊಳ್ಳಬೇಕೋ?
ಒಂದು ಮಗು ಹುಟ್ಟಿದ ಗಳಿಗೆಯಿಂದ ಅದರ ತರುಣಾವಸ್ಥೆಯಾದ್ಯಂತ, ಹೆತ್ತವರು ತಮ್ಮ ಮಗುವಿಗಾಗಿ ಆಯ್ಕೆಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ, ಮಗು ಏನನ್ನು ಇಷ್ಟಪಡಬಹುದು ಎಂಬುದನ್ನು ಸಾಧ್ಯವಾದಾಗಲೆಲ್ಲ ಪರಿಗಣಿಸುತ್ತಾ, ವಿವೇಕಿಗಳಾದ ಹೆತ್ತವರಿಗೆ ತಾವು ಯಾವಾಗ ಸೌಮ್ಯತೆ ತೋರಿಸಬೇಕೆಂದು ತಿಳಿದಿರುತ್ತದೆ.
ಆದರೂ, ಎಷ್ಟರ ಮಟ್ಟಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಕೊಡಬೇಕು ಎಂಬುದು ಹೆತ್ತವರಿಗೆ ಒಂದು ಪಂಥಾಹ್ವಾನವನ್ನು ಒಡ್ಡಬಹುದು. ಮಕ್ಕಳು ಸರಿಯಾದ ಆಯ್ಕೆಗಳನ್ನು ಮಾಡಲು ಮತ್ತು ಒಂದು ನಿರ್ದಿಷ್ಟ ಮಟ್ಟದ ಸ್ವಾತಂತ್ರ್ಯದಿಂದ ಪ್ರಯೋಜನಪಡೆಯಲು ಸಾಧ್ಯವೆಂಬುದು ಸತ್ಯವಾಗಿದ್ದರೂ, ಯಾವುದು ದುರಂತದಲ್ಲಿ ಫಲಿಸಸಾಧ್ಯವಿದೆಯೊ ಆ ತಪ್ಪಾದ ಆಯ್ಕೆಗಳನ್ನೂ ಅವರು ಮಾಡಸಾಧ್ಯವಿದೆ ಎಂಬುದೂ ಸತ್ಯ.—2 ಅರಸುಗಳು 2:23-25; ಎಫೆಸ 6:1-3.
ಉದಾಹರಣೆಗೆ, ಮಕ್ಕಳು ಅನೇಕ ವೇಳೆ ಪೌಷ್ಟಿಕ ಆಹಾರದ ಬದಲು ಕಚಡ ಆಹಾರವನ್ನು ಆರಿಸುತ್ತಾರೆ. ಏಕೆ? ಏಕೆಂದರೆ ಚಿಕ್ಕ ಪ್ರಾಯದಲ್ಲಿ ತಾವಾಗಿಯೆ ಸ್ವಸ್ಥ ತೀರ್ಮಾನಗಳನ್ನು ಮಾಡಲು ಅವರು ಅಶಕ್ತರಾಗಿದ್ದಾರೆ. ಕಟ್ಟಕಡೆಗೆ ಅವರು ಪೌಷ್ಟಿಕ ಆಹಾರವನ್ನು ಆರಿಸಿಕೊಳ್ಳುವರು ಎಂದು ನಿರೀಕ್ಷಿಸುತ್ತಾ, ತಮ್ಮ ಮಕ್ಕಳನ್ನು ಈ ವಿಷಯದಲ್ಲಿ ಸ್ವೇಚ್ಛಾವರ್ತನೆಗೆ ಬಿಡುವುದು ಹೆತ್ತವರಿಗೆ ವಿವೇಕವುಳ್ಳದ್ದಾಗಿದೆಯೋ? ಇಲ್ಲ. ಬದಲಾಗಿ, ಅವರ ಮಕ್ಕಳ ದೀರ್ಘಕಾಲದ ಒಳಿತನ್ನು ಹೃದಯದಲ್ಲಿಟ್ಟು ಹೆತ್ತವರು ತಮ್ಮ ಮಕ್ಕಳಿಗಾಗಿ ಆಯ್ಕೆಗಳನ್ನು ಮಾಡಬೇಕು.
ಆದಕಾರಣ, ಆಹಾರ, ಬಟ್ಟೆ, ಕೇಶರಚನೆ, ಮತ್ತು ನೈತಿಕತೆಯ ಕುರಿತು ಹೆತ್ತವರು ತಮ್ಮ ಮಕ್ಕಳಿಗಾಗಿ ತಕ್ಕದ್ದಾಗಿಯೆ ಆಯ್ಕೆಗಳನ್ನು ಮಾಡುತ್ತಾರೆ. ಆದರೆ ಧರ್ಮದ ಕುರಿತಾಗಿ ಏನು? ಆ ಆಯ್ಕೆಯನ್ನೂ ಹೆತ್ತವರೇ ಮಾಡಬೇಕೋ?
ಆಯ್ಕೆ
ಹೆತ್ತವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ತಮ್ಮ ಮಕ್ಕಳ ಮೇಲೆ ಒತ್ತಾಯಿಸಬಾರದೆಂದು ಕೆಲವರು ವಾದಿಸಬಹುದು. ವಾಸ್ತವವಾಗಿ, 160 ವರುಷಗಳ ಹಿಂದೆ, ಕ್ರೈಸ್ತ ನಂಬಿಕೆಯವರೆಂದು ಹೇಳಿಕೊಳ್ಳುತ್ತಿದ್ದ ಕೆಲವರು, “ಕೆಲವು ನಿರ್ದಿಷ್ಟ ಬೋಧನೆಗಳಿಗೆ ಮಕ್ಕಳ ಮನಸ್ಸನ್ನು ಕೆಡಿಸುವ ಭಯದಿಂದ, ಅವರಿಗೆ ಧರ್ಮವನ್ನು ಕಲಿಸಬಾರದು, ಆದರೆ ಅವರು ಒಂದು ಆಯ್ಕೆಯನ್ನು ಮಾಡಲು ಶಕ್ತರಾಗುವ, ಮತ್ತು ಒಂದನ್ನು ಆರಿಸಿಕೊಳ್ಳಲು ಬಯಸುವ ತನಕ ಧಾರ್ಮಿಕ ಬೋಧನೆಗಳಿಲ್ಲದೆಯೆ ಬಿಡಲ್ಪಡಬೇಕು,” ಎಂಬ ವಿಚಾರವನ್ನು ಮುಂತಂದರು.
ಹಾಗಿದ್ದರೂ, ಈ ವಿಚಾರವು ಬೈಬಲಿನ ದೃಷ್ಟಿಕೋನದೊಂದಿಗೆ ಹೊಂದಿಕೆಯಲ್ಲಿಲ್ಲ. ಹುಟ್ಟಿದಂದಿನಿಂದ ಮಕ್ಕಳಲ್ಲಿ ಧಾರ್ಮಿಕ ನಂಬಿಕೆಗಳನ್ನು ಬೇರೂರಿಸುವುದರ ಪ್ರಾಮುಖ್ಯವನ್ನು ಬೈಬಲ್ ಒತ್ತಿತಿಳಿಸುತ್ತದೆ. ಜ್ಞಾನೋಕ್ತಿ 22:6 ತಿಳಿಸುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”
“ಹುಡುಗ” ಎಂಬುದಾಗಿ ಭಾಷಾಂತರಿಸಲಾದ ಹೀಬ್ರು ಪದ, ಬಾಲ್ಯದಿಂದ ತರುಣಾವಸ್ಥೆಯ ತನಕದ ಪ್ರಾಯವನ್ನು ಆವರಿಸುತ್ತದೆ. ಚಿಕ್ಕಂದಿನಲ್ಲಿಯೇ ಕಲಿಯುವುದರ ಪ್ರಮುಖತೆಯ ಕುರಿತು, ಅಮೆರಿಕದ ಇಲ್ಲಿನೊಯಿ ವಿಶ್ವವಿದ್ಯಾನಿಲಯದ, ಡಾ. ಜೋಸೆಫ್ ಎಮ್. ಹನ್ಟ್, ಹೇಳಿದ್ದು: “ಜೀವಿತದ ಮೊದಲ ನಾಲ್ಕು ಅಥವಾ ಐದು ವರುಷಗಳಲ್ಲಿ ಒಂದು ಮಗುವಿನ ಬೆಳವಣಿಗೆಯು ಅತಿ ತೀವ್ರವಾಗಿರುತ್ತದೆ ಮತ್ತು ಬದಲಾವಣೆಗೆ ಹೆಚ್ಚಾಗಿ ಗುರಿಯಾಗಿರುತ್ತದೆ. . . . ಪ್ರಾಯಶಃ [ಅವನ] ಮೂಲ ಸಾಮರ್ಥ್ಯಗಳಲ್ಲಿ 20 ಪ್ರತಿಶತ ಅವನ ಮೊದಲ ಹುಟ್ಟುಹಬ್ಬಕ್ಕಿಂತ ಮುಂಚಿತವೆ ವಿಕಾಸಗೊಳ್ಳುತ್ತವೆ, ಬಹುಶಃ ಅರ್ಧಾಂಶ, ಅವನು ನಾಲ್ಕು ವರ್ಷಗಳನ್ನು ಮುಟ್ಟುವ ಮುಂಚಿತವೆ.” ಮಗುವಿನ ಜೀವನದ ಆರಂಭದಲ್ಲಿಯೆ ವಿವೇಕಪ್ರದ ಮಾರ್ಗದರ್ಶನೆಯನ್ನು ಕೊಟ್ಟು, ಅವನನ್ನು ದೇವರ ಮಾರ್ಗಗಳಲ್ಲಿ ತರಬೇತುಗೊಳಿಸುವುದು ಹೆತ್ತವರಿಗೆ ಪ್ರಾಮುಖ್ಯವೆಂಬ ಬೈಬಲಿನ ಪ್ರೇರಿತ ಸಲಹೆಯನ್ನು ಇದು ಕೇವಲ ಒತ್ತಿತೋರಿಸುತ್ತದೆ.—ಧರ್ಮೋಪದೇಶಕಾಂಡ 11:18-21.
ಪ್ರಮುಖವಾಗಿ, ಯೆಹೋವನಿಗಾಗಿ ಪ್ರೀತಿಯನ್ನು ತಮ್ಮ ಮಕ್ಕಳಲ್ಲಿ ತುಂಬಿಸುವಂತೆ ದೇವಭಯವುಳ್ಳ ಹೆತ್ತವರಿಗೆ ಶಾಸ್ತ್ರಗಳು ನಿರ್ದೇಶಿಸುತ್ತವೆ. ಧರ್ಮೋಪದೇಶಕಾಂಡ 6:5-7 ಹೇಳುವುದು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ [“ಬೇರೂರಿಸಿ,” NW] ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ‘ಬೇರೂರಿಸು’ ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಕ್ರಿಯಾಪದ, ಒಂದು ಸಾಣೆಕಲ್ಲಿನ ಮೇಲೆ ಒಂದು ಉಪಕರಣವನ್ನು ಹರಿತಗೊಳಿಸುವ ವಿಚಾರವನ್ನು ಹೊಂದಿರುತ್ತದೆ. ಕೇವಲ ಕೆಲವೇ ಸವರಿಕೆಗಳಿಂದ ಇದನ್ನು ಪೂರೈಸಸಾಧ್ಯವಿಲ್ಲ. ಅದನ್ನು ಶ್ರದ್ಧಾಪೂರ್ವಕವಾಗಿ, ಪದೇ ಪದೇ ಮಾಡಬೇಕು. ದ ನ್ಯೂ ಇಂಗ್ಲಿಷ್ ಬೈಬಲ್, ಈ ಹೀಬ್ರು ಕ್ರಿಯಾಪದವನ್ನು “ಪುನರಾವೃತ್ತಿಸು” ಎಂಬುದಾಗಿ ತರ್ಜುಮೆಮಾಡುತ್ತದೆ. ಸ್ಪಷ್ಟವಾಗಿ, ‘ಬೇರೂರಿಸುವುದು’ ಎಂದರೆ ಬಾಳುವ ಒಂದು ಪರಿಣಾಮವನ್ನು ಬಿಟ್ಟುಹೋಗುವುದು.—ಜ್ಞಾನೋಕ್ತಿ 27:17ನ್ನು ಹೋಲಿಸಿರಿ.
ಆದಕಾರಣ, ನಿಜ ಕ್ರೈಸ್ತ ಹೆತ್ತವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ತಮ್ಮ ಮಕ್ಕಳ ಮೇಲೆ ಅಚ್ಚೊತ್ತುವ ಹಂಗನ್ನು ಗಂಭೀರವಾಗಿ ತೆಗೆದುಕೊಳ್ಳತಕ್ಕದ್ದು. ತಮ್ಮ ಮಕ್ಕಳೇ ಆರಿಸಿಕೊಳ್ಳುವಂತೆ ಬಿಡುವುದರ ಮೂಲಕ ಈ ಜವಾಬ್ದಾರಿಯನ್ನು ಅವರು ತ್ಯಜಿಸಸಾಧ್ಯವಿಲ್ಲ. ತಮ್ಮ “ಚಿಕ್ಕ ಮಕ್ಕಳನ್ನು” (NW) ಕೂಟಗಳಿಗೆ ಕರೆದುಕೊಂಡು ಹೋಗುವುದೂ ಇದರಲ್ಲಿ ಒಳಗೊಂಡಿದೆ. ಅಲ್ಲಿ ಹೆತ್ತವರು ಅವರೊಂದಿಗೆ ಕುಳಿತುಕೊಳ್ಳಸಾಧ್ಯವಿದೆ ಮತ್ತು ಶಾಸ್ತ್ರೀಯ ಚರ್ಚೆಗಳಿಗೆ ಗಮನಕೊಡುವುದರ ಹಾಗೂ ಅದರಲ್ಲಿ ಭಾಗವಹಿಸುವುದರ ಮೂಲಕ, ಒಂದು ಐಕ್ಯ ಕುಟುಂಬವು ಗಳಿಸಸಾಧ್ಯವಿರುವ ಆತ್ಮಿಕ ಪ್ರಯೋಜನವನ್ನು ಗಣ್ಯಮಾಡಲು ಅವರಿಗೆ ಸಹಾಯಮಾಡಸಾಧ್ಯವಿದೆ.—ಧರ್ಮೋಪದೇಶಕಾಂಡ 31:12, 13; ಯೆಶಾಯ 48:17-19; 2 ತಿಮೊಥೆಯ 1:5; 3:15.
ಹೆತ್ತವರಿಗಿರುವ ಜವಾಬ್ದಾರಿ
ಯಾವುದೊ ವಿಷಯವು ಪೌಷ್ಟಿಕವಾಗಿರುವ ಕಾರಣ ಅದನ್ನು ತಿನ್ನಬೇಕೆಂದು ಕೇವಲ ಹೇಳುವುದು, ಮಗು ಅದರಲ್ಲಿ ಆನಂದಿಸುವುದೆಂಬುದನ್ನು ಅರ್ಥೈಸುವುದಿಲ್ಲ. ಆದುದರಿಂದ, ಈ ಆವಶ್ಯಕವಾದ ಆಹಾರಗಳನ್ನು ಮಗುವಿನ ರುಚಿಗೆ ಆಕರ್ಷಕವಾಗುವಂತಹ ರೀತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ರುಚಿಕರವಾಗಿ ಮಾಡಲು, ಒಬ್ಬ ವಿವೇಕಿಯಾದ ತಾಯಿಗೆ ತಿಳಿದಿದೆ. ಮತ್ತು, ನಿಶ್ಚಯವಾಗಿಯೂ, ಮಗುವಿನ ಜೀರ್ಣಿಸುವ ಶಕ್ತಿಗೆ ಅನುಗುಣವಾಗಿ, ಅವಳು ಆಹಾರವನ್ನು ತಯಾರಿಸುತ್ತಾಳೆ.
ತದ್ರೀತಿಯಲ್ಲಿ, ಮಗು ಮೊದಲಲ್ಲಿ ಧಾರ್ಮಿಕ ಉಪದೇಶವನ್ನು ಅಲಕ್ಷ್ಯಮಾಡಬಹುದು ಮತ್ತು ಆ ವಿಷಯದಲ್ಲಿ ವಿವೇಚಿಸಲು ಪ್ರಯತ್ನಿಸುವುದು ವ್ಯರ್ಥ ಎಂದು ಹೆತ್ತವರು ಕಂಡುಕೊಳ್ಳಬಹುದು. ಹಾಗಿದ್ದರೂ, ಶೈಶವಾವಸ್ಥೆಯಿಂದಲೇ ತಮ್ಮ ಮಕ್ಕಳನ್ನು ತರಬೇತಿಗೊಳಿಸಲು ಹೆತ್ತವರು ತಮ್ಮಿಂದಾದ ಎಲ್ಲವನ್ನು ಮಾಡಬೇಕೆಂಬ ಬೈಬಲಿನ ಮಾರ್ಗದರ್ಶನೆಯು ಸ್ಪಷ್ಟವಾಗಿದೆ. ಆದುದರಿಂದ, ಅದನ್ನು ಗ್ರಹಿಸಿಕೊಳ್ಳುವ ಮಗುವಿನ ಸಾಮರ್ಥ್ಯವನ್ನು ಗಮನಿಸುತ್ತಾ, ಅವನಿಗೆ ಆಕರ್ಷಕವಾಗುವ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ, ವಿವೇಕಿಗಳಾದ ಹೆತ್ತವರು ಧಾರ್ಮಿಕ ಉಪದೇಶವನ್ನು ರುಚಿಕರವಾಗಿ ಮಾಡುತ್ತಾರೆ.
ತಮ್ಮ ಮಕ್ಕಳಿಗೆ ಜೀವಿತದ ಆವಶ್ಯಕತೆಗಳನ್ನು ಒದಗಿಸಿಕೊಡುವ ಹಂಗು ಪ್ರೀತಿಯ ಹೆತ್ತವರಿಗೆ ಬಲವಾಗಿರುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿನ ಅಗತ್ಯಗಳನ್ನು ಹೆತ್ತವರಿಗಿಂತ ಚೆನ್ನಾಗಿ ಬೇರೆ ಯಾರೂ ತಿಳಿದಿರಲಾರರು. ಇದಕ್ಕೆ ಹೊಂದಿಕೆಯಾಗಿ, ಶಾರೀರಿಕವಾಗಿ ಹಾಗೂ ಆತ್ಮಿಕವಾಗಿ ಒದಗಿಸಿಕೊಡುವ ಪ್ರಧಾನ ಹಂಗನ್ನು ಬೈಬಲ್ ಹೆತ್ತವರ ಮೇಲೆ ಹೊರಿಸುತ್ತದೆ—ನಿರ್ದಿಷ್ಟವಾಗಿ ತಂದೆಯ ಮೇಲೆ. (ಎಫೆಸ 6:4) ಆದುದರಿಂದ, ಈ ಹಂಗನ್ನು ಇತರರಿಗೆ ಸಾಗಿಸಲು ಪ್ರಯತ್ನಿಸುವ ಮೂಲಕ ಹೆತ್ತವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ನೆರವು ನೀಡಲ್ಪಟ್ಟಾಗ ಅದರ ಪ್ರಯೋಜನವನ್ನು ಅವರು ಪಡೆಯಬಹುದಾದರೂ, ಇದು ಹೆತ್ತವರು ಕೊಡಬೇಕಾದ ಧಾರ್ಮಿಕ ಶಿಕ್ಷಣಕ್ಕೆ ಬದಲಿಯಾಗಿರುವುದಿಲ್ಲ ಬದಲಾಗಿ ಸಂಪೂರಕವಾಗಿರುವುದು.—1 ತಿಮೊಥೆಯ 5:8.
ಜೀವಿತದ ಯಾವುದೊ ಒಂದು ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಯಾವ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವೆನೆಂಬುದನ್ನು ನಿರ್ಣಯಿಸುತ್ತಾನೆ. ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ಧಾರ್ಮಿಕ ಉಪದೇಶವನ್ನು ಕೊಡುವ ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾದರೆ ಮತ್ತು ತರ್ಕಬದ್ಧವಾದ ತತ್ತ್ವಗಳ ಆಧಾರದಲ್ಲಿ ವಿವೇಚಿಸುವಂತೆ ಅವರಿಗೆ ಉಪದೇಶಮಾಡುವುದರಲ್ಲಿ ಈ ಸಮಯವನ್ನು ಉಪಯೋಗಿಸುವುದಾದರೆ, ಮುಂದೆ ಜೀವಿತದಲ್ಲಿ ತಮ್ಮ ಮಕ್ಕಳು ಮಾಡುವ ಆಯ್ಕೆಯು ಸರಿಯಾದದ್ದಾಗಿರುವುದು ಹೆಚ್ಚು ಸಂಭವನೀಯ.—2 ಪೂರ್ವಕಾಲವೃತ್ತಾಂತ 34:1, 2; ಜ್ಞಾನೋಕ್ತಿ 2:1-9.
[ಪುಟ 25 ರಲ್ಲಿರುವ ಚಿತ್ರ]
The Doré Bible Illustrations/Dover Publications, Inc.