ಅವರು ಯೆಹೋವನ ಚಿತ್ತವನ್ನು ಮಾಡಿದರು
ಧೈರ್ಯದಿಂದ ಮಾತಾಡಿದ ಒಬ್ಬ ಚಿಕ್ಕ ಹುಡುಗಿ
ಸಾ.ಶ.ಪೂ. ಹತ್ತನೆಯ ಶತಮಾನದ ಸಮಯದಲ್ಲಿ, ಇಸ್ರಾಯೇಲ್ ಮತ್ತು ಸಿರಿಯದ ನಡುವಿನ ಸಂಬಂಧಗಳು ವಿಷಮವಾಗಿದ್ದವು. ಹೋರಾಟಗಳ ತಲೆದೋರುವಿಕೆಗಳು ಎಷ್ಟು ಸಾಮಾನ್ಯವಾಗಿದ್ದವೆಂದರೆ, ಹಿಂಸಾಚಾರವಿಲ್ಲದೆ ಮೂರು ವರ್ಷಗಳು ದಾಟಿದಾಗ, ಅದು ಐತಿಹಾಸಿಕ ದಾಖಲೆಗಾಗಿ ಒಂದು ವಿಷಯವಾಗಿತ್ತು.—1 ಅರಸುಗಳು 22:1.
ಆ ಸಮಯಗಳಲ್ಲಿ ವಿಶೇಷವಾಗಿ ಬೆದರಿಸುವಂಥ ವಿಷಯಗಳು, ಸಿರಿಯದ ಲೂಟಿಮಾಡುವ ದಳಗಳಾಗಿದ್ದವು. ಇವುಗಳಲ್ಲಿ ಕೆಲವು ನೂರಾರು ಸೈನಿಕರನ್ನು ಒಳಗೂಡಿದ್ದವು. ಈ ಯೋಧರು ಇಸ್ರಾಯೇಲ್ಯರನ್ನು ದುರಾಕ್ರಮಿಸಿ ಲೂಟಿ ಮಾಡಿ ಅನೇಕರನ್ನು—ಮಕ್ಕಳನ್ನು ಸಹ—ಅಪಹರಿಸಿ ದಾಸರನ್ನಾಗಿ ಮಾಡಿಕೊಳ್ಳುತ್ತಿದ್ದರು.
ಅಂತಹ ಒಂದು ದುರಾಕ್ರಮಣದ ಸಮಯದಲ್ಲಿ, “ಒಬ್ಬ [“ಚಿಕ್ಕ,” NW] ಹುಡುಗಿ”ಯು ತನ್ನ ದೇವ-ಭಯವುಳ್ಳ ಕುಟುಂಬದಿಂದ ನಿಷ್ಕಾರುಣ್ಯವಾಗಿ ಅಗಲಿಸಲ್ಪಟ್ಟಳು. (2 ಅರಸುಗಳು 5:2) ಸಿರಿಯಕ್ಕೆ ಕೊಂಡೊಯ್ಯಲ್ಪಟ್ಟು, ಅವಳಿಗೆ ಭೀತಿಕಾರಕವೂ ವಿಚಿತ್ರವಾಗಿಯೂ ತೋರಿದ್ದಿರಬಹುದಾದ—ಸೂರ್ಯ, ಚಂದ್ರ, ನಕ್ಷತ್ರಗಳು, ವೃಕ್ಷಗಳು, ಸಸ್ಯಗಳು, ಮತ್ತು ಕಲ್ಲುಗಳನ್ನೂ ಆರಾಧಿಸುತ್ತಿದ್ದ—ಜನರ ನಡುವೆ ಅವಳು ಜೀವಿಸಲು ಒತ್ತಾಯಿಸಲ್ಪಟ್ಟಿದ್ದಳು. ಏಕ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಿದ್ದ ತನ್ನ ಕುಟುಂಬ ಮತ್ತು ಸ್ನೇಹಿತರಿಗಿಂತ ಅವರೆಷ್ಟು ಭಿನ್ನರಾಗಿದ್ದರು! ಆದಾಗಲೂ, ಈ ವಿಚಿತ್ರ ಪರಿಸರದಲ್ಲೂ ಈ ಹುಡುಗಿಯು ಯೆಹೋವನ ಆರಾಧನೆಯ ವಿಷಯದಲ್ಲಿ ಗಮನಾರ್ಹವಾದ ಧೈರ್ಯವನ್ನು ಪ್ರದರ್ಶಿಸಿದಳು. ಫಲಸ್ವರೂಪವಾಗಿ ಸಿರಿಯದ ಅರಸನ ಕೈಕೆಳಗೆ ಸೇವೆ ಸಲ್ಲಿಸುತ್ತಿದ್ದ ಒಬ್ಬ ಪ್ರಮುಖ ಅಧಿಕಾರಿಯ ಜೀವನವನ್ನು ಅವಳು ಬದಲಾಯಿಸಿದಳು. ಹೇಗೆಂದು ನಾವು ನೋಡೋಣ.
ಮಾತಾಡುವುದಕ್ಕೆ ಧೈರ್ಯ
ಆ ಚಿಕ್ಕ ಹುಡುಗಿಯನ್ನು ಬೈಬಲ್ ವೃತ್ತಾಂತದಲ್ಲಿ ಹೆಸರಿಸಲ್ಪಡದೆ ಬಿಡಲಾಗಿದೆ. ರಾಜನಾದ IIನೆಯ ಬೆನ್ಹದದನ ಕೆಳಗೆ ಶೌರ್ಯವಂತನಾದ ಒಬ್ಬ ಸೇನಾ ಮುಖ್ಯಸ್ಥನಾಗಿದ್ದ ನಾಮಾನನ ಪತ್ನಿಗೆ ಅವಳು ಒಬ್ಬ ಹೆಣ್ಣಾಳು ಆದಳು. (2 ಅರಸುಗಳು 5:1) ನಾಮಾನನು ಉಚ್ಛವಾಗಿ ಗೌರವಿಸಲ್ಪಟ್ಟರೂ, ಅವನಿಗೆ ಹೇಯ ರೋಗವಾಗಿದ್ದ ಕುಷ್ಠರೋಗವಿತ್ತು.
ಪ್ರಾಯಶಃ ಆ ಹುಡುಗಿಯ ಗೌರವಪೂರ್ಣ ನಡವಳಿಕೆಯು, ಅವಳಲ್ಲಿ ತನ್ನ ಅಂತರಂಗವನ್ನು ತೋಡಿಕೊಳ್ಳುವಂತೆ ನಾಮಾನನ ಹೆಂಡತಿಯನ್ನು ಪ್ರಚೋದಿಸಿತು. ಆ ಹೆಂಗಸು ಹುಡುಗಿಗೆ ಹೀಗೆ ಕೇಳಿದ್ದಿರಬಹುದು, ‘ಇಸ್ರಾಯೇಲಿನಲ್ಲಿ ಕುಷ್ಠರೋಗಿಗಳಿಗೆ ಏನು ಮಾಡಲಾಗುತ್ತದೆ?’ ಈ ಇಸ್ರಾಯೇಲ್ ಹೆಣ್ಣು ಧೈರ್ಯದಿಂದ ಹೀಗೆ ಹೇಳಲು ನಾಚಿಕೆಪಡಲಿಲ್ಲ: “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇರುತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅವನು ಇವನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು.”—2 ಅರಸುಗಳು 5:3.
ಈ ಹುಡುಗಿಯ ಮಾತುಗಳು ಬಾಲೋಚಿತವಾದ ಭ್ರಮೆಯೆಂದು ಬಿಟ್ಟುಬಿಡಲ್ಪಡಲಿಲ್ಲ. ವ್ಯತಿರಿಕ್ತವಾಗಿ, ಅವುಗಳನ್ನು ರಾಜನಾದ ಬೆನ್ಹದದನಿಗೆ ವರದಿಸಲಾಯಿತು, ಈ ಪ್ರವಾದಿಯನ್ನು ಹುಡುಕಲು ಅವನು ನಾಮಾನನನ್ನು ಮತ್ತು ಇತರರನ್ನು ಸಮಾರ್ಯಕ್ಕೆ 150 ಕಿಲೊಮೀಟರುಗಳ ಒಂದು ಪ್ರಯಾಣದಲ್ಲಿ ಕಳುಹಿಸಿದನು.—2 ಅರಸುಗಳು 5:4, 5.
ನಾಮಾನನ ವಾಸಿಯಾಗುವಿಕೆ
ಬೆನ್ಹದದನಿಂದ ಒಂದು ಪರಿಚಯ ಪತ್ರ ಮತ್ತು ಒಂದು ದೊಡ್ಡ ಮೊತ್ತದ ಹಣದ ಕೊಡುಗೆಯನ್ನು ಹೊತ್ತುಕೊಂಡು, ನಾಮಾನನು ಮತ್ತು ಅವನ ಜನರು ಇಸ್ರಾಯೇಲಿನ ರಾಜ ಯೆಹೋರಾಮನ ಬಳಿ ಹೋದರು. ಬಸವನನ್ನು ಆರಾಧಿಸಿದ ರಾಜ ಯೆಹೋರಾಮನು ದೇವರ ಪ್ರವಾದಿಯಲ್ಲಿ ಆ ಸೇವಕಿಯು ತೋರಿಸಿದಂತಹ ನಂಬಿಕೆಯನ್ನು ಪ್ರದರ್ಶಿಸಲಿಲ್ಲವೆಂಬುದು, ಆಶ್ಚರ್ಯಕರವಲ್ಲ. ಬದಲಿಗೆ, ಅವನು ನೆನಸಿದ್ದೇನಂದರೆ, ನಾಮಾನನು ಉದ್ದೇಶಪೂರ್ವಕವಾಗಿ ಒಂದು ಜಗಳವನ್ನು ಕೆರಳಿಸಲು ಬಂದಿದ್ದಾನೆ ಎಂಬುದಾಗಿ. ಯೆಹೋರಾಮನ ಶಂಕೆಯ ಕುರಿತಾಗಿ ದೇವರ ಪ್ರವಾದಿಯಾದ ಎಲೀಷನು ಕೇಳಿದಾಗ, ನಾಮಾನನನ್ನು ತನ್ನ ಮನೆಗೆ ಕಳುಹಿಸುವಂತೆ ವಿನಂತಿಸುತ್ತಾ ಅವನು ತತ್ಕ್ಷಣ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು.—2 ಅರಸುಗಳು 5:6-8.
ನಾಮಾನನು ಎಲೀಷನ ಮನೆಗೆ ಆಗಮಿಸಿದಾಗ, ಅವನಿಗೆ ಹೀಗೆ ಹೇಳಿದ ಒಬ್ಬ ಸಂದೇಶವಾಹಕನನ್ನು ಪ್ರವಾದಿಯು ಕಳುಹಿಸಿದನು: “ಹೋಗಿ ಯೊರ್ದನ್ ಹೊಳೆಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹವು ಮುಂಚಿನಂತಾಗುವದು; ನೀನು ಶುದ್ಧನಾಗುವಿ.” (2 ಅರಸುಗಳು 5:9, 10) ನಾಮಾನನು ಕೋಪೋದ್ರಿಕ್ತನಾದನು. ಒಂದು ಅದ್ಭುತಕರ ಮತ್ತು ಡಾಂಭಿಕ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದು, ಅವನು ಕೇಳಿದ್ದು: “ದಮಸ್ಕದ ಅಬಾನಾ, ಪರ್ಪರ್ ಎಂಬ ಹೊಳೆಗಳು ಇಸ್ರಾಯೇಲ್ಯರ ಎಲ್ಲಾ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ”? ನಾಮಾನನು ಸಿಟ್ಟಿನಿಂದ ಎಲೀಷನ ಮನೆಯಿಂದ ಹೊರಟುಹೋದನು. ಆದರೆ ನಾಮಾನನ ಸೇವಕರು ಅವನೊಂದಿಗೆ ತರ್ಕಿಸಿದಾಗ, ಅವನು ಕೊನೆಗೆ ಮಣಿದನು. ಯೊರ್ದನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡಿದ ನಂತರ “ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.”—2 ಅರಸುಗಳು 5:11-14.
ಎಲೀಷನೆಡೆಗೆ ಹಿಂದಿರುಗುತ್ತಾ, ನಾಮಾನನು ಹೇಳಿದ್ದು: “ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವದೇ ಇಲ್ಲವೆಂಬದು ಈಗ ನನಗೆ ಗೊತ್ತಾಯಿತು.” “ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿ”ಸುವುದಾಗಿ ನಾಮಾನನು ಪ್ರತಿಜ್ಞೆಮಾಡಿದನು.—2 ಅರಸುಗಳು 5:15-17.
ನಮಗಾಗಿ ಪಾಠಗಳು
ಒಬ್ಬ ಎಳೆಯ ಸೇವಕಿಯು ಧೈರ್ಯದಿಂದ ಮಾತಾಡದಿರುತ್ತಿದ್ದಲ್ಲಿ, ನಾಮಾನನು ಪ್ರವಾದಿಯಾದ ಎಲೀಷನ ಬಳಿಗೆ ಹೋಗುತ್ತಿದ್ದಿರಲಿಲ್ಲ. ಇಂದು, ಅನೇಕ ಯುವ ಜನರು ತದ್ರೀತಿಯಲ್ಲಿ ಕ್ರಿಯೆಗೈಯುತ್ತಿದ್ದಾರೆ. ಶಾಲೆಯಲ್ಲಿ, ದೇವರನ್ನು ಸೇವಿಸುವುದರಲ್ಲಿ ಆಸಕ್ತಿಯಿಲ್ಲದಿರುವ ವಿದ್ಯಾರ್ಥಿಗಳಿಂದ ಅವರು ಸುತ್ತುವರಿಯಲ್ಪಟ್ಟಿರಬಹುದು. ಹಾಗಿದ್ದರೂ, ಅವರು ಏನನ್ನು ನಂಬುತ್ತಾರೋ ಅದರ ಕುರಿತಾಗಿ ಅವರು ಮಾತಾಡುತ್ತಾರೆ. ಕೆಲವರು ಗಮನಾರ್ಹವಾಗಿ ಎಳೆಯ ವಯಸ್ಸಿನಲ್ಲಿ ಅದನ್ನು ಮಾಡಲಾರಂಭಿಸುತ್ತಾರೆ.
ಆಸ್ಟ್ರೇಲಿಯದಲ್ಲಿರುವ, ಅಲೆಕ್ಸಾಂಡ್ರ ಎಂಬ ಐದು ವರ್ಷ ಪ್ರಾಯದ ಒಬ್ಬ ಹುಡುಗಿಯನ್ನು ಪರಿಗಣಿಸಿರಿ. ಅವಳು ಶಾಲೆಗೆ ಹೋಗಲು ಆರಂಭಿಸಿದಾಗ, ಅವಳ ತಾಯಿಯು ಶಿಕ್ಷಕಿಗೆ ಯೆಹೋವನ ಸಾಕ್ಷಿಗಳ ನಂಬಿಕೆಗಳನ್ನು ವಿವರಿಸಲು ಒಂದು ಕಾರ್ಯನಿಶ್ಚಯವನ್ನು ಮಾಡಿದಳು. ಆದರೆ ಅಲೆಕ್ಸಾಂಡ್ರಳ ತಾಯಿಗೆ ಒಂದು ಆಶ್ಚರ್ಯವು ಕಾದಿತ್ತು. “ನಿಮ್ಮ ನಂಬಿಕೆಗಳಲ್ಲಿ ಹಲವು ನಂಬಿಕೆಗಳೊಂದಿಗೆ, ಹಾಗೂ ಶಾಲೆಯಲ್ಲಿ ಅಲೆಕ್ಸಾಂಡ್ರ ಏನು ಮಾಡುವಳು ಮತ್ತು ಏನು ಮಾಡಳು ಎಂಬ ವಿಷಯದೊಂದಿಗೆ ನಾನು ಈಗಾಗಲೇ ಪರಿಚಿತಳಾಗಿದ್ದೇನೆ,” ಎಂದಳು ಶಿಕ್ಷಕಿ. ಅಲೆಕ್ಸಾಂಡ್ರಳ ತಾಯಿಯು ಆಶ್ಚರ್ಯಚಕಿತಳಾದಳು, ಯಾಕಂದರೆ ಆ ಶಾಲೆಯಲ್ಲಿ ಇತರ ಯಾವ ಸಾಕ್ಷಿ ಮಕ್ಕಳು ಇರಲಿಲ್ಲ. “ಅಲೆಕ್ಸಾಂಡ್ರ ನಮಗೆ ತನ್ನ ನಂಬಿಕೆಗಳ ಕುರಿತಾಗಿ ತಿಳಿಸಿದಳು,” ಎಂದು ಶಿಕ್ಷಕಿಯು ವಿವರಿಸಿದಳು. ಹೌದು, ಈ ಚಿಕ್ಕ ಹುಡುಗಿಯು ಆಗಲೇ ತನ್ನ ಶಿಕ್ಷಕಿಯೊಂದಿಗೆ ಒಂದು ಜಾಣ್ಮೆಯ ಚರ್ಚೆಯನ್ನು ಮಾಡಿದ್ದಳು.
ಅಂತಹ ಎಳೆಯರು ಧೈರ್ಯದಿಂದ ಮಾತಾಡುತ್ತಾರೆ. ಈ ರೀತಿಯಲ್ಲಿ ಅವರು ಕೀರ್ತನೆ 148:12, 13ಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತಾರೆ: “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು; ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಮೆರೆಯುತ್ತದೆ.”