ಡೊಮಿನಿಕನ್ ರಿಪಬ್ಲಿಕ್—ಸಂಶೋಧನೆಗೆ ಇನ್ನೂ ತೆರೆದಿದೆ
ಬರಿಯ ಯುವಕನೋಪಾದಿ, ಕ್ರಿಸ್ಟಫರ್ ಕೊಲಂಬಸ್ ಸಮುದ್ರದಲ್ಲಿ ಕೈಕೊಂಡ ಒಂದು ಜೀವನವು ಕಟ್ಟಕಡೆಗೆ ಅವನನ್ನು ಇಂದು ವೆಸ್ಟ್ ಇಂಡೀಸ್ ಎಂದು ಜ್ಞಾತವಾಗಿರುವ ದ್ವೀಪಸ್ತೋಮದ ಸಂಶೋಧನೆಗೆ ನಡಿಸಿತು. ದಶಂಬರ 1492 ರಲ್ಲಿ, ಅವನ ಮುಖ್ಯ ಹಡಗವಾದ ಸ್ಯಾಂಟ ಮರೀಯ, ಇಂದು ಹಿಸ್ಪಾನಿಯೋಲ ದ್ವೀಪವಾಗಿ ಜ್ಞಾತವಾಗಿದ್ದು ಹೈಟಿ ಮತ್ತು ಡೊಮಿನಿಕನ್ ರಿಪಬ್ಲಿಕ್ನಿಂದ ಹಂಚಿಕೊಳ್ಳಲ್ಪಟ್ಟಿರುವ ಎಸ್ಪನೋಲ ದ್ವೀಪದ ಉತ್ತರ ಕಿನಾರೆಯಾಚೆ ಆಳವಿಲ್ಲದ ನೀರಿನಲ್ಲಿ ನೆಲಹತ್ತಿತು. ಅಲ್ಲಿ ಕೊಲಂಬಸನು ಮೊದಲನೆಯ ಯೂರೋಪಿಯನ್ ವಸಾಹತನ್ನು, ತರ್ವೆಯಾಗಿ ಕಟ್ಟಲ್ಪಟ್ಟ ಒಂದು ಕೋಟೆಯನ್ನು ಸ್ಥಾಪಿಸಿ, ಅದಕ್ಕೆ ಲಾ ನವೀದಾದ್ ಎಂಬ ಹೆಸರಿಟ್ಟನು. ಈ ದ್ವೀಪವು ಅವನ ಅಧಿಕ ಅನ್ವೇಷಣೆಗಳ ಕೇಂದ್ರವಾಯಿತು.
ಆ ದ್ವೀಪವು ಗಮನಾರ್ಹವಾಗಿ ಸುಂದರರೂ, ನಂಬಲರ್ಹರೂ, ಉದಾರಿಗಳೂ ಆದ ಜನರಾದ ಟೈನೊ ಇಂಡಿಯನರಿಂದ ನಿವಾಸಿಸಲ್ಪಟ್ಟಿರುವುದನ್ನು ಕೊಲಂಬಸನು ಕಂಡುಹಿಡಿದನು. ಆ ಸಮಯದಲ್ಲಿ ಅಲ್ಲಿ ಸುಮಾರು 1,00,000 ಮಂದಿ ಇದ್ದರು. ಆದರೆ ಯಾರ ಮುಖ್ಯಾಸಕ್ತಿಯು ಚಿನ್ನ ಹುಡುಕುವುದಾಗಿತ್ತೊ ಆ ಆಕ್ರಮಣಗಾರರ ಕ್ರೂರ ಉಪಚಾರದ ಕೆಳಗೆ ಈ ನಾಡಿಗರ ಜನಸಂಖ್ಯೆಯು ತೀವ್ರವಾಗಿ ಕುಸಿಯಿತು. 1570 ರೊಳಗೆ ಸುಮಾರು 500 ಟೈನೊ ಇಂಡಿಯನರು ಮಾತ್ರ ಉಳಿದಿದ್ದರೆಂದು ವರದಿಸಲ್ಪಟ್ಟಿತು.
ಇಂದು ಡೊಮಿನಿಕನ್ ರಿಪಬ್ಲಿಕ್, ಯಾರ ಪೂರ್ವಜರು ಇಲ್ಲಿ ವಲಸೆಬಂದರೊ ಆ ಅನೇಕ ಕುಲಗಳ ಮತ್ತು ವರ್ಣಗಳ ಜನರಿಂದ ತುಂಬಿರುತ್ತದೆ. ಹಾಗಿದ್ದರೂ, ಅವರು ಮೂಲತಃ ಸ್ನೇಹಪರರೂ ಇದದ್ದರಲ್ಲಿ ತೃಪ್ತರೂ ಆಗಿದ್ದು, ಟೈನೊ ಇಂಡಿಯನರ ಉತ್ತಮ ಗುಣಗಳಲ್ಲಿ ಹೆಚ್ಚನ್ನು ಹೊಂದಿರುವಂತೆ ಕಾಣುತ್ತಾರೆ. ಇದು ಮತ್ತು ಇದರ ಜೊತೆಗೆ ದೇವರಲ್ಲಿ ಪ್ರಾಮಾಣಿಕ ನಂಬಿಕೆ ಮತ್ತು ಬೈಬಲಿಗೆ ಗೌರವವು, ಈ ದೇಶದಲ್ಲಿ ಯೆಹೋವನ ಸಾಕ್ಷಿಗಳ ಸಾರುವ ಮತ್ತು ಕಲಿಸುವ ಕಾರ್ಯವನ್ನು ಗಮನಾರ್ಹವಾಗಿ ಯಶಸ್ವಿಯನ್ನಾಗಿ ಮಾಡಿದೆ.
ಇನ್ನೊಂದು ವಿಧದ ಸಂಶೋಧನೆ
ವಾಚ್ ಟವರ್ ಸೊಸೈಟಿಯ ಮೊದಲನೆಯ ಮಿಷನೆರಿಗಳಾದ ಲೆನರ್ಟ್ ಮತ್ತು ವರ್ಜೀನಿಯ ಜಾನ್ಸನ್, ಡೊಮಿನಿಕನ್ ರಿಪಬ್ಲಿಕ್ಗೆ ಆಗಮಿಸಿದ್ದು ಸರ್ವಾಧಿಕಾರಿ ಟ್ರುಜಿಲೊರವರ ಕಾಲದಲ್ಲಿ. ಅವರ ಸಂತೋಷಕ್ಕೆ, ಅನೇಕರು ಅವರ ಬೈಬಲ್ ಸಂದೇಶಕ್ಕೆ ಬೇಗನೆ ಮತ್ತು ಸಕಾರಾತ್ಮವಾಗಿ ಪ್ರತಿವರ್ತನೆ ತೋರಿಸುವುದನ್ನು ಅವರು ಕಂಡುಕೊಂಡರು. ಆದರೆ ಇದು ಅಧಿಕಾರಿಗಳಿಗೆ ಮತ್ತು ಅವರ ಧಾರ್ಮಿಕ ಸಲಹೆಗಾರರಿಗೆ ಮೆಚ್ಚಿಕೆಯಾಗಲಿಲ್ಲ. ಹಿಂಸೆಯ ಅಲೆಯು ಶೀಘ್ರವೆ ತಲೆದೋರಿತು, ಮತ್ತು ಆ ಆರಂಭಿಕ ಡೊಮಿನಿಕನ್ ಸಾಕ್ಷಿಗಳ ನಂಬಿಕೆಯು ಉಗ್ರ ಪರೀಕೆಗ್ಷಳಿಗೆ ಗುರಿಯಾಯಿತು. ಮರಣದ ವರೆಗೂ ಅವರ ನಂಬಿಕೆ ಮತ್ತು ನಿಷ್ಠೆಯ ಕುರಿತು ಈ ದಿನಗಳ ತನಕ ಆಗಿಂದಾಗ್ಗೆ ಮಾತಾಡಲ್ಪಡುತ್ತದೆ.
ದೇಶದಲ್ಲಿ ಈಗ ಸುಮಾರು 16,000 ಸಂಖ್ಯೆಯಲ್ಲಿರುವ ಯೆಹೋವನ ಸಾಕ್ಷಿಗಳು ಇಲ್ಲಿ ಪ್ರಖ್ಯಾತರು. ಕೆಲವು ಸಮಯದ ಹಿಂದೆ, ಐದು ಟೆಲಿವಿಷನ್ ಕೇಂದ್ರಗಳು, ಜೆಹೋವಸ್ ವಿಟ್ನೆಸಸ್—ದ ಆರ್ಗನೈಜೇಷನ್ ಬಿಹೈಂಡ್ ದ ನೇಮ್a ಎಂಬ ವೀಡಿಯೊವನ್ನು ದೇಶವಿಡೀ ಪ್ರಸಾರಮಾಡಿದವು.
ಇದು ಯೆಹೋವನ ಸಾಕ್ಷಿಗಳ ಕಾರ್ಯಕ್ಕೆ ದೊಡ್ಡ ಪಟ್ಟಣಗಳಲ್ಲಿ ಮಾತ್ರವಲ್ಲ ಚಿಕ್ಕ ಊರುಗಳಲ್ಲಿ ಮತ್ತು ಕೆಲವು ಗ್ರಾಮೀಣ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಪ್ರಸಿದ್ಧಿಯನ್ನು ಕೊಟ್ಟಿತು. ಪುನರ್ಭೇಟಿಯೋಪಾದಿ, ಹೊರಪ್ರಾಂತದ ಈ ಕ್ಷೇತ್ರಗಳಿಗೆ ರಾಜ್ಯ ಸುವಾರ್ತೆಯನ್ನು ಪಸರಿಸಲು ಮತ್ತು ಒಯ್ಯಲು ಅವರು ಒಂದು ವಿಶೇಷ ಚಟುವಟಿಕೆಯನ್ನು ಏರ್ಪಡಿಸಿದರು.
ಪಸರಿಸಿದ್ದಕ್ಕಾಗಿ ಆಶೀರ್ವಾದಗಳು
ಈ ದೂರದ ಕ್ಷೇತ್ರಗಳಲ್ಲಿ ಸಾರುತ್ತಾ ಎರಡು ತಿಂಗಳ ಅವಧಿಯನ್ನು ಕಳೆಯುವುದಕ್ಕೆ ಅನೇಕ ಉತ್ಸಾಹವುಳ್ಳ, ಹುರುಪಿನ ಯುವ ಸಾಕ್ಷಿಗಳು ತಾವಾಗಿಯೇ ಮುಂದೆಬಂದರು. ಅವರ ಪ್ರಯತ್ನಗಳಿಗೆ ಒಳ್ಳೇ ಪ್ರತಿಫಲವು ದೊರೆಯಿತು. ಒಂದು ಕ್ಷೇತ್ರದಲ್ಲಿ ಇಬ್ಬರು ಸಾಕ್ಷಿಗಳು ಅಸಾಧಾರಣವಾದ ಆಸಕ್ತಿಯನ್ನು ಕಂಡುಕೊಂಡರು. ಯೇಸುವಿನ ಮರಣದ ವಾರ್ಷಿಕ ಸ್ಮಾರಕವನ್ನು ಆಚರಿಸುವ ಸಮಯವು ಅದಾಗಿರಲಾಗಿ, ಅವರು ಅದಕ್ಕಾಗಿ ಏರ್ಪಾಡುಗಳನ್ನು ಮಾಡಿ, ಜನರನ್ನು ಬರುವಂತೆ ಆಮಂತ್ರಿಸಿದರು. ಸಭಾಂಗಣವು ತುಂಬಿತು, ಮತ್ತು ಅವರು ಕೂಟವನ್ನು ನಿರ್ವಹಿಸಿದರು. ಅದು ಮುಗಿದಾಗ, ಅವರ ಅತ್ಯಾಶ್ಚರ್ಯಕ್ಕೆ, ಹೊರಗೆ ಜನರ ಇನ್ನೊಂದು ದೊಡ್ಡ ಗುಂಪು ಒಳಗೆಬರಲು ಕಾಯುತ್ತಿರುವುದನ್ನು ಅವರು ಕಂಡರು. ಆದುದರಿಂದ ಅವರನ್ನು ಒಳಗೆ ಆಮಂತ್ರಿಸಿ, ಕಾರ್ಯಕ್ರಮವನ್ನು ಅವರು ಪುನರಾವೃತ್ತಿಸಿದರು. ಈಗ ಆ ಕ್ಷೇತ್ರದಲ್ಲಿ ಒಂದು ಸಭೆ ಇದೆ.
ಜನರ ಔದಾರ್ಯ ಮತ್ತು ಸ್ನೇಹಪರ ವ್ಯಕ್ತಿತ್ವವು ತಾವು ಕಲಿಯುವ ಬೈಬಲ್ ಸತ್ಯವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ಇತರರೊಂದಿಗೆ ಹಂಚುವಂತೆ ಆಗಿಂದಾಗ್ಗೆ ಪ್ರೇರಿಸುತ್ತದೆ. ಒಬ್ಬ ಬೈಬಲ್ ವಿದ್ಯಾರ್ಥಿಯು ಮನೆಮನೆಯ ಶುಶ್ರೂಷೆಯಲ್ಲಿ ಭಾಗವಹಿಸಲು ಕೊನೆಗೆ ಯೋಗ್ಯತೆಯನ್ನು ಪಡೆದಾಗ, ಅವನು ಸಂತೋಷದಿಂದ ತುಂಬಿತುಳುಕಿದನು. ಅವನು ತನ್ನ ನೆರೆಹೊರೆಯಲ್ಲಿ ಈಗಾಗಲೆ ಐದು ಮನೆ ಬೈಬಲಧ್ಯಯನಗಳನ್ನು ನಡಿಸುತ್ತಿದ್ದನು, ಆದರೆ ಶುಶ್ರೂಷೆಯಲ್ಲಿ ಅಧಿಕ ಪಾಲನ್ನು ಹೊಂದಲು ಅವನು ಸಂತೋಷಪಟ್ಟನು.
ಹೆಚ್ಚಿನ ಕ್ಷೇತ್ರವು ರಾಜ್ಯ ಪ್ರಚಾರಕರಿಂದ ಕ್ರಮವಾಗಿ ಸಂದರ್ಶಿಸಲ್ಪಡದರಿಂದ, ಬಸ್ಸುಗಳಲ್ಲಿರುವ ಜನರಿಗೆ ಮತ್ತು ವ್ಯಾಪಾರಕ್ಕಾಗಿ ಅಥವಾ ಖರೀದಿಗಾಗಿ ಪಟ್ಟಣಗಳಿಗೆ ಬರುವವರಿಗೆ ಸಾರುವ ಪ್ರಯತ್ನವನ್ನು ಮಾಡಲಾಗಿದೆ. ಶಾಖಾ ಆಫೀಸಿಗೆ ಬಂದ ಒಂದು ಪತ್ರದ ಸಂಬಂಧದಲ್ಲಿನ ಒಂದು ಅನುಭವವು ದೃಷ್ಟಾಂತಿಸುವಂತೆ, ಇದು ಆನಂದಕರ ಫಲಿತಾಂಶಗಳಿಗೆ ನಡಿಸಿಯದೆ. ಅದು ಬೈಬಲಧ್ಯಯನಕ್ಕಾಗಿ ವಿನಂತಿಸಿದ ಇಬ್ಬರು ಗ್ರಾಮೀಣ ಪ್ರದೇಶದ ಪುರುಷರಿಂದ ಬಂದಿತೆಂದು ನೆನಸಲಾಯಿತು. ಆದರೆ ಒಬ್ಬ ಸಾಕ್ಷಿಯು ಅವರನ್ನು ಭೇಟಿಯಾದಾಗ, ಆ “ಪುರುಷರು” 10 ಮತ್ತು 11 ವರ್ಷ ಪ್ರಾಯದವರಾಗಿ ಕಂಡುಬಂದರು. ಆದರೆ ಬೈಬಲ್ ಅಧ್ಯಯನದ ಏರ್ಪಾಡಿನ ಕುರಿತು ಅವರು ಹೇಗೆ ತಿಳಿದರು? ಒಳ್ಳೇದು, ಆ ಹಳ್ಳಿಯ ಒಬ್ಬ ಮನುಷ್ಯನು ಯಾವುದೊ ಕೆಲಸಕ್ಕಾಗಿ ರಾಜಧಾನಿಗೆ ಬಂದನು. ದಾರಿಯಲ್ಲಿ ಅವನು ಒಬ್ಬ ಸಾಕ್ಷಿಯನ್ನು ಭೇಟಿಯಾದನು, ಅವನು ಒಂದು ಕಿರುಹೊತ್ತಗೆಯನ್ನು ಅವನಿಗೆ ಕೊಟ್ಟು, ಒಂದು ಉಚಿತ ಮನೆ ಬೈಬಲಧ್ಯಯನವನ್ನು ಸಾದರಪಡಿಸಿದನು. ತನ್ನ ಹಳ್ಳಿಗೆ ಹಿಂದಿರುಗಿ ಆ ಮನುಷ್ಯನು ಆ ಕಿರುಹೊತ್ತಗೆಯನ್ನು ತನ್ನ ನೆರೆಹೊರೆಯ ಒಬ್ಬ 12 ವರ್ಷ ಪ್ರಾಯದ ಹುಡುಗಿಗೆ ಕೊಟ್ಟು, ಬೈಬಲಧ್ಯಯನದ ಏರ್ಪಾಡನ್ನು ಅವಳಿಗೆ ತಿಳಿಸಿದನು. ಆ ಹುಡುಗಿ ಸರದಿಯಲ್ಲಿ ಆ ಮಾಹಿತಿಯನ್ನು ಆ ಇಬ್ಬರು ಹುಡುಗರಿಗೆ ತಿಳಿಸಲಾಗಿ ಅವರು ಒಡನೆಯೆ ಪತ್ರ ಬರೆದರು. ಆ ಹುಡುಗರೊಂದಿಗೆ, ಹುಡುಗಿಯೊಂದಿಗೆ ಮತ್ತು ಆ ಮನುಷ್ಯ ಮತ್ತು ಅವನ ಇಬ್ಬರು ಮಕ್ಕಳೊಂದಿಗೆ ಬೈಬಲಧ್ಯಯನ ಪ್ರಾರಂಭಿಸಲ್ಪಟ್ಟಿತು.
ಎಳೆಯರಿಂದ ಉತ್ತಮ ಪ್ರತಿವರ್ತನೆ
ನಿಶ್ಚಯವಾಗಿಯೂ, ಸತ್ಯದಲ್ಲಿ ಬೆಳೆಸಲ್ಪಟ್ಟವರು ಹಾಗೂ ಬೇರೆ ಯುವಜನರು ದೇವರೆಡೆಗೆ ತಮ್ಮ ಭಕ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತೋರುತ್ತಾರೆ. ಉದಾಹರಣೆಗೆ, ತಾಮರ್ ಮತ್ತು ಅವಳ ತಂಗಿ ಕೈಲ ಇಬ್ಬರೂ 10 ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಹೊಂದಿ, 11ರ ಪ್ರಾಯದೊಳಗೆ ಪೂರ್ಣಸಮಯದ ಪಯನೀಯರ್ ಶುಶ್ರೂಷೆಗೆ ಇಳಿದರು. ವೆಂಡಿ ಕ್ಯಾರೊಲಿನ ನೀರಿನ ದೀಕ್ಷಾಸ್ನಾನದ ಮೂಲಕ ತನ್ನ ಸಮರ್ಪಣೆಯನ್ನು ಸೂಚಿಸಿದಾಗ 12 ವರ್ಷದವಳಾಗಿದ್ದಳು, ಮತ್ತು ಎರಡು ವರ್ಷಗಳ ಬಳಿಕ, 1985 ರಲ್ಲಿ, ಅವಳು ಕ್ರಮದ ಪಯನೀಯರ್ ಸೇವೆಯನ್ನು ಪ್ರಾರಂಭಿಸಿದಳು. ಇಂದು ಅವಳು ಸತ್ಯದ ಒಬ್ಬ ಪರಿಣಾಮಕಾರಿ ಶಿಕ್ಷಕಿಯಾಗಿದ್ದು ಇನ್ನೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆನಂದಿಸುತ್ತಿದ್ದಾಳೆ. ಹತ್ತು ವರ್ಷ ವಯಸ್ಸಿನಲ್ಲಿ ದೀಕ್ಷಾಸ್ನಾನ ಹೊಂದಿ, 11 ರಲ್ಲಿ ಕ್ರಮದ ಪಯನೀಯರನಾದ ಎಳೆಯ ಹುವಾನಿ, ನಾಲ್ಕು ಮನೆ ಬೈಬಲಧ್ಯಯನಗಳನ್ನು ನಡಿಸುತ್ತಿದ್ದಾನೆ. ಹತ್ತು ವರ್ಷ ಪ್ರಾಯದ ರೇ, ಬಳಸಿದ ಪುಸ್ತಕಗಳ ವ್ಯಾಪಾರಿಯೊಂದಿಗೆ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಪುಸ್ತಿಕೆಯೊಂದನ್ನು ಕಂಡುಕೊಂಡಾಗ, ತನಗಾಗಿ ಅದನ್ನು ಖರೀದಿಸುವಂತೆ ರೇ ತನ್ನ ತಾಯಿಯನ್ನು ಬೇಡಿದನು. ಅವನು ಅದನ್ನು ಮೊದಲಿಂದ ಕೊನೆಯ ತನಕ ಓದಿದನು. ಹೆಚ್ಚು ಬೈಬಲ್ ಸಾಹಿತ್ಯಕ್ಕಾಗಿ ಅವನ ಅನ್ವೇಷಣೆಯು ಕಟ್ಟಕಡೆಗೆ ಅವನನ್ನು ಶಾಖಾ ಆಫೀಸಿನೆಡೆಗೆ ನಡಿಸಿತು. ಇಂದು ಅವನು ಪೂರ್ಣ ಸಮಯದ ಸೇವೆಯಲ್ಲಿ ಆನಂದಿಸುತ್ತಿದ್ದಾನೆ, ಮತ್ತು ಅವನ ತಾಯಿಯೂ ದೇವರನ್ನು ಸೇವಿಸುತ್ತಿದ್ದಾಳೆ.
ಆತ್ಮಿಕ ವಿಷಯಗಳ ಮೌಲ್ಯವನ್ನು ಗಣ್ಯಮಾಡಲು ಇವರಿಗೆ ಮತ್ತು ಇತರ ಎಳೆಯರಿಗೆ ಯಾವುದು ಸಹಾಯ ಮಾಡಿಯದೆ? ಅನೇಕ ಸಂದರ್ಭಗಳಲ್ಲಿ ಹೆತ್ತವರ ಯೋಗ್ಯ ಮಾರ್ಗದರ್ಶನವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾರ ಕ್ರೈಸ್ತ ಹೆತ್ತವರು ಶಾಲಾ ಶಿಕ್ಷಕರೊ ಆ ಹೋಸನ್ವ ವಿಷಯವು ಹಾಗಿತ್ತು. ಹೆತ್ತವರು ತಮ್ಮ ಮಕ್ಕಳಲ್ಲಿ ಕಡಿಮೆಪಕ್ಷ ಒಬ್ಬನಿಗಾದರೂ ಪೂರ್ಣ ಸಮಯದ ಶುಶ್ರೂಷೆಯನ್ನು ತೆಗೆದುಕೊಳ್ಳಲು ಸಹಾಯಮಾಡಲು ಪ್ರಯತ್ನಿಸುವಂತೆ ಒಬ್ಬ ಸಂಚರಣ ಮೇಲ್ವಿಚಾರಕನು ಸೂಚಿಸಲಾಗಿ, ಅವರು ಹೋಸನ್ವಿಗೆ ಗಮನಕೊಟ್ಟರು. ಹೋಸ್ವ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದ ಕಾರಣ ಅವನಿಗೆ ಎಂಜಿನಿಯರಿಂಗ್ ಕಲಿಯಲು ಒಂದು ಸರಕಾರಿ ಸ್ಕಾಲರ್ಶಿಪ್ಪನ್ನು ನೀಡಲಾಯಿತು. ವಿಶ್ವವಿದ್ಯಾನಿಲಯದಲ್ಲಿ ಒಂದೂವರೆ ವರ್ಷ ಕಳೆದ ಬಳಿಕ, ಡೊಮಿನಿಕನ್ ರಿಪಬ್ಲಿಕ್ನಲ್ಲಿ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯ ಸಂಕೀರ್ಣದ ಕಟ್ಟಡ ನಿರ್ಮಾಣ ಯೋಜನೆಯನ್ನು ಸೇರಲು ನೀಡಲ್ಪಟ್ಟ ಆಮಂತ್ರಣವನ್ನು ಅವನು ಸ್ವೀಕರಿಸಿದನು. ತಮ್ಮ ಮಗನನ್ನು ಯೆಹೋವನ ಸೇವೆಗಾಗಿ ಕೊಟ್ಟದ್ದರಲ್ಲಿ ಅವನ ಹೆತ್ತವರು ಆಳವಾದ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.
ಬೇರೆ ದೇಶಗಳಿಂದ “ಅನ್ವೇಷಕರು”
“ಬೆಳೆಯು ಬಹಳ, ಕೆಲಸದವರು ಸ್ವಲ್ಪ” ಎಂಬ ಯೇಸುವಿನ ಮಾತುಗಳು ಇಲ್ಲಿಯ ಕ್ಷೇತ್ರಕ್ಕೆ ನಿಜವಾಗಿ ಅನ್ವಯಿಸಲ್ಪಡಬಲ್ಲವು. (ಮತ್ತಾಯ 9:37) ಮಹಾ ಆವಶ್ಯಕತೆ ಮತ್ತು ಉತ್ತಮ ಪ್ರತಿವರ್ತನೆಯು ಬೇರೆ ದೇಶಗಳ ಸಾಕ್ಷಿಗಳನ್ನು, ಆಧುನಿಕ ದಿನದ ನಿಜ ನಿಧಿಗಳಿಗಾಗಿ—ಪ್ರಾಮಾಣಿಕ ಸತ್ಯಾನ್ವೇಷಕರಿಗಾಗಿ—ಕ್ಷೇತ್ರವನ್ನು ಪರಿಶೋಧಿಸುವುದರಲ್ಲಿ ಭಾಗಿಗಳಾಗಲು ಬರುವಂತೆ ಪ್ರೇರೇಪಿಸಿದೆ.
ಡೊಮಿನಿಕನ್ ರಿಪಬ್ಲಿಕ್ನ ವಿವಿಧ ಕ್ಷೇತ್ರಗಳಲ್ಲಿ ಸೇವೆಮಾಡುವುದರಲ್ಲಿ ನಿಜ ಸಂತೃಪ್ತಿಯನ್ನು ಕಂಡುಕೊಂಡ ಸಾಕ್ಷಿ ಕುಟುಂಬಗಳು ನೆರೆಕರೆಯ ದ್ವೀಪವಾದ ಪೋರ್ಟ ರೀಕೊದಿಂದ ಬಂದಿರುತ್ತವೆ. ಒಬ್ಬ ಕುಟುಂಬ ತಲೆಯು ಹೇಳಿದ್ದು: “ಕೇಳುವ ಕಿವಿಗಳಿಗೆ ನಮ್ಮ ನಂಬಿಕೆ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಲು ಶಕ್ತರಾಗಿರುವುದು ನಿಜವಾಗಿಯೂ ಸತ್ಯವನ್ನು ಸಜೀವವನ್ನಾಗಿ ಮಾಡುತ್ತದೆ!” ಇಲ್ಲಿರುವ ಆವಶ್ಯಕತೆಯನ್ನು ತಿಳಿದಾಗ, ಸ್ವೀಡನ್ನ ಸಿಸಿಲಿಯ ಮತ್ತು ಅಮೆರಿಕದ ನಾಯ, ಇತರ ಹಲವಾರು ಪೂರ್ಣ ಸಮಯದ ಯುವ ಶುಶ್ರೂಷಕರೊಂದಿಗೆ ಕೆಲಸದಲ್ಲಿ ಜತೆಗೂಡಿದರು. ಪ್ರದೇಶ ಹೆಚ್ಚು ಉನ್ನತವಾಗಿರುವ ಮತ್ತು ತಾಪಮಾನ ಸೌಮ್ಯವಾಗಿರುವ ಒಳನಾಡಿನಲ್ಲಿ ಅವರು ಸೇವೆಮಾಡುತ್ತಿದ್ದಾರೆ. ತದ್ರೀತಿಯಲ್ಲಿ, ಮೇಲೆ ತಂಪಾದ ಪೈನ್ಮರಗಳಿಂದಾವೃತವಾದ ಬೆಟ್ಟಗಳಲ್ಲಿ, ಎರಡು ಕೆನೇಡಿಯನ್ ಕುಟುಂಬಗಳು, ಅಮೆರಿಕದಿಂದ ಹಿಂದಿರುಗಿದ್ದ ಒಂದು ಡೊಮಿನಿಕನ್ ಕುಟುಂಬದೊಂದಿಗೆ ಜತೆಗೂಡಿವೆ. ಅವರು ಒಂದು ಚಿಕ್ಕ ಸಭೆಯ ಭಾಗವಾಗಿದ್ದು, ಯೆಹೋವನ ಸಾಕ್ಷಿಗಳಿಂದ ಹತ್ತು ವರ್ಷಗಳಷ್ಟು ಕಾಲದಿಂದ ಸಂದರ್ಶನವನ್ನು ಪಡೆಯದ ಜನರನ್ನು ತಲಪಲು ಶಕ್ತರಾಗಿದ್ದಾರೆ.
ಆಲ್ಫ್ರೆಡೊ ಮತ್ತು ಲಾರ್ಡೆಸ್ ಮತ್ತು ಅವರ ಐವರು ಮಕ್ಕಳು ನ್ಯೂ ಯಾರ್ಕ್ ನಗರದಿಂದ ಹಿಂದಿರುಗಿ ಬಂದು, ಸಮುದ್ರ ತೀರದ ಸುಂದರ ಯಾತ್ರಿಕ ಪಟ್ಟಣಗಳೊಂದರಲ್ಲಿ ಒಂದು ಚಿಕ್ಕ ಸಭೆಯೊಂದಿಗೆ ಸಹವಾಸ ಮಾಡುತ್ತಿದ್ದಾರೆ. ಪ್ರಾಮಾಣಿಕ ಹೃದಯದ ಜನರನ್ನು ಕಂಡುಕೊಳ್ಳುವುದರಲ್ಲಿ ಮತ್ತು ಸಭೆಯ ಬೆಳವಣಿಗೆಗೆ ಸಹಾಯನೀಡಲು ಶಕ್ತರಾಗಿರುವುದರಲ್ಲಿ ಅವರು ಹರ್ಷಿಸುತ್ತಾರೆ. ಆಸ್ಟ್ರಿಯದಿಂದ ಕಂಪ್ಯೂಟರ್ ಕೆಲಸಗಾರ ರಾಲೆಂಡ್, ಮತ್ತು ಅವನ ಪತ್ನಿ ಯ್ಯೂಟ, ಬೆಚ್ಚಗೂ, ಶುಷ್ಕವೂ ಆದ ದೇಶದ ದಕ್ಷಿಣ ಭಾಗದಲ್ಲಿ ಮನೆಮಾಡಿದ್ದಾರೆ. ಅವರು ಬಂದ ಮೇಲೆ ರಚಿಸಲ್ಪಟ್ಟ ಒಂದು ಹೊಸ ಸಭೆಯನ್ನು ಕಾಣುವ ಸಂತೋಷವು ಅವರದ್ದಾಗಿದೆ. ನೆರೆಯ ಪಟ್ಟಣವೊಂದರಲ್ಲಿ, ಮೂವರು ಪಯನೀಯರ ಸಹೋದರಿಯರ ಒಂದು ಗುಂಪು ಮತ್ತು ಕ್ಯಾಲಿಫಾರ್ನಿಯದ ಒಂದು ದಂಪತಿ, ಬೈಬಲಭ್ಯಾಸಗಳಿಗಾಗಿ ಎಷ್ಟೊಂದು ವಿನಂತಿಗಳು ಬಂದಿದ್ದವೆಂದರೆ ಅವರು ಅವುಗಳಲ್ಲಿ ಎಲ್ಲವನ್ನು ನಡಿಸಲಸಾಧ್ಯವಾಗಿತ್ತು ಎಂದು ವರದಿಸಿದರು. ಆದುದರಿಂದ ಅವರು ಆಸಕ್ತ ಜನರನ್ನು ಸ್ಥಳೀಕ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವಂತೆ ಆಮಂತ್ರಿಸಿದರು ಮತ್ತು ಬೈಬಲ್ ಅಧ್ಯಯನಗಳಿಗಾಗಿ ವೇಟಿಂಗ್ ಲಿಸ್ಟ್ನಲ್ಲಿ ಅವರ ಹೆಸರುಗಳನ್ನು ಸೇರಿಸಿದರು. ಯ್ಯೂಟಳ ತಮ್ಮ ಸೆಫ್ಟಾನ್, ಡೊಮಿನಿಕನ್ ರಿಪಬ್ಲಿಕ್ನ ಈಶಾನ್ಯಕ್ಕಿರುವ ಸಮಾನ ಎಂಬ ಸುಂದರ ಊರಿನ ಚಿಕ್ಕ ಸಭೆಯಲ್ಲಿ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುತ್ತಾನೆ. ಕೇವಲ ಎರಡೇ ವರ್ಷಗಳಲ್ಲಿ ಅಲ್ಲಿ ರಾಜ್ಯ ಪ್ರಚಾರಕರ ಸಂಖ್ಯೆಯು ಇಮ್ಮಡಿಯಾಗಿದೆ.
ಸಹಾಯ ಮಾಡಲು ಬಂದ ಇವರಿಂದ ಮತ್ತು ಇತರರಿಂದ ತೋರಿಸಲ್ಪಟ್ಟ ಪ್ರೀತಿ ಮತ್ತು ಹುರುಪು ನಿಜವಾಗಿ ಪ್ರಶಂಸನೀಯ. ಅವರು ವಿವಿಧ ಸಂಸ್ಕೃತಿ ಮತ್ತು ಪದ್ಧತಿಗಳಿರುವ ಒಂದು ಹೊಸ ದೇಶದಲ್ಲಿ ನೆಲೆನಿಲ್ಲುವ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ ಮಾತ್ರವಲ್ಲ, ಹೆಚ್ಚಿನ ಸಂದರ್ಭಗಳಲ್ಲಿ, ಕುರಿಸದೃಶರ ಆತ್ಮಿಕ ಆವಶ್ಯಕತೆಗಳ ಪರಾಮರಿಕೆಗಾಗಿ ಒಂದು ಹೊಸ ಭಾಷೆ ಕಲಿಯುವುದನ್ನೂ ಸ್ವೀಕರಿಸಿದ್ದಾರೆ. ಅವರ ಪ್ರಯತ್ನಗಳು ಸ್ಥಳೀಕ ಜನರಿಂದ ಸಕಾರಾತ್ಮಕ ಪ್ರತಿವರ್ತನೆಯನ್ನು ಪಡೆದಿರುತ್ತವೆ.
ಕೆಲವು ಡೊಮಿನಿಕನ್ ಕುಟುಂಬಗಳು ದೊಡ್ಡ ಪಟ್ಟಣಗಳ ಜೀವನದ ಸೌಕರ್ಯಗಳನ್ನು ಬಿಟ್ಟುಕೊಟ್ಟು ಗ್ರಾಮೀಣ ಪ್ರದೇಶಗಳಿಗೆ ಸ್ಥಳಬದಲಾಯಿಸಿದ್ದಾರೆ. ಅವರೆಲ್ಲರು ಪ್ರಾಮಾಣಿಕ ಸತ್ಯಾನ್ವೇಷಕರ ನಿಜ ನಿಕ್ಷೇಪಗಳನ್ನು ಕಂಡುಕೊಳ್ಳುವ ಸಂತೋಷದಿಂದ ಹೇರಳವಾದ ಪ್ರತಿಫಲವನ್ನು ಹೊಂದುತ್ತಿದ್ದಾರೆ.
15 ನೆಯ ಶತಮಾನದ ಐಶ್ವರ್ಯಾನ್ವೇಷಕ ನಾಡಿಗರಾದ ಟೈನೊ ಜನರಿಗೆ ಆಶೀರ್ವಾದಗಳನ್ನಲ್ಲ, ದಾಸ್ಯ ಮತ್ತು ಅಗಣಿತ ಕಷ್ಟಾನುಭವಗಳನ್ನು ತಂದರು. ಕೊಲಂಬಸನು ಸ್ವತಃ ಹೊಸ ಜಗತ್ತಿನ ನಿಧಿಗಳಿಂದ ಪ್ರಯೋಜನ ಹೊಂದಲಿಲ್ಲ. ಅವನು ಕಟ್ಟಕಡೆಗೆ ಖೈದು ಮಾಡಲ್ಪಟ್ಟು, ತಾನು ಸಂಶೋಧಿಸಿದ ದ್ವೀಪದಿಂದಲೆ ಹೊರಡಿಸಲ್ಪಟ್ಟನು ಮತ್ತು ಬೇಡಿಗಳಲ್ಲಿ ಸ್ಪೆಯ್ನ್ಗೆ ಹಿಂದಿರುಗಿದನು.
ಇಂದು ಬೇರೊಂದು ವಿಧದ ಸಂಶೋಧನೆಯು ನಡಿಯುತ್ತಾ ಇದೆ, ಮತ್ತು ಹೆಚ್ಚು ಮೌಲ್ಯದ ನಿಧಿಯು ಕಂಡುಕೊಳ್ಳಲ್ಪಡುತ್ತಿದೆ. ರಾಜ್ಯ ಸುವಾರ್ತೆಗೆ ಪ್ರತಿವರ್ತನೆದೋರುವ ಪ್ರಾಮಾಣಿಕ ಹೃದಯದ ಜನರಿಗಾಗಿ ಹುಡುಕುವುದರಲ್ಲಿ ಯೆಹೋವನ ಜನರು ಕಾರ್ಯಮಗ್ನರಾಗಿದ್ದಾರೆ. ಫಲಿತಾಂಶವಾಗಿ ದೇವರ ವಾಕ್ಯವು ಮಾತ್ರ ತರಬಲ್ಲ ಸ್ವಾತಂತ್ರ್ಯವನ್ನು ಸದಾ ವೃದ್ಧಿಸುತ್ತಿರುವ ಒಂದು ಜನಸಮೂಹವು ಆನಂದಿಸುತ್ತಿದೆ. (ಯೋಹಾನ 8:32) ಬೆಟ್ಟಗಳು, ರಮ್ಯವಾದ ಜಲಪಾತಗಳು, ಸುಂದರವಾದ ಕಡಲ ತೀರಗಳು, ಮತ್ತು ಮುಗ್ಧಗೊಳಿಸುವ ಗುಹೆಗಳ ಈ ದೇಶವು, ಬರಿಯ ಒಂದು ಪ್ರಮೋದವನ ದ್ವೀಪವಾಗಿ ಅಲ್ಲ, ಬದಲಾಗಿ, ಇಡೀ ಭೂಮಿಯನ್ನೇ ಬಳಸುವ ಹೊಸ ಲೋಕದ ಒಂದು ಭಾಗವಾಗುವ ಸಮಯಕ್ಕೆ ಅವರು ಮುನ್ನೋಡುತ್ತಾರೆ.—2 ಪೇತ್ರ 3:13.
[ಅಧ್ಯಯನ ಪ್ರಶ್ನೆಗಳು]
a ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ತಯಾರಿಸಲ್ಪಟ್ಟದ್ದು.
[ಪುಟ 24ರಲ್ಲಿರುವಚಿತ್ರ]
(For fully formatted text, see publication)
ಡೊಮಿನಿಕನ್ ರಿಪಬ್ಲಿಕ್
[ಪುಟ 24,25 ರಲ್ಲಿರುವಚಿತ್ರಗಳು]
ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟುವ ಮೂಲಕ ಯುವಜನರು ಆತ್ಮಿಕ ವಿಷಯಗಳ ಮೌಲ್ಯವನ್ನು ಕಂಡುಹಿಡಿಯುತ್ತಾರೆ