ಪರಸ್ಪರ ಹಿತಚಿಂತಕರಾಗಿದ್ದು ಒಬ್ಬರನ್ನೊಬ್ಬರು ಪ್ರೇರೇಪಿಸಿ
“ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ.”—ಇಬ್ರಿ. 10:24.
1, 2. ಎರಡನೇ ಮಹಾಯುದ್ಧದ ನಂತರದ ಸಾವಿನ ನಡಿಗೆಯಿಂದ ಜೀವಂತ ಪಾರಾಗಲು 230 ಯೆಹೋವನ ಸಾಕ್ಷಿಗಳಿಗೆ ಯಾವುದು ಸಹಾಯಮಾಡಿತು?
ಎರಡನೇ ಮಹಾಯುದ್ಧದ ಕೊನೆಯಲ್ಲಿ ನಾಝಿ ಆಳ್ವಿಕೆ ಬಿದ್ದು ಹೋಯಿತು. ನಾಝಿ ಸೆರೆಶಿಬಿರಗಳಲ್ಲಿದ್ದ ಸಾವಿರಾರು ಜನರನ್ನು ಕೊಲ್ಲುವಂತೆ ಆಜ್ಞೆ ಕೊಡಲಾಯಿತು. ಜಾಕ್ಸನ್ಹೌಜನ್ನ ಸೆರೆಶಿಬಿರದಲ್ಲಿದ್ದವರನ್ನು ಬಂದರುಗಳಿಗೆ ಕರೆದುಕೊಂಡು ಹೋಗಿ ಹಡಗುಗಳಲ್ಲಿ ಹತ್ತಿಸಿ ಸಮುದ್ರದಲ್ಲಿ ಮುಳುಗಿಸಿ ಸಾಯಿಸಲಿದ್ದರು. ಸಾವಿನ ನಡಿಗೆಗಳು ಅಥವಾ ಮರಣದ ಪರೇಡ್ಗಳು ಎಂದು ನಂತರ ಹೆಸರಿಸಲಾದ ಯೋಜನೆಯ ಒಂದು ಭಾಗ ಇದು.
2 ಜಾಕ್ಸನ್ಹೌಜನ್ನ ಸೆರೆಶಿಬಿರದಲ್ಲಿದ್ದ ಖೈದಿಗಳಲ್ಲಿ 33,000 ಮಂದಿಯನ್ನು 250 ಕಿ.ಮೀ. ದೂರದ ಜರ್ಮನಿಯ ರೇವು ಪಟ್ಟಣವಾಗಿದ್ದ ಲ್ಯೂಬೆಕ್ಗೆ ನಡೆಸಲಾಯಿತು. ಆ ಗುಂಪಿನಲ್ಲಿ ಆರು ದೇಶಗಳ 230 ಯೆಹೋವನ ಸಾಕ್ಷಿಗಳಿದ್ದರು. ಸಾಕ್ಷಿಗಳೆಲ್ಲರು ಒಟ್ಟಾಗಿ ನಡೆಯುವಂತೆ ಆಜ್ಞೆ ಕೊಡಲಾಗಿತ್ತು. ಹೊಟ್ಟೆಗಿಲ್ಲದೆ, ಕಾಯಿಲೆಯಿಂದ ಎಲ್ಲರೂ ಬಳಲಿ ಹೋಗಿದ್ದರು. ಹಾಗಿದ್ದರೂ ನಮ್ಮ ಸಹೋದರರು ಆ ಸಾವಿನ ನಡಿಗೆಯನ್ನು ಜೀವಂತ ಪಾರಾದರು. ಹೇಗೆ? “ಮುಂದೆ ಸಾಗುತ್ತಾ ಇರುವಂತೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇದ್ವಿ” ಎಂದರು ಅವರಲ್ಲೊಬ್ಬ ಸಹೋದರರು. ಅದರ ಜೊತೆಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ”ಯನ್ನು ದೇವರು ಅವರಿಗೆ ಕೊಟ್ಟನು ಮತ್ತು ಒಬ್ಬರ ಮೇಲೊಬ್ಬರಿಗೆ ಇದ್ದ ಪ್ರೀತಿ ಆ ಕಷ್ಟವನ್ನು ತಾಳಿ ಹೊರಬರಲು ಸಹಾಯ ಮಾಡಿತು.—2 ಕೊರಿಂ. 4:7.
3. ಒಬ್ಬರಿಗೊಬ್ಬರು ನಾವು ಏಕೆ ಉತ್ತೇಜನ ಕೊಡಬೇಕು?
3 ಇಂದು ನಮ್ಮನ್ಯಾರೂ ಸಾವಿನ ನಡಿಗೆಯಲ್ಲಿ ನಡೆಸುತ್ತಾ ಇಲ್ಲ. ಹಾಗಿದ್ದರೂ ಅನೇಕ ಸವಾಲುಗಳು ನಮಗೆ ಎದುರಾಗುತ್ತವೆ. 1914ರಲ್ಲಿ ದೇವರ ರಾಜ್ಯ ಸ್ವರ್ಗದಲ್ಲಿ ಸ್ಥಾಪನೆಯಾದ ನಂತರ ಸೈತಾನನನ್ನು ಭೂಮಿಗೆ ದೊಬ್ಬಿ ಅವನನ್ನು ಭೂಕ್ಷೇತ್ರಕ್ಕೆ ನಿರ್ಬಂಧಿಸಲಾಯಿತು. ಅವನು “ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ” ಇದ್ದಾನೆ. (ಪ್ರಕ. 12:7-9, 12) ಅರ್ಮಗೆದೋನ್ ಹತ್ತಿರವಾದಂತೆ ನಮ್ಮನ್ನು ಆಧ್ಯಾತ್ಮಿಕವಾಗಿ ಬಲಹೀನರನ್ನಾಗಿ ಮಾಡಲು ಕಷ್ಟಗಳನ್ನು ಒತ್ತಡಗಳನ್ನು ನಮ್ಮ ಮೇಲೆ ತರುತ್ತಿದ್ದಾನೆ. ಇದರ ಜೊತೆಗೆ ದಿನದಿನದ ಜಂಜಾಟಗಳು ಸಹ ತಪ್ಪಿದ್ದಲ್ಲ. (ಯೋಬ 14:1; ಪ್ರಸಂ. 2:23) ಕೆಲವೊಂದು ಸಾರಿ ಇವೆಲ್ಲವುಗಳಿಂದ ಎಷ್ಟು ಕುಗ್ಗಿಹೋಗುತ್ತೇವೆಂದರೆ ನಿರುತ್ತೇಜನದಿಂದ ಹೊರಬರಲು, ನಮಗೆ ಸಿಗುವ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬಲವೂ ಸಾಕಾಗಲಿಕ್ಕಿಲ್ಲ. ಒಬ್ಬ ಸಹೋದರರ ಉದಾಹರಣೆ ಗಮನಿಸಿ. ಅನೇಕ ವರ್ಷಗಳ ವರೆಗೆ ಅವರು ಎಷ್ಟೋ ಜನರಿಗೆ ಆಧ್ಯಾತ್ಮಿಕವಾಗಿ ಸಹಾಯಮಾಡಿದ್ದರು. ನಂತರದ ವರ್ಷಗಳಲ್ಲಿ ಅವರಿಗೆ ಮತ್ತವರ ಪತ್ನಿಗೆ ಅನಾರೋಗ್ಯ ಕಾಡಿತು. ಸಹೋದರರಿಗೆ ತುಂಬ ನಿರುತ್ಸಾಹವಾಯಿತು. ಅವರಂತೆ ನಮಗೂ ಸಹ ಕೆಲವೊಮ್ಮೆ ನಿರುತ್ಸಾಹವಾಗಬಹುದು. ಆಗ ಯೆಹೋವನಿಂದ ನಮಗೆ “ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿ” ಬೇಕು. ಒಬ್ಬರಿಂದೊಬ್ಬರಿಗೆ ಉತ್ತೇಜನ ಬೇಕಾಗಬಹುದು.
4. ಇತರರಿಗೆ ನಾವು ಉತ್ತೇಜನದ ಚಿಲುಮೆಯಾಗಿರಬೇಕಾದರೆ ಪೌಲನ ಯಾವ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು?
4 ಇತರರಿಗೆ ನಾವು ಹೇಗೆ ಉತ್ತೇಜನದ ಚಿಲುಮೆಯಾಗಬಲ್ಲೆವು? ಅಪೊಸ್ತಲ ಪೌಲ ಇಬ್ರಿಯದ ಕ್ರೈಸ್ತರಿಗೆ ಹೇಳಿದ ಪ್ರೋತ್ಸಾಹದ ಮಾತನ್ನು ಅನ್ವಯಿಸುವ ಮೂಲಕ. ಅವನು ಹೇಳಿದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡಿರಿ.” (ಇಬ್ರಿ. 10:24, 25) ಈ ಅರ್ಥಭರಿತ ಮಾತುಗಳನ್ನು ಅನ್ವಯಿಸುವುದು ಹೇಗೆಂದು ನೋಡೋಣ.
“ಪರಸ್ಪರ ಹಿತಚಿಂತಕರಾಗಿ”
5. (1) “ಪರಸ್ಪರ ಹಿತಚಿಂತಕರಾಗಿ” ಅನ್ನುವುದರ ಅರ್ಥವೇನು? (2) ಹೀಗೆ ಮಾಡಲು ನಾವು ಏನೆಲ್ಲ ಪ್ರಯತ್ನಮಾಡಬೇಕು?
5 “ಪರಸ್ಪರ ಹಿತಚಿಂತಕರಾಗಿ” ಅಂದರೆ “ಇತರರ ಅಗತ್ಯಗಳ ಕುರಿತು ಚಿಂತಿಸಿ” ಎಂದಾಗಿದೆ. ಸಭೆಯಲ್ಲಿ ನಾವು ಇತರರನ್ನು ಕೇವಲ ವಂದಿಸಿ ಅಥವಾ ಮಾಮೂಲಿಯಾಗಿ ಮಾತಾಡಿದರೆ ಅವರ ಅಗತ್ಯಗಳ ಕುರಿತು ನಮಗೆ ಹೇಗೆ ಗೊತ್ತಾಗುತ್ತೆ? ಅದೇ ಸಮಯದಲ್ಲಿ ನಾವು ‘ಬೇರೆಯವರ ವಿಷಯಗಳಲ್ಲಿ ತಲೆಹಾಕದಿರುವಂತೆ’ ಸಹ ಜಾಗ್ರತೆವಹಿಸಬೇಕು. (1 ಥೆಸ. 4:11; 1 ತಿಮೊ. 5:13) ನಮ್ಮ ಸಹೋದರರನ್ನು ಉತ್ತೇಜಿಸಬೇಕಾದರೆ ಅವರ ಕುರಿತು ಚೆನ್ನಾಗಿ ತಿಳಿದುಕೊಳ್ಳಲೇಬೇಕು. ಅವರ ಜೀವನ ಸನ್ನಿವೇಶ, ಗುಣಗಳು, ಆಧ್ಯಾತ್ಮಿಕ ಸ್ಥಿತಿ, ಸಾಮರ್ಥ್ಯ-ಬಲಹೀನತೆಗಳು ಎಲ್ಲವನ್ನೂ ಅರಿಯಬೇಕು. ಅವರಿಗೆ ನಾವು ಸ್ನೇಹಿತರಂತೆ ಇರಬೇಕು. ಅವರ ಮೇಲೆ ನಮಗೆ ಪ್ರೀತಿಯಿದೆ ಎಂದು ತಿಳಿದುಬರಬೇಕು. ಇಷ್ಟೆಲ್ಲಾ ಮಾಡಲು ನಾವು ಕೇವಲ ಹಾಯ್-ಬಾಯ್ ಹೇಳಿದರೆ ಸಾಕಾಗುತ್ತಾ? ಇಲ್ಲ. ಅವರೊಟ್ಟಿಗೆ ಸಮಯ ಕಳೆಯಬೇಕು. ಅವರು ಸಂಕಟದಲ್ಲಿದ್ದು ಕುಗ್ಗಿಹೋಗಿರುವಾಗ ಮಾತ್ರ ಅಲ್ಲ, ಎಲ್ಲ ಸಮಯಗಳಲ್ಲಿ.—ರೋಮ. 12:13.
6. ಹಿರಿಯರಿಗೆ ತಮ್ಮ ವಶದಲ್ಲಿರುವ ಮಂದೆಯ ‘ಹಿತಚಿಂತನೆ’ ಮಾಡಲು ಯಾವುದು ಸಹಾಯಮಾಡುತ್ತದೆ?
6 ಸಭೆಯಲ್ಲಿರುವ ಹಿರಿಯರಿಗೆ ‘ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಇಚ್ಛಾಪೂರ್ವಕವಾಗಿ, ಸಿದ್ಧಮನಸ್ಸಿನಿಂದ ಪರಿಪಾಲಿಸುವಂತೆ’ ಉತ್ತೇಜಿಸಲಾಗಿದೆ. (1 ಪೇತ್ರ 5:1-3) ಅವರು ಮಂದೆಯನ್ನು ಚೆನ್ನಾಗಿ ಪರಿಚಯ ಮಾಡಿಕೊಳ್ಳದೆ ಪರಿಪಾಲನೆ ಮಾಡಲು ಆಗುತ್ತಾ? (ಜ್ಞಾನೋಕ್ತಿ 27:23 ಓದಿ.) ಹಿರಿಯರು ಜೊತೆವಿಶ್ವಾಸಿಗಳೊಂದಿಗೆ ಬೆರೆಯಲು ತಮ್ಮನ್ನೇ ಲಭ್ಯಗೊಳಿಸಿಕೊಳ್ಳಬೇಕು. ಎಲ್ಲರೊಂದಿಗೆ ಬೆರೆತು ಆನಂದಿಸಬೇಕು. ಹಾಗೆ ಮಾಡುವಲ್ಲಿ ಮಂದೆಯಲ್ಲಿರುವ ಕುರಿಗಳು ಸಹಾಯ ಬೇಕಾದಾಗ ಅವರಾಗಿಯೇ ಕೇಳುತ್ತಾರೆ. ಸಹೋದರ ಸಹೋದರಿಯರು ತಮ್ಮ ಹೃದಯದಲ್ಲಿ ಹುದುಗಿರುವ ಭಾವನೆ-ಬೇಗುದಿಗಳನ್ನು ಹೇಳಲು ಮುಂದಾಗುತ್ತಾರೆ. ಆಗ ಹಿರಿಯರಿಗೆ ಅವರ ‘ಹಿತಚಿಂತಕರಾಗಿರಲು’ ಮತ್ತು ಬೇಕಾದ ಸಹಾಯಮಾಡಲು ಸಾಧ್ಯವಾಗುತ್ತದೆ.
7. ನಿರುತ್ಸಾಹಗೊಂಡ ವ್ಯಕ್ತಿ “ದುಡುಕಿ” ಮಾತಾಡುವಾಗ ನಾವು ಏನನ್ನು ನೆನಪಿಡಬೇಕು?
7 ಥೆಸಲೊನೀಕ ಸಭೆಗೆ ಪೌಲನು ಪತ್ರ ಬರೆದಾಗ ಹೀಗಂದನು: “ಬಲಹೀನರಿಗೆ ಆಧಾರವಾಗಿರಿ.” (1 ಥೆಸಲೊನೀಕ 5:14 ಓದಿ.) ‘ಮನಗುಂದಿದವರು’ ಅಂದರೆ ಖಿನ್ನತೆಯಿರುವವರು ಒಂದರ್ಥದಲ್ಲಿ ತಮ್ಮೆಲ್ಲ ಬಲವನ್ನು ಕಳಕೊಂಡು ಬಲಹೀನರಾಗಿರುತ್ತಾರೆ. ಜ್ಞಾನೋಕ್ತಿ 24:10 ಹೇಳುತ್ತದೆ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” ಬಳಲಿಹೋದ ವ್ಯಕ್ತಿ ಅಂದರೆ ತೀವ್ರವಾಗಿ ನಿರುತ್ಸಾಹಗೊಂಡ ವ್ಯಕ್ತಿ ಕೆಲವೊಮ್ಮೆ “ದುಡುಕಿ” ಮಾತಾಡಬಹುದು. (ಯೋಬ 6:2, 3, ಪವಿತ್ರ ಬೈಬಲ್) ಅವರ ‘ಹಿತಚಿಂತಕರಾಗಿರುವ’ ನಾವು ಅವರೇನು ಮಾತಾಡುತ್ತಾರೊ ಅದು ಅವರ ಹೃದಯದಿಂದ ಬಂದಿರಲಿಕ್ಕಿಲ್ಲ ಎನ್ನುವುದನ್ನು ಮನಸ್ಸಲ್ಲಿಡಬೇಕು. ಸಹೋದರಿ ರಶೆಲ್ರವರ ತಾಯಿ ತೀವ್ರ ಖಿನ್ನತೆಗೆ ಒಳಗಾದಾಗ ಹೀಗೆಯೇ ಆಯಿತು. ರಶೆಲ್ ಹೇಳುತ್ತಾರೆ: “ಅನೇಕ ಸಲ ಮಮ್ಮಿ ತುಂಬ ಕೆಟ್ಟದಾಗಿ ಒರಟಾಗಿ ಮಾತಾಡುತ್ತಾರೆ. ಆ ಸಮಯದಲ್ಲಿ, ಮಮ್ಮಿ ನಿಜವಾಗಿ ಎಷ್ಟು ಒಳ್ಳೆಯವರು ಎನ್ನೋದನ್ನು, ಅವರಲ್ಲಿರುವ ಪ್ರೀತಿ, ದಯೆ, ಉದಾರತೆಯನ್ನು ನನಗೆ ನಾನೇ ನೆನಪಿಸಿಕೊಳ್ಳುತ್ತೇನೆ. ಖಿನ್ನತೆಯಿರುವವರು ದುಡುಕಿ ಏನೇ ಮಾತಾಡಿದರೂ ಆ ರೀತಿ ಯೋಚನೆಮಾಡಿ ಮಾತಾಡಿರಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ. ಅವರನ್ನು ಅರ್ಥಮಾಡಿಕೊಳ್ಳದೆ ಒರಟಾಗಿ ತಿರುಗಿ ಮಾತಾಡುವುದು, ಅಥವಾ ಕೋಪವನ್ನು ತೋರಿಸುವುದು ಸರಿಯಲ್ಲ.” ಜ್ಞಾನೋಕ್ತಿ 19:11 ಹೇಳುತ್ತದೆ: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; ಪರರ ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.”
8. (1) ಮುಖ್ಯವಾಗಿ ಎಂಥವರಿಗೆ ನಾವು ನಮ್ಮ ಪ್ರೀತಿಯನ್ನು ‘ಸ್ಥಿರೀಕರಿಸಬೇಕು’? (2) ಯಾಕೆ?
8 ಯಾರಾದರೊಬ್ಬರು ತಾವು ಮಾಡಿದ್ದ ತಪ್ಪಿಗಾಗಿ ಮನಗುಂದಿ ಹೋಗಿದ್ದಲ್ಲಿ ಅವರ ಕಡೆಗೆ ಹೇಗೆ ‘ಹಿತಚಿಂತನೆ’ ತೋರಿಸೋದು? ಅವರು ತಪ್ಪನ್ನು ತಿದ್ದಲು ಹೆಜ್ಜೆಗಳನ್ನು ತೆಗೆದುಕೊಂಡಿದ್ದರೂ ಮುಜುಗರದಿಂದ ನಿರುತ್ತೇಜನಕ್ಕೆ ಒಳಗಾಗಿರಬಹುದು. ಪಶ್ಚಾತ್ತಾಪಪಟ್ಟ ಕೊರಿಂಥ ಸಭೆಯ ತಪ್ಪಿತಸ್ಥನ ಕುರಿತು ಪೌಲನು ಹಿತಚಿಂತಕನಾಗಿ ಹೀಗೆ ಬರೆದನು: “ನೀವು ಅವನನ್ನು ದಯಾಭಾವದಿಂದ ಕ್ಷಮಿಸಬೇಕು ಮತ್ತು ಸಾಂತ್ವನಗೊಳಿಸಬೇಕು; ಇಲ್ಲವಾದರೆ ಅವನು ವಿಪರೀತವಾಗಿ ದುಃಖಿತನಾಗಿರುವ ಕಾರಣ ಹೇಗೋ ಕಬಳಿಸಲ್ಪಟ್ಟಾನು. ಆದುದರಿಂದ ಅವನ ಕಡೆಗಿರುವ ನಿಮ್ಮ ಪ್ರೀತಿಯನ್ನು ಸ್ಥಿರೀಕರಿಸುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇನೆ.” (2 ಕೊರಿಂ. 2:7, 8) ಪ್ರೀತಿಯನ್ನು “ಸ್ಥಿರೀಕರಿಸು” ಎನ್ನುವುದರ ಅರ್ಥ ನಮ್ಮ ಪ್ರೀತಿಯನ್ನು ತೋರಿಸು, ವ್ಯಕ್ತಪಡಿಸು ಅಥವಾ ರುಜುಪಡಿಸು ಎಂದಾಗಿದೆ. ಒಬ್ಬ ವ್ಯಕ್ತಿಯು ನಾವು ತೋರಿಸುತ್ತಿರುವ ಪ್ರೀತಿಯನ್ನು ಕಾಳಜಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಬಯಸಲು ಆಗಲ್ಲ. ನಮ್ಮ ಪ್ರೀತಿ ನಾವು ನಡೆದುಕೊಳ್ಳುವ ವಿಧದಲ್ಲೂ, ಕ್ರಿಯೆಗಳಲ್ಲೂ ಕಾಣಬೇಕು.
‘ಪ್ರೀತಿಸುವಂತೆ ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸಿ’
9. ‘ಪ್ರೀತಿಸುವಂತೆ, ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸುವುದರ’ ಅರ್ಥವೇನು?
9 “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ” ಎಂದನು ಪೌಲ. ಪ್ರೀತಿಯನ್ನು ವ್ಯಕ್ತಪಡಿಸುವಂತೆ ಮತ್ತು ಸತ್ಕಾರ್ಯಗಳನ್ನು ಮಾಡುವಂತೆ ನಾವು ನಮ್ಮ ಜೊತೆವಿಶ್ವಾಸಿಗಳನ್ನು ಪ್ರೇರೇಪಿಸಬೇಕು. ಬೆಂಕಿಯು ನಂದಿಹೋಗುತ್ತಿರುವಾಗ ಅದು ಪುನಃ ಉರಿಯಬೇಕಾದರೆ ಕೆಂಡಗಳನ್ನು ಕೆದಕಿ ಗಾಳಿಯನ್ನು ಊದಬೇಕು. (2 ತಿಮೊ. 1:6) ಹಾಗೆಯೇ, ದೇವರಲ್ಲಿ ಮತ್ತು ನೆರೆಹೊರೆಯವರಲ್ಲಿ ತಮಗಿರುವ ಪ್ರೀತಿಯನ್ನು ತೋರಿಸುವಂತೆ ನಮ್ಮ ಸಹೋದರರನ್ನು ಪ್ರಚೋದಿಸಬೇಕು. ಸತ್ಕಾರ್ಯಗಳನ್ನು ಮಾಡುವಂತೆ ಇತರರನ್ನು ಪ್ರೇರೇಪಿಸಲು ಯಥಾರ್ಥ ಪ್ರಶಂಸೆ ಅತ್ಯಾವಶ್ಯಕ.
10, 11. (1) ನಮ್ಮಲ್ಲಿ ಯಾರಿಗೆಲ್ಲ ಪ್ರಶಂಸೆಯ ಅಗತ್ಯ ಇದೆ? (2) ಶ್ಲಾಘಿಸುವುದರಿಂದ ‘ತಪ್ಪುಹೆಜ್ಜೆ ತೆಗೆದುಕೊಂಡವರಿಗೆ’ ಹೇಗೆ ಸಹಾಯವಾಗುತ್ತದೆ ಎಂಬುದಕ್ಕೆ ಉದಾಹರಣೆ ಕೊಡಿ.
10 ನಮಗೆ ನಿರುತ್ತೇಜನವಾಗಿರಲಿ ಇಲ್ಲದಿರಲಿ ನಮ್ಮೆಲ್ಲರಿಗೆ ಇತರರಿಂದ ಶಭಾಸ್ ಅನಿಸಿಕೊಳ್ಳಬೇಕು ಅಂತ ಬಯಕೆ. ಒಬ್ಬ ಹಿರಿಯರು ಬರೆಯುತ್ತಾರೆ, “ನಮ್ಮ ಅಪ್ಪ ಒಂದು ಸಾರಿ ಕೂಡ ನಾನು ಮಾಡಿದ ಕೆಲಸ ಚೆನ್ನಾಗಿತ್ತೆಂದು ಹೇಳಲಿಲ್ಲ. ಹಾಗಾಗಿ ನಾನು ಆತ್ಮವಿಶ್ವಾಸ ಕಳಕೊಂಡುಬಿಟ್ಟೆ. ನಾನು ಮಾಡಿದ್ದೆಲ್ಲವೂ ತಪ್ಪೇ ಎಂದು ನನಗೆ ಅನಿಸುತ್ತಿತ್ತು. . . . ನನಗೀಗ 50 ವರ್ಷ. ಆದರೂ ನನ್ನ ಸ್ನೇಹಿತರು ನನಗೆ ‘ನೀನು ಹಿರಿಯನಾಗಿ ಚೆನ್ನಾಗಿ ಕೆಲಸಮಾಡ್ತಾ ಇದ್ದೀಯ’ ಅಂತ ಹೇಳಿದಾಗೆಲ್ಲ ಖುಷಿ ಆಗುತ್ತೆ. . . . ಇತರರನ್ನು ಪ್ರೋತ್ಸಾಹಿಸುವುದು ಎಷ್ಟು ಮುಖ್ಯ ಎಂದು ನನ್ನ ಅನುಭವವೇ ನನಗೆ ಕಲಿಸಿಕೊಟ್ಟಿದೆ. ಆದ್ದರಿಂದ ಇತರರನ್ನು ಉತ್ತೇಜಿಸಲು ಸಾಮಾನ್ಯವಾಗಿ ಮಾಡುವುದಕ್ಕಿಂತ ಹೆಚ್ಚು ಶ್ರಮವಹಿಸುತ್ತೇನೆ.” ಹೌದು, ಪ್ರಶಂಸೆ ಎಲ್ಲರ ಉತ್ಸಾಹವನ್ನು ಬಡಿದೆಬ್ಬಿಸಬಲ್ಲದು. ಅವರು ಪಯನೀಯರರೇ ಆಗಿರಲಿ, ವಯಸ್ಸಾದವರೇ ಆಗಿರಲಿ, ನಿರುತ್ಸಾಹಗೊಂಡವರೇ ಆಗಿರಲಿ!—ರೋಮ. 12:10.
11 ‘ತಪ್ಪುಹೆಜ್ಜೆ ತೆಗೆದುಕೊಂಡ ಒಬ್ಬನನ್ನು, ಆಧ್ಯಾತ್ಮಿಕ ಅರ್ಹತೆಯಿರುವವರು ಸೌಮ್ಯಭಾವದಿಂದ ಸರಿಹೊಂದಿಸಲು ಪ್ರಯತ್ನಿಸುವಾಗ’ ಪ್ರೀತಿಯಿಂದ ಸಲಹೆ ನೀಡಬೇಕು ಮತ್ತು ಅರ್ಥಭರಿತವಾಗಿ ಪ್ರಶಂಸಿಸಬೇಕು. ಆಗ ಆ ತಪ್ಪಿತಸ್ಥನು ಸತ್ಕಾರ್ಯಗಳನ್ನು ಮತ್ತೆ ಮಾಡುವಂತೆ ಪ್ರೇರೇಪಿಸಲ್ಪಡುತ್ತಾನೆ. (ಗಲಾ. 6:1) ಮಿರ್ಯಮ್ ಅನ್ನುವ ಸಹೋದರಿಯ ವಿಷಯದಲ್ಲಿ ಇದು ನಿಜವಾಯ್ತು. ಆಕೆ ಬರೆಯುತ್ತಾರೆ: “ನನ್ನ ಆಪ್ತ ಸ್ನೇಹಿತರು ಸತ್ಯ ಬಿಟ್ಟುಹೋದರು. ಅದೇ ಸಮಯದಲ್ಲಿ ನನ್ನ ಅಪ್ಪ ಮಿದುಳಿನ ರಕ್ತಸ್ರಾವದಿಂದ ಬಳಲಿದರು. ಆಕಾಶವೇ ಕಳಚಿ ನನ್ನ ಮೇಲೆ ಬಿದ್ದಂತೆ ಅನಿಸಿತು. ಕಡು ಖಿನ್ನತೆಗೊಳಗಾದೆ. ಖಿನ್ನತೆಯಿಂದ ಹೊರಬರಲು ಹೊರಗಿನ ಹುಡುಗನೊಟ್ಟಿಗೆ ಸುತ್ತಾಡತೊಡಗಿದೆ.” ಹೀಗೆ ಮಾಡಿದ್ದರಿಂದ, ತಾನಿನ್ನು ಯೆಹೋವನ ಪ್ರೀತಿಗೆ ಅರ್ಹಳಲ್ಲ ಎಂದವಳಿಗೆ ಅನಿಸತೊಡಗಿತು. ಹಾಗಾಗಿ ಸತ್ಯ ಬಿಟ್ಟುಹೋಗುವ ಮನಸ್ಸುಮಾಡಿದಳು. ಆದರೆ ಒಬ್ಬ ಹಿರಿಯನು, ಅವಳು ಈ ಹಿಂದೆ ನಂಬಿಗಸ್ತಿಕೆಯಿಂದ ಸೇವೆ ಮಾಡಿದ್ದನ್ನು ನೆನಪಿಗೆ ತಂದಾಗ ಅದು ಅವಳ ಭಾವನೆಗಳನ್ನು ಸ್ಪರ್ಶಿಸಿತು. ಯೆಹೋವನು ಅವಳನ್ನು ಇನ್ನೂ ಪ್ರೀತಿಸುತ್ತಿದ್ದಾನೆ ಎಂದು ಹಿರಿಯರು ಅವಳಲ್ಲಿ ಭರವಸೆ ತುಂಬಿದರು. ಪ್ರತಿಯಾಗಿ ದೇವರ ಮೇಲೆ ಅವಳ ಪ್ರೀತಿ ಮತ್ತೆ ಚಿಗುರಿತು. ಆ ಹುಡುಗನೊಟ್ಟಿಗಿನ ಸಂಬಂಧ ಕಡಿದುಹಾಕಿ ಯೆಹೋವನಿಗೆ ಸೇವೆಸಲ್ಲಿಸುವುದನ್ನು ಮುಂದುವರಿಸಿದಳು.
12. ಟೀಕಿಸುವುದು, ಮುಜುಗರ ಬರಿಸುವುದು, ತಪ್ಪುಮಾಡುತ್ತಿದ್ದೇನೆ ಅಂದುಕೊಳ್ಳುವಂತೆ ಮಾಡುವುದು ಇತರರನ್ನು ಉತ್ತೇಜಿಸುತ್ತದಾ?
12 ಒಬ್ಬ ವ್ಯಕ್ತಿಯನ್ನು ಪ್ರೇರೇಪಿಸುವಾಗಲೂ ಜಾಗ್ರತೆವಹಿಸಿ. ಇತರರೊಂದಿಗೆ ಹೋಲಿಸುತ್ತಾ ಅವನಲ್ಲಿ ಮುಜುಗರ ಬರಿಸಬೇಡಿ. ನೀವು ನೆನಸಿದಂತೆ ಮಾಡದೆ ಇರುವುದಕ್ಕಾಗಿ ಟೀಕಿಸಬೇಡಿ. ಅವನಿಂದ ಹೆಚ್ಚನ್ನು ಮಾಡಲು ಆಗುತ್ತಿಲ್ಲವೆಂದು ಪರಿತಪಿಸುವಂತೆ ಮಾಡಬೇಡಿ. ಏಕೆಂದರೆ ಹಾಗೆ ಮಾಡಿದಾಗ ಅವನೇನೋ ಸ್ವಲ್ಪ ಹೆಚ್ಚು ಹುರುಪು ತೋರಿಸಬಹುದು. ಆದರೆ ಸ್ವಲ್ಪ ಸಮಯದ ನಂತರ ಯಥಾಸ್ಥಿತಿಗೆ ಬರಬಹುದು. ಹಾಗಾಗಿ ಜೊತೆವಿಶ್ವಾಸಿಗಳನ್ನು ಪ್ರಶಂಸಿಸಿ. ದೇವರ ಮೇಲೆ ಪ್ರೀತಿ ಇರುವ ಕಾರಣದಿಂದಲೇ ನಾವಾತನ ಸೇವೆಯನ್ನು ಹೆಚ್ಚು ಮಾಡಲು ಬಯಸುತ್ತೇವೆ ಎಂದು ಮನಗಾಣಿಸಿ. ಆಗ ಅದು ಒಳ್ಳೆ ಪರಿಣಾಮ ತರುತ್ತದೆ.—ಫಿಲಿಪ್ಪಿ 2:1-4 ಓದಿ.
‘ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ’
13. ಇತರರನ್ನು ಪ್ರೋತ್ಸಾಹಿಸುವುದರಲ್ಲಿ ಏನೆಲ್ಲ ಸೇರಿದೆ? (ಶೀರ್ಷಿಕೆಯ ಪಕ್ಕದ ಚಿತ್ರ ನೋಡಿ.)
13 ನಾವು ‘ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೋಡುವಾಗ ಒಬ್ಬರನ್ನೊಬ್ಬರು ಇನ್ನಷ್ಟು ಹೆಚ್ಚು ಪ್ರೋತ್ಸಾಹಿಸಬೇಕು.’ ಪ್ರೋತ್ಸಾಹಿಸುವುದು ಎಂದರೆ ದೇವರ ಸೇವೆಯನ್ನು ಮಾಡುತ್ತಾ ಇರುವಂತೆ ಇತರರನ್ನು ಪ್ರಚೋದಿಸುವುದಾಗಿದೆ. ಪ್ರೀತಿಸುವಂತೆ, ಸತ್ಕಾರ್ಯಗಳನ್ನು ಮಾಡುವಂತೆ ಒಬ್ಬರನ್ನೊಬ್ಬರು ಪ್ರೇರೇಪಿಸುವುದು ನಂದಿಹೋಗುತ್ತಿರುವ ಬೆಂಕಿಯನ್ನು ಮತ್ತೆ ಉರಿಯುವಂತೆ ಮಾಡುವುದಕ್ಕೆ ಸಮ. ಹಾಗೆಯೇ ಪ್ರೋತ್ಸಾಹಿಸುವುದು ಬೆಂಕಿಯು ಉರಿಯುತ್ತಾ ಇರಲು ಅಥವಾ ಇನ್ನೂ ಚೆನ್ನಾಗಿ ಪ್ರಜ್ವಲಿಸಲು ಇಂಧನವನ್ನು ಸುರಿದಂತೆ. ಪ್ರೋತ್ಸಾಹಿಸುವುದರಲ್ಲಿ, ಕುಗ್ಗಿಹೋಗಿರುವ ವ್ಯಕ್ತಿಯನ್ನು ಬಲಪಡಿಸುವುದು ಸಂತೈಸುವುದು ಸೇರಿದೆ. ಖಿನ್ನನಾಗಿರುವ ಒಬ್ಬ ವ್ಯಕ್ತಿಯನ್ನು ಪ್ರೋತ್ಸಾಹಿಸುವಾಗ ಪ್ರೀತಿಯಿಂದ ಸ್ನೇಹಭಾವದಿಂದ ಮಾತಾಡಿಸಬೇಕು. (ಜ್ಞಾನೋ. 12:18) ಎಲ್ಲದಕ್ಕಿಂತ ಹೆಚ್ಚಾಗಿ “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಬೇಕು. (ಯಾಕೋ. 1:19) ಅವರ ನೋವನ್ನು ನಮ್ಮ ನೋವೆಂಬಂತೆ ಸಹಾನುಭೂತಿಯಿಂದ ಆಲಿಸಿದರೆ ಯಾವ ವಿಷಯ ಅವರನ್ನು ಕುಗ್ಗಿಸಿದೆ ಎಂದು ತಿಳಿಯಲು ಆಗಬಹುದು. ಮತ್ತವರಿಗೆ ನೆರವಾಗುವ ಮಾತುಗಳನ್ನಾಡಲು ಸಾಧ್ಯವಾಗಬಹುದು.
14. ನಿರುತ್ತೇಜನಗೊಂಡ ಒಬ್ಬ ಸಹೋದರನಿಗೆ ನೆರವು ಹೇಗೆ ಸಿಕ್ಕಿತು?
14 ಹಲವಾರು ವರ್ಷಗಳಿಂದ ನಿಷ್ಕ್ರಿಯನಾಗಿದ್ದ ಸಹೋದರನಿಗೆ ಅನುಕಂಪಭರಿತ ಹಿರಿಯನು ಸಹಾಯ ಮಾಡಲು ಹೇಗೆ ಸಾಧ್ಯವಾಯಿತೆಂದು ಗಮನಿಸಿ. ಆ ಸಹೋದರನು ಹೇಳಿದ್ದನ್ನು ಹಿರಿಯನು ಗಮನಕೊಟ್ಟು ಕೇಳಿಸಿಕೊಂಡಾಗ ಯೆಹೋವ ದೇವರ ಕಡೆಗಿನ ಅವನ ಪ್ರೀತಿ ಇನ್ನೂ ನಂದಿಹೋಗಿಲ್ಲ ಎಂದು ತಿಳಿದುಬಂತು. ಆ ಸಹೋದರನು ಕಾವಲಿನಬುರುಜುವಿನ ಪ್ರತಿ ಸಂಚಿಕೆಯನ್ನು ಒಳ್ಳೆ ರೀತಿಯಲ್ಲಿ ಅಧ್ಯಯನ ಮಾಡುತ್ತಿದ್ದನು, ಎಲ್ಲ ಕೂಟಗಳಿಗೆ ಹಾಜರಾಗಲು ಪ್ರಯತ್ನ ಮಾಡುತ್ತಿದ್ದನು. ಹಾಗಿದ್ದರೂ ಸಭೆಯಲ್ಲಿರುವ ಕೆಲವರು ಮಾಡಿದ್ದು ಅವನನ್ನು ನಿರುತ್ತೇಜನಗೊಳಿಸಿತ್ತು. ಆ ಹಿರಿಯನು ಯಾರದ್ದು ಸರಿ ಯಾರದ್ದು ತಪ್ಪು ಎಂದು ನಿರ್ಣಯಮಾಡದೆ ಅವನ ಮಾತುಗಳನ್ನು ಜಾಗ್ರತೆಯಿಂದ ಆಲಿಸಿದನು. ಸಹೋದರನ ಕಡೆಗೆ ಮತ್ತವನ ಕುಟುಂಬದ ಕಡೆಗೆ ತನ್ನ ಕಾಳಜಿಭರಿತ ಪ್ರೀತಿಯನ್ನು ವ್ಯಕ್ತಪಡಿಸಿದನು. ಕ್ರಮೇಣ ಆ ಸಹೋದರನು, ‘ನಾನು ಆಗಿಹೋದ ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನನ್ನ ಪ್ರೀತಿಯ ತಂದೆಯಾಗಿರುವ ಯೆಹೋವನ ಸೇವೆ ಮಾಡದಂತೆ ನನ್ನನ್ನೇ ತಡೆಯುತ್ತಾ ಇದ್ದೇನೆ’ ಎಂದು ಅರ್ಥಮಾಡಿಕೊಂಡನು. ಹಿರಿಯನು ಆ ಸಹೋದರನನ್ನು ತನ್ನೊಟ್ಟಿಗೆ ಸೇವೆಗೆ ಬರುವಂತೆ ಕೇಳಿಕೊಂಡನು. ಹಿರಿಯನ ನೆರವಿನಿಂದ ಆ ಸಹೋದರನು ಸೇವೆಯಲ್ಲಿ ಭಾಗವಹಿಸಲು ಆರಂಭಿಸಿದನು. ನಂತರ ಮತ್ತೆ ಹಿರಿಯನಾಗಿ ಸೇವೆಸಲ್ಲಿಸಲು ಅರ್ಹನಾದನು.
15. ಮನಗುಂದಿದವರಿಗೆ ಉತ್ತೇಜನ ಕೊಡುವುದರ ಬಗ್ಗೆ ಯೆಹೋವನಿಂದ ನಾವೇನು ಕಲಿಯಬಹುದು?
15 ನಿರುತ್ತೇಜನಗೊಂಡವರು ನಾವು ಕೊಟ್ಟ ನೆರವಿಗೆ ಬೇಗನೆ ಪ್ರತಿಕ್ರಿಯಿಸಿ ಬದಲಾಗಲಿಕ್ಕಿಲ್ಲ. ಅವರಿಗೆ ನಾವು ಬೆಂಬಲ ಕೊಡುತ್ತಲೇ ಇರಬೇಕಾಗಬಹುದು. ಪೌಲ ಹೇಳಿದನು: “ಬಲಹೀನರಿಗೆ ಆಧಾರವಾಗಿಯೇ ಇರಿ, ಎಲ್ಲರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.” (1 ಥೆಸ. 5:14, ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್) ಅವರು ಪ್ರತಿಕ್ರಿಯಿಸುತ್ತಿಲ್ಲ ಅಂತ ಬಿಟ್ಟುಬಿಡುವ ಬದಲು “ಆಧಾರವಾಗಿಯೇ” ಇರಬೇಕು. ಬೆಂಬಲಿಸುತ್ತಲೇ ಇರಬೇಕು. ಯೆಹೋವನು ಸಹ ತನ್ನ ಸೇವಕರು ಆಗಾಗ ನಿರುತ್ತೇಜನಗೊಂಡಾಗ ತಾಳ್ಮೆಯಿಂದ ವ್ಯವಹರಿಸಿದ್ದಾನೆ. ಉದಾಹರಣೆಗೆ, ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡು ಅವನನ್ನು ದಯೆಯಿಂದ ಪರಾಮರಿಸಿದನು. ಪ್ರವಾದಿಯಾಗಿ ಸೇವೆಯಲ್ಲಿ ಮುಂದುವರಿಯಲು ಅಗತ್ಯವಿದ್ದ ಎಲ್ಲವನ್ನು ಒದಗಿಸಿದನು. (1 ಅರ. 19:1-18) ದಾವೀದನು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟದ್ದರಿಂದ ಯೆಹೋವನು ಅವನಿಗೆ ದಯೆತೋರಿಸಿ ಕ್ಷಮಿಸಿದನು. (ಕೀರ್ತ. 51:7, 17) ದೇವರನ್ನು ಆರಾಧಿಸುವುದನ್ನು ಇನ್ನೇನು ಬಿಟ್ಟುಬಿಡುವ ಹಂತಕ್ಕೆ ಬಂದಿದ್ದ ಕೀರ್ತನೆಗಾರನಿಗೆ ಯೆಹೋವನು ನೆರವಾದನು. (ಕೀರ್ತ. 73:13, 16, 17) ನಮ್ಮೊಂದಿಗೂ ಯೆಹೋವನು ಕನಿಕರದಿಂದ ದಯೆಯಿಂದ ವ್ಯವಹರಿಸುತ್ತಾನೆ. ಅದರಲ್ಲೂ ನಾವು ಖಿನ್ನರಾದಾಗ ನಿರುತ್ತೇಜನಗೊಂಡಾಗ ಇನ್ನೂ ಹೆಚ್ಚಾಗಿ ಕಾಳಜಿವಹಿಸುತ್ತಾನೆ. (ವಿಮೋ. 34:6) ಆತನ ಕರುಣೆಯು “ದಿನದಿನವು ಹೊಸಹೊಸದಾಗಿ” ಒದಗಿಬರುತ್ತದೆ. ಅದು ಎಂದಿಗೂ ‘ನಿಂತುಹೋಗದು.’ (ಪ್ರಲಾ. 3:22, 23) ನಾವು ಸಹ ಆತನ ಮಾದರಿಯನ್ನು ಅನುಕರಿಸುತ್ತಾ ಖಿನ್ನರಾಗಿರುವವರೊಂದಿಗೆ ಕೋಮಲವಾಗಿ ನಡೆದುಕೊಳ್ಳಬೇಕೆಂಬುದು ಯೆಹೋವನ ಬಯಕೆ.
ಜೀವಕ್ಕೆ ನಡಿಸುವ ದಾರಿಯಲ್ಲಿಯೇ ಸಾಗಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ
16, 17. (1) ಈ ವ್ಯವಸ್ಥೆಯ ಅಂತ್ಯ ಹತ್ತಿರವಾದಂತೆ ನಮ್ಮ ದೃಢಸಂಕಲ್ಪ ಏನಾಗಿರಬೇಕು? (2) ಏಕೆ?
16 ಜಾಕ್ಸನ್ಹೌಜನ್ನ ಸೆರೆಶಿಬಿರದಿಂದ ಹೊರಟ 33,000 ಖೈದಿಗಳಲ್ಲಿ ಸಾವಿರಾರು ಸತ್ತರು. ಹಾಗಿದ್ದರೂ ಅಂಥ ಗಂಭೀರ ಪರೀಕ್ಷೆಯನ್ನು ಎಲ್ಲ 230 ಯೆಹೋವನ ಸಾಕ್ಷಿಗಳು ಪಾರಾದರು. ಒಬ್ಬರಿಗೊಬ್ಬರು ಕೊಟ್ಟ ಪ್ರೋತ್ಸಾಹ ಮತ್ತು ಬೆಂಬಲ ಆ ಸಾವಿನ ನಡಿಗೆಯಿಂದ ಪಾರಾಗಲು ಅವರಿಗೆ ಸಹಾಯಮಾಡಿತು.
17 ನಾವು “ಜೀವಕ್ಕೆ ನಡಿಸುವ ದಾರಿ”ಯಲ್ಲಿ ಇದ್ದೇವೆ. (ಮತ್ತಾ. 7:14) ಅತಿ ಬೇಗನೆ ಯೆಹೋವನ ಸೇವಕರೆಲ್ಲರೂ ಐಕ್ಯರಾಗಿ ನೀತಿಯ ನೂತನ ಲೋಕಕ್ಕೆ ತಮ್ಮ ಹೆಜ್ಜೆಗಳನ್ನಿಡುವರು. (2 ಪೇತ್ರ 3:13) ನಾವು ನಿತ್ಯಜೀವಕ್ಕೆ ನಡೆಸುವ ದಾರಿಯಲ್ಲಿ ನಡೆಯುತ್ತಿರುವಾಗ ಒಬ್ಬರಿಗೊಬ್ಬರು ನೆರವಾಗುತ್ತಾ ಇರುವ ದೃಢಸಂಕಲ್ಪ ಮಾಡೋಣ.