-
ನಮಗೆ ಯಾಕೆ ಇಷ್ಟು ಕಷ್ಟ ಸಮಸ್ಯೆಗಳಿವೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 26
ನಮಗೆ ಯಾಕೆ ಇಷ್ಟು ಕಷ್ಟ ಸಮಸ್ಯೆಗಳಿವೆ?
ಏನಾದ್ರೂ ಕೆಟ್ಟ ಘಟನೆಗಳು ನಡೆದಾಗ, ‘ಯಾಕೆ ಹೀಗಾಗ್ತಿದೆ?’ ಅಂತ ಜನರು ಸಾಮಾನ್ಯವಾಗಿ ಕೇಳ್ತಾರೆ. ಈ ಪ್ರಶ್ನೆಗೆ ಉತ್ತರವನ್ನ ದೇವರು ತನ್ನ ವಾಕ್ಯವಾದ ಬೈಬಲ್‌ನಲ್ಲಿ ಕೊಟ್ಟಿದ್ದಾನೆ. ಅದನ್ನ ತಿಳಿದುಕೊಂಡಾಗ ನಿಮಗೆ ತುಂಬ ಖುಷಿಯಾಗುತ್ತೆ!
1. ಕೆಟ್ಟ ವಿಷಯಗಳು ಹೇಗೆ ಶುರುವಾದವು?
ಪಿಶಾಚನಾದ ಸೈತಾನ ದೇವರ ವಿರುದ್ಧ ದಂಗೆಯೆದ್ದ. ಎಲ್ಲರ ಮೇಲೆ ಅಧಿಕಾರ ಚಲಾಯಿಸಬೇಕು ಅನ್ನೋದು ಸೈತಾನನ ಆಸೆಯಾಗಿತ್ತು. ಅದಕ್ಕೆ ಅವನು ಆದಾಮ ಹವ್ವರನ್ನ ಮೋಸ ಮಾಡಿ ಅವರು ಯೆಹೋವನ ವಿರುದ್ಧ ದಂಗೆ ಏಳುವಂತೆ ಮಾಡಿದ. ಹವ್ವಳಿಗೆ ಸುಳ್ಳು ಹೇಳೋ ಮೂಲಕ ಈ ಕುತಂತ್ರವನ್ನ ನಡೆಸಿದ. (ಆದಿಕಾಂಡ 3:1-5) ಯೆಹೋವ ದೇವರು ಏನೋ ಒಂದು ಒಳ್ಳೇ ವಿಷಯವನ್ನ ಮುಚ್ಚಿಡುತ್ತಿದ್ದಾನೆ ಅಂತ ಹವ್ವಳು ನಂಬೋ ತರ ಮಾಡಿದ. ದೇವರ ಮಾತನ್ನ ಕೇಳದಿದ್ರೆ ಜನರು ಖುಷಿ ಖುಷಿಯಾಗಿರುತ್ತಾರೆ ಅನ್ನೋದು ಅವನ ಮಾತಿನ ಅರ್ಥವಾಗಿತ್ತು. ಸೈತಾನ ಹವ್ವಳಿಗೆ, ‘ನೀವು ಖಂಡಿತ ಸಾಯಲ್ಲ’ ಅಂತ ಹೇಳಿದ. ಅದೇ ಅವನು ಹೇಳಿದ ಮೊದಲ ಸುಳ್ಳಾಗಿತ್ತು. ಬೈಬಲ್ ಸೈತಾನನನ್ನು, “ಸುಳ್ಳುಬುರುಕ. ಸುಳ್ಳನ್ನ ಹುಟ್ಟಿಸಿದವ” ಅಂತ ಹೇಳುತ್ತೆ.—ಯೋಹಾನ 8:44.
2. ಆದಾಮ ಹವ್ವ ಯಾವ ನಿರ್ಧಾರ ಮಾಡಿದರು?
ಯೆಹೋವ ದೇವರು ಆದಾಮ ಹವ್ವರಿಗೆ ಬೇಕಾದ ಎಲ್ಲವನ್ನ ಧಾರಾಳವಾಗಿ ಕೊಟ್ಟಿದ್ದನು. ಅವರು ಏದೆನ್ ತೋಟದಲ್ಲಿದ್ದ ಎಲ್ಲ ಮರಗಳ ಹಣ್ಣುಗಳನ್ನ ತಿನ್ನಬಹುದಿತ್ತು. ಆದ್ರೆ ಒಂದು “ಮರದ ಹಣ್ಣನ್ನ ಮಾತ್ರ ತಿನ್ನಬಾರದು” ಅಂತ ಯೆಹೋವ ದೇವರು ಅವರಿಗೆ ಹೇಳಿದ್ದನು. (ಆದಿಕಾಂಡ 2:15-17) ಆದರೆ ಅವರು, ದೇವರು ತಿನ್ನಬೇಡ ಅಂತ ಹೇಳಿದ ಅದೇ ಮರದ ಹಣ್ಣನ್ನ ತಿನ್ನಲು ನಿರ್ಧರಿಸಿದ್ರು. ಹವ್ವ “ಆ ಮರದ ಹಣ್ಣು ಕಿತ್ತು ತಿಂದಳು” ನಂತರ ‘ಆದಾಮನೂ ತಿಂದ.’ (ಆದಿಕಾಂಡ 3:6) ಹೀಗೆ ಅವರು ದೇವರು ಕೊಟ್ಟ ಮಾತನ್ನ ಮುರಿದರು. ದೇವರು ಆದಾಮ ಹವ್ವರನ್ನ ಪರಿಪೂರ್ಣರಾಗಿ ಸೃಷ್ಟಿ ಮಾಡಿದ್ದನು. ಅವರಲ್ಲಿ ತಪ್ಪು ಮಾಡುವ ಸ್ವಭಾವನೇ ಇರಲಿಲ್ಲ. ಆದ್ರೆ ಅವರು ಬೇಕುಬೇಕಂತನೇ ಪಾಪ ಮಾಡಿ ದೇವರಿಗೆ ವಿರುದ್ಧವಾಗಿ ನಡೆದುಕೊಂಡ್ರು. ತಮಗೆ ದೇವರ ಆಳ್ವಿಕೆ ಬೇಕಾಗಿಲ್ಲ ಅಂತ ಅದನ್ನ ತಿರಸ್ಕರಿಸಿದ್ರು. ಅವರು ಹೀಗೆ ಮಾಡಿದ್ರಿಂದ ಭೂಮಿಯಲ್ಲಿ ಕಷ್ಟಸಮಸ್ಯೆಗಳು ಶುರುವಾದವು.—ಆದಿಕಾಂಡ 3:16-19.
3. ಆದಾಮ ಹವ್ವ ತಪ್ಪು ಮಾಡಿದ್ರಿಂದ ಇವತ್ತು ನಾವೇನನ್ನ ಅನುಭವಿಸಬೇಕಾಗಿದೆ?
ಆದಾಮ ಹವ್ವ ತಪ್ಪು ಮಾಡಿದಾಗ ಅವರು ಅಪರಿಪೂರ್ಣರಾದ್ರು. ಈ ಅಪರಿಪೂರ್ಣತೆಯನ್ನ ಅವರು ಕಾಯಿಲೆ ತರ ಎಲ್ಲಾ ಮಕ್ಕಳಿಗೂ ದಾಟಿಸಿದ್ರು. ಆದಾಮನ ಬಗ್ಗೆ ಬೈಬಲ್ ಹೀಗೆ ಹೇಳುತ್ತೆ: ‘ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಹೀಗೆ ಎಲ್ಲ ಮನುಷ್ಯರು ಸಾಯಬೇಕಾಯಿತು.’—ರೋಮನ್ನರಿಗೆ 5:12.
ಕೆಲವೊಮ್ಮೆ ನಾವು ತಪ್ಪಾದ ನಿರ್ಣಯಗಳನ್ನ ಮಾಡಿ ಕಷ್ಟ ಅನುಭವಿಸಬೇಕಾಗುತ್ತೆ. ಇನ್ನೂ ಕೆಲವೊಮ್ಮೆ ಬೇರೆಯವರು ತಪ್ಪಾದ ನಿರ್ಣಯಗಳನ್ನ ಮಾಡಿದಾಗ ನಾವು ಕಷ್ಟ ಅನುಭವಿಸಬೇಕಾಗುತ್ತೆ. ಅಷ್ಟೇ ಅಲ್ಲ, ಯಾವುದಾದ್ರೂ ದುರ್ಘಟನೆಯಾದಾಗ ಆ ಸಮಯದಲ್ಲಿ, ಆ ಜಾಗದಲ್ಲಿ ನಾವಿರೋದ್ರಿಂದ ಕಷ್ಟಗಳು ಬರಬಹುದು. ಹೀಗೆ ನಾವು ಬೇರೆಬೇರೆ ಕಾರಣಗಳಿಗಾಗಿ ಕಷ್ಟವನ್ನ ಅನುಭವಿಸಬೇಕಾಗುತ್ತೆ.—ಪ್ರಸಂಗಿ 9:11 ಓದಿ.
ಹೆಚ್ಚನ್ನ ತಿಳಿಯೋಣ
ಲೋಕದಲ್ಲಿ ನಡೆಯುವ ಕಷ್ಟ ಸಮಸ್ಯೆಗಳಿಗೆ ದೇವರು ಯಾಕೆ ಕಾರಣ ಅಲ್ಲ ಅಂತ ತಿಳಿಯಿರಿ. ಅಷ್ಟೇ ಅಲ್ಲ, ನಾವು ಕಷ್ಟಗಳನ್ನ ಅನುಭವಿಸುವಾಗ ಆತನಿಗೆ ಹೇಗನಿಸುತ್ತೆ ಅಂತನೂ ತಿಳಿಯಿರಿ.
4. ನಮ್ಮ ಕಷ್ಟಗಳಿಗೆ ಕಾರಣ
ಇಡೀ ಭೂಮಿಯಲ್ಲಿರುವ ಕಷ್ಟಗಳಿಗೆ ದೇವರು ಕಾರಣ ಅಂತ ತುಂಬ ಜನ ನಂಬ್ತಾರೆ. ಆದರೆ ಅದು ನಿಜನಾ? ವಿಡಿಯೋ ನೋಡಿ.
ಯಾಕೋಬ 1:13 ಮತ್ತು 1 ಯೋಹಾನ 5:19 ಓದಿ. ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಮ್ಮ ಕಷ್ಟ ಸಮಸ್ಯೆಗಳಿಗೆ ದೇವರು ಕಾರಣನಾ?
5. ಸೈತಾನನ ಆಳ್ವಿಕೆಯ ಪರಿಣಾಮಗಳು
ಆದಿಕಾಂಡ 3:1-6 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಸೈತಾನ ಯಾವ ಸುಳ್ಳನ್ನ ಹೇಳಿದ?—ವಚನ 4 ಮತ್ತು 5 ನೋಡಿ.
ಯೆಹೋವ ದೇವರು ಮನುಷ್ಯರಿಂದ ಏನೋ ಒಳ್ಳೇದನ್ನ ಮುಚ್ಚಿಡುತ್ತಿದ್ದಾನೆ ಅಂತ ಸೈತಾನ ಹೇಗೆ ಹೇಳಿದ?
ಮನುಷ್ಯರು ಖುಷಿಯಾಗಿ ಇರಬೇಕಾದ್ರೆ ಅವರಿಗೆ ದೇವರ ಆಳ್ವಿಕೆಯ ಅಗತ್ಯ ಇಲ್ಲ ಅಂತ ಸೈತಾನ ಹೇಗೆ ಹೇಳಿದ?
ಪ್ರಸಂಗಿ 8:9 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸೈತಾನನ ಆಳ್ವಿಕೆಯ ಪರಿಣಾಮಗಳೇನು?
ಆದಾಮ ಹವ್ವ ಪರಿಪೂರ್ಣರಾಗಿದ್ರು ಮತ್ತು ಸುಂದರ ಪರದೈಸಿನಲ್ಲಿದ್ರು. ಆದರೆ ಸೈತಾನನ ಮಾತನ್ನ ಕೇಳಿ ಯೆಹೋವನ ವಿರುದ್ಧ ದಂಗೆಯೆದ್ರು
ದಂಗೆಯ ನಂತರ ಇಡೀ ಭೂಮಿಯಲ್ಲಿ ಪಾಪ, ಮರಣ ಮತ್ತು ಕಷ್ಟಸಂಕಟ ತುಂಬಿ ತುಳುಕಿತು
ಪಾಪವನ್ನ, ಸಾವು-ನೋವನ್ನ ಯೆಹೋವ ದೇವರು ತೆಗೆದು ಹಾಕ್ತಾನೆ. ಮಾನವರು ಮತ್ತೆ ಪರಿಪೂರ್ಣರಾಗಿ ಪರದೈಸಿನಲ್ಲಿ ಜೀವಿಸ್ತಾರೆ
6. ಯೆಹೋವನು ನಮ್ಮ ಕಷ್ಟಗಳ ಬಗ್ಗೆ ಚಿಂತೆ ಮಾಡ್ತಾನೆ
ನಮ್ಮ ಕಷ್ಟಗಳ ಬಗ್ಗೆ ದೇವರಿಗೆ ಯಾವುದೇ ಚಿಂತೆ ಇಲ್ವಾ? ಇದರ ಬಗ್ಗೆ ರಾಜ ದಾವೀದ ಮತ್ತು ಅಪೊಸ್ತಲ ಪೇತ್ರ ಏನು ಬರೆದ್ರು ಅಂತ ನೋಡಿ. ಕೀರ್ತನೆ 31:7 ಮತ್ತು 1 ಪೇತ್ರ 5:7 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವನು ನಮ್ಮನ್ನ ನೋಡ್ತಾನೆ, ನಮ್ಮ ಕಷ್ಟಗಳ ಬಗ್ಗೆ ಚಿಂತೆ ಮಾಡ್ತಾನೆ ಅಂತ ಗೊತ್ತಾದಾಗ ನಿಮಗೇನು ಅನಿಸುತ್ತೆ?
7. ದೇವರು ಮಾನವರ ಎಲ್ಲಾ ಕಷ್ಟಗಳನ್ನ ತೆಗೆದುಹಾಕುತ್ತಾನೆ
ಯೆಶಾಯ 65:17 ಮತ್ತು ಪ್ರಕಟನೆ 21:3, 4 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ದೇವರು ನಮಗಿರೋ ಎಲ್ಲಾ ಕಷ್ಟಗಳನ್ನ ತೆಗೆದುಹಾಕುತ್ತಾನೆ ಅಂತ ಗೊತ್ತಾದಾಗ ಯಾಕೆ ನೆಮ್ಮದಿ ಅನಿಸುತ್ತೆ?
ನಿಮಗೆ ಗೊತ್ತಿತ್ತಾ?
ಸೈತಾನ ಮೊದಲ ಸುಳ್ಳನ್ನ ಹೇಳಿದಾಗ ಯೆಹೋವ ದೇವರಿಗೆ ಕೆಟ್ಟ ಹೆಸರು ತಂದ. ದೇವರಿಗೆ ಜನರ ಮೇಲೆ ಪ್ರೀತಿ ಇಲ್ಲ, ಆತನು ಅವರನ್ನ ದಬ್ಬಾಳಿಕೆ ಮಾಡ್ತಿದ್ದಾನೆ ಅಂತ ಜನರು ನಂಬೋ ತರ ಸೈತಾನ ಮಾಡಿದ್ದಾನೆ. ಯೆಹೋವ ದೇವರು ಮನುಷ್ಯರ ಎಲ್ಲ ಕಷ್ಟ ಸಮಸ್ಯೆಗಳನ್ನ ಪರಿಹರಿಸುತ್ತಾನೆ. ಹೀಗೆ ತನ್ನ ಹೆಸರಿಗೆ ಬಂದಿರುವ ಕಳಂಕವನ್ನ ತೆಗೆದುಹಾಕ್ತಾನೆ. ಇನ್ನೊಂದು ಮಾತಿನಲ್ಲಿ ಹೇಳೋದಾದ್ರೆ ತನ್ನ ಆಳ್ವಿಕೆನೇ ಸರಿ ಅಂತ ತೋರಿಸಿಕೊಡ್ತಾನೆ. ಇಡೀ ಪ್ರಪಂಚದಲ್ಲಿರುವ ಅತೀ ಪ್ರಾಮುಖ್ಯ ವಿಷಯ, ಯೆಹೋವ ದೇವರ ಹೆಸರನ್ನ ಪವಿತ್ರ ಮಾಡುವುದಾಗಿದೆ.—ಮತ್ತಾಯ 6:9, 10.
ಕೆಲವರು ಹೀಗಂತಾರೆ: “ದೇವರು ನಮಗೆ ಕಷ್ಟ ಕೊಟ್ಟು ಪರೀಕ್ಷೆ ಮಾಡ್ತಾನೆ.”
ನಿಮಗೇನು ಅನಿಸುತ್ತೆ?
ನಾವೇನು ಕಲಿತ್ವಿ
ನಮ್ಮ ಕಷ್ಟಗಳಿಗೆ ಮುಖ್ಯ ಕಾರಣ ಪಿಶಾಚನಾದ ಸೈತಾನ ಮತ್ತು ಆದಾಮ ಹವ್ವ. ಯೆಹೋವನು ನಮ್ಮ ಕಷ್ಟಗಳ ಬಗ್ಗೆ ತುಂಬ ಚಿಂತೆ ಮಾಡ್ತಾನೆ ಮತ್ತು ಬೇಗನೇ ಅದನ್ನೆಲ್ಲಾ ತೆಗೆದು ಹಾಕ್ತಾನೆ.
ನೆನಪಿದೆಯಾ
ಸೈತಾನ ಹವ್ವಳ ಹತ್ತಿರ ಯಾವ ಸುಳ್ಳನ್ನ ಹೇಳಿದ?
ಆದಾಮ ಹವ್ವ ದಂಗೆಯೆದ್ದ ಕಾರಣ ನಾವೇನು ಅನುಭವಿಸಬೇಕಾಗಿದೆ?
ಯೆಹೋವನು ನಮ್ಮ ಬಗ್ಗೆ ಚಿಂತೆ ಮಾಡ್ತಾನೆ ಅಂತ ನಾವು ಹೇಗೆ ಹೇಳಬಹುದು?
ಇದನ್ನೂ ನೋಡಿ
ಪಾಪದ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ತಿಳಿಯಿರಿ.
ಏದೆನ್ ತೋಟದಲ್ಲಿ ಪಿಶಾಚನಾದ ಸೈತಾನ ಎಬ್ಬಿಸಿದ ಸವಾಲಿನ ಬಗ್ಗೆ ತಿಳಿದುಕೊಳ್ಳಿ.
“ದೇವರು ಕಷ್ಟ ಸಂಕಟ ಬರುವಂತೆ ಯಾಕೆ ಬಿಟ್ಟಿದ್ದಾನೆ?” (ಕಾವಲಿನಬುರುಜು ಲೇಖನ)
ಒಂದು ಪ್ರಾಮುಖ್ಯ ಪ್ರಶ್ನೆಗೆ ಉತ್ತರ ತಿಳಿಯಿರಿ.
“ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?”(jw.org ಲೇಖನ)
ಕಷ್ಟಗಳಿಗೆ ಕಾರಣ ಏನು ಅಂತ ತಿಳಿದುಕೊಂಡ ಒಬ್ಬ ವ್ಯಕ್ತಿಯ ಅನುಭವ ನೋಡಿ.
-
-
ಯೇಸು ಜೀವ ಕೊಟ್ಟಿದ್ರಿಂದ ನಮಗೆ ಹೇಗೆ ರಕ್ಷಣೆ ಸಿಗುತ್ತೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಆದಾಮ ಹವ್ವ ದೇವರ ಮಾತನ್ನ ಕೇಳದೇ ಹೋಗಿದ್ರಿಂದ ನಾವೆಲ್ಲರೂ ಸಾವು ನೋವು ಕಷ್ಟವನ್ನ ಅನುಭವಿಸಬೇಕಾಯಿತು.a ಆದ್ರೆ ನಮಗೊಂದು ಸಿಹಿಸುದ್ದಿ ಇದೆ. ನಮ್ಮನ್ನ ಪಾಪ ಮತ್ತು ಮರಣದಿಂದ ಬಿಡಿಸಲಿಕ್ಕಾಗಿ ಯೆಹೋವ ದೇವರು ಒಂದು ಏರ್ಪಾಡನ್ನ ಮಾಡಿದ್ದನು. ಆತನು ತನ್ನ ಮಗನಾದ ಯೇಸು ಕ್ರಿಸ್ತನನ್ನ ಬಿಡುಗಡೆಯ ಬೆಲೆಯಾಗಿ ಕೊಟ್ಟನು ಅಂತ ಬೈಬಲ್ ಹೇಳುತ್ತೆ. ಬಿಡುಗಡೆಯ ಬೆಲೆ ಅಂದ್ರೆ ಒಬ್ಬ ವ್ಯಕ್ತಿಯನ್ನ ಬಿಡುಗಡೆ ಮಾಡಲು ಕೊಡುವ ಬೆಲೆಯಾಗಿದೆ. ಯೇಸು ಮಾನವರಿಗಾಗಿ ತನ್ನ ಪರಿಪೂರ್ಣ ಜೀವವನ್ನೇ ಬಿಡುಗಡೆಯ ಬೆಲೆಯಾಗಿ ಕೊಟ್ಟನು. (ಮತ್ತಾಯ 20:28 ಓದಿ.) ಆತನಿಗೆ ಭೂಮಿಯಲ್ಲಿ ಶಾಶ್ವತವಾಗಿ ಬದುಕುವ ಹಕ್ಕು ಇತ್ತು. ಆದ್ರೆ ಆ ಹಕ್ಕನ್ನ ತ್ಯಾಗ ಮಾಡಿದನು. ಹೀಗೆ ಆದಾಮ ಹವ್ವ ಕಳೆದುಕೊಂಡ ಎಲ್ಲವನ್ನ ನಾವು ವಾಪಸ್ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ. ಈ ಏರ್ಪಾಡಿನಿಂದ ಯೆಹೋವ ದೇವರು ಮತ್ತು ಯೇಸು ನಮ್ಮನ್ನ ಎಷ್ಟು ಪ್ರೀತಿಸ್ತಿದ್ದಾರೆ ಅಂತ ಗೊತ್ತಾಗುತ್ತೆ. ಈ ಪಾಠದಲ್ಲಿ, ಯೇಸು ಕೊಟ್ಟ ಪ್ರಾಣ ತ್ಯಾಗದ ಬಗ್ಗೆ ಹೆಚ್ಚನ್ನ ತಿಳಿಯಲಿದ್ದೇವೆ. ಇದು ಯೇಸುವಿನ ಮತ್ತು ಯೆಹೋವನ ಮೇಲಿರೋ ನಮ್ಮ ಗಣ್ಯತೆಯನ್ನ ಜಾಸ್ತಿ ಮಾಡುತ್ತೆ.
1. ಯೇಸು ಜೀವ ಕೊಟ್ಟಿದ್ರಿಂದ ಈಗ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ?
ನಾವೆಲ್ಲರೂ ಪಾಪಿಗಳು. ಹಾಗಾಗಿ ಯೆಹೋವನಿಗೆ ಇಷ್ಟ ಇಲ್ಲದ ತುಂಬ ವಿಷಯಗಳನ್ನ ಮಾಡಿ ಬಿಡುತ್ತೇವೆ. ಆದರೂ ನಮ್ಮ ತಪ್ಪುಗಳಿಗಾಗಿ ಮನಸಾರೆ ಪಶ್ಚಾತ್ತಾಪಪಟ್ಟರೆ, ಅದಕ್ಕಾಗಿ ಯೆಹೋವ ದೇವರಿಗೆ ಯೇಸುವಿನ ಮೂಲಕ ಕ್ಷಮೆ ಕೇಳಿದರೆ, ಅಂಥ ತಪ್ಪುಗಳನ್ನ ಮತ್ತೆ ಮಾಡದೆ ಇರೋಕೆ ನಮ್ಮಿಂದ ಆಗುವ ಎಲ್ಲ ಪ್ರಯತ್ನ ಮಾಡಿದರೆ ಯೆಹೋವನು ನಮ್ಮನ್ನ ಕ್ಷಮಿಸುತ್ತಾನೆ. ಆಗ ನಮಗೆ ಯೆಹೋವನ ಜೊತೆ ಒಳ್ಳೇ ಸ್ನೇಹಸಂಬಂಧ ಇರುತ್ತೆ. (1 ಯೋಹಾನ 2:1) “ಅನೀತಿವಂತ ಜನ್ರಿಗೋಸ್ಕರ ಅವ್ರ ಎಲ್ಲ ಪಾಪಗಳು ಹೋಗೋ ತರ ನೀತಿವಂತನಾದ ಕ್ರಿಸ್ತ ಒಂದೇ ಸಲ ಪ್ರಾಣ ಕೊಟ್ಟನು. ನಮ್ಮನ್ನ ದೇವರ ಹತ್ರ ನಡಿಸೋಕೆ ಕ್ರಿಸ್ತ ಹಾಗೆ ಮಾಡಿದನು” ಅಂತ ಬೈಬಲ್ ಹೇಳುತ್ತೆ.—1 ಪೇತ್ರ 3:18.
2. ಯೇಸು ಜೀವ ಕೊಟ್ಟಿದ್ರಿಂದ ಮುಂದೆ ನಮಗೇನು ಪ್ರಯೋಜನ ಇದೆ?
‘ಯೇಸುವಿನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.’ ಅದಕ್ಕಾಗಿ ಯೆಹೋವನು ಯೇಸುವನ್ನ ಈ ಭೂಮಿಗೆ ಕಳಿಸಿಕೊಟ್ಟನು. (ಯೋಹಾನ 3:16) ಆದಾಮನು ಪಾಪ ಮಾಡಿದ್ರಿಂದ ಆಗಿರುವ ಎಲ್ಲ ಹಾನಿಯನ್ನ, ಯೇಸು ಕೊಟ್ಟ ಬಿಡುಗಡೆಯ ಬೆಲೆಯ ಆಧಾರದ ಮೂಲಕ ಯೆಹೋವನು ಬೇಗನೇ ಸರಿಪಡಿಸುತ್ತಾನೆ. ಯೇಸು ಕೊಟ್ಟ ಬಿಡುಗಡೆ ಬೆಲೆಯಲ್ಲಿ ನಂಬಿಕೆಯಿಟ್ಟರೆ ನಾವು ಪರದೈಸಲ್ಲಿ ಎಂದೆಂದೂ ಖುಷಿಯಾಗಿ ಇರಬಹುದು.—ಯೆಶಾಯ 65:21-23.
ಹೆಚ್ಚನ್ನ ತಿಳಿಯೋಣ
ಯೇಸು ಯಾಕೆ ಜೀವ ಕೊಟ್ಟನು ಮತ್ತು ಅದರಿಂದ ನಮಗೇನು ಪ್ರಯೋಜನ ಇದೆ ಅನ್ನೋದರ ಬಗ್ಗೆ ಹೆಚ್ಚನ್ನ ತಿಳಿಯಿರಿ.
3. ಯೇಸು ಜೀವ ಕೊಟ್ಟಿದ್ರಿಂದ ನಮಗೆ ಪಾಪ ಮತ್ತು ಮರಣದಿಂದ ಬಿಡುಗಡೆ ಸಿಗುತ್ತೆ
ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ದೇವರ ಮಾತನ್ನ ಕೇಳದೆ ಹೋಗಿದ್ರಿಂದ ಆದಾಮ ಏನನ್ನ ಕಳೆದುಕೊಂಡ?
ರೋಮನ್ನರಿಗೆ 5:12 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಆದಾಮನ ಪಾಪದಿಂದ ನಾವೇನು ಅನುಭವಿಸಬೇಕಾಗಿದೆ?
ಯೋಹಾನ 3:16 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವ ದೇವರು ಯಾಕೆ ತನ್ನ ಮಗನನ್ನ ಭೂಮಿಗೆ ಕಳಿಸಿದನು?
ಆದಾಮನು ಪರಿಪೂರ್ಣನಾಗಿದ್ದನು ಆದರೆ ದೇವರ ಮಾತು ಕೇಳದೇ ಹೋಗಿದ್ರಿಂದ ಮಾನವರೆಲ್ಲರೂ ಇವತ್ತು ಪಾಪ ಮತ್ತು ಮರಣವನ್ನ ಅನುಭವಿಸುತ್ತಿದ್ದಾರೆ
ಪರಿಪೂರ್ಣನಾದ ಯೇಸು ದೇವರ ಮಾತನ್ನ ಕೇಳಿದನು. ಇದ್ರಿಂದ ಎಲ್ಲಾ ಮಾನವರು ಪರಿಪೂರ್ಣತೆಯನ್ನ ಮತ್ತು ಶಾಶ್ವತ ಜೀವನವನ್ನ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ
4. ಯೇಸು ಜೀವ ಕೊಟ್ಟಿದ್ರಿಂದ ಎಲ್ಲರಿಗೂ ಪ್ರಯೋಜನ ಇದೆ
ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಒಬ್ಬ ವ್ಯಕ್ತಿಯ ಸಾವಿನಿಂದ ಎಲ್ಲರಿಗೂ ಹೇಗೆ ಪ್ರಯೋಜನ ಸಿಗುತ್ತೆ?
1 ತಿಮೊತಿ 2:6 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಆದಾಮ ಪರಿಪೂರ್ಣನಾಗಿದ್ದನು. ಅವನು ಪಾಪ ಮಾಡಿದ್ರಿಂದ ಎಲ್ಲರೂ ಪಾಪ ಮತ್ತು ಮರಣವನ್ನ ಅನುಭವಿಸುತ್ತಿದ್ದಾರೆ. ಯೇಸು ಕೂಡ ಆದಾಮನ ತರ ಪರಿಪೂರ್ಣನಾಗಿದ್ದನು. ಹಾಗಾಗಿ ಆತನಿಗೆ ಏನು ಕೊಡಲು ಸಾಧ್ಯವಾಯಿತು? ಹೇಗೆ?
5. ಬಿಡುಗಡೆ ಬೆಲೆ: ಯೆಹೋವನು ನಿಮಗೆ ಕೊಟ್ಟ ಉಡುಗೊರೆ
ಯೆಹೋವನ ಜನರೆಲ್ಲರೂ ಬಿಡುಗಡೆ ಬೆಲೆಯನ್ನ ತಮಗೆ ಸಿಕ್ಕಿರುವ ಅಮೂಲ್ಯ ಉಡುಗೊರೆ ಅಂತ ನೆನಸುತ್ತಾರೆ. ಉದಾಹರಣೆಗೆ, ಗಲಾತ್ಯ 2:20 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಅಪೊಸ್ತಲ ಪೌಲ ಬಿಡುಗಡೆ ಬೆಲೆ ತನಗೆ ಸಿಕ್ಕ ಅಮೂಲ್ಯ ಉಡುಗೊರೆ ಅಂತ ಹೇಗೆ ತೋರಿಸಿಕೊಟ್ಟ?
ಆದಾಮ ಪಾಪ ಮಾಡಿದ್ರಿಂದ ಅವನ ಸಂತಾನದವರಾದ ನಾವೆಲ್ಲರೂ ಮರಣವನ್ನ ಅನುಭವಿಸಬೇಕಾಗಿದೆ. ಆದರೆ ಯೇಸು ಜೀವ ಕೊಟ್ಟಿದ್ರಿಂದ ನಾವು ಶಾಶ್ವತ ಜೀವನವನ್ನ ಪಡೆದುಕೊಳ್ಳೋಕೆ ಸಾಧ್ಯವಾಗುತ್ತೆ.
ಯೇಸು ಅನುಭವಿಸಿದ ಕಷ್ಟವನ್ನ ನೋಡಿದಾಗ ಯೆಹೋವ ದೇವರಿಗೆ ಹೇಗನಿಸಿತು ಅನ್ನೋದನ್ನ ಕೆಳಗಿನ ವಚನಗಳನ್ನ ಓದುವಾಗ ಸ್ವಲ್ಪ ಊಹಿಸಿ ನೋಡಿ. ಯೋಹಾನ 19:1-7, 16-18 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವ ಮತ್ತು ಯೇಸು ನಿಮಗಾಗಿ ಮಾಡಿದ ತ್ಯಾಗದ ಬಗ್ಗೆ ನಿಮಗೇನು ಅನಿಸುತ್ತೆ?
ಕೆಲವರು ಹೀಗೆ ಕೇಳಬಹುದು: “ಒಬ್ಬ ವ್ಯಕ್ತಿ ಸತ್ತು ಹೋಗಿದ್ರಿಂದ ಎಲ್ಲರಿಗೂ ಶಾಶ್ವತ ಜೀವ ಹೇಗೆ ಸಿಗುತ್ತೆ?”
ನೀವೇನು ಉತ್ತರ ಕೊಡುತ್ತೀರಾ?
ನಾವೇನು ಕಲಿತ್ವಿ
ಯೇಸುವಿನ ಬಿಡುಗಡೆಯ ಬೆಲೆಯ ಆಧಾರದ ಮೇಲೆ ಯೆಹೋವ ದೇವರು ನಮ್ಮ ತಪ್ಪುಗಳನ್ನ ಕ್ಷಮಿಸುತ್ತಾನೆ. ಅಷ್ಟೇ ಅಲ್ಲ ಇದರಿಂದ ನಮಗೆ ಎಂದೆಂದೂ ಖುಷಿಯಾಗಿ ಬಾಳುವ ಅವಕಾಶನೂ ಸಿಕ್ಕಿದೆ.
ನೆನಪಿದೆಯಾ
ಯೇಸು ಯಾಕೆ ಜೀವಕೊಟ್ಟನು?
ಯೇಸುವಿನ ಪರಿಪೂರ್ಣ ಜೀವ ಹೇಗೆ “ಸರಿಸಮವಾದ ಬಿಡುಗಡೆಯ ಬೆಲೆ” ಆಯಿತು?
ಯೇಸು ಜೀವ ಕೊಟ್ಟಿದ್ರಿಂದ ನಮಗೇನು ಪ್ರಯೋಜನ ಇದೆ?
ಇದನ್ನೂ ನೋಡಿ
ಯೇಸುವಿನ ಪರಿಪೂರ್ಣ ಜೀವವನ್ನ ಬಿಡುಗಡೆಯ ಬೆಲೆ ಅಂತ ಯಾಕೆ ಹೇಳ್ತಾರೆ ಅನ್ನೋದನ್ನ ನೋಡಿ.
“ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?” (jw.org ಲೇಖನ)
ನಾವು ರಕ್ಷಣೆ ಪಡೆಯಬೇಕಾದ್ರೆ ಏನು ಮಾಡಬೇಕು ಅಂತ ತಿಳಿಯಿರಿ.
ನಾವು ಮಾಡುವ ದೊಡ್ಡ ತಪ್ಪುಗಳನ್ನೂ ದೇವರು ಕ್ಷಮಿಸುತ್ತಾನಾ?
ಯೇಸು ಮಾಡಿದ ಪ್ರಾಣ ತ್ಯಾಗದ ಬಗ್ಗೆ ಕಲಿತಿದ್ರಿಂದ ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನ ಹೇಗೆ ಬದಲಾಯಿಸಿಕೊಂಡ ಅಂತ ನೋಡಿ.
a ಪಾಪ ಅನ್ನೋದು ನಾವು ಮಾಡುವ ಕೆಟ್ಟ ಕೆಲಸಗಳನ್ನ ಮಾತ್ರ ಅಲ್ಲ, ಆದಾಮಹವ್ವರಿಂದ ಪಡೆದಿರುವ ಅಪರಿಪೂರ್ಣತೆಯನ್ನೂ ಸೂಚಿಸುತ್ತೆ.
-