ಬಡತನ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು
ಬಡತನದ ಕುರಿತು ಲೋಕಾದ್ಯಂತ ನಕಾರಾತ್ಮಕ ವರದಿಗಳು ತುಂಬಿರುವ ಹೊರತಾಗಿಯೂ, ಬಡತನವನ್ನು ನಿಶ್ಚಯವಾಗಿಯೂ ಹೋಗಲಾಡಿಸಲು ಸಾಧ್ಯವಿದೆ ಎಂಬ ವಿಷಯಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಂಡಿರುವ ಕೆಲವರು ಇದ್ದಾರೆ. ಉದಾಹರಣೆಗೆ, ಮನಿಲ ಬುಲೆಟಿನ್ ವಾರ್ತಾಪತ್ರಿಕೆಯ ಒಂದು ಸುದ್ದಿಯ ಮುಖ್ಯಾಂಶಕ್ಕನುಸಾರ, “25 ವರ್ಷಗಳಲ್ಲಿ ಏಷ್ಯಾ ಬಡತನವನ್ನು ಹೋಗಲಾಡಿಸಬಲ್ಲದು” ಎಂದು ಏಷ್ಯನ್ ಡಿವೆಲಪ್‌ಮಂಟ್ ಬ್ಯಾಂಕ್ ವರದಿಸಿತು. ಜನರನ್ನು ಬಡತನದ ಬೇಗೆಯಿಂದ ಬಿಡಿಸಲು ಆರ್ಥಿಕ ಬೆಳವಣಿಗೆಯು ಒಂದು ಸಾಧನವಾಗಿ ಉಪಯೋಗಿಸಲ್ಪಡಬೇಕು ಎಂದು ಆ ಬ್ಯಾಂಕ್ ಉತ್ತೇಜಿಸಿತು.
ಇತರ ಸಂಸ್ಥೆಗಳು ಮತ್ತು ಸರಕಾರಗಳು, ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ಸಲಹೆಸೂಚನೆಗಳ ಒಂದು ದೊಡ್ಡ ಪಟ್ಟಿಯನ್ನೇ ಮಾಡಿವೆ. ಅವುಗಳಲ್ಲಿ ಕೆಲವು: ಸಾಮಾಜಿಕ ವಿಮಾ ಕಾರ್ಯಕ್ರಮಗಳು, ಉತ್ತಮ ಶಿಕ್ಷಣ, ವಿಕಾಸಹೊಂದಿರುವ ದೇಶಗಳಿಗೆ ಅಭಿವೃದ್ಧಿಶೀಲ ದೇಶಗಳು ಕೊಡಬೇಕಾದ ಸಾಲಗಳನ್ನು ರದ್ದುಮಾಡುವುದು, ದೊಡ್ಡ ಸಂಖ್ಯೆಯಲ್ಲಿ ಬಡ ಜನರನ್ನು ಹೊಂದಿರುವ ದೇಶಗಳು ಹೆಚ್ಚು ಸುಲಭವಾಗಿ ತಮ್ಮ ಸಾಮಗ್ರಿಗಳನ್ನು ಮಾರಾಟಮಾಡಲು ಸಾಧ್ಯವಾಗುವಂತೆ ಆಮದು ತಡೆಗಳನ್ನು ತೆಗೆದುಹಾಕುವುದು, ಮತ್ತು ಬಡವರ ನಿವಾಸಕ್ಕಾಗಿ ಸರ್ಕಾರವು ಒದಗಿಸುವ ಮನೆಗಳು.
ಇಸವಿ 2000ದಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2015ರಷ್ಟರಲ್ಲಿ ಸಾಧಿಸಬೇಕಾದ ಗುರಿಗಳನ್ನು ಇಟ್ಟಿತು. ಇದರಲ್ಲಿ, ಕಡು ಬಡತನ ಮತ್ತು ಹಸಿವನ್ನು ನಿರ್ನಾಮ ಮಾಡುವುದೂ ದೇಶದೊಳಗಿರುವ ವರಮಾನದ ಅಪಾರ ಅಸಮಾನತೆಗಳನ್ನು ಇಲ್ಲವಾಗಿಸುವುದೂ ಒಳಗೂಡಿತ್ತು. ಈ ಗುರಿಗಳು ಎಷ್ಟೇ ಉದಾತ್ತವಾಗಿರಲಿ, ಈ ವಿಭಜಿತ ಲೋಕದಲ್ಲಿ ಅವನ್ನು ಸಾಧಿಸುವುದು ಸಾಧ್ಯವೇ ಎಂದು ಅನೇಕರು ಶಂಕಿಸುತ್ತಾರೆ.
ಬಡತನವನ್ನು ನಿಭಾಯಿಸಲು ಪ್ರಾಯೋಗಿಕ ಹೆಜ್ಜೆಗಳು
ಲೋಕವ್ಯಾಪಕ ಪ್ರಮಾಣದಲ್ಲಿ ನಿಜ ಸುಧಾರಣೆಯ ನಿರೀಕ್ಷೆಯು ಅಸಂಭವನೀಯವಾಗಿ ತೋರುವುದರಿಂದ ವ್ಯಕ್ತಿಯೊಬ್ಬನು ಸಹಾಯವನ್ನು ಎಲ್ಲಿ ಕಂಡುಕೊಳ್ಳಬಲ್ಲನು? ಈ ಮುಂಚೆ ತಿಳಿಸಲ್ಪಟ್ಟಂತೆ, ಜನರಿಗೆ ಈಗಲೇ ಸಹಾಯವನ್ನು ನೀಡಬಲ್ಲ ಪ್ರಾಯೋಗಿಕ ವಿವೇಕದ ಒಂದು ಮೂಲವಿದೆ. ಅದು ಯಾವುದು? ಅದು ದೇವರ ವಾಕ್ಯವಾದ ಬೈಬಲು.
ಮಾಹಿತಿಯನ್ನು ಒದಗಿಸಬಲ್ಲ ಇತರ ಮೂಲಗಳಿಗಿಂತ ಬೈಬಲನ್ನು ಭಿನ್ನವಾದದ್ದಾಗಿ ಮಾಡುವುದು ಯಾವುದು? ಅದು ಅತಿ ಉನ್ನತ ಅಧಿಕಾರಿಯಾದ, ನಮ್ಮ ಸೃಷ್ಟಿಕರ್ತನ ಕೈಕೃತಿಯಾಗಿದೆ. ಅದರ ಪುಟಗಳಲ್ಲಿ ಆತನು ವಿವೇಕದ ನುಡಿಮುತ್ತುಗಳನ್ನು, ಎಲ್ಲಾ ಕಡೆಯಲ್ಲಿರುವ ಮತ್ತು ಎಲ್ಲಾ ಸಮಯಗಳಲ್ಲಿ ಜೀವಿಸುವ ಜನರು ಅನ್ವಯಿಸಬಲ್ಲ ಪ್ರಾಯೋಗಿಕ ಮೂಲತತ್ತ್ವಗಳನ್ನು ಒಳಗೂಡಿಸಿದ್ದಾನೆ. ಈ ಮೂಲತತ್ತ್ವಗಳು ಅನ್ವಯಿಸಲ್ಪಡುವುದಾದರೆ, ಬಡವರು ಈಗಲೂ ಒಂದು ಸಂತೃಪ್ತಿಕರವಾದ ಜೀವನವನ್ನು ಅನುಭವಿಸುವಂತೆ ಅವು ಸಹಾಯಮಾಡಬಲ್ಲವು. ಈಗ ಕೆಲವು ಉದಾಹರಣೆಗಳನ್ನು ನೋಡೋಣ.
ಹಣದ ಕುರಿತಾಗಿ ಯೋಗ್ಯವಾದ ನೋಟವುಳ್ಳವರಾಗಿರಿ. ಬೈಬಲ್ ಹೇಳುವುದು: “ಧನವು [“ಹಣವು,” NW] ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಇದರ ಸಾರಾಂಶವೇನು? ಹಣವು ಸರ್ವಸ್ವವಾಗಿರುವುದಿಲ್ಲ. ಅದು ಸ್ವಲ್ಪ ಮಟ್ಟಿಗೆ ಆಶ್ರಯವನ್ನು ಅಥವಾ ಭದ್ರತೆಯನ್ನು ಒದಗಿಸುತ್ತದೆಂಬುದು ನಿಜ. ಮತ್ತು, ನಮಗೆ ಅವಶ್ಯವಾಗಿರುವ ಕೆಲವು ವಿಷಯಗಳನ್ನು ಖರೀದಿಸಲೂ ಅದು ಸಹಾಯಮಾಡುತ್ತದೆ. ಆದರೆ ಅದಕ್ಕೆ, ಅದರದ್ದೇ ಆದ ಇತಿಮಿತಿಗಳಿವೆ. ಹಣವು ಖರೀದಿಸಲು ಅಸಾಧ್ಯವಾದ ಹೆಚ್ಚು ಅಮೂಲ್ಯವಾದ ವಿಷಯಗಳೂ ಇವೆ. ಈ ವಾಸ್ತವಾಂಶವನ್ನು ಗ್ರಹಿಸಿಕೊಳ್ಳುವುದು ಪ್ರಾಪಂಚಿಕ ವಿಷಯಗಳ ಕುರಿತು ಸಮತೂಕದ ನೋಟವನ್ನು ಹೊಂದಿರಲು ನಮಗೆ ಸಹಾಯಮಾಡುವುದು. ಹೀಗೆ ಹಣದ ಸಂಪಾದನೆಯೇ ಜೀವಿತದ ಮೂಲೋದ್ದೇಶವೆಂದಿದ್ದು ಅನೇಕ ಬಿಕ್ಕಟ್ಟುಗಳಲ್ಲಿ ಬಿದ್ದಿರುವವರಂತೆ ನಾವು ಬಾಧೆಯನ್ನು ಅನುಭವಿಸೇವು. ಹಣ ನಮಗೆ ಜೀವವನ್ನು ಖರೀದಿಸಿ ಕೊಡಲಾರದು, ಆದರೆ ಜ್ಞಾನದಿಂದ ವರ್ತಿಸುವುದು ಇಂದು ನಮ್ಮ ಜೀವಿತವನ್ನು ಸಂರಕ್ಷಿಸಬಲ್ಲದು ಮತ್ತು ಅಂತ್ಯವಿಲ್ಲದ ಜೀವಿತಕ್ಕೆ ದ್ವಾರವನ್ನು ತೆರೆಯಬಲ್ಲದು.
ಚಾಪೆಯಿದ್ದಷ್ಟೇ ಕಾಲುಚಾಚಿರಿ. ನಮ್ಮ ಅಪೇಕ್ಷೆಗಳು ಆವಶ್ಯಕತೆಗಳಾಗಿ ಇರಬೇಕೆಂದಿರುವುದಿಲ್ಲ. ನಮ್ಮ ಆವಶ್ಯಕತೆಗಳಿಗೆ ಆದ್ಯತೆ ನೀಡಲ್ಪಡಬೇಕು. ನಮಗೆ ಯಾವುದೋ ಒಂದು ವಿಷಯವು ಆವಶ್ಯಕವಾಗಿದೆ ಎಂದು ನಾವು ನಮ್ಮನ್ನು ಸುಲಭವಾಗಿ ಮನವೊಲಿಸಿಕೊಳ್ಳಬಹುದು, ಆದರೆ ನಿಜತ್ವದಲ್ಲಿ ಅದು ಕೇವಲ ನಮ್ಮ ಅಪೇಕ್ಷೆಯಾಗಿದ್ದಿರಬಹುದೇ ಹೊರತು ಆವಶ್ಯಕತೆಯಾಗಿ ಇದ್ದಿರಲಿಕ್ಕಿಲ್ಲ. ಒಬ್ಬ ವಿವೇಕಿಯು, ಸಂಪಾದಿಸಿದ ಹಣದಿಂದ ತತ್‌ಕ್ಷಣದ ಆವಶ್ಯಕತೆಗಳಿಗಾಗಿ—ಆಹಾರ, ಬಟ್ಟೆಬರೆ, ಆಶ್ರಯ ಮತ್ತು ಇತ್ಯಾದಿಗಳಿಗಾಗಿ ಒಂದು ಮೊತ್ತವನ್ನು ಮೊದಲು ಬದಿಗಿಡುವನು. ನಂತರ, ಇನ್ನೇನಕ್ಕಾದರೂ ಹಣವನ್ನು ಖರ್ಚುಮಾಡುವ ಮುನ್ನ, ತನ್ನ ಬಳಿ ಉಳಿದಿರುವ ಹಣವು ಹೆಚ್ಚಿನ ಸರಬರಾಜನ್ನು ಕೊಂಡುಕೊಳ್ಳುವಷ್ಟಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವನು. ಯೇಸು ತನ್ನ ದೃಷ್ಟಾಂತಗಳಲ್ಲೊಂದರಲ್ಲಿ, ಒಬ್ಬನು “ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕ”ಮಾಡಬೇಕು ಎಂದು ಶಿಫಾರಸ್ಸು ಮಾಡಿದನು.—ಲೂಕ 14:28.
ಫಿಲಿಪ್ಪೀನ್ಸ್‌ನಲ್ಲಿ, ಮೂರು ಮಕ್ಕಳನ್ನು ಹೊಂದಿರುವ ಒಂಟಿ ತಾಯಿ ಯೂಫ್ರೊಸೀನ, ಗಂಡನು ತನ್ನನ್ನು ಕೆಲವು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದುದರಿಂದ ಸಂಪಾದನೆಯನ್ನು ಮಾಡುವ ಮತ್ತು ಒಂದು ಕಟ್ಟುನಿಟ್ಟಿನ ಬಜೆಟ್ ಅನ್ನು ಅನುಕರಿಸುವ ಪಂಥಾಹ್ವಾನವನ್ನು ಎದುರಿಸಿದಳು. ಹೀಗೆ ಮಾಡುತ್ತಿದ್ದಂತೆ, ಬಜೆಟ್‌ನಲ್ಲಿರುವ ಆದ್ಯತೆಗಳನ್ನು ತನ್ನ ಮಕ್ಕಳು ಗುರುತಿಸಿಕೊಳ್ಳುವಂತೆ ಆಕೆ ಅವರಿಗೆ ಸಹಾಯಮಾಡಿದ್ದಾಳೆ. ಉದಾಹರಣೆಗೆ, ಮಕ್ಕಳು ತಾವು ಇಷ್ಟಪಡಬಹುದಾದ ಯಾವುದನ್ನಾದರೂ ನೋಡಬಹುದು. ಅವಳದನ್ನು ಕೇವಲ ಕೊಡಿಸುವುದಿಲ್ಲ ಎಂದು ಹೇಳುವ ಬದಲು, ಅವರೊಟ್ಟಿಗೆ ಹೀಗೆ ತರ್ಕಿಸುತ್ತಾಳೆ: “ನಿಮಗೆ ಅದು ಬೇಕಾಗಿರುವುದಾದರೆ ನಾನು ಅದನ್ನು ಕೊಡಿಸುವೆ, ಆದರೆ ನೀವು ಒಂದು ತೀರ್ಮಾನವನ್ನು ಮಾಡಬೇಕು. ನಮ್ಮ ಬಳಿ ಕೇವಲ ಒಂದಕ್ಕೆ ಮಾತ್ರ ಸಾಕಾಗುವಷ್ಟು ಹಣವಿದೆ. ನೀವು ಇಷ್ಟಪಡುವ ಈ ವಿಷಯವನ್ನು ನಾವು ಖರೀದಿಸಬಹುದು, ಅಥವಾ ಈ ವಾರ ನಮ್ಮ ಅನ್ನದೊಟ್ಟಿಗೆ ತಿನ್ನಲಿಕ್ಕಾಗಿ ಸ್ವಲ್ಪ ಮಾಂಸವನ್ನು ಇಲ್ಲವೆ ತರಕಾರಿಯನ್ನು ಕೊಳ್ಳಬಹುದು. ಈಗ, ನಿಮಗೆ ಯಾವುದು ಬೇಕು? ನೀವೇ ತೀರ್ಮಾನಿಸಿ.” ಮಕ್ಕಳು ಶೀಘ್ರವೇ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾರೆ, ಮತ್ತು ಸಾಮಾನ್ಯವಾಗಿ ಬೇರೆ ಯಾವುದಕ್ಕಿಂತಲೂ ಹೆಚ್ಚು, ಆಹಾರವನ್ನು ಪಡೆದುಕೊಳ್ಳಲು ಬಯಸುತ್ತಾರೆ.
ಸಂತೃಪ್ತಿಯುಳ್ಳವರಾಗಿರಿ. “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು” ಎಂದು ಮತ್ತೊಂದು ಬೈಬಲ್ ಮೂಲತತ್ತ್ವವು ತಿಳಿಸುತ್ತದೆ. (1 ತಿಮೊಥೆಯ 6:8) ಹಣವು ತಾನೇ ನಮಗೆ ಸಂತೋಷವನ್ನು ಕೊಡಲಾರದು. ಅನೇಕ ಮಂದಿ ಶ್ರೀಮಂತ ವ್ಯಕ್ತಿಗಳು ಅಸಂತೋಷದಿಂದಿರುವಾಗ, ಅನೇಕ ಬಡ ಜನರಾದರೋ ತುಂಬ ಸಂತೋಷದಿಂದಿದ್ದಾರೆ. ಈ ಬಡವರು, ತಮ್ಮ ಜೀವನದಲ್ಲಿ ಆವಶ್ಯಕವಾಗಿರುವ ಸ್ವಲ್ಪ ವಿಷಯಗಳೊಂದಿಗೆಯೇ ಸಂತೃಪ್ತರಾಗಿರಲು ಕಲಿತುಕೊಂಡಿದ್ದಾರೆ. ಹೆಚ್ಚು ಪ್ರಾಮುಖ್ಯವಾದ ವಿಷಯಗಳ ಮೇಲೆ ದೃಷ್ಟಿಯನ್ನಿಟ್ಟಿರುವ ‘ಸರಳವಾದ ಕಣ್ಣನ್ನು’ ಹೊಂದಿರುವುದರ ಕುರಿತು ಯೇಸು ಮಾತಾಡಿದನು. (ಮತ್ತಾಯ 6:22, NW) ಇದು, ಒಬ್ಬ ವ್ಯಕ್ತಿಯು ಸಂತೃಪ್ತನಾಗಿರಲು ಸಹಾಯಮಾಡುತ್ತದೆ. ಅನೇಕ ಮಂದಿ ಬಡ ಜನರು ದೇವರೊಂದಿಗೆ ಒಂದು ಸುಸಂಬಂಧವನ್ನು ಬೆಳೆಸಿರುವ ಮತ್ತು ಸಂತೋಷಕರವಾದ ಕುಟುಂಬ ಜೀವನವನ್ನು ಹೊಂದಿರುವ ಕಾರಣ ಹೆಚ್ಚು ನೆಮ್ಮದಿಯಿಂದಿದ್ದಾರೆ—ಇವುಗಳನ್ನು ಹಣವು ಖರೀದಿಸಲಾರದು.
ಬಡವರಾಗಿರುವವರು ತಮ್ಮ ಪರಿಸ್ಥಿತಿಯೊಂದಿಗೆ ನಿಭಾಯಿಸಿಕೊಂಡು ಹೋಗಲು ಸಹಾಯಮಾಡುವ ಬೈಬಲಿನ ಪ್ರಾಯೋಗಿಕ ಸಲಹೆಗಳಲ್ಲಿ ಇವು ಕೇವಲ ಕೆಲವು ಉದಾಹರಣೆಗಳಾಗಿವೆ. ಇಂತಹ ಇತರ ಅನೇಕ ಉದಾಹರಣೆಗಳಿವೆ. ದೃಷ್ಟಾಂತಕ್ಕೆ, ಸಂಪನ್ಮೂಲಗಳನ್ನು ವ್ಯರ್ಥಗೊಳಿಸುವ ಧೂಮಪಾನ ಮತ್ತು ಜೂಜಾಟವೆಂಬ ದುಶ್ಚಟಗಳನ್ನು ತ್ಯಜಿಸಿರಿ; ಜೀವನದಲ್ಲಿ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಗ್ರಹಿಸಿಕೊಳ್ಳಿರಿ; ಕೆಲಸ ಸಿಗುವುದು ವಿರಳವಾಗಿರುವಲ್ಲಿ, ಇತರರಿಗೆ ಆವಶ್ಯಕವಾಗಿರುವಂಥ ಒಂದು ಕಸಬು ಅಥವಾ ಸೇವೆಯನ್ನು ನೀಡಿರಿ. (ಜ್ಞಾನೋಕ್ತಿ 22:29; 23:21; ಫಿಲಿಪ್ಪಿ 1:9-11) ಇಂತಹ “ಸುಜ್ಞಾನವನ್ನೂ ಬುದ್ಧಿಯನ್ನೂ” ಕಾರ್ಯರೂಪಕ್ಕೆ ಹಾಕುವಂತೆ ಬೈಬಲು ಪ್ರೋತ್ಸಾಹಿಸುತ್ತದೆ, ಏಕೆಂದರೆ “ಅವು ನಿನಗೆ ಜೀವ”ವಾಗಿರುವುದು.—ಜ್ಞಾನೋಕ್ತಿ 3:21, 22.
ಬೈಬಲಿನ ಸಲಹೆಗಳು, ಬಡತನದೊಂದಿಗೆ ಹೋರಾಡುತ್ತಿರುವವರಿಗೆ ಸ್ವಲ್ಪ ಸಹಾಯಕರ ನಿವಾರಣೆಯನ್ನು ಕೊಡುವುದಾದರೂ, ಭವಿಷ್ಯದ ಕುರಿತಾದ ಪ್ರಶ್ನೆಗಳು ಇನ್ನೂ ಉಳಿದಿವೆ. ಬಡವರು ಶಾಶ್ವತವಾಗಿ ಬಡತನದ ಹಿಡಿತದಲ್ಲಿ ಸಿಲುಕಿ ನರಳುತ್ತಿರುವುದೇ ಅವರ ಗತಿಯೋ? ಅತಿ ಶ್ರೀಮಂತರು ಮತ್ತು ಕಡು ಬಡವರ ಮಧ್ಯೆ ಅಸಮಾನತೆಗಳು ಎಂದಾದರೂ ಪರಿಹರಿಸಲ್ಪಡುವವೋ? ಹೆಚ್ಚು ಜನರಿಗೆ ತಿಳಿದಿರದಂತಹ ಒಂದು ಪರಿಹಾರವನ್ನು ನಾವು ಪರೀಕ್ಷಿಸೋಣ.
ಬೈಬಲು ನಿರೀಕ್ಷೆಗಾಗಿ ಕಾರಣವನ್ನು ಕೊಡುತ್ತದೆ
ಅನೇಕರು ಬೈಬಲನ್ನು ಒಂದು ಒಳ್ಳೆಯ ಪುಸ್ತಕವೆಂದು ಒಪ್ಪಿಕೊಳ್ಳುವುದಾದರೂ, ಅದು ಶೀಘ್ರವೇ ಸಂಭವಿಸಲಿರುವ ದೊಡ್ಡ ಬದಲಾವಣೆಗಳ ಕುರಿತು ನಿರ್ದಿಷ್ಟವಾದ ಮಾಹಿತಿಯನ್ನು ನೀಡುತ್ತದೆ ಎಂಬುದನ್ನು ಅವರು ಅನೇಕವೇಳೆ ಗ್ರಹಿಸಿಕೊಳ್ಳುವುದಿಲ್ಲ.
ದೇವರು ಮಾನವಕುಲದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಕ್ರಮ ಕೈಕೊಳ್ಳಲು ಉದ್ದೇಶಿಸಿರುತ್ತಾನೆ, ಮತ್ತು ಇದರಲ್ಲಿ ಬಡತನವೂ ಒಂದಾಗಿದೆ. ಮಾನವ ಸರಕಾರಗಳು ಇದನ್ನು ಮಾಡಲು ಅಸಮರ್ಥರು ಇಲ್ಲವೆ ಮನಸ್ಸಿಲ್ಲದವರಾಗಿರುವ ಕಾರಣ, ದೇವರು ಅವನ್ನು ತೆಗೆದುಹಾಕಲು ಉದ್ದೇಶಿಸಿರುತ್ತಾನೆ. ಹೇಗೆ? ಬೈಬಲು ದಾನಿಯೇಲ 2:44ರಲ್ಲಿ ಒತ್ತು ನೀಡುತ್ತಾ ಹೇಳುವುದು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”
ಈ ‘ರಾಜ್ಯಗಳನ್ನು’ ಅಥವಾ ಸರಕಾರಗಳನ್ನು ತೆಗೆದುಹಾಕಿದ ಮೇಲೆ, ದೇವರ ಸ್ವಂತ ನೇಮಿತ ನಾಯಕನು ಕ್ರಮ ಕೈಕೊಳ್ಳುವನು. ಆ ನಾಯಕನು ಮಾನವನಲ್ಲ, ಬದಲಿಗೆ ದೇವರಂತೆಯೇ ಇರುವ ಶಕ್ತಿದಾಯಕ ಪರಲೋಕ ಜೀವಿಯಾಗಿದ್ದು, ಸದ್ಯದಲ್ಲಿರುವ ಅಸಮಾನತೆಗಳನ್ನು ನಿರ್ನಾಮಮಾಡಲು ಅಗತ್ಯವಿರುವ ಬೃಹತ್ ಸುಧಾರಣೆಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದವನಾಗಿದ್ದಾನೆ. ಇದನ್ನು ಮಾಡುವಂತೆ ದೇವರು ತನ್ನ ಸ್ವಂತ ಮಗನನ್ನು ನೇಮಿಸಿದ್ದಾನೆ. (ಅ. ಕೃತ್ಯಗಳು 17:31) ಈ ನಾಯಕನು ಏನನ್ನು ಮಾಡಲಿರುವನೆಂಬುದನ್ನು ಕೀರ್ತನೆ 72:12-14 ಹೀಗೆ ವರ್ಣಿಸುತ್ತದೆ: “ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.” ಎಂತಹ ಅದ್ಭುತಕರ ಪ್ರತೀಕ್ಷೆ! ಕೊನೆಗೆ ಪರಿಹಾರವು ಕೈಗೂಡಿಬರುವುದು! ದೇವರ ನೇಮಿತ ನಾಯಕನು ದೀನದರಿದ್ರರ ಪರವಾಗಿ ಕ್ರಿಯೆಗೈಯುವನು.
ಆ ಸಮಯದಲ್ಲಿ ಬಡತನಕ್ಕೆ ಸಂಬಂಧಿಸಿದ ಅನೇಕಾನೇಕ ಸಮಸ್ಯೆಗಳಿಗೆ ಪರಿಹಾರಗಳು ಒದಗಿಸಲ್ಪಡುವುದು. ಕೀರ್ತನೆ 72ರ 16ನೆಯ ವಚನವು ಹೇಳುವುದು: ‘ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧವಾಗಿರುವುದು.’ ಕ್ಷಾಮ, ಹಣಕಾಸಿನ ಕೊರತೆ, ಅಥವಾ ಲೋಪವುಳ್ಳ ಆಡಳಿತದ ಕಾರಣದಿಂದಾಗಿ ಉಂಟಾಗುವ ಆಹಾರದ ಅಭಾವಗಳು ಇನ್ನಿರದು.
ಇತರ ಸಮಸ್ಯೆಗಳನ್ನು ಕೂಡ ಪರಿಹರಿಸಲಾಗುವುದು. ಉದಾಹರಣೆಗೆ, ಇಂದು ಜೀವಿಸುತ್ತಿರುವ ಲೋಕದ ಅನೇಕ ನಿವಾಸಿಗಳು ತಮಗೆ ಒಂದು ಸ್ವಂತ ಮನೆಯಿದೆ ಎಂದು ಹೇಳಿಕೊಳ್ಳಲಾರರು. ಆದರೆ, ದೇವರು ವಾಗ್ದಾನಿಸುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:21, 22) ಪ್ರತಿಯೊಬ್ಬರಿಗೂ ತಮ್ಮ ಸ್ವಂತ ಮನೆಯಿರುವುದು ಮತ್ತು ತಮ್ಮ ಕೈಕೆಲಸದಲ್ಲಿ ಆನಂದಿಸುವರು. ಹೀಗೆ ದೇವರು ಬಡತನಕ್ಕೆ ಒಂದು ಪೂರ್ಣ ಮತ್ತು ಶಾಶ್ವತವಾದ ವಿದಾಯವನ್ನು ವಾಗ್ದಾನಿಸುತ್ತಿದ್ದಾನೆ. ಅಲ್ಲಿ ಇನ್ನೂ ಶ್ರೀಮಂತ ಬಡವರ ಮಧ್ಯೆ ಯಾವುದೇ ಅಂತರಗಳಿರುವುದಿಲ್ಲ, ಜೀವಂತವಾಗಿ ಉಳಿಯಲಿಕ್ಕೆಂದು ಹೊಟ್ಟೆಪಾಡಿಗಾಗಿ ಹೆಣಗಾಡುವ ಜನರು ಇನ್ನಿಲ್ಲ.
ಈ ಬೈಬಲ್ ವಾಗ್ದಾನಗಳನ್ನು ಮೊದಲು ಕೇಳಿಸಿಕೊಳ್ಳುವಾಗ, ಇದು ವಾಸ್ತವಿಕವಲ್ಲ ಎಂದು ಒಬ್ಬರಿಗೆ ಅನಿಸಬಹುದು. ಆದರೂ, ಬೈಬಲಿನ ಹೆಚ್ಚು ನಿಕಟವಾದ ಪರೀಕ್ಷೆಯು, ಗತಕಾಲದ ಎಲ್ಲಾ ದೇವರ ವಾಗ್ದಾನಗಳು ಪೂರೈಸಲ್ಪಟ್ಟವು ಎಂಬುದನ್ನು ತೋರಿಸುತ್ತದೆ. (ಯೆಶಾಯ 55:11) ಆದುದರಿಂದ ಅದು ಸಂಭವಿಸಬಹುದೋ ಎಂಬುದು ಮುಖ್ಯವಾಗಿರುವುದಿಲ್ಲ. ಬದಲಿಗೆ, ನಿಜ ಪ್ರಶ್ನೆಯೇನೆಂದರೆ, ಅದು ಸಂಭವಿಸುವಾಗ ಅದರಿಂದ ಪ್ರಯೋಜನ ಪಡೆದುಕೊಳ್ಳುವಂತೆ ನೀವೇನು ಮಾಡಬೇಕು?
ನೀವು ಅಲ್ಲಿರುವಿರೋ?
ಸರಕಾರವು ದೇವರದ್ದಾಗಿರುವುದರಿಂದ, ಆ ಆಡಳಿತದ ಪ್ರಜೆಗಳಾಗಿ ದೇವರು ಯಾರನ್ನು ಸ್ವೀಕರಿಸುತ್ತಾನೋ ಆ ರೀತಿಯ ಜನರಾಗಿ ನಾವಿರಬೇಕು. ಆ ಅರ್ಹತೆಯನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ವಿಷಯದಲ್ಲಿ ಆತನು ನಮಗೆ ಯಾವುದೇ ಮಾಹಿತಿಯನ್ನು ಕೊಡದೇ ಬಿಟ್ಟಿರುವುದಿಲ್ಲ. ಅದರ ನಿರ್ದೇಶನಗಳು ಬೈಬಲಿನಲ್ಲಿ ಕೊಡಲ್ಪಟ್ಟಿವೆ.
ನೇಮಿತ ನಾಯಕನಾದ ದೇವಕುಮಾರನು ನೀತಿವಂತನಾಗಿದ್ದಾನೆ. (ಯೆಶಾಯ 11:3-5) ಆದುದರಿಂದ, ಈ ಸರಕಾರದ ಕೆಳಗೆ ಜೀವಿಸಲಿಕ್ಕೆಂದು ಅಂಗೀಕರಿಸಲ್ಪಡುವವರು ಸಹ ನೀತಿವಂತರಾಗಿರುವಂತೆ ಅಪೇಕ್ಷಿಸಲಾಗುತ್ತದೆ. ಜ್ಞಾನೋಕ್ತಿ 2:21, 22 ಹೇಳುವುದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.”
ಈ ಅರ್ಹತೆಗಳನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಲು ಯಾವುದೇ ಮಾಹಿತಿಯು ಲಭ್ಯವಿದೆಯೋ? ಹೌದು, ಇದೆ. ಬೈಬಲನ್ನು ಅಧ್ಯಯನಮಾಡಿ, ಅದರ ಮಾರ್ಗದರ್ಶನಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ಈ ಅದ್ಭುತಕರವಾದ ಭವಿಷ್ಯತ್ತಿನಲ್ಲಿ ನೀವು ಆನಂದಿಸಬಲ್ಲಿರಿ. (ಯೋಹಾನ 17:3) ಈ ಅಧ್ಯಯನವನ್ನು ಮಾಡುವುದರಲ್ಲಿ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು. ನೀವು ಎಂದಿಗೂ ಬಡತನ ಮತ್ತು ಅನ್ಯಾಯವನ್ನು ಅನುಭವಿಸದ ಒಂದು ಸಮಾಜದಲ್ಲಿ ಸೇರಲಿಕ್ಕಾಗಿ ಕೊಡಲ್ಪಡುವ ಈ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 5ರಲ್ಲಿರುವ ಚಿತ್ರ]
ಯೂಫ್ರೊಸೀನ: “ನನ್ನ ಕುಟುಂಬಕ್ಕೆ ಆವಶ್ಯಕವಾಗಿರುವುದನ್ನು ಪಡೆದುಕೊಳ್ಳಲು ಒಂದು ಕಟ್ಟುನಿಟ್ಟಿನ ಬಜೆಟ್ ಸಹಾಯಮಾಡುತ್ತದೆ”
[ಪುಟ 6ರಲ್ಲಿರುವ ಚಿತ್ರಗಳು]
ದೇವರೊಂದಿಗೆ ಒಂದು ಸುಸಂಬಂಧವನ್ನಾಗಲಿ ಸಂತೋಷಕರವಾದ ಕುಟುಂಬ ಜೀವನವನ್ನಾಗಲಿ ಹಣದಿಂದ ಖರೀದಿಸಲು ಸಾಧ್ಯವಿಲ್ಲ