ಮತ್ತಾಯ
2 ಅರಸನಾದ ಹೆರೋದನ ದಿವಸಗಳಲ್ಲಿ ಯೇಸು ಯೂದಾಯದ ಬೇತ್ಲೆಹೇಮ್ ಎಂಬ ಊರಿನಲ್ಲಿ ಹುಟ್ಟಿದ ಬಳಿಕ, ಪೂರ್ವ ಭಾಗಗಳಿಂದ ಜ್ಯೋತಿಷಿಗಳು ಯೆರೂಸಲೇಮಿಗೆ ಬಂದು, 2 “ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ನಾವು ಪೂರ್ವಭಾಗದಲ್ಲಿದ್ದಾಗ ಅವನ ನಕ್ಷತ್ರವನ್ನು ಕಂಡೆವು; ನಾವು ಅವನಿಗೆ ಪ್ರಣಾಮಮಾಡಲು ಬಂದಿದ್ದೇವೆ” ಎಂದರು. 3 ಇದನ್ನು ಕೇಳಿ ಅರಸನಾದ ಹೆರೋದನೂ ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಗೊಂಡರು; 4 ಅವನು ಜನರ ಎಲ್ಲ ಮುಖ್ಯ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಜನಿಸಲಿಕ್ಕಿದ್ದುದು ಎಲ್ಲಿ ಎಂಬುದರ ಬಗ್ಗೆ ಅವರನ್ನು ವಿಚಾರಿಸತೊಡಗಿದನು. 5 ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ, 6 ‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಆಧಿಪತ್ಯ ನಡೆಸುವವರಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ; ಆಧಿಪತ್ಯ ನಡೆಸುವವನು ನಿನ್ನೊಳಗಿಂದ ಬರುವನು, ಅವನು ನನ್ನ ಜನವಾದ ಇಸ್ರಾಯೇಲನ್ನು ಪರಿಪಾಲಿಸುವನು’ ಎಂದು ಪ್ರವಾದಿಯ ಮೂಲಕ ಬರೆಯಲ್ಪಟ್ಟಿದೆ” ಎಂದು ಹೇಳಿದರು.
7 ಆಗ ಹೆರೋದನು ಗುಪ್ತವಾಗಿ ಜ್ಯೋತಿಷಿಗಳನ್ನು ಕರೆಸಿ ನಕ್ಷತ್ರವು ಕಾಣಿಸಿಕೊಂಡ ಕಾಲದ ಬಗ್ಗೆ ಅವರಿಂದ ಜಾಗರೂಕತೆಯಿಂದ ವಿಚಾರಿಸಿ ತಿಳಿದುಕೊಂಡನು; 8 ಮತ್ತು ಅವನು ಅವರನ್ನು ಬೇತ್ಲೆಹೇಮಿಗೆ ಕಳುಹಿಸುವಾಗ, “ನೀವು ಹೋಗಿ ಚಿಕ್ಕ ಮಗುವನ್ನು ಜಾಗರೂಕತೆಯಿಂದ ಹುಡುಕಿರಿ; ನಿಮಗೆ ಅದು ಸಿಕ್ಕಿದ ಮೇಲೆ ಹಿಂದೆ ಬಂದು ನನಗೆ ಅದನ್ನು ತಿಳಿಸಿರಿ; ಆಗ ನಾನೂ ಅಲ್ಲಿಗೆ ಹೋಗಿ ಅದಕ್ಕೆ ಪ್ರಣಾಮಮಾಡುವಂತಾದೀತು” ಎಂದು ಹೇಳಿದನು. 9 ಅವರು ಅರಸನ ಮಾತನ್ನು ಕೇಳಿಸಿಕೊಂಡು ತಮ್ಮ ದಾರಿಹಿಡಿದು ಹೋದರು; ಆಗ ಇಗೋ, ಅವರು ಪೂರ್ವದಲ್ಲಿದ್ದಾಗ ನೋಡಿದ್ದ ನಕ್ಷತ್ರವು ಅವರ ಮುಂದೆ ಸಾಗುತ್ತಾ ಆ ಚಿಕ್ಕ ಮಗುವಿದ್ದ ಸ್ಥಳದ ಮೇಲೆ ನಿಂತಿತು. 10 ಆ ನಕ್ಷತ್ರವನ್ನು ನೋಡಿ ಅವರು ನಿಜವಾಗಿಯೂ ಬಹಳ ಆನಂದಪಟ್ಟರು. 11 ಅವರು ಮನೆಯೊಳಗೆ ಹೋದಾಗ ಚಿಕ್ಕ ಮಗುವನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಅಡ್ಡಬಿದ್ದು ಪ್ರಣಾಮಮಾಡಿದರು. ಅವರು ತಮ್ಮ ಬೊಕ್ಕಸಗಳನ್ನು ತೆರೆದು ಅದಕ್ಕೆ ಚಿನ್ನ ಧೂಪ ಮತ್ತು ರಕ್ತಬೋಳಗಳನ್ನು ಸಹ ಕಾಣಿಕೆಯಾಗಿ ಕೊಟ್ಟರು. 12 ಆದರೆ ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ಅವರಿಗೆ ದೈವಿಕ ಎಚ್ಚರಿಕೆ ನೀಡಲ್ಪಟ್ಟದ್ದರಿಂದ ಅವರು ಬೇರೊಂದು ಮಾರ್ಗವಾಗಿ ತಮ್ಮ ದೇಶಕ್ಕೆ ಹೊರಟುಹೋದರು.
13 ಅವರು ಹೊರಟುಹೋದ ಬಳಿಕ ಯೆಹೋವನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಎದ್ದು ಮಗುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು; ನಾನು ಹೇಳುವ ತನಕ ಅಲ್ಲಿಯೇ ಇರು. ಏಕೆಂದರೆ ಮಗುವನ್ನು ಕೊಲ್ಲಲಿಕ್ಕಾಗಿ ಹೆರೋದನು ಅದನ್ನು ಹುಡುಕುವುದರಲ್ಲಿದ್ದಾನೆ” ಎಂದು ಹೇಳಿದನು. 14 ಆಗ ಅವನು ಎದ್ದು ರಾತ್ರಿಯಲ್ಲಿ ಚಿಕ್ಕ ಮಗುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಹೊರಟುಹೋದನು 15 ಮತ್ತು ಹೆರೋದನು ತೀರಿಹೋಗುವ ತನಕ ಅಲ್ಲಿಯೇ ಉಳಿದನು; ಹೀಗೆ “ಈಜಿಪ್ಟಿನಿಂದ ನಾನು ನನ್ನ ಮಗನನ್ನು ಕರೆದೆನು” ಎಂದು ಯೆಹೋವನು ತನ್ನ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರುವಂತಾಯಿತು.
16 ಜ್ಯೋತಿಷಿಗಳು ತನಗೆ ಮೋಸಮಾಡಿದರೆಂದು ಹೆರೋದನು ತಿಳಿದು ತುಂಬ ರೋಷಗೊಂಡು, ಜ್ಯೋತಿಷಿಗಳಿಂದ ಜಾಗರೂಕತೆಯಿಂದ ವಿಚಾರಿಸಿ ತಿಳಿದುಕೊಂಡಿದ್ದ ಕಾಲಕ್ಕನುಸಾರ, ಬೇತ್ಲೆಹೇಮ್ ಮತ್ತು ಅದರ ಎಲ್ಲ ಕ್ಷೇತ್ರಗಳಿಗೆ ತನ್ನ ಆಳುಗಳನ್ನು ಕಳುಹಿಸಿ ಅಲ್ಲಿದ್ದ ಎರಡು ವರ್ಷದ ಹಾಗೂ ಅದಕ್ಕಿಂತ ಕಡಮೆ ಪ್ರಾಯದ ಎಲ್ಲ ಗಂಡುಮಕ್ಕಳನ್ನು ಕೊಲ್ಲಿಸಿದನು. 17 ಹೀಗೆ ಪ್ರವಾದಿಯಾದ ಯೆರೆಮೀಯನ ಮೂಲಕ ತಿಳಿಸಲ್ಪಟ್ಟಿದ್ದ ಮಾತು ನೆರವೇರಿತು. ಅದೇನೆಂದರೆ, 18 “ರಾಮದಲ್ಲಿ ಒಂದು ಧ್ವನಿಯು ಕೇಳಿಸಿತು; ಅಳುವಿಕೆಯೂ ಗೋಳಾಟವೂ ಕೇಳಿಬಂತು. ರಾಹೇಲಳು ತನ್ನ ಮಕ್ಕಳಿಗಾಗಿ ಅಳುತ್ತಿದ್ದಳು ಮತ್ತು ಅವರು ಇನ್ನಿಲ್ಲದ ಕಾರಣ ಅವಳು ಸಾಂತ್ವನಹೊಂದಲು ಒಪ್ಪಲಿಲ್ಲ.”
19 ಹೆರೋದನು ತೀರಿಹೋದ ಮೇಲೆ ಯೆಹೋವನ ದೂತನು ಈಜಿಪ್ಟಿನಲ್ಲಿ ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, 20 “ನೀನು ಎದ್ದು ಚಿಕ್ಕ ಮಗುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಏಕೆಂದರೆ ಚಿಕ್ಕ ಮಗುವಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ತೀರಿಹೋಗಿದ್ದಾರೆ” ಎಂದು ಹೇಳಿದನು. 21 ಆಗ ಅವನು ಎದ್ದು ಚಿಕ್ಕ ಮಗುವನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು. 22 ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆಂದು ಕೇಳಿಸಿಕೊಂಡು ಅಲ್ಲಿಗೆ ಹೋಗುವುದಕ್ಕೆ ಭಯಪಟ್ಟನು. ಇದಲ್ಲದೆ, ಒಂದು ಕನಸಿನಲ್ಲಿ ಅವನಿಗೆ ದೈವಿಕ ಎಚ್ಚರಿಕೆಯು ನೀಡಲ್ಪಟ್ಟದ್ದರಿಂದ ಅವನು ಗಲಿಲಾಯ ಪ್ರಾಂತಕ್ಕೆ ಹೊರಟುಹೋಗಿ 23 ನಜರೇತೆಂಬ ಊರಿಗೆ ಬಂದು ಅಲ್ಲಿ ವಾಸಿಸತೊಡಗಿದನು; ಹೀಗೆ “ಅವನು ನಜರೇತಿನವನು ಎಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು.