ಶಾಂತಿಯ ಸುವಾರ್ತೆಯು ಚೀಯಾಪಸ್ ಪರ್ವತ ಪ್ರದೇಶಕ್ಕೆ ತಲಪುತ್ತದೆ
“ಚೀಯಾಪಸ್ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಕಗ್ಗೊಲೆಯನ್ನು ಯಾರು ಬೇಕಾದರೂ ಜ್ಞಾಪಿಸಿಕೊಳ್ಳಸಾಧ್ಯವಿದೆ. ಅಲ್ಲಿ ನಡೆದ ಕಗ್ಗೊಲೆಯಲ್ಲಿ, 13 ಶಿಶುಗಳೂ ಸೇರಿದಂತೆ 45 ಮಂದಿ ಅಸಹಾಯಕ ರೈತರು, . . . ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪಿನ ಹತ್ಯೆಗೆ ಬಲಿಯಾದರು.” 1997, ಡಿಸೆಂಬರ್ 22ರಂದು, ಚೀಯಾಪಸ್ ರಾಜ್ಯದ ಆಕ್ಟಿಆಲ್ನಲ್ಲಿ ನಡೆದ ಈ ಘಟನೆಯನ್ನು “ಎಲ್ ಯೂನೀವರ್ಸಾಲ್” ವಾರ್ತಾಪತ್ರಿಕೆಯು ಈ ರೀತಿ ವರದಿಸಿತು.
ಚೀಯಾಪಸ್ ಎಂಬುದು ಮೆಕ್ಸಿಕೊದ ದಕ್ಷಿಣ ತುದಿಯಲ್ಲಿರುವ ರಾಜ್ಯವಾಗಿದೆ. ಇದು ಗ್ವಾಟೆಮಾಲದ ಗಡಿಯ ಪಕ್ಕದಲ್ಲೇ ಇದೆ. ದೀರ್ಘಕಾಲದಿಂದಲೂ ಬಡತನ ಹಾಗೂ ದಾರಿದ್ರ್ಯವು ಈ ರಾಜ್ಯದಲ್ಲಿ ಇತ್ತು. 1994ರಲ್ಲಿ, ಸ್ಥಳೀಯ ಮಾಯ ಇಂಡಿಯನ್ನರ ಒಂದು ಗುಂಪು ಸರಕಾರದ ವಿರುದ್ಧ ದಂಗೆಯೆದ್ದಿತು. ದಂಗೆಯೆದ್ದ ಈ ಶಸ್ತ್ರಸಜ್ಜಿತ ಗುಂಪು, ಎಕರ್ಸೀಟೊ ಸಾಪಾಟೀಸ್ಟಾ ಡೇ ಲೀಬರಾಸ್ಯಾನ್ ನಾಸಿಯೋನಲ್ (EZLN, ಅಂದರೆ ನ್ಯಾಷನಲ್ ಲಿಬರೇಷನ್ ಸಾಪಾಟೀಸ್ಟಾ ಆರ್ಮಿ) ಎಂಬ ಪಕ್ಷವನ್ನು ರಚಿಸಿತು. ಶಾಂತಿಯಿಂದ ಈ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿರುವ ಸಮಾಲೋಚನೆಗಳು ತುಂಬ ನಿಧಾನಗತಿಯಲ್ಲಿ ಸಾಗುತ್ತಿದ್ದವು. ಈ ದಂಗೆಕೋರರ ಮತ್ತು ಸರಕಾರದ ಸೈನ್ಯಗಳ ದಾಳಿಗಳು ಹಾಗೂ ಆಕ್ರಮಣಗಳ ಫಲಿತಾಂಶವಾಗಿ, ರಕ್ತಪಾತಗಳು ಹಾಗೂ ಮರಣಗಳು ಸಂಭವಿಸಿದವು. ಈ ಗಲಭೆಯು, ಆ ಕ್ಷೇತ್ರದಲ್ಲಿ ವಾಸವಾಗಿದ್ದ ಅನೇಕಾನೇಕ ರೈತರು ಸುರಕ್ಷೆಗಾಗಿ ಪಲಾಯನಗೈಯುವಂತೆ ಮಾಡಿತು.
ರಾಜ್ಯದಾದ್ಯಂತ ಇಂತಹ ಅನಿರೀಕ್ಷಿತ ಪರಿಸ್ಥಿತಿ ಇತ್ತಾದರೂ, ಶಾಂತಿಪ್ರಿಯರಾದ ಜನರ ಒಂದು ಗುಂಪು ಚೀಯಾಪಸ್ ಪರ್ವತ ಪ್ರದೇಶದಲ್ಲಿ ವಾಸಿಸುತ್ತಿದೆ. ಈ ಗುಂಪಿನ ಜನರು ರಾಜಕೀಯ ಹೋರಾಟದ ವಿಷಯದಲ್ಲಿ ತಟಸ್ಥರಾಗಿ ಉಳಿದಿದ್ದಾರೆ. ಮತ್ತು ಇವರು ಅತ್ಯಂತ ಹುರುಪಿನಿಂದ ಜನರ ಗಮನವನ್ನು ದೇವರ ರಾಜ್ಯದ ಕಡೆಗೆ ಸೆಳೆಯುತ್ತಿದ್ದಾರೆ. ಸ್ಥಳಿಕವಾಗಿ ಮತ್ತು ಭೂವ್ಯಾಪಕವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಏಕಮಾತ್ರ ನಿರೀಕ್ಷೆ ದೇವರ ರಾಜ್ಯವೇ ಆಗಿದೆ ಎಂದು ಅವರು ಸಾರುತ್ತಾರೆ. (ದಾನಿಯೇಲ 2:44) ಅವರು ಯಾರು? ಯೆಹೋವನ ಸಾಕ್ಷಿಗಳೇ. ಅವರು ಯೇಸು ಕೊಟ್ಟ ಆಜ್ಞೆಗೆ ವಿಧೇಯರಾಗಿದ್ದಾರೆ. ಅವರು ದೇವರ ರಾಜ್ಯದ ಸುವಾರ್ತೆಯನ್ನು ಚೀಯಾಪಸ್ ಪರ್ವತ ಪ್ರದೇಶದ ಬಹುದೂರದಲ್ಲಿರುವ ಭಾಗಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. (ಮತ್ತಾಯ 24:14) ಅಂತಹ ಸನ್ನಿವೇಶಗಳ ಕೆಳಗೆ ಸಾರುವುದು ಹೇಗಿತ್ತು, ಮತ್ತು ಅವರು ಸುವಾರ್ತೆಯನ್ನು ಸಾರಿದ್ದರ ಫಲಿತಾಂಶಗಳೇನಾಗಿದ್ದವು?
“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು”
ಆಡಾಲ್ಫೋ ಎಂಬ ಹೆಸರಿನ ಯುವಕನು, ಇತ್ತೀಚೆಗಷ್ಟೇ ಒಬ್ಬ ರಾಜ್ಯ ಪ್ರಚಾರಕನಾಗಿದ್ದನು. ಒಂದು ದಿನ ಅವನು ಓಕೋಸೀಂಗೊದಲ್ಲಿದ್ದ ರೇಡಿಯೋ ಸ್ಟೇಷನ್ನಲ್ಲಿ ಕೆಲಸಮಾಡುತ್ತಿದ್ದನು. ಆಗ, ಇದ್ದಕ್ಕಿದ್ದಂತೆ ಯಾರೋ ಜೋರಾಗಿ ಬಾಗಿಲು ಬಡಿಯುತ್ತಿರುವ ಶಬ್ದವಾಯಿತು. ಅವನು ಬಾಗಿಲು ತೆರೆದಾಗ, ಮುಸುಕುಧಾರಿ ವ್ಯಕ್ತಿಗಳ ಒಂದು ಗುಂಪು ಒಳಗೆ ನುಗ್ಗಿತು ಮತ್ತು ಅವರಲ್ಲಿ ಕೆಲವರು ತಮ್ಮ ಬಂದೂಕುಗಳನ್ನು ಆಡಾಲ್ಫೋನ ತಲೆಗೆ ಗುರಿಯಿಟ್ಟರು. ಇನ್ನು ಕೆಲವರು ರೇಡಿಯೋ ಟ್ರಾನ್ಸ್ಮಿಷನ್ ರೂಮಿಗೆ ಹೋಗಿ, ಅಲ್ಲಿನ ಉಪಕರಣಗಳನ್ನು ಕಸಿದುಕೊಂಡರು. ಹಾಗೂ ತಾವು ಸರಕಾರದ ವಿರುದ್ಧ ಯುದ್ಧವನ್ನು ಘೋಷಿಸಿದ್ದೇವೆಂದು ರೇಡಿಯೋದ ಮೂಲಕ ತಿಳಿಸಿದರು.
ತದನಂತರ ಆಡಾಲ್ಫೋನ ಕಡೆಗೆ ತಿರುಗಿದ ಶಸ್ತ್ರಸಜ್ಜಿತ ವ್ಯಕ್ತಿಗಳು, ನೀನು ನಮ್ಮ ಗುಂಪಿಗೆ ಸೇರಿಕೋ ಎಂದು ಅಪ್ಪಣೆಕೊಟ್ಟರು. ಆಗ “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು” ಎಂದು ಆಡಾಲ್ಫೋ ಉತ್ತರಿಸಿದನು. ಆದರೆ ಆ ಸಮಯದಲ್ಲಿ ಅವನಿಗೆ ಇನ್ನೂ ದೀಕ್ಷಾಸ್ನಾನವಾಗಿರಲಿಲ್ಲ. ಶಾಂತಿಯ ಏಕಮಾತ್ರ ನಿರೀಕ್ಷೆಯು ದೇವರ ರಾಜ್ಯವಾಗಿದೆ ಎಂದು ಅವನು ಅವರಿಗೆ ವಿವರಿಸಿದನು. ಮತ್ತು ಅವರು ಕೊಡಲು ಬಂದ ಸಮವಸ್ತ್ರವನ್ನು ಹಾಗೂ ಬಂದೂಕನ್ನು ಸ್ವೀಕರಿಸಲು ನಿರಾಕರಿಸಿದನು. ಅವನ ದೃಢ ನಿಲುವನ್ನು ನೋಡಿದ ಅವರು ಅವನನ್ನು ಹೋಗಲು ಬಿಟ್ಟರು. ಆ ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಾ ಆಡಾಲ್ಫೋ ಹೇಳುವುದು: “ನಿಜವಾಗಿಯೂ ಆ ಘಟನೆಯು ನನ್ನ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಿತು.”
ಕಾಲಕ್ರಮೇಣ ಅಲ್ಲಿನ ಸನ್ನಿವೇಶವು ಸ್ವಲ್ಪ ಸುಧಾರಿಸಿತು. ಆದರೂ ಆ ಕ್ಷೇತ್ರವು ಇನ್ನೂ ಮಿಲಿಟರಿ ನಿಯಂತ್ರಣದ ಕೆಳಗಿತ್ತು. ಈ ಎಲ್ಲ ಸಮಸ್ಯೆಗಳ ಮಧ್ಯೆಯೂ, ಆ ಕ್ಷೇತ್ರದಲ್ಲಿದ್ದ ಕ್ರೈಸ್ತರ ಒಂದು ಪ್ರತ್ಯೇಕ ಗುಂಪಿನೊಂದಿಗೆ ಕೆಲಸಮಾಡುವಂತೆ ಸ್ಥಳಿಕ ಸಭೆಯ ಹಿರಿಯರು ಆಡಾಲ್ಫೋನಿಗೆ ಹೇಳಿದಾಗ, ಅವನು ಸಂತೋಷದಿಂದ ಆ ನೇಮಕವನ್ನು ಸ್ವೀಕರಿಸಿದನು. ಆಡಾಲ್ಫೋನು ಅಲ್ಲಿಗೆ ತಲಪುವ ಮುಂಚೆ ದಾರಿಯಲ್ಲಿ ಅನೇಕ ಚೆಕ್ಪಾಯಿಂಟ್ಗಳನ್ನು ಹಾದುಹೋಗಬೇಕಾಗಿತ್ತು. ಹೀಗೆ ಹೋಗುತ್ತಿರುವಾಗ, ತಾನು ಒಬ್ಬ ಯೆಹೋವನ ಸಾಕ್ಷಿಯಾಗಿದ್ದೇನೆ ಎಂದು ಅವನು ತನ್ನನ್ನು ಗುರುತಿಸಿಕೊಂಡಾಗ, ಸೈನಿಕರು ಅವನಿಗೆ ಗೌರವವನ್ನು ತೋರಿಸಿದರು. ಸಮಯಾನಂತರ ಅವನು ದೀಕ್ಷಾಸ್ನಾನ ಪಡೆದುಕೊಂಡನು. ಮತ್ತು ಆ ಪ್ರತ್ಯೇಕ ಗುಂಪು ಯೆಹೋವನ ಸಾಕ್ಷಿಗಳ ಒಂದು ಸಭೆಯಾಗಿ ರೂಪುಗೊಳ್ಳುವಂತೆ ಸಹಾಯಮಾಡುವುದರಲ್ಲಿ ತೃಪ್ತಿಯನ್ನು ಕಂಡುಕೊಂಡನು. ಆಡಾಲ್ಫೋ ಹೇಳಿದ್ದು: “ಈಗ ನಾನು ದೀಕ್ಷಾಸ್ನಾನ ಪಡೆದುಕೊಂಡಿರುವುದರಿಂದ, ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಎಂದು ದೃಢನಿಶ್ಚಯದಿಂದ ಹೇಳಬಲ್ಲೆ!”
“ಯೆಹೋವನು ನಮ್ಮನ್ನು ಬಲಪಡಿಸಿದನು”
ಇಝೆಡ್ಎಲ್ಎನ್ ಗುಂಪು ರೇಡಿಯೋ ಮೂಲಕ ಸರಕಾರದ ವಿರುದ್ಧ ಯುದ್ಧವನ್ನು ಘೋಷಿಸಿದ ಸ್ವಲ್ಪ ಸಮಯಾನಂತರ, ಆ ಪಟ್ಟಣದ ಜನರು ಪಲಾಯನಮಾಡಿದರು. ಫ್ರಾನ್ಸಿಸ್ಕೋ ಎಂಬ ಹೆಸರಿನ ಪೂರ್ಣ ಸಮಯದ ಶುಶ್ರೂಷಕನು ಅಥವಾ ಪಯನೀಯರನು ತನ್ನ ಪತ್ನಿಯೊಂದಿಗೆ ಆ ಪಟ್ಟಣದಲ್ಲಿ ವಾಸಿಸುತ್ತಿದ್ದನು. ತಮ್ಮ ಮುಂದಿದ್ದ ಕರಾಳ ಸಮಯದಲ್ಲಿ ಯೆಹೋವನು ತನ್ನನ್ನೂ ತನ್ನ ಪತ್ನಿಯನ್ನೂ ಬಲಪಡಿಸಿದ ರೀತಿಯನ್ನು ಅವನು ವಿವರಿಸಿದನು.
“ಕಾಲುದಾರಿಯಲ್ಲಿ ಮೂರು ತಾಸು ಹಿಡಿಯುವಷ್ಟು ದೂರದಲ್ಲಿದ್ದ ಒಂದು ಸ್ಥಳದಲ್ಲಿ ನಾವು ಆಶ್ರಯವನ್ನು ಪಡೆದುಕೊಂಡೆವು. ಅಲ್ಲಿ ಒಂದು ಸಭೆಯಿದ್ದುದರಿಂದ, ನಾವು ಸಹೋದರರೊಂದಿಗೆ ತಂಗಸಾಧ್ಯವಿತ್ತು. ಸ್ವಲ್ಪದರಲ್ಲೇ, ಪಾಲಂಕಾ ಎಂಬ ಹಳ್ಳಿಯಲ್ಲಿ ಒಂದು ಸರ್ಕಿಟ್ ಸಮ್ಮೇಳನವು ನಡೆಯಲಿತ್ತು. ಆ ಸಮ್ಮೇಳನದಲ್ಲಿ ಪಯನೀಯರರಿಗೋಸ್ಕರ ಏರ್ಪಡಿಸಲ್ಪಟ್ಟಿದ್ದ ವಿಶೇಷ ಕೂಟಕ್ಕೆ ಹಾಜರಾಗಲೇಬೇಕೆಂಬುದು ನನ್ನ ಹಾಗೂ ನನ್ನ ಪತ್ನಿಯ ತೀರ್ಮಾನವಾಗಿತ್ತು. ಆದರೆ ಸಮ್ಮೇಳನಕ್ಕೆ ಹೋಗುವ ದಾರಿಯನ್ನು ಇಝೆಡ್ಎಲ್ಎನ್ ಗುಂಪಿನವರು ಅಡ್ಡಗಟ್ಟಿದ್ದಾರೆ ಎಂಬುದು ನಮಗೆ ಗೊತ್ತಾಯಿತು. ಆದುದರಿಂದ, ಕಾಡುಮಾರ್ಗವಾಗಿ ಆ ಸ್ಥಳವನ್ನು ತಲಪಲು ನಿರ್ಧರಿಸಿದೆವು. ಆ ದಾರಿಯ ಮೂಲಕ ಸಮ್ಮೇಳನದ ಸ್ಥಳಕ್ಕೆ ತಲಪಲು ಒಂಬತ್ತು ತಾಸುಗಳು ಹಿಡಿದವು. ಪಯನೀಯರ್ ಕೂಟದ ಸಮಯಕ್ಕೆ ಸರಿಯಾಗಿ ನಾವು ಇಲ್ಲಿಗೆ ಬಂದುಮುಟ್ಟಿದೆವು. ಈ ಕೂಟದಲ್ಲಿ ಹಾಗೂ ಇಡೀ ಸಮ್ಮೇಳನ ಕಾರ್ಯಕ್ರಮದಲ್ಲಿ ನಾವು ತುಂಬ ಆನಂದಿಸಿದೆವು.
“ಸಮ್ಮೇಳನವನ್ನು ಮುಗಿಸಿ ಹಿಂದಿರುಗಿದಾಗ, ನಮ್ಮ ಮನೆಯು ಸಂಪೂರ್ಣವಾಗಿ ಸುಟ್ಟುಹೋಗಿತ್ತು ಮತ್ತು ನಮ್ಮ ಪ್ರಾಣಿಗಳನ್ನು ಕದಿಯಲಾಗಿತ್ತು. ಬಟ್ಟೆಗಳ ಒಂದು ಚಿಕ್ಕ ಬ್ಯಾಗ್ ಮಾತ್ರ ನಮಗೆ ಸಿಕ್ಕಿತು. ಈ ನಷ್ಟವನ್ನು ನೋಡಿ ನಮಗೆ ದುಃಖವಾಯಿತು. ಆದರೆ ಓಕೋಸೀಂಗೊದಲ್ಲಿದ್ದ ಸಹೋದರರು ತಮ್ಮ ಮನೆಗಳಲ್ಲಿ ನಮಗೆ ಆಶ್ರಯ ನೀಡಿದರು. ಅಷ್ಟುಮಾತ್ರವಲ್ಲ, ಕೆಲವೊಂದು ಕೆಲಸಗಳನ್ನು ಸಹ ನಮಗೆ ಕಲಿಸಿದರು. ರೈತರಾಗಿದ್ದ ನಾವು ಈ ಮುಂಚೆ ಎಂದೂ ಈ ಕೆಲಸಗಳನ್ನು ಮಾಡಿರಲಿಲ್ಲ. ಒಬ್ಬ ಸಹೋದರನು ನನಗೆ ಫೋಟೋಗ್ರಫಿಯನ್ನು ಕಲಿಸಿಕೊಟ್ಟನು. ಇನ್ನೊಬ್ಬ ಸಹೋದರನು ಷೂಗಳನ್ನು ರಿಪೇರಿ ಮಾಡುವ ರೀತಿಯನ್ನು ಕಲಿಸಿಕೊಟ್ಟನು. ಆದುದರಿಂದಲೇ, ನಾನು ಮತ್ತು ನನ್ನ ಪತ್ನಿಯು ಇಷ್ಟರ ತನಕ ಪಯನೀಯರ್ ಸೇವೆಯನ್ನು ಮುಂದುವರಿಸಲು ಹಾಗೂ ನಮ್ಮನ್ನು ಪೋಷಿಸಿಕೊಳ್ಳಲು ಶಕ್ತರಾಗಿದ್ದೇವೆ. ಈ ಹಿಂದೆ ನಡೆದ ಘಟನೆಯನ್ನು ನಾವು ಜ್ಞಾಪಿಸಿಕೊಳ್ಳುವಾಗ, ಅಂತಹ ಸಮಯದಲ್ಲಿ ನಾವು ತಾಳ್ಮೆಯನ್ನು ತೋರಿಸುವುದು ಸುಲಭವಾಗಿರಲಿಲ್ಲ; ಆದರೆ ಯೆಹೋವನು ನಮ್ಮನ್ನು ಬಲಪಡಿಸಿದನು ಎಂಬುದನ್ನು ನಾವು ಮನಗಂಡಿದ್ದೇವೆ.”
ಸಾರುವ ಕೆಲಸದ ಪ್ರತಿಫಲ
ಚೀಯಾಪಸ್ ರಾಜ್ಯದಲ್ಲಿರುವ ಸಾಕ್ಷಿಗಳು, ಕಷ್ಟತೊಂದರೆಗಳು ಹಾಗೂ ಅಪಾಯಗಳನ್ನು ಎದುರಿಸಿದರೂ, ಆ ಕ್ಷೇತ್ರದಲ್ಲಿರುವ ಜನರಿಗೆ ಸುವಾರ್ತೆಯನ್ನು ಕೊಂಡೊಯ್ಯುವ ವಿಶೇಷ ಪ್ರಯತ್ನದಲ್ಲಿ ಭಾಗವಹಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಉದಾಹರಣೆಗೆ, 1995ರ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ, ರಾಜ್ಯ ವಾರ್ತೆ ನಂ. 34ನ್ನು ವಿತರಿಸುವ ಕಾರ್ಯಾಚರಣೆಯಲ್ಲಿ ಲೋಕವ್ಯಾಪಕವಾಗಿರುವ ತಮ್ಮ ಜೊತೆ ಕ್ರೈಸ್ತರೊಂದಿಗೆ ಸ್ಥಳಿಕ ಸಾಕ್ಷಿಗಳು ಜೊತೆಗೂಡಿದರು. ಜೀವನವು ಇಷ್ಟೊಂದು ಸಮಸ್ಯೆಗಳಿಂದ ತುಂಬಿರುವುದೇಕೆ? ಎಂಬ ಅದರ ಮೇಲ್ಬರಹವು ಸೂಕ್ತವಾದದ್ದಾಗಿತ್ತು.
ಈ ಕಾರ್ಯಾಚರಣೆಯ ಸಮಯದಲ್ಲಿ, ಪ್ವೇಬ್ಲೋ ನ್ವೇಬೋ ಎಂಬ ಪಶುಪಾಲನ ಕ್ಷೇತ್ರದಲ್ಲಿ ರೆಗ್ಯುಲರ್ ಪಯನೀಯರ್ ಸೀರೊಗೆ, ಆಸಕ್ತಿ ತೋರಿಸಿದ ಒಂದು ಕುಟುಂಬವು ಸಿಕ್ಕಿತು. ಮೂರು ದಿನಗಳ ನಂತರ ಪುನಃ ಹಿಂದಿರುಗಿದಾಗ, ಅವರೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದನು. ಆದರೆ ಇನ್ನೊಂದು ದಿನ ಸೀರೋ ಮತ್ತು ಅವನ ಸಂಗಡಿಗನು ಆ ಅಭ್ಯಾಸಕ್ಕೆ ಹೋದಾಗ, ಮನೆಯ ಯಜಮಾನನು ಮನೆಯಲ್ಲಿರಲಿಲ್ಲ. ಆದರೆ, ಮನೆಯ ಯಜಮಾನನಿಗೆ ಹಾನಿಯನ್ನು ಮಾಡಲಿಕ್ಕಾಗಿ ಮುಸುಕುಧಾರಿ ವ್ಯಕ್ತಿಗಳ ಒಂದು ಗುಂಪು ಅಲ್ಲಿ ಕಾಯುತ್ತಿತ್ತು. ಆ ವ್ಯಕ್ತಿಗಳು, ನೀವು ಯಾರನ್ನು ಹುಡುಕುತ್ತಿದ್ದೀರಿ ಎಂದು ಸೀರೋ ಮತ್ತು ಅವನ ಸಂಗಡಿಗನನ್ನು ಕೇಳಿದರು ಮತ್ತು ಅವರನ್ನು ಕೊಲ್ಲುವ ಬೆದರಿಕೆ ಹಾಕಿದರು. ಮನಸ್ಸಿನಲ್ಲೇ ಯೆಹೋವನಿಗೆ ಪ್ರಾರ್ಥನೆ ಮಾಡಿದ ಬಳಿಕ, ತಾವು ಈ ಕುಟುಂಬಕ್ಕೆ ಬೈಬಲಿನ ಕುರಿತು ಕಲಿಸಲು ಬಂದಿದ್ದೇವೆಂದು ಆ ಇಬ್ಬರು ಕ್ರೈಸ್ತರು ಧೈರ್ಯದಿಂದ ಹೇಳಿದರು. ಇದಾದ ಬಳಿಕ ಮುಸುಕುಧಾರಿಗಳು ಅವರಿಗೆ ಹೋಗಲು ಬಿಟ್ಟರು. ಯಾವುದೋ ಕಾರಣದಿಂದ ಆ ಮನೆಯ ಯಜಮಾನನು ಆ ದಿನ ಮನೆಗೆ ಬರಲೇ ಇಲ್ಲ.
ಸುಮಾರು ಮೂರು ವರ್ಷಗಳು ಕಳೆದ ಮೇಲೆ, ಒಂದು ದಿನ ಅದೇ ವ್ಯಕ್ತಿಯು (ಅಂದರೆ ಆ ಮನೆಯ ಯಜಮಾನನು) ತನ್ನ ಮನೆಯ ಬಾಗಿಲಲ್ಲಿ ನಿಂತಿರುವುದನ್ನು ಕಂಡು ಸೀರೋ ಆಶ್ಚರ್ಯಪಟ್ಟನು. ಅವನ ಇಡೀ ಕುಟುಂಬವು ದೀಕ್ಷಾಸ್ನಾನ ಪಡೆದುಕೊಂಡಿದ್ದು, ಈಗ ಅವರು ಗ್ವಾಟೆಮಾಲದಲ್ಲಿರುವ ಒಂದು ಸಭೆಯೊಂದಿಗೆ ಸಹವಾಸಮಾಡುತ್ತಿದ್ದಾರೆ ಎಂಬುದನ್ನು ಕೇಳಿ ಸೀರೋಗೆ ತುಂಬ ಸಂತೋಷವಾಯಿತು! ಅವನ ಹೆಣ್ಣುಮಕ್ಕಳಲ್ಲಿ ಒಬ್ಬಳು ರೆಗ್ಯುಲರ್ ಪಯನೀಯರ್ ಸೇವೆಯನ್ನು ಸಹ ಮಾಡುತ್ತಿದ್ದಳು.
ಆತ್ಮಿಕ ಆಹಾರಕ್ಕಾಗಿ ಗಣ್ಯತೆ
ಚೀಯಾಪಸ್ನಲ್ಲಿ ಕಷ್ಟತೊಂದರೆಗಳು ಇನ್ನೂ ಮುಂದುವರಿಯುತ್ತಿರುವುದಾದರೂ, ಆ ಕ್ಷೇತ್ರದಲ್ಲಿರುವ ಸಾಕ್ಷಿಗಳು ಕೂಟದ ಮಹತ್ವವನ್ನು ನಿಜವಾಗಿಯೂ ಗಣ್ಯಮಾಡುತ್ತಾರೆ ಎಂದು ಒಬ್ಬ ಜಿಲ್ಲಾ ಮೇಲ್ವಿಚಾರಕನು ವರದಿಸುತ್ತಾನೆ. (ಇಬ್ರಿಯ 10:24, 25) ಇತ್ತೀಚಿನ ವಿಶೇಷ ಸಮ್ಮೇಳನ ದಿನದಲ್ಲಿ ಏನು ನಡೆಯಿತು ಎಂಬುದನ್ನು ಅವನು ವರದಿಸುತ್ತಾನೆ. ಈ ಸಮ್ಮೇಳನವು ಬೆಳಗ್ಗೆ ಬೇಗನೆ ಆರಂಭಗೊಳ್ಳುವಂತೆ ಶೆಡ್ಯೂಲ್ ಮಾಡಲಾಗಿತ್ತು; ಹಾಜರಾಗುವವರೆಲ್ಲರೂ ಹಗಲು ಹೊತ್ತಿನಲ್ಲೇ ಸುರಕ್ಷಿತವಾಗಿ ಮನೆಗೆ ಹಿಂದಿರುಗುವುದೇ ಈ ಏರ್ಪಾಡಿನ ಉದ್ದೇಶವಾಗಿತ್ತು. ಕಾಡುಮಾರ್ಗವಾಗಿ ಸಮ್ಮೇಳನದ ಸ್ಥಳಕ್ಕೆ ಆಗಮಿಸಲು ಅವರಲ್ಲಿ ಅನೇಕರಿಗೆ ಸುಮಾರು ಮೂರು ತಾಸುಗಳಿಗಿಂತಲೂ ಹೆಚ್ಚು ನಡೆಯಬೇಕಾಗಿತ್ತು. ಆದರೂ ಬೆಳಗ್ಗೆ 7 ಗಂಟೆಯಷ್ಟಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡಿದ್ದರು. ಹಾಜರಿದ್ದ ಸಭಿಕರಲ್ಲಿ, ಇಝೆಡ್ಎಲ್ಎನ್ ಗುಂಪಿನ ಆರು ಮಂದಿ ಸದಸ್ಯರೂ ಇದ್ದರು. ಅವರು ಕಾರ್ಯಕ್ರಮಕ್ಕೆ ಕಿವಿಗೊಡುತ್ತಾ, ಆನಂದಿಸುತ್ತಾ, ಚಪ್ಪಾಳೆ ಹೊಡೆದು ಸಮ್ಮತಿಯನ್ನು ಸೂಚಿಸುತ್ತಾ ಇದ್ದರು. ಈ ಸಮ್ಮೇಳನಕ್ಕೆ ಹಾಜರಾಗಲು ಅವರು ಸಹ ಮೂರು ತಾಸು ನಡೆದು ಬಂದಿದ್ದರು. ಈ ಗುಂಪಿನ ಇಪ್ಪತ್ತು ಮಂದಿ, ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ನಡೆಸಲ್ಪಟ್ಟ ಕ್ರಿಸ್ತನ ಜ್ಞಾಪಕಾಚರಣೆಗೆ ಸಹ ಹಾಜರಾದರು.
ಗೆರಿಲ್ಲ ತಂಡಕ್ಕೆ ಸೇರಿದ್ದ ಇನ್ನೊಬ್ಬ ಯುವಕನನ್ನು, ಒಂದು ಅರಣ್ಯದ ಸುತ್ತಲೂ ಗಸ್ತು ತಿರುಗುವಂತೆ ಅವನ ನಾಯಕರು ನೇಮಿಸಿದರು. ಅಲ್ಲಿ ವಾಸಿಸುತ್ತಿದ್ದವರಲ್ಲಿ ಹೆಚ್ಚಿನವರು ಯೆಹೋವನ ಸಾಕ್ಷಿಗಳಾಗಿದ್ದರು. ಆ ಯುವಕನು ಈ ಕ್ಷೇತ್ರಕ್ಕೆ ಬಂದಾಗ, ಅಲ್ಲಿನ ನಿವಾಸಿಗಳೆಲ್ಲರೂ ಅಲ್ಲಿಂದ ಓಡಿಹೋಗಿರುವುದು ಅವನಿಗೆ ಗೊತ್ತಾಯಿತು. ಆದುದರಿಂದ, ಅಲ್ಲಿದ್ದ ಒಂದು ಮನೆಯಲ್ಲಿ ಅವನು ವಾಸಿಸತೊಡಗಿದನು. ಅವನಿಗೆ ಹೆಚ್ಚೇನೂ ಕೆಲಸವಿರಲಿಲ್ಲವಾದ್ದರಿಂದ, ಆ ಮನೆಯಲ್ಲಿ ಸಿಕ್ಕಿದ ಕೆಲವು ಪುಸ್ತಕಗಳನ್ನು ತೆಗೆದುಕೊಂಡು ಅವನು ಓದಲು ಆರಂಭಿಸಿದನು. ಇವು ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಾಗಿದ್ದು, ಸಾಕ್ಷಿಗಳು ಇವುಗಳನ್ನು ಬಿಟ್ಟುಹೋಗಿದ್ದರು. ಈ ಯುವಕನು ಒಂಟಿಯಾಗಿದ್ದದರಿಂದ, ತಾನು ಓದುತ್ತಿರುವ ವಿಷಯಗಳ ಬಗ್ಗೆ ಮನನಮಾಡಲು ಅವನಿಗೆ ಸಾಕಷ್ಟು ಸಮಯವು ಸಿಗುತ್ತಿತ್ತು. ತದನಂತರ ಅವನು, ತಾನು ತನ್ನ ಜೀವಿತವನ್ನು ಬದಲಾಯಿಸಬೇಕು ಮತ್ತು ಶಸ್ತ್ರಾಸ್ತ್ರಗಳ ಉಪಯೋಗವನ್ನು ನಿಲ್ಲಿಸಿಬಿಡಬೇಕು ಎಂದು ನಿರ್ಧರಿಸಿದನು. ಆದಷ್ಟು ಬೇಗನೆ ಅವನು ಯೆಹೋವನ ಸಾಕ್ಷಿಗಳನ್ನು ಕಂಡುಕೊಂಡು, ಅವರಿಂದ ಬೈಬಲಿನ ಬಗ್ಗೆ ಕಲಿಯಲು ಆರಂಭಿಸಿದನು. ಆರು ತಿಂಗಳುಗಳೊಳಗೆ, ಅವನು ಇತರರಿಗೆ ಸುವಾರ್ತೆಯನ್ನು ಸಾರತೊಡಗಿದನು. ಅವನು ಹಾಗೂ ಗೆರಿಲ್ಲ ತಂಡವನ್ನು ಅನುಮೋದಿಸುತ್ತಿದ್ದ ಅವನ ಕುಟುಂಬದ ಮೂವರು ಸದಸ್ಯರು ಈಗ ದೀಕ್ಷಾಸ್ನಾನ ಪಡೆದುಕೊಂಡಿರುವ ಕ್ರೈಸ್ತರಾಗಿದ್ದಾರೆ.
ಸಕಾರಾತ್ಮಕ ವಿಷಯಗಳನ್ನು ಪರಿಗಣಿಸುವುದು
ಈ ಹೋರಾಟದಿಂದ ಜನರು ಅನೇಕಾನೇಕ ಕಷ್ಟತೊಂದರೆಗಳನ್ನು ಅನುಭವಿಸಬೇಕಾಗಿತ್ತಾದರೂ, ಸಾರುವ ಕೆಲಸದ ಕಡೆಗಿನ ಅವರ ಮನೋಭಾವದ ಮೇಲೆ ಇದು ಸಕಾರಾತ್ಮಕ ಪ್ರಭಾವವನ್ನು ಬೀರಿತು. ಎಲ್ಲಿ ಹೋರಾಟವು ಆರಂಭವಾಯಿತೋ ಆ ನಗರದಲ್ಲಿದ್ದ ಒಬ್ಬ ಹಿರಿಯನು ಹೇಳುವುದು: “ಕಾದಾಟವು ಆರಂಭವಾಗಿ ಐದು ದಿನಗಳು ಕಳೆದ ಬಳಿಕ, ಈ ನಗರದಲ್ಲಿ ಮತ್ತು ನಗರದ ಹೊರವಲಯದಲ್ಲಿ ನಾವು ಸಾರುವ ಕೆಲಸವನ್ನು ಏರ್ಪಡಿಸಿದೆವು. ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲು ಕಾತುರರಾಗಿದ್ದರು. ನಾವು ಬಹಳಷ್ಟು ಬೈಬಲ್ ಸಾಹಿತ್ಯವನ್ನು ಹಂಚಿದೆವು ಮತ್ತು ಅನೇಕ ಬೈಬಲ್ ಅಭ್ಯಾಸಗಳನ್ನು ಆರಂಭಿಸಿದೆವು. ಒಂದು ಕ್ಷೇತ್ರದಲ್ಲಿ ಮುಂಚೆ ಅನೇಕರು ಸತ್ಯವನ್ನು ವಿರೋಧಿಸುತ್ತಿದ್ದರು. ಆದರೆ, ಈ ಹೋರಾಟದ ಪರಿಣಾಮವಾಗಿ ಈಗ ಅವರು ನಮ್ಮ ಸಂದೇಶಕ್ಕೆ ಕಿವಿಗೊಡುತ್ತಾರೆ, ಬೈಬಲಭ್ಯಾಸ ಮಾಡುತ್ತಾರೆ, ಮತ್ತು ಕೂಟಗಳಿಗೆ ಹಾಗೂ ಸಮ್ಮೇಳನಗಳಿಗೆ ಹಾಜರಾಗುತ್ತಾರೆ.”
ತುಂಬ ಅನಿಶ್ಚಿತ ಸನ್ನಿವೇಶಗಳ ಮಧ್ಯೆಯೂ ತಮ್ಮ ದೇವಪ್ರಭುತ್ವ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿರುವುದರಿಂದ ಸಹೋದರರು ತುಂಬ ಸಂತೋಷಿತರಾಗಿದ್ದಾರೆ. ಅಲ್ಲಿ ಸಾಕ್ಷಿಗಳು ತಮ್ಮ ಸಮ್ಮೇಳನಗಳನ್ನು ನಡೆಸುತ್ತಿರುವುದು ಸರಕಾರೀ ಸೈನ್ಯಗಳಿಗೆ ಹಾಗೂ ಇಝೆಡ್ಎಲ್ಎನ್ ಗುಂಪಿಗೆ ಗೊತ್ತಿದೆ. ಈ ಸಮ್ಮೇಳನಗಳು ಸಾಕ್ಷಿಗಳ ಆತ್ಮಿಕತೆಯನ್ನು ಬಲಪಡಿಸುತ್ತವೆ. ಸಂಚರಣ ಮೇಲ್ವಿಚಾರಕರ ಭೇಟಿಗಳು ಸಹ, ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ಸಾಕ್ಷಿಗಳಿಗೆ ಬಹಳಷ್ಟು ಪ್ರಚೋದನೆಯನ್ನು ನೀಡಿವೆ. ಈ ಹೋರಾಟಗಳಲ್ಲಿ ಒಳಗೂಡಿರುವ ವ್ಯಕ್ತಿಗಳು ಸಹ, ಸಾಕ್ಷಿಗಳು ತಮ್ಮ ಸಾರುವ ಕೆಲಸವನ್ನು ಮುಂದುವರಿಸುತ್ತಾ ಹೋಗುವಂತೆ ಅವರಿಗೆ ಪ್ರೋತ್ಸಾಹ ನೀಡುವುದು ನಿಜವಾಗಿಯೂ ಆಸಕ್ತಿಕರ ಸಂಗತಿಯಾಗಿದೆ.
ಚೀಯಾಪಸ್ನಲ್ಲಿ ವಾಸಿಸುತ್ತಿರುವ ಜನರು ತಾಳಿಕೊಳ್ಳಬೇಕಾಗಿರುವಂತಹ ಪರೀಕ್ಷೆಗಳು ಹಾಗೂ ತೊಂದರೆಗಳು ಕಾಲಕಳೆದಂತೆ ಸ್ವಲ್ಪ ಕಡಿಮೆಯಾಗಿರುವುದಾದರೂ, ಅವು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಏನೇ ಆದರೂ, ಒಂದು ವಿಷಯವಂತೂ ನಿಜ. ಅದೇನೆಂದರೆ, ದೇವರ ವಾಕ್ಯವಾಗಿರುವ ಬೈಬಲಿನ ಶಾಂತಿಯ ಸಂದೇಶವನ್ನು ಜನರಿಗೆ ಕೊಂಡೊಯ್ಯುವ ತಮ್ಮ ಪ್ರಯತ್ನಗಳನ್ನು ಬಿಡದೆ ಮುಂದುವರಿಸುವ ದೃಢನಿರ್ಧಾರವನ್ನು ಅಲ್ಲಿನ ಯೆಹೋವನ ಸಾಕ್ಷಿಗಳು ಮಾಡಿದ್ದಾರೆ. (ಅ. ಕೃತ್ಯಗಳು 10:34-36; ಎಫೆಸ 6:15) ಪ್ರವಾದಿಯಾದ ಯೆರೆಮೀಯನು ಹೇಳಿದಂತೆ, “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬುದನ್ನು ಅವರು ಗ್ರಹಿಸುತ್ತಾರೆ. (ಯೆರೆಮೀಯ 10:23) ದೇವಕುಮಾರನಾಗಿರುವ ಯೇಸು ಕ್ರಿಸ್ತನು ಆಳ್ವಿಕೆ ನಡೆಸಲಿರುವ ದೇವರ ರಾಜ್ಯವು ಮಾತ್ರ, ಲೋಕದಲ್ಲಿರುವ ಅನ್ಯಾಯ ಹಾಗೂ ಬಡತನಕ್ಕೆ ಪರಿಹಾರವನ್ನು ತರಬಲ್ಲದು.—ಮತ್ತಾಯ 6:10.
[ಪುಟ 9ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಮೆಕ್ಸಿಕೊ ಕೊಲ್ಲಿ
ಚೀಯಾಪಸ್
ಗ್ವಾಟೆಮಾಲ
ಪೆಸಿಫಿಕ್ ಮಹಾಸಾಗರ
[ಕೃಪೆ]
Mountain High Maps® Copyright © 1997 Digital Wisdom, Inc.
[ಪುಟ 9ರಲ್ಲಿರುವ ಚಿತ್ರ]
ಚೀಯಾಪಸ್ ಪರ್ವತ ಪ್ರದೇಶದಲ್ಲಿ ಸಾಕ್ಷಿಗಳು ಸೇವೆಗಾಗಿ ಹೋಗುತ್ತಿರುವುದು