ನಿಮ್ಮ ‘ಬೋಧನಾ ಕಲೆಗೆ’ ಗಮನ ಕೊಡಿರಿ
“ದೇವರ ವಾಕ್ಯವನ್ನು ಸಾರು, . . . ಪೂರ್ಣದೀರ್ಘಶಾಂತಿಯಿಂದ ಉಪದೇಶಿಸುತ್ತಾ [“ಬೋಧನಾ ಕಲೆಯನ್ನು ಬಳಸುತ್ತಾ,” NW] ಖಂಡಿಸು, ಗದರಿಸು, ಎಚ್ಚರಿಸು.”—2 ತಿಮೊ. 4:2.
1. ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು ಮತ್ತು ಅವನು ಯಾವ ಮಾದರಿಯನ್ನಿಟ್ಟನು?
ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅದ್ಭುತವಾಗಿ ರೋಗಗಳನ್ನು ಗುಣಪಡಿಸಿದನಾದರೂ ಅವನು ವಾಸಿಮಾಡುವವನೆಂದಾಗಲಿ ಅಥವಾ ಅದ್ಭುತಗಳನ್ನು ನಡೆಸುವವನೆಂದಾಗಲಿ ಪ್ರಖ್ಯಾತನಾಗಲಿಲ್ಲ. ಅವನು ಪ್ರಧಾನವಾಗಿ ಪ್ರಸಿದ್ಧನಾದದ್ದು ಒಬ್ಬ ಬೋಧಕನಾಗಿಯೇ. (ಮಾರ್ಕ 12:19; 13:1) ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಟಿಸುವುದು ಯೇಸುವಿನ ಅತಿ ಪ್ರಮುಖ ಕೆಲಸವಾಗಿತ್ತು. ಇಂದು ಅವನ ಹಿಂಬಾಲಕರಿಗೆ ಸಹ ಇದು ಪ್ರಮುಖವಾಗಿದೆ. ಯೇಸು ಆಜ್ಞಾಪಿಸಿದ್ದೆಲ್ಲವನ್ನು ಕಾಪಾಡಿಕೊಳ್ಳಲು ಜನರಿಗೆ ಬೋಧಿಸುವ ಮೂಲಕ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮುಂದುವರಿಸುವ ಆಜ್ಞೆ ಕ್ರೈಸ್ತರಿಗಿದೆ.—ಮತ್ತಾ. 28:19, 20.
2. ಸಾರುವ ಆಜ್ಞೆಯನ್ನು ಪೂರೈಸಲು ನಾವೇನು ಮಾಡುವುದು ಅಗತ್ಯ?
2 ಶಿಷ್ಯರನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ಪೂರೈಸಲಿಕ್ಕಾಗಿ ನಾವು ನಮ್ಮ ಬೋಧನಾ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸತತವಾಗಿ ಪ್ರಯತ್ನಿಸುತ್ತೇವೆ. ಸಾರುವ ಕೆಲಸದಲ್ಲಿ ತನ್ನ ಸಂಗಡಿಗನಾಗಿದ್ದ ತಿಮೊಥೆಯನಿಗೆ ಪೌಲನು ಪತ್ರ ಬರೆದಾಗ ಈ ಕೌಶಲದ ಪ್ರಮುಖತೆಯನ್ನು ಒತ್ತಿ ಹೇಳಿದನು. ಅವನು ಹೇಳಿದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ [“ಬೋಧನೆಯ ವಿಷಯದಲ್ಲಿಯೂ ಸತತವಾಗಿ” NW] ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊ. 4:16) ಪೌಲನ ಮನಸ್ಸಿನಲ್ಲಿದ್ದ ಬೋಧನಾ ರೀತಿಯು ಕೇವಲ ಜ್ಞಾನವನ್ನು ಇತರರಿಗೆ ಕೊಡುವುದಾಗಿರಲಿಲ್ಲ. ಪರಿಣಾಮಕಾರಿಯಾದ ಕ್ರೈಸ್ತ ಶುಶ್ರೂಷಕರು ಜನರ ಹೃದಯಗಳಲ್ಲಿ ಬೈಬಲ್ ಸತ್ಯವನ್ನು ಬೇರೂರಿಸಿ, ಅವರು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಪ್ರಚೋದಿಸುತ್ತಾರೆ. ಇದೊಂದು ಕಲೆಯಾಗಿದೆ. ಹಾಗಾದರೆ ಇತರರಿಗೆ ನಾವು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಲಿಕ್ಕಾಗಿ ಈ “ಬೋಧನಾ ಕಲೆ”ಯನ್ನು ಹೇಗೆ ವಿಕಸಿಸಬಲ್ಲೆವು?—2 ತಿಮೊ. 4:2, NW.
“ಬೋಧನಾ ಕಲೆ”ಯನ್ನು ವಿಕಸಿಸುವುದು
3, 4. (ಎ) ನಾವು “ಬೋಧನಾ ಕಲೆಯನ್ನು” ಹೇಗೆ ವಿಕಸಿಸಬಲ್ಲೆವು? (ಬಿ) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಾವು ಪರಿಣಾಮಕಾರಿ ಬೋಧಕರಾಗುವಂತೆ ಹೇಗೆ ಸಹಾಯ ನೀಡುತ್ತದೆ?
3 “ಕಲೆ”ಯನ್ನು ಒಂದು ನಿಘಂಟು “ಅಧ್ಯಯನ, ಬಳಕೆ ಮತ್ತು ಅವಲೋಕನದಿಂದ ಪಡೆದಿರುವ ನೈಪುಣ್ಯ” ಎಂದು ನಿರೂಪಿಸುತ್ತದೆ. ಸುವಾರ್ತೆಯ ಪರಿಣಾಮಕಾರಿ ಬೋಧಕರಾಗಲು ಈ ಮೂರೂ ಅಂಶಗಳಿಗೆ ಗಮನಕೊಡುವುದು ಅಗತ್ಯ. ನಾವು ತಿಳಿಸುವ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಅಧ್ಯಯನ ಮಾಡುವುದರಿಂದ ಮಾತ್ರ ಅದರ ಸರಿಯಾದ ತಿಳಿವಳಿಕೆಯನ್ನು ಪಡೆಯಬಲ್ಲೆವು. (ಕೀರ್ತನೆ 119:27, 34ನ್ನು ಓದಿ.) ಪರಿಣಾಮಕಾರಿಯಾದ ಶುಶ್ರೂಷಕರು ಬೋಧಿಸುವುದನ್ನು ಅವಲೋಕಿಸುವುದು, ಅವರ ವಿಧಾನಗಳನ್ನು ಕಲಿತು ಅವರನ್ನು ಅನುಕರಿಸಲು ನಮಗೆ ಸಹಾಯಮಾಡುತ್ತದೆ. ಮಾತ್ರವಲ್ಲ, ನಾವು ಕಲಿಯುವ ವಿಷಯಗಳನ್ನು ಬಳಕೆಗೆ ಹಾಕಲು ಸತತವಾಗಿ ಪ್ರಯತ್ನಿಸುವುದು ನಮ್ಮ ಬೋಧನಾ ಸಾಮರ್ಥ್ಯಗಳನ್ನು ಉತ್ತಮಗೊಳಿಸುತ್ತದೆ.—ಲೂಕ 6:40; 1 ತಿಮೊ. 4:13-15.
4 ಯೆಹೋವನು ನಮ್ಮ ಮಹಾನ್ ಬೋಧಕನಾಗಿದ್ದಾನೆ. ಆತನು ತನ್ನ ಸಂಘಟನೆಯ ದೃಶ್ಯ ಭಾಗದ ಮೂಲಕ ತನ್ನ ಭೂಸೇವಕರು ಸಾರುವ ಆಜ್ಞೆಯನ್ನು ಹೇಗೆ ಪೂರೈಸಬೇಕೆಂಬುದಕ್ಕೆ ಮಾರ್ಗದರ್ಶನವನ್ನು ಒದಗಿಸುತ್ತಾನೆ. (ಯೆಶಾ. 30:20, 21) ಇದಕ್ಕಾಗಿಯೇ, ಎಲ್ಲ ಸಭೆಗಳಲ್ಲಿ ಪ್ರತಿವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನು ನಡೆಸಲಾಗುತ್ತದೆ. ಆ ಶಾಲೆಯ ಮುಖ್ಯ ಉದ್ದೇಶವು ಅದರಲ್ಲಿ ಸೇರಿರುವ ಒಬ್ಬೊಬ್ಬ ವಿದ್ಯಾರ್ಥಿಯು ದೇವರ ರಾಜ್ಯದ ಪರಿಣಾಮಕಾರಿ ಘೋಷಕನಾಗುವಂತೆ ಮಾಡುವುದೇ ಆಗಿದೆ. ಆ ಶಾಲೆಯ ಮುಖ್ಯ ಪಠ್ಯಪುಸ್ತಕ ಬೈಬಲಾಗಿದೆ. ನಾವು ಏನನ್ನು ಬೋಧಿಸಬೇಕೆಂದು ಯೆಹೋವನ ಪ್ರೇರಿತ ವಾಕ್ಯವು ನಮಗೆ ಹೇಳುತ್ತದೆ. ಅಲ್ಲದೆ, ಯಾವ ಬೋಧನಾ ವಿಧಾನಗಳು ಪರಿಣಾಮಕಾರಿಯೂ ಯೋಗ್ಯವೂ ಆಗಿವೆಯೆಂದು ಅದು ತೋರಿಸಿಕೊಡುತ್ತದೆ. ನಾವು ಹೆಚ್ಚು ಕೌಶಲಭರಿತ ಬೋಧಕರಾಗಲು ಏನು ಮಾಡಬೇಕೆಂದು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಮಗೆ ಪದೇ ಪದೇ ನೆನಪು ಹುಟ್ಟಿಸುತ್ತದೆ. ಅಂದರೆ ನಾವು ನಮ್ಮ ಬೋಧನೆಗಳನ್ನು ದೇವರ ವಾಕ್ಯದ ಮೇಲೆ ಆಧರಿಸಬೇಕು, ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು, ಸರಳ ರೀತಿಯಲ್ಲಿ ಬೋಧಿಸಬೇಕು ಮತ್ತು ಇತರರಿಗೆ ಯಥಾರ್ಥ ಆಸಕ್ತಿ ತೋರಿಸಬೇಕೆಂಬುದನ್ನು ಅದು ಮರುಜ್ಞಾಪಿಸುತ್ತಿರುತ್ತದೆ. ನಾವೀಗ ಈ ವಿಷಯಗಳನ್ನು ಒಂದೊಂದಾಗಿ ಪರೀಕ್ಷಿಸೋಣ. ಆಮೇಲೆ, ವಿದ್ಯಾರ್ಥಿಯ ಹೃದಯವನ್ನು ತಲಪುವುದು ಹೇಗೆಂದು ಚರ್ಚಿಸೋಣ.
ಬೋಧನೆಯನ್ನು ದೇವರ ವಾಕ್ಯದ ಮೇಲೆ ಆಧರಿಸಿ
5. ನಮ್ಮ ಬೋಧನೆಗೆ ಯಾವುದು ಆಧಾರವಾಗಿರಬೇಕು ಮತ್ತು ಏಕೆ?
5 ಮಾನವ ಬೋಧಕರಲ್ಲೇ ಅತಿ ಶ್ರೇಷ್ಠನಾದ ಯೇಸು, ತನ್ನ ಬೋಧನೆಗಳನ್ನು ಶಾಸ್ತ್ರಗಳ ಮೇಲೆ ಆಧರಿಸಿದನು. (ಮತ್ತಾ. 21:13; ಯೋಹಾ. 6:45; 8:17) ಅವನು ತನ್ನ ಸ್ವಂತ ಅಧಿಕಾರದಿಂದಲ್ಲ, ತನ್ನನ್ನು ಕಳುಹಿಸಿದಾತನ ಅಧಿಕಾರದಿಂದ ಮಾತಾಡಿದನು. (ಯೋಹಾ. 7:16-18) ನಾವು ಅನುಸರಿಸುವುದೂ ಇದೇ ಮಾದರಿಯನ್ನು. ಆದುದರಿಂದ, ಮನೆಮನೆಯ ಸೇವೆಯಲ್ಲಾಗಲಿ ಮನೆ ಬೈಬಲ್ ಅಧ್ಯಯನಗಳಲ್ಲಾಗಲಿ ನಾವು ಹೇಳುವ ವಿಷಯಗಳನ್ನು ದೇವರ ವಾಕ್ಯದ ಅಧಿಕಾರದ ಮೇಲೆ ಕೇಂದ್ರೀಕರಿಸಬೇಕು. (2 ತಿಮೊ. 3:16, 17) ನಾವೆಷ್ಟೇ ಜಾಣತನದಿಂದ ತರ್ಕಿಸಿದರೂ ಅದು ಎಂದಿಗೂ ಪ್ರೇರಿತ ಬೈಬಲಿನಷ್ಟು ಪ್ರಭಾವಶಾಲಿಯಾಗಿರದು ಹಾಗೂ ಅದರಷ್ಟು ಶಕ್ತಿಯುತವಾಗಿರದು. ಬೈಬಲಿಗೆ ನಿಯೋಜಿತ ಅಧಿಕಾರವಿದೆ. ಒಬ್ಬ ವಿದ್ಯಾರ್ಥಿ ಯಾವುದೇ ವಿಷಯವನ್ನು ಗ್ರಹಿಸುವಂತೆ ನಾವು ಸಹಾಯಮಾಡುತ್ತಿರಲಿ, ಅದನ್ನು ಬೈಬಲಿನಿಂದ ಸ್ವತಃ ಅವನೇ ಇಲ್ಲವೇ ಅವಳೇ ಓದುವಂತೆ ಮಾಡುವುದು ಅತ್ಯುತ್ತಮ ವಿಧಾನವಾಗಿದೆ.—ಇಬ್ರಿಯ 4:12ನ್ನು ಓದಿ.
6. ಚರ್ಚಿಸಲ್ಪಟ್ಟ ವಿಷಯವು ವಿದ್ಯಾರ್ಥಿಗೆ ಸ್ಪಷ್ಟವಾಗಿ ಅರ್ಥವಾಗಿದೆಯೆಂದು ಬೋಧಕನು ಹೇಗೆ ಖಾತ್ರಿಮಾಡಿಕೊಳ್ಳಬಲ್ಲನು?
6 ಕ್ರೈಸ್ತ ಬೋಧಕನೊಬ್ಬನು ಬೈಬಲ್ ಅಧ್ಯಯನಕ್ಕಾಗಿ ತಯಾರಿಸುವ ಅಗತ್ಯವೇ ಇಲ್ಲ ಎಂದು ಇದರ ಅರ್ಥವಲ್ಲ. ಬದಲಿಗೆ, ಅಧ್ಯಯನದ ಸಮಯದಲ್ಲಿ ಯಾವ ವಚನವನ್ನು ತಾನು ಇಲ್ಲವೆ ವಿದ್ಯಾರ್ಥಿ ಬೈಬಲಿನಿಂದ ಓದಬೇಕೆಂದು ಮುಂಚಿತವಾಗಿಯೇ ಜಾಗರೂಕತೆಯಿಂದ ನಿರ್ಧರಿಸಬೇಕು. ಸಾಮಾನ್ಯವಾಗಿ, ನಮ್ಮ ನಂಬಿಕೆಗಳಿಗೆ ಆಧಾರವನ್ನು ಒದಗಿಸುವ ಶಾಸ್ತ್ರವಚನಗಳನ್ನು ಓದುವುದು ಒಳ್ಳೆಯದು. ವಿದ್ಯಾರ್ಥಿಯು ಓದುವ ಪ್ರತಿಯೊಂದು ವಚನದ ಅರ್ಥವನ್ನು ತಿಳಿದುಕೊಳ್ಳುವಂತೆ ಅವನಿಗೆ ಸಹಾಯಮಾಡುವುದು ಸಹ ಆವಶ್ಯಕ.—1 ಕೊರಿಂ. 14:8, 9.
ಪರಿಣಾಮಕಾರಿ ಪ್ರಶ್ನೆಗಳ ಉಪಯೋಗ
7. ಪ್ರಶ್ನೆಗಳ ಉಪಯೋಗವು ಉತ್ತಮ ಬೋಧನಾ ವಿಧಾನವಾಗಿದೆಯೇಕೆ?
7 ಪ್ರಶ್ನೆಗಳನ್ನು ಕೌಶಲದಿಂದ ಬಳಸುವುದು ವಿದ್ಯಾರ್ಥಿಯ ಯೋಚನೆಯನ್ನು ಕೆರಳಿಸಿ, ಅವನ ಹೃದಯವನ್ನು ತಲಪಲು ಬೋಧಕನಿಗೆ ಸಹಾಯಮಾಡುತ್ತದೆ. ಆದುದರಿಂದ ನೀವು ವಿದ್ಯಾರ್ಥಿಗೆ ವಚನಗಳನ್ನು ವಿವರಿಸುವ ಬದಲು ಅವುಗಳನ್ನು ಅವನೇ ವಿವರಿಸುವಂತೆ ಕೇಳಿಕೊಳ್ಳಿ. ಕೆಲವು ಬಾರಿ, ವಿದ್ಯಾರ್ಥಿ ಸರಿಯಾದ ತಿಳಿವಳಿಕೆಯನ್ನು ಪಡೆಯಲು ಒಂದಕ್ಕಿಂತಲೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಬಹುದು ಅಥವಾ ಪ್ರಶ್ನೆಗಳ ಸರಮಾಲೆಯನ್ನು ಉಪಯೋಗಿಸಬೇಕಾಗಬಹುದು. ಹೀಗೆ ವಿದ್ಯಾರ್ಥಿಗೆ ಕಲಿಸಲು ಪ್ರಶ್ನೆಗಳನ್ನು ಉಪಯೋಗಿಸುವಾಗ, ತಾನು ಕಲಿಯುತ್ತಿರುವ ವಿಷಯದ ಹಿಂದಿರುವ ಕಾರಣಗಳನ್ನು ಅವನು ಚೆನ್ನಾಗಿ ಗ್ರಹಿಸುವನು. ಅಲ್ಲದೆ, ಅದನ್ನು ನಿಶ್ಚಿತಾಭಿಪ್ರಾಯದಿಂದ ನಂಬುವನು.—ಮತ್ತಾ. 17:24-26; ಲೂಕ 10:36, 37.
8. ವಿದ್ಯಾರ್ಥಿಯ ಹೃದಯದಲ್ಲಿ ಏನಿದೆ ಎಂಬುದನ್ನು ನಾವು ಹೇಗೆ ಗ್ರಹಿಸಬಲ್ಲೆವು?
8 ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸುವ ಅಧ್ಯಯನ ವಿಧಾನವು ಪ್ರಶ್ನೋತ್ತರಗಳ ರೀತಿಯಾಗಿದೆ. ನೀವು ಬೈಬಲ್ ಅಧ್ಯಯನ ಮಾಡುವವರಲ್ಲಿ ಹೆಚ್ಚಿನವರು ಮುದ್ರಿತ ಪ್ರಶ್ನೆಗಳಿಗೆ ಕೂಡಲೇ ಪ್ಯಾರಗ್ರಾಫ್ಗಳಿಂದ ಉತ್ತರ ಕೊಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಹೀಗಿದ್ದರೂ, ಹೃದಯವನ್ನು ತಲಪಬಯಸುವ ಬೋಧಕನು ಸರಿಯಾದ ಉತ್ತರದಿಂದ ಮಾತ್ರ ತೃಪ್ತನಾಗುವುದಿಲ್ಲ. ಉದಾಹರಣೆಗೆ, ಜಾರತ್ವದ ಕುರಿತು ಬೈಬಲ್ ಏನನ್ನುತ್ತದೆಂದು ವಿದ್ಯಾರ್ಥಿಯು ಸರಿಯಾಗಿ ಉತ್ತರಿಸಬಹುದು. (1 ಕೊರಿಂ. 6:18) ಆದರೂ, ದೃಷ್ಟಿಕೋನ ಪ್ರಶ್ನೆಗಳನ್ನು ಜಾಣ್ಮೆಯಿಂದ ಉಪಯೋಗಿಸುವಲ್ಲಿ, ವಿದ್ಯಾರ್ಥಿ ತಾನು ಕಲಿಯುತ್ತಿರುವ ವಿಷಯದ ಕುರಿತು ನಿಜವಾಗಿ ಏನು ಯೋಚಿಸುತ್ತಾನೆ ಎಂಬುದು ವ್ಯಕ್ತವಾಗುತ್ತದೆ. ಆದುದರಿಂದ, ಬೋಧಕನು ಇಂಥ ಪ್ರಶ್ನೆಗಳನ್ನು ಕೇಳಬಹುದು: “ವಿವಾಹದ ಹೊರಗಣ ಲೈಂಗಿಕ ಸಂಬಂಧವನ್ನು ಬೈಬಲ್ ಖಂಡಿಸುವುದೇಕೆ? ದೇವರು ಕೊಟ್ಟಿರುವ ಈ ನಿರ್ಬಂಧದ ಬಗ್ಗೆ ನಿಮ್ಮ ಅಭಿಪ್ರಾಯವೇನು? ದೇವರ ನೈತಿಕ ಮಟ್ಟಗಳಿಗೆ ಹೊಂದಿಕೊಂಡು ಜೀವಿಸುವುದರಿಂದ ಯಾವ ಪ್ರಯೋಜನವಾದರೂ ಇದೆಯೆಂದು ನೀವು ಯೋಚಿಸುತ್ತೀರಾ?” ಇಂಥ ಪ್ರಶ್ನೆಗಳಿಗೆ ಸಿಗುವ ಉತ್ತರಗಳು ಆ ವಿದ್ಯಾರ್ಥಿಯ ಮನಸ್ಸಿನಲ್ಲಿ ನಿಜವಾಗಿ ಏನಿದೆ ಎಂಬುದನ್ನು ಹೊರಗೆಡಹಬಲ್ಲದು.—ಮತ್ತಾಯ 16:13-17ನ್ನು ಓದಿ.
ಸರಳವಾಗಿ ಬೋಧಿಸಿ
9. ಬೈಬಲಿನ ಮಾಹಿತಿಯನ್ನು ತಿಳಿಸುವಾಗ ನಾವು ಏನನ್ನು ಮನಸ್ಸಿನಲ್ಲಿಡಬೇಕು?
9 ದೇವರ ವಾಕ್ಯದಲ್ಲಿರುವ ಹೆಚ್ಚಿನ ಸತ್ಯಗಳು ಸರಳವಾಗಿವೆ. ಆದರೆ ನಮ್ಮೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿರುವವರು ಸುಳ್ಳುಧರ್ಮದ ತತ್ತ್ವಗಳಿಂದ ಗಲಿಬಿಲಿಗೊಂಡಿರಬಹುದು. ಹೀಗಾಗಿ ಅವರು ಬೈಬಲನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದೇ ಬೋಧಕರಾದ ನಮ್ಮ ಪಾತ್ರವಾಗಿದೆ. ಪರಿಣಾಮಕಾರಿ ಬೋಧಕರು ಮಾಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ತಿಳಿಯಪಡಿಸುತ್ತಾರೆ. ಈ ಮಾರ್ಗದರ್ಶನವನ್ನು ನಾವು ಅನುಸರಿಸುವಲ್ಲಿ, ನಮ್ಮ ವಿದ್ಯಾರ್ಥಿ ಅರ್ಥಮಾಡಿಕೊಳ್ಳಲಾಗದ ರೀತಿಯಲ್ಲಿ ಸತ್ಯವನ್ನು ಕಷ್ಟಕರವನ್ನಾಗಿ ಮಾಡೇವು. ಅಗತ್ಯವಿಲ್ಲದ ವಿವರಗಳನ್ನು ಸೇರಿಸಬೇಡಿರಿ. ನಾವು ಓದುವ ಶಾಸ್ತ್ರವಚನದ ಪ್ರತಿಯೊಂದು ಅಂಶವನ್ನೂ ವಿವರಿಸುವ ಅಗತ್ಯವಿಲ್ಲ. ಚರ್ಚಿಸುತ್ತಿರುವ ವಿಷಯವನ್ನು ಸ್ಪಷ್ಟಪಡಿಸುವ ಅಂಶವನ್ನು ಮಾತ್ರ ವಿವರಿಸಿರಿ. ವಿದ್ಯಾರ್ಥಿಯು ಹೆಚ್ಚೆಚ್ಚು ತಿಳಿವಳಿಕೆ ಪಡೆಯುತ್ತಾ ಹೋದಂತೆ ಆಳವಾದ ಬೈಬಲ್ ಸತ್ಯಗಳನ್ನು ಕ್ರಮೇಣ ತಿಳಿದುಕೊಳ್ಳುವನು.—ಇಬ್ರಿ. 5:13, 14.
10. ಒಂದು ಬೈಬಲ್ ಅಧ್ಯಯನ ಅವಧಿಯಲ್ಲಿ ಎಷ್ಟು ವಿಷಯಭಾಗವನ್ನು ಆವರಿಸಬೇಕೆಂಬುದನ್ನು ಯಾವ ಸಂಗತಿಗಳು ನಿರ್ಣಯಿಸುತ್ತವೆ?
10 ಒಂದು ಅಧ್ಯಯನ ಅವಧಿಯಲ್ಲಿ ಎಷ್ಟು ವಿಷಯಭಾಗವನ್ನು ಆವರಿಸಬೇಕು? ಇದನ್ನು ನಿರ್ಣಯಿಸಲು ವಿವೇಚನಾಶಕ್ತಿ ಅಗತ್ಯ. ವಿದ್ಯಾರ್ಥಿ ಮತ್ತು ಬೋಧಕ ಇವರಿಬ್ಬರ ಸಾಮರ್ಥ್ಯ ಮತ್ತು ಪರಿಸ್ಥಿತಿಗಳು ವಿಭಿನ್ನವಾಗಿರುತ್ತವಾದರೂ, ಬೋಧಕರಾದ ನಮ್ಮ ಗುರಿಯು ವಿದ್ಯಾರ್ಥಿ ಸ್ಥಿರವಾದ ನಂಬಿಕೆಯನ್ನು ಬೆಳಸಿಕೊಳ್ಳುವಂತೆ ಸಹಾಯಮಾಡುವುದೇ ಎಂದು ನಾವು ಸದಾ ಮನಸ್ಸಿನಲ್ಲಿಡಬೇಕು. ಆದಕಾರಣ, ದೇವರ ವಾಕ್ಯವು ಬೋಧಿಸುವ ಸತ್ಯಗಳನ್ನು ಓದಲು, ಗ್ರಹಿಸಲು ಮತ್ತು ಅಂಗೀಕರಿಸಲು ನಾವು ವಿದ್ಯಾರ್ಥಿಗೆ ಸಾಕಷ್ಟು ಸಮಯವನ್ನು ಅನುಮತಿಸುತ್ತೇವೆ. ಅವನಿಗೆ ಗ್ರಹಿಸಸಾಧ್ಯವಿರುವುದಕ್ಕಿಂತ ಹೆಚ್ಚಿನ ವಿಷಯಗಳನ್ನು ನಾವು ಚರ್ಚಿಸುವುದಿಲ್ಲ. ಅದೇ ಸಮಯ, ನಾವು ಅಧ್ಯಯನವನ್ನು ಸಹ ತಕ್ಕ ವೇಗದಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ವಿದ್ಯಾರ್ಥಿ ಒಂದು ವಿಷಯವನ್ನು ಅರ್ಥಮಾಡಿಕೊಂಡ ಅನಂತರ ಮುಂದಿನ ವಿಷಯಕ್ಕೆ ಸಾಗುತ್ತೇವೆ.—ಕೊಲೊ. 2:6, 7.
11. ಬೋಧಿಸುವ ವಿಷಯದಲ್ಲಿ ಅಪೊಸ್ತಲ ಪೌಲನಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
11 ಅಪೊಸ್ತಲ ಪೌಲನು ಹೊಸಬರಿಗೆ ಸುವಾರ್ತಾ ಸಂದೇಶವನ್ನು ಸರಳವಾಗಿ ಸಾರಿದನು. ಅವನು ಅತಿ ವಿದ್ಯಾವಂತನಾಗಿದ್ದರೂ, ಮೇಧಾವಿಗಳ ಭಾಷೆಯನ್ನು ಉಪಯೋಗಿಸಲಿಲ್ಲ. (1 ಕೊರಿಂಥ 2:1, 2ನ್ನು ಓದಿ.) ಬೈಬಲಿನಲ್ಲಿರುವ ಸರಳ ಸತ್ಯವು ಯಥಾರ್ಥ ಜನರನ್ನು ಆಕರ್ಷಿಸಿ ತೃಪ್ತಿಯನ್ನು ಕೊಡುತ್ತದೆ. ಅದನ್ನು ಅರ್ಥಮಾಡಿಕೊಳ್ಳಲು ಯಾರೂ ವಿದ್ವಾಂಸರಾಗಿರಲೇ ಬೇಕೆಂದಿಲ್ಲ.—ಮತ್ತಾ. 11:25; ಅ. ಕೃ. 4:13; 1 ಕೊರಿಂ. 1:26, 27.
ಕಲಿತದ್ದನ್ನು ಗಣ್ಯಮಾಡುವಂತೆ ವಿದ್ಯಾರ್ಥಿಗಳಿಗೆ ಸಹಾಯಮಾಡಿರಿ
12, 13. ತಾನು ಕಲಿಯುವ ವಿಷಯಕ್ಕನುಸಾರ ವರ್ತಿಸುವಂತೆ ವಿದ್ಯಾರ್ಥಿಯನ್ನು ಯಾವುದು ಪ್ರಚೋದಿಸಬಹುದು? ದೃಷ್ಟಾಂತಿಸಿ.
12 ನಮ್ಮ ಬೋಧನೆ ಪರಿಣಾಮಕಾರಿಯಾಗಿ ಇರಬೇಕಾದರೆ ಅದು ವಿದ್ಯಾರ್ಥಿಯ ಹೃದಯವನ್ನು ಸ್ಪರ್ಶಿಸಬೇಕು. ಆ ಮಾಹಿತಿ ತನಗೆ ಹೇಗೆ ಅನ್ವಯಿಸುತ್ತದೆ, ಹೇಗೆ ಪ್ರಯೋಜನ ತರುತ್ತದೆ ಮತ್ತು ತಾನು ಬೈಬಲಿನ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ತನ್ನ ಜೀವನವು ಹೇಗೆ ಉತ್ತಮಗೊಳ್ಳುವದು ಎಂಬುದನ್ನು ಆ ವಿದ್ಯಾರ್ಥಿ ತಿಳಿದಿರಬೇಕು.—ಯೆಶಾ. 48:17, 18.
13 ಉದಾಹರಣೆಗೆ, ನಾವು ಇಬ್ರಿಯ 10:24, 25ನ್ನು ಚರ್ಚಿಸುತ್ತಿರಬಹುದು. ಕ್ರೈಸ್ತರು ಬೈಬಲಿನಿಂದ ಪ್ರೋತ್ಸಾಹ ಪಡೆಯಲು ಮತ್ತು ಪ್ರೀತಿಯ ಸಹವಾಸವನ್ನು ಅನುಭವಿಸಲು ಜೊತೆ ವಿಶ್ವಾಸಿಗಳೊಂದಿಗೆ ಸಭೆಯಾಗಿ ಕೂಡಿಬರುವುದನ್ನು ಅದು ಉತ್ತೇಜಿಸುತ್ತದೆ. ವಿದ್ಯಾರ್ಥಿಯು ಸಭಾಕೂಟಗಳಿಗೆ ಇನ್ನೂ ಹಾಜರಾಗುತ್ತಿಲ್ಲವಾದರೆ, ಅವು ನಡೆಯವ ರೀತಿಯನ್ನು ಮತ್ತು ಅಲ್ಲಿ ಏನು ಚರ್ಚಿಸಲಾಗುತ್ತದೆ ಎಂಬುದನ್ನು ನಾವು ಸಂಕ್ಷಿಪ್ತವಾಗಿ ವಿವರಿಸಬಹುದು. ಸಭಾಕೂಟಗಳು ನಮ್ಮ ಆರಾಧನೆಯ ಭಾಗವಾಗಿವೆ ಎಂದು ತಿಳಿಸಬಹುದು. ಅಲ್ಲದೆ, ನಮಗೆ ವೈಯಕ್ತಿಕವಾಗಿ ಹೇಗೆ ಪ್ರಯೋಜನಕರವಾಗಿದೆ ಎಂಬುದನ್ನು ತೋರಿಸಿಕೊಡಬಹುದು. ಬಳಿಕ ಕೂಟಗಳಿಗೆ ಹಾಜರಾಗುವಂತೆ ನಾವು ವಿದ್ಯಾರ್ಥಿಯನ್ನು ಆಮಂತ್ರಿಸಬಹುದು. ಆದರೆ ಅವನು ಯೆಹೋವನಿಗೆ ವಿಧೇಯನಾಗಬೇಕೆಂಬ ಬಯಕೆಯಿಂದ ಬೈಬಲಿನ ಆಜ್ಞೆಯನ್ನು ಪಾಲಿಸಬೇಕೇ ಹೊರತು ತನ್ನೊಂದಿಗೆ ಅಧ್ಯಯನ ಮಾಡುವವನನ್ನು ಮೆಚ್ಚಿಸುವ ಉದ್ದೇಶದಿಂದಲ್ಲ.—ಗಲಾ. 6:4, 5.
14, 15. (ಎ) ಬೈಬಲ್ ವಿದ್ಯಾರ್ಥಿಯೊಬ್ಬನು ಯೆಹೋವನ ಬಗ್ಗೆ ಏನು ಕಲಿತುಕೊಳ್ಳಬಲ್ಲನು? (ಬಿ) ದೇವರ ವ್ಯಕ್ತಿತ್ವದ ಕುರಿತ ಜ್ಞಾನವು ಬೈಬಲ್ ವಿದ್ಯಾರ್ಥಿಯೊಬ್ಬನಿಗೆ ಹೇಗೆ ಪ್ರಯೋಜನವಾಗಬಲ್ಲದು?
14 ವಿದ್ಯಾರ್ಥಿಗಳು ಬೈಬಲನ್ನು ಅಧ್ಯಯನಮಾಡಿ, ಅದರ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಪಡಕೊಳ್ಳುವ ಒಂದು ಮುಖ್ಯ ಪ್ರಯೋಜನವೆಂದರೆ, ಅವರು ಯೆಹೋವನನ್ನು ಒಬ್ಬ ವ್ಯಕ್ತಿಯಾಗಿ ತಿಳಿದುಕೊಂಡು ಆತನನ್ನು ಪ್ರೀತಿಸುವರು. (ಯೆಶಾ. 42:8) ಆತನೊಬ್ಬ ಪ್ರೀತಿಪೂರ್ಣ ತಂದೆ, ಸೃಷ್ಟಿಕರ್ತ ಮತ್ತು ವಿಶ್ವದೊಡೆಯನು ಮಾತ್ರವಲ್ಲ, ತನ್ನನ್ನು ಪ್ರೀತಿಸಿ ಸೇವಿಸುವವರಿಗೆ ತನ್ನ ವ್ಯಕ್ತಿತ್ವ ಮತ್ತು ಸಾಮರ್ಥ್ಯಗಳನ್ನು ತಿಳಿಯಪಡಿಸುವವನೂ ಆಗಿದ್ದಾನೆ. (ವಿಮೋಚನಕಾಂಡ 34:6, 7ನ್ನು ಓದಿ.) ಮೋಶೆಯು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಇನ್ನೇನು ಬಿಡಿಸಿ ಹೊರತರಲಿದ್ದಾಗ, ಯೆಹೋವನು ಹೀಗೆ ತನ್ನನ್ನು ಗುರುತಿಸಿಕೊಂಡನು: “ನಾನು ಏನಾಗಿ ಪರಿಣಮಿಸಬೇಕೊ ಅದಾಗಿ ಪರಿಣಮಿಸುತ್ತೇನೆ.” (ವಿಮೋ. 3:13-15, NW) ತನ್ನ ಜನರ ಸಂಬಂಧದಲ್ಲಿ ತಾನು ಉದ್ದೇಶಿಸಿದ್ದನ್ನು ಪೂರೈಸಲು ಯೆಹೋವನಿಗೆ ಏನಾಗಿ ಪರಿಣಮಿಸುವುದು ಅಗತ್ಯವೊ ಅದೇ ಆಗಿ ಆತನು ಪರಿಣಮಿಸುತ್ತಾನೆ ಎಂದು ಇದು ಸೂಚಿಸುತ್ತದೆ. ಹೀಗೆ, ಯೆಹೋವನು ಇಸ್ರಾಯೇಲ್ಯರಿಗೆ ರಕ್ಷಕ, ಯುದ್ಧಶೂರ, ಪೋಷಕ, ವಾಗ್ದಾನಗಳನ್ನು ನೆರವೇರಿಸುವಾತ ಮತ್ತು ಇನ್ನಿತರ ಪಾತ್ರಗಳಲ್ಲಿ ಪರಿಚಿತನಾದನು.—ವಿಮೋ. 15:2, 3; 16:2-5; ಯೆಹೋ. 23:14.
15 ಮೋಶೆಯಂತೆ ನಮ್ಮ ಬೈಬಲ್ ವಿದ್ಯಾರ್ಥಿಗಳು ಯೆಹೋವನಿಂದ ಅದ್ಭುತ ಸಹಾಯವನ್ನು ಪಡಕೊಳ್ಳದಿರಬಹುದು. ಆದರೂ, ನಮ್ಮ ವಿದ್ಯಾರ್ಥಿಗಳು ತಾವು ಕಲಿಯುವ ವಿಷಯಗಳಲ್ಲಿ ನಂಬಿಕೆ ಮತ್ತು ಗಣ್ಯತೆಯನ್ನು ಬೆಳೆಸಿಕೊಂಡು ಅದನ್ನು ಅನ್ವಯಿಸಿಕೊಳ್ಳಲು ತೊಡಗುವಾಗ ಧೈರ್ಯ, ವಿವೇಕ, ಮಾರ್ಗದರ್ಶನಕ್ಕಾಗಿ ಯೆಹೋವನ ಮೇಲೆ ಹೊಂದಿಕೊಳ್ಳಬೇಕೆಂಬುದನ್ನು ಮನಗಾಣುವರು ಎಂಬುದರಲ್ಲಿ ಸಂದೇಹವಿಲ್ಲ. ಹೀಗೆ ಯೆಹೋವನ ಮೇಲೆ ಆತುಕೊಳ್ಳುವಾಗ ಅವರು ಸಹ ಆತನೊಬ್ಬ ವಿವೇಕಿಯೂ ಭರವಸಾರ್ಹನೂ ಆದ ಸಲಹೆಗಾರ, ಸಂರಕ್ಷಕ ಮತ್ತು ತಮ್ಮೆಲ್ಲ ಆವಶ್ಯಕತೆಗಳನ್ನು ಧಾರಾಳವಾಗಿ ಪೂರೈಸುವಾತ ಮುಂತಾದ ವಿವಿಧ ಪಾತ್ರಗಳಲ್ಲಿ ಆತನನ್ನು ಅರಿತುಕೊಳ್ಳುವರು.—ಕೀರ್ತ. 55:22; 63:7; ಜ್ಞಾನೋ. 3:5, 6.
ಪ್ರೀತಿಪೂರ್ವಕ ಆಸಕ್ತಿ ತೋರಿಸಿ
16. ನಮ್ಮ ಬೋಧನೆ ಪರಿಣಾಮಕಾರಿಯಾಗಿರಲು ಸ್ವಾಭಾವಿಕ ಸಾಮರ್ಥ್ಯವು ಅತಿ ಪ್ರಾಮುಖ್ಯವಲ್ಲವೇಕೆ?
16 ‘ಇತರರಿಗೆ ಬೋಧಿಸುವಷ್ಟು ಕೌಶಲ ನನ್ನಲ್ಲಿಲ್ಲ’ ಎಂದು ನೀವು ನೆನಸುವಲ್ಲಿ ಧೈರ್ಯ ತಕ್ಕೊಳ್ಳಿ. ಇಂದು ಲೋಕವ್ಯಾಪಕವಾಗಿ ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಯೆಹೋವನೂ ಯೇಸುವೂ ಮಾಡುತ್ತಿದ್ದಾರೆ. (ಅ. ಕೃ. 1:7, 8; ಪ್ರಕ. 14:6) ಸಹೃದಯದ ವ್ಯಕ್ತಿಯೊಬ್ಬನ ಮೇಲೆ ನಮ್ಮ ಮಾತುಗಳು ಸತ್ಪರಿಣಾಮ ಬೀರುವಂತೆ ಅವರು ನಮಗೆ ಬೆಂಬಲ ನೀಡುವರು. (ಯೋಹಾ. 6:44) ಒಬ್ಬ ಬೋಧಕನು ತನ್ನ ವಿದ್ಯಾರ್ಥಿಗೆ ತೋರಿಸುವ ಯಥಾರ್ಥ ಪ್ರೀತಿಯು ಆ ಬೋಧಕನ ಸಾಮರ್ಥ್ಯದ ಯಾವುದೇ ಕುಂದುಕೊರತೆಯನ್ನು ಸರಿದೂಗಿಸಬಲ್ಲದು. ಸತ್ಯವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೀತಿಸುವ ಪ್ರಮುಖತೆಯನ್ನು ಅಪೊಸ್ತಲ ಪೌಲನು ತನ್ನ ಕ್ರಿಯೆಯಲ್ಲಿ ತೋರಿಸಿದನು.—1 ಥೆಸಲೊನೀಕ 2:7, 8ನ್ನು ಓದಿ.
17. ಪ್ರತಿಯೊಬ್ಬ ಬೈಬಲ್ ವಿದ್ಯಾರ್ಥಿಯಲ್ಲಿ ನಾವು ಹೇಗೆ ಯಥಾರ್ಥ ಆಸಕ್ತಿಯನ್ನು ತೋರಿಸಬಲ್ಲೆವು?
17 ಪ್ರತಿಯೊಬ್ಬ ಬೈಬಲ್ ವಿದ್ಯಾರ್ಥಿಯ ಪರಿಚಯ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವ ಮೂಲಕ ಸಹ ನಾವು ಅವರಲ್ಲಿ ಯಥಾರ್ಥ ಆಸಕ್ತಿಯನ್ನು ತೋರಿಸಬಲ್ಲೆವು. ನಾವು ಅವನೊಂದಿಗೆ ಬೈಬಲಿನ ಮೂಲತತ್ತ್ವಗಳನ್ನು ಚರ್ಚಿಸುವಾಗ ಅವನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದುಕೊಳ್ಳಸಾಧ್ಯವಿದೆ. ಬೈಬಲಿನಿಂದ ಕಲಿತುಕೊಂಡಿರುವ ಕೆಲವೊಂದು ವಿಷಯಗಳಿಗೆ ಹೊಂದಿಕೆಯಾಗಿ ಅವನು ಈಗಾಗಲೇ ಜೀವಿಸುತ್ತಿದ್ದಾನೆಂದು ನೀವು ಅವಲೋಕಿಸಬಹುದು. ಆದರೆ ಬೇರೆ ಕ್ಷೇತ್ರಗಳಲ್ಲಿ ಅವನಿನ್ನೂ ಹೊಂದಾಣಿಕೆ ಮಾಡುವ ಅಗತ್ಯವಿದ್ದೀತು. ಆದುದರಿಂದ ತಾನು ಬೈಬಲ್ ಅಧ್ಯಯನಗಳಿಂದ ಕಲಿತ ವಿಷಯಗಳನ್ನು ಹೇಗೆ ಅನ್ವಯಿಸಬೇಕೆಂದು ವಿದ್ಯಾರ್ಥಿಗೆ ತೋರಿಸಿಕೊಡುವ ಮೂಲಕ ಅವನು ಯೇಸುವಿನ ನಿಜ ಶಿಷ್ಯನಾಗುವಂತೆ ನಾವು ಪ್ರೀತಿಯಿಂದ ಸಹಾಯಮಾಡಬಲ್ಲೆವು.
18. ವಿದ್ಯಾರ್ಥಿಯೊಟ್ಟಿಗೆ ಪ್ರಾರ್ಥಿಸುವುದು ಮತ್ತು ಅವನಿಗಾಗಿ ನಿರ್ದಿಷ್ಟವಾಗಿ ಬೇಡುವುದು ಏಕೆ ಪ್ರಾಮುಖ್ಯ?
18 ಎಲ್ಲಕ್ಕೂ ಹೆಚ್ಚು ಪ್ರಾಮುಖ್ಯವಾಗಿ, ನಾವು ನಮ್ಮ ವಿದ್ಯಾರ್ಥಿಯೊಟ್ಟಿಗೆ ಯೆಹೋವನಿಗೆ ಪ್ರಾರ್ಥಿಸಸಾಧ್ಯವಿದೆ ಮತ್ತು ಆ ಪ್ರಾರ್ಥನೆಯಲ್ಲಿ ವಿದ್ಯಾರ್ಥಿಗೋಸ್ಕರ ನಿರ್ದಿಷ್ಟವಾಗಿ ಬೇಡಸಾಧ್ಯವಿದೆ. ಅವನು ತನ್ನ ಸೃಷ್ಟಿಕರ್ತನನ್ನು ಆಪ್ತ ರೀತಿಯಲ್ಲಿ ತಿಳಿದುಕೊಂಡು ಆತನಿಗೆ ಹೆಚ್ಚು ಸಮೀಪವಾಗುವಂತೆ ಮತ್ತು ಆತನ ಮಾರ್ಗದರ್ಶನದಿಂದ ಪ್ರಯೋಜನ ಪಡೆಯುವಂತೆ ಸಹಾಯ ಮಾಡುವುದೇ ನಮ್ಮ ಉದ್ದೇಶವೆಂಬುದು ಅವನಿಗೆ ಸ್ಪಷ್ಟವಾಗಿ ಮನವರಿಕೆಯಾಗಬೇಕು. (ಕೀರ್ತನೆ 25:4, 5ನ್ನು ಓದಿ.) ಕಲಿಯುವ ವಿಷಯಗಳನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಯು ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದವನ್ನು ನಾವು ಬೇಡಿಕೊಳ್ಳುವಾಗ, ‘ವಾಕ್ಯದ ಪ್ರಕಾರ ನಡೆಯುವ’ ಪ್ರಮುಖತೆಯನ್ನು ಅವನು ಮನಗಾಣುವನು. (ಯಾಕೋ. 1:22) ಆ ವಿದ್ಯಾರ್ಥಿ ನಮ್ಮ ಮನದಾಳದ ಪ್ರಾರ್ಥನೆಗಳನ್ನು ಕೇಳುವಾಗ, ತಾನೂ ಹೇಗೆ ಪ್ರಾರ್ಥಿಸಬೇಕೆಂದು ಕಲಿತುಕೊಳ್ಳುವನು. ಬೈಬಲ್ ವಿದ್ಯಾರ್ಥಿಗಳು ಸ್ವತಃ ತಾವೇ ಯೆಹೋವನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನೆರವು ನೀಡುವಾಗ ಸಿಗುವ ಹರ್ಷಾನಂದ ಎಣೆಯಿಲ್ಲದ್ದೇ ಸರಿ!
19. ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
19 ಲೋಕವ್ಯಾಪಕವಾಗಿ ಅರುವತ್ತೈದು ಲಕ್ಷಕ್ಕಿಂತಲೂ ಹೆಚ್ಚು ಮಂದಿ ಸಾಕ್ಷಿಗಳು, “ಬೋಧನಾ ಕಲೆಯನ್ನು” ಕರಗತ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ ಎಂಬುದು ಪ್ರೋತ್ಸಾಹದ ವಿಷಯ. ಅವರು ಇದನ್ನು ಮಾಡುತ್ತಿರುವುದು ಯೇಸು ಆಜ್ಞಾಪಿಸಿದ್ದೆಲ್ಲವನ್ನು ಕಾಪಾಡಿಕೊಳ್ಳುವಂತೆ ಪ್ರಾಮಾಣಿಕ ಹೃದಯದ ಜನರಿಗೆ ನೆರವು ನೀಡಲಿಕ್ಕಾಗಿಯೇ. ನಮ್ಮ ಸಾರುವ ಕಾರ್ಯದಿಂದ ಯಾವ ಫಲಿತಾಂಶವನ್ನು ನಾವು ಪಡೆಯುತ್ತಿದ್ದೇವೆ? ಉತ್ತರವನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.
ನಿಮಗೆ ನೆನಪಿದೆಯೆ?
• ಕ್ರೈಸ್ತರು “ಬೋಧನಾ ಕಲೆಯನ್ನು” ವಿಕಸಿಸುವುದು ಏಕೆ ಅಗತ್ಯ?
• ಯಾವ ವಿಧಾನಗಳು ನಮ್ಮ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಲ್ಲವು?
• ನಮ್ಮ ಬೋಧನಾ ಸಾಮರ್ಥ್ಯದ ಕೊರತೆಯನ್ನು ಯಾವುದು ಸರಿದೂಗಿಸಬಲ್ಲದು?
[ಪುಟ 9ರಲ್ಲಿರುವ ಚಿತ್ರ]
ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ವಿದ್ಯಾರ್ಥಿಯಾಗಿದ್ದೀರೋ?
[ಪುಟ 10ರಲ್ಲಿರುವ ಚಿತ್ರ]
ಬೈಬಲಿನಿಂದ ಓದುವಂತೆ ನಿಮ್ಮ ವಿದ್ಯಾರ್ಥಿಯನ್ನು ಕೇಳಿಕೊಳ್ಳುವುದು ಪ್ರಾಮುಖ್ಯವೇಕೆ?
[ಪುಟ 12ರಲ್ಲಿರುವ ಚಿತ್ರ]
ನಿಮ್ಮ ವಿದ್ಯಾರ್ಥಿಯೊಟ್ಟಿಗೆ ಮತ್ತು ವಿದ್ಯಾರ್ಥಿಗಾಗಿ ಪ್ರಾರ್ಥಿಸಿ