ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜೂನ್‌ ಪು. 14-19
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಂತ್ಯ ಯಾವಾಗ ಬರುತ್ತೆ ಅಂತ ಗೊತ್ತಿಲ್ಲ
  • ಯೆಹೋವ ಹೇಗೆಲ್ಲಾ ಕೆಲಸ ಮಾಡ್ತಾನೆ ಅಂತ ನಮಗೆ ಗೊತ್ತಿಲ್ಲ
  • ನಾಳೆ ಏನಾಗುತ್ತೋ ನಮಗೆ ಗೊತ್ತಿಲ್ಲ
  • ಯೆಹೋವ ನಮ್ಮನ್ನ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅಂತ ನಮಗೆ ಗೊತ್ತಿಲ್ಲ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜೂನ್‌ ಪು. 14-19

ಅಧ್ಯಯನ ಲೇಖನ 26

ಗೀತೆ 103 ಮಂದೆಯನ್ನು ಕಾಯುವ ಪಾಲಕರು

ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!

“ಸರ್ವಶಕ್ತನನ್ನ ಅರ್ಥ ಮಾಡ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷ್ಯ.”—ಯೋಬ 37:23.

ಈ ಲೇಖನದಲ್ಲಿ ಏನಿದೆ?

ನಮಗೆ ಗೊತ್ತಿಲ್ಲದಿರೋ ವಿಷ್ಯಗಳ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಬಾರದು. ನಮಗೇನು ಗೊತ್ತಿದ್ಯೋ ಅದಕ್ಕೆ ಗಮನ ಕೊಟ್ಟು ಯೆಹೋವನ ಮೇಲೆ ಭರವಸೆ ಇಡಬೇಕು ಅಂತ ನೋಡ್ತೀವಿ.

1. ಯೆಹೋವ ನಮ್ಮನ್ನ ಹೇಗೆ ಸೃಷ್ಟಿ ಮಾಡಿದ್ದಾನೆ ಮತ್ತು ಯಾಕೆ?

ನಮಗೆ ಯೋಚಿಸೋ ಶಕ್ತಿ ಇದೆ, ನಾವು ಹೊಸಹೊಸ ವಿಷ್ಯಗಳನ್ನ ಕಲಿತೀವಿ, ‘ಈ ವಿಷ್ಯ ಯಾಕೆ ಈ ತರ ಇದೆ, ಆ ತರ ಇದೆ’ ಅಂತ ಆಲೋಚಿಸ್ತೀವಿ. ಅಷ್ಟೇ ಅಲ್ಲ, ವಿವೇಚನೆ ಬಳಸಿ ಒಳ್ಳೆ ನಿರ್ಧಾರಗಳನ್ನೂ ಮಾಡ್ತೀವಿ. ಇದನ್ನೆಲ್ಲಾ ನೋಡಿದ್ರೆ, ನಮ್ಮನ್ನ ಯೆಹೋವ ದೇವರು ಎಷ್ಟು ಚೆನ್ನಾಗಿ ಸೃಷ್ಟಿ ಮಾಡಿದ್ದಾನೆ ಅಂತ ಅನ್ಸುತ್ತೆ ಅಲ್ವಾ! ಆದ್ರೆ ಯಾಕೆ ನಮ್ಮನ್ನ ಈ ತರ ಸೃಷ್ಟಿ ಮಾಡಿದ್ದಾನೆ ಗೊತ್ತಾ? ಒಂದು, ನಾವು ‘ದೇವರ ಬಗ್ಗೆ ಹೆಚ್ಚು ಕಲಿಬೇಕು’ ಅಂತ. ಎರಡು, ನಾವು ನಮ್ಮ ಯೋಚನಾ ಸಾಮರ್ಥ್ಯ ಬಳಸಿ ಆತನ ಸೇವೆ ಮಾಡ್ಬೇಕು ಅಂತ.—ಜ್ಞಾನೋ. 2:1-5; ರೋಮ. 12:1.

2. (ಎ) ನಮಗೆ ಯಾವ ಇತಿಮಿತಿ ಇದೆ? (ಯೋಬ 37:23, 24) (ಚಿತ್ರ ನೋಡಿ.) (ಬಿ) ಇದನ್ನ ತಿಳ್ಕೊಳ್ಳೋದ್ರಿಂದ ನಮಗೇನು ಪ್ರಯೋಜ್ನ?

2 ನಾವಿಗಾಗ್ಲೇ ಎಷ್ಟೋ ವಿಷ್ಯಗಳನ್ನ ಕಲಿತಿರಬಹುದು. ಹಾಗಿದ್ರೂ ನಮಗೆ ಇತಿಮಿತಿ ಇದೆ. ನಮ್ಮ ಕೈಯಲ್ಲಿ ಅರ್ಥ ಮಾಡ್ಕೊಳ್ಳೋಕೆ ಆಗದಿರೋ ಎಷ್ಟೋ ವಿಷ್ಯಗಳು ಇನ್ನೂ ಇದೆ. ಇದನ್ನ ಒಪ್ಕೊಂಡ್ರೆ, ನಮಗೆ ತುಂಬ ಪ್ರಯೋಜ್ನ ಆಗುತ್ತೆ. (ಯೋಬ 37:23, 24 ಓದಿ.) ಉದಾಹರಣೆಗೆ, ಯೆಹೋವ ದೇವರು ಯೋಬನಿಗೆ ಒಂದಾದ್ಮೇಲೆ ಒಂದು ಪ್ರಶ್ನೆ ಕೇಳಿದಾಗ, ಅವನ ಹತ್ರ ಉತ್ರಾನೇ ಇರ್ಲಿಲ್ಲ. ಆಗ ಅವನಿಗೆ ‘ನನಗೆ ಎಷ್ಟೊ ವಿಷ್ಯಗಳು ಗೊತ್ತಿಲ್ಲ’ ಅಂತ ಅರ್ಥ ಆಯ್ತು. ಆ ಅನುಭವದಿಂದ ಅವನು ದೀನತೆ ಕಲಿತ, ತನ್ನ ಯೋಚ್ನೆ ತಪ್ಪು ಅಂತ ಅರ್ಥ ಮಾಡ್ಕೊಂಡ. (ಯೋಬ 42:3-6) ನಾವೂ ನಮಗೆ ಗೊತ್ತಿಲ್ಲದಿರೋ ಎಷ್ಟೋ ವಿಷ್ಯಗಳಿವೆ ಅಂತ ಅರ್ಥ ಮಾಡ್ಕೊಂಡ್ರೆ ದೀನತೆ ಕಲಿತೀವಿ. ಅಷ್ಟೇ ಅಲ್ಲ, ನಾವೇನು ತಿಳ್ಕೊಬೇಕೋ ಅದನ್ನ ಯೆಹೋವ ನಮ್ಮಿಂದ ಮುಚ್ಚಿಡಲ್ಲ, ಖಂಡಿತ ತಿಳಿಸ್ತಾನೆ ಅಂತ ನಂಬಿಕೆ ಇಟ್ಟು ಒಳ್ಳೆ ನಿರ್ಧಾರಗಳನ್ನ ಮಾಡ್ತೀವಿ.—ಜ್ಞಾನೋ. 2:6.

ಯೆಹೋವ ಯೋಬನ ಜೊತೆ ಮಾತಾಡ್ತಿರುವಾಗ ಮೋಡದಿಂದ ಬೆಳಕು ಬರ್ತಿದೆ. ಎಲೀಹು ಮತ್ತು ಯೋಬನಿಗೆ ನೋವಾಗೋ ತರ ಮಾತಾಡಿದ ಸ್ನೇಹಿತರು ಅದನ್ನ ನೋಡ್ತಿದ್ದಾರೆ.

ನಮಗೆ ಎಲ್ಲಾ ಗೊತ್ತಿಲ್ಲ ಅಂತ ಯೋಬನ ತರ ನಾವು ತಿಳ್ಕೊಂಡ್ರೆ ನಮಗೇ ಪ್ರಯೋಜ್ನ ಆಗುತ್ತೆ (ಪ್ಯಾರ 2 ನೋಡಿ)


3. ಈ ಲೇಖನದಲ್ಲಿ ನಾವು ಏನು ಕಲಿತೀವಿ?

3 ಈ ಲೇಖನದಲ್ಲಿ, ನಮಗೆ ಯಾವ ಕೆಲವು ವಿಷ್ಯಗಳು ಗೊತ್ತಿಲ್ಲ, ಅವು ಗೊತ್ತಿಲ್ಲದೆ ಇರೋದ್ರಿಂದ ಯಾವ ತೊಂದ್ರೆ ಆಗ್ತಿದೆ ಮತ್ತು ಯಾವ ಪ್ರಯೋಜ್ನ ಆಗ್ತಿದೆ ಅಂತ ನೋಡ್ತೀವಿ. ಇದನ್ನ ಚರ್ಚಿಸೋದ್ರಿಂದ ಯೆಹೋವನ ಮೇಲೆ ನಮಗಿರೋ ನಂಬಿಕೆ ಇನ್ನಷ್ಟು ಜಾಸ್ತಿ ಆಗುತ್ತೆ. “ಪರಿಪೂರ್ಣ ಜ್ಞಾನ ಇರೋ” ಯೆಹೋವ, ನಾವು ತಿಳ್ಕೊಬೇಕಾಗಿರೋ ವಿಷ್ಯಗಳನ್ನ ಖಂಡಿತ ತಿಳಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೂ ಈ ಲೇಖನ ಸಹಾಯ ಮಾಡುತ್ತೆ.—ಯೋಬ 37:16.

ಅಂತ್ಯ ಯಾವಾಗ ಬರುತ್ತೆ ಅಂತ ಗೊತ್ತಿಲ್ಲ

4. ಮತ್ತಾಯ 24:36ರ ಪ್ರಕಾರ ನಮಗೆ ಯಾವ ಒಂದು ವಿಷ್ಯ ಗೊತ್ತಿಲ್ಲ?

4 ಮತ್ತಾಯ 24:36 ಓದಿ. ಈ ಲೋಕದ ಅಂತ್ಯ ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲ. ಭೂಮೀಲಿದ್ದಾಗ ಯೇಸುಗೂ “ಆ ದಿನ ಮತ್ತು ಸಮಯ”a ಯಾವಾಗ ಬರುತ್ತೆ ಅಂತ ಗೊತ್ತಿರಲಿಲ್ಲ. ಅಪೊಸ್ತಲರಿಗೆ ಯೇಸು, “ಯಾವಾಗ ಏನಾಗಬೇಕು ಅಂತ ನಿರ್ಧಾರ ಮಾಡೋ ಅಧಿಕಾರ” ನನ್ನ ತಂದೆಗೆ ಮಾತ್ರ ಇದೆ ಅಂತ ಹೇಳಿದನು. (ಅ. ಕಾ. 1:6, 7) ಈ ಲೋಕದ ಅಂತ್ಯ ಯಾವಾಗ ಬರಬೇಕು ಅಂತ ಯೆಹೋವ ಈಗಾಗ್ಲೇ ನಿರ್ಧಾರ ಮಾಡಿದ್ದಾನೆ. ಆದ್ರೆ ಅದನ್ನ ತಿಳ್ಕೊಳ್ಳೋ ಸಾಮರ್ಥ್ಯ ನಮಗಿಲ್ಲ.

5. ಅಂತ್ಯ ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲದೆ ಇರೋದ್ರಿಂದ ಏನು ಆಗಬಹುದು?

5 ಅಂತ್ಯ ಯಾವಾಗ ಬರುತ್ತೆ ಅಂತ ಗೊತ್ತಿಲ್ಲದೆ ಇರೋದ್ರಿಂದ ‘ಇನ್ನು ಎಷ್ಟು ದಿನ ಇದೇ ತರ ಕಾಯ್ತಾ ಇರಬೇಕು’ ಅಂತಾನೂ ನಮಗೆ ಗೊತ್ತಿಲ್ಲ. ಈಗಾಗ್ಲೇ ಸುಮಾರು ವರ್ಷದಿಂದ ನಾವು ಕಾಯ್ತಾ ಇರೋದಾದ್ರೆ ನಾವು ಕುಗ್ಗಿ ಹೋಗಬಹುದು. ನಮ್ಮ ಕುಟುಂಬದವರು, ಸ್ನೇಹಿತರು ನಮ್ಮನ್ನ ನೋಡಿ ಗೇಲಿ ಮಾಡ್ತಿರಬಹುದು. (2 ಪೇತ್ರ 3:3, 4) ಅವಾಗೆಲ್ಲ, ‘ಅಂತ್ಯ ಯಾವಾಗ ಬರುತ್ತೆ ಅಂತ ನನಗೆ ಗೊತ್ತಾಗಿದ್ರೆ ಚೆನ್ನಾಗಿರುತ್ತಿತ್ತು. ಆಗ ಈ ಎಲ್ಲಾ ಕಷ್ಟಗಳನ್ನ ಚೆನ್ನಾಗಿ ತಾಳ್ಕೊಳ್ಳೋಕೆ, ಗೇಲಿ ಮಾಡೋರಿಗೆ ಸರಿಯಾಗಿ ಉತ್ರ ಕೊಡೋಕೆ ಆಗ್ತಿತ್ತಲ್ವಾ?’ ಅಂತ ನಮಗೆ ಅನಿಸಬಹುದು.

6. ಅಂತ್ಯ ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲದೆ ಇರೋದ್ರಿಂದ ಏನು ಪ್ರಯೋಜ್ನ?

6 ಅಂತ್ಯ ಯಾವಾಗ ಬರುತ್ತೆ ಅಂತ ಯೆಹೋವ ನಮಗೆ ಹೇಳಿಲ್ಲ. ಇದು ಒಳ್ಳೇದೇ ಆಯ್ತು. ಒಂದುವೇಳೆ ಹೇಳಿಬಿಟ್ಟಿದ್ರೆ, ಬರೀ ಆ ದಿನಕ್ಕೋಸ್ಕರ ಅಥವಾ ಆ ದಿನ ಹತ್ರ ಬರುವಾಗ ಮಾತ್ರ ನಾವು ಸೇವೆ ಮಾಡಿಬಿಡ್ತಿದ್ವಿ. ಆದ್ರೆ ಅದನ್ನ ಹೇಳದೇ ಇರೋದ್ರಿಂದ ಯೆಹೋವನ ಮೇಲೆ ನಮಗಿರೋ ನಿಜವಾದ ಪ್ರೀತಿಯಿಂದ ನಿಯತ್ತಾಗಿ ಸೇವೆ ಮಾಡ್ತಿದ್ದೀವಿ. ಹಾಗಾಗಿ ನಾವು “ಯೆಹೋವನ ದಿನ” ಯಾವಾಗ ಬರುತ್ತೆ ಅಂತ ಯೋಚ್ನೆ ಮಾಡೋದಕ್ಕಿಂತ ಆ ದಿನ ಬಂದ್ಮೇಲೆ ಎಷ್ಟೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಬೇಕು. ಹೀಗೆ ಮಾಡಿದ್ರೆ ಯೆಹೋವನ ಮೇಲೆ ನಮಗಿರೋ ಭಕ್ತಿ ಜಾಸ್ತಿ ಆಗುತ್ತೆ, ಯಾವಾಗ್ಲೂ ಆತನಿಗೆ ಇಷ್ಟ ಇರೋದನ್ನೇ ಮಾಡ್ತೀವಿ.—2 ಪೇತ್ರ 3:11, 12.

7. ನಮಗೆ ಏನೆಲ್ಲಾ ಗೊತ್ತಿದೆ?

7 ನಾವೀಗ ನಮಗೆ ಏನು ಗೊತ್ತು ಅಂತ ನೋಡೋಣ. ಬೈಬಲ್‌ನಲ್ಲಿರೋ ಭವಿಷ್ಯವಾಣಿಗಳಿಂದ 1914ರಲ್ಲಿ ಕೊನೆ ದಿನಗಳು ಶುರುವಾಯ್ತು ಅಂತ ನಮಗೆ ಗೊತ್ತಿದೆ. ಅದಾದ್ಮೇಲೆ ಭೂಮಿ ಪರಿಸ್ಥಿತಿ ಹೇಗೆ ಬದಲಾಗಿದೆ ಅಂತ ನಮಗೆ ಚೆನ್ನಾಗಿ ಅರ್ಥ ಆಗಿದೆ. ಇದ್ರಿಂದ “ಯೆಹೋವನ ಮಹಾ ದಿನ ಹತ್ರ ಇದೆ” ಅಂತ ಕಲ್ತಿದ್ದೀವಿ. (ಚೆಫ. 1:14) ಅಷ್ಟೇ ಅಲ್ಲ, ಎಷ್ಟಾಗುತ್ತೋ ಅಷ್ಟು ಜನ್ರಿಗೆ “ದೇವರ ಆಳ್ವಿಕೆಯ . . . ಸಿಹಿಸುದ್ದಿ” ಸಾರಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅಂತಾನೂ ಅರ್ಥ ಮಾಡ್ಕೊಂಡಿದ್ದೀವಿ. (ಮತ್ತಾ. 24:14) ಅದಕ್ಕೆ ಇವತ್ತು 240 ದೇಶ ದ್ವೀಪಗಳಲ್ಲಿ 1000ಕ್ಕಿಂತ ಜಾಸ್ತಿ ಭಾಷೆಗಳಲ್ಲಿ ನಾವು ಸಿಹಿಸುದ್ದಿ ಸಾರ್ತಾ ಇದ್ದೀವಿ. ಇದನ್ನೆಲ್ಲಾ ನೋಡಿದ್ರೆ, ನಾವು ಹುರುಪಿಂದ ಸೇವೆ ಮಾಡೋಕೆ ಅಂತ್ಯ ಬರೋ ‘ದಿನ ಮತ್ತು ಸಮಯನ’ ತಿಳ್ಕೊಬೇಕಾಗಿಲ್ಲ ಅಂತ ಅರ್ಥ ಆಗುತ್ತೆ.

ಯೆಹೋವ ಹೇಗೆಲ್ಲಾ ಕೆಲಸ ಮಾಡ್ತಾನೆ ಅಂತ ನಮಗೆ ಗೊತ್ತಿಲ್ಲ

8. “ಸತ್ಯ ದೇವರ ಕೆಲಸಗಳು” ಅಂದ್ರೆ ಏನು? (ಪ್ರಸಂಗಿ 11:5)

8 ಯೆಹೋವ ‘ದೇವರ ಕೆಲಸಗಳನ್ನ’ ಎಲ್ಲಾ ಸಮಯದಲ್ಲೂ ನಾವು ಅರ್ಥ ಮಾಡ್ಕೊಳ್ಳೋಕೆ ಆಗಲ್ಲ. (ಪ್ರಸಂಗಿ 11:5 ಓದಿ.) ಏನು ಇದ್ರ ಅರ್ಥ? ಯೆಹೋವ ತನ್ನ ಉದ್ದೇಶನ ನೆರವೇರಿಸೋಕೆ ಯಾವಾಗ ಒಂದು ವಿಷ್ಯನ ಮಾಡ್ತಾನೆ ಮತ್ತು ಯಾವಾಗ ಒಂದು ವಿಷ್ಯನ ಅನುಮತಿಸ್ತಾನೆ ಅಂತ ನಮಗೆ ಸರಿಯಾಗಿ ಗೊತ್ತಿಲ್ಲ. ಅಂದ್ರೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಒಂದು ಕಷ್ಟನ ಯೆಹೋವ ಯಾಕೆ ಅನುಮತಿಸ್ತಾನೆ ಅಥವಾ ಅದ್ರಿಂದ ಹೊರಗೆ ಬರೋಕೆ ಹೇಗೆ ಸಹಾಯ ಮಾಡ್ತಾನೆ ಅಂತ ಗೊತ್ತಾಗಲ್ಲ. (ಕೀರ್ತ. 37:5) ಇದನ್ನೆಲ್ಲಾ ಅರ್ಥ ಮಾಡ್ಕೊಳ್ಳೋದು ನಮ್ಮ ಶಕ್ತಿಗೆ ಮೀರಿದ ವಿಷ್ಯ! ತಾಯಿಯ ಗರ್ಭದಲ್ಲಿ ಮಗು ಬೆಳೆಯೋ ವಿಧಾನನ ವಿಜ್ಞಾನಿಗಳೇ ಇನ್ನೂ ಸರಿಯಾಗಿ ಅರ್ಥ ಮಾಡ್ಕೊಂಡಿಲ್ಲ. ಇನ್ನೂ ಯೆಹೋವ ಮಾಡೋ ಈ ಎಲ್ಲ ಕೆಲಸಗಳನ್ನ ಅರ್ಥ ಮಾಡ್ಕೊಳ್ಳೋಕೆ ನಮ್ಮ ಕೈಯಲ್ಲಿ ಆಗುತ್ತಾ?

9. ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ ಅಂತ ಗೊತ್ತಿಲ್ಲದೇ ಇರೋದ್ರಿಂದ ನಮಗೆ ಏನೆಲ್ಲಾ ಆಗಬಹುದು?

9 ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ ಅಂತ ನಿರ್ದಿಷ್ಟವಾಗಿ ಗೊತ್ತಿಲ್ಲದೇ ಇರೋದ್ರಿಂದ ಕೆಲವೊಮ್ಮೆ ನಿರ್ಧಾರ ಮಾಡೋಕೆ ಭಯ ಪಡ್ತೀವಿ. ಅಂದ್ರೆ ತ್ಯಾಗ ಮಾಡಿ ಹೆಚ್ಚು ಸೇವೆ ಮಾಡೋಕೆ, ಸರಳ ಜೀವನ ಮಾಡೋಕೆ, ಅಗತ್ಯ ಇರೋ ಕಡೆಗೆ ಹೋಗಿ ಸೇವೆ ಮಾಡೋಕೆ ನಾವು ಭಯ ಪಡಬಹುದು. ಇನ್ನು ಕೆಲವೊಮ್ಮೆ ಚೆನ್ನಾಗಿ ಯೆಹೋವನ ಸೇವೆ ಮಾಡ್ತಿದ್ರೂ ‘ಯೆಹೋವ ನನ್ನನ್ನ ಮೆಚ್ಕೊಳ್ತಿದ್ದಾನಾ’ ಅನ್ನೋ ಸಂಶಯ ಬರುತ್ತೆ. ಉದಾಹರಣೆಗೆ, ಸಿಹಿಸುದ್ದಿ ಸಾರ್ತೀವಿ, ಆದ್ರೆ ಒಂದು ಬೈಬಲ್‌ ಸ್ಟಡಿನೂ ಸಿಗಲ್ಲ. ಧೈರ್ಯ ಮಾಡಿ ಯೆಹೋವನ ಸೇವೆ ಮಾಡೋಕೆ ಮುಂದೆ ಹೋಗ್ತಿವಿ, ಆದ್ರೆ ಕೆಲವೊಮ್ಮೆ ಬರೀ ಕಷ್ಟಗಳೇ ಬರುತ್ತೆ. ಇಂಥ ಟೈಮಲ್ಲಿ ‘ಯೆಹೋವ ನಮ್ಮನ್ನ ಮೆಚ್ತಿಲ್ಲ’ ಅಂತ ನಮಗೆ ಅನಿಸಿಬಿಡಬಹುದು.

10. ಯೆಹೋವ ಹೇಗೆ ಕೆಲಸ ಮಾಡ್ತಾನೆ ಅಂತ ನಮಗೆ ಪೂರ್ತಿ ಗೊತ್ತಿಲ್ಲದೇ ಇರೋದ್ರಿಂದ ನಮ್ಮಲ್ಲಿ ಯಾವ ಒಳ್ಳೆ ಗುಣಗಳು ಬೆಳೆಯುತ್ತೆ?

10 ಯೆಹೋವ ಹೇಗೆ ಕೆಲಸ ಮಾಡ್ತಾನೆ ಅಂತ ನಮಗೆ ಪೂರ್ತಿ ಗೊತ್ತಿಲ್ಲದೇ ಇರೋದ್ರಿಂದ ನಮ್ಮಲ್ಲಿ ದೀನತೆ ಬೆಳೆಯುತ್ತೆ. ಈ ಗುಣ ಯೆಹೋವ ಯೋಚ್ನೆ ಮಾಡೋ ರೀತಿ ಮತ್ತು ಆತನು ಕೆಲಸ ಮಾಡೋ ರೀತಿನೇ ಶ್ರೇಷ್ಠ ಅಂತ ನಮಗೆ ಅರ್ಥ ಮಾಡಿಸುತ್ತೆ. (ಯೆಶಾ. 55:8, 9) ಯೆಹೋವ ಮಾಡೋದೆಲ್ಲ ಶ್ರೇಷ್ಠವಾಗಿರುತ್ತೆ ಅಂತ ಅರ್ಥ ಮಾಡ್ಕೊಂಡಿರೋದ್ರಿಂದ ನಾವು ಆತನ ಮೇಲೆ ಜಾಸ್ತಿ ಭರವಸೆ ಇಡ್ತೀವಿ. ಆದ್ರಿಂದ ನಾವು ಮಾಡೋ ಸೇವೆಲಿ, ನಮಗಿರೋ ನೇಮಕದಲ್ಲಿ ಏನಾದ್ರೂ ಒಳ್ಳೆ ಫಲಿತಾಂಶ ಪಡ್ಕೊಂಡ್ರೆ ಪೂರ್ತಿ ಮಹಿಮೆನ ಯೆಹೋವನಿಗೆ ಕೊಡ್ತೀವಿ. (ಕೀರ್ತ. 127:1; 1 ಕೊರಿಂ. 3:7) ಒಂದುವೇಳೆ ನಾವು ಅಂದ್ಕೊಂಡಂತೆ ಯಾವುದಾದ್ರೂ ವಿಷ್ಯ ಆಗ್ಲಿಲ್ಲ ಅಂದ್ರೆ ‘ಯೆಹೋವ ಎಲ್ಲಾನೂ ನೋಡ್ತಿದ್ದಾನೆ. ಸರಿಯಾದ ಸಮಯದಲ್ಲಿ ಎಲ್ಲಾನೂ ಸರಿ ಮಾಡ್ತಾನೆ’ ಅಂತ ನಂಬಿಕೆ ಇಡ್ತೀವಿ. (ಯೆಶಾ. 26:12) ನಮ್ಮ ಕೈಯಲ್ಲಿ ಏನ್‌ ಮಾಡೋಕಾಗುತ್ತೋ ಅದನ್ನ ಮಾಡ್ತೀವಿ. ನಮ್ಮ ಕೈಯಲ್ಲಿ ಆಗದೇ ಇರೋದನ್ನ ಯೆಹೋವನಿಗೆ ಬಿಟ್ಟು ಬಿಡ್ತೀವಿ. ಹಾಗಂತ ನಮಗೆ ಕಷ್ಟ ಬಂದಾಗ ಯೆಹೋವ ದೇವರು ಅದ್ಭುತವಾಗಿ ಸಹಾಯ ಮಾಡಲ್ಲ ನಿಜ. ಆದ್ರೆ ಆ ಕಷ್ಟನ ನಿಭಾಯಿಸೋಕೆ ಬೇಕಿರೋ ದಾರಿನ ನಮಗೆ ತೋರಿಸ್ತಾನೆ.—ಅ. ಕಾ. 16:6-10.

11. ಯಾವೆಲ್ಲ ಮುಖ್ಯ ವಿಷ್ಯಗಳು ನಮಗೆ ಗೊತ್ತಿದೆ?

11 ನಮಗೆ ಎಷ್ಟೋ ವಿಷ್ಯಗಳು ಗೊತ್ತಿಲ್ಲ ನಿಜ. ಆದ್ರೆ ಯೆಹೋವ ಏನೇ ಮಾಡಿದ್ರು ಅದ್ರಲ್ಲಿ ಪ್ರೀತಿ, ನ್ಯಾಯ, ವಿವೇಕ ಇರುತ್ತೆ ಅಂತ ನಮಗೆ ಗೊತ್ತಿದೆ. ನಾವು ಯೆಹೋವನಿಗೆ ಮಾಡೋ ಆರಾಧನೆನ, ನಮ್ಮ ಸಹೋದರರಿಗೆ ಮಾಡೋ ಸಹಾಯನ ಆತನು ಅಮೂಲ್ಯವಾಗಿ ನೋಡ್ತಾನೆ ಅಂತ ಗೊತ್ತಿದೆ. ಅಷ್ಟೇ ಅಲ್ಲ, ನಾವು ಯೆಹೋವನಿಗೆ ನಿಯತ್ತಾಗಿ ಇರೋದ್ರಿಂದ ಆತನು ನಮ್ಮನ್ನ ತುಂಬ ಆಶೀರ್ವದಿಸ್ತಾನೆ ಅಂತಾನೂ ಗೊತ್ತಿದೆ.—ಇಬ್ರಿ. 11:6.

ನಾಳೆ ಏನಾಗುತ್ತೋ ನಮಗೆ ಗೊತ್ತಿಲ್ಲ

12. ನಮಗೆ ಏನು ಗೊತ್ತಿಲ್ಲ ಅಂತ ಯಾಕೋಬ 4:13, 14 ಹೇಳುತ್ತೆ?

12 ಯಾಕೋಬ 4:13, 14 ಓದಿ. ನಾಳೆ ಜೀವನ ಹೇಗಿರುತ್ತೆ ಅಂತ ನಮಗ್ಯಾರಿಗೂ ಗೊತ್ತಿಲ್ಲ ಅನ್ನೋದನ್ನ ನಾವೆಲ್ರೂ ಒಪ್ಕೊಳ್ಳಲೇಬೇಕು. ಈ ಲೋಕದಲ್ಲಿ “ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು” ಎಲ್ರ ಜೀವನದಲ್ಲೂ ನಡೆಯುತ್ತೆ. (ಪ್ರಸಂ. 9:11) ಅದಕ್ಕೆ, ನಾವು ಪ್ಲಾನ್‌ ಮಾಡಿದ ತರಾನೇ ನಮ್ಮ ಜೀವನ ಇರುತ್ತೆ ಅಂತ ಹೇಳೋಕ್ಕಾಗಲ್ಲ. ಅಂದ್ಕೊಂಡಿದ್ದನ್ನ ಮಾಡೋಕೆ ನಾವು ಜೀವಂತವಾಗಿ ಇರ್ತೀವಾ ಅಂತಾನೂ ಹೇಳೋಕಾಗಲ್ಲ.

13. ನಾಳೆ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲದೇ ಇರೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ?

13 ನಾಳೆ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲದೇ ಇರೋದ್ರಿಂದ ಕಷ್ಟಗಳನ್ನ ಸಹಿಸ್ಕೊಳ್ಳೋದು ನಮಗೆ ಒಂದು ಸವಾಲಾಗಿದೆ. ಯಾಕಂದ್ರೆ ನಮಗೆ ‘ನಾಳೆ ಏನಾಗುತ್ತೋ’ ಅಂತ ಆಗಾಗ ಚಿಂತೆ ಆಗುತ್ತೆ. ಇದ್ರಿಂದ ನಾವು ಖುಷಿಯಾಗಿ ಇರೋಕಾಗಲ್ಲ. ಅಷ್ಟೇ ಅಲ್ಲ, ದಿಢೀರ್‌ ಅಂತ ಯಾವುದಾದ್ರೂ ದುರಂತಗಳಾದಾಗ ನಮಗೆ ನೋವಾಗುತ್ತೆ, ನಿಂತ ನೆಲನೇ ಕುಸಿದಂತಾಗುತ್ತೆ. ನಾವು ಅಂದ್ಕೊಂಡ ತರ ಏನೂ ಆಗದೆ ಇದ್ದಾಗ ಬೇಜಾರಾಗ್ತೀವಿ, ನಿರಾಶರಾಗಿ ಹೋಗ್ತೀವಿ.—ಜ್ಞಾನೋ. 13:12.

14. ನಾವು ನಿಜವಾಗ್ಲೂ ಖುಷಿಯಾಗಿರೋಕೆ ಏನು ಮಾಡಬೇಕು? (ಚಿತ್ರಗಳನ್ನ ನೋಡಿ.)

14 ನಮಗೆ ಬರೋ ಕಷ್ಟಗಳನ್ನ ಸಹಿಸ್ಕೊಳ್ಳೋ ಮೂಲಕ ‘ನಾವು ಸ್ವಾರ್ಥದಿಂದಲ್ಲ ಯೆಹೋವನ ಮೇಲಿರೋ ಪ್ರೀತಿಯಿಂದಾನೆ ಆತನನ್ನ ಆರಾಧಿಸ್ತಿದ್ದೀವಿ’ ಅಂತ ತೋರಿಸ್ಕೊಡ್ತೀವಿ. ನಮಗೆ ಬರೋ ಕಷ್ಟಗಳನ್ನೆಲ್ಲ ದೇವರು ತೆಗೆದು ಹಾಕ್ತಾ ಇರಬೇಕು ಅಂತ ನಾವು ನಿರೀಕ್ಷಿಸಬಾರದು ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ, ನಮಗೆ ಯಾವೆಲ್ಲಾ ಕಷ್ಟಗಳು ಬರಬೇಕಂತ ದೇವರು ಹಣೆಬರಹ ಬರೆಯಲ್ಲ ಅಂತಾನೂ ಬೈಬಲ್‌ ಹೇಳುತ್ತೆ. ಹಾಗಾಗಿ ನಮ್ಮ ಖುಷಿ ‘ನಾಳೆ ಏನಾಗುತ್ತೆ’ ಅಂತ ತಿಳ್ಕೊಳ್ಳೋದ್ರ ಮೇಲಲ್ಲ, ಯೆಹೋವನ ಮಾತು ಕೇಳಿ ಅದನ್ನ ಪಾಲಿಸೋದ್ರ ಮೇಲೆ ಹೊಂದ್ಕೊಂಡಿದೆ. ಇದು ಯೆಹೋವನಿಗೆ ಗೊತ್ತಿರೋದ್ರಿಂದಾನೇ ನಾಳೆ ಏನಾಗುತ್ತೆ ಅಂತ ಆತನು ನಮಗೆ ಹೇಳಿಲ್ಲ. ಹಾಗಾಗಿ ನಾವು ಯಾವುದೇ ನಿರ್ಧಾರ ಮಾಡೋಕೂ ಮುಂಚೆ ಯೆಹೋವ ದೇವರು ಏನು ಹೇಳ್ತಾನೆ ಅಂತ ಯೋಚ್ನೆ ಮಾಡಬೇಕು. (ಯೆರೆ. 10:23) ಈ ತರ ಮಾಡಿದ್ರೆ ‘ಯೆಹೋವನ ಇಷ್ಟ ಇದ್ರೆ ನಾಳೆ ಬದುಕಿರುತ್ತೀವಿ, ಆತನು ಹೇಳೋ ಹಾಗೆ ಮಾಡ್ತೀವಿ’ ಅಂತ ನಾವು ಹೇಳಬಹುದು.—ಯಾಕೋ. 4:15.

ಚಿತ್ರ: 1. ಒಬ್ಬ ಅಪ್ಪ ಮತ್ತು ಮಗ ಗೋಬ್ಯಾಗ್‌ ಅನ್ನು ರೆಡಿ ಮಾಡ್ತಿದ್ದಾರೆ. ಬೇರೆ ಬೇರೆ ವಸ್ತುಗಳ ಜೊತೆ ಬ್ಯಾಗ್‌ನಲ್ಲಿ ಬೈಬಲನ್ನೂ ಇಡ್ತಿದ್ದಾರೆ. 2. ಜೋರಾಗಿ ಮಳೆ ಬರ್ತಿದೆ. ಅದಕ್ಕೆ, ಅಪ್ಪಅಮ್ಮ ಮತ್ತು ಮಗ ಒಂದು ಟೆಂಟ್‌ ಕೆಳಗೆ ಕೂತಿದ್ದಾರೆ. ಇಂಥ ಕಷ್ಟದ ಟೈಮಲ್ಲಿ ಅವ್ರ ಗೋಬ್ಯಾಗ್‌ನಲ್ಲಿದ್ದ ವಸ್ತುಗಳನ್ನ ಬಳಸ್ತಿದ್ದಾರೆ.

ಯೆಹೋವನ ಮಾತು ಕೇಳಿ ಅದನ್ನ ಪಾಲಿಸಿದ್ರೆ ನಮಗೆ ಸಂರಕ್ಷಣೆ ಸಿಗುತ್ತೆ (ಪ್ಯಾರ 14-15 ನೋಡಿ)b


15. ನಮಗೆ ಏನೆಲ್ಲಾ ಗೊತ್ತಿದೆ?

15 ಪ್ರತಿದಿನ ಏನಾಗುತ್ತೆ ಅನ್ನೋದು ನಮಗೆ ಗೊತ್ತಿಲ್ಲ ನಿಜ. ಆದ್ರೆ ಕೆಲವು ವಿಷ್ಯಗಳಂತೂ ನಮಗೆ ಗೊತ್ತು. ನಮಗೇನೆಲ್ಲಾ ಗೊತ್ತು? ಯೆಹೋವ ನಮಗೆ ಮುಂದೆ ಶಾಶ್ವತ ಜೀವ ಕೊಡ್ತಾನೆ ಅಂತ ಗೊತ್ತು. ಆತನು ಸುಳ್ಳು ಹೇಳಲ್ಲ ಅಂತ ಗೊತ್ತು. ಏನೇ ಆಗ್ಲಿ ಆತನು ಕೊಟ್ಟ ಮಾತನ್ನ ನಿಜ ಮಾಡೇ ಮಾಡ್ತಾನೆ, ಆತನ ಮಾತನ್ನ ತಡಿಯೋಕೆ ಯಾರ ಕೈಯಲ್ಲೂ ಆಗಲ್ಲ ಅಂತ ನಮಗೆ ಗೊತ್ತು. (ತೀತ 1:2) ಅದಕ್ಕೇ ‘ಮುಂದೆ ಏನಾಗುತ್ತೆ ಅಂತ ಯೆಹೋವ ತುಂಬ ಮುಂಚೆನೇ ಹೇಳಿದ್ದಾನೆ. ಇನ್ನೂ ನಡೆಯದ ವಿಷ್ಯಗಳನ್ನ ಆತನು ತುಂಬ ಹಿಂದೆನೇ ಹೇಳಿದ್ದಾನೆ’ ಅಂತ ಬೈಬಲ್‌ ಹೇಳುತ್ತೆ. ಈ ತರ ಯೆಹೋವ ಮಾತ್ರನೇ ಹೇಳೋಕೆ ಸಾಧ್ಯ. ಆತನು ಕೊಟ್ಟ ಮಾತು ಹಿಂದೇನೂ ನಿಜ ಆಗಿತ್ತು, ಮುಂದೇನೂ ನಿಜ ಆಗುತ್ತೆ. (ಯೆಶಾ. 46:10) ಯೆಹೋವನಿಗೆ ನಮ್ಮ ಮೇಲಿರೋ ಪ್ರೀತಿನ ಯಾವ ವ್ಯಕ್ತಿನೂ, ಯಾವ ವಿಷ್ಯನೂ ದೂರ ಮಾಡೋಕಾಗಲ್ಲ. (ರೋಮ. 8:35-39) ನಮಗೆ ಏನೇ ಕಷ್ಟ ಬಂದ್ರೂ ಅದನ್ನ ತಾಳ್ಕೊಳ್ಳೋಕೆ ಬೇಕಿರೋ ವಿವೇಕ, ಸಾಂತ್ವನ, ಮತ್ತು ಶಕ್ತಿನ ಯೆಹೋವ ಕೊಟ್ಟೇ ಕೊಡ್ತಾನೆ. ಆತನು ಯಾವಾಗ್ಲೂ ನಮಗೆ ಸಹಾಯ ಮಾಡ್ತಾನೆ, ಆಶೀರ್ವದಿಸ್ತಾನೆ ಅನ್ನೋ ನಂಬಿಕೆ ನಮಗಿರಬಹುದು.—ಯೆರೆ. 17:7, 8.

ಯೆಹೋವ ನಮ್ಮನ್ನ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅಂತ ನಮಗೆ ಗೊತ್ತಿಲ್ಲ

16. ಯೆಹೋವನಿಗೆ ನಮ್ಮ ಬಗ್ಗೆ ಏನೆಲ್ಲಾ ಗೊತ್ತು ಅಂತ ತಿಳ್ಕೊಂಡಾಗ ನಮಗೆ ಹೇಗನಿಸುತ್ತೆ? (ಕೀರ್ತನೆ 139:1-6)

16 ಕೀರ್ತನೆ 139:1-6 ಓದಿ. ನಮ್ಮನ್ನ ಸೃಷ್ಟಿ ಮಾಡಿದ ದೇವರಿಗೆ ನಮ್ಮ ಬಗ್ಗೆ ಎಲ್ಲ ಗೊತ್ತಿದೆ. ‘ನಾವು ಏನು ಯೋಚಿಸ್ತೀವಿ, ಯಾಕೆ ಯೋಚಿಸ್ತೀವಿ, ನಮಗೇನು ಅನಿಸ್ತಿದೆ, ಯಾಕೆ ಆ ತರ ಅನಿಸ್ತಿದೆ, ನಾವು ಏನು ಹೇಳ್ತೀವಿ, ಏನು ಮಾಡ್ತಿದ್ದೀವಿ, ಯಾಕೆ ಮಾಡ್ತೀವಿ, ನಮ್ಮ ಮನಸ್ಸಲ್ಲಿ ಏನಿದೆ’ ಹೀಗೆ ಪ್ರತಿಯೊಂದೂ ಯೆಹೋವನಿಗೆ ಗೊತ್ತು. ಕೋಳಿ ತನ್ನ ಮರಿಗಳನ್ನ ಕಾಪಾಡ್ಕೊಳ್ಳೋಕೆ ಯಾವಾಗ್ಲೂ ಅವುಗಳ ಮೇಲೆ ಒಂದು ಕಣ್ಣಿಟ್ಟಿರೋ ತರಾನೇ ಯೆಹೋವನು ನಮ್ಮನ್ನ ಕಾಪಾಡೋಕೆ ನೋಡ್ತಿರ್ತಾನೆ. ಅದಕ್ಕೆ ದಾವೀದ, ‘ಯೆಹೋವ ಯಾವಾಗ್ಲೂ ನಮ್ಮ ಕಡೆ ಗಮನ ಕೊಡ್ತಾನೆ. ನಮಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತು ಕಾಯ್ತಾ ಇರ್ತಾನೆ’ ಅಂತ ಹೇಳಿದ. ನಮ್ಮನ್ನ ಗಮನಿಸ್ತಾ ಇರೋದು ಮಾಮೂಲಿ ವ್ಯಕ್ತಿ ಅಲ್ಲ, ಇಡೀ ವಿಶ್ವದ ಸೃಷ್ಟಿಕರ್ತ, ಸರ್ವಶಕ್ತ ಯೆಹೋವ! ಇದ್ರ ಬಗ್ಗೆ ಯೋಚಿಸಿದಾಗ ನಿಮ್ಗೆ ಹೇಗೆ ಅನಿಸುತ್ತೆ? ದಾವೀದನಿಗೆ ಹೇಗೆ ಅನಿಸ್ತು ಗೊತ್ತಾ? “ನಿನ್ನ ಜ್ಞಾನ ನನ್ನ ಯೋಚ್ನೆಗೂ ಮೀರಿದ್ದು, ಅದು ನನಗೆ ಎಟುಕದಷ್ಟು ಎತ್ರದಲ್ಲಿ ಇದೆ” ಅಂತ ಯೆಹೋವನನ್ನ ಅವನು ಹಾಡಿ ಹೊಗಳ್ದ.—ಕೀರ್ತ. 139:6.

17. ಯೆಹೋವ ನಮ್ಮನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತಾನೆ ಅಂತ ನಂಬೋಕೆ ಕೆಲವೊಮ್ಮೆ ಯಾಕೆ ಕಷ್ಟ ಆಗುತ್ತೆ?

17 ಯೆಹೋವ ದೇವರು ನಮ್ಮನ್ನ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಳ್ತಾನೆ ಅಂತ ತಿಳ್ಕೊಳ್ಳೋಕೆ ನಮಗೆ ಕೆಲವೊಮ್ಮೆ ಕಷ್ಟ ಆಗುತ್ತೆ. ಉದಾಹರಣೆಗೆ, ನಾವು ಬೆಳೆದು ಬಂದಿರೋ ರೀತಿ, ನಮ್ಮ ಸಂಸ್ಕೃತಿ, ನಮ್ಮ ಹಿಂದಿನ ಧರ್ಮದ ನಂಬಿಕೆಯಿಂದಾಗಿ ‘ಯೆಹೋವ ನಮಗೆ ಒಬ್ಬ ಅಪ್ಪ ತರ ಇದ್ದಾನೆ, ನಮ್ಮನ್ನ ಪ್ರೀತಿಸ್ತಾನೆ’ ಅಂತ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗುತ್ತೆ. ನಮ್ಮ ಜೀವನದಲ್ಲಿ ನಾವು ಮಾಡಿರೋ ಎಲ್ಲಾ ತಪ್ಪುಗಳನ್ನ ನೆನಸ್ಕೊಂಡ್ರೆ ‘ಯೆಹೋವ ನನ್ನಿಂದ ತುಂಬ ದೂರ ಇದ್ದಾನೆ, ಆತನು ನನ್ನ ಕಡೆ ತಿರುಗೂ ನೋಡಲ್ವೇನೋ’ ಅಂತ ನಮಗೆ ಅನಿಸುತ್ತೆ. ದಾವೀದನಿಗೂ ಎಷ್ಟೋ ಸಲ ಇದೇ ತರ ಅನಿಸ್ತು. (ಕೀರ್ತ. 38:18, 21) ಇನ್ನು ಕೆಲವೊಮ್ಮೆ ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಬೈಬಲ್‌ ಹೇಳೋ ತರ ಜೀವನ ಮಾಡೋಕೆ ಒಬ್ಬ ವ್ಯಕ್ತಿ ಇಷ್ಟಪಡ್ತಿರಬಹುದು. ಆ ವ್ಯಕ್ತಿಗೆ ‘ಯೆಹೋವ ದೇವರು ನಿಜವಾಗ್ಲೂ ನನ್ನನ್ನ ಅರ್ಥ ಮಾಡ್ಕೊಂಡಿದ್ರೆ, ನನಗೆ ಒಂದು ವಿಷ್ಯನ ಬಿಡೋಕೆ ಕಷ್ಟ ಅಂತ ಗೊತ್ತಿದ್ರೂ ಯಾಕೆ ಅದನ್ನ ಬಿಡು ಅಂತ ಹೇಳ್ತಾನೆ’ ಅಂತ ಅನಿಸಬಹುದು.

18. ನಮಗಿಂತ ಚೆನ್ನಾಗಿ ಯೆಹೋವ ನಮ್ಮನ್ನ ಅರ್ಥ ಮಾಡ್ಕೊಳ್ತಾನೆ ಅಂತ ನಾವು ಯಾಕೆ ಒಪ್ಕೊಬೇಕು? (ಚಿತ್ರಗಳನ್ನ ನೋಡಿ.)

18 ನಮಗಿಂತ ಚೆನ್ನಾಗಿ ಯೆಹೋವ ನಮ್ಮನ್ನ ಅರ್ಥ ಮಾಡ್ಕೊಳ್ತಾನೆ ಅನ್ನೋ ಮಾತನ್ನ ನಾವು ಒಪ್ಕೊಬೇಕು. ಕೆಲವೊಮ್ಮೆ ನಮ್ಮಲ್ಲಿರೋ ಒಳ್ಳೇತನವನ್ನ ನಾವೇ ನೋಡಲ್ಲ, ಆದ್ರೆ ಯೆಹೋವ ನಮ್ಮ ಒಳ್ಳೇತನವನ್ನ ಗುರುತಿಸ್ತಾನೆ! ನಾವು ತಪ್ಪು ಮಾಡಿದಾಗ ಆ ತಪ್ಪುಗಳು ಯೆಹೋವನಿಗೆ ಕಾಣಿಸುತ್ತೆ ನಿಜ, ಆದ್ರೆ ನಾವು ಯಾಕೆ ಮತ್ತು ಯಾವ ಪರಿಸ್ಥಿತಿಲಿ ಆ ತಪ್ಪನ್ನ ಮಾಡಿದ್ವಿ ಅಂತ ಆತನು ಅರ್ಥ ಮಾಡ್ಕೊಳ್ತಾನೆ. ಆ ತಪ್ಪನ್ನ ತಿದ್ಕೊಳ್ಳೋಕೆ ಏನ್‌ ಪ್ರಯತ್ನ ಹಾಕ್ತೀವಿ ಅನ್ನೋದನ್ನ ಗಮನಿಸ್ತಾನೆ, ನಮ್ಮನ್ನ ಪ್ರೀತಿಸ್ತಾನೆ. (ರೋಮ. 7:15) ನಮ್ಮಲ್ಲಿ ಈಗ ಎಷ್ಟೇ ಕುಂದುಕೊರತೆ ಇದ್ರೂ ಮುಂದೆ ನಾವು ಬದಲಾಗ್ತೀವಿ ಅಂತ ಆತನು ನಂಬ್ತಾನೆ. ಇದನ್ನ ನಾವು ತಿಳ್ಕೊಂಡ್ರೆ, ಯೆಹೋವ ದೇವ್ರಿಗೆ ನಿಯತ್ತಾಗಿ ಸೇವೆ ಮಾಡಬೇಕು ಅಂತ ನಮಗೆ ಅನಿಸುತ್ತೆ. ಆಗ ನಮ್ಮ ಸಂತೋಷ ಹೆಚ್ಚಾಗುತ್ತೆ.

ಚಿತ್ರ: 1. ಬೇಜಾರಿನಲ್ಲಿರೋ ಒಬ್ಬ ಸಹೋದರ ಕಿಟಕಿಯಿಂದ ಹೊರಗೆ ನೋಡ್ತಿದ್ದಾನೆ. 2. ಪರದೈಸ್‌ನಲ್ಲಿ ಅದೇ ಸಹೋದರ ತನ್ನ ಸ್ನೇಹಿತರ ಜೊತೆ ಪ್ರಕೃತಿಯನ್ನ ಆನಂದಿಸ್ತಿದ್ದಾನೆ.

ಹೊಸ ಲೋಕದಲ್ಲಿ ಸಿಗೋ ಜೀವನದ ಮೇಲೆ ನಂಬಿಕೆ ಬೆಳೆಸ್ಕೊಳ್ಳೋಕೆ ಯೆಹೋವನು ನಮಗೆ ಸಹಾಯ ಮಾಡ್ತಿದ್ದಾನೆ. ಹೀಗೆ ಈಗ ಬರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಬಲ ಕೊಡ್ತಿದ್ದಾನೆ (ಪ್ಯಾರ 18-19 ನೋಡಿ)c


19. ಯೆಹೋವನ ಬಗ್ಗೆ ನಮಗೆ ಏನೆಲ್ಲ ಗೊತ್ತಿದೆ?

19 ‘ಯೆಹೋವನು ಪ್ರೀತಿಯಾಗಿದ್ದಾನೆ’ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯೆಹೋವ ನಮಗೆ, ‘ಇದನ್ನ ಮಾಡಿ, ಇದನ್ನ ಮಾಡಬೇಡಿ’ ಅಂತ ಹೇಳೋದ್ರಲ್ಲೂ ಪ್ರೀತಿನೇ ಇದೆ. (1 ಯೋಹಾ. 4:8) ಯಾಕಂದ್ರೆ ನಮಗೆ ಒಳ್ಳೇದಾಗಬೇಕು ಅಂತಾನೇ ಯೆಹೋವನು ಅದನ್ನ ಹೇಳಿದ್ದಾನೆ. ನಾವೆಲ್ರೂ ಶಾಶ್ವತ ಜೀವ ಪಡ್ಕೊಬೇಕಂತ ಆತನು ಇಷ್ಟಪಡ್ತಾನೆ. ಅದಕ್ಕೇ ನಮಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಾನೆ. ನಮ್ಮಲ್ಲಿ ತಪ್ಪು ಮಾಡೋ ಸ್ವಭಾವ ಇದ್ರೂ ಈ ಬಿಡುಗಡೆ ಬೆಲೆಯಿಂದ ನಾವು ಯೆಹೋವ ಇಷ್ಟ ಪಡೋ ರೀತಿಲಿ ಆತನನ್ನ ಆರಾಧಿಸಬಹುದು. (ರೋಮ. 7:24, 25) ಯೆಹೋವ “ನಮ್ಮ ಹೃದಯಕ್ಕಿಂತ ತುಂಬ ದೊಡ್ಡವನು.” ಹಾಗಾಗಿ ನಾವು ತಪ್ಪು ಮಾಡಿದಾಗ ಅದನ್ನ ಅರ್ಥ ಮಾಡ್ಕೊಳ್ತಾನೆ. (1 ಯೋಹಾ. 3:19, 20) ‘ಇವನು ಇನ್ಯಾವತ್ತೂ ಬದಲಾಗಲ್ಲ’ ಅಂತ ಆತನು ಅಂದ್ಕೊಳ್ಳಲ್ಲ. ‘ನಾವು ಒಂದಲ್ಲ ಒಂದಿನ ಸರಿ ಹೋಗ್ತೀವಿ’ ಅಂತ ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾನೆ.

20. ನಾವು ಯಾವ ವಿಷ್ಯನ ಒಪ್ಕೊಬೇಕು? ಯಾಕೆ?

20 ನಾವು ತಿಳ್ಕೊಳ್ಳಲೇಬೇಕಾಗಿರೋ ಯಾವ ಮುಖ್ಯ ವಿಷ್ಯಾನೂ ಯೆಹೋವ ನಮ್ಮಿಂದ ಮುಚ್ಚಿಟ್ಟಿಲ್ಲ ಅನ್ನೋದನ್ನ ನಾವು ದೀನತೆಯಿಂದ ಒಪ್ಕೊಬೇಕು. ಆಗ ನಾವು ನಮಗೆ ಗೊತ್ತಿಲ್ಲದಿರೋ ವಿಷ್ಯಗಳ ಬಗ್ಗೆ ಜಾಸ್ತಿ ಚಿಂತೆ ಮಾಡಲ್ಲ. ನಮಗೇನು ಗೊತ್ತಿದ್ಯೋ, ಯಾವುದು ಮುಖ್ಯವಾಗಿದ್ಯೋ ಆ ವಿಷ್ಯದ ಕಡೆಗೆ ಗಮನ ಕೊಡ್ತೀವಿ. ನಾವು ಹೀಗೆ ಮಾಡಿದ್ರೆ “ಪರಿಪೂರ್ಣ ಜ್ಞಾನ” ಇರೋ ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸ್ಕೊಡ್ತೀವಿ. (ಯೋಬ 36:4) ಈಗ ನಮಗೆ ಎಷ್ಟೊಂದು ವಿಷ್ಯಗಳು ಗೊತ್ತಿಲ್ಲ. ಆದ್ರೆ ಶಾಶ್ವತ ಜೀವ ಸಿಕ್ಕಾಗ ಯೆಹೋವನ ಬಗ್ಗೆ ಮತ್ತು ನಮ್ಮ ಜೀವನದ ಬಗ್ಗೆ ಹೊಸಹೊಸ ವಿಷ್ಯಗಳನ್ನ ನಾವು ಕಲಿತಾ ಇರ್ತೀವಿ.—ಪ್ರಸಂ. 3:11.

ನೀವೇನು ಹೇಳ್ತೀರ?

  • ಅಂತ್ಯ ಯಾವಾಗ ಬರುತ್ತೆ ಅಂತ ನಮಗೆ ಗೊತ್ತಿಲ್ಲದೇ ಇರೋದ್ರಿಂದ ಏನು ಪ್ರಯೋಜ್ನ?

  • ನಾಳೆ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲದೇ ಇರೋದ್ರಿಂದ ಏನು ಪ್ರಯೋಜ್ನ?

  • ಯೆಹೋವ ನಮ್ಮನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿರೋದ್ರಿಂದ ಏನು ಪ್ರಯೋಜ್ನ?

ಗೀತೆ 117 ಯೆಹೋವನ ಒಳ್ಳೆತನ

a ಸೈತಾನನ ಲೋಕದ ವಿರುದ್ಧ ನಡೆಯೋ ಯುದ್ಧದಲ್ಲಿ ಯೇಸು ನಾಯಕನಾಗಿ ಇರ್ತಾನೆ. ಆದ್ರಿಂದ ಯೇಸುಗೆ ಈಗ ಅರ್ಮಗೆದೋನ್‌ ಯುದ್ಧ ಯಾವಾಗ ನಡಿಯುತ್ತೆ ಮತ್ತು ತನ್ನ ‘ಶತ್ರುಗಳನ್ನ ಯಾವಾಗ ಸೋಲಿಸ್ತಾನೆ’ ಅನ್ನೋದು ಆತನಿಗೆ ಗೊತ್ತಿದೆ ಅಂತ ನಾವು ಹೇಳಬಹುದು.—ಪ್ರಕ. 6:2; 19:11-16.

b ಚಿತ್ರ ವಿವರಣೆ:: ಒಬ್ಬ ಅಪ್ಪ ಮತ್ತು ಮಗ ತೊಂದ್ರೆ ಬಂದಾಗ ಸಹಾಯ ಆಗ್ಲಿ ಅಂತ ಗೋಬ್ಯಾಗ್‌ ಅನ್ನು ರೆಡಿ ಮಾಡ್ತಿದ್ದಾರೆ.

c ಚಿತ್ರ ವಿವರಣೆ: ಈಗ ತೊಂದ್ರೆ ಅನುಭವಸ್ತಿರೋ ಒಬ್ಬ ಸಹೋದರ ಹೊಸ ಲೋಕದಲ್ಲಿ ಜೀವನ ಹೇಗಿರುತ್ತೆ ಅಂತ ಯೋಚನೆ ಮಾಡ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ