ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bh ಪು. 215-ಪು. 218 ಪ್ಯಾ. 1
  • 1914—ಬೈಬಲ್‌ ಪ್ರವಾದನೆಯಲ್ಲಿ ಮಹತ್ವಪೂರ್ಣವಾದ ಒಂದು ವರುಷ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1914—ಬೈಬಲ್‌ ಪ್ರವಾದನೆಯಲ್ಲಿ ಮಹತ್ವಪೂರ್ಣವಾದ ಒಂದು ವರುಷ
  • ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಅನುರೂಪ ಮಾಹಿತಿ
  • ದೇವರ ಸರ್ಕಾರ ಈಗ ಆಳ್ವಿಕೆ ಮಾಡ್ತಿದೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
bh ಪು. 215-ಪು. 218 ಪ್ಯಾ. 1

ಪರಿಶಿಷ್ಟ

1914—ಬೈಬಲ್‌ ಪ್ರವಾದನೆಯಲ್ಲಿ ಮಹತ್ವಪೂರ್ಣವಾದ ಒಂದು ವರುಷ

ದಶಕಗಳ ಮುಂಚೆಯೇ ಬೈಬಲ್‌ ವಿದ್ಯಾರ್ಥಿಗಳು 1914ರಲ್ಲಿ ಮಹತ್ವಪೂರ್ಣ ಸಂಭವಗಳು ನಡೆಯುವವೆಂದು ಘೋಷಿಸಿದರು. ಈ ಸಂಭವಗಳಾವುವು ಮತ್ತು 1914ನೇ ಇಸವಿಯು ಅಂತಹ ಪ್ರಮುಖ ವರುಷವೆಂದು ಯಾವ ಸಾಕ್ಷ್ಯವು ತೋರಿಸುತ್ತದೆ?

ಲೂಕ 21:24 ರಲ್ಲಿ ದಾಖಲಿಸಲ್ಪಟ್ಟಿರುವಂತೆ ಯೇಸು ಹೇಳಿದ್ದು: “ಅನ್ಯದೇಶದವರ ಸಮಯಗಳು [“ಅನ್ಯಜನಾಂಗಗಳ ನೇಮಿತ ಸಮಯಗಳು,” NW] ಪೂರೈಸುವ ತನಕ ಯೆರೂಸಲೇಮ್‌ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.” ಯೆರೂಸಲೇಮು ಯೆಹೂದಿ ಜನಾಂಗದ ರಾಜಧಾನಿಯಾಗಿತ್ತು, ರಾಜ ದಾವೀದನ ಮನೆತನದ ಅರಸರ ಆಳ್ವಿಕೆಯ ಪೀಠವಾಗಿತ್ತು. (ಕೀರ್ತನೆ 48:1, 2) ಈ ಅರಸರಾದರೊ ಇತರ ಜನಾಂಗಗಳ ನಾಯಕರ ಮಧ್ಯೆ ಅದ್ವಿತೀಯರಾಗಿದ್ದರು. ಅವರು “ಯೆಹೋವನ ಸಿಂಹಾಸನದಲ್ಲಿ” ಸ್ವತಃ ಆತನ ಪ್ರತಿನಿಧಿಗಳಾಗಿ ಕುಳಿತರು. (1 ಪೂರ್ವಕಾಲವೃತ್ತಾಂತ 29:23) ಹೀಗೆ ಯೆರೂಸಲೇಮು ಯೆಹೋವನ ಆಳ್ವಿಕೆಯ ಪ್ರತೀಕವಾಗಿತ್ತು.

ಆದರೆ ದೇವರ ಆಳ್ವಿಕೆಯು ‘ಅನ್ಯಜನಾಂಗಗಳಿಂದ ತುಳಿದಾಡಲ್ಪಡಲು’ ಆರಂಭವಾದದ್ದು ಹೇಗೆ ಮತ್ತು ಯಾವಾಗ? ಅದು, ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಯೆರೂಸಲೇಮಿನ ಮೇಲೆ ಜಯಗಳಿಸಿದಾಗ ಸಂಭವಿಸಿತು. ಆಗ ‘ಯೆಹೋವನ ಸಿಂಹಾಸನವು’ ಬರಿದಾಗಿ, ದಾವೀದನ ವಂಶಸ್ಥರಾದ ಅರಸರ ಸಾಲಿಗೆ ತಡೆಯುಂಟಾಯಿತು. (2 ಅರಸುಗಳು 25:1-26) ಆದರೆ ಈ ‘ತುಳಿತ’ ಸದಾಕಾಲಕ್ಕೂ ಮುಂದುವರಿಯಲಿತ್ತೊ? ಇಲ್ಲ, ಏಕೆಂದರೆ ಯೆರೂಸಲೇಮಿನ ಕೊನೆಯ ಅರಸನಾಗಿದ್ದ ಚಿದ್ಕೀಯನ ವಿಷಯದಲ್ಲಿ ಯೆಹೆಜ್ಕೇಲನ ಪ್ರವಾದನೆಯು ಹೀಗೆ ತಿಳಿಸಿತ್ತು: “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ಎತ್ತಿಹಾಕು! . . . [ರಾಜ್ಯಕ್ಕೆ] ಬಾಧ್ಯನು ಬರುವದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.” (ಯೆಹೆಜ್ಕೇಲ 21:26, 27) ದಾವೀದನ ಕಿರೀಟಕ್ಕೆ ‘ಬಾಧ್ಯತೆಯ’ ಹಕ್ಕುಳ್ಳವನು ಕ್ರಿಸ್ತ ಯೇಸುವೇ. (ಲೂಕ 1:32, 33) ಹೀಗೆ ಈ ‘ತುಳಿತವು’ ಯೇಸು ರಾಜನಾಗುವಾಗ ಅಂತ್ಯಗೊಳ್ಳಲಿಕ್ಕಿತ್ತು.

ಆ ಮಹತ್ವಪೂರ್ಣ ಸಂಭವವು ಯಾವಾಗ ನಡೆಯಲಿತ್ತು? ಅನ್ಯಜನಾಂಗಗಳು ಒಂದು ನಿಶ್ಚಿತ ಸಮಯಾವಧಿಯ ತನಕ ಆಳುವವೆಂದು ಯೇಸು ತೋರಿಸಿದನು. ಈ ಸಮಯಾವಧಿಯು ಎಷ್ಟು ದೀರ್ಘವಾಗಿರುವುದು ಎಂಬುದನ್ನು ಲೆಕ್ಕಮಾಡಲು ಬೇಕಾಗುವ ಸುಳಿವನ್ನು ದಾನಿಯೇಲ 4ನೆಯ ಅಧ್ಯಾಯದಲ್ಲಿರುವ ವೃತ್ತಾಂತವು ಕೊಡುತ್ತದೆ. ಬಾಬೆಲಿನ ಅರಸ ನೆಬೂಕದ್ನೆಚ್ಚರನಿಗೆ ಬಿದ್ದ ಒಂದು ಪ್ರವಾದನಾತ್ಮಕ ಕನಸನ್ನು ಆ ಅಧ್ಯಾಯವು ತಿಳಿಸುತ್ತದೆ. ಆ ಕನಸಿನಲ್ಲಿ ಅವನು ಕಡಿದುಹಾಕಲ್ಪಟ್ಟಿದ್ದ ಒಂದು ಬಹು ದೊಡ್ಡ ವೃಕ್ಷವನ್ನು ನೋಡಿದನು. ಅದರ ಮೋಟಿಗೆ ಕಬ್ಬಿಣ ಮತ್ತು ತಾಮ್ರದ ಪಟ್ಟೆಗಳು ಬಿಗಿಯಲ್ಪಟ್ಟದ್ದರಿಂದ ಅದಕ್ಕೆ ಬೆಳೆಯುವ ಅವಕಾಶವಿರಲಿಲ್ಲ. “ಅದಕ್ಕೆ ಏಳು ಕಾಲಗಳು ಕಳೆಯಲಿ” ಎಂದನು ಒಬ್ಬ ದೇವದೂತನು.—ದಾನಿಯೇಲ 4:10-16, BSI Reference Edition ಪಾದಟಿಪ್ಪಣಿ.

ಬೈಬಲಿನಲ್ಲಿ ಕೆಲವು ಸಲ ಮರಗಳನ್ನು ಆಳ್ವಿಕೆಗಳನ್ನು ಪ್ರತಿನಿಧಿಸಲು ಉಪಯೋಗಿಸಲಾಗಿದೆ. (ಯೆಹೆಜ್ಕೇಲ 17:22-24; 31:2-5) ಹೀಗೆ ಈ ಸಾಂಕೇತಿಕ ಮರದ ಕಡಿದುಹಾಕುವಿಕೆಯು, ಯೆರೂಸಲೇಮಿನ ಅರಸರು ಪ್ರತಿನಿಧಿಸಿದ ದೇವರ ಆಳ್ವಿಕೆಗೆ ತಡೆಬರುವುದನ್ನು ಸೂಚಿಸಿತು. ಆದರೂ ಯೆರೂಸಲೇಮಿನ ಆ ‘ತುಳಿತವು’ ತಾತ್ಕಾಲಿಕವಾಗಿರುವುದು. ಅದು ‘ಏಳು ಕಾಲಗಳ’ ಒಂದು ಅವಧಿ ಆಗಿರುವುದೆಂದು ದರ್ಶನವು ತಿಳಿಸಿತು. ಈ ಅವಧಿಯು ಎಷ್ಟು ದೀರ್ಘವಾಗಿರುತ್ತದೆ?

ಮೂರೂವರೆ ಕಾಲಗಳು “ಸಾವಿರದ ಇನ್ನೂರ ಅರುವತ್ತು ದಿನ”ಗಳಿಗೆ ಸಮಾನವೆಂದು ಪ್ರಕಟನೆ 12:6, 14 ಸೂಚಿಸುತ್ತದೆ. ಹಾಗಾದರೆ “ಏಳು ಕಾಲಗಳು” ಇದರ ಇಮ್ಮಡಿಯಷ್ಟು ಅಂದರೆ, 2,520 ದಿನಗಳಷ್ಟು ದೀರ್ಘವಾಗಿರುವವು. ಆದರೆ ಅನ್ಯಜನಾಂಗಗಳು ದೇವರ ಆಳ್ವಿಕೆಯ ಮೇಲಿನ ‘ತುಳಿತ’ವನ್ನು ಯೆರೂಸಲೇಮಿನ ಪತನದಿಂದ ಹಿಡಿದು ಕೇವಲ 2,520 ದಿನಗಳಲ್ಲಿ ನಿಲ್ಲಿಸಲಿಲ್ಲ. ಹೀಗಿರುವುದರಿಂದ, ಈ ಪ್ರವಾದನೆಯು ಎಷ್ಟೋ ಹೆಚ್ಚು ಕಾಲಾವಧಿಯನ್ನು ಆವರಿಸುತ್ತದೆಂಬುದು ಸುವ್ಯಕ್ತ. ಅರಣ್ಯಕಾಂಡ 14:34 ಮತ್ತು ಯೆಹೆಜ್ಕೇಲ 4:6 ರಲ್ಲಿ ‘ಒಂದು ದಿನಕ್ಕೆ ಒಂದು ವರುಷ’ (NIBV) ಎಂದು ಹೇಳಲ್ಪಟ್ಟಿರುವ ಆಧಾರದ ಮೇರೆಗೆ, “ಏಳು ಕಾಲಗಳು” 2,520 ವರುಷಗಳನ್ನು ಆವರಿಸುವವು.

ಈ 2,520 ವರುಷಗಳು, ಸಾ.ಶ.ಪೂ. 607ರ ಅಕ್ಟೋಬರ್‌ನಲ್ಲಿ ಯೆರೂಸಲೇಮ್‌ ಬಾಬೆಲಿನವರಿಂದ ಸೋಲಿಸಲ್ಪಟ್ಟು ದಾವೀದನ ವಂಶಸ್ಥನಾದ ಅರಸನು ಸಿಂಹಾಸನದಿಂದ ದೊಬ್ಬಲ್ಪಟ್ಟಾಗ ಆರಂಭಗೊಂಡವು. ಆ ಅವಧಿಯು 1914ರ ಅಕ್ಟೋಬರ್‌ನಲ್ಲಿ ಅಂತ್ಯಗೊಂಡಿತು. ಆ ಸಮಯದಲ್ಲಿ “ಅನ್ಯಜನಾಂಗಗಳ ನೇಮಿತ ಸಮಯಗಳು” ಅಂತ್ಯಗೊಂಡವು ಮತ್ತು ಯೇಸು ಕ್ರಿಸ್ತನನ್ನು ದೇವರ ಸ್ವರ್ಗೀಯ ಅರಸನಾಗಿ ಪಟ್ಟಕ್ಕೇರಿಸಲಾಯಿತು.a—ಕೀರ್ತನೆ 2:1-6; ದಾನಿಯೇಲ 7:13, 14.

ಯೇಸು ಮುಂತಿಳಿಸಿದಂತೆ, ಸ್ವರ್ಗೀಯ ಅರಸನಾಗಿ ಅವನ ‘ಪ್ರತ್ಯಕ್ಷತೆಯು,’ ಗಮನಾರ್ಹ ಲೋಕಸಂಭವಗಳಾದ ಯುದ್ಧ, ಕ್ಷಾಮ, ಭೂಕಂಪ ಮತ್ತು ಅಂಟುರೋಗಗಳಿಂದ ಗುರುತಿಸಲ್ಪಟ್ಟಿದೆ. (ಮತ್ತಾಯ 24:3-8; ಲೂಕ 21:11) ಅಂತಹ ಘಟನೆಗಳು, 1914 ನಿಶ್ಚಯವಾಗಿಯೂ ದೇವರ ಸ್ವರ್ಗೀಯ ರಾಜ್ಯದ ಜನನ ಮತ್ತು ಈ ದುಷ್ಟ ವ್ಯವಸ್ಥೆಯ “ಕಡೇ ದಿವಸಗಳ” ಆರಂಭವಾಗಿತ್ತು ಎಂಬ ನಿಜತ್ವಕ್ಕೆ ಬಲವಾದ ಸಾಕ್ಷ್ಯವನ್ನು ಕೊಡುತ್ತವೆ.—2 ತಿಮೊಥೆಯ 3:1-5.

ಚಾರ್ಟ್‌: ಏಳು ಕಾಲಗಳು ಅಥವಾ ಅನ್ಯಜನಾಂಗಗಳ ಸಮಯಗಳು ಯೆರೂಸಲೇಮ್‌ ನಾಶನವಾದಾಗ ಆರಂಭಗೊಂಡು 2,520 ವರ್ಷಗಳ ನಂತರ ಅಂದರೆ 1914ರ ಅಕ್ಟೋಬರ್‌ನಲ್ಲಿ ಕೊನೆಗೊಂಡವು

a ಸಾ.ಶ.ಪೂ. 607ರ ಅಕ್ಟೋಬರ್‌ನಿಂದ ಸಾ.ಶ.ಪೂ. 1ರ ಅಕ್ಟೋಬರ್‌ ತನಕ 606 ವರುಷಗಳು. ಸೊನ್ನೆ ವರುಷ ಇಲ್ಲದಿರುವುದರಿಂದ ಸಾ.ಶ.ಪೂ. 1ರ ಅಕ್ಟೋಬರ್‌ನಿಂದ ಹಿಡಿದು ಸಾ.ಶ. 1914ರ ಅಕ್ಟೋಬರ್‌ ತನಕ 1,914 ವರುಷಗಳು. ಈಗ ಆ 606 ವರುಷಗಳನ್ನು ಮತ್ತು 1,914 ವರುಷಗಳನ್ನು ಕೂಡಿಸುವಲ್ಲಿ, ನಮಗೆ 2,520 ವರುಷಗಳು ದೊರೆಯುತ್ತವೆ. ಸಾ.ಶ.ಪೂ. 607ರಲ್ಲಾದ ಯೆರೂಸಲೇಮಿನ ಪತನದ ಕುರಿತಾದ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಎಂಬ ಸಂಪುಟದಲ್ಲಿ “ಕಾಲಗಣನ ಶಾಸ್ತ್ರ” ಎಂಬ ಶೀರ್ಷಿಕೆಯ ಕೆಳಗಿನ ಲೇಖನವನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ