ಅವರು ಯೆಹೋವನ ಚಿತ್ತವನ್ನು ಮಾಡಿದರು
ಪಂಚಾಶತ್ತಮದಂದು ಪೇತ್ರನು ಸಾರುತ್ತಾನೆ
ಸಾ.ಶ. 33ನೆಯ ಇಸವಿಯಲ್ಲಿ, ಅದು ವಸಂತಋತುವಿನ ಒಂದು ಸೌಮ್ಯ ಪ್ರಾತಃಕಾಲವಾಗಿತ್ತು. ವಾತಾವರಣವು ಭಾವೋದ್ವಿಗ್ನತೆಯಿಂದ ತುಂಬಿತ್ತು! ಸಡಗರದಲ್ಲಿದ್ದ ಯೆಹೂದ್ಯರ ಮತ್ತು ಮತಾವಲಂಬಿಗಳ ಒಂದು ಜನಸಮೂಹವು, ಯೆರೂಸಲೇಮಿನ ಬೀದಿಗಳನ್ನು ಪ್ರವಾಹದಂತೆ ತುಂಬಿತು. ಅವರು ಈಲಮ್, ಮೆಸೊಪೊಟೇಮಿಯ, ಕ್ಯಾಪಡೊಷೀಯ, ಐಗುಪ್ತ, ಮತ್ತು ರೋಮ್ನಂತಹ ಸ್ಥಳಗಳಿಂದ ಬಂದಿದ್ದರು. ಅವರ ಸ್ಥಳೀಯ ಪೋಷಾಕಿನಲ್ಲಿ ಅವರನ್ನು ಕಾಣುವುದು ಮತ್ತು ಅವರ ಬಗೆ ಬಗೆಯ ಭಾಷೆಗಳನ್ನು ಕೇಳುವುದು ಎಷ್ಟೊಂದು ಮನೋಹರವಾಗಿತ್ತು! ಈ ವಿಶೇಷ ಸಂದರ್ಭಕ್ಕೆ ಉಪಸ್ಥಿತರಾಗಿರಲು, ಕೆಲವರು ಸುಮಾರು ಎರಡು ಸಾವಿರ ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿದ್ದರು. ಅದು ಏನಾಗಿತ್ತು? ಪಂಚಾಶತ್ತಮ—ಬಾರ್ಲಿ ಕೊಯ್ಲಿನ ಅಂತ್ಯವನ್ನು ಗುರುತಿಸುವ, ಒಂದು ಆನಂದದಾಯಕ ಯೆಹೂದಿ ಉತ್ಸವ.—ಯಾಜಕಕಾಂಡ 23:15-21.
ದೇವಾಲಯದ ವೇದಿಕೆಯ ಮೇಲಿದ್ದ ಅರ್ಪಣೆಗಳಿಂದ ಹೊಗೆಯು ಅಲೆಯಲೆಯಾಗಿ ಚಲಿಸಿತು, ಮತ್ತು ಯಾಜಕರು ಸ್ತುತಿಗೀತೆ (ಹಲ್ಲೆಲ್)ಗಳನ್ನು (ಕೀರ್ತನೆಗಳು 113ರಿಂದ 118) ಹಾಡಿದರು. ಬೆಳಗ್ಗೆ 9:00ಕ್ಕೆ ಸ್ವಲ್ಪ ಮುಂಚಿತವಾಗಿ, ಚಕಿತಗೊಳಿಸುವಂತಹ ಯಾವುದೊ ವಿಷಯವು ಸಂಭವಿಸಿತು. ಸ್ವರ್ಗದಿಂದ, “ಬಿರುಗಾಳಿ ಬೀಸುತ್ತದೋ ಎಂಬಂತೆ ಫಕ್ಕನೆ . . . ಒಂದು ಶಬ್ದವು” ಉಂಟಾಯಿತು. ಅದು ಯೇಸು ಕ್ರಿಸ್ತನ ಸುಮಾರು 120 ಶಿಷ್ಯರು ಕೂಡಿಬಂದಿದ್ದ ಇಡೀ ಮನೆಯನ್ನು ತುಂಬಿಕೊಂಡಿತು. ಶಾಸ್ತ್ರೀಯ ವೃತ್ತಾಂತವು ಹೇಳುವುದು: “ಉರಿಯಂತಿದ್ದ ನಾಲಿಗೆಗಳು ವಿಂಗಡಿಸಿಕೊಳ್ಳುವ ಹಾಗೆ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.”—ಅ. ಕೃತ್ಯಗಳು 2:1-4.
ಪ್ರತಿಯೊಬ್ಬನು ತನ್ನ ಸ್ವಂತ ಭಾಷೆಯನ್ನು ಕೇಳುತ್ತಾನೆ
ಬೇಗನೆ, ಅನೇಕ ಶಿಷ್ಯರು ಮನೆಯಿಂದ ಹೊರಬರುತ್ತಿದ್ದರು. ವಿಸ್ಮಯಕರವಾಗಿ, ಅವರು ಗುಂಪಿನ ವಿಭಿನ್ನ ಭಾಷೆಗಳಲ್ಲಿ ಮಾತಾಡಸಾಧ್ಯವಿತ್ತು! ಗಲಿಲಾಯದವರಿಂದ ತಮ್ಮ ಸ್ವಂತ ಭಾಷೆಗಳನ್ನು ಪರ್ಷಿಯದಿಂದ ಬಂದ ಒಬ್ಬ ಸಂದರ್ಶಕನು ಹಾಗೂ ಐಗುಪ್ತ ದೇಶದವನೊಬ್ಬನು ಕೇಳಿಸಿಕೊಂಡಾಗ, ಅದು ಎಷ್ಟು ಆಶ್ಚರ್ಯಕರವಾಗಿತ್ತೆಂಬುದನ್ನು ಊಹಿಸಿಕೊಳ್ಳಿರಿ. ಗುಂಪು ಆದರಪೂರ್ವಕವಾದ ಭಯದಿಂದ ಕೂಡಿತ್ತೆಂಬುದು ಗ್ರಾಹ್ಯವೇ. “ಇದೇನಾಗಿರಬಹುದು” ಎಂದು ಅವರು ಒಬ್ಬರನ್ನೊಬ್ಬರು ಕೇಳುತ್ತಿದ್ದರು. ಕೆಲವರು “ಇವರು ಮದ್ಯಪಾನ ಮಾಡಿ ಮತ್ತರಾಗಿದ್ದಾರೆಂದು” ಹೇಳುತ್ತಾ ಶಿಷ್ಯರ ಹಾಸ್ಯಮಾಡಿದರು.—ಅ. ಕೃತ್ಯಗಳು 2:12, 13.
ಅನಂತರ ಅಪೊಸ್ತಲ ಪೇತ್ರನು ಎದ್ದುನಿಂತು, ಗುಂಪನ್ನು ಸಂಬೋಧಿಸಿದನು. ಭಾಷೆಗಳ ಈ ಅದ್ಭುತಕರವಾದ ವರವು, ಪ್ರವಾದಿಯಾದ ಯೋವೇಲನ ಮುಖಾಂತರ ದೇವರ ವಾಗ್ದಾನದ ನೆರವೇರಿಕೆಯಲ್ಲಿತ್ತೆಂದು ಅವನು ವಿವರಿಸಿದನು: “ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು.” (ಅ. ಕೃತ್ಯಗಳು 2:14-21; ಯೋವೇಲ 2:28-32) ಹೌದು, ದೇವರು ಆಗ ತಾನೇ ಯೇಸುವಿನ ಶಿಷ್ಯರ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸಿದ್ದನು. ಇದು, ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟು, ಈಗ ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿದ್ದನು ಎಂಬುದರ ಸ್ಪಷ್ಟವಾದ ಪ್ರಮಾಣವಾಗಿತ್ತು. “ಆದದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ,” ಎಂದು ಪೇತ್ರನು ಹೇಳಿದನು.—ಅ. ಕೃತ್ಯಗಳು 2:22-36.
ಕೇಳುಗರು ಹೇಗೆ ಪ್ರತಿಕ್ರಿಯಿಸಿದರು? “ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗುನೆಟ್ಟಂತಾಗಿ ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ—ಸಹೋದರರೇ, ನಾವೇನು ಮಾಡಬೇಕು,” ಎಂದು ಕೇಳಿದರೆಂದು ವೃತ್ತಾಂತವು ಹೇಳುತ್ತದೆ. ಪೇತ್ರನು ಉತ್ತರಿಸಿದ್ದು: “ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು . . . ದೀಕ್ಷಾಸ್ನಾನಮಾಡಿಸಿಕೊಳ್ಳಿರಿ.” ಸುಮಾರು 3,000 ಜನರು ಅದನ್ನೇ ಮಾಡಿದರು! ತರುವಾಯ, “ಇವರು ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿ . . . ನಿರತರಾಗಿದ್ದರು.”—ಅ. ಕೃತ್ಯಗಳು 2:37-42.
ಈ ಅದ್ಭುತವಾದ ಸಂದರ್ಭದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಪೇತ್ರನು, ಯೇಸು ತನಗೆ ಕೊಡಲು ವಾಗ್ದಾನವಿತ್ತಿದ್ದ “ಪರಲೋಕರಾಜ್ಯದ ಬೀಗದ ಕೈ”ಗಳಲ್ಲಿ ಮೊದಲನೆಯದ್ದನ್ನು ಉಪಯೋಗಿಸಿದನು. (ಮತ್ತಾಯ 16:19) ಈ ಬೀಗದ ಕೈಗಳು, ಜನರ ವಿಭಿನ್ನ ಗುಂಪುಗಳಿಗೆ ವಿಶೇಷ ಸುಯೋಗಗಳನ್ನು ತೆರೆದವು. ಈ ಮೊದಲನೆಯ ಬೀಗದ ಕೈಯು, ಯೆಹೂದ್ಯರು ಆತ್ಮಾಭಿಷಿಕ್ತ ಕ್ರೈಸ್ತರಾಗುವಂತೆ ಸಾಧ್ಯಗೊಳಿಸಿತು. ತದನಂತರ, ಎರಡನೆಯ ಹಾಗೂ ಮೂರನೆಯ ಬೀಗದ ಕೈಗಳು, ಅನುಕ್ರಮವಾಗಿ ಸಮಾರ್ಯದವರಿಗೆ ಮತ್ತು ಅನ್ಯಜನರಿಗೆ ಅದೇ ಅವಕಾಶವನ್ನು ಲಭ್ಯಗೊಳಿಸಿದವು.—ಅ. ಕೃತ್ಯಗಳು 8:14-17; 10:44-48.
ನಮಗಾಗಿರುವ ಪಾಠಗಳು
ಯೆಹೂದ್ಯರು ಮತ್ತು ಮತಾವಲಂಬಿಗಳ ಈ ಗುಂಪು ದೇವರ ಮಗನ ಮರಣಕ್ಕೆ ಸಾಮುದಾಯಿಕ ಜವಾಬ್ದಾರಿಯನ್ನು ಹೊತ್ತಿದ್ದರೂ, ಪೇತ್ರನು ಅವರನ್ನು “ಸಹೋದರರೇ” ಎಂದು ಕರೆಯುತ್ತಾ, ಗೌರವಭಾವದಿಂದ ಸಂಬೋಧಿಸಿದನು. (ಅ. ಕೃತ್ಯಗಳು 2:29) ಅವನ ಉದ್ದೇಶವು ಅವರನ್ನು ಖಂಡಿಸುವುದಲ್ಲ, ಬದಲಿಗೆ ಅವರನ್ನು ಪಶ್ಚಾತ್ತಾಪಕ್ಕೆ ಪ್ರೇರೇಪಿಸುವುದಾಗಿತ್ತು. ಆದುದರಿಂದ ಅವನ ಪ್ರಸ್ತಾಪವು ಸಕಾರಾತ್ಮಕವಾದದ್ದಾಗಿತ್ತು. ಅವನು ವಾಸ್ತವಾಂಶಗಳನ್ನು ಪ್ರಸ್ತುತಪಡಿಸಿ, ತನ್ನ ವಿಚಾರಗಳನ್ನು ಶಾಸ್ತ್ರದ ಉದ್ಧರಣಗಳಿಂದ ಸಮರ್ಥಿಸಿದನು.
ಇಂದು ಸುವಾರ್ತೆಯನ್ನು ಸಾರುವವರು ಪೇತ್ರನ ಮಾದರಿಯನ್ನು ಅನುಸರಿಸುವುದು ಒಳ್ಳೆಯದು. ಅವರು ತಮ್ಮ ಕೇಳುಗರೊಂದಿಗೆ ಸಾಮಾನ್ಯಾಂಶವನ್ನು ಸ್ಥಾಪಿಸಲು ಮತ್ತು ನಂತರ ಅವರೊಂದಿಗೆ ಶಾಸ್ತ್ರಗಳಿಂದ ಜಾಣ್ಮೆಯಿಂದ ವಿವೇಚಿಸಲು ಪ್ರಯತ್ನಿಸಬೇಕು. ಬೈಬಲ್ ಸತ್ಯವು ಸಕಾರಾತ್ಮಕ ವಿಧದಲ್ಲಿ ಪ್ರಸ್ತುತಗೊಳಿಸಲ್ಪಡುವಾಗ, ಸಹೃದಯಿಗಳು ಪ್ರತಿಕ್ರಿಯಿಸುವರು.—ಅ. ಕೃತ್ಯಗಳು 13:48.
ಪಂಚಾಶತ್ತಮದ ದಿನದಂದು ಪೇತ್ರನ ಹುರುಪು ಮತ್ತು ಧೈರ್ಯವು, ಸುಮಾರು ಏಳು ವಾರಗಳ ಮುಂಚೆ ಯೇಸುವಿನ ವಿಷಯದಲ್ಲಿ ಅವನ ನಿರಾಕರಣೆಗೆ ಬಹಳ ವಿರುದ್ಧವಾಗಿತ್ತು. ಆ ಸಂದರ್ಭದಲ್ಲಿ ಪೇತ್ರನು ಮನುಷ್ಯನ ಭಯದಿಂದ ಶಕ್ತಿಹೀನನಾಗಿದ್ದನು. (ಮತ್ತಾಯ 26:69-75) ಆದರೆ ಯೇಸು ಪೇತ್ರನ ಪರವಾಗಿ ಬಿನ್ನಹ ಮಾಡಿದ್ದನು. (ಲೂಕ 22:31, 32) ಪೇತ್ರನಿಗೆ ಯೇಸುವಿನ ಪುನರುತ್ಥಾನಾನಂತರದ ಕಾಣಿಸಿಕೊಳ್ಳುವಿಕೆಯು, ನಿಸ್ಸಂದೇಹವಾಗಿ ಆ ಅಪೊಸ್ತಲನನ್ನು ಬಲಗೊಳಿಸಿತು. (1 ಕೊರಿಂಥ 15:5) ಫಲಸ್ವರೂಪವಾಗಿ, ಪೇತ್ರನ ನಂಬಿಕೆಯು ಬಿದ್ದುಹೋಗಲಿಲ್ಲ. ಒಂದಿಷ್ಟು ಸಮಯದೊಳಗಾಗಿ, ಅವನು ಧೈರ್ಯದಿಂದ ಸಾರುತ್ತಾ ಇದ್ದನು. ಆದುದರಿಂದ ಅವನು, ಪಂಚಾಶತ್ತಮದಂದು ಮಾತ್ರವಲ್ಲ ತನ್ನ ಜೀವಮಾನದ ಉಳಿದ ಸಮಯವೆಲ್ಲ ಸಾರಿದನು.
ಪೇತ್ರನು ಮಾಡಿದಂತೆಯೇ, ಯಾವುದೊ ವಿಧದಲ್ಲಿ ನಾವು ತಪ್ಪುಮಾಡಿರುವುದಾದರೆ, ಆಗೇನು? ನಾವು ಪಶ್ಚಾತ್ತಾಪವನ್ನು ಪ್ರದರ್ಶಿಸಿ, ಕ್ಷಮಾಪಣೆಗಾಗಿ ಪ್ರಾರ್ಥಿಸಿ, ಆತ್ಮಿಕ ಸಹಾಯವನ್ನು ಪಡೆದುಕೊಳ್ಳಲು ಹೆಜ್ಜೆಗಳನ್ನು ತೆಗೆದುಕೊಳ್ಳೋಣ. (ಯಾಕೋಬ 5:14-16) ಆಗ ನಾವು, ನಮ್ಮ ಪವಿತ್ರ ಸೇವೆಯು ನಮ್ಮ ಕರುಣಾಮಯಿ, ಸ್ವರ್ಗೀಯ ತಂದೆಯಾದ ಯೆಹೋವನಿಗೆ ಸ್ವೀಕಾರಾರ್ಹವಾಗಿದೆ ಎಂಬ ಭರವಸೆಯಿಂದ ಮುಂದುವರಿಯಸಾಧ್ಯವಿದೆ.—ವಿಮೋಚನಕಾಂಡ 34:6.