ಅವರು ಯೆಹೋವನ ಚಿತ್ತವನ್ನು ಮಾಡಿದರು
ಎಲೀಯನು ಸತ್ಯ ದೇವರನ್ನು ಘನತೆಗೇರಿಸುತ್ತಾನೆ
ಇಸ್ರಾಯೇಲಿನಲ್ಲಿ ಈ ವ್ಯಕ್ತಿಗಾಗಿ ತೀವ್ರವಾದ ಹುಡುಕಾಟವು ನಡೆದಿತ್ತು. ಅವನೇನಾದರೂ ರಾಜನ ಕೈಗೆ ಸಿಕ್ಕಿಬಿದ್ದನೆಂದರೆ ಹೆಚ್ಚುಕಡಿಮೆ ನಿಶ್ಚಯವಾಗಿಯೂ ಸಾಯುವವನಿದ್ದನು. ಈ ಬೇಟೆಯಾಡಲ್ಪಡುತ್ತಿದ್ದ ವ್ಯಕ್ತಿಯು ಯಾರಾಗಿದ್ದನು? ಯೆಹೋವನ ಪ್ರವಾದಿಯಾದ ಎಲೀಯನೇ.
ಇಸ್ರಾಯೇಲಿನಲ್ಲಿ ಬಾಳನ ಆರಾಧನೆಯು ಏಳಿಗೆ ಹೊಂದುವುದಕ್ಕೆ, ರಾಜ ಅಹಾಬನೂ ಅವನ ವಿಧರ್ಮಿ ಪತ್ನಿಯಾದ ಈಜೆಬೆಲಳೂ ಕಾರಣರಾಗಿದ್ದರು. ಇದರ ಪರಿಣಾಮವಾಗಿ, ಯೆಹೋವನು ಆ ದೇಶದ ಮೇಲೆ ಬರಗಾಲವನ್ನು ಬರಮಾಡಿದ್ದನು. ಈಗ ಅದು ನಾಲ್ಕನೆಯ ವರ್ಷದಲ್ಲಿತ್ತು. ರೋಷಗೊಂಡ ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಾಯಿಸಲಿಕ್ಕೆ ಸಂಕಲ್ಪಮಾಡಿಕೊಂಡಳು, ಆದರೆ ಅಹಾಬನಿಗೆ ವಿಶೇಷವಾಗಿ ಎಲೀಯನ ಆವಶ್ಯಕತೆಯಿತ್ತು. ಮೂರಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, “ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರುಷಗಳ ವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ” ಎಂದು ಎಲೀಯನೇ ಅಹಾಬನಿಗೆ ಹೇಳಿದ್ದನು. (1 ಅರಸು 17:1) ಮತ್ತು ಪರಿಣಾಮರೂಪದ ಬರಗಾಲವು ಇನ್ನೂ ಮುಂದುವರಿದಿತ್ತು.
ಈ ಅಪಾಯಕಾರಿ ಪರಿಸ್ಥಿತಿಯಲ್ಲಿ, ಯೆಹೋವನು ಎಲೀಯನಿಗೆ ಹೇಳಿದ್ದು: “ನೀನು ಹೋಗಿ ಅಹಾಬನನ್ನು ಕಾಣು; ನಾನು ದೇಶಕ್ಕೆ ಮಳೆಕೊಡುತ್ತೇನೆ.” ತನ್ನನ್ನು ಭಾರಿ ಗಂಡಾಂತರಕ್ಕೆ ಈಡುಮಾಡಿಕೊಂಡು, ಎಲೀಯನು ಯೆಹೋವನ ಆಜ್ಞೆಗೆ ವಿಧೇಯತೆಯನ್ನು ತೋರಿಸಿದನು.—1 ಅರಸು 18:1, 2.
ಇಬ್ಬರು ವಿರೋಧಿಗಳು ಸಂಧಿಸುತ್ತಾರೆ
ಎಲೀಯನನ್ನು ನೋಡಿದಾಕ್ಷಣ, “ಇಸ್ರಾಯೇಲ್ಯರಿಗೆ ಆಪತ್ತನ್ನು ಬರಮಾಡಿದವನೇ, ನೀನು ಬಂದಿಯಾ” ಎಂದು ಅಹಾಬನು ಹೇಳಿದನು. “ಅವರಿಗೆ ಆಪತ್ತನ್ನು ಬರಮಾಡಿದವನು ನಾನಲ್ಲ; ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿ ಬಾಳನ ವಿಗ್ರಹಗಳನ್ನು ಪೂಜಿಸಿದ ನೀನೂ ನಿನ್ನ ಮನೆಯವರೂ ಅದಕ್ಕೆ ಕಾರಣರು” ಎಂದು ಎಲೀಯನು ಧೈರ್ಯವಾಗಿ ಪ್ರತ್ಯುತ್ತರಿಸಿದನು. ಅನಂತರ “ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನೂ ಅಶೇರದೇವತೆಯ ನಾನೂರು ಮಂದಿ ಪ್ರವಾದಿಗಳನ್ನೂ” ಸೇರಿಸಿ, ಎಲ್ಲ ಇಸ್ರಾಯೇಲ್ಯರು ಕರ್ಮೆಲ್ಬೆಟ್ಟದಲ್ಲಿ ಒಟ್ಟುಗೂಡಬೇಕೆಂದು ಎಲೀಯನು ನಿರ್ದೇಶಿಸಿದನು. ಆಗ ಎಲೀಯನು ಜನರ ಸಮೂಹವನ್ನು ಸಂಬೋಧಿಸುತ್ತಾ ಹೇಳಿದ್ದು: “ನೀವು ಎಷ್ಟರ ವರೆಗೆ ಎರಡು [“ಬೇರೆ ಬೇರೆ ಅಭಿಪ್ರಾಯಗಳ ನಡುವೆ ಕುಂಟುತ್ತಿರುವಿರಿ,” NW] ಮನಸ್ಸುಳ್ಳವರಾಗಿರುವಿರಿ?a ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.”—1 ಅರಸು 18:17-21.
ಜನರು ಮೌನವಾಗಿದ್ದರು. ಯೆಹೋವನಿಗೆ ಅನನ್ಯ ಭಕ್ತಿಯನ್ನು ಸಲ್ಲಿಸಲು ವಿಫಲಗೊಂಡದ್ದರಲ್ಲಿನ ತಮ್ಮ ದೋಷಿಭಾವನೆಯನ್ನು ಅವರು ಗ್ರಹಿಸಿದ್ದಿರಬಹುದು. (ವಿಮೋಚನಕಾಂಡ 20:4, 5) ಅಥವಾ ಅವರ ಮನಸ್ಸಾಕ್ಷಿಗಳು ಎಷ್ಟೊಂದು ಜಡ್ಡುಗಟ್ಟಿಹೋಗಿದ್ದವೆಂದರೆ, ಯೆಹೋವ ಹಾಗೂ ಬಾಳನ ನಡುವೆ ತಮ್ಮ ನಿಷ್ಠೆಗಳನ್ನು ವಿಭಾಗಿಸುವುದರಲ್ಲಿ ಅವರು ಯಾವುದೇ ಪಾಪಕೃತ್ಯವನ್ನು ಕಾಣದೇ ಇದ್ದಿರಬಹುದು. ಏನೇ ಆಗಲಿ, ಎಲೀಯನು ಎರಡು ಎಳೆಯ ಹೋರಿಗಳನ್ನು ಸಿದ್ಧಪಡಿಸಲು ಜನರಿಗೆ ನಿರ್ದೇಶನವನ್ನು ನೀಡಿದನು—ಒಂದು ಬಾಳನ ಪ್ರವಾದಿಗಳಿಗಾಗಿ ಮತ್ತೊಂದು ಅವನಿಗಾಗಿ. ಎರಡು ಹೋರಿಗಳು ಯಜ್ಞಕ್ಕಾಗಿ ಸಿದ್ಧಗೊಳಿಸಲ್ಪಟ್ಟರೂ ಬೆಂಕಿಹೊತ್ತಿಸಬಾರದಾಗಿತ್ತು. “ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಅನಂತರ ನಾನು ಯೆಹೋವನ ಹೆಸರು ಹೇಳಿ ಪ್ರಾರ್ಥಿಸುವೆನು. ಆ ಇಬ್ಬರಲ್ಲಿ ಯಾವನು ಲಾಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ [“ಸತ್ಯ,” NW] ದೇವರೆಂದು ನಿಶ್ಚಯಿಸೋಣ” ಎಂದು ಎಲೀಯನು ಹೇಳಿದನು.—1 ಅರಸು 18:23, 24.
ಯೆಹೋವನು ಘನತೆಗೇರಿಸಲ್ಪಟ್ಟದ್ದು
ಬಾಳನ ಪ್ರವಾದಿಗಳು ‘ವೇದಿಯ ಸುತ್ತಲು ಕುಣಿದಾಡಲು [“ಕುಂಟಲು,” NW]’ ಪ್ರಾರಂಭಿಸಿದರು. ಇಡೀ ಬೆಳಗ್ಗೆ ಅವರು ಹೀಗೆ ಕೂಗಿದರು: “ಬಾಳನೇ, ನಮಗೆ ಕಿವಿಗೊಡು.” ಆದರೆ ಬಾಳನು ಉತ್ತರಿಸಲಿಲ್ಲ. (1 ಅರಸು 18:26) ಅನಂತರ ಎಲೀಯನು ಅವರನ್ನು ಹಂಗಿಸಲು ಪ್ರಾರಂಭಿಸಿದನು: “ಗಟ್ಟಿಯಾಗಿ ಕೂಗಿರಿ; ಅವನು ದೇವರಾಗಿರುತ್ತಾನಲ್ಲಾ!” (1 ಅರಸು 18:27) ಬಾಳನ ಪ್ರವಾದಿಗಳು ತಮ್ಮನ್ನು ಈಟಿಕತ್ತಿಗಳಿಂದ ಇರಿದುಕೊಳ್ಳಲೂ ಪ್ರಾರಂಭಿಸಿದರು—ತಮ್ಮ ದೇವರುಗಳ ಕರುಣೆಯನ್ನು ಕೆರಳಿಸಲು ವಿಧರ್ಮಿಗಳಿಂದ ಆಗಾಗ್ಗೆ ಪ್ರಯೋಗಿಸಲ್ಪಟ್ಟ ಒಂದು ಪದ್ಧತಿ.b—1 ಅರಸು 18:28.
ಮಧ್ಯಾಹ್ನ ಸಂದುಹೋಗಿತ್ತು ಹಾಗೂ ಬಾಳನ ಆರಾಧಕರು “ಪ್ರವಾದಿಗಳಂತೆ ವರ್ತಿಸುವುದನ್ನು” (NW) ಮುಂದುವರಿಸಿದರು—ಈ ವಾಕ್ಸರಣಿಯು ಈ ಪೂರ್ವಾಪರದಲ್ಲಿ, ಉನ್ಮಾದವೇಗದ ಶೈಲಿಯಲ್ಲಿ ಮತ್ತು ಆತ್ಮನಿಯಂತ್ರಣವಿಲ್ಲದೆ ಕಾರ್ಯಮಾಡುವುದರ ವಿಚಾರವನ್ನು ಕೊಡುತ್ತದೆ. ಸಂಜೆ, ಎಲೀಯನು ಎಲ್ಲ ಜನರಿಗೆ ಹೇಳಿದ್ದು: “ನನ್ನ ಬಳಿಗೆ ಬನ್ನಿರಿ (NW)”. ಎಲೀಯನು ಯೆಹೋವನ ವೇದಿಯನ್ನು ಪುನರ್ನಿರ್ಮಿಸಿ, ಅದರ ಸುತ್ತಲೂ ಕಾಲುವೆಯನ್ನು ಅಗೆಸಿ, ಎಳೆಯ ಹೋರಿಯನ್ನು ತುಂಡು ತುಂಡಾಗಿ ಕತ್ತರಿಸಿ, ಅದನ್ನು ಕಟ್ಟಿಗೆಯೊಂದಿಗೆ ಸುಡಲು ವೇದಿಯ ಮೇಲೆ ಇಟ್ಟಂತೆ ಎಲ್ಲರೂ ತತ್ಪರರಾಗಿ ಗಮನಿಸಿದರು. ಅನಂತರ, ಹೋರಿ, ವೇದಿ ಹಾಗೂ ಕಟ್ಟಿಗೆಯು ನೀರಿನಿಂದ ಸಂಪೂರ್ಣವಾಗಿ ತೋಯಿಸಲ್ಪಟ್ಟವು ಮತ್ತು ಕಾಲುವೆಯು ನೀರಿನಿಂದ ತುಂಬಿಸಲ್ಪಟ್ಟಿತು (ಮೆಡಿಟೆರೇನಿಯನ್ ಸಮುದ್ರದಿಂದ ಕಡಲುನೀರು ಸಿಕ್ಕಿತು ಎಂಬುದರಲ್ಲಿ ಸಂದೇಹವಿಲ್ಲ). ಆಗ, ಎಲೀಯನು ಯೆಹೋವನಿಗೆ ಪ್ರಾರ್ಥಿಸಿದ್ದು: “ಯೆಹೋವನೇ ನೀನೊಬ್ಬನೇ ಇಸ್ರಾಯೇಲ್ಯರ ದೇವರಾಗಿರುತ್ತೀ ಎಂಬದನ್ನೂ ನಾನು ನಿನ್ನ ಸೇವಕನಾಗಿರುತ್ತೇನೆಂಬದನ್ನೂ ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದನೆಂಬದನ್ನೂ ಈಹೊತ್ತು ತೋರಿಸಿಕೊಡು. ಕಿವಿಗೊಡು ಯೆಹೋವನೇ, ಕಿವಿಗೊಡು; ಯೆಹೋವನಾದ ನೀನೊಬ್ಬನೇ ದೇವರೂ ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ಆಗಿರುತ್ತೀ.”—1 ಅರಸು 18:29-37.
ಇದ್ದಕ್ಕಿದ್ದಹಾಗೆ, ಸ್ವರ್ಗದಿಂದ ಬೆಂಕಿಯು ಬಂದು, “ಯಜ್ಞಮಾಂಸವನ್ನೂ ಕಟ್ಟಿಗೆಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟು ಕಾಲಿವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.” ನೋಡುತ್ತಿದ್ದ ಜನರು ತತ್ಕ್ಷಣವೇ ಹೀಗೆ ಹೇಳುತ್ತಾ ಬೋರಲುಬಿದ್ದರು: “ಯೆಹೋವನೇ [“ಸತ್ಯ,” NW] ದೇವರು, ಯೆಹೋವನೇ [“ಸತ್ಯ,” NW] ದೇವರು.” ಆಗ ಎಲೀಯನ ಆಜ್ಞೆಗನುಸಾರವಾಗಿ, ಬಾಳನ ಪ್ರವಾದಿಗಳೆಲ್ಲರನ್ನೂ ಹಿಡಿಯಲಾಯಿತು ಮತ್ತು ಎಲ್ಲಿ ಅವರನ್ನು ಕೊಲ್ಲಲಾಯಿತೋ ಆ ಕೀಷೋನ್ ಕಣಿವೆಗೆ ಕರೆದುಕೊಂಡುಹೋಗಲಾಯಿತು.—1 ಅರಸು 18:38-40.
ನಮಗಾಗಿರುವ ಪಾಠ
ಯಾವುದು ಅತಿಮಾನುಷ ಧೈರ್ಯದಂತೆ ತೋರಬಹುದೋ ಅದನ್ನು ಎಲೀಯನು ಪ್ರದರ್ಶಿಸಿದನು. ಆದರೂ ಬೈಬಲ್ ಬರಹಗಾರನಾದ ಯಾಕೋಬನು ನಮಗೆ, “ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು” ಎಂಬ ಆಶ್ವಾಸನೆಯನ್ನೀಯುತ್ತಾನೆ. (ಯಾಕೋಬ 5:17) ಅವನಿಗೂ ಒಂದಿಷ್ಟು ಭಯ ಹಾಗೂ ವ್ಯಾಕುಲತೆಯಿತ್ತು. ಉದಾಹರಣೆಗೆ, ಬಾಳನ ಪ್ರವಾದಿಗಳ ಮೃತ್ಯುವಿಗಾಗಿ ಈಜೆಬೆಲಳು ಸೇಡುತೀರಿಸಿಕೊಳ್ಳಲು ಅನಂತರ ಪ್ರತಿಜ್ಞೆಮಾಡಿದಾಗ, ಎಲೀಯನು ಪಲಾಯನಗೈದು, ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೀಗೆ ಮೊರೆಯಿಟ್ಟನು: “ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು.”—1 ಅರಸು 19:4.
ಯೆಹೋವನು ಮೃತ್ಯುವನ್ನು ತರುವ ಮೂಲಕ ಎಲೀಯನ ಪ್ರಾಣವನ್ನು ತೆಗೆದುಬಿಡಲಿಲ್ಲ. ಅದಕ್ಕೆ ಬದಲಾಗಿ, ಆತನು ದಯಾಪೂರ್ವಕವಾಗಿ ನೆರವನ್ನು ಒದಗಿಸಿದನು. (1 ಅರಸು 19:5-8) ಇಂದು ದೇವರ ಸೇವಕರು ಪ್ರಾಯಶಃ ವಿರೋಧದ ಕಾರಣ, ತೀವ್ರತರದ ವ್ಯಾಕುಲತೆಯ ಅವಧಿಗಳನ್ನು ಎದುರಿಸುವಾಗ ಯೆಹೋವನು ತಮಗೂ ಅದೇ ರೀತಿಯಲ್ಲಿ ಸಹಾಯಮಾಡುವನೆಂಬ ಖಾತ್ರಿಯುಳ್ಳವರಾಗಿರಸಾಧ್ಯವಿದೆ. ನಿಶ್ಚಯವಾಗಿಯೂ, ಅವರು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವುದಾದರೆ, ಆತನು “ಸಹಜಕ್ಕಿಂತಲೂ ಅತೀತವಾದ ಬಲವನ್ನು” ಅವರಿಗೆ ಒದಗಿಸಬಲ್ಲನು, ಹೀಗೆ ಅವರು “ಸರ್ವವಿಧದಲ್ಲಿಯೂ ಕ್ಲೇಶವನ್ನು ಅನುಭವಿಸು”ವುದಾದರೂ (NW) “ಸಂಕಟಪಡುವವ”ರಾಗಿರುವುದಿಲ್ಲ. ಹೀಗೆ, ಎಲೀಯನಿಗೆ ಸಹಾಯಮಾಡಲ್ಪಟ್ಟಂತೆ, ಅವರಿಗೂ ತಾಳಿಕೊಳ್ಳಲು ಸಹಾಯವು ನೀಡಲ್ಪಡುವುದು.—2 ಕೊರಿಂಥ 4:7, 8.
[ಅಧ್ಯಯನ ಪ್ರಶ್ನೆಗಳು]
a ಎಲೀಯನು, ಬಾಳನ ಆರಾಧಕರ ಸಂಸ್ಕಾರ ಸಂಬಂಧಿತ ನೃತ್ಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಿರಬಹುದು ಎಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ಬಾಳನ ಪ್ರವಾದಿಗಳ ನೃತ್ಯವನ್ನು ವರ್ಣಿಸಲು, “ಕುಂಟುವುದು” (NW) ಎಂಬ ಪದದ ಅದೇ ಉಪಯೋಗವು 1 ಅರಸು 18:26ರಲ್ಲಿದೆ.
b ಸ್ವತಃ ಘಾಸಿಮಾಡಿಕೊಳ್ಳುವುದು ಮಾನವ ಬಲಿಯ ಪದ್ಧತಿಗೆ ಸಂಬಂಧಿಸಿತ್ತೆಂದು ಕೆಲವರು ಸೂಚಿಸುತ್ತಾರೆ. ಶಾರೀರಿಕ ನೋವು ಅಥವಾ ರಕ್ತದ ಸುರಿಸುವಿಕೆಯು ದೇವನ ಅನುಗ್ರಹವನ್ನು ತರಸಾಧ್ಯವಿದೆ ಎಂಬುದನ್ನು ಎರಡೂ ಕೃತ್ಯಗಳು ಅಭಿಪ್ರಯಿಸಿದವು.