ಅಪೊಲ್ಲೋಸ—ಕ್ರೈಸ್ತ ಸತ್ಯದ ಒಬ್ಬ ವಾಕ್ಚತುರ ಘೋಷಕ
ಅನೇಕ ವರ್ಷಗಳಿಂದ ಅವರು ಕ್ರೈಸ್ತ ಸಭೆಯ ಸದಸ್ಯರಾಗಿದ್ದಿರಲಿ ಅಥವಾ ಕೆಲವೇ ವರ್ಷಗಳಿಂದಾಗಿದ್ದಿರಲಿ, ಸುವಾರ್ತೆಯ ಪ್ರಚಾರಕರೋಪಾದಿ ಪ್ರಗತಿಮಾಡುವುದರಲ್ಲಿ ಎಲ್ಲಾ ರಾಜ್ಯ ಘೋಷಕರು ಆಸಕ್ತರಾಗಿರಬೇಕು. ಅದು ದೇವರ ವಾಕ್ಯದ ಕುರಿತಾದ ನಮ್ಮ ಜ್ಞಾನವನ್ನು ಮತ್ತು ಅದನ್ನು ಇತರರಿಗೆ ಕಲಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಅರ್ಥೈಸುತ್ತದೆ. ಕೆಲವರಿಗಾದರೋ, ಅದು ಪಂಥಾಹ್ವಾನಗಳನ್ನು ಎದುರಿಸುವುದನ್ನು, ಕಷ್ಟತೊಂದರೆಗಳನ್ನು ಜಯಿಸುವುದನ್ನು, ಅಥವಾ ಹೆಚ್ಚಿನ ಚಟುವಟಿಕೆಗಾಗಿ ತಮ್ಮನ್ನು ದೊರಕಿಸಿಕೊಳ್ಳುವುದನ್ನು ಅರ್ಥೈಸಬಹುದು.
ವಿಭಿನ್ನ ರೀತಿಗಳಲ್ಲಿ, ಮಹತ್ತಾದ ಆತ್ಮಿಕ ಪ್ರಗತಿಯನ್ನು ಮಾಡುವುದರಲ್ಲಿ ಸಫಲರಾದ ಹಾಗೂ ತಮ್ಮ ಪ್ರಯತ್ನಗಳಿಗಾಗಿ ಪ್ರತಿಫಲಗಳನ್ನು ಪಡೆದುಕೊಂಡ, ಪುರಾತನ ಕಾಲಗಳ ಧರ್ಮನಿಷ್ಠ ಸ್ತ್ರೀಪುರುಷರ ಅನೇಕ ಉದಾಹರಣೆಗಳನ್ನು ಬೈಬಲು ಒಳಗೊಂಡಿದೆ. ಅವರಲ್ಲಿ ಒಬ್ಬನು ಅಪೊಲ್ಲೋಸನಾಗಿದ್ದನು. ಶಾಸ್ತ್ರವಚನಗಳು ಅವನನ್ನು ನಮಗೆ ಪರಿಚಯಪಡಿಸುವಾಗ, ಕ್ರೈಸ್ತ ಬೋಧನೆಗಳ ಅಪೂರ್ಣ ತಿಳಿವಳಿಕೆಯನ್ನು ಹೊಂದಿರುವ ವ್ಯಕ್ತಿಯು ಈತನಾಗಿದ್ದಾನೆ; ಹಾಗಿದ್ದರೂ, ಕೆಲವೊಂದು ವರ್ಷಗಳ ಬಳಿಕ ಅವನು ಪ್ರಥಮ ಶತಮಾನದ ಸಭೆಯ ಒಬ್ಬ ಸಂಚಾರ ಪ್ರತಿನಿಧಿಯೋಪಾದಿ ಕಾರ್ಯನಡಿಸುತ್ತಿದ್ದಾನೆ. ಅಂತಹ ಪ್ರಗತಿಯನ್ನು ಮಾಡುವಂತೆ ಯಾವುದು ಅವನನ್ನು ಶಕ್ತನನ್ನಾಗಿ ಮಾಡಿತು? ನಮಗೆಲ್ಲರಿಗೆ ಅನುಕರಣೋಚಿತವಾದ ಗುಣಗಳು ಅವನಲ್ಲಿದ್ದವು.
“ಶಾಸ್ತ್ರಗಳಲ್ಲಿ ಪ್ರವೀಣನು”
ಸುಮಾರು ಸಾ.ಶ. 52ನೆಯ ವರ್ಷದಲ್ಲಿ, ಬೈಬಲ್ ಬರಹಗಾರನಾದ ಲೂಕನಿಗನುಸಾರ, “ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನು, ಶಾಸ್ತ್ರಗಳಲ್ಲಿ ಪ್ರವೀಣನು. ಅವನು ಕರ್ತನ [“ಯೆಹೋವನ,” NW] ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು; ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದಾಗ್ಯೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು. ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತಾಡುವದಕ್ಕೆ ಪ್ರಾರಂಭಿಸಿದನು.”—ಅ. ಕೃತ್ಯಗಳು 18:24-26.
ಐಗುಪ್ತ್ಯದ ಅಲೆಕ್ಸಾಂದ್ರಿಯವು, ರೋಮ್ನ ನಂತರ ಲೋಕದ ಎರಡನೆಯ ಅತ್ಯಂತ ದೊಡ್ಡ ನಗರವಾಗಿತ್ತು ಮತ್ತು ಯೆಹೂದ್ಯರಿಗಾಗಿಯೂ ಗ್ರೀಕರಿಗಾಗಿಯೂ—ಇಬ್ಬರಿಗೂ—ಆ ಕಾಲದ ಅತ್ಯಂತ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿತ್ತು. ಸಂಭವನೀಯವಾಗಿ, ಆ ನಗರದ ದೊಡ್ಡ ಯೆಹೂದಿ ಸಮುದಾಯದಲ್ಲಿನ ಶಿಕ್ಷಣದ ಫಲಿತಾಂಶವಾಗಿ, ಅಪೊಲ್ಲೋಸನು ಹೀಬ್ರು ಶಾಸ್ತ್ರವಚನಗಳ ಸ್ವಸ್ಥ ಜ್ಞಾನವನ್ನೂ ನಿರ್ದಿಷ್ಟ ವಾಕ್ಚಾತುರ್ಯವನ್ನೂ ಪಡೆದುಕೊಂಡನು. ಅಪೊಲ್ಲೋಸನು ಯೇಸುವಿನ ಕುರಿತಾಗಿ ಎಲ್ಲಿ ಕಲಿತಿದ್ದನು ಎಂಬುದನ್ನು ಅಂದಾಜುಮಾಡುವುದು ಹೆಚ್ಚು ಕಷ್ಟಕರ. “ಅವನೊಬ್ಬ ಪ್ರಯಾಣಿಕ—ಬಹುಶಃ ಒಬ್ಬ ಸಂಚಾರೀ ವ್ಯಾಪಾರಿ—ನಾಗಿದ್ದನೆಂಬುದು ಸುವ್ಯಕ್ತ” ಎಂಬುದಾಗಿ ವಿದ್ವಾಂಸರಾದ ಎಫ್. ಎಫ್. ಬ್ರೂಸ್ ಸೂಚಿಸುತ್ತಾರೆ. “ಮತ್ತು ಅವನು ಸಂದರ್ಶಿಸಿದ ಅನೇಕ ಸ್ಥಳಗಳಲ್ಲಿ ಯಾವುದಾದರೊಂದರಲ್ಲಿ ಕ್ರೈಸ್ತ ಪ್ರಚಾರಕರನ್ನು ಅವನು ಸಂಧಿಸಿದ್ದಿರಸಾಧ್ಯವಿದೆ.” ಇತರ ಪರಿಗಣನೆಗಳ ಹೊರತಾಗಿ, ಅವನು ಯೇಸುವಿನ ಕುರಿತು ಸರಿಯಾಗಿ ಮಾತಾಡಿ, ಕಲಿಸಿದನಾದರೂ, ಅವನು “ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವ”ನಾಗಿದ್ದುದರಿಂದ, ಸಾ.ಶ. 33ರ ಪಂಚಾಶತ್ತಮಕ್ಕೆ ಮೊದಲು ಅವನಿಗೆ ಸಾಕ್ಷಿನೀಡಲ್ಪಟ್ಟಿತ್ತೆಂಬಂತೆ ತೋರುತ್ತದೆ.
ಯೇಸುವಿನ ಮುನ್ಸೂಚಕನೋಪಾದಿ ಸ್ನಾನಿಕನಾದ ಯೋಹಾನನು, ಇಡೀ ಇಸ್ರಾಯೇಲ್ ಜನಾಂಗಕ್ಕೆ ಪ್ರಬಲವಾದ ಒಂದು ಸಾಕ್ಷಿಯನ್ನು ನೀಡಿದ್ದನು, ಹಾಗೂ ಪಶ್ಚಾತ್ತಾಪದ ಸಂಕೇತದೋಪಾದಿ ಅನೇಕರು ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. (ಮಾರ್ಕ 1:5; ಲೂಕ 3:15, 16) ಅನೇಕ ಇತಿಹಾಸಕಾರರಿಗನುಸಾರ, ರೋಮನ್ ಚಕ್ರಾಧಿಪತ್ಯದ ಯೆಹೂದಿ ಜನಸಂಖ್ಯೆಯ ಮಧ್ಯೆ ಯೇಸುವಿನ ಕುರಿತಾದ ಅನೇಕ ಜನರ ಜ್ಞಾನವು, ಯೊರ್ದನ್ ನದಿಯ ತೀರದಲ್ಲಿ ಸ್ನಾನಿಕನಾದ ಯೋಹಾನನಿಂದ ಏನು ಸಾರಲ್ಪಟ್ಟಿತ್ತೋ ಅಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. “ನಮ್ಮ ಕರ್ತನ ಶುಶ್ರೂಷೆಯ ಪ್ರಾರಂಭದಲ್ಲಿ ಅವರ ಕ್ರೈಸ್ತತ್ವವು ಯಾವ ಹಂತದಲ್ಲಿ ನಿಂತಿತ್ತೋ ಅದೇ ಹಂತದಲ್ಲಿ ಇತ್ತು” ಎಂದು ಡಬ್ಲ್ಯೂ. ಜೆ. ಕಾನಿಬ್ಯಾರ್ ಮತ್ತು ಜೆ. ಎಸ್. ಹಾಸನ್ ಹೇಳುತ್ತಾರೆ. “ಅವರು ಕ್ರಿಸ್ತನ ಮರಣದ ಸಂಪೂರ್ಣ ಅರ್ಥದ ಕುರಿತಾಗಿ ಅಜ್ಞಾನಿಗಳಾಗಿದ್ದರು; ಬಹುಶಃ ಅವರಿಗೆ ಅವನ ಪುನರುತ್ಥಾನದ ವಾಸ್ತವಾಂಶವೂ ತಿಳಿದಿರಲಿಲ್ಲ.” ಸಾ.ಶ. 33ರ ಪಂಚಾಶತ್ತಮದಲ್ಲಿನ ಪವಿತ್ರಾತ್ಮದ ಸುರಿಸುವಿಕೆಯ ಕುರಿತಾಗಿ ಅಪೊಲ್ಲೋಸನು ಸಹ ಅರಿವಿಲ್ಲದವನಾಗಿದ್ದನೆಂದು ತೋರುತ್ತದೆ. ಆದರೂ, ಯೇಸುವಿನ ಕುರಿತು ಒಂದಿಷ್ಟು ಸರಿಯಾದ ವರ್ತಮಾನವನ್ನು ಅವನು ಪಡೆದುಕೊಂಡಿದ್ದು, ಅವನು ಅದನ್ನು ತನ್ನಲ್ಲಿ ಇಟ್ಟುಕೊಳ್ಳಲಿಲ್ಲ. ವಾಸ್ತವವಾಗಿ, ಅವನು ತನಗೆ ತಿಳಿದಿದ್ದ ವಿಷಯವನ್ನು ಮಾತಾಡಲಿಕ್ಕಾಗಿ ಧೈರ್ಯದಿಂದ ಸಂದರ್ಭಗಳನ್ನು ಹುಡುಕಿದನು. ಹಾಗಿದ್ದರೂ, ಅವನ ಹುರುಪು ಹಾಗೂ ಅತ್ಯುತ್ಸಾಹವು ಇನ್ನೂ ನಿಷ್ಕೃಷ್ಟವಾದ ಜ್ಞಾನಾನುಸಾರವಾಗಿರಲಿಲ್ಲ.
ಹುರುಪುಳ್ಳವನಾದರೂ ದೀನಭಾವದವನು
ಲೂಕನ ವೃತ್ತಾಂತವು ಮುಂದುವರಿಸುವುದು: “ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.” (ಅ. ಕೃತ್ಯಗಳು 18:26) ಅಕ್ವಿಲನೂ ಪ್ರಿಸ್ಕಿಲ್ಲಳೂ, ಅಪೊಲ್ಲೋಸನ ನಂಬಿಕೆಯು ತಮ್ಮ ಸ್ವಂತ ನಂಬಿಕೆಯೊಂದಿಗೆ ಬಹಳ ಸಹಮತದಲ್ಲಿತ್ತೆಂಬುದನ್ನು ಗ್ರಹಿಸಿದ್ದಿರಬೇಕು, ಆದರೆ ಅವರು ವಿವೇಕಯುತವಾಗಿ ಅವನ ಅಪೂರ್ಣ ತಿಳಿವಳಿಕೆಯನ್ನು ಬಹಿರಂಗವಾಗಿ ತಿದ್ದಲು ಪ್ರಯತ್ನಿಸಲಿಲ್ಲ. ಅಪೊಲ್ಲೋಸನಿಗೆ ಸಹಾಯ ಮಾಡುವ ಗುರಿಯೊಂದಿಗೆ, ಅವರು ಅವನೊಂದಿಗೆ ಅನೇಕ ವೈಯಕ್ತಿಕ ಸಂಭಾಷಣೆಗಳನ್ನು ಮಾಡಿದ್ದರೆಂಬುದನ್ನು ನಾವು ಬಹುಶಃ ಊಹಿಸಿಕೊಳ್ಳಸಾಧ್ಯವಿದೆ. “ಶಾಸ್ತ್ರಗಳಲ್ಲಿ . . . ಪ್ರಭಾವಶೀಲ” ಮನುಷ್ಯನಾಗಿದ್ದ ಅಪೊಲ್ಲೋಸನು ಹೇಗೆ ಪ್ರತಿಕ್ರಿಯಿಸಿದನು? (ಅ. ಕೃತ್ಯಗಳು 18:24, ಕಿಂಗ್ಡಮ್ ಇಂಟರ್ಲೀನಿಯರ್) ಎಲ್ಲಾ ಸಂಭವನೀಯತೆಯಲ್ಲಿ, ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಸಂಧಿಸುವುದಕ್ಕೆ ಮೊದಲು, ಸ್ವಲ್ಪ ಸಮಯದ ವರೆಗೆ ಅಪೊಲ್ಲೋಸನು, ತನ್ನ ಅಪೂರ್ಣ ಸಂದೇಶವನ್ನು ಬಹಿರಂಗವಾಗಿ ಸಾರುತ್ತಿದ್ದನು. ಅಹಂಭಾವವುಳ್ಳ ವ್ಯಕ್ತಿಯೊಬ್ಬನು ಯಾವುದೇ ತಿದ್ದುವಿಕೆಯನ್ನು ಅಂಗೀಕರಿಸುವುದನ್ನು ಬಹಳ ಸುಲಭವಾಗಿಯೇ ತಿರಸ್ಕರಿಸಿದ್ದಿರಸಾಧ್ಯವಿತ್ತು, ಆದರೆ ಅಪೊಲ್ಲೋಸನು ದೀನಭಾವದವನೂ, ತನ್ನ ಜ್ಞಾನವನ್ನು ಪೂರ್ಣಗೊಳಿಸಲು ಶಕ್ತನಾದುದಕ್ಕಾಗಿ ಕೃತಜ್ಞನೂ ಆಗಿದ್ದನು.
ಅಪೊಲ್ಲೋಸನ ನಿರಾಡಂಬರದ ಅದೇ ಮನೋಭಾವವು, ಕೊರಿಂಥದಲ್ಲಿನ ಸಭೆಗೆ ಎಫೆಸದ ಸಹೋದರರಿಂದ ಕೊಡಲ್ಪಟ್ಟ ಶಿಫಾರಸ್ಸಿನ ಪತ್ರವೊಂದನ್ನು ಸ್ವೀಕರಿಸುವ ಅವನ ಸಿದ್ಧಮನಸ್ಕತೆಯಲ್ಲಿಯೂ ವ್ಯಕ್ತವಾಗುತ್ತದೆ. ಆ ವೃತ್ತಾಂತವು ಮುಂದುವರಿಸುವುದು: “ಆ ಮೇಲೆ ಅಖಾಯಕ್ಕೆ ಹೋಗಬೇಕೆಂದು ಅವನಿಗೆ ಮನಸ್ಸಾದಾಗ ಸಹೋದರರು ಅವನನ್ನು ಪ್ರೋತ್ಸಾಹಗೊಳಿಸಿ ಅಲ್ಲಿದ್ದ ಶಿಷ್ಯರಿಗೆ ಇವನನ್ನು ಸೇರಿಸಿಕೊಳ್ಳಬೇಕೆಂದು ಪತ್ರಿಕೆಯನ್ನು ಬರೆದುಕೊಟ್ಟರು.” (ಅ. ಕೃತ್ಯಗಳು 18:27; 19:1) ತನ್ನ ಸ್ವಂತ ಸಾಧನೆಗಳ ಮೇಲೆ ತನ್ನನ್ನು ಅಂಗೀಕರಿಸಬೇಕೆಂದು ಅಪೊಲ್ಲೋಸನು ತಗಾದೆಮಾಡಲಿಲ್ಲ, ಬದಲಾಗಿ ಕ್ರೈಸ್ತ ಸಭೆಯ ಏರ್ಪಾಡನ್ನು ವಿನಯಶೀಲತೆಯಿಂದ ಅನುಸರಿಸಿದನು.
ಕೊರಿಂಥದಲ್ಲಿ
ಕೊರಿಂಥದಲ್ಲಿ ಅಪೊಲ್ಲೋಸನ ಶುಶ್ರೂಷೆಯ ಆರಂಭದ ಫಲಿತಾಂಶಗಳು ಅತ್ಯುತ್ತಮವಾಗಿದ್ದವು. ಅ. ಕೃತ್ಯಗಳ ಪುಸ್ತಕವು ವರದಿಸುವುದು: “ಅವನು ಹೋಗಿ ಯೇಸುವೇ ಕ್ರಿಸ್ತನೆಂದು ಶಾಸ್ತ್ರಾಧಾರದಿಂದ ತೋರಿಸಿಕೊಟ್ಟು ಎಲ್ಲರ ಮುಂದೆ ಬಲವಾಗಿ ಯೆಹೂದ್ಯರನ್ನು ಖಂಡಿಸಿ ದೇವರ ಕೃಪೆಯಿಂದ ನಂಬಿದ್ದವರಿಗೆ ಬಹಳ ಸಹಾಯಮಾಡಿದನು.”—ಅ. ಕೃತ್ಯಗಳು 18:28.
ತನ್ನ ತಯಾರಿ ಹಾಗೂ ಹುರುಪಿನಿಂದ ಸಹೋದರರನ್ನು ಉತ್ತೇಜಿಸುತ್ತಾ, ಅಪೊಲ್ಲೋಸನು ಸಭೆಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡನು. ಅವನ ಸಾಫಲ್ಯಕ್ಕೆ ಯಾವುದು ಕೀಲಿ ಕೈಯಾಗಿತ್ತು? ನಿಶ್ಚಯವಾಗಿಯೂ ಅಪೊಲ್ಲೋಸನಿಗೆ ಸಹಜ ಸಾಮರ್ಥ್ಯವಿತ್ತು ಹಾಗೂ ಯೆಹೂದ್ಯರೊಂದಿಗೆ ಬಹಿರಂಗವಾದ ಚರ್ಚೆಯನ್ನು ಮುಂದುವರಿಸುವುದರಲ್ಲಿ ಅವನು ಧೈರ್ಯಶಾಲಿಯಾಗಿದ್ದನು. ಆದರೆ ಹೆಚ್ಚು ಪ್ರಾಮುಖ್ಯವಾಗಿ, ಅವನು ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ ತರ್ಕಿಸಿದನು.
ಕೊರಿಂಥದವರ ನಡುವೆ ಅಪೊಲ್ಲೋಸನಿಗೆ ಒಂದು ಪ್ರಭಾವಶಾಲಿಯಾದ ಪ್ರಭಾವವಿತ್ತಾದರೂ, ದೌರ್ಭಾಗ್ಯಕರವಾಗಿ ಅವನ ಸಾರುವಿಕೆಯು ಅನಿರೀಕ್ಷಿತವಾದ ನಕಾರಾತ್ಮಕ ಪರಿಣಾಮಗಳನ್ನು ಉತ್ಪಾದಿಸಿತು. ಹೇಗೆ? ಕೊರಿಂಥದಲ್ಲಿ ರಾಜ್ಯ ಸತ್ಯದ ಬೀಜವನ್ನು ನೆಡುವುದರಲ್ಲಿ ಹಾಗೂ ನೀರು ಹಾಯಿಸುವುದರಲ್ಲಿ ಪೌಲನೂ ಅಪೊಲ್ಲೋಸನೂ ಬಹಳ ಹೆಚ್ಚು ಒಳಿತನ್ನು ಮಾಡಿದ್ದರು. ಅಪೊಲ್ಲೋಸನ ಆಗಮನಕ್ಕೆ ಸುಮಾರು ಎರಡು ವರ್ಷಗಳ ಮೊದಲು, ಸುಮಾರು ಸಾ.ಶ. 50ರಲ್ಲಿ ಪೌಲನು ಅಲ್ಲಿ ಸಾರಿದ್ದನು. ಕೊರಿಂಥದವರಿಗೆ ತನ್ನ ಪ್ರಥಮ ಪತ್ರವನ್ನು ಪೌಲನು ಬರೆದ ಸಮಯದಷ್ಟಕ್ಕೆ, ಸುಮಾರು ಸಾ.ಶ. 55ರೊಳಗೆ, ಒಡಕುಗಳು ವಿಕಸಿಸಿದ್ದವು. ಕೆಲವರು ಅಪೊಲ್ಲೋಸನನ್ನು ತಮ್ಮ ಮುಖಂಡನನ್ನಾಗಿ ಪರಿಗಣಿಸುತ್ತಿದ್ದರು, ಅದೇ ಸಮಯದಲ್ಲಿ ಇತರರು ಪೌಲನನ್ನು ಅಥವಾ ಪೇತ್ರನನ್ನು ಅಥವಾ ಕೇವಲ ಕ್ರಿಸ್ತನನ್ನು ತಮ್ಮ ಮುಖಂಡನನ್ನಾಗಿ ಪರಿಗಣಿಸುತ್ತಿದ್ದರು. (1 ಕೊರಿಂಥ 1:10-12) ‘ನಾನು ಅಪೊಲ್ಲೋಸನಿಗೆ ಸೇರಿದವನು’ ಎಂದು ಕೆಲವರು ಹೇಳುತ್ತಿದ್ದರು. ಏಕೆ?
ಪೌಲ ಮತ್ತು ಅಪೊಲ್ಲೋಸರಿಂದ ಸಾರಲ್ಪಟ್ಟ ಸಂದೇಶವು ಒಂದೇ ಆಗಿತ್ತಾದರೂ, ಅವರಿಗೆ ವಿಭಿನ್ನ ವ್ಯಕ್ತಿತ್ವಗಳಿದ್ದವು. ಅವನ ಸ್ವಂತ ಅಂಗೀಕಾರಕ್ಕನುಸಾರ, ಪೌಲನು “ವಾಕ್ಚಾತುರ್ಯದಲ್ಲಿ ನಿಪುಣ”ನಾಗಿರಲಿಲ್ಲ; ಇನ್ನೊಂದು ಕಡೆಯಾದರೋ ಅಪೊಲ್ಲೋಸನು “ವಾಕ್ಚಾತುರ್ಯವುಳ್ಳವ”ನಾಗಿದ್ದನು. (2 ಕೊರಿಂಥ 10:10; 11:6) ಕೊರಿಂಥದಲ್ಲಿದ್ದ ಯೆಹೂದಿ ಸಮುದಾಯದ ಕೆಲವರ ನಡುವೆ—ಅವರು ಕೇಳುವಂತೆ ಮಾಡಲು ಅವನನ್ನು ಸಮರ್ಥನನ್ನಾಗಿ ಮಾಡಿದ ಸಾಮರ್ಥ್ಯಗಳು ಅವನಿಗಿದ್ದವು. ‘ಯೆಹೂದ್ಯರು ತಪ್ಪಾಗಿದ್ದರೆಂದು ಸಮಗ್ರವಾಗಿ ರುಜುಪಡಿಸುವುದ’ರಲ್ಲಿ (NW) ಅವನು ಸಫಲನಾದನು, ಪೌಲನಾದರೋ, ಸ್ವಲ್ಪ ಸಮಯಕ್ಕೆ ಮೊದಲೇ ಸಭಾಮಂದಿರವನ್ನು ಬಿಟ್ಟುಹೋಗಿದ್ದನು.—ಅ. ಕೃತ್ಯಗಳು 18:1, 4-6.
ಕೆಲವರು ಅಪೊಲ್ಲೋಸನ ಕಡೆಗೆ ಓಲುವುದಕ್ಕೆ ಇದು ಒಂದು ಕಾರಣವಾಗಿದ್ದಿರಸಾಧ್ಯವೊ? ಗ್ರೀಕರ ನಡುವೆ ಇದ್ದ ತತ್ವಜ್ಞಾನಸಂಬಂಧಿತ ಚರ್ಚೆಗಾಗಿರುವ ಸ್ವಭಾವಸಿದ್ಧ ಭಾವೋದ್ರೇಕವು, ಅಪೊಲ್ಲೋಸನ ಹೆಚ್ಚು ಪ್ರಚೋದನಾತ್ಮಕವಾದ ಪ್ರಸ್ತಾವನೆಯನ್ನು ಇಷ್ಟಪಡುವಂತೆ ಕೆಲವರನ್ನು ಮುನ್ನಡಿಸಿದ್ದಿರಬಹುದು ಎಂಬುದಾಗಿ ಅನೇಕ ವ್ಯಾಖ್ಯಾನಕಾರರು ಪ್ರತಿಪಾದಿಸುತ್ತಾರೆ. ಜೂಸೆಪೇ ರೀಕಾಟೀ ಹೀಗೆ ಸೂಚಿಸುತ್ತಾರೆ: “[ಅಪೊಲ್ಲೋಸನ] ವರ್ಣರಂಜಿತ ಭಾಷೆ ಹಾಗೂ ಅವನ ವಾಗಾಡಂಬರದ ರೂಪಕ ಕಥೆಗಳು, ನಿರಾಡಂಬರವಾದ ಹಾಗೂ ವಾಗಾಡಂಬರ ಮತ್ತು ವಾಕ್ಚಾತುರ್ಯದ ಕೊರತೆಯಿದ್ದ ಒಬ್ಬ ಸಾರ್ವಜನಿಕ ಭಾಷಣಕಾರನಾದ ಪೌಲನಿಗಿಂತಲೂ, ಇವನನ್ನು ಇಷ್ಟಪಟ್ಟ ಅನೇಕರ ಹೊಗಳಿಕೆಯನ್ನು ಅವನು ಪಡೆದುಕೊಳ್ಳುವಂತೆಮಾಡಿದ್ದವು.” ನಿಜವಾಗಿಯೂ, ಸಹೋದರರ ಮಧ್ಯೆ ವಿಭಜನೆಗಳನ್ನು ಉಂಟುಮಾಡಲಿಕ್ಕಾಗಿ, ಅಂತಹ ಕೆಲವರು ಇಂತಹ ವೈಯಕ್ತಿಕ ಇಷ್ಟಗಳನ್ನು ತಪ್ಪಾಗಿ ಅನುಮತಿಸಿರುವಲ್ಲಿ, “ಜ್ಞಾನಿಗಳ ಜ್ಞಾನ”ದ ಮಹೋತ್ಕರ್ಷವನ್ನು ಪೌಲನು ಏಕೆ ಕಟುವಾಗಿ ಟೀಕಿಸಿದನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುಲಭ.—1 ಕೊರಿಂಥ 1:17-25.
ಹಾಗಿದ್ದರೂ, ಅಂತಹ ಟೀಕೆಯು ಪೌಲ ಹಾಗೂ ಅಪೊಲ್ಲೋಸರ ನಡುವೆ ಘರ್ಷಣೆಯನ್ನು ಅರ್ಥೈಸುವುದಿಲ್ಲ. ಈ ಇಬ್ಬರು ಘೋಷಕರು, ಕೊರಿಂಥದವರ ಮಮತೆಗಳನ್ನು ಗೆಲ್ಲಲಿಕ್ಕಾಗಿ ಹೋರಾಟನಡಿಸುತ್ತಿದ್ದಂತಹ ಕಟು ವಿರೋಧಿಗಳಾಗಿದ್ದರೆಂದು ಕೆಲವರು ಕಲ್ಪನಾಮಯವಾಗಿ ಊಹಿಸಿದ್ದಾರಾದರೂ, ಶಾಸ್ತ್ರವಚನಗಳು ಅಂತಹ ಯಾವುದೇ ವಿಚಾರವನ್ನು ಹೇಳುವುದಿಲ್ಲ. ತನ್ನನ್ನು ಒಂದು ಪಕ್ಷದ ಮುಖಂಡನನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುವುದಕ್ಕೆ ಬದಲಾಗಿ, ಅಪೊಲ್ಲೋಸನು ಕೊರಿಂಥವನ್ನು ಬಿಟ್ಟುಹೋಗಿ, ಎಫೆಸಕ್ಕೆ ಹಿಂದಿರುಗಿದ್ದನು, ಮತ್ತು ವಿಭಜಿತ ಸಭೆಗೆ ಪೌಲನು ಪ್ರಥಮ ಪತ್ರವನ್ನು ಬರೆದಾಗ, ಇವನು ಪೌಲನೊಂದಿಗಿದ್ದನು.
ಅವರ ಮಧ್ಯೆ ಅನೈಕ್ಯವೂ ವೈರತ್ವವೂ ಇರಲಿಲ್ಲ; ಬದಲಾಗಿ, ಅವರಿಬ್ಬರೂ ಪರಸ್ಪರ ದೃಢಭರವಸೆಯೊಂದಿಗೆ, ಕೊರಿಂಥದಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಸಹಕರಿಸುತ್ತಿದ್ದರೆಂಬುದು ಸುವ್ಯಕ್ತ. ಕೊರಿಂಥದಲ್ಲಿದ್ದ ಕೆಲವರ ಕುರಿತು ಪೌಲನಿಗೆ ಶಂಕೆಗಳಿದ್ದಿರಬಹುದಾದರೂ, ನಿಶ್ಚಯವಾಗಿಯೂ ಅಪೊಲ್ಲೋಸನ ಕುರಿತಾಗಿ ಅಲ್ಲ. ಈ ಇಬ್ಬರು ಪುರುಷರ ಕೆಲಸವು ಸಂಪೂರ್ಣವಾಗಿ ಹೊಂದಿಕೆಯಲ್ಲಿತ್ತು; ಅವರ ಬೋಧನೆಗಳು ಪರಸ್ಪರ ಪೂರಕವಾಗಿದ್ದವು. ಪೌಲನ ಸ್ವಂತ ಮಾತುಗಳು ಉಲ್ಲೇಖಿಸುವುದು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು,” ಏಕೆಂದರೆ ಅವರಿಬ್ಬರೂ “ದೇವರ ಜೊತೆಕೆಲಸದವ”ರಾಗಿದ್ದರು.—1 ಕೊರಿಂಥ 3:6, 9, 21-23.
ಪೌಲನಂತೆ, ಕೊರಿಂಥದವರು ಅಪೊಲ್ಲೋಸನನ್ನು ಬಹಳ ಮಾನ್ಯತೆಯಿಂದ ಪರಿಗಣಿಸಿದರು; ಹೀಗೆ ಅವನಿಂದ ಮತ್ತೊಂದು ಭೇಟಿಯನ್ನು ಪಡೆದುಕೊಳ್ಳಲು ಅಪೇಕ್ಷಿಸುತ್ತಿದ್ದರು. ಆದರೆ ಪೌಲನು ಅಪೊಲ್ಲೋಸನಿಗೆ ಕೊರಿಂಥಕ್ಕೆ ಹಿಂದಿರುಗುವಂತೆ ಆಮಂತ್ರಿಸಿದಾಗ, ಅಲೆಕ್ಸಾಂದ್ರಿಯದವನಾದ ಈತನು ನಿರಾಕರಿಸಿದನು. ಪೌಲನು ಹೇಳುವುದು: “ಸಹೋದರನಾದ ಅಪೊಲ್ಲೋಸನ ಸಂಗತಿಯೇನಂದರೆ ಸಹೋದರರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ಅವನನ್ನು ಬಹಳವಾಗಿ ಬೇಡಿಕೊಂಡೆನು. ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ. ಒಳ್ಳೇ ಸಮಯ ಸಿಕ್ಕಿದಾಗ ಬರುವನು.” (1 ಕೊರಿಂಥ 16:12) ಇನ್ನೂ ಹೆಚ್ಚಿನ ವಿಭಜನೆಗಳನ್ನು ಉಂಟುಮಾಡುವ ಭಯದ ಕಾರಣದಿಂದ, ಅಥವಾ ಅವನು ಬೇರೆಲ್ಲಿಯೋ ಕಾರ್ಯಮಗ್ನನಾಗಿದ್ದ ಕಾರಣಮಾತ್ರವಾಗಿ, ಅಲ್ಲಿಗೆ ಹಿಂದಿರುಗಲು ಅಪೊಲ್ಲೋಸನು ಮನಸ್ಸಿಲ್ಲದವನಾಗಿದ್ದಿರಬಹುದು.
ಶಾಸ್ತ್ರವಚನಗಳಲ್ಲಿ ಅಪೊಲ್ಲೋಸನು ಕೊನೆಯ ಸಲ ಪ್ರಸ್ತಾಪಿಸಲ್ಪಟ್ಟಿರುವುದು, ಅವನು ಕ್ರೇತಕ್ಕೆ ಹಾಗೂ ಬಹುಶಃ ಅದರಾಚೆಗೆ ಪ್ರಯಾಣಿಸುತ್ತಿದ್ದಂತಹ ಸಮಯದಲ್ಲಿಯೇ. ಅಪೊಲ್ಲೋಸನಿಗೆ ಹಾಗೂ ಅವನ ಸಂಚಾರೀ ಸಂಗಡಿಗನಾದ ಜೇನನಿಗೆ, ಅವರ ಪ್ರಯಾಣಕ್ಕಾಗಿ ಅಗತ್ಯವಿರಬಹುದಾದ ಎಲ್ಲವನ್ನೂ ಒದಗಿಸುವಂತೆ ತೀತನನ್ನು ಕೇಳಿಕೊಳ್ಳುತ್ತಾ, ಪುನಃ ಪೌಲನು ತನ್ನ ಸ್ನೇಹಿತನಿಗಾಗಿಯೂ ಜೊತೆ ಕೆಲಸಗಾರನಿಗಾಗಿಯೂ ನಿರ್ದಿಷ್ಟ ಪರಿಗಣನೆಯನ್ನು ತೋರಿಸುತ್ತಾನೆ. (ತೀತ 3:13) ಈ ಸಮಯದಷ್ಟಕ್ಕೆ, ಕ್ರೈಸ್ತ ತರಬೇತಿಯ ಸುಮಾರು ಹತ್ತು ವರ್ಷಗಳ ಬಳಿಕ, ಅಪೊಲ್ಲೋಸನು ಸಭೆಯ ಸಂಚಾರ ಪ್ರತಿನಿಧಿಯಾಗಿ ಕಾರ್ಯನಡಿಸಲಿಕ್ಕಾಗಿ ಸಾಕಷ್ಟು ಪ್ರಗತಿಯನ್ನು ಮಾಡಿದ್ದನು.
ಆತ್ಮಿಕ ಬೆಳವಣಿಗೆಯನ್ನು ಸುಗಮಗೊಳಿಸುವ ದೈವಿಕ ಗುಣಗಳು
ಅಲೆಕ್ಸಾಂದ್ರಿಯದ ಈ ಘೋಷಕನು, ಸುವಾರ್ತೆಯ ಆಧುನಿಕ ದಿನದ ಪ್ರಚಾರಕರೆಲ್ಲರಿಗಾಗಿ ಮತ್ತು ವಾಸ್ತವವಾಗಿ ಆತ್ಮಿಕ ಪ್ರಗತಿಯನ್ನು ಮಾಡಲು ಅಪೇಕ್ಷಿಸುವವರೆಲ್ಲರಿಗಾಗಿ ಅತ್ಯುತ್ತಮವಾದ ಒಂದು ಮಾದರಿಯನ್ನಿಟ್ಟನು. ಅವನು ವಾಕ್ಚತುರನಾಗಿದ್ದಷ್ಟು ನಾವು ವಾಕ್ಚತುರರಾಗಿಲ್ಲದಿರಬಹುದಾದರೂ, ಸತ್ಯದ ಪ್ರಾಮಾಣಿಕ ಅನ್ವೇಷಕರಿಗೆ ಸಹಾಯ ಮಾಡುತ್ತಾ, ಶಾಸ್ತ್ರವಚನಗಳ ಉಪಯೋಗದಲ್ಲಿ ಅವನ ಜ್ಞಾನ ಮತ್ತು ಸಾಮರ್ಥ್ಯವನ್ನು ಅನುಕರಿಸಲು ನಾವು ನಿಶ್ಚಯವಾಗಿಯೂ ಶ್ರಮಿಸಬಲ್ಲೆವು. ಹುರುಪಿನ ಚಟುವಟಿಕೆಯ ಕುರಿತಾದ ತನ್ನ ಮಾದರಿಯಿಂದ ಅಪೊಲ್ಲೋಸನು “ನಂಬಿದ್ದವರಿಗೆ ಬಹಳ ಸಹಾಯಮಾಡಿದನು.” (ಅ. ಕೃತ್ಯಗಳು 18:27) ಅಪೊಲ್ಲೋಸನು ದೀನಭಾವದವನೂ, ಸ್ವತ್ಯಾಗದ ಮನೋಭಾವವುಳ್ಳವನೂ, ಇತರರ ಸೇವೆ ಮಾಡಲು ಸಿದ್ಧಮನಸ್ಕನೂ ಆಗಿದ್ದನು. ಕ್ರೈಸ್ತ ಸಭೆಯಲ್ಲಿ ಯಾವುದೇ ವೈರತ್ವ ಅಥವಾ ಮಹತ್ವಾಕಾಂಕ್ಷೆಗಳಿಗೆ ಅವಕಾಶವಿಲ್ಲ ಎಂಬುದನ್ನು ಅವನು ಚೆನ್ನಾಗಿ ಅರ್ಥಮಾಡಿಕೊಂಡನು, ಏಕೆಂದರೆ ನಾವೆಲ್ಲರೂ “ದೇವರ ಜೊತೆಕೆಲಸದವ”ರಾಗಿದ್ದೇವೆ.—1 ಕೊರಿಂಥ 3:4-9; ಲೂಕ 17:10.
ಅಪೊಲ್ಲೋಸನಂತೆ ನಾವು ಆತ್ಮಿಕ ಪ್ರಗತಿಯನ್ನು ಮಾಡಬಲ್ಲೆವು. ಯೆಹೋವನಿಂದ ಮತ್ತು ಆತನ ಸಂಸ್ಥೆಯಿಂದ ಹೆಚ್ಚು ಸಮಗ್ರವಾಗಿ ಉಪಯೋಗಿಸಲ್ಪಡುವಂತಹ ಒಂದು ಸ್ಥಾನದಲ್ಲಿ ನಮ್ಮನ್ನು ಇರಿಸಿಕೊಳ್ಳುತ್ತಾ, ನಮ್ಮ ಪವಿತ್ರ ಸೇವೆಯನ್ನು ಉತ್ತಮಗೊಳಿಸಲು ಅಥವಾ ವಿಸ್ತರಿಸಲು ನಾವು ಸಿದ್ಧಮನಸ್ಕರಾಗಿದ್ದೇವೊ? ಹಾಗಿದ್ದಲ್ಲಿ ನಾವು ಕ್ರೈಸ್ತ ಸತ್ಯದ ಹುರುಪಿನ ವಿದ್ಯಾರ್ಥಿಗಳೂ ಘೋಷಕರೂ ಆಗಿರುವೆವು.