ಮೂವರು ಮೇಜೈ ವಾಸ್ತವವೂ, ಕಾಲ್ಪನಿಕವೂ?
“ ಸಿ + ಎಮ್ + ಬಿ ”
ಈ ಮೂರು ಅಕ್ಷರಗಳು ನಿಮಗೆ ಯಾವ ಅರ್ಥದಲ್ಲಿಯಾದರೂ ಇವೆಯೋ? ನೀವು ಪಶ್ಚಿಮ (ಫೆಡರಲ್ ರಿಪಬ್ಲಿಕ್) ಜರ್ಮನಿಯ ರೋಮನ್ ಕಥೋಲಿಕ ಪ್ರದೇಶಗಳಲ್ಲಿ ಜೀವಿಸುತ್ತಿರುವುದಾದರೆ ಇವಕ್ಕೆ ಅರ್ಥವಿರಬಹುದು. ಅಲ್ಲಿ ಅನೇಕ ವೇಳೆ ಬಾಗಲುಗಳ ಮೇಲೆ ಈ ಅಕ್ಷರಗಳನ್ನೂ ವರ್ಷವನ್ನೂ ನೀವು ನೋಡುವಿರಿ. ಇದೇಕೆ?
ಜನಪ್ರಿಯ ದಂತಕಥೆಗನುಸಾರ, ಈ ಅಕ್ಷರಗಳು ಜರ್ಮನ್ ಭಾಷೆಯಲ್ಲಿ ಗ್ಯಾಸ್ಪರ್ (ಜರ್ಮನ್ನಲ್ಲಿ ಕ್ಯಾಸ್ಪರ್), ಮೆಲ್ಕಿಯೊರ್ ಮತ್ತು ಬ್ಯಾಲಸ್ತರ್ ಎಂಬ ಮೂವರು ಮೇಜೈ ಅಥವಾ “ಜೋಯಿಸರ” ಹೆಸರು.a 1164 ರಲ್ಲಿ ಈ ಮೇಜೈ ಜ್ಞಾನಿಗಳ ಎಲುಬುಗಳನ್ನು ಕೊಲೋನ್ ನಗರಕ್ಕೆ ಒಯ್ಯಲಾಯಿತಂತೆ ಮತ್ತು ಆ ತರುವಾಯ ಅದನ್ನು ನಗರದ ಕೆಥಿಡ್ರಲ್ನಲ್ಲಿ ಇಡಲಾಯಿತಂತೆ. ಹೀಗೆ ಕೊಲೋನ್ ನಗರ ಅವರ ಭಕ್ತಿಯ ಕೇಂದ್ರವಾಯಿತು ಎಂದು ಭಾವಿಸಲಾಗುತ್ತದೆ. ವಾರ್ಷಿಕವಾಗಿ, ಜನವರಿ 6 ರಂದು, ಮೂರು ಪವಿತ್ರ ಅರಸರ ಹಬ್ಬವೆಂದು ಪ್ರಸಿದ್ಧವಾಗಿರುವ ಹಬ್ಬದಲ್ಲಿ, ಪುರಾತನ ರಾಜರಂತೆ ಉಡುಪು ಧರಿಸಿರುವ ಯುವ ಗುಂಪುಗಳು ಮನೆಯಿಂದ ಮನೆಗೆ ಹೋಗಿ ಬಾಗಿಲುಗಳ ಮೇಲೆ ಈ ಅಕ್ಷರಗಳನ್ನು ಬರೆಯುತ್ತಾರೆ. ಸಂಪ್ರದಾಯಾನುಸಾರ, ಇದು ಮನೆಯವರಿಗೆ ದೌರ್ಭಾಗ್ಯದಿಂದ ರಕ್ಷಣೆಯನ್ನೊದಗಿಸುತ್ತದೆ.
ಧಾರ್ಮಿಕ ಕಲೆ ಮತ್ತು ಸಂಪ್ರದಾಯ ಈ ಮೂವರು ಮೇಜೈ ಅಥವಾ “ಅರಸರು” ಒಂದು “ನಕ್ಷತ್ರ”ದ ಮೂಲಕ ಯೇಸು ಜನಿಸಿದಲ್ಲಿಗೆ ನಡಿಸಲ್ಪಟ್ಟರು ಎಂದು ತೋರಿಸುತ್ತವೆ. ಈ “ಅರಸರು”ಗಳಿಗೆ ಕೊಡಲ್ಪಡುವ ಗೌರವ ಮತ್ತು ಭಕ್ತಿಯ ಕಾರಣದಿಂದ, ಈ ನಂಬಿಕೆ ಶಾಸ್ತ್ರಗಳ ಮೇಲೆ ಆಧರಿಸಲ್ಪಟ್ಟಿದೆಯೋ ಇಲ್ಲವೋ ಎಂಬ ಪ್ರಶ್ನೆ ಏಳುತ್ತದೆ.
ಮತ್ತಾಯನ ಸುವಾರ್ತೆಯು ಮಾತ್ರ ಈ ಭೇಟಿಗಾರರನ್ನು ಸೂಚಿಸುತ್ತದೆ. (2:1, 2) ಆದರೆ ಅವರು ಮೂವರಾಗಿದ್ದರೆಂದೂ, ಅರಸರುಗಳೆಂದೂ ಮತ್ತಾಯನು ತಿಳಿಸುತ್ತಾನೋ ಮತ್ತು ಅವರ ಹೆಸರುಗಳನ್ನು ಅವನು ಬರೆದನೋ? ಕಥೋಲಿಕ ಪತ್ರಿಕೆಯಾದ ಕರ್ಶೆನ್ಸೈಟಂಗ್ ಫರ್ಡಾಸ್ ಬಿಸ್ಟಮ್ ಆಕೆನ್ ಒಪ್ಪಿಕೊಳ್ಳುವುದು: “ಈ ಮೂರು ಪವಿತ್ರ ಅರಸರನ್ನು ಹಾಗೆಂದು ಬೈಬಲು ಸೂಚಿಸಿರುವದಿಲ್ಲ. ಆರನೆಯ ಶತಮಾನದಿಂದ ಆರಂಭವಾಗಿ ಈ ಜ್ಞಾನಿಗಳನ್ನು . . . ಅರಸರೆಂದು ತಿಳಿಯಲಾಯಿತು. . . ಜೋಯಿಸರ ಸಂಖ್ಯೆಯ ವಿಷಯದಲ್ಲಿ . . . ಮತ್ತಾಯನು ಯಾವ ವಿವರವನ್ನೂ ಕೊಡುವುದಿಲ್ಲ. . . . ಪ್ರಥಮವಾಗಿ, ಒಂಭತ್ತನೆಯ ಶತಮಾನದಲ್ಲಿ ಅವರು ಗ್ಯಾಸ್ಪರ್, ಮೆಲ್ಕಿಯೊರ್ ಮತ್ತು ಬ್ಯಾಲಸ್ತರ್ ಎಂದು ತೋರಿಬಂದರು.” ಇದಲ್ಲದೆ, ಕ್ಯಾಥ್ಲಿಕ್ ನಿದರ್ಶನ ಗ್ರಂಥವಾದ ಲೆಕ್ಸಿಕನ್ ಫರ್ ಥಿಯೋಲಜಿ ಎಂಡ್ ಕರ್ಶ್ ಹೇಳುವುದೇನಂದರೆ ಗ್ರೀಕ್ ಪದವಾದ ಮಾಗೋಯ್ ಎಂಬದರ ಅರ್ಥ ಅರಸರೆಂದಲ್ಲ, ಬದಲಿಗೆ, “ಜ್ಯೋತಿಷ್ಯದ ಗುಪ್ತ ಜ್ಞಾನವಿರುವವರು” ಎಂದಾಗಿದೆ. ಜಸ್ಟಿನ್ ಮಾರ್ಟರ್, ಆರಿಜೆನ್ ಮತ್ತು ಟೆರ್ಟುಲ್ಲಿಯನ್ ಇವರಲ್ಲಿ ಪ್ರತಿಯೊಬ್ಬರು ಆ ಪದವನ್ನು “ಜೋಯಿಸ” ಎಂಬ ಅರ್ಥದಲ್ಲಿ ತಕ್ಕೊಂಡರು. ಆಧುನಿಕ ಬೈಬಲ್ ಭಾಷಾಂತರಗಳು ಸಹ ಮತ್ತಾಯ 2:1, 7 ರಲ್ಲಿ “ಜೋಯಿಸರು” ಎಂಬದನ್ನು ಉಪಯೋಗಿಸುತ್ತವೆ.—ದ ಲಿವಿಂಗ್ ಬೈಬಲ್; ಆನ್ ಅಮೆರಿಕನ್ ಟಾನ್ಸಲೇಶನ್.
ಯೇಸುವಿನ ಜನನದ ಚಿತ್ರಗಳು ಯಾವಾಗಲೂ “ಮೂವರು ಅರಸ”ರನ್ನು ತೋರಿಸುತ್ತವಾದರೂ ಅವನ ಜನನದ ಸಮಯದಲ್ಲಿ ಅವರು ಅಲ್ಲಿ ಹಾಜರಿದ್ದರೋ? ಲೆಕ್ಸಿಕನ್ ಗ್ರಂಥಹೇಳುವುದು: “ಮತ್ತಾಯ 2:16, ಅವರ ಭೇಟಿ ಯೇಸುವಿನ ಜನನವಾಗಿ ಒಂದು ವರ್ಷ ಅಥವಾ ಹೆಚ್ಚು ಸಮಯದ ಬಳಿಕ ನಡೆಯಿತೆಂದು ಸೂಚಿಸುತ್ತದೆ.” ಹೌದು, 11ನೇ ವಚನವು ಅವರು ಹಟ್ಟಿಯಲ್ಲಲ್ಲ, “ಮನೆ”ಗೆ ಹೋಗಿ “ಕೂಸನ್ನು” ಕಂಡರು ಎಂದು ಹೇಳುತ್ತದೆ.b
ಹಾಗಾದರೆ “ಪವಿತ್ರ ಅರಸರು” ಎಂಬ ಪದ ಪ್ರಯೋಗದ ವಿಷಯವೇನು? ಆ ಸಂದರ್ಶಕರನ್ನು ಯೋಗ್ಯವಾಗಿಯೇ ಪವಿತ್ರರೆಂದು ಕರೆಯಬಹುದೋ? ಶಾಸ್ತ್ರವು ಅವರನ್ನು ಹಾಗೆಂದು ವರ್ಣಿಸುವುದಿಲ್ಲ. ವಾಸ್ತವವಾಗಿ, ಅವರು ದೈವಿಕ ಶಾಸ್ತ್ರೋಲ್ಲಂಘಿಗಳು. ಯೆಶಾಯ 47:13, 14, (NW) ದೇವರು “ಆಕಾಶಗಳ ಆರಾಧಕರು [ಸೆಪ್ಟುಜಿಂಟ್ ಗನುಸಾರ “ಜೋಯಿಸರು”], ನಕ್ಷತ್ರ ನೋಡುವವರು” ಎಂದು ಹೇಳಿ ಇಂಥವರನ್ನು ಖಂಡಿಸುತ್ತಾನೆ. (ಧರ್ಮೊಪದೇಶಕಾಂಡ 18:10 ಹೋಲಿಸಿ.) ಈ ಜೋಯಿಸರು “ಮೂಡಣ ದೇಶದಿಂದ” ಅಂದರೆ, ಬಹುಮಟ್ಟಿಗೆ, ಆಗ ಮಾಂತ್ರಿಕ ಆರಾಧನೆಗೆ ಕೇಂದ್ರವಾಗಿದ್ದ ಮತ್ತು ಅವರು ಸುಳ್ಳು ದೇವತೆಗಳನ್ನು ಆರಾಧಿಸುತ್ತಿದ್ದ ಅಪವಿತ್ರ ಬಬಿಲೋನಿನಿಂದ ಬಂದರು. ಅವರು ಹೀಗೆ, ಚಲಿಸುತ್ತದೆಂದು ಅವರೆಣಿಸಿದ್ದ ಮತ್ತು ಇತರ ಯಾರೂ ನೋಡಿದರೆಂದು ವರದಿಯಾಗಿರದ, “ನಕ್ಷತ್ರ”ದಿಂದ ನಡಿಸಲ್ಪಟ್ಟರು. ಇದಲ್ಲದೆ, ಆ “ನಕ್ಷತ್ರ” ಮೊದಲು ಅವರನ್ನು ಹೆರೋದ ರಾಜನ ಬಳಿಗೆ ನಡಿಸಿತೆಂದೂ ಮತ್ತು ಹೆರೋದನು ಯೇಸುವನ್ನು ಕೊಲ್ಲ ಪ್ರಯತ್ನಿಸಿದನ್ದೆಂದೂ ಮತ್ತಾಯನು ತೋರಿಸುತ್ತಾನೆ.—ಮತ್ತಾಯ 2:1, 2.
ಇಲ್ಲ, ಯೇಸುವಿನ ಬಳಿಗೆ ನಡಿಸಲು ದೇವರು ಒಂದು “ನಕ್ಷತ್ರ”ವನ್ನು ಕಳುಹಿಸಲಿಲ್ಲ. ಯೇಸು ತನ್ನ ದೇವ ದತ್ತ ನೇಮಕವನ್ನು ಪೂರೈಸುವ ಮೊದಲು ಅವನನ್ನು ನಾಶ ಮಾಡಲು ಇನ್ನಾವನೋ ಆ “ನಕ್ಷತ್ರ”ವನ್ನು ಕಳುಹಿಸಿದಿರ್ದಬಹುದು ಎಂಬದು ಹೆಚ್ಚು ಸಂಭವನೀಯವಲ್ಲವೇ?—ಆದಿಕಾಂಡ 3:15 ಹೋಲಿಸಿ.
ದೇವರ ವಾಕ್ಯವನ್ನು “ಸಂಪ್ರದಾಯ”ದೊಂದಿಗೆ ಮಿಶ್ರ ಮಾಡುವಲ್ಲಿ ಅದು “ನಿರರ್ಥಕ”ವಾಗ ಬಲ್ಲದೆಂದು ಯೇಸು ಎಚ್ಚರಿಸಿದನು. (ಮತ್ತಾಯ 15:6) ಈ ವ್ಯಕ್ತಿಗಳನ್ನು ಆವರಿಸಿರುವ ಸಂಪ್ರದಾಯಗಳು ಅಶಾಸ್ತ್ರೀಯವೆಂಬದು ಸ್ಪಷ್ಟ . ಆದುದರಿಂದ ಈ ಜೋಯಿಸರನ್ನು ಪೂಜ್ಯ ಭಾವದಿಂದ ಕಾಣುವುದು ಅಥವಾ ಪವಿತ್ರರೆಂದು ಎಣಿಸುವುದು ತಪ್ಪೆಂದು ನೀವು ಒಪ್ಪುವದಿಲ್ಲವೇ? (w88 12/15)
[ಅಧ್ಯಯನ ಪ್ರಶ್ನೆಗಳು]
a ವೈದಿಕರು ವಿವರಣೆಯಾಗಿ, “ಕ್ರಿಸ್ತನು ಈ ಮನೆಯನ್ನು ಆಶೀರ್ವದಿಸಲಿ” ಎಂಬರ್ಥದ ಕ್ರಿಸ್ಟಸ್ ಮಾನ್ಶಿಯೊನೆಮ್ ಬೆನಡಿಕಾಟ್ ಎಂಬ ಲ್ಯಾಟಿನ್ ಪದಸರಣಿಯನ್ನೂ ಸೂಚಿಸುತ್ತಾರೆ.
b ಈ ಜೋಯಿಸರ ಬರೋಣದ ಕುರಿತು ಹೆಚ್ಚಿನ ಮಾಹಿತಿಗೆ ಡಿಸೆಂಬರ್ 15, 1979 ರ ಇಂಗ್ಲಿಷ್ ವಾಚ್ಟವರ್ ಪತ್ರಿಕೆಯ 30 ನೇ ಪುಟ ನೋಡಿ.