ಲುದ್ಯ—ದೇವರ ಆದರಾತಿಥ್ಯದ ಆರಾಧಕಳು
ಪ್ರಾಚೀನ ಸಮಯಗಳಿಂದ, ಸತ್ಯ ದೇವರ ಸೇವಕರು ತಮ್ಮ ಆತಿಥ್ಯದ ಕಾರಣಕ್ಕಾಗಿ ತಮ್ಮನ್ನು ಬೇರೆಯಾಗಿ ಗುರುತಿಸಿಕೊಂಡಿದ್ದಾರೆ. (ಆದಿಕಾಂಡ 18:1-8; 19:1-3) ಒಂದು ಪ್ರಾಮಾಣಿಕ ಹೃದಯದಿಂದ ಚಿಮ್ಮುವ ಆತಿಥ್ಯವು, “ಅಪರಿಚಿತರ ಕಡೆಗಿನ ಪ್ರೀತಿ, ಅವರಿಗಾಗಿ ಮಮತೆ, ಅಥವಾ ದಯೆ” ಎಂಬುದಾಗಿ ವಿಶದೀಕರಿಸಲ್ಪಟ್ಟು, ಇಂದಿಗೂ ನಿಜ ಕ್ರೈಸ್ತತ್ವದ ಒಂದು ಚಿಹ್ನೆಯಾಗಿದೆ. ವಾಸ್ತವವಾಗಿ, ಅದು ದೇವರನ್ನು ಸ್ವೀಕಾರಾರ್ಹವಾಗಿ ಆರಾಧಿಸಲಿರುವ ಸಕಲರಿಗಾಗಿರುವ ಒಂದು ಆವಶ್ಯಕತೆಯಾಗಿದೆ.—ಇಬ್ರಿಯ 13:2; 1 ಪೇತ್ರ 4:9.
ಲುದ್ಯಳು ಆತಿಥ್ಯವನ್ನು ಆದರ್ಶಪ್ರಾಯ ವಿಧದಲ್ಲಿ ಪ್ರದರ್ಶಿಸಿದ ಒಬ್ಬ ವ್ಯಕ್ತಿಯಾಗಿದ್ದಳು. ಫಿಲಿಪ್ಪಿ ಪಟ್ಟಣವನ್ನು ಸಂದರ್ಶಿಸುತ್ತಿದ್ದ ಕ್ರೈಸ್ತ ಮಿಷನೆರಿಗಳು, ತನ್ನ ಮನೆಯಲ್ಲಿ ತಂಗುವಂತೆ ಆಕೆ “ಬಲವಂತ ಮಾಡಿದಳು.” (ಅ. ಕೃತ್ಯಗಳು 16:15) ಶಾಸ್ತ್ರಗಳಲ್ಲಿ ಲುದ್ಯಳು ಬಹಳ ಸಂಕ್ಷಿಪ್ತವಾಗಿ ಉಲ್ಲೇಖಿಸಲ್ಪಟ್ಟಿರುವುದಾದರೂ, ಆಕೆಯ ಕುರಿತಾಗಿ ಹೇಳಲ್ಪಟ್ಟಿರುವ ಅತ್ಯಲ್ಪ ವಿಷಯವು ನಮಗೆ ಪ್ರೋತ್ಸಾಹದಾಯಕವಾಗಿರಬಲ್ಲದು. ಯಾವ ವಿಧದಲ್ಲಿ? ಲುದ್ಯಳು ಯಾರಾಗಿದ್ದಳು? ಆಕೆಯ ಕುರಿತು ನಮಗೇನು ಗೊತ್ತಿದೆ?
“ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳು”
ಲುದ್ಯ, ಮೆಕೆದೋನ್ಯದ ಪ್ರಧಾನ ನಗರವಾದ ಫಿಲಿಪ್ಪಿಯಲ್ಲಿ ಜೀವಿಸಿದಳು. ಹಾಗಿದ್ದರೂ, ಆಕೆ ಪಾಶ್ಚಾತ್ಯ ಏಷಿಯ ಮೈನರ್‌ನಲ್ಲಿನ, ಲುದ್ಯವೆಂಬ ಪ್ರಾಂತದ ಒಂದು ನಗರ, ಥುವತೈರದಿಂದ ಬಂದವಳಾಗಿದ್ದಳು. ಈ ಕಾರಣಕ್ಕಾಗಿ “ಲುದ್ಯ” ಎಂಬುದು, ಫಿಲಿಪ್ಪಿಯಲ್ಲಿ ಆಕೆಗೆ ಕೊಡಲ್ಪಟ್ಟ ಒಂದು ಅಡ್ಡ ಹೆಸರಾಗಿತ್ತೆಂದು ಕೆಲವರು ಸೂಚಿಸುತ್ತಾರೆ. ಬೇರೆ ಮಾತುಗಳಲ್ಲಿ, ಯಾವ ಸ್ತ್ರೀಗೆ ಯೇಸು ಕ್ರಿಸ್ತನು ಸಾಕ್ಷಿನೀಡಿದನೊ, ಆಕೆ “ಸಮಾರ್ಯದವಳು” ಎಂಬುದಾಗಿ ಕರೆಯಲ್ಪಡಸಾಧ್ಯವಿದ್ದಂತೆಯೇ, ಈಕೆ “ಲುದ್ಯದವಳಾ”ಗಿದ್ದಳು. (ಯೋಹಾನ 4:9) ಲುದ್ಯ “ಧೂಮ್ರವರ್ಣ” ಅಥವಾ ಈ ವರ್ಣದಿಂದ ಬಣ್ಣಹಾಕಲ್ಪಟ್ಟ ವಸ್ತುಗಳನ್ನು ಮಾರಾಟಮಾಡಿದಳು. (ಅ. ಕೃತ್ಯಗಳು 16:12, 14) ಥುವತೈರದಲ್ಲಿ ಮತ್ತು ಫಿಲಿಪ್ಪಿಯಲ್ಲಿ ವರ್ಣತಯಾರಕರ ಇರುವಿಕೆಯು, ಪ್ರಾಚೀನ ವಸ್ತು ಶೋಧಕರ ಮೂಲಕ ಅಗೆದು ತೆಗೆದ ಲೇಖನಗಳ ಮೂಲಕ ದೃಢೀಕರಿಸಲ್ಪಟ್ಟಿದೆ. ಲುದ್ಯ ತನ್ನ ಕೆಲಸದ ಕಾರಣ—ತನ್ನ ಸ್ವಂತ ವ್ಯಾಪಾರವನ್ನು ನಡೆಸಲಿಕ್ಕಾಗಲಿ ಅಥವಾ ಥುವತೈರದ ವರ್ಣತಯಾರಕರ ಒಂದು ಕಂಪನಿಯ ಪ್ರತಿನಿಧಿಯಾಗಿ ಆಗಲಿ—ಸ್ಥಳಾಂತರಿಸಿದ್ದಳೆಂಬುದು ಸಂಭವನೀಯ.
ಧೂಮ್ರವರ್ಣವು ಹಲವಾರು ಮೂಲಗಳಿಂದ ಬರಸಾಧ್ಯವಿತ್ತು. ಅತಿ ದುಬಾರಿಯಾದ ಧೂಮ್ರವರ್ಣವು, ಕೆಲವು ಬಗೆಯ ಕಡಲಿನ ಮೃದ್ವಂಗಿಗಳಿಂದ ತೆಗೆಯಲ್ಪಡುತ್ತಿತ್ತು. ಪ್ರಥಮ ಶತಮಾನದ ರೋಮನ್ ಕವಿ, ಮಾರ್ಷಿಯಲ್‌ಗನುಸಾರ, ತೂರ್ ದೇಶದ (ಈ ಪದಾರ್ಥವನ್ನು ಉತ್ಪಾದಿಸಿದ ಮತ್ತೊಂದು ಕೇಂದ್ರ) ಅತ್ಯುತ್ತಮ ಧೂಮ್ರದ ಒಂದು ನಿಲುವಂಗಿಯು, 10,000 ಸೆಸ್ಟರ್ಸಸ್ ಅಥವಾ 2,500 ಡಿನೇರಿಯಸ್—ಒಬ್ಬ ಕಾರ್ಮಿಕನ 2,500 ದಿನಗಳ ಸಂಬಳಕ್ಕೆ ಸರಿಸಮಾನ—ಬೆಲೆಯುಳ್ಳದ್ದಾಗಿರಸಾಧ್ಯವಿತ್ತು. ಸ್ಪಷ್ಟವಾಗಿಯೇ, ಇಂತಹ ವಸ್ತ್ರಗಳು ಭೋಗ ವಸ್ತುಗಳಾಗಿದ್ದು, ಕೊಂಚ ಜನರು ಮಾತ್ರ ಅವುಗಳನ್ನು ಪಡೆದಿರಸಾಧ್ಯವಿತ್ತು. ಆದುದರಿಂದ ಲುದ್ಯಳು ಆರ್ಥಿಕವಾಗಿ ಅನುಕೂಲಸ್ಥಳಾಗಿದ್ದಿರಬಹುದು. ಏನೇ ಆಗಲಿ, ಆಕೆ ಅಪೊಸ್ತಲ ಪೌಲ ಮತ್ತು ಅವನ ಸಂಗಡಿಗರಾದ—ಲೂಕ, ಸೀಲ, ತಿಮೊಥೆಯ, ಮತ್ತು ಬಹುಶಃ ಇತರರಿಗೆ—ಆತಿಥ್ಯವನ್ನು ನೀಡಲು ಶಕ್ತಳಾಗಿದ್ದಳು.
ಫಿಲಿಪ್ಪಿಯಲ್ಲಿ ಪೌಲನ ಸಾರುವಿಕೆ
ಹೆಚ್ಚು ಕಡಮೆ ಸಾ.ಶ. 50ನೆಯ ಇಸವಿಯಲ್ಲಿ, ಪೌಲನು ಪ್ರಥಮವಾಗಿ ಯೂರೋಪಿನಲ್ಲಿ ಕಾಲಿಟ್ಟನು ಮತ್ತು ಫಿಲಿಪ್ಪಿಯಲ್ಲಿ ಸಾರಲಾರಂಭಿಸಿದನು.a ಅವನೊಂದು ಹೊಸ ಪಟ್ಟಣಕ್ಕೆ ಆಗಮಿಸುವಾಗ, ಸಭಾಮಂದಿರವನ್ನು ಸಂದರ್ಶಿಸಿ, ಅಲ್ಲಿ ಕೂಡಿಬಂದ ಯೆಹೂದ್ಯರಿಗೂ ಮತಾವಲಂಬಿಗಳಿಗೂ ಪ್ರಥಮವಾಗಿ ಸಾರುವುದು ಪೌಲನ ರೂಢಿಯಾಗಿತ್ತು. (ಹೋಲಿಸಿ ಅ. ಕೃತ್ಯಗಳು 13:4, 5, 13, 14; 14:1.) ಆದರೆ, ಮಾಹಿತಿಯ ಕೆಲವು ಮೂಲಗಳಿಗನುಸಾರ, ತಮ್ಮ ಧರ್ಮವನ್ನು ಫಿಲಿಪ್ಪಿಯ “ಪವಿತ್ರ ಮೇರೆಗಳ” ಒಳಗೆ ಆಚರಿಸುವುದರಿಂದ ಯೆಹೂದ್ಯರನ್ನು ರೋಮನ್ ನಿಯಮವು ನಿಷೇಧಿಸಿತು. ಆದುದರಿಂದ, ಅಲ್ಲಿ “ಕೆಲವು ದಿವಸ”ಗಳನ್ನು ಕಳೆದ ಬಳಿಕ, ಎಲ್ಲಿ ‘ಅವರು ಪ್ರಾರ್ಥನೆ ನಡೆಯುವ ಸ್ಥಳ ಇರುವದೆಂದು ನೆನಸಿ’ದರೋ, ಆ ನಗರದ ಹೊರಗಿನ ಒಂದು ನದಿಯ ಪಕ್ಕದಲ್ಲಿ, ಸಬ್ಬತ್ ದಿನದಂದು ಮಿಷನೆರಿಗಳು ಒಂದು ಸ್ಥಳವನ್ನು ಕಂಡುಕೊಂಡರು. (ಅ. ಕೃತ್ಯಗಳು 16:12, 13) ಇದು ಗಾಂಜೀಟೀಸ್ ನದಿಯಾಗಿತ್ತೆಂಬುದು ಸುವ್ಯಕ್ತ. ಅಲ್ಲಿ ಮಿಷನೆರಿಗಳು ಕೇವಲ ಸ್ತ್ರೀಯರನ್ನು ಕಂಡುಕೊಂಡರು, ಅವರಲ್ಲಿ ಲುದ್ಯಳು ಒಬ್ಬಳಾಗಿದ್ದಳು.
“ದೇವರ ಒಬ್ಬ ಆರಾಧಕಳು”
ಲುದ್ಯಳು “ದೇವರ ಒಬ್ಬ ಆರಾಧಕ” (NW)ಳಾಗಿದ್ದಳಾದರೂ, ಧಾರ್ಮಿಕ ಸತ್ಯದ ಅನ್ವೇಷಣೆಯಲ್ಲಿ ಆಕೆ ಯೆಹೂದಿಮತಕ್ಕೆ ಮತಾಂತರ ಹೊಂದಿದ್ದವಳಾಗಿದ್ದಿರಬಹುದು. ಆಕೆಗೆ ಒಂದು ಒಳ್ಳೆಯ ಉದ್ಯೋಗವಿತ್ತಾದರೂ, ಲುದ್ಯಳು ಪ್ರಾಪಂಚಿಕ ಮನೋಭಾವದವಳಾಗಿರಲಿಲ್ಲ. ಬದಲಾಗಿ, ಆಕೆ ಆತ್ಮಿಕ ವಿಷಯಗಳಿಗಾಗಿ ಸಮಯವನ್ನು ಮೀಸಲಾಗಿಟ್ಟಳು. “ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತನು [“ಯೆಹೋವನು,” NW] ಆಕೆಯ ಹೃದಯವನ್ನು ತೆರೆದನು,” ಮತ್ತು ಲುದ್ಯಳು ಸತ್ಯವನ್ನು ಸ್ವೀಕರಿಸಿದಳು. ವಾಸ್ತವವಾಗಿ, “ಆಕೆಯೂ ಆಕೆಯ ಮನೆಯವರೂ [“ಮನೆವಾರ್ತೆಯು,” NW] ದೀಕ್ಷಾಸ್ನಾನ ಮಾಡಿಸಿಕೊಂಡ”ರು.—ಅ. ಕೃತ್ಯಗಳು 16:14, 15.
ಲುದ್ಯಳ ಮನೆವಾರ್ತೆಯ ಇತರ ಸದಸ್ಯರು ಯಾರಾಗಿದ್ದರು ಎಂಬುದನ್ನು ಬೈಬಲು ನಿರ್ದಿಷ್ಟವಾಗಿ ಹೇಳುವುದಿಲ್ಲ. ಒಬ್ಬ ಗಂಡನ ಉಲ್ಲೇಖವು ಇಲ್ಲದಿರುವ ಕಾರಣದಿಂದ, ಆಕೆ ಅವಿವಾಹಿತಳಾಗಿದ್ದಿರಬಹುದು ಅಥವಾ ವಿಧವೆಯಾಗಿದ್ದಿರಬಹುದು. ಬಹುಶಃ “ಆಕೆಯ ಮನೆವಾರ್ತೆಯು” ಸಂಬಂಧಿಕರಿಂದ ರಚಿತವಾಗಿತ್ತು, ಆದರೆ ಮನೆವಾರ್ತೆ ಎಂಬ ಶಬ್ದವು ದಾಸರನ್ನು ಅಥವಾ ಸೇವಕರನ್ನು ಸಹ ಸೂಚಿಸಿದ್ದಿರಸಾಧ್ಯವಿದೆ. ವಿಷಯವು ಏನೇ ಆಗಿರಲಿ, ಲುದ್ಯಳು ತಾನು ಕಲಿತಿದ್ದ ಸಂಗತಿಗಳನ್ನು, ತನ್ನೊಂದಿಗೆ ಜೀವಿಸಿದವರೊಂದಿಗೆ ಹುರುಪಿನಿಂದ ಹಂಚಿಕೊಂಡಳು. ಮತ್ತು ಅವರು ಅದನ್ನು ನಂಬಿ, ಸತ್ಯ ನಂಬಿಕೆಯನ್ನು ಆದರದಿಂದ ಸ್ವೀಕರಿಸಿದಾಗ, ಅವಳಿಗೆ ಎಷ್ಟು ಆನಂದವಾಗಿದ್ದಿರಬೇಕು!
‘ಬಂದು ಇರುವಂತೆ . . . ನಮ್ಮನ್ನು ಬಲವಂತ ಮಾಡಿದಳು’
ಲುದ್ಯಳನ್ನು ಸಂಧಿಸುವುದಕ್ಕೆ ಮೊದಲು, ಮಿಷನೆರಿಗಳು ಬಹುಶಃ ತಮ್ಮ ಸ್ವಂತ ವೆಚ್ಚಗಳಿಂದ ದೊರಕಿಸಿಕೊಂಡ ವಸತಿವ್ಯವಸ್ಥೆಗಳೊಂದಿಗೆ ಸಂತೃಪ್ತರಾಗಿರಬೇಕಾಗಿತ್ತು. ಆದರೆ ಅವರಿಗೆ ಪರ್ಯಾಯ ವಸತಿಸ್ಥಳಗಳನ್ನು ಒದಗಿಸಲು ಶಕ್ತಳಾದುದಕ್ಕಾಗಿ ಆಕೆ ಸಂತೋಷಿತಳಾಗಿದ್ದಳು. ಆದರೂ, ಆಕೆ ಒತ್ತಾಯ ಮಾಡಬೇಕಾಗಿತ್ತು ಎಂಬ ವಾಸ್ತವಾಂಶವು, ಪೌಲನೂ ಅವನ ಸಂಗಡಿಗರೂ ನಿರ್ದಿಷ್ಟ ನಿರಾಕರಣೆಯನ್ನು ಒಡ್ಡಿದರೆಂಬುದನ್ನು ಸೂಚಿಸುತ್ತದೆ. ಏಕೆ? ಪೌಲನು ‘ತನ್ನ ಅಧಿಕಾರವನ್ನು ದುರುಪಯೋಗಿಸದಿರುವ ಮಟ್ಟಕ್ಕೆ, ಸುವಾರ್ತೆಯನ್ನು ವೆಚ್ಚರಹಿತವಾಗಿ ಪೂರೈಸಲು,’ ಹಾಗೂ ಯಾರೊಬ್ಬರಿಗೂ ಒಂದು ಹೊರೆಯಾಗಿ ಪರಿಣಮಿಸದಿರಲು ಬಯಸಿದನು. (1 ಕೊರಿಂಥ 9:18, NW; 2 ಕೊರಿಂಥ 12:14) ಆದರೆ ಲೂಕನು ಕೂಡಿಸುವುದು: “ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನಮಾಡಿಸಿಕೊಂಡ ಮೇಲೆ ಆಕೆ—ನಾನು ಕರ್ತನನ್ನು [“ಯೆಹೋವನನ್ನು,” NW] ನಂಬಿದವಳೆಂದು ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಇರ್ರಿ ಎಂದು ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು.” (ಅ. ಕೃತ್ಯಗಳು 16:15) ಯೆಹೋವನಿಗೆ ನಂಬಿಗಸ್ತಳಾಗಿರುವುದರ ಕುರಿತು ಲುದ್ಯಳು ಬಹಳ ಆಸ್ಥೆಯುಳ್ಳವಳಾಗಿದ್ದಳು, ಮತ್ತು ಅತಿಥಿ ಸತ್ಕಾರವನ್ನು ಮಾಡುವುದು ಆಕೆಯ ನಂಬಿಕೆಯ ಒಂದು ಪುರಾವೆಯಾಗಿತ್ತೆಂಬುದು ಸುವ್ಯಕ್ತ. (1 ಪೇತ್ರ 4:9ನ್ನು ಹೋಲಿಸಿರಿ.) ಎಂತಹ ಅತ್ಯುತ್ತಮವಾದೊಂದು ಮಾದರಿ! ನಾವು ಸಹ ನಮ್ಮ ಸ್ವತ್ತುಗಳನ್ನು ಸುವಾರ್ತೆಯ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಉಪಯೋಗಿಸುತ್ತೇವೊ?
ಫಿಲಿಪ್ಪಿಯಲ್ಲಿನ ಸಹೋದರರು
ದೆವ್ವ ಹಿಡಿದಿದ್ದ ದಾಸಿಯನ್ನು ಒಳಗೊಂಡ ಘಟನಾವಳಿಯ ಬಳಿಕ, ಪೌಲ ಮತ್ತು ಸೀಲರು ಸೆರೆಮನೆಯಿಂದ ಬಿಡುಗಡೆಗೊಳಿಸಲ್ಪಟ್ಟಾಗ, ಅವರು ಲುದ್ಯಳ ಮನೆಗೆ ಹಿಂದಿರುಗಿದರು, ಅಲ್ಲಿ ಅವರು ಕೆಲವು ಸಹೋದರರನ್ನು ಕಂಡುಕೊಂಡರು. (ಅ. ಕೃತ್ಯಗಳು 16:40) ಹೊಸದಾಗಿ ರಚಿತವಾಗಿದ್ದ ಫಿಲಿಪ್ಪಿಯ ಸಭೆಯಲ್ಲಿದ್ದ ವಿಶ್ವಾಸಿಗಳು, ಲುದ್ಯಳ ಮನೆಯನ್ನು ಒಂದು ಕ್ರಮವಾದ ಕೂಟದ ಸ್ಥಳವಾಗಿ ಉಪಯೋಗಿಸಿದ್ದಿರಬಹುದು. ಈ ನಗರದಲ್ಲಿ ಆಕೆಯ ಮನೆಯು ದೇವಪ್ರಭುತ್ವ ಚಟುವಟಿಕೆಯ ಒಂದು ಕೇಂದ್ರವಾಗಿ ಮುಂದುವರಿಯಿತೆಂದು ಅಭಿಪ್ರಯಿಸುವುದು ತರ್ಕಬದ್ಧವಾದದ್ದಾಗಿದೆ.
ಲುದ್ಯಳಿಂದ ತೋರಿಸಲ್ಪಟ್ಟ ಆರಂಭದ ಆದರಣೀಯ ಅತಿಥಿ ಸತ್ಕಾರವು, ಇಡೀ ಸಭೆಯ ಒಂದು ವೈಶಿಷ್ಟ್ಯವಾಗಿ ಪರಿಣಮಿಸಿತು. ತಮ್ಮ ಬಡತನದ ಹೊರತಾಗಿಯೂ, ಅನೇಕ ಸಂದರ್ಭಗಳಲ್ಲಿ ಫಿಲಿಪ್ಪಿಯವರು ಪೌಲನಿಗೆ ಅಗತ್ಯವಾಗಿದ್ದ ವಸ್ತುಗಳನ್ನು ಕಳುಹಿಸಿದರು, ಮತ್ತು ಅಪೊಸ್ತಲನು ಕೃತಜ್ಞನಾಗಿದ್ದನು.—2 ಕೊರಿಂಥ 8:1, 2; 11:9; ಫಿಲಿಪ್ಪಿ 4:10, 15, 16.
ಸುಮಾರು ಸಾ.ಶ. 60-61ರಲ್ಲಿ ಪೌಲನಿಂದ ಫಿಲಿಪ್ಪಿಯವರಿಗೆ ಕಳುಹಿಸಲ್ಪಟ್ಟ ಪತ್ರದಲ್ಲಿ ಲುದ್ಯಳ ಕುರಿತಾಗಿ ಉಲ್ಲೇಖಿಸಲ್ಪಟ್ಟಿಲ್ಲ. ಅಪೊಸ್ತಲ ಕೃತ್ಯಗಳು 16ನೆಯ ಅಧ್ಯಾಯದಲ್ಲಿ ಕಥನಮಾಡಲ್ಪಟ್ಟಿರುವ ಘಟನೆಗಳ ಬಳಿಕ, ಅವಳಿಗೆ ಏನು ಸಂಭವಿಸಿತೆಂಬುದನ್ನು ಶಾಸ್ತ್ರವಚನಗಳು ಪ್ರಕಟಪಡಿಸುವುದಿಲ್ಲ. ಆದರೂ, ಈ ಕ್ರಿಯಾತ್ಮಕ ಸ್ತ್ರೀಯ ಕುರಿತಾದ ಸಂಕ್ಷಿಪ್ತ ಉಲ್ಲೇಖವು, ನಮಗೆ “ಅತಿಥಿಸತ್ಕಾರವನ್ನು ಅಭ್ಯಾಸಿ”ಸಲು ಬಯಸುವಂತೆ ಮಾಡುತ್ತದೆ. (ರೋಮಾಪುರ 12:13) ನಮ್ಮ ನಡುವೆ ಲುದ್ಯಳಂತಹ ಕ್ರೈಸ್ತರನ್ನು ಪಡೆದಿರುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಅವರ ಆತ್ಮವು, ಯೆಹೋವ ದೇವರ ಮಹಿಮೆಗಾಗಿ, ಸಭೆಗಳನ್ನು ಆದರಣೀಯವನ್ನಾಗಿಯೂ ಸ್ನೇಹಪರವನ್ನಾಗಿಯೂ ಮಾಡಲಿಕ್ಕಾಗಿ ಹೆಚ್ಚನ್ನು ಮಾಡುತ್ತದೆ.
[ಪಾದಟಿಪ್ಪಣಿ]
a ಮ್ಯಾಸಿಡೋನಿಯದ ಅತ್ಯಂತ ಪ್ರಮುಖ ನಗರಗಳಲ್ಲಿ, ಫಿಲಿಪ್ಪಿಯು ಯೂಸ್ ಇಟಾಲಿಕುಮ್‌ನಿಂದ (ಪ್ರಾಚೀನ ಇಟಲಿಯ ಧರ್ಮಶಾಸ್ತ್ರ) ಆಳಲ್ಪಟ್ಟಂತಹ, ಸಂಬಂಧಸೂಚಕವಾಗಿ ಸಮೃದ್ಧವಾದ ಮಿಲಿಟರಿ ಪಾಳೆಯವಾಗಿತ್ತು. ಈ ಶಾಸನವು ರೋಮನ್ ನಾಗರಿಕರಿಂದ ಅನುಭವಿಸಲ್ಪಡುವವುಗಳಿಗೆ ತುಲನಾತ್ಮಕವಾದ ಹಕ್ಕುಗಳನ್ನು ಫಿಲಿಪ್ಪಿಯವರಿಗೆ ಖಾತ್ರಿಪಡಿಸಿತು.—ಅ. ಕೃತ್ಯಗಳು 16:9, 12, 21.
[ಪುಟ 28 ರಲ್ಲಿರುವ ಚೌಕ]
ಫಿಲಿಪ್ಪಿಯಲ್ಲಿ ಯೆಹೂದಿ ಜೀವನ
ಯೆಹೂದ್ಯರಿಗೆ ಹಾಗೂ ಯೆಹೂದಿಮತಕ್ಕೆ ಮತಾವಲಂಬಿಗಳಾದವರಿಗೆ, ಫಿಲಿಪ್ಪಿಯಲ್ಲಿನ ಜೀವನವು ಸುಲಭವಾದುದ್ದಾಗಿರಲಿಲ್ಲ. ಕೆಲವು ಯೆಹೂದಿ ವಿರೋಧ ಚಿತ್ತವೃತ್ತಿಗಳಿದ್ದಿರಬಹುದು, ಏಕೆಂದರೆ ಪೌಲನ ಸಂದರ್ಶನಕ್ಕೆ ಸ್ವಲ್ಪಸಮಯದ ಮುಂಚೆ, ಕ್ಲೌದಿಯ ಚಕ್ರವರ್ತಿಯು ಯೆಹೂದ್ಯರನ್ನು ರೋಮ್‌ನಿಂದ ದೇಶಭ್ರಷ್ಟರನ್ನಾಗಿ ಮಾಡಿದ್ದನು.—ಹೋಲಿಸಿರಿ ಅ. ಕೃತ್ಯಗಳು 18:2.
ಗಮನಾರ್ಹವಾಗಿಯೇ, ಕಣಿ ಹೇಳುವ ದೆವ್ವಹಿಡಿದಿದ್ದ ದಾಸಿಯನ್ನು ವಾಸಿಮಾಡಿದ ಬಳಿಕ, ಪೌಲ ಮತ್ತು ಸೀಲರು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಲ್ಪಟ್ಟಿದ್ದರು. ಈಗ ಒಂದು ಲಾಭಕರವಾದ ಆದಾಯದ ಮೂಲದಿಂದ ವಂಚಿತರಾಗಿದ್ದು, ಅವಳ ಯಜಮಾನರು, ಹೀಗೆ ಹೇಳುವ ಮೂಲಕ ತಮ್ಮ ಜೊತೆ ನಾಗರಿಕರ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಸ್ವಪ್ರಯೋಜನಕ್ಕಾಗಿ ಬಳಸಿಕೊಂಡರು: “ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಗಲಿಬಿಲಿ ಮಾಡುತ್ತಾರೆ; ಇವರು ಯೆಹೂದ್ಯರಾಗಿದ್ದು ರೋಮಾಯರಾದ ನಾವು ಅವಲಂಬಿಸಿ ನಡಿಸಕೂಡದಂಥ ಆಚಾರಗಳನ್ನು ಪ್ರಕಟಿಸುತ್ತಾರೆ.” (ಓರೆಅಕ್ಷರಗಳು ನಮ್ಮವು.) ಫಲಿತಾಂಶವಾಗಿ, ಪೌಲ ಮತ್ತು ಸೀಲರು ಕೋಲುಗಳಿಂದ ಹೊಡೆಯಲ್ಪಟ್ಟು, ಸೆರೆಮನೆಯೊಳಕ್ಕೆ ಎಸೆಯಲ್ಪಟ್ಟರು. (ಅ. ಕೃತ್ಯಗಳು 16:16-24) ಅಂತಹ ಒಂದು ವಾತಾವರಣದಲ್ಲಿ, ಯೆಹೂದ್ಯರ ದೇವರಾದ ಯೆಹೋವನನ್ನು ಬಹಿರಂಗವಾಗಿ ಆರಾಧಿಸುವುದು, ಧೈರ್ಯವನ್ನು ಕೇಳಿಕೊಂಡಿತು. ಆದರೆ ಲುದ್ಯಳು ತಾನು ಭಿನ್ನಳಾಗಿದ್ದೇನೆಂಬುದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲವೆಂಬುದು ಸುವ್ಯಕ್ತ.
[ಪುಟ 27 ರಲ್ಲಿರುವ ಚಿತ್ರಗಳು]
ಫಿಲಿಪ್ಪಿಯಲ್ಲಿನ ಅವಶೇಷಗಳು