ವಾಚಕರಿಂದ ಪ್ರಶ್ನೆಗಳು
ರಕ್ತವನ್ನು ಹೇಗೆ ಉಪಯೋಗಿಸಬೇಕೆಂಬ ಬೈಬಲಿನ ಆಜ್ಞೆಗಳ ಕುರಿತಾದ ತಮ್ಮ ತಿಳುವಳಿಕೆಗನುಸಾರ, ವೈದ್ಯಕೀಯ ಕಾರ್ಯವಿಧಾನಗಳಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ರಕ್ತವನ್ನು ಉಪಯೋಗಿಸುವುದರ ಕುರಿತಾಗಿ ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?
ಪ್ರತಿಯೊಬ್ಬ ಕ್ರೈಸ್ತನು ಈ ವಿಷಯವನ್ನು ತನ್ನ ವೈಯಕ್ತಿಕ ಇಷ್ಟ ಅಥವಾ ಯಾವುದೋ ವೈದ್ಯಕೀಯ ಕಾರಣದ ಆಧಾರದ ಮೇಲೆ ನಿರ್ಧರಿಸಬಾರದು. ಅದರ ಬದಲಿಗೆ, ಬೈಬಲ್ ಏನು ಹೇಳುತ್ತದೆಂಬುದನ್ನು ಅವನು ಪರಿಗಣಿಸಬೇಕು. ಯಾಕೆಂದರೆ ಇದು, ಆ ವ್ಯಕ್ತಿ ಮತ್ತು ಯೆಹೋವನ ನಡುವಿನ ವಿಷಯವಾಗಿದೆ.
ನಮ್ಮ ಜೀವಕ್ಕಾಗಿ ನಾವು ಯೆಹೋವನಿಗೆ ಋಣಿಗಳಾಗಿದ್ದೇವೆ. ಮತ್ತು ನಾವು ರಕ್ತವನ್ನು ಸೇವಿಸಬಾರದೆಂದು ಆತನು ಅಪ್ಪಣೆಯನ್ನು ಕೊಟ್ಟಿದ್ದಾನೆ. (ಆದಿಕಾಂಡ 9:3, 4) ರಕ್ತವು ಜೀವವನ್ನು ಪ್ರತಿನಿಧಿಸುತ್ತದಾದ್ದರಿಂದ, ಪುರಾತನ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ಧರ್ಮಶಾಸ್ತ್ರದಲ್ಲಿ, ರಕ್ತದ ಉಪಯೋಗದ ಕುರಿತಾಗಿ ದೇವರು ಮಿತಿಗಳನ್ನಿಟ್ಟನು. ಆತನು ಆಜ್ಞಾಪಿಸಿದ್ದು: “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ.” ಒಬ್ಬ ವ್ಯಕ್ತಿಯು ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಕೊಲ್ಲುವಲ್ಲಿ ಆಗೇನು? ದೇವರಂದದ್ದು: “ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು.”a (ಯಾಜಕಕಾಂಡ 17:11, 13) ಈ ನಿಯಮವನ್ನು ಯೆಹೋವನು ಪುನಃ ಪುನಃ ತಿಳಿಸಿದನು. (ಧರ್ಮೋಪದೇಶಕಾಂಡ 12:16, 24; 15:23) ಯೆಹೂದಿ ಸನ್‌ಸಿನೋ ಖುಮಾಷ್ ಹೇಳುವುದು: “ರಕ್ತವು ಶೇಖರಿಸಿಡಲ್ಪಡಬಾರದು. ಅದು ಸೇವಿಸಲ್ಪಡದಂತೆ ಅದನ್ನು ನೆಲದ ಮೇಲೆ ಸುರಿಸಬೇಕು.” ಯಾವ ಇಸ್ರಾಯೇಲ್ಯನೂ ಇನ್ನೊಂದು ಜೀವಿಯ ರಕ್ತವನ್ನು ತೆಗೆದು, ಶೇಖರಿಸಿ, ಉಪಯೋಗಿಸಬಾರದಿತ್ತು. ಏಕೆಂದರೆ ಆ ಪ್ರಾಣಿಯ ಜೀವವು ದೇವರಿಗೆ ಸೇರಿದ್ದಾಗಿತ್ತು.
ಮೆಸ್ಸೀಯನು ಸತ್ತಾಗ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗು ಕೊನೆಗೊಂಡಿತು. ಆದರೆ ರಕ್ತವು ಈಗಲೂ ದೇವರ ದೃಷ್ಟಿಯಲ್ಲಿ ಪವಿತ್ರವಾಗಿದೆ. ಆದುದರಿಂದ ದೇವರ ಪವಿತ್ರಾತ್ಮದಿಂದ ಪ್ರಚೋದಿಸಲ್ಪಟ್ಟು, ಕ್ರೈಸ್ತರು ‘ರಕ್ತವನ್ನು ವಿಸರ್ಜಿಸಬೇಕೆಂದು’ ನಿರ್ದೇಶಿಸಲ್ಪಟ್ಟರು. ಆ ಆಜ್ಞೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದಿತ್ತು. ಅದು ನೈತಿಕ ರೀತಿಯಲ್ಲಿ, ಲೈಂಗಿಕ ಅನೈತಿಕತೆ ಅಥವಾ ಮೂರ್ತಿಪೂಜೆಯಿಂದ ದೂರವಿರುವಷ್ಟೇ ಪ್ರಾಮುಖ್ಯವಾಗಿತ್ತು. (ಅ. ಕೃತ್ಯಗಳು 15:28, 29; 21:25) 20ನೆಯ ಶತಮಾನದಲ್ಲಿ ರಕ್ತದಾನ ಮತ್ತು ರಕ್ತಪೂರಣಗಳು ಸರ್ವಸಾಮಾನ್ಯವಾಗತೊಡಗಿದವು. ಆದರೆ ಇವು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿಲ್ಲವೆಂದು ಆಗ ಯೆಹೋವನ ಸಾಕ್ಷಿಗಳು ಗ್ರಹಿಸಿದರು.b
ಕೆಲವೊಮ್ಮೆ, ಶಸ್ತ್ರಚಿಕಿತ್ಸೆಯ ಕೆಲವು ವಾರಗಳ ಮುಂಚೆಯೇ ಒಬ್ಬ ರೋಗಿಯು ತನ್ನ ಸ್ವಂತ ರಕ್ತವನ್ನು ಶೇಖರಿಸಿಡುವಂತೆ (ಪ್ರಿಆಪರೇಟಿವ್ ಆಟೊಲೊಗಸ್ ಬ್ಲಡ್ ಡೊನೇಷನ್ ಅಥವಾ ಪಿ.ಎ.ಡಿ.) ವೈದ್ಯನು ಹೇಳಬಹುದು. ಏಕೆಂದರೆ, ಅಗತ್ಯಬೀಳುವಲ್ಲಿ ಅವನು ಆ ರೋಗಿಗೆ, ಶೇಖರಿಸಿಡಲ್ಪಟ್ಟಿರುವ ಅವನ ಸ್ವಂತ ರಕ್ತವನ್ನು ಕೊಡಲು ಶಕ್ತನಾಗಿರುವನು. ಆದರೆ, ರಕ್ತವನ್ನು ಹಾಗೆ ಸಂಗ್ರಹಿಸುವುದು, ಶೇಖರಿಸಿಡುವುದು ಮತ್ತು ಪುನಃ ದೇಹದೊಳಗೆ ಸೇರಿಸುವುದು, ಯಾಜಕಕಾಂಡ ಮತ್ತು ಧರ್ಮೋಪದೇಶಕಾಂಡದಲ್ಲಿ ಕೊಡಲ್ಪಟ್ಟಿರುವ ಆಜ್ಞೆಗಳಿಗೆ ನೇರವಾಗಿ ವಿರುದ್ಧವಾಗಿದೆ. ರಕ್ತವು ಶೇಖರಿಸಲ್ಪಡಬಾರದಿತ್ತು; ಅದನ್ನು ದೇವರಿಗೆ ಹಿಂದಿರುಗಿಸುತ್ತೇವೊ ಎಂಬಂತೆ ನೆಲಕ್ಕೆ ಸುರಿಸಬೇಕಾಗಿತ್ತು. ಮೋಶೆಯ ಧರ್ಮಶಾಸ್ತ್ರವು ಇಂದು ಜಾರಿಯಲ್ಲಿಲ್ಲ ನಿಜ. ಹಾಗಿದ್ದರೂ, ದೇವರು ಅದರಲ್ಲಿ ಸೇರಿಸಿರುವ ತತ್ವಗಳನ್ನು ಯೆಹೋವನ ಸಾಕ್ಷಿಗಳು ಗೌರವಿಸುತ್ತಾರೆ, ಮತ್ತು ಅವರು ‘ರಕ್ತವನ್ನು ವಿಸರ್ಜಿಸುವ’ ದೃಢನಿರ್ಧಾರವನ್ನು ಮಾಡಿದ್ದಾರೆ. ಹೀಗಿರುವುದರಿಂದ ನಾವು ರಕ್ತವನ್ನು ದಾನ ಮಾಡುವುದಿಲ್ಲ. ಮತ್ತು ‘ಸುರಿಸಲ್ಪಡಬೇಕಾದ’ ರಕ್ತವನ್ನು ಅನಂತರ ದೇಹದೊಳಗೆ ಸೇರಿಸಲಿಕ್ಕಾಗಿ ಅದನ್ನು ಶೇಖರಿಸಿಡುವುದಿಲ್ಲ. ಅದು, ದೇವರ ನಿಯಮಕ್ಕೆ ವಿರುದ್ಧವಾಗಿದೆ.
ಕೆಲವೊಂದು ವೈದ್ಯಕೀಯ ಕಾರ್ಯವಿಧಾನಗಳು ಅಥವಾ ಪರೀಕ್ಷೆಗಳಲ್ಲಿ ಒಬ್ಬ ವ್ಯಕ್ತಿಯ ಸ್ವಂತ ರಕ್ತದ ಉಪಯೋಗವು, ದೇವರು ತಿಳಿಸಿರುವ ಮೂಲತತ್ವಗಳಿಗೆ ವಿರುದ್ಧವಾಗಿದೆಯೊ ಇಲ್ಲವೊ ಎಂದು ಸ್ಪಷ್ಟವಾಗಿ ಹೇಳಲುಸಾಧ್ಯವಿಲ್ಲ. ಉದಾಹರಣೆಗಾಗಿ, ಕೆಲವೊಮ್ಮೆ ಪರೀಕ್ಷೆಗಾಗಿ ಅಥವಾ ತಪಾಸಣೆಗಾಗಿ, ದೇಹದಿಂದ ಸ್ವಲ್ಪ ರಕ್ತವು ತೆಗೆಯಲ್ಪಟ್ಟು, ಅನಂತರ ಅದನ್ನು ಬಿಸಾಡಲಾಗುತ್ತದೆ. ಮತ್ತು ಅನೇಕ ಕ್ರೈಸ್ತರು ಇದನ್ನು ಅನುಮತಿಸಿದ್ದಾರೆ. ಇದನ್ನು ಬಿಟ್ಟು, ಒಬ್ಬ ವ್ಯಕ್ತಿಯ ಸ್ವಂತ ರಕ್ತವನ್ನು ಒಳಗೊಂಡಿರುವ ಇನ್ನಿತರ ಜಟಿಲ ಕಾರ್ಯವಿಧಾನಗಳನ್ನೂ ವೈದ್ಯರು ಶಿಫಾರಸ್ಸು ಮಾಡಬಹುದು.
ಉದಾಹರಣೆಗಾಗಿ, ನಿರ್ದಿಷ್ಟ ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳಲ್ಲಿ, ಹೀಮೊಡೈಲ್ಯೂಷನ್ ಎಂಬ ಪ್ರಕ್ರಿಯೆಯಲ್ಲಿ ಸ್ವಲ್ಪ ರಕ್ತವನ್ನು ದೇಹದಿಂದ ಹೊರಕ್ಕೆ ಒಂದು ಸರ್ಕಿಟಿಗೆ (ಮಂಡಲಕ್ಕೆ) ಕಳುಹಿಸಲಾಗುತ್ತದೆ. ರೋಗಿಯ ದೇಹದಲ್ಲಿ ಉಳಿದಿರುವಂತಹ ರಕ್ತವನ್ನು ತೆಳುಗೊಳಿಸಲಾಗುತ್ತದೆ. ಅನಂತರ, ಆ ಸರ್ಕಿಟ್‌ನಲ್ಲಿದ್ದ ರಕ್ತವನ್ನು ಪುನಃ ಅವನ ದೇಹದೊಳಗೆ ಕಳುಹಿಸಲಾಗುತ್ತದೆ. ಹೀಗೆ ಅವನ ರಕ್ತಕಣಗಳ ಸಂಖ್ಯೆಯು, ಸಾಧಾರಣವಾದ ಮಟ್ಟಕ್ಕೆ ಹತ್ತಿರ ಬರುತ್ತದೆ. ಅದೇ ರೀತಿಯಲ್ಲಿ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದೇಹದಲ್ಲಿ ಮಾಡಲಾಗಿರುವ ಶಸ್ತ್ರವ್ರಣದೊಳಗೆ ರಕ್ತವು ಹರಿದುಬರುತ್ತಿದ್ದರೆ, ಅದನ್ನು ಸಂಗ್ರಹಿಸಿ ಸೋಸಲಾಗುತ್ತದೆ. ಅನಂತರ ಆ ಕೆಂಪು ರಕ್ತಕಣಗಳನ್ನು ಪುನಃ ಒಮ್ಮೆ ರೋಗಿಯ ದೇಹದೊಳಗೆ ಸೇರಿಸಲಾಗುತ್ತದೆ. ಇದನ್ನು ಸೆಲ್ ಸ್ಯಾಲ್‌ವೇಜ್ ಎಂದು ಕರೆಯಲಾಗುತ್ತದೆ. ಇನ್ನೊಂದು ಪ್ರಕ್ರಿಯೆಯಲ್ಲಿ, ರಕ್ತವನ್ನು ಒಂದು ಯಂತ್ರದೊಳಗೆ ಸೇರುವಂತೆ ಮಾಡಲಾಗುತ್ತದೆ. ಆ ಯಂತ್ರವು ಸಾಮಾನ್ಯವಾಗಿ ದೇಹದ ಭಾಗಗಳು (ಉದಾಹರಣೆಗಾಗಿ, ಹೃದಯ, ಶ್ವಾಸಕೋಶ, ಅಥವಾ ಮೂತ್ರಪಿಂಡಗಳು) ನಡೆಸುವ ಕೆಲಸವನ್ನು ತಾತ್ಕಾಲಿಕವಾಗಿ ನಡೆಸುತ್ತದೆ. ಅನಂತರ, ಆ ಯಂತ್ರದಿಂದ ರಕ್ತವನ್ನು ಪುನಃ ರೋಗಿಯ ದೇಹದೊಳಗೆ ಸೇರಿಸಲಾಗುತ್ತದೆ. ಬೇರೆ ಕಾರ್ಯವಿಧಾನಗಳಲ್ಲಿ, ರಕ್ತವನ್ನು ಒಂದು ಸಪರೇಟರ್ (ಸೆಂಟ್ರಿಫ್ಯೂಜ್)ಗೆ ತಿರುಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅದರಲ್ಲಿರುವ ಹಾನಿಕಾರಕ ಅಥವಾ ದೋಷಪೂರ್ಣ ಅಂಶಗಳನ್ನು ತೆಗೆದುಹಾಕಸಾಧ್ಯವಿದೆ. ಇಲ್ಲದಿರುವಲ್ಲಿ, ರಕ್ತದಿಂದ ಯಾವುದಾದರೊಂದು ಘಟಕಾಂಶವನ್ನು ತೆಗೆದು, ಅದನ್ನು ದೇಹದ ಬೇರೊಂದು ಭಾಗಕ್ಕೆ ಸೇರಿಸಲಿಕ್ಕಾಗಿ ಹಾಗೆ ಮಾಡಲಾಗುತ್ತದೆ. ಕೆಲವೊಂದು ಪರೀಕ್ಷೆಗಳಲ್ಲಿ, ರಕ್ತವನ್ನು ತೆಗೆದು ಅದರಲ್ಲಿ ಒಂದು ಪದಾರ್ಥವನ್ನು ಅಥವಾ ಔಷಧವನ್ನು ಬೆರಸಿ, ಅದನ್ನು ಪುನಃ ರೋಗಿಯ ದೇಹದೊಳಗೆ ಸೇರಿಸಲಾಗುತ್ತದೆ.
ಅಲ್ಲಿಲ್ಲಿ ವ್ಯತ್ಯಾಸಗಳಿರಬಹುದು ಮತ್ತು ಹೊಸ ಕಾರ್ಯವಿಧಾನಗಳು, ಚಿಕಿತ್ಸೆಗಳು ಮತ್ತು ಪರೀಕ್ಷೆಗಳು ಖಂಡಿತವಾಗಿಯೂ ಬರುತ್ತಾ ಇರುವವು. ಪ್ರತಿಯೊಂದು ವ್ಯತ್ಯಾಸವನ್ನು ಪರಿಶೀಲಿಸಿ, ನಿರ್ಣಯವನ್ನು ಕೊಡುವುದು ನಮ್ಮ ಕೆಲಸವಲ್ಲ. ತನ್ನ ಸ್ವಂತ ರಕ್ತವು ಒಂದು ಶಸ್ತ್ರಚಿಕಿತ್ಸಾ ವಿಧಾನದಲ್ಲಿ, ವೈದ್ಯಕೀಯ ಪರೀಕ್ಷೆಯಲ್ಲಿ ಅಥವಾ ಸದ್ಯದ ಚಿಕಿತ್ಸಾ ಕ್ರಮದಲ್ಲಿ ಹೇಗೆ ಉಪಯೋಗಿಸಲ್ಪಡಬೇಕೆಂಬುದನ್ನು ಒಬ್ಬ ಕ್ರೈಸ್ತನು ಸ್ವತಃ ನಿರ್ಣಯಿಸಬೇಕು. ಅವನು ವೈದ್ಯನಿಂದ ಅಥವಾ ಟೆಕ್ನಿಷಿಯನ್‌ನಿಂದ, ಆ ಕ್ರಿಯಾವಿಧಾನದಲ್ಲಿ ತನ್ನ ರಕ್ತವನ್ನು ಹೇಗೆ ಉಪಯೋಗಿಸಲಾಗುವದು ಎಂಬುದರ ವಾಸ್ತವಾಂಶಗಳನ್ನು ಮುಂಚಿತವಾಗಿಯೇ ಕೇಳಿ ತಿಳಿದುಕೊಳ್ಳಬಹುದು. ಅನಂತರ ಅವನು ತನ್ನ ಮನಸ್ಸಾಕ್ಷಿಗನುಸಾರ ನಿರ್ಣಯವನ್ನು ಮಾಡಬೇಕು. (ರೇಖಾಚೌಕವನ್ನು ನೋಡಿ.)
ಕ್ರೈಸ್ತರು ತಾವು ದೇವರಿಗೆ ಮಾಡಿರುವ ಸಮರ್ಪಣೆಯನ್ನು ಮತ್ತು ಆತನನ್ನು ‘ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ, ಪೂರ್ಣಬುದ್ಧಿಯಿಂದಲೂ ಪ್ರೀತಿಸುವ’ ತಮ್ಮ ಹಂಗನ್ನು ಮನಸ್ಸಿನಲ್ಲಿಡಬೇಕು. (ಲೂಕ 10:27) ಯೆಹೋವನ ಸಾಕ್ಷಿಗಳು ಲೋಕದಲ್ಲಿರುವ ಹೆಚ್ಚಿನವರಂತಿಲ್ಲ. ಅವರಿಗೆ ದೇವರೊಂದಿಗಿರುವ ತಮ್ಮ ಸಂಬಂಧವು ತುಂಬ ಪ್ರಾಮುಖ್ಯವಾದದ್ದಾಗಿದೆ. ನಮ್ಮೆಲ್ಲರ ಜೀವದಾತನು, ನಾವು ಯೇಸುವಿನ ರಕ್ತದಲ್ಲಿ ನಂಬಿಕೆಯನ್ನಿಡುವಂತೆ ಉತ್ತೇಜಿಸುತ್ತಾನೆ. ನಾವು ಹೀಗೆ ಓದುತ್ತೇವೆ: “ಈತನು [ಯೇಸು ಕ್ರಿಸ್ತನು] ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು.”—ಎಫೆಸ 1:7.
[ಪಾದಟಿಪ್ಪಣಿಗಳು]
a ಪ್ರೊಫೆಸರ್ ಫ್ರಾಂಕ್ ಏಚ್. ಗಾರ್ಮನ್ ಬರೆಯುವುದು: “ರಕ್ತವನ್ನು ನೆಲಕ್ಕೆ ಸುರಿಸುವುದು, ಪ್ರಾಣಿಯ ಜೀವಕ್ಕಾಗಿ ಗೌರವವನ್ನು ತೋರಿಸುವ ಮತ್ತು ಆ ಜೀವವನ್ನು ಸೃಷ್ಟಿಸಿ, ಅದರ ಆರೈಕೆಮಾಡುತ್ತಾ ಇರುವ ದೇವರಿಗಾಗಿ ಗೌರವವನ್ನು ಸೂಚಿಸುವ ಪೂಜ್ಯಭಾವನೆಯ ಕೃತ್ಯವಾಗಿದೆ.”
b ಈ ವಿಷಯದ ಕುರಿತಾದ ಮುಖ್ಯ ಪ್ರಶ್ನೆಗಳನ್ನು 1951ರ ಜುಲೈ 1ರ ದ ವಾಚ್‌ಟವರ್ ಪತ್ರಿಕೆಯು ಉತ್ತರಿಸಿತು. ದಾನಮಾಡಲ್ಪಟ್ಟ ರಕ್ತದ ಪೂರಣಗಳನ್ನು ಸ್ವೀಕರಿಸುವುದು ಏಕೆ ಯೋಗ್ಯವಲ್ಲವೆಂಬುದನ್ನು ಅದು ತೋರಿಸಿತು.
[ಪುಟ 31ರಲ್ಲಿರುವ ಚೌಕ/ಚಿತ್ರಗಳು]
ಸ್ವತಃ ಕೇಳಿಕೊಳ್ಳಬೇಕಾದ ಪ್ರಶ್ನೆಗಳು
ನನ್ನ ದೇಹದಿಂದ ಸ್ವಲ್ಪ ರಕ್ತವು ನನ್ನ ದೇಹದ ಹೊರಗೆ ಕಳುಹಿಸಲ್ಪಟ್ಟು, ಅದರ ಹರಿವು ಕೇವಲ ಸ್ವಲ್ಪ ಸಮಯದ ವರೆಗೆ ನಿಂತುಬಿಡುವುದಾದರೂ, ಆ ರಕ್ತವು ಇನ್ನೂ ನನ್ನ ದೇಹದ ಭಾಗವಾಗಿದೆ. ಆದುದರಿಂದ ಅದನ್ನು ‘ನೆಲದ ಮೇಲೆ ಸುರಿಸುವ’ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ನನ್ನ ಮನಸ್ಸಾಕ್ಷಿಯು ಅನುಮತಿಸುವುದೊ?
ರೋಗನಿದಾನ ಅಥವಾ ಯಾವುದೋ ಚಿಕಿತ್ಸಾ ಕ್ರಮದ ಸಮಯದಲ್ಲಿ, ನನ್ನ ಸ್ವಂತ ರಕ್ತವು ದೇಹದಿಂದ ತೆಗೆಯಲ್ಪಟ್ಟು, ಸ್ವಲ್ಪ ಮಾರ್ಪಡಿಸಲ್ಪಟ್ಟು ಪುನಃ ನನ್ನ ದೇಹದೊಳಗೆ ಸೇರಿಸಲ್ಪಡುವಲ್ಲಿ, ನನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು ಕಳವಳಗೊಳ್ಳುವುದೊ?