ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es25 ಪು. 102-113
  • ಸೆಪ್ಟೆಂಬರ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌
  • ದಿನದ ವಚನ ಓದಿ ಚರ್ಚಿಸೋಣ—2025
  • ಉಪಶೀರ್ಷಿಕೆಗಳು
  • ಸೋಮವಾರ, ಸೆಪ್ಟೆಂಬರ್‌ 1
  • ಮಂಗಳವಾರ, ಸೆಪ್ಟೆಂಬರ್‌ 2
  • ಬುಧವಾರ, ಸೆಪ್ಟೆಂಬರ್‌ 3
  • ಗುರುವಾರ, ಸೆಪ್ಟೆಂಬರ್‌ 4
  • ಶುಕ್ರವಾರ, ಸೆಪ್ಟೆಂಬರ್‌ 5
  • ಶನಿವಾರ, ಸೆಪ್ಟೆಂಬರ್‌ 6
  • ಭಾನುವಾರ, ಸೆಪ್ಟೆಂಬರ್‌ 7
  • ಸೋಮವಾರ, ಸೆಪ್ಟೆಂಬರ್‌ 8
  • ಮಂಗಳವಾರ, ಸೆಪ್ಟೆಂಬರ್‌ 9
  • ಬುಧವಾರ, ಸೆಪ್ಟೆಂಬರ್‌ 10
  • ಗುರುವಾರ, ಸೆಪ್ಟೆಂಬರ್‌ 11
  • ಶುಕ್ರವಾರ, ಸೆಪ್ಟೆಂಬರ್‌ 12
  • ಶನಿವಾರ, ಸೆಪ್ಟೆಂಬರ್‌ 13
  • ಭಾನುವಾರ, ಸೆಪ್ಟೆಂಬರ್‌ 14
  • ಸೋಮವಾರ, ಸೆಪ್ಟೆಂಬರ್‌ 15
  • ಮಂಗಳವಾರ, ಸೆಪ್ಟೆಂಬರ್‌ 16
  • ಬುಧವಾರ, ಸೆಪ್ಟೆಂಬರ್‌ 17
  • ಗುರುವಾರ, ಸೆಪ್ಟೆಂಬರ್‌ 18
  • ಶುಕ್ರವಾರ, ಸೆಪ್ಟೆಂಬರ್‌ 19
  • ಶನಿವಾರ, ಸೆಪ್ಟೆಂಬರ್‌ 20
  • ಭಾನುವಾರ, ಸೆಪ್ಟೆಂಬರ್‌ 21
  • ಸೋಮವಾರ, ಸೆಪ್ಟೆಂಬರ್‌ 22
  • ಮಂಗಳವಾರ, ಸೆಪ್ಟೆಂಬರ್‌ 23
  • ಬುಧವಾರ, ಸೆಪ್ಟೆಂಬರ್‌ 24
  • ಗುರುವಾರ, ಸೆಪ್ಟೆಂಬರ್‌ 25
  • ಶುಕ್ರವಾರ, ಸೆಪ್ಟೆಂಬರ್‌ 26
  • ಶನಿವಾರ, ಸೆಪ್ಟೆಂಬರ್‌ 27
  • ಭಾನುವಾರ, ಸೆಪ್ಟೆಂಬರ್‌ 28
  • ಸೋಮವಾರ, ಸೆಪ್ಟೆಂಬರ್‌ 29
  • ಮಂಗಳವಾರ, ಸೆಪ್ಟೆಂಬರ್‌ 30
ದಿನದ ವಚನ ಓದಿ ಚರ್ಚಿಸೋಣ—2025
es25 ಪು. 102-113

ಸೆಪ್ಟೆಂಬರ್‌

ಸೋಮವಾರ, ಸೆಪ್ಟೆಂಬರ್‌ 1

ನಮ್ಮ ಮೇಲೆ ಸೂರ್ಯ ಮೂಡ್ತಾನೆ.—ಲೂಕ 1:78.

ಯೆಹೋವ ನಮ್ಮೆಲ್ಲಾ ಕಷ್ಟಗಳನ್ನ ತೆಗೆದುಹಾಕೋ ಶಕ್ತಿಯನ್ನ ಯೇಸುಗೆ ಕೊಟ್ಟಿದ್ದಾನೆ. ಕೆಲವು ಸಮಸ್ಯೆಗಳನ್ನ ನಮ್ಮಿಂದ ಸರಿಮಾಡೋಕೆ ಆಗಲ್ಲ. ಆದ್ರೆ ಅಂಥ ಸಮಸ್ಯೆಗಳನ್ನ ತನ್ನಿಂದ ಸರಿಮಾಡೋಕೆ ಆಗುತ್ತೆ ಅಂತ ಯೇಸು ತೋರಿಸಿದ್ದಾನೆ. ಉದಾಹರಣೆಗೆ, ನಮ್ಮಲ್ಲಿ ಪಾಪ ಇರೋದ್ರಿಂದ ಕಾಯಿಲೆ ಬರುತ್ತೆ, ಇದ್ರಿಂದ ಸಾಯ್ತಾ ಇದ್ದೀವಿ. ಆದ್ರೆ ಇದನ್ನೆಲ್ಲಾ ತೆಗೆದುಹಾಕೋ ಶಕ್ತಿ ಯೇಸುಗಿದೆ. (ಮತ್ತಾ. 9:1-6; ರೋಮ. 5:12, 18, 19) ಆತನಿಗೆ ‘ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡೋಕೆ’ ಆಗುತ್ತೆ. ಸತ್ತವರನ್ನೂ ಮತ್ತೆ ಬದುಕಿಸೋಕೆ ಆಗುತ್ತೆ. (ಮತ್ತಾ. 4:23; ಯೋಹಾ. 11:43, 44) ಯೇಸು ಅದ್ಭುತ ಮಾಡಿ ದೊಡ್ಡದೊಡ್ಡ ಬಿರುಗಾಳಿಯನ್ನ ನಿಲ್ಲಿಸಿದ್ದಾನೆ. ಕೆಟ್ಟ ದೇವದೂತರನ್ನ ಸೋಲಿಸಿದ್ದಾನೆ. (ಮಾರ್ಕ 4:37-39; ಲೂಕ 8:2) ಯೆಹೋವ ಕೊಟ್ಟಿರೋ ಶಕ್ತಿಯಿಂದ ಯೇಸು ಮುಂದೆ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅಂತ ತಿಳ್ಕೊಂಡಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ! ತನ್ನ ಆಳ್ವಿಕೆಯಲ್ಲಿ ಏನೆಲ್ಲ ಆಶೀರ್ವಾದ ಸಿಗುತ್ತೆ ಅಂತ ಯೆಹೋವ ಹೇಳಿದ್ದಾನೋ ಅದೆಲ್ಲ ನಿಜ ಆಗುತ್ತೆ ಅನ್ನೋ ಗ್ಯಾರಂಟಿ ನಮಗೆ ಸಿಗುತ್ತೆ. ಯೇಸು ಭೂಮಿಯಲ್ಲಿ ಇದ್ದಾಗ ಆತನು ಮಾಡಿದ ಅದ್ಭುತಗಳಿಂದ ಸ್ವಲ್ಪ ಜನ್ರಿಗೆ ಸಹಾಯ ಆಯ್ತು. ಆದ್ರೆ ಆತನು ದೇವರ ಸರ್ಕಾರದಲ್ಲಿ ರಾಜನಾಗಿ ಆಳುವಾಗ ಲೋಕದಲ್ಲಿರೋ ಎಲ್ರಿಗೂ ಸಹಾಯ ಮಾಡ್ತಾನೆ. w23.04 3 ¶5-7

ಮಂಗಳವಾರ, ಸೆಪ್ಟೆಂಬರ್‌ 2

ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.—1 ಕೊರಿಂ. 2:10.

ದೊಡ್ಡ ಸಭೆ ಅಂದ್ಮೇಲೆ ಅಲ್ಲಿ ತುಂಬ ಜನ ಪ್ರಚಾರಕರು ಇರ್ತಾರೆ. ಹಾಗಾಗಿ ನಾವು ತುಂಬ ಸಲ ಕೈ ಎತ್ತಿದ್ರೂ ನಮಗೆ ಅವಕಾಶನೇ ಸಿಗದೇ ಹೋಗಬಹುದು. ಹಾಗಂತ ಕೂಟಗಳಲ್ಲಿ ಉತ್ರ ಹೇಳೋದನ್ನ ನಿಲ್ಲಿಸಿಬಿಡಬೇಡಿ. ಪ್ರಯತ್ನ ಮಾಡ್ತಾನೇ ಇರಿ. ಕೂಟಗಳಲ್ಲಿರೋ ಎಲ್ಲಾ ಭಾಗಗಳನ್ನೂ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಒಂದಲ್ಲ ಒಂದು ಅವಕಾಶ ಖಂಡಿತ ಸಿಗುತ್ತೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ರ ಹೇಳೋಕೆ ನೀವು ಏನೆಲ್ಲ ಮಾಡಬಹುದು? ಮುಖ್ಯ ವಿಷ್ಯಕ್ಕೂ ಒಂದೊಂದು ಪ್ಯಾರಾಗೂ ಏನು ಸಂಬಂಧ ಅಂತ ಯೋಚ್ನೆ ಮಾಡಿ ಉತ್ರಗಳನ್ನ ತಯಾರಿ ಮಾಡ್ಕೊಳ್ಳಿ. ಕೆಲವೊಮ್ಮೆ ಸುಲಭವಾಗಿ ಅರ್ಥ ಆಗದಿರೋ ಬೈಬಲ್‌ ವಿಷ್ಯಗಳು ಪ್ಯಾರದಲ್ಲಿ ಇರಬಹುದು. ಅಂಥ ಪ್ಯಾರಗಳನ್ನ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಅವಕಾಶ ಸಿಕ್ಕೇ ಸಿಗುತ್ತೆ. ಕೂಟದಲ್ಲಿ ಒಂದು ಉತ್ರ ಹೇಳೋಕೂ ಅವಕಾಶ ಸಿಗಲಿಲ್ಲಾಂದ್ರೆ ಆಗೇನು ಮಾಡೋದು? ಕೂಟ ಆರಂಭ ಆಗೋ ಮುಂಚೆನೇ ಚರ್ಚೆಯನ್ನ ನಡೆಸೋ ಸಹೋದರನ ಹತ್ರ ಮಾತಾಡಿ. ಯಾವ ಪ್ಯಾರಗೆ ಉತ್ರ ತಯಾರಿ ಮಾಡ್ಕೊಂಡು ಬಂದಿದ್ದೀರ ಅಂತ ಅವ್ರಿಗೆ ಹೇಳಿ. ಆಗ ಕೂಟದಲ್ಲಿ ಉತ್ರ ಹೇಳೋಕೆ ಒಂದು ಅವಕಾಶ ಆದ್ರೂ ಸಿಕ್ಕೇ ಸಿಗುತ್ತೆ. w23.04 21-22 ¶9-10

ಬುಧವಾರ, ಸೆಪ್ಟೆಂಬರ್‌ 3

ಯೋಸೇಫ . . . ಯೆಹೋವನ ದೂತ ಹೇಳಿದ ಹಾಗೇ ಮಾಡಿದ. ಮರಿಯಳನ್ನ ಮದುವೆ ಆದ.—ಮತ್ತಾ. 1:24.

ಯೋಸೇಫ ಒಬ್ಬ ಒಳ್ಳೇ ಗಂಡನಾಗಿರೋಕೆ ಕಾರಣ ಏನು ಗೊತ್ತಾ? ಅವನು ಎಲ್ಲಾನೂ ಯೆಹೋವ ಹೇಳಿದ ತರಾನೇ ಮಾಡ್ತಾ ಇದ್ದ. ಮೂರು ಸಂದರ್ಭಗಳಲ್ಲಿ ಯೆಹೋವ ಅವನಿಗೆ ತನ್ನ ಕುಟುಂಬನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಹೇಳಿದನು. ಅದನ್ನ ಪಾಲಿಸೋದು ಅಷ್ಟು ಸುಲಭ ಆಗಿರಲಿಲ್ಲ. ಆದ್ರೂ ಯೋಸೇಫ ಯೆಹೋವ ಹೇಳಿದ ತರಾನೇ ತಕ್ಷಣ ಮಾಡಿದ. (ಮತ್ತಾ. 1:20; 2:13-15, 19-21) ಇದ್ರಿಂದ ಅವನು ಮರಿಯನ ಕಾಪಾಡೋಕೆ ಆಯ್ತು. ಅವಳನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಆಯ್ತು. ಇದನ್ನೆಲ್ಲ ನೋಡಿದಾಗ ಮರಿಯಗೆ ಯೋಸೇಫನ ಮೇಲೆ ಪ್ರೀತಿ ಗೌರವ ಜಾಸ್ತಿ ಆಗಿರಬೇಕಲ್ವಾ? ಗಂಡಂದಿರಿಗೆ ಯೋಸೇಫ ಒಳ್ಳೇ ಮಾದರಿ ಆಗಿದ್ದಾನೆ. ಕುಟುಂಬನ ಹೇಗೆ ನೋಡ್ಕೊಂಡ್ರೆ ಯೆಹೋವನಿಗೆ ಇಷ್ಟ ಆಗುತ್ತೆ ಅನ್ನೋದನ್ನ ಕುಟುಂಬದ ಯಜಮಾನ್ರು ತಿಳ್ಕೊಬೇಕು. ಅದನ್ನ ಪಾಲಿಸೋಕೆ ಕಷ್ಟ ಆದ್ರೂ ಅದನ್ನ ಮಾಡಬೇಕು. ಹೀಗೆ ಮಾಡಿದಾಗ ನಿಮ್ಮ ಹೆಂಡತಿಯನ್ನ ನೀವೆಷ್ಟು ಪ್ರೀತಿಸ್ತೀರಿ ಅಂತ ತೋರಿಸ್ತೀರ. ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ವನವಾಟುನಲ್ಲಿರೋ ಒಬ್ಬ ಸಹೋದರಿ ಮದುವೆ ಆಗಿ 20 ವರ್ಷ ದಾಟಿದೆ. ಅವರು ಏನು ಹೇಳ್ತಾರೆ ಅಂದ್ರೆ “ನನ್ನ ಗಂಡ ಯೆಹೋವನಿಗೆ ಏನಿಷ್ಟ ಅನ್ನೋದನ್ನ ಮೊದ್ಲು ತಿಳ್ಕೊಂಡು ಅದನ್ನೇ ಮಾಡ್ತಾರೆ. ಇದ್ರಿಂದ ನನಗೆ ಅವ್ರ ಮೇಲಿರೋ ಗೌರವ ಜಾಸ್ತಿ ಆಗಿದೆ. ಅವರು ಮಾಡೋ ನಿರ್ಧಾರಗಳೆಲ್ಲ ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಬಂದಿದೆ.” w23.05 21 ¶5

ಗುರುವಾರ, ಸೆಪ್ಟೆಂಬರ್‌ 4

ಒಂದು ಹೆದ್ದಾರಿ ಇರುತ್ತೆ, ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.—ಯೆಶಾ. 35:8

ಬಾಬೆಲ್‌ನಿಂದ ಇಸ್ರಾಯೇಲ್‌ ದೇಶಕ್ಕೆ ಹೋದವ್ರಲ್ಲಿ ಯಾವ ಅಶುದ್ಧನೂ ಇರಬಾರದಿತ್ತು. ಅವರು ದೇವರ ‘ಪವಿತ್ರ ಜನ್ರಾಗಿರಬೇಕಿತ್ತು.’ (ಧರ್ಮೋ. 7:6) ಇದರರ್ಥ ಅವರು ಇಸ್ರಾಯೇಲ್‌ ದೇಶಕ್ಕೆ ಹೋದ್ಮೇಲೆ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಮತ್ತೆ ಶುರು ಮಾಡಬೇಕಿತ್ತು. ಬಾಬೆಲಿನಲ್ಲಿ ಹುಟ್ಟಿಬೆಳೆದಿದ್ದ ಯೆಹೂದ್ಯರು ಅಲ್ಲಿದ್ದ ಜನ್ರ ತರಾನೇ ಯೋಚ್ನೆ ಮಾಡ್ತಾ ಇದ್ರು. ಅಷ್ಟೇ ಅಲ್ಲ, ಅವ್ರ ತರಾನೇ ನಡ್ಕೊಳ್ತಾ ಇದ್ರು. ಉದಾಹರಣೆಗೆ, ಯೆಹೂದ್ಯರು ಇಸ್ರಾಯೇಲ್‌ಗೆ ಬಂದು 69 ವರ್ಷ ಆದ್ಮೇಲೆ ಕೂಡ ಅವ್ರಿಗೆ ಹುಟ್ಟಿದ ಮಕ್ಕಳಿಗೆ ಯೆಹೂದ್ಯರ ಭಾಷೆ ಬರ್ತಾ ಇರಲಿಲ್ಲ. ಇದನ್ನ ರಾಜ್ಯಪಾಲನಾದ ನೆಹೆಮೀಯ ನೋಡಿದಾಗ ಅವನಿಗೆ ತುಂಬ ನೋವಾಯ್ತು. ಯಾಕಂದ್ರೆ ಪವಿತ್ರ ಗ್ರಂಥದ ಹೆಚ್ಚಿನ ಭಾಗ ಹೀಬ್ರು ಭಾಷೆಯಲ್ಲಿತ್ತು. (ಧರ್ಮೋ. 6:6, 7; ನೆಹೆ. 13:23, 24) ಆ ಮಕ್ಕಳಿಗೆ ಹೀಬ್ರು ಭಾಷೆನೇ ಗೊತ್ತಿಲ್ಲಾಂದ್ರೆ ಯೆಹೋವನನ್ನ ಪ್ರೀತಿಸೋಕೆ, ಆರಾಧನೆ ಮಾಡೋಕೆ ಹೇಗೆ ಆಗುತ್ತೆ ಹೇಳಿ? (ಎಜ್ರ 10:3, 44) ಹಾಗಾಗಿ ಯೆಹೂದ್ಯರು ತುಂಬ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅವರು ಇಸ್ರಾಯೇಲ್‌ನಲ್ಲೇ ಇದ್ದಿದ್ರಿಂದ ಈ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಸುಲಭ ಆಗಿತ್ತು. ಯಾಕಂದ್ರೆ ಈಗಾಗ್ಲೇ ಅಲ್ಲಿ ಜನ್ರು ಯೆಹೋವ ದೇವರ ಆರಾಧನೆಯನ್ನ ಮತ್ತೆ ಶುರು ಮಾಡಿದ್ರು.—ನೆಹೆ. 8:8, 9. w23.05 15 ¶6-7

ಶುಕ್ರವಾರ, ಸೆಪ್ಟೆಂಬರ್‌ 5

ಬೀಳೋರಿಗೆಲ್ಲ ಯೆಹೋವ ಆಸರೆಯಾಗಿ ಇರ್ತಾನೆ, ಕುಗ್ಗಿ ಹೋದವರನ್ನ ಆತನು ಎಬ್ಬಿಸ್ತಾನೆ.—ಕೀರ್ತ. 145:14.

ಕೆಲವೊಮ್ಮೆ ನಮಗೆ ಎಷ್ಟೇ ಛಲ ಇದ್ರೂ, ಶಿಸ್ತು ಬೆಳೆಸ್ಕೊಂಡಿದ್ರೂ ಗುರಿ ಮುಟ್ಟೋಕೆ ಕಷ್ಟ ಆಗುತ್ತೆ. ಉದಾಹರಣೆಗೆ ನಮ್ಮ ಜೀವನದಲ್ಲಿ “ಅನಿರೀಕ್ಷಿತ ಘಟನೆಗಳು” ನಡೆದಾಗ ಗುರಿ ಮುಟ್ಟೋಕೆ ಸಮಯನೇ ಸಿಗಲ್ಲ. (ಪ್ರಸಂ. 9:11) ಇನ್ನು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಷ್ಟ ಬಂದಾಗ ನಾವು ಬೇಜಾರಲ್ಲಿ ಕುಗ್ಗಿಹೋಗ್ತೀವಿ. ಆಗ ನಮಗೆ ಗುರಿ ಮುಟ್ಟೋಕೆ ಶಕ್ತಿನೇ ಇಲ್ಲದೆ ಹೋಗಿಬಿಡುತ್ತೆ. (ಜ್ಞಾನೋ. 24:10) ಇನ್ನೂ ಕೆಲವೊಮ್ಮೆ ನಮ್ಮಲ್ಲಿರೋ ಅಪರಿಪೂರ್ಣತೆಯಿಂದ ಏನಾದ್ರೂ ತಪ್ಪು ಮಾಡಿಬಿಡ್ತೀವಿ. (ರೋಮ. 7:23) ಅಥವಾ ನಮಗೆ ತುಂಬ ಸುಸ್ತಾಗಿ ಬಿಡುತ್ತೆ. (ಮತ್ತಾ. 26:43) ಆಗ ನಮಗೆ ಗುರಿ ಮುಟ್ಟೋಕೆ ಕಷ್ಟ ಆಗುತ್ತೆ. ಹೀಗಾದಾಗ ಏನು ಮಾಡೋದು? ಏನೇ ಅಡೆತಡೆ ಬಂದ್ರೂ ಸೋತು ಹೋಗಬೇಡಿ. ಬೈಬಲ್‌ ಹೇಳೋ ತರ ನಮಗೆ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಬಂದೇ ಬರುತ್ತೆ. ಆದ್ರೆ ಅದನ್ನೆಲ್ಲ ಗೆಲ್ಲಕ್ಕಾಗುತ್ತೆ. ನಿಮಗೂ ಏನೇ ಅಡೆತಡೆ ಬಂದ್ರೂ ಗುರಿ ಮುಟ್ಟೋದನ್ನ ಬಿಡಬೇಡಿ. ಆಗ ನೀವು ಯೆಹೋವನನ್ನ ಎಷ್ಟು ಪ್ರೀತಿಸ್ತೀರ ಅಂತ ತೋರಿಸ್ತೀರ. ನೀವು ಮಾಡೋ ಪ್ರಯತ್ನನ ನೋಡಿದಾಗ ಆತನಿಗೆ ಎಷ್ಟು ಸಂತೋಷ ಆಗುತ್ತಲ್ವಾ! w23.05 30 ¶14-15

ಶನಿವಾರ, ಸೆಪ್ಟೆಂಬರ್‌ 6

ಇಡೀ ಮಂದೆಗೆ ಮಾದರಿಯಾಗಿರಿ.—1 ಪೇತ್ರ 5:3.

ಯುವ ಸಹೋದರರಿಗೆ ಬೇರೆಬೇರೆ ರೀತಿಯ ಜನ್ರ ಜೊತೆ ಬೆರೆಯೋಕೆ ಪಯನೀಯರಿಂಗ್‌ ಸೇವೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ದುಡಿದಿರೋ ಹಣನ ಹುಷಾರಾಗಿ ಖರ್ಚು ಮಾಡೋದು ಹೇಗೆ ಅಂತ ಕಲಿಯೋಕೂ ಈ ಸೇವೆ ಸಹಾಯ ಮಾಡುತ್ತೆ. (ಫಿಲಿ. 4:11-13) ಪೂರ್ಣ ಸಮಯದ ಸೇವೆ ಶುರು ಮಾಡೋಕೆ ಮುಂಚೆ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಿದ್ರೆ ತುಂಬ ಒಳ್ಳೇದು. ಪಯನೀಯರ್‌ ಸೇವೆ ಮಾಡೋದ್ರಿಂದ ಇನ್ನೂ ಬೇರೆಬೇರೆ ತರದ ಸೇವೆ ಮಾಡೋಕೆ ಅವಕಾಶ ಸಿಗುತ್ತೆ. ಉದಾಹರಣೆಗೆ, ನಿರ್ಮಾಣ ಪ್ರಾಜೆಕ್ಟ್‌ಗಳನ್ನ ಮಾಡೋಕೆ ಮತ್ತು ಬೆತೆಲ್‌ ಸೇವೆ ಮಾಡೋಕೆ ಅವಕಾಶ ಸಿಗುತ್ತೆ. ಎಲ್ಲಾ ಸಹೋದರರು ಹಿರಿಯರಾಗಿ, ಸಹೋದರ ಸಹೋದರಿಯರ ಸೇವೆ ಮಾಡೋ ಗುರಿ ಇಡಬೇಕು. ಈ ಗುರಿ ಇಟ್ಟಿರೋ ವ್ಯಕ್ತಿ “ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ” ಅಂತ ಬೈಬಲ್‌ ಹೇಳುತ್ತೆ. (1 ತಿಮೊ. 3:1) ಒಬ್ಬ ವ್ಯಕ್ತಿ ಸಹಾಯಕ ಸೇವಕನಾಗಿ ಹಿರಿಯರಿಗೆ ತುಂಬ ಸಹಾಯ ಮಾಡ್ತಾನೆ. ಇವ್ರಿಬ್ರೂ ಸೇರಿ ಸಹೋದರ ಸಹೋದರರಿಗೆ ಸಹಾಯ ಮಾಡ್ತಾರೆ ಮತ್ತು ಸಿಹಿಸುದ್ದಿಯನ್ನ ಹುರುಪಿಂದ ಸಾರ್ತಾರೆ. w23.12 28 ¶14-16

ಭಾನುವಾರ, ಸೆಪ್ಟೆಂಬರ್‌ 7

ಅವನು ಇನ್ನೂ ಹುಡುಗನಾಗಿ ಇದ್ದಾಗಲೇ ತನ್ನ ಪೂರ್ವಜ ದಾವೀದನ ದೇವರನ್ನ ಆರಾಧಿಸೋಕೆ ಶುರುಮಾಡಿದ—2 ಪೂರ್ವ. 34:3.

ಯೋಷೀಯ ಚಿಕ್ಕ ವಯಸ್ಸಲ್ಲೇ ರಾಜನಾದ. ಯೆಹೋವ ದೇವರನ್ನ ಆರಾಧಿಸೋಕೆ ಶುರು ಮಾಡಿದ. ಯೆಹೋವ ದೇವರ ಬಗ್ಗೆ ಕಲಿಬೇಕು, ಆತನಿಗೆ ಏನಿಷ್ಟನೋ ಅದ್ರ ಬಗ್ಗೆ ತಿಳ್ಕೊಬೇಕು ಅಂತ ಅವನಿಗೆ ಆಸೆ ಇತ್ತು. ಆದ್ರೆ ಇದು ಅಂದ್ಕೊಂಡಷ್ಟು ಸುಲಭ ಆಗಿರ್ಲಿಲ್ಲ. ಯಾಕಂದ್ರೆ ಅವನ ಪ್ರಜೆಗಳಲ್ಲಿ ಹೆಚ್ಚಿನವರು ಸುಳ್ಳು ದೇವರುಗಳನ್ನ ಆರಾಧಿಸ್ತಿದ್ರು. ಇದನ್ನೆಲ್ಲ ಯೋಷೀಯ ಧೈರ್ಯದಿಂದ ನಿಲ್ಲಿಸಿದ. ಅಷ್ಟೇ ಅಲ್ಲ, ದೇಶದಿಂದ ಸುಳ್ಳು ದೇವರುಗಳನ್ನ ತೆಗೆದು ಹಾಕಿದ. ಇದನ್ನೆಲ್ಲಾ ಮಾಡುವಾಗ ಅವನಿಗೆ 20 ವರ್ಷನೂ ಆಗಿರ್ಲಿಲ್ಲ. (2 ಪೂರ್ವ. 34:1, 2) ಮಕ್ಕಳೇ, ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಕಲೀತಾ ಹೋದ ಹಾಗೆ ನೀವು ಯೋಷೀಯನ ತರ ಆಗ್ತೀರ. ಆಗ ನಿಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ಪಡಿಯೋಕೆ ಸುಲಭ ಆಗುತ್ತೆ. ಸಮರ್ಪಣೆ ಮಾಡ್ಕೊಳ್ಳೋದ್ರ ಅರ್ಥ ಏನು ಗೊತ್ತಾ? 14ನೇ ವಯಸ್ಸಲ್ಲಿ ದೀಕ್ಷಾಸ್ನಾನ ತಗೊಂಡ ಲೂಕ್‌ ಏನು ಹೇಳ್ತಾನೆ ನೋಡಿ: “ಇನ್ಮುಂದೆ ನಾನು ಬದುಕೋದು ಯೆಹೋವನಿಗೋಸ್ಕರ. ಆತನನ್ನ ಖುಷಿಪಡಿಸೋದೇ ನನ್ನ ಜೀವನದ ಗುರಿ ಆಗಿರುತ್ತೆ.” (ಮಾರ್ಕ 12:30) ಈ ಗುರಿ ನಿಮಗಿದ್ರೆ ನಿಮ್ಮ ಜೀವನನೂ ಚೆನ್ನಾಗಿರುತ್ತೆ. w23.09 11 ¶12-13

ಸೋಮವಾರ, ಸೆಪ್ಟೆಂಬರ್‌ 8

ನಿಮ್ಮ ಮಧ್ಯ ಶ್ರಮಪಟ್ಟು ಕೆಲಸಮಾಡ್ತಾ, ಒಡೆಯನ ಸೇವೆಯಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡ್ತಾ ನಿಮಗೆ ಬುದ್ಧಿಹೇಳುವವ್ರಿಗೆ ಗೌರವ ಕೊಡಿ.—1 ಥೆಸ. 5:12.

ಪೌಲ ಥೆಸಲೊನೀಕದವ್ರಿಗೆ ಈ ಪತ್ರ ಬರೆದಾಗ ಆ ಸಭೆ ಶುರುವಾಗಿ ಒಂದು ವರ್ಷ ಕೂಡ ಆಗಿರಲಿಲ್ಲ. ಹಿರಿಯರಿಗೆ ಅಷ್ಟು ಅನುಭವನೂ ಇರಲಿಲ್ಲ. ಅವ್ರಿಂದ ತಪ್ಪುಗಳೂ ಆಗಿರಬಹುದು. ಆದ್ರೂ ಅವರು ಸಭೆಗೋಸ್ಕರ ಕಷ್ಟಪಟ್ಟು ದುಡೀತಾ ಇದ್ದಿದ್ರಿಂದ ಸಭೆಯವರು ಅವ್ರನ್ನ ಗೌರವಿಸಬೇಕಿತ್ತು. ಇದ್ರಿಂದ ನಾವೇನು ಕಲಿತೀವಿ? ಮಹಾ ಸಂಕಟ ಹತ್ರ ಆಗ್ತಾ ಇದ್ದ ಹಾಗೆ ನಾವು ಹಿರಿಯರ ಮಾತನ್ನ ಇನ್ನೂ ಜಾಸ್ತಿ ಕೇಳಬೇಕಾಗುತ್ತೆ. ಯಾಕಂದ್ರೆ ಮಹಾ ಸಂಕಟದಲ್ಲಿ ಮುಖ್ಯ ಕಾರ್ಯಾಲಯ ಅಥವಾ ಬ್ರಾಂಚ್‌ ಆಫೀಸಿನ ಸಂಪರ್ಕ ಕಡಿದುಹೋಗಬಹುದು. ಆಗ ನಮಗೆ ನಿರ್ದೇಶನ ಸಿಗದೆ ಹೋಗಬಹುದು. ಇದ್ರಿಂದ ನಾವು ಹಿರಿಯರ ಮೇಲೆ ಆತುಕೊಳ್ಳಬೇಕಾಗುತ್ತೆ. ಹಾಗಾಗಿ ಈಗಿಂದಾನೇ ಹಿರಿಯರನ್ನ ಪ್ರೀತಿಸೋಕೆ, ಗೌರವಿಸೋಕೆ ಕಲಿಯೋಣ. ಏನೇ ಆದ್ರೂ ಒಂದು ವಿಷ್ಯ ನೆನಪಲ್ಲಿ ಇಡೋಣ. ಹಿರಿಯರಿಂದ ಆಗೋ ತಪ್ಪುಗಳನ್ನಲ್ಲ, ಬದಲಿಗೆ ಯೆಹೋವ ದೇವರೇ ಯೇಸು ಮೂಲಕ ಈ ಸಹೋದರರನ್ನ ನಡೆಸ್ತಾ ಇದ್ದಾನೆ ಅನ್ನೋದನ್ನ ಮನಸ್ಸಲ್ಲಿ ಇಡೋಣ. ಶಿರಸ್ತ್ರಾಣ ಸೈನಿಕರ ತಲೆ ಕಾಪಾಡುತ್ತೆ. ಅದೇ ತರ ರಕ್ಷಣೆಯ ನಿರೀಕ್ಷೆ ನಮಗೆ ಸರಿಯಾಗಿ ಯೋಚ್ನೆ ಮಾಡೋಕೆ ಸಹಾಯ ಮಾಡುತ್ತೆ. ಇದ್ರಿಂದ ಈ ಲೋಕ ಕೊಡೋದೆಲ್ಲ ವ್ಯರ್ಥ ಅಂತ ಅರ್ಥ ಮಾಡ್ಕೊಳ್ತೀವಿ. (ಫಿಲಿ. 3:8) ಕಷ್ಟ ಬಂದಾಗ ನಾವು ಶಾಂತಿಯಿಂದ ಇರ್ತೀವಿ, ತಾಳ್ಕೊಳ್ತೀವಿ. w23.06 11-12 ¶11-12

ಮಂಗಳವಾರ, ಸೆಪ್ಟೆಂಬರ್‌ 9

ಬುದ್ಧಿ ಇಲ್ಲದ ಸ್ತ್ರೀ ವಟವಟ ಅಂತನೇ ಇರ್ತಾಳೆ. ಅವಳಿಗೆ ತಿಳುವಳಿಕೆ ಇಲ್ಲ.—ಜ್ಞಾನೋ. 9:13.

“ಬುದ್ಧಿ ಇಲ್ಲದ ಸ್ತ್ರೀ” ಕರೆದಾಗ ಜನ ಏನು ಮಾಡ್ತಾರೆ? ಹೋಗ್ತಾರಾ ಇಲ್ವಾ ಅನ್ನೋದು ಅವ್ರಿಗೆ ಬಿಟ್ಟಿದ್ದು. ನಾವು ಲೈಂಗಿಕ ಅನೈತಿಕತೆ ಮಾಡದೆ ಇದ್ರೆ ನಮಗೇ ಒಳ್ಳೇದು. ಯಾಕಂದ್ರೆ ಕಾನೂನಿನ ಪ್ರಕಾರ ಮದುವೆ ಆಗಿರೋ ಗಂಡು-ಹೆಣ್ಣಿನ ಮಧ್ಯ ಮಾತ್ರ ಈ ಲೈಂಗಿಕ ಸಂಬಂಧ ಇರಬೇಕು ಅಂತ ಬೈಬಲ್‌ ಹೇಳುತ್ತೆ. ಅದ್ರಿಂದ ಸಿಗೋ ಆನಂದವನ್ನ ಚೈತನ್ಯ ಕೊಡೋ ನೀರಿಗೆ ಹೋಲಿಸುತ್ತೆ. (ಜ್ಞಾನೋ. 5:15-18) ಆದ್ರೆ ಈ “ಬುದ್ಧಿ ಇಲ್ಲದ ಸ್ತ್ರೀ” “ಕದ್ದು ಕುಡಿಯೋ ನೀರು ಸಿಹಿ ಆಗಿರುತ್ತೆ” ಅಂತ ಹೇಳ್ತಿದ್ದಾಳೆ. (ಜ್ಞಾನೋ. 9:17) “ಕದ್ದು ಕುಡಿಯೋ ನೀರು” ಅಂದ್ರೇನು? ಅದನ್ನ ಲೈಂಗಿಕ ಅನೈತಿಕತೆಗೆ ಸೂಚಿಸ್ತಾ ಇರಬೇಕು. ಯಾಕಂದ್ರೆ ಒಬ್ಬ ಕಳ್ಳ ಯಾರಿಗೂ ಗೊತ್ತಾಗದ ಹಾಗೆ ಕದಿಯೋ ತರ ಜನ್ರು ಇದನ್ನ ಕದ್ದುಮುಚ್ಚಿ ಮಾಡ್ತಾರೆ. ಆದ್ರೆ ಇದನ್ನ ಮಾಡುವಾಗ ಯಾರ ಕೈಗೂ ಸಿಕ್ಕಿಹಾಕೊಳ್ಳಲ್ಲ ಅಂತ ಅವರು ನೆನಸೋದ್ರಿಂದ ಅದು ಅವ್ರಿಗೆ ಸಿಹಿ ಆಗಿರುತ್ತೆ. ಆದ್ರೆ ನಿಜ ಹೇಳಬೇಕಂದ್ರೆ, ಅದು “ಸಿಹಿ” ಅಲ್ಲ ಕಹಿ! ಯಾಕಂದ್ರೆ ಯೆಹೋವ ಎಲ್ಲಾನೂ ನೋಡ್ತಾ ಇದ್ದಾನೆ. ಇದ್ರಿಂದ ಆತನ ಜೊತೆ ಇರೋ ಸಂಬಂಧ ಹಾಳಾಗ್ತಾ ಇದೆ. ಇದಕ್ಕಿಂತ ದೊಡ್ಡ ನಷ್ಟ ಬೇರೇನಿದೆ ಹೇಳಿ.—1 ಕೊರಿಂ. 6:9, 10. w23.06 22 ¶7-9

ಬುಧವಾರ, ಸೆಪ್ಟೆಂಬರ್‌ 10

ಒಂದುವೇಳೆ ಇಷ್ಟ ಇಲ್ದೆ ಮಾಡಿದ್ರೂ ದೇವರು ನನಗೆ ಕೊಟ್ಟಿರೋ ಜವಾಬ್ದಾರಿಯನ್ನೇ ಮಾಡ್ತಾ ಇದ್ದೀನಿ.—1 ಕೊರಿಂ. 9:17.

ನೀವು ದೇವರಿಗೆ ಮನಸಾರೆ ಪ್ರಾರ್ಥನೆ ಮಾಡ್ತಿಲ್ಲ, ಸೇವೆ ಮಾಡ್ತಿಲ್ಲ ಅಂತ ಅನಿಸ್ತಾ ಇದ್ಯಾ? ಯೆಹೋವ ನಿಮಗೆ ಸಹಾಯ ಮಾಡ್ತಿಲ್ಲ ಅಂತ ಅಂದ್ಕೊಬೇಡಿ. ನಾವು ಅಪರಿಪೂರ್ಣರಾಗಿರೋದ್ರಿಂದ ಆಗಾಗ ಈ ತರ ಅನಿಸುತ್ತೆ. ಹಾಗಾಗಿ ನಿಮಗೆ ಉತ್ಸಾಹ ಕಡಿಮೆ ಆಗ್ತಿದೆ ಅಂತ ಅನಿಸಿದ್ರೆ ಅಪೊಸ್ತಲ ಪೌಲನನ್ನ ನೆನಪಿಸ್ಕೊಳ್ಳಿ. ಅವನಿಗೂ ಯೇಸು ತರ ಇರೋಕೆ ತುಂಬ ಇಷ್ಟ ಇತ್ತು. ಆದ್ರೆ ಕೆಲವೊಮ್ಮೆ ಆ ತರ ನಡ್ಕೊಳ್ಳೋಕೆ ಕಷ್ಟ ಆಗ್ತಿತ್ತು. ಅಪೊಸ್ತಲ ಪೌಲನಿಗೆ ಸೇವೆ ಮಾಡೋಕೆ ಕೆಲವೊಂದು ಸಲ ಮನಸ್ಸಿಲ್ಲ ಅಂತ ಅನಿಸಿದ್ರೂ ಅದನ್ನ ಮಾಡಿ ಮುಗಿಸಿದ. ಅಪರಿಪೂರ್ಣರಾಗಿರೋದ್ರಿಂದ ನಮಗೆ ಕೆಲವೊಮ್ಮೆ ಯೆಹೋವನ ಸೇವೆ ಮಾಡೋಕೆ ಉತ್ಸಾಹ ಕಮ್ಮಿ ಆಗಿಬಿಡುತ್ತೆ. ಆಗ ಅದನ್ನೇ ಮನಸ್ಸಲ್ಲಿ ಇಟ್ಕೊಂಡು ಒಂದು ತೀರ್ಮಾನಕ್ಕೆ ಬಂದುಬಿಡಬೇಡಿ. ಉತ್ಸಾಹ ಕಮ್ಮಿ ಆದ್ರೂ ಯಾವುದು ಸರಿನೋ ಅದನ್ನೇ ಮಾಡ್ತಾ ಇರಿ. ಈ ತರ ಮಾಡಿದ್ರೆ, ಸಮಯ ಹೋದ ಹಾಗೆ ನಿಮ್ಮ ಯೋಚ್ನೆನೂ ಬದಲಾಗುತ್ತೆ. —1 ಕೊರಿಂ. 9:16. w24.03 11-12 ¶12-13

ಗುರುವಾರ, ಸೆಪ್ಟೆಂಬರ್‌ 11

ನೀವು ಅವ್ರನ್ನ ಪ್ರೀತಿಸ್ತೀರ ಅಂತ ತೋರಿಸಿ.—2 ಕೊರಿಂ. 8:24.

ನಾವು ಸಭೆಯಲ್ಲಿ ಕೆಲವ್ರನ್ನ ಫ್ರೆಂಡ್ಸ್‌ ಮಾಡ್ಕೊಂಡು ಬರೀ ಅವ್ರ ಜೊತೆನೇ ಮಾತಾಡೋದಲ್ಲ, ಬೇರೆಯವ್ರನ್ನೂ ಸೇರಿಸ್ಕೊಬೇಕು. ಹೀಗೆ ನಮ್ಮ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬೇಕು. (2 ಕೊರಿಂ. 6:11-13) ನಮ್ಮ ಸಭೆಗಳಲ್ಲೂ ಕೆಲವು ಸಹೋದರ ಸಹೋದರಿಯರ ಹಿನ್ನೆಲೆ, ಸ್ವಭಾವ ಬೇರೆ ಬೇರೆ ಇರುತ್ತೆ. ಆದ್ರೂ ನಾವು ಅವ್ರಿಗೆ ಪ್ರೀತಿ ತೋರಿಸಬೇಕು. ಯೆಹೋವನ ತರ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು. ಯಾಕಂದ್ರೆ ಮಹಾ ಸಂಕಟದ ಸಮಯದಲ್ಲಿ ನಾವು ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸೋದು ತುಂಬಾ ಪ್ರಾಮುಖ್ಯ. ಆ ಸಮಯದಲ್ಲಿ ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಹಿಂದಿನ ಕಾಲದಲ್ಲಿ ಬಾಬೆಲ್‌ ಮೇಲೆ ದಾಳಿ ಆದಾಗ ಯೆಹೋವ ತನ್ನ ಜನ್ರಿಗೆ ಏನು ಹೇಳಿದನು ನೋಡಿ: “ನನ್ನ ಜನ್ರೇ, ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ, ಬಾಗಿಲು ಹಾಕೊಳ್ಳಿ, ಸ್ವಲ್ಪಹೊತ್ತು ಬಚ್ಚಿಟ್ಕೊಳ್ಳಿ. ನನ್ನ ಕೋಪ ತೀರೋ ತನಕ ಅಲ್ಲೇ ಇರಿ.” (ಯೆಶಾ. 26:20) ಮಹಾ ಸಂಕಟದಲ್ಲಿ ನಮಗೆ ಇದೇ ತರದ ನಿರ್ದೇಶನ ಸಿಗಬಹುದು. w23.07 6-7 ¶14-16

ಶುಕ್ರವಾರ, ಸೆಪ್ಟೆಂಬರ್‌ 12

ಈ ಲೋಕ ಬದಲಾಗ್ತಾನೇ ಇದೆ.—1 ಕೊರಿಂ. 7:31.

ನಾವು ನಮ್ಮನ್ನೇ ಹೀಗೆ ಕೇಳ್ಕೊಬೇಕು: “ಜನ ನನ್ನನ್ನ ತುಂಬ ಕಟ್ಟುನಿಟ್ಟು, ಒರಟು, ಹಠಮಾರಿ ಅಂತ ಅಂದ್ಕೊಂಡಿದ್ದಾರಾ? ಅಥವಾ ಬಿಟ್ಕೊಡೋ ಸ್ವಭಾವದವನು, ಹೊಂದ್ಕೊಳ್ತಾನೆ, ಬೇರೆಯವ್ರನ್ನ ಅರ್ಥ ಮಾಡ್ಕೊಳ್ತಾನೆ ಅಂತ ಅಂದ್ಕೊಂಡಿದ್ದಾರಾ? ಬೇರೆಯವರು ಹೇಳೋದನ್ನ ಕೇಳ್ತೀನಾ? ಅವ್ರಿಗೆ ಏನು ಇಷ್ಟಾನೋ ಅದನ್ನ ಮಾಡೋಕೆ ಬಿಟ್ಕೊಡ್ತೀನಾ?” ನಾವು ಬಿಟ್ಕೊಟ್ಟಷ್ಟು ಯೆಹೋವ ಮತ್ತು ಯೇಸು ತರ ಆಗ್ತೀವಿ. ನಮ್ಮ ಜೀವನ ತಲೆಕೆಳಗೆ ಆದಾಗ್ಲೂ ನಾವು ಪರಿಸ್ಥಿತಿಗೆ ಹೊಂದ್ಕೊಬೇಕು. ಪರಿಸ್ಥಿತಿ ಬದಲಾದಾಗ ನಮಗೆ ತುಂಬ ಕಷ್ಟ ಆಗುತ್ತೆ. ಉದಾಹರಣೆಗೆ ನಮಗೆ ದಿಢೀರಂತ ಆರೋಗ್ಯ ಹಾಳಾದಾಗ, ನಾವಿರೋ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಬದಲಾದಾಗ ಅಥವಾ ಸರ್ಕಾರದಲ್ಲಿ ಏನೋ ಬದಲಾವಣೆ ಆದಾಗ ನಮಗೆ ಕಷ್ಟ ಆಗುತ್ತೆ. (ಪ್ರಸಂ. 9:11) ಸಂಘಟನೆಯಿಂದ ನಮಗೆ ಬೇರೆ ನೇಮಕ ಸಿಕ್ಕಿದಾಗ್ಲೂ ಕಷ್ಟ ಆಗಬಹುದು. ಹೀಗಾದಾಗ ಪರಿಸ್ಥಿತಿಗೆ ಹೊಂದ್ಕೊಳ್ಳೋಕೆ ನಾವೇನು ಮಾಡಬೇಕು? (1) ಸನ್ನಿವೇಶ ಬದಲಾಗಿದೆ ಅಂತ ಒಪ್ಕೊಳ್ಳಿ. (2) ಮುಂದೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. (3) ಈಗ ಏನು ಒಳ್ಳೇದಾಗ್ತಿದೆ ಅನ್ನೋದಕ್ಕೆ ಗಮನಕೊಡಿ. (4) ಬೇರೆಯವ್ರಿಗೆ ಸಹಾಯ ಮಾಡಿ. w23.07 21-22 ¶7-8

ಶನಿವಾರ, ಸೆಪ್ಟೆಂಬರ್‌ 13

ನೀನು ತುಂಬ ಅಮೂಲ್ಯ.—ದಾನಿ. 9:23.

ಪ್ರವಾದಿ ದಾನಿಯೇಲನನ್ನ ಬಾಬೆಲಿನವರು ಯೆರೂಸಲೇಮಿನಿಂದ ಕೈದಿಯಾಗಿ ಕರ್ಕೊಂಡು ಬಂದ್ರು. ಆಗ ದಾನಿಯೇಲ ಚಿಕ್ಕವನಾಗಿದ್ದ. ಆದ್ರೂ ಅಲ್ಲಿನ ಅಧಿಕಾರಿಗಳಿಗೆ ದಾನಿಯೇಲನನ್ನ ನೋಡಿದಾಗ ತುಂಬ ಇಷ್ಟ ಆಯ್ತು. ಯಾಕಂದ್ರೆ ದಾನಿಯೇಲನಲ್ಲಿ ‘ಯಾವ ಕುಂದುಕೊರತೆನೂ’ ಇರಲಿಲ್ಲ. ನೋಡೋಕೆ ತುಂಬಾ ಚೆನ್ನಾಗಿದ್ದ. ಅಷ್ಟೇ ಅಲ್ಲ, ಅವನು ಒಂದು ದೊಡ್ಡ ಮನೆತನದಿಂದ ಬಂದಿದ್ದ. (1 ಸಮು. 16:7) ಇದನ್ನೆಲ್ಲ ನೋಡಿ ಬಾಬೆಲಿನವರು ಅವನಿಗೆ ಆಸ್ಥಾನದಲ್ಲಿ ಕೆಲಸ ಮಾಡೋಕೆ ಬೇಕಾದ ತರಬೇತಿ ಕೊಟ್ರು. (ದಾನಿ. 1:3, 4, 6) ಯೆಹೋವ ದೇವರು ದಾನಿಯೇಲನನ್ನ ಪ್ರೀತಿಸೋಕೆ ಕಾರಣ, ಅವನು ಯಾವಾಗ್ಲೂ ಯೆಹೋವನಿಗೆ ಇಷ್ಟ ಆಗೋ ತರ ಇರೋಕೆ ಪ್ರಯತ್ನ ಮಾಡ್ತಿದ್ದ. ಅದಕ್ಕೆ, ತುಂಬ ವರ್ಷ ಸೇವೆ ಮಾಡಿ ತನ್ನ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ ನೋಹ ಮತ್ತು ಯೋಬನಂಥ ವ್ಯಕ್ತಿಗಳ ಜೊತೆ ಯೆಹೋವ ದೇವರು ದಾನಿಯೇಲನ ಹೆಸ್ರನ್ನೂ ಸೇರಿಸಿದನು. ಆಗ ದಾನಿಯೇಲನಿಗೆ 19-20 ವರ್ಷ ಇದ್ದಿರಬೇಕು ಅಷ್ಟೇ. (ಆದಿ. 5:32; 6:9, 10; ಯೋಬ 42:16, 17; ಯೆಹೆ. 14:14) ಅವತ್ತಿಂದ ಹಿಡಿದು ಅವನು ಸಾಯೋ ತನಕನೂ ಯೆಹೋವ ಅವನ ಜೊತೆನೇ ಇದ್ದನು, ಅವನನ್ನ ಪ್ರೀತಿಸಿದನು.—ದಾನಿ. 10:11, 19. w23.08 2 ¶1-2

ಭಾನುವಾರ, ಸೆಪ್ಟೆಂಬರ್‌ 14

ಸತ್ಯದ ಉದ್ದ ಅಗಲ ಎತ್ತರ ಆಳ ಎಷ್ಟಂತ ಸಂಪೂಣವಾಗಿ ಅರ್ಥ ಮಾಡ್ಕೊಳ್ಳಿ.—ಎಫೆ. 3:18.

ನೀವೊಂದು ಮನೆ ತಗೊಳ್ತಿದ್ದೀರ ಅಂದ್ಕೊಳ್ಳಿ. ಆ ಮನೆಯ ಒಂದೊಂದು ಮೂಲೆನೂ ನೋಡಿ ಆ ಮನೆ ತಗೊಳ್ತೀರ. ಬೈಬಲನ್ನ ಓದಿ ಅಧ್ಯಯನ ಮಾಡುವಾಗಲೂ ಇದೇ ತರ ಮಾಡಬೇಕು. ಬೈಬಲನ್ನ ಚೆನ್ನಾಗಿ ಓದಿ ತಿಳ್ಕೊಬೇಕಂದ್ರೆ, ಮೇಲ್ಮೇಲೆ ಓದಿದ್ರೆ ಸಾಕಾಗಲ್ಲ. ಹಾಗೆ ಓದಿದ್ರೆ ಬರೀ ಕೆಲವು ವಿಷ್ಯಗಳನ್ನ ಮಾತ್ರ ತಿಳ್ಕೊಳ್ಳೋಕೆ ಆಗುತ್ತೆ. ಅದ್ರಲ್ಲಿ “ಮೊದಮೊದ್ಲು ಕಲಿತ” ವಿಷ್ಯಗಳಷ್ಟೇ ಇರುತ್ತೆ. (ಇಬ್ರಿ. 5:12) ನಾವು ಹೇಗೆ ಒಂದು ಮನೆ “ಒಳಗಡೆ” ಹೋಗಿ ಒಂದೊಂದು ಮೂಲೆನೂ ನೋಡ್ತೀವೋ, ಹಾಗೇ ಬೈಬಲಿನಲ್ಲಿರೋ ಚಿಕ್ಕಚಿಕ್ಕ ವಿಷ್ಯಗಳನ್ನ ಗಮನಿಸಬೇಕು. ಈ ರೀತಿ ಓದಬೇಕು ಅಂದ್ರೆ ನಾವೇನು ಮಾಡಬೇಕು? ಬೈಬಲಿನಲ್ಲಿರೋ ವಿಷ್ಯಗಳು ಹೇಗೆ ಒಂದಕ್ಕೊಂದು ಸಂಬಂಧಪಟ್ಟಿದೆ ಅಂತ ಯೋಚ್ನೆ ಮಾಡಬೇಕು. ಜೊತೆಗೆ ಬೈಬಲಲ್ಲಿರೋ ಯಾವ ವಿಷ್ಯಗಳನ್ನ ನೀವು ನಂಬ್ತೀರ ಅನ್ನೋದನ್ನಷ್ಟೇ ಅಲ್ಲ, ಯಾಕೆ ನಂಬ್ತೀರ ಅಂತನೂ ಯೋಚಿಸಬೇಕು. ಬೈಬಲಿನಲ್ಲಿರೋ ಆಳವಾದ ಸತ್ಯಗಳನ್ನ ತಿಳ್ಕೊಂಡ್ರೆ, ಬೈಬಲನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಅಪೊಸ್ತಲ ಪೌಲ ಸಹೋದರ ಸಹೋದರಿಯರಿಗೆ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡೋಕೆ ಹೇಳಿದ. ಅವರು ಹಾಗೆ ಮಾಡಿದ್ರೆ “ಸತ್ಯದ ಉದ್ದ ಅಗಲ ಎತ್ತರ ಆಳ ಎಷ್ಟಂತ ಸಂಪೂಣವಾಗಿ ಅರ್ಥ” ಮಾಡ್ಕೊಳ್ಳೋಕೆ ಆಗ್ತಿತ್ತು. ಅಷ್ಟೇ ಅಲ್ಲ ಅವರ ನಂಬಿಕೆ “ಬಲವಾಗಿ” ಬೇರೂರೋಕೆ ಮತ್ತು “ಸ್ಥಿರವಾಗಿ” ನಿಲ್ಲೋಕೆ ಅದು ಸಹಾಯ ಮಾಡ್ತಿತ್ತು. (ಎಫೆ. 3:14-19.) ಅವ್ರ ತರ ನಾವೂ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡೋಣ. w23.10 18 ¶1-3

ಸೋಮವಾರ, ಸೆಪ್ಟೆಂಬರ್‌ 15

ಸಹೋದರರೇ, ಜನ್ರ ಹತ್ರ ಮಾತಾಡೋಕೆ ಯೆಹೋವ ದೇವರು ನೇಮಿಸಿದ ಪ್ರವಾದಿಗಳ ತರ ಇರಿ. ಅವರು ಕಷ್ಟ ಬಂದ್ರೂ ತಾಳ್ಕೊಂಡ್ರು.—ಯಾಕೋ. 5:10.

ತಾಳ್ಮೆ ತೋರಿಸಿದವ್ರ ಎಷ್ಟೋ ಉದಾಹರಣೆ ಬೈಬಲಲ್ಲಿದೆ. ಅವ್ರ ಬಗ್ಗೆ ಓದಿ ಅಧ್ಯಯನ ಮಾಡಿ. ಉದಾಹರಣೆಗೆ ದಾವೀದನಿಗೆ ಚಿಕ್ಕವನಿದ್ದಾಗ್ಲೆ ಅಭಿಷೇಕ ಆಗಿತ್ತು. ಆದ್ರೆ ಅವನು ಇಸ್ರಾಯೇಲ್ಯರ ರಾಜ ಆಗೋಕೆ ಎಷ್ಟೋ ವರ್ಷ ಕಾಯಬೇಕಾಯ್ತು. ಸಿಮೆಯೋನ ಮತ್ತು ಅನ್ನ ಮೆಸ್ಸೀಯನನ್ನ ನೋಡೋಕೆ ತುಂಬ ವರ್ಷಗಳ ಕಾಲ ಯೆಹೋವನ ಸೇವೆ ಮಾಡ್ತಾ ಕಾದ್ರು. (ಲೂಕ 2:25, 36-38) ಇವ್ರ ಬಗ್ಗೆ ಓದುವಾಗ ‘ಇವ್ರಿಗೆಲ್ಲ ತಾಳ್ಮೆ ತೋರಿಸೋಕೆ ಯಾವುದು ಸಹಾಯ ಮಾಡ್ತು? ತಾಳ್ಮೆ ತೋರಿಸಿದ್ರಿಂದ ಏನು ಪ್ರಯೋಜನ ಆಯ್ತು? ನಾನೂ ಇವ್ರ ತರ ಹೇಗೆ ತಾಳ್ಮೆ ತೋರಿಸಬಹುದು?’ ಅಂತ ಯೋಚ್ನೆ ಮಾಡಿ. ತಾಳ್ಮೆ ತೋರಿಸದೇ ಇದ್ದವ್ರ ಬಗ್ಗೆನೂ ಬೈಬಲಲ್ಲಿದೆ. ಅವರು ಮಾಡಿದ ತಪ್ಪಿಂದನೂ ನಾವು ಪಾಠ ಕಲಿಬಹುದು. (1 ಸಮು. 13:8-14) ಅವ್ರ ಬಗ್ಗೆ ಓದುವಾಗ ‘ಇವರು ಯಾಕೆ ತಾಳ್ಮೆ ತೋರಿಸಲಿಲ್ಲ? ತಾಳ್ಮೆ ತೋರಿಸದೇ ಇದ್ದಿದ್ರಿಂದ ಏನೆಲ್ಲಾ ಅನುಭವಿಸಬೇಕಾಗಿ ಬಂತು?’ ಅಂತ ಯೋಚ್ನೆ ಮಾಡಿ. w23.08 25 ¶15

ಮಂಗಳವಾರ, ಸೆಪ್ಟೆಂಬರ್‌ 16

“ನಮಗೆ ಪೂರ್ತಿ ನಂಬಿಕೆ ಇದೆ. ನೀನೇ ದೇವರ ಪವಿತ್ರ ಮಗ ಅಂತ ನಮಗೆ ಗೊತ್ತು” ಅಂದ.—ಯೋಹಾ. 6:69.

ಪೇತ್ರ ಕೊನೇ ತನಕ ನಿಯತ್ತಾಗಿದ್ದ. ಏನೇ ಆದ್ರೂ ಅವನು ಯೇಸುನ ಬಿಟ್ಟುಹೋಗಲಿಲ್ಲ. ಒಂದು ಸಲ ಯೇಸು ಏನೋ ಒಂದು ವಿಷ್ಯ ಹೇಳಿದಾಗ ಅದು ಆತನ ಶಿಷ್ಯರಿಗೆ ಅರ್ಥ ಆಗಲಿಲ್ಲ. (ಯೋಹಾ. 6:68) ಆಗ ಆತನನ್ನ ಬಿಟ್ಟುಹೋದ್ರು. ಆತನ ಮಾತಿನ ಅರ್ಥ ಏನಂತನೂ ಕೇಳೋಕೆ ಹೋಗಲಿಲ್ಲ. ಆದ್ರೆ ಪೇತ್ರ “ಶಾಶ್ವತ ಜೀವ ಕೊಡೋ ಮಾತು ನಿನ್ನ ಹತ್ರ ಇದೆ” ಅಂತ ಹೇಳಿದ. ಅವನು ಯೇಸು ಜೊತೆನೇ ಇದ್ದ. ತನ್ನ ಅಪೊಸ್ತಲರು ಮತ್ತು ಪೇತ್ರ ತನ್ನನ್ನ ಬಿಟ್ಟುಹೋಗ್ತಾರೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ ಪೇತ್ರ ವಾಪಸ್‌ ಬರ್ತಾನೆ, ಕೊನೇ ತನಕ ತನಗೆ ನಿಯತ್ತಾಗಿ ಇರ್ತಾನೆ ಅನ್ನೋ ನಂಬಿಕೆ ಇತ್ತು. (ಲೂಕ 22:31, 32) ಯಾಕಂದ್ರೆ ಪೇತ್ರನಿಗೆ “ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ” ಅಂತ ಯೇಸು ಅರ್ಥ ಮಾಡ್ಕೊಂಡನು. (ಮಾರ್ಕ 14:38) ಅದಕ್ಕೇ ‘ಯೇಸು ಯಾರಂತಾನೇ ನಂಗೊತ್ತಿಲ್ಲ’ ಅಂತ ಪೇತ್ರ ಹೇಳಿದಾಗ ಯೇಸು ಅವನ ಕೈಬಿಡಲಿಲ್ಲ. ಆತನು ಮತ್ತೆ ಜೀವ ಪಡ್ಕೊಂಡು ಬಂದ ಮೇಲೆ ಪೇತ್ರನಿಗೆ ಕಾಣಿಸ್ಕೊಂಡನು. ಅದ್ರಲ್ಲೂ ಪೇತ್ರ ಒಬ್ಬನೇ ಇದ್ದಾಗ ಅವನನ್ನ ಭೇಟಿ ಮಾಡಿದನು. (ಮಾರ್ಕ 16:7; ಲೂಕ 24:34; 1 ಕೊರಿಂ. 15:5) ಇದು ಅಪೊಸ್ತಲ ಪೇತ್ರನಿಗೆ ಎಷ್ಟು ಧೈರ್ಯ ಕೊಟ್ಟಿರುತ್ತೆ ಅಲ್ವಾ! w23.09 22 ¶9-10

ಬುಧವಾರ, ಸೆಪ್ಟೆಂಬರ್‌ 17

ಯಾರ ಕೆಟ್ಟ ಕೆಲಸಗಳನ್ನ, ಪಾಪಗಳನ್ನ ದೇವರು ಕ್ಷಮಿಸಿದ್ದಾನೋ ಅವರು ಖುಷಿಯಾಗಿ ಇರ್ತಾರೆ.—ರೋಮ. 4:7.

ಯಾರು ದೇವರ ಮೇಲೆ ನಂಬಿಕೆ ಇಡ್ತಾರೋ ಅಂಥವರ ಪಾಪವನ್ನ ದೇವರು ಕ್ಷಮಿಸಿಬಿಡ್ತಾನೆ, ಲೆಕ್ಕ ಇಟ್ಕೊಳ್ಳಲ್ಲ. (ಕೀರ್ತ. 32:1, 2) ಅಷ್ಟೇ ಅಲ್ಲ, ಅವ್ರನ್ನ ನೀತಿವಂತರಾಗಿ ನೋಡ್ತಾನೆ, ಯಾವ ತಪ್ಪನ್ನೂ ಮಾಡದವರು ಅಂತ ಹೇಳ್ತಾನೆ. ಅಬ್ರಹಾಮ, ದಾವೀದ ಮತ್ತು ಇನ್ನೂ ಬೇರೆ ದೇವ ಸೇವಕರು ಆಗಿನ ಕಾಲದಲ್ಲಿದ್ದ ಬೇರೆ ಜನ್ರ ತರ ಪಾಪಿಗಳಾಗಿದ್ರೂ ಇವ್ರನ್ನ ಮಾತ್ರ ಯೆಹೋವ ಯಾಕೆ ನೀತಿವಂತರು ಅಂತ ಕರೆದನು? ಯಾಕಂದ್ರೆ ಇವರು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರು. (ಎಫೆ. 2:12) ನಾವು ಯೆಹೋವನ ಜೊತೆ ಫ್ರೆಂಡ್‌ಶಿಪ್‌ ಬೆಳೆಸ್ಕೊಬೇಕಾದ್ರೆ ನಂಬಿಕೆ ಬೇಕೇ ಬೇಕು ಅಂತ ಪೌಲ ಹೇಳಿದ. ಅಬ್ರಹಾಮ ಮತ್ತು ದಾವೀದ ನಂಬಿಕೆ ತೋರಿಸಿದ್ರಿಂದಾನೇ ಅವರು ಯೆಹೋವನ ಸ್ನೇಹಿತರಾದ್ರು. ಅವ್ರ ತರ ನಾವೂ ಯೆಹೋವನ ಸ್ನೇಹಿತರಾಗೋಕೆ ಆಗುತ್ತೆ. w23.12 3 ¶6-7

ಗುರುವಾರ, ಸೆಪ್ಟೆಂಬರ್‌ 18

ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ. ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ ನಮ್ಮ ತುಟಿಗಳನ್ನ ಬಳಸೋಣ.—ಇಬ್ರಿ. 13:15.

ಯೆಹೋವ ದೇವರು ತನ್ನನ್ನ ಆರಾಧಿಸೋಕೆ ನಮ್ಮೆಲ್ರಿಗೂ ಒಂದು ಅವಕಾಶ ಕೊಟ್ಟಿದ್ದಾನೆ. ಹಾಗಾಗಿ ಆತನ ಸೇವೆ ಮಾಡೋಕೆ ನಮ್ಮ ಸಮಯ, ಶಕ್ತಿ ಮತ್ತು ವಸ್ತುಗಳನ್ನ ಬಳಸೋಣ. ಯೆಹೋವ ನಮಗೆ ಇಂಥ ಒಂದು ಅವಕಾಶ ಕೊಟ್ಟಿದ್ದಕ್ಕೆ ಆತನ ಸೇವೆ ಮಾಡೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡೋಣ. ಅಪೊಸ್ತಲ ಪೌಲ ಆರಾಧನೆಗೆ ಸಂಬಂಧಪಟ್ಟ ಕೆಲವು ಮುಖ್ಯವಾದ ವಿಷ್ಯಗಳ ಬಗ್ಗೆ ಹೇಳಿದ. ಅದನ್ನ ನಾವು ಮಾಡಲೇಬೇಕು. (ಇಬ್ರಿ. 10:22-25) ಯೆಹೋವನಿಗೆ ಪ್ರಾರ್ಥಿಸಬೇಕು, ಸಿಹಿಸುದ್ದಿ ಸಾರಬೇಕು, ಸಭೆಯಾಗಿ ಸೇರಿಬರಬೇಕು ಮತ್ತು ಎಲ್ರನ್ನೂ ಪ್ರೋತ್ಸಾಹಿಸ್ತಾ ಇರಬೇಕು. “[ಯೆಹೋವನ] ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ” ಮಾಡಬೇಕು. ಅದಕ್ಕೇ ಪ್ರಕಟನೆ ಪುಸ್ತಕದ ಕೊನೇಲಿ ದೇವದೂತ ಎರಡು ಸಲ ‘ದೇವರನ್ನ ಆರಾಧನೆ ಮಾಡಿ!’ ಅಂತ ಹೇಳಿದ. (ಪ್ರಕ. 19:10; 22:9) ಹಾಗಾಗಿ ನಾವು ಯೆಹೋವನ ಆಧ್ಯಾತ್ಮಿಕ ಆಲಯದ ಬಗ್ಗೆ ಕಲಿತ ಸತ್ಯನ ಮರೆಯದೇ ಇರೋಣ. ಅಷ್ಟೇ ಅಲ್ಲ, ತನ್ನನ್ನ ಆರಾಧಿಸೋಕೆ ನಮಗೆ ಅವಕಾಶ ಕೊಟ್ಟಿದ್ದಕ್ಕೆ ಯೆಹೋವನಿಗೆ ನಾವು ಋಣಿಗಳಾಗಿರೋಣ. w23.10 29 ¶17-18

ಶುಕ್ರವಾರ, ಸೆಪ್ಟೆಂಬರ್‌ 19

ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇರೋಣ.—1 ಯೋಹಾ. 4:7.

ನಾವೆಲ್ರೂ “ಒಬ್ರನ್ನೊಬ್ರು ಪ್ರೀತಿಸ್ತಾ” ಇರೋಕೆ ಇಷ್ಟ ಪಡ್ತೀವಿ. ಆದ್ರೆ “ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ” ಅಂತ ಯೇಸು ಹೇಳಿದ ಮಾತನ್ನ ನಾವು ಮರಿಬಾರದು. (ಮತ್ತಾ. 24:12) ಇಲ್ಲಿ ಯೇಸು, ತನ್ನ ಶಿಷ್ಯರೆಲ್ರೂ ಹೀಗೆ ಮಾಡ್ತಾರೆ ಅಂತ ಹೇಳ್ತಿಲ್ಲ. ಆದ್ರೂ ಪ್ರೀತಿನೇ ಇಲ್ಲದಿರೋ ಜನ್ರು ನಮ್ಮ ಸುತ್ತಮುತ್ತ ಇರೋದ್ರಿಂದ ಕೆಲವೊಮ್ಮೆ ನಾವೂ ಅವ್ರ ತರ ಆಗಿಬಿಡಬಹುದು. ಅದಕ್ಕೇ ಹುಷಾರಾಗಿರಬೇಕು. ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಮ್ಮಿ ಆಗೋಕೆ ಯಾವತ್ತೂ ಬಿಡಬಾರದು. ಒಂದುವೇಳೆ ಕಮ್ಮಿ ಆಗ್ತಿದ್ರೆ ಅದನ್ನ ಹೇಗೆ ಕಂಡು ಹಿಡಿಯೋದು? ನಮ್ಮ ಜೀವನದಲ್ಲಿ ಕೆಲವು ಸನ್ನಿವೇಶಗಳು ಬಂದಾಗ ಸಹೋದರ ಸಹೋದರಿಯರ ಮೇಲೆ ಎಷ್ಟು ಪ್ರೀತಿ ಇದೆ ಅಂತ ನಮಗೆ ಗೊತ್ತಾಗುತ್ತೆ. (2 ಕೊರಿಂ. 8:8) ಅಂಥ ಒಂದು ಸನ್ನಿವೇಶದ ಬಗ್ಗೆ ಅಪೊಸ್ತಲ ಪೇತ್ರ ಹೀಗೆ ಹೇಳಿದ: “ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು. ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.” (1 ಪೇತ್ರ 4:8) ಹಾಗಾಗಿ ಬೇರೆಯವರು ತಪ್ಪು ಮಾಡಿದಾಗ, ನಮ್ಮ ಮನಸ್ಸು ನೋಯಿಸಿದಾಗ ನಾವು ಹೇಗೆ ನಡ್ಕೊಳ್ತೀವೋ ಅದ್ರಿಂದ ಅವ್ರ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ಗೊತ್ತಾಗುತ್ತೆ. w23.11 10-11 ¶12-13

ಶನಿವಾರ, ಸೆಪ್ಟೆಂಬರ್‌ 20

ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು.—ಯೋಹಾ. 13:34.

ಹಾಗಾಗಿ ನಾವು ಸಭೆಯಲ್ಲಿ ಕೆಲವ್ರಿಗೆ ಪ್ರೀತಿ ತೋರಿಸಿ ಇನ್ನು ಕೆಲವ್ರಿಗೆ ಪ್ರೀತಿ ತೋರಿಸಲಿಲ್ಲ ಅಂದ್ರೆ ನಾವು ಯೇಸು ಕೊಟ್ಟ ಆಜ್ಞೆನ ಪಾಲಿಸ್ತಿಲ್ಲ ಅಂತ ಅರ್ಥ. ನಿಜ, ಯೇಸುಗೆ ಇದ್ದ ಹಾಗೆ ನಮಗೆ ಕೆಲವರು ಮಾತ್ರ ಹತ್ರವಾಗಿರ್ತಾರೆ. (ಯೋಹಾ. 13:23; 20:2) ಆದ್ರೆ ಪೇತ್ರ ಇಲ್ಲಿ ಏನು ಹೇಳ್ತಿದ್ದಾನೆ ಅಂದ್ರೆ ನಾವು ಎಲ್ಲಾ ಸಹೋದರ ಸಹೋದರಿಯರನ್ನೂ ‘ಒಡಹುಟ್ಟಿದವ್ರ ತರ ಪ್ರೀತಿಸಬೇಕು.’ (1 ಪೇತ್ರ 2:17) “ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ” ಅಂತ ಪೇತ್ರ ಹೇಳಿದ. (1 ಪೇತ್ರ 1:22) ಆದ್ರೆ ಕೆಲವೊಮ್ಮೆ ಬೇರೆಯವ್ರನ್ನ ಪ್ರೀತಿಸೋಕೆ ನಮಗೆ ಕಷ್ಟ ಆಗುತ್ತೆ. ಆದ್ರೂ ಅವ್ರನ್ನ ಪ್ರೀತಿಸಬೇಕು ಅನ್ನೋದು ಇದ್ರ ಅರ್ಥ. ಉದಾಹರಣೆಗೆ ಒಬ್ಬ ಸಹೋದರ ನಮ್ಮನ್ನ ನೋಯಿಸಿದ್ರೆ ನಾವು ಮುನಿಸಿಕೊಂಡುಬಿಡ್ತೀವಿ, ಸೇಡು ತೀರಿಸಬೇಕು ಅಂತನೂ ಕೆಲವೊಮ್ಮೆ ಅನಿಸಿಬಿಡಬಹುದು. ಆದ್ರೆ ಇದು ಯೆಹೋವ ದೇವರಿಗೆ ಇಷ್ಟ ಇಲ್ಲ. (ಯೋಹಾ. 18:10, 11) ಅದನ್ನೇ ಪೇತ್ರ ಯೇಸುವಿಂದ ಕಲಿತ. ಅದಕ್ಕೇ ಅವನು “ಕೆಟ್ಟದು ಮಾಡಿದವ್ರಿಗೆ ಕೆಟ್ಟದು ಮಾಡಬೇಡಿ. ಅವಮಾನ ಮಾಡಿದವ್ರಿಗೆ ಅವಮಾನ ಮಾಡಬೇಡಿ. ಬದಲಿಗೆ ಅವ್ರಿಗೆ ಒಳ್ಳೇದನ್ನೇ ಮಾಡಿ” ಅಂತ ಹೇಳಿದ. (1 ಪೇತ್ರ 3:9) ಹಾಗಾಗಿ ನಾವು ಮನಸಾರೆ ಅವ್ರನ್ನ ಪ್ರೀತಿಸೋಣ. w23.09 28-29 ¶9-11

ಭಾನುವಾರ, ಸೆಪ್ಟೆಂಬರ್‌ 21

ಸ್ತ್ರೀಯರು ಜವಾಬ್ದಾರಿಯಿಂದ ನಡ್ಕೊಬೇಕು . . . ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು, ನಂಬಿಗಸ್ತರಾಗಿ ಇರಬೇಕು.—1 ತಿಮೊ. 3:11.

ಚಿಕ್ಕ ಮಕ್ಕಳು ಹೇಗೆ ಬೆಳೆದು ದೊಡ್ಡವರಾಗ್ತಾರೆ ಅಂತ ಗೊತ್ತೇ ಆಗಲ್ಲ. ಆದ್ರೆ ಯುವ ಸಹೋದರಿಯರು ಪ್ರೌಢರಾಗಬೇಕಂದ್ರೆ ಅದು ಇದ್ದಕ್ಕಿದ್ದಂಗೆ ಆಗಿಬಿಡಲ್ಲ, ಅದಕ್ಕೆ ಪ್ರಯತ್ನ ಬೇಕು. (1 ಕೊರಿಂ. 13:11; ಇಬ್ರಿ. 6:1) ಅವರು ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸ್ಕೊಬೇಕು. ಅಷ್ಟೇ ಅಲ್ಲ, ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸ್ಕೊಬೇಕು, ಒಳ್ಳೇ ಕೌಶಲಗಳನ್ನ ಕಲಿಬೇಕು ಮತ್ತು ಮುಂದಿನ ಜೀವನಕ್ಕೆ ತಯಾರಾಗಬೇಕು. ಇದನ್ನೆಲ್ಲ ಮಾಡೋಕೆ ಪವಿತ್ರ ಶಕ್ತಿಯ ಸಹಾಯ ಬೇಕೇಬೇಕು. (ಜ್ಞಾನೋ. 1:5) ಯೆಹೋವ ಮನುಷ್ಯರನ್ನ ಗಂಡು ಮತ್ತು ಹೆಣ್ಣಾಗಿ ಸೃಷ್ಟಿ ಮಾಡಿದನು. (ಆದಿ. 1:27) ಅವ್ರಿಬ್ರಿಗೂ ಒಂದೇ ತರ ಶಕ್ತಿ ಸಾಮರ್ಥ್ಯ ಇರಲ್ಲ. ಉದಾಹರಣೆಗೆ, ಅವ್ರಿಗೆ ಅವರದ್ದೇ ಆದ ಬೇರೆಬೇರೆ ಜವಾಬ್ದಾರಿಗಳಿರುತ್ತೆ. ಅದನ್ನ ಮಾಡೋಕೆ ಕೆಲವು ಗುಣಗಳು ಮತ್ತು ಕೌಶಲಗಳು ಬೇಕಾಗುತ್ತೆ.—ಆದಿ. 2:18. w23.12 18 ¶1-2

ಸೋಮವಾರ, ಸೆಪ್ಟೆಂಬರ್‌ 22

ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ . . . ದೀಕ್ಷಾಸ್ನಾನ ಮಾಡಿಸಿ.—ಮತ್ತಾ. 28:19.

ಯೇಸುವಿನ ಕಾಲದಲ್ಲಿದ್ದ ಕೆಲವು ಧರ್ಮಗುರುಗಳು ದೇವರ ಹೆಸ್ರು ಕರೆಯೋದು ತಪ್ಪು, ಅದು ಆತನಿಗೆ ಗೌರವ ಕೊಟ್ಟ ಹಾಗೆ ಇರಲ್ಲ ಅಂತ ನೆನಸ್ತಿದ್ರು. ಆದ್ರೆ ಯೇಸು, ಎಲ್ರೂ ದೇವರ ಹೆಸ್ರು ಹೇಳಬೇಕು ಅಂತ ಇಷ್ಟಪಟ್ಟನು. ಇದಕ್ಕೊಂದು ಉದಾಹರಣೆ ನೋಡಿ: ಗೆರಸ ಪಟ್ಟಣದಲ್ಲಿ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ವ್ಯಕ್ತಿಯನ್ನ ಯೇಸು ವಾಸಿ ಮಾಡಿದನು. ಆಗ ಆ ಊರಲ್ಲಿದ್ದ ಜನ್ರು ಹೆದರಿ ಯೇಸು ಹತ್ರ ತಮ್ಮ ಊರು ಬಿಟ್ಟು ಹೋಗೋಕೆ ಬೇಡ್ಕೊಂಡಾಗ ಅವನು ಅಲ್ಲಿಂದ ಹೊರಟನು. (ಮಾರ್ಕ 5:16, 17) ಆದ್ರೆ ಹೊರಡುವಾಗ ಯೆಹೋವನ ಹೆಸ್ರು ಎಲ್ರಿಗೂ ಗೊತ್ತಾಗಲಿ ಅಂತ ಇಷ್ಟಪಟ್ಟನು. ಅದಕ್ಕೇ ವಾಸಿಯಾದ ವ್ಯಕ್ತಿ ಹತ್ರ ತಾನೇನು ಮಾಡಿದನೋ ಅದನ್ನಲ್ಲ, ಯೆಹೋವ ಮಾಡಿದ್ದನ್ನ ಎಲ್ರಿಗೂ ಹೇಳೋಕೆ ಹೇಳಿದನು. (ಮಾರ್ಕ 5:19) ಇವತ್ತು ನಾವೂ ಯೆಹೋವನ ಹೆಸ್ರನ್ನ ಎಲ್ರಿಗೂ ತಿಳಿಸಬೇಕು ಅನ್ನೋದೇ ಯೇಸುವಿನ ಆಸೆ. (ಮತ್ತಾ. 24:14; 28:20) ನಾವಿದನ್ನ ಮಾಡಿದ್ರೆ ನಮ್ಮ ರಾಜ ಯೇಸುಗೆ ತುಂಬ ಖುಷಿಯಾಗುತ್ತೆ. w24.02 10 ¶10

ಮಂಗಳವಾರ, ಸೆಪ್ಟೆಂಬರ್‌ 23

ನೀನು ನನ್ನ ಹೆಸ್ರಿಗೋಸ್ಕರ ಎಷ್ಟೋ ಸಹಿಸ್ಕೊಂಡಿದ್ದೀಯ.—ಪ್ರಕ. 2:3.

ನಾವು ಈ ಕೊನೇ ದಿನಗಳಲ್ಲಿ ಯೆಹೋವನ ಸಂಘಟನೆಯಲ್ಲಿ ಇರೋದು ಒಂದು ದೊಡ್ಡ ಆಶೀರ್ವಾದನೇ. ಈ ಲೋಕದ ಪರಿಸ್ಥಿತಿ ತುಂಬ ಕೆಟ್ಟು ಹೋಗ್ತಾ ಇದ್ರೂ ಯೆಹೋವ ನಮಗೆ ಸಹೋದರ ಸಹೋದರಿಯರ ಒಂದು ದೊಡ್ಡ ಕುಟುಂಬನೇ ಕೊಟ್ಟಿದ್ದಾನೆ. (ಕೀರ್ತ. 133:1) ಅಷ್ಟೇ ಅಲ್ಲ, ನಮ್ಮ ಸ್ವಂತ ಕುಟುಂಬದವ್ರ ಜೊತೆ ಒಗ್ಗಟ್ಟಿಂದ ಇರೋಕೆ ಸಹಾಯ ಮಾಡ್ತಿದ್ದಾನೆ. (ಎಫೆ. 5:33–6:1) ಚಿಂತೆಯಿಂದ ಹೊರಗೆ ಬರೋಕೆ, ಮನಶ್ಶಾಂತಿ ಕಾಪಾಡ್ಕೊಳ್ಳೋಕೆ ನಮಗೆ ವಿವೇಕನೂ ಕೊಡ್ತಿದ್ದಾನೆ. ಯೆಹೋವನ ಸೇವೆ ಮಾಡ್ತಾ ಇರೋಕೆ ನಾವೂ ನಮ್ಮ ಕಡೆಯಿಂದ ಪ್ರಯತ್ನ ಹಾಕ್ತಾ ಇರಬೇಕು. ಯಾಕೆ? ಯಾಕಂದ್ರೆ ಎಲ್ರೂ ಅಪರಿಪೂರ್ಣರಾಗಿರೋದ್ರಿಂದ ಯಾರಾದ್ರೂ ನಮ್ಮ ಮನಸ್ಸನ್ನ ನೋಯಿಸಿಬಿಡಬಹುದು ಅಥವಾ ನಾವು ಮಾಡಿದ ತಪ್ಪಿಂದಾನೂ ನಮಗೆ ಬೇಜಾರಾಗಬಹುದು. ಅದ್ರಲ್ಲೂ ಮಾಡಿದ ತಪ್ಪನ್ನೇ ಮತ್ತೆಮತ್ತೆ ಮಾಡಿದಾಗ ಇನ್ನೂ ಬೇಜಾರಾಗುತ್ತೆ. ಆದ್ದರಿಂದ (1) ಸಹೋದರ ಸಹೋದರಿಯರು ನಮ್ಮ ಮನಸ್ಸು ನೋಯಿಸಿದಾಗ, (2) ನಮ್ಮ ಸಂಗಾತಿ ನಮ್ಮ ಮನಸ್ಸು ನೋಯಿಸಿದಾಗ, (3) ನಮ್ಮ ತಪ್ಪಿಂದಾನೇ ನಮಗೆ ಬೇಜಾರಾದಾಗ ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸಬಾರದು. w24.03 14 ¶1-2

ಬುಧವಾರ, ಸೆಪ್ಟೆಂಬರ್‌ 24

ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.—ಫಿಲಿ. 3:16.

ಕೆಲವರು ಯೆಹೋವನ ಸೇವೆ ಜಾಸ್ತಿ ಮಾಡೋಕೆ ರಾಜ್ಯ ಪ್ರಚಾರಕರ ಶಾಲೆಗೆ ಹೋಗಿರಬಹುದು. ಇನ್ನು ಕೆಲವರು ಅಗತ್ಯ ಇರೋ ಕಡೆ ಹೋಗಿರಬಹುದು. ಅವ್ರ ಅನುಭವಗಳನ್ನ ಕೇಳಿ ನಿಮಗೂ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಅನಿಸಿರಬಹುದು. ಹಾಗಾಗಿ, ನೀವು ಆ ಗುರಿಗಳನ್ನ ಇಡೋಕೆ ಆಗುತ್ತಾ ಅಂತ ಯೋಚಿಸಿ. (ಅ. ಕಾ. 16:9) ಆದ್ರೆ ಈಗ, ನೀವಿರೋ ಪರಿಸ್ಥಿತಿಯಲ್ಲಿ ಯೆಹೋವನ ಸೇವೆ ಜಾಸ್ತಿ ಮಾಡೋಕೆ ಆಗ್ತಿಲ್ಲ ಅಂದ್ರೆ ಬೇಜಾರ್‌ ಮಾಡ್ಕೊಬೇಡಿ. ನೀವು ಬೇರೆಯವ್ರಿಗಿಂತ ಕೀಳು ಅಂತ ಅಂದ್ಕೊಬೇಡಿ. ಕೊನೆವರೆಗೂ ತಾಳ್ಕೊಳ್ಳೋದೇ ಎಲ್ಲಕ್ಕಿಂತ ಮುಖ್ಯ ಅನ್ನೋದನ್ನ ನೆನಪಿಡಿ. (ಮತ್ತಾ. 10:22) ಹಾಗಾಗಿ ನಿಮ್ಮ ಪರಿಸ್ಥಿತಿ ಹೇಗೆ ಇದ್ರೂ ನಿಮ್ಮಿಂದ ಎಷ್ಟಾಗುತ್ತೋ ಅಷ್ಟು ಸೇವೆ ಮಾಡಿ. ಆಗ ಯೆಹೋವನ ಮನಸ್ಸನ್ನ ಖುಷಿಪಡಿಸ್ತೀರ ಮತ್ತು ಯೇಸು ತರ ನಡ್ಕೊಳ್ತಾ ಇದ್ದೀರ ಅಂತಾನೂ ತೋರಿಸ್ತೀರ.—ಕೀರ್ತ. 26:1. w24.03 10 ¶11

ಗುರುವಾರ, ಸೆಪ್ಟೆಂಬರ್‌ 25

ದೇವರು ದಯೆಯಿಂದ ನಮ್ಮೆಲ್ಲ ಅಪರಾಧಗಳನ್ನ ಕ್ಷಮಿಸಿದನು.—ಕೊಲೊ. 2:13.

ನಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ರೆ ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ಮಾತುಕೊಟ್ಟಿದ್ದಾನೆ. (ಕೀರ್ತ. 86:5) ಆತನು ಮಾತುಕೊಟ್ಟ ಮೇಲೆ ಖಂಡಿತ ಕ್ಷಮಿಸ್ತಾನೆ. ಹಾಗಾಗಿ ಆತನನ್ನ ನಾವು ನಂಬಬಹುದು. ಒಂದಂತೂ ಮರಿಬೇಡಿ. ‘ನೀವು ಇಷ್ಟೇ ಸೇವೆ ಮಾಡಬೇಕು’ ಅಂತ ಯೆಹೋವ ಯಾವತ್ತೂ ಕಟ್ಟುನಿಟ್ಟು ಮಾಡಲ್ಲ ಅಥವಾ ಒತ್ತಾಯ ಮಾಡಲ್ಲ. ನಮ್ಮ ಕೈಯಲ್ಲಿ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ. ನಮ್ಮಿಂದ ಎಷ್ಟಾಗುತ್ತೋ ಅಷ್ಟು ಸೇವೆ ಮಾಡೋಕೆ ನಾವು ಹಾಕೋ ಪ್ರಯತ್ನ ನೋಡಿ ಖಂಡಿತ ಆತನು ಮೆಚ್ಕೊಳ್ತಾನೆ. ಪೂರ್ಣ ಹೃದಯದಿಂದ ಆತನ ಸೇವೆ ಮಾಡಿರೋ ಎಷ್ಟೋ ದೇವಜನ್ರ ಬಗ್ಗೆ ಬೈಬಲಲ್ಲಿದೆ, ಅವ್ರಲ್ಲೊಬ್ಬ ಪೌಲ. ಅವನು ತುಂಬ ವರ್ಷ ಉತ್ಸಾಹದಿಂದ ಯೆಹೋವನ ಸೇವೆ ಮಾಡಿದ. ಸಾವಿರಾರು ಮೈಲಿ ಪ್ರಯಾಣ ಮಾಡಿದ, ತುಂಬ ಸಭೆಗಳನ್ನ ಶುರುಮಾಡಿದ. ಆದ್ರೆ ಕೆಲವು ಸನ್ನಿವೇಶಗಳಲ್ಲಿ ಅವನಿಗೆ ಮುಂಚಿನ ತರ ಸೇವೆ ಮಾಡೋಕಾಗಲಿಲ್ಲ. ಆಗ ಯೆಹೋವ ಅವನನ್ನ ಮೆಚ್ಕೊಳಲ್ಲ ಅಂತ ಹೇಳಿದನಾ? ಇಲ್ಲ. ಪೌಲ ತನ್ನಿಂದ ಆದಷ್ಟು ಸೇವೆ ಮಾಡಿದ್ದನ್ನ ನೋಡಿದಾಗ ಯೆಹೋವ ಅವನನ್ನ ಆಶೀರ್ವದಿಸಿದನು. (ಅ. ಕಾ. 28:30, 31) ನಿಮಗೂ ಪೌಲನ ತರ ಕೆಲವೊಮ್ಮೆ ಜಾಸ್ತಿ ಸೇವೆ ಮಾಡೋಕೆ ಆಗ್ದೇ ಇದ್ರೆ ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ ನೀವು ಎಷ್ಟು ಸೇವೆ ಮಾಡ್ತಿದ್ದೀರ ಅಂತ ಅಲ್ಲ, ಯಾಕೆ ಆ ಸೇವೆ ಮಾಡ್ತಿದ್ದೀರ ಅಂತ ಯೆಹೋವ ನೋಡ್ತಾನೆ. w24.03 27 ¶7, 9

ಶುಕ್ರವಾರ, ಸೆಪ್ಟೆಂಬರ್‌ 26

ಬೆಳಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ದೂರದ ಒಂದು ಜಾಗಕ್ಕೆ ಹೋಗಿ ಅಲ್ಲಿ ಪ್ರಾರ್ಥನೆ ಮಾಡೋಕೆ ಶುರುಮಾಡಿದನು.—ಮಾರ್ಕ 1:35.

ಯೇಸು ಭೂಮಿಯಲ್ಲಿ ಸೇವೆ ಮಾಡ್ತಿದ್ದಾಗ ಯೆಹೋವನಿಗೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ದನು. ಆತನು ಎಷ್ಟೇ ಬಿಜ಼ಿ ಆಗಿದ್ರೂ, ಆತನ ಜೊತೆ ತುಂಬ ಜನ್ರು ಇದ್ರೂ ಪ್ರಾರ್ಥನೆ ಮಾಡೋಕೆ ಸಮಯ ಮಾಡ್ಕೊಳ್ತಿದ್ದನು. (ಮಾರ್ಕ 6:31, 45, 46) ಆತನು ಯಾರೂ ಇಲ್ಲದಿದ್ದ ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡ್ತಿದ್ದನು. ಅದಕ್ಕಾಗಿ ಬೆಳಿಗ್ಗೆ ಬೇಗ ಏಳ್ತಿದ್ದನು. ಒಮ್ಮೆ ಆತನು ಒಂದು ದೊಡ್ಡ ತೀರ್ಮಾನ ಮಾಡೋ ಮುಂಚೆ ಇಡೀ ರಾತ್ರಿ ಪ್ರಾರ್ಥನೆ ಮಾಡಿದ್ದನು. (ಲೂಕ 6:12, 13) ಆತನು ಸಾಯೋ ಹಿಂದಿನ ರಾತ್ರಿ ಕೂಡ ಪದೇ ಪದೇ ಪ್ರಾರ್ಥನೆ ಮಾಡಿದ್ದನು. ತನಗೆ ಕೊಟ್ಟ ಕೆಲಸನ ಮಾಡಿ ಮುಗಿಸೋಕೆ ಶಕ್ತಿ ಕೊಡಪ್ಪಾ ಅಂತ ಬೇಡ್ಕೊಂಡನು. (ಮತ್ತಾ. 26:39, 42, 44) ಹೀಗೆ ಆತನು ತನ್ನ ಶಿಷ್ಯರಿಗೆ ಯಾವಾಗ, ಹೇಗೆ ಪ್ರಾರ್ಥನೆ ಮಾಡಬೇಕು ಅಂತ ತೋರಿಸ್ಕೊಟ್ಟನು. ನಮಗೆ ತುಂಬ ಕೆಲಸಗಳು ಇರುತ್ತೆ, ಬಿಜ಼ಿಯಾಗಿ ಇರ್ತೀವಿ. ಆದ್ರೂ ನಾವು ಪ್ರಾರ್ಥನೆ ಮಾಡೋಕೆ ಯೇಸು ತರ ಸಮಯ ಮಾಡ್ಕೊಬೇಕು. ನಾವು ಬೆಳಿಗ್ಗೆ ಬೇಗ ಎದ್ದು ಪ್ರಾರ್ಥನೆ ಮಾಡಬಹುದು ಅಥವಾ ರಾತ್ರಿ ಮಲಗೋ ಮುಂಚೆ ಪ್ರಾರ್ಥನೆ ಮಾಡಬಹುದು. ಹೀಗೆ ಮಾಡಿದಾಗ ನಾವು ಯೆಹೋವನ ಹತ್ರ ಮಾತಾಡೋಕೆ ತುಂಬ ಇಷ್ಟಪಡ್ತೀವಿ ಅಂತ ತೋರಿಸ್ಕೊಡ್ತೀವಿ. w23.05 3 ¶4-5

ಶನಿವಾರ, ಸೆಪ್ಟೆಂಬರ್‌ 27

ನಮಗೆ ಕೊಟ್ಟಿರೋ ಪವಿತ್ರಶಕ್ತಿಯಿಂದ ದೇವರು ತನ್ನ ಪ್ರೀತಿಯನ್ನ ನಮ್ಮ ಹೃದಯಗಳಲ್ಲಿ ಸುರಿದಿದ್ದಾನೆ.—ರೋಮ. 5:5.

ಈ ವಚನದಲ್ಲಿ “ಸುರಿದಿದ್ದಾನೆ” ಅಂತ ಇದೆ. ಆ ಪದಕ್ಕೆ ಸ್ವಲ್ಪ ಗಮನ ಕೊಡಿ. ಒಂದು ರೆಫರೆನ್ಸ್‌ ಈ ಪದನ “ನದಿ ತರ ಹರಿದು ಬರೋದು” ಅಂತ ವರ್ಣಿಸುತ್ತೆ. ಇದ್ರಿಂದ ಯೆಹೋವ ದೇವರಿಗೆ ಅಭಿಷಿಕ್ತರ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತೆ. ಅಭಿಷಿಕ್ತರಿಗೂ “ದೇವರು ಅವ್ರನ್ನ ಪ್ರೀತಿಸ್ತಾನೆ” ಅಂತ ಚೆನ್ನಾಗಿ ಗೊತ್ತು. (ಯೂದ 1) ಅದಕ್ಕೇ ಯೋಹಾನ “ದೇವರು ನಮಗೆ ಎಂಥ ಪ್ರೀತಿ ತೋರಿಸಿದ್ದಾನೆ ಅಂತ ನೋಡಿ. ದೇವರ ಮಕ್ಕಳು ಅಂತ ಕರಿಸ್ಕೊಳ್ಳೋ ಸುಯೋಗವನ್ನ ನಮಗೆ ಕೊಟ್ಟಿದ್ದಾನೆ” ಅಂತ ಬರೆದ. (1 ಯೋಹಾ. 3:1) ಆದ್ರೆ ಯೆಹೋವ ಅಭಿಷಿಕ್ತರನ್ನ ಮಾತ್ರ ಪ್ರೀತಿಸ್ತಾನಾ? ಇಲ್ಲ, ನಮ್ಮೆಲ್ರನ್ನೂ ಪ್ರೀತಿಸ್ತಾನೆ. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಬಹುದು? ಆತನು ನಮಗೋಸ್ಕರ ಬಿಡುಗಡೆ ಬೆಲೆಯ ಏರ್ಪಾಡು ಮಾಡಿದ್ದಾನೆ. ಇಂಥ ಪ್ರೀತಿನ ಬೇರೆ ಯಾರಿಂದನೂ ತೋರಿಸೋಕಾಗಲ್ಲ.—ಯೋಹಾ. 3:16; ರೋಮ. 5:8. w24.01 28 ¶9-10

ಭಾನುವಾರ, ಸೆಪ್ಟೆಂಬರ್‌ 28

ನಾನು ಸಹಾಯಕ್ಕಾಗಿ ಕೂಗೋ ದಿನ ನನ್ನ ಶತ್ರುಗಳು ವಾಪಸ್‌ ಹೋಗ್ತಾರೆ. ದೇವರು ನನ್ನ ಪಕ್ಷದಲ್ಲಿದ್ದಾನೆ. ಇದ್ರ ಮೇಲೆ ನನಗೆ ಯಾವ ಸಂಶಯನೂ ಇಲ್ಲ.—ಕೀರ್ತ. 56:9.

ಈ ವಚನ ದಾವೀದನಿಗೆ ಭಯದಿಂದ ಹೊರಗೆ ಬರೋಕೆ ಸಹಾಯ ಮಾಡಿದ ಇನ್ನೊಂದು ವಿಷ್ಯದ ಬಗ್ಗೆ ಹೇಳುತ್ತೆ. ಅವನ ಜೀವಕ್ಕೆ ತುಂಬ ಅಪಾಯ ಇದ್ರೂ ಯೆಹೋವ ದೇವರು ತನಗೋಸ್ಕರ ಮುಂದೆ ಏನೆಲ್ಲ ಮಾಡ್ತಾನೆ ಅನ್ನೋದ್ರ ಬಗ್ಗೆ ದಾವೀದ ಯೋಚಿಸಿದ. ಅಷ್ಟೇ ಅಲ್ಲ, ಯೆಹೋವ ಸರಿಯಾದ ಸಮಯಕ್ಕೆ ತನ್ನನ್ನ ಕಾಪಾಡೇ ಕಾಪಾಡ್ತಾನೆ ಅನ್ನೋ ಗ್ಯಾರಂಟಿನೂ ಅವನಿಗಿತ್ತು. ಯಾಕಂದ್ರೆ ಇಸ್ರಾಯೇಲಿನ ಮುಂದಿನ ರಾಜ ದಾವೀದನೇ ಅಂತ ಯೆಹೋವ ಈಗಾಗ್ಲೇ ಹೇಳಿದ್ದನು. (1 ಸಮು. 16:1, 13) ಯೆಹೋವ ಕೊಟ್ಟ ಮಾತು ನಿಜ ಆಗೇ ಆಗುತ್ತೆ ಅಂತ ದಾವೀದ ನಂಬಿದ್ದ. ಯೆಹೋವ ನಿಮಗೂ ಒಂದು ಮಾತು ಕೊಟ್ಟಿದ್ದಾನೆ. ಈಗಿರೋ ಸಮಸ್ಯೆಗಳನ್ನ ಆತನು ಅದ್ಭುತ ಮಾಡಿ ತೆಗೆದು ಹಾಕಲ್ಲ ನಿಜ. ಆದ್ರೆ ಮುಂದೆ ಹೊಸ ಲೋಕದಲ್ಲಿ ಆ ತೊಂದ್ರೆಗಳು ಇಲ್ಲದೆ ಇರೋ ತರ ನೋಡ್ಕೊಳ್ತೀನಿ ಅಂತ ಹೇಳಿದ್ದಾನೆ. (ಯೆಶಾ. 25:7-9) ನಮ್ಮ ನೋವನ್ನ ಮತ್ತು ನೋವು ಕೊಡ್ತಿರೋರನ್ನ ತೆಗೆದು ಹಾಕೋಕೆ, ಕಾಯಿಲೆಗಳನ್ನ ವಾಸಿ ಮಾಡೋಕೆ, ಅಷ್ಟೇ ಅಲ್ಲ ಸತ್ತವ್ರನ್ನ ಎಬ್ಬಿಸೋಕೆ ಯೆಹೋವನಿಗೆ ಶಕ್ತಿ ಇದೆ.—1 ಯೋಹಾ. 4:4. w24.01 6 ¶12-13

ಸೋಮವಾರ, ಸೆಪ್ಟೆಂಬರ್‌ 29

ಯಾರ ತಪ್ಪುಗಳಿಗೆ, ಯಾರ ಪಾಪಗಳಿಗೆ ಕ್ಷಮೆ ಸಿಕ್ಕಿದೆಯೋ ಅಂಥವನು ಖುಷಿಯಾಗಿ ಇರ್ತಾನೆ.—ಕೀರ್ತ. 32:1.

ನೀವು ಯಾಕೆ ಸಮರ್ಪಣೆ ಮಾಡ್ಕೊಂಡ್ರಿ, ದೀಕ್ಷಾಸ್ನಾನ ತಗೊಂಡ್ರಿ ಅಂತ ಆಗಾಗ ನೆನಪಿಸ್ಕೊಳ್ಳಿ. ನೀವು ಬೈಬಲ್‌ ಕಲಿತಾಗ ಇದೇ ಸತ್ಯ ಅಂತ ಯಾಕೆ ಅನಿಸ್ತು ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. ಮೊದ್ಲು, ಯೆಹೋವನ ಬಗ್ಗೆ ತಿಳ್ಕೊಂಡ್ರಿ. ಇದ್ರಿಂದ ಆತನ ಮೇಲೆ ಪ್ರೀತಿ, ಗೌರವ ಮತ್ತು ನಂಬಿಕೆ ಬೆಳೆಸ್ಕೊಂಡ್ರಿ. ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ರಿ. ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಬೇಕು ಅಂತ ಮನಸಾರೆ ಬದಲಾವಣೆಗಳನ್ನ ಮಾಡ್ಕೊಂಡ್ರಿ. ಯೆಹೋವ ನಿಮ್ಮನ್ನ ಕ್ಷಮಿಸ್ತಾನೆ ಅಂತ ಗೊತ್ತಾದಾಗ ನಿಮಗೆ ನೆಮ್ಮದಿ ಆಯ್ತು. (ಕೀರ್ತ. 32:2) ಆಮೇಲೆ ಕೂಟಗಳಿಗೆ ಬರೋಕೆ ಶುರು ಮಾಡಿದ್ರಿ. ಕಲಿತ ವಿಷ್ಯಗಳನ್ನ ಬೇರೆಯವ್ರಿಗೂ ಹೇಳಿದ್ರಿ. ಹೀಗೆ ಯೆಹೋವನ ಪಕ್ಷದಲ್ಲಿ ನಿಂತ್ಕೊಬೇಕು ಅಂತ ತೀರ್ಮಾನ ಮಾಡಿ ದೀಕ್ಷಾಸ್ನಾನ ತಗೊಂಡ್ರಿ. ಅವತ್ತಿಂದ ಇವತ್ತಿನ ತನಕ ನೀವು ಜೀವದ ದಾರಿಯಲ್ಲಿ ನಡೀತಾ ಇದ್ದೀರ. ಇದನ್ನೆಲ್ಲ ನೆನಸ್ಕೊಂಡಾಗ ‘ಅದೇನೇ ಆದ್ರೂ ಈ ದಾರಿನ ಬಿಟ್ಟುಹೋಗಬಾರದು’ ಅನ್ನೋ ನಿಮ್ಮ ನಿರ್ಧಾರ ಇನ್ನೂ ಗಟ್ಟಿ ಆಗುತ್ತೆ. (ಮತ್ತಾ. 7:13, 14) ಎಷ್ಟೇ ಕಷ್ಟ ಬಂದ್ರೂ ಯೆಹೋವನ ಆಜ್ಞೆಗಳನ್ನ ಪಾಲಿಸಬೇಕು. ಆತನನ್ನ ಮಾತ್ರ ಆರಾಧಿಸಬೇಕು. ಹೀಗೆ ನಾವು ಸ್ಥಿರವಾಗಿ ಇರಬೇಕು. w23.07 17 ¶14; 19 ¶19

ಮಂಗಳವಾರ, ಸೆಪ್ಟೆಂಬರ್‌ 30

ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.—1 ಕೊರಿಂ. 10:13.

ಸಮರ್ಪಣೆ ಸಮಯದಲ್ಲಿ ನೀವು ಮಾಡಿದ ಪ್ರಾರ್ಥನೆಯನ್ನ ನೆನಸ್ಕೊಂಡಾಗ ಕೆಟ್ಟ ಆಸೆಗಳು ನಿಮ್ಮ ಮನಸ್ಸಲ್ಲಿ ಬರದೇ ಇರೋ ತರ ನೋಡ್ಕೊಳ್ಳೋಕೆ ಆಗುತ್ತೆ. ಉದಾಹರಣೆಗೆ, ಮದುವೆ ಆಗಿರೋರ ಜೊತೆ ನೀವು ಚೆಲ್ಲಾಟ ಆಡೋಕೆ ಹೋಗಲ್ಲ. ಯಾಕಂದ್ರೆ ಇಂಥ ವಿಷ್ಯಗಳನ್ನ ಮಾಡಲ್ಲ ಅಂತ ಈಗಾಗ್ಲೆ ನೀವು ಯೆಹೋವನಿಗೆ ಮಾತು ಕೊಟ್ಟಿದ್ದೀರ. ಇಂಥ ಕೆಟ್ಟ ಆಸೆಗಳು ನಿಮ್ಮ ಹೃದಯದಲ್ಲಿ ಬೆಳಿದೇ ಇರೋ ತರ ನೋಡ್ಕೊಂಡ್ರೆ, ಅದ್ರಿಂದ ಹೊರಗೆ ಬರೋಕೆ ಆಮೇಲೆ ನೀವು ಕಷ್ಟ ಪಡಬೇಕಾದ ಪರಿಸ್ಥಿತಿ ಬರಲ್ಲ. ಹೀಗೆ “ಕೆಟ್ಟವರ ದಾರಿಯಲ್ಲಿ” ಕಾಲು ಇಡದೆ ನೀವು “ದೂರ” ಇರ್ತೀರ. (ಜ್ಞಾನೋ. 4:14, 15) ಯೇಸು ಕೂಡ ಯಾವಾಗ್ಲೂ ಯೆಹೋವನಿಗೆ ಏನಿಷ್ಟಾನೋ ಅದನ್ನೇ ಮಾಡಬೇಕು ಅಂತ ತೀರ್ಮಾನ ಮಾಡಿದ್ದನು. ನೀವೂ ಯೇಸು ತರ ಇದ್ರೆ ಯೆಹೋವನಿಗೆ ಇಷ್ಟ ಆಗದೇ ಇರೋ ವಿಷ್ಯಗಳನ್ನ ಯಾವತ್ತೂ ಮಾಡೋಕೆ ಹೋಗಲ್ಲ, ತಕ್ಷಣ ಅದನ್ನ ‘ಬೇಡ’ ಅಂತ ಹೇಳ್ತೀರ. (ಮತ್ತಾ. 4:10; ಯೋಹಾ. 8:29) ನಿಜ ಹೇಳಬೇಕಂದ್ರೆ ಕಷ್ಟ ಪರೀಕ್ಷೆಗಳು ಬಂದಾಗ್ಲೇ ನಾವು ಯೇಸು ತರ ನಡ್ಕೊಳ್ಳೋಕೆ ತೀರ್ಮಾನ ಮಾಡಿದ್ದೀವಿ ಅಂತ ತೋರಿಸೋಕೆ ಆಗೋದು. ಯೇಸು ತರ ನಡ್ಕೊಳ್ಳೋಕೆ ಯೆಹೋವನೂ ನಿಮಗೆ ಸಹಾಯ ಮಾಡ್ತಾನೆ. w24.03 9-10 ¶8-10

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ