ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಫೆಬ್ರವರಿ ಪು. 14-19
  • ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಹೋದರಿಯರು ತುಂಬ ಅಮೂಲ್ಯರು
  • ಎಲ್ಲಾ ಸಹೋದರಿಯರ ಮೇಲೆ ಸಹೋದರರಿಗೆ ಅಧಿಕಾರ ಇದ್ಯಾ?
  • ಕುಟುಂಬದ ಯಜಮಾನನಿಗೆ ಮತ್ತು ಹಿರಿಯರಿಗೆ ಇರೋ ಅಧಿಕಾರ
  • ಸಭೆಯ ಯಜಮಾನನಾದ ಕ್ರಿಸ್ತನನ್ನು ಗೌರವಿಸಿ
  • “ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಸಹೋದರಿಯರಿಗೆ ಬೆಂಬಲ ಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಯೆಹೋವ ದೇವರ ತರ ನೀವೂ ಸ್ತ್ರೀಯರನ್ನ ಗೌರವಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಫೆಬ್ರವರಿ ಪು. 14-19

ಅಧ್ಯಯನ ಲೇಖನ 7

ಸಭೆಯಲ್ಲಿ ಹಿರಿಯರಿಗಿರೋ ಅಧಿಕಾರ

“ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ . . . ಸಭೆಯ ರಕ್ಷಕನೂ ಆಗಿದ್ದಾನೆ.”—ಎಫೆ. 5:23.

ಗೀತೆ 86 ನಂಬಿಗಸ್ತೆಯರು, ಕ್ರೈಸ್ತ ಸಹೋದರಿಯರು

ಕಿರುನೋಟa

1. ಯೆಹೋವನ ಜನ್ರ ಮಧ್ಯೆ ಯಾಕೆ ಒಗ್ಗಟ್ಟಿದೆ?

ಯೆಹೋವನ ಕುಟುಂಬದಲ್ಲಿ ಒಬ್ಬರಾಗಿರೋದಕ್ಕೆ ನಮಗೆ ತುಂಬ ಸಂತೋಷ ಇದೆ. ನಮ್ಮ ಕುಟುಂಬದಲ್ಲಿ ಶಾಂತಿ-ಒಗ್ಗಟ್ಟು ಇದೆ. ಯೆಹೋವ ಅಧಿಕಾರ ಕೊಟ್ಟಿರೋರಿಗೆ ನಾವು ಗೌರವ ತೋರಿಸೋದ್ರಿಂದಲೇ ನಮ್ಮ ಕುಟುಂಬದಲ್ಲಿ ಇಷ್ಟು ಶಾಂತಿ-ಒಗ್ಗಟ್ಟು ಇದೆ. ಸಭೆಯಲ್ಲಿ ಯಾರ್ಯಾರಿಗೆ ಯಾವ್ಯಾವ ಅಧಿಕಾರ ಇದೆ ಅನ್ನೋದನ್ನ ಚೆನ್ನಾಗಿ ಅರ್ಥ ಮಾಡ್ಕೊಂಡ್ರೆ ನಮ್ಮ ಒಗ್ಗಟ್ಟು ಇನ್ನೂ ಜಾಸ್ತಿಯಾಗುತ್ತೆ.

2. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೇವೆ?

2 ಈ ಲೇಖನದಲ್ಲಿ ಯೆಹೋವ ಸಭೆಯಲ್ಲಿ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ ಅನ್ನೋದನ್ನ ನೋಡ್ತೇವೆ. ಅದ್ರ ಜೊತೆಗೆ, ಈ ಪ್ರಶ್ನೆಗಳಿಗೂ ಉತ್ತರ ತಿಳ್ಕೊಳ್ತೇವೆ: ಸಭೆಯಲ್ಲಿ ಸಹೋದರಿಯರಿಗೆ ಇರೋ ಪಾತ್ರವೇನು? ಸಭೆಯಲ್ಲಿರೋ ಎಲ್ಲಾ ಸಹೋದರರಿಗೆ ಸಹೋದರಿಯರ ಮೇಲೆ ಅಧಿಕಾರ ಇದ್ಯಾ? ಒಬ್ಬ ಕುಟುಂಬದ ಯಜಮಾನನಿಗೆ ತನ್ನ ಹೆಂಡ್ತಿ ಮಕ್ಕಳ ಮೇಲೆ ಅಧಿಕಾರ ಇರೋ ತರನೇ ಸಭೆಯ ಹಿರಿಯರಿಗೆ ಸಹೋದರ ಸಹೋದರಿಯರ ಮೇಲೆ ಅಧಿಕಾರ ಇದ್ಯಾ? ಈಗ ನಾವು ಮೊದ್ಲಿಗೆ ಸಹೋದರಿಯರ ಬಗ್ಗೆ ನಮಗೆ ಯಾವ ಮನೋಭಾವ ಇರಬೇಕು ಅಂತ ನೋಡೋಣ.

ಸಹೋದರಿಯರು ತುಂಬ ಅಮೂಲ್ಯರು

3. ಸಹೋದರಿಯರನ್ನ ಅಮೂಲ್ಯವಾಗಿ ನೋಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

3 ಸಹೋದರಿಯರು ತುಂಬ ಶ್ರಮ ಪಡ್ತಾರೆ. ತಮ್ಮ ಕುಟುಂಬನ ಚೆನ್ನಾಗಿ ನೋಡಿಕೊಳ್ತಾರೆ, ಸಿಹಿಸುದ್ದಿ ಸಾರ್ತಾರೆ ಮತ್ತು ಸಭೆಯವ್ರಿಗೂ ಸಹಾಯ ಮಾಡ್ತಾರೆ. ಯೆಹೋವ ಮತ್ತು ಯೇಸು ದೃಷ್ಟಿಯಲ್ಲಿ ಸ್ತ್ರೀಯರು ತುಂಬ ಅಮೂಲ್ಯರು. ಅವ್ರಿಬ್ರೂ ಸ್ತ್ರೀಯರನ್ನ ಹೇಗೆ ಕಾಣ್ತಾರೆ ಅನ್ನೋದರ ಬಗ್ಗೆ ತಿಳ್ಕೊಂಡ್ರೆ ನಾವು ಸಹೋದರಿಯರನ್ನ ಇನ್ನೂ ಅಮೂಲ್ಯವಾಗಿ ನೋಡ್ತೀವಿ. ಸಹೋದರಿಯರ ಜೊತೆ ಹೇಗೆ ನಡ್ಕೊಬೇಕು ಅನ್ನೋದನ್ನ ಅಪೊಸ್ತಲ ಪೌಲನಿಂದನೂ ನಾವು ಕಲಿಬಹುದು.

4. ಯೆಹೋವ ಸ್ತ್ರೀ ಪುರುಷರ ಮಧ್ಯ ಬೇಧಭಾವ ಮಾಡಲ್ಲ ಅಂತ ಬೈಬಲ್‌ ಹೇಗೆ ತೋರಿಸುತ್ತೆ?

4 ಯೆಹೋವ ಸ್ತ್ರೀ ಪುರುಷರ ಮಧ್ಯ ಬೇಧಭಾವ ಮಾಡಲ್ಲ ಅಂತ ಬೈಬಲ್‌ ತೋರಿಸುತ್ತೆ. ಒಂದನೇ ಶತಮಾನದಲ್ಲಿ ಅದ್ಭುತ ಕೆಲಸಗಳನ್ನ ಮಾಡೋಕೆ ಯೆಹೋವ ಬರೀ ಪುರುಷರಿಗಷ್ಟೇ ಅಲ್ಲ, ಸ್ತ್ರೀಯರಿಗೂ ಪವಿತ್ರಶಕ್ತಿ ಕೊಟ್ಟನು. ಉದಾಹರಣೆಗೆ, ಸ್ತ್ರೀಯರಿಗೂ ಬೇರೆಬೇರೆ ಭಾಷೆಯಲ್ಲಿ ಮಾತಾಡೋ ಸಾಮರ್ಥ್ಯ ಕೊಟ್ಟನು. (ಅ. ಕಾ. 2:1-4; 15-18) ಯೆಹೋವನು ಸ್ತ್ರೀಯರನ್ನೂ ಪವಿತ್ರಶಕ್ತಿಯಿಂದ ಅಭಿಷೇಕಿಸಿದ್ದಾನೆ ಮತ್ತು ಮುಂದಕ್ಕೆ ಅವ್ರಿಗೆ ಕ್ರಿಸ್ತನ ಜೊತೆ ಆಳುವ ಅವಕಾಶನೂ ಕೊಟ್ಟಿದ್ದಾನೆ. (ಗಲಾ. 3:26-29) ಈ ಭೂಮಿ ಮೇಲೆ ಶಾಶ್ವತ ಜೀವನ ಆನಂದಿಸೋ ಅವಕಾಶನೂ ಬರೀ ಪುರುಷರಿಗಷ್ಟೇ ಅಲ್ಲ ಸ್ತ್ರೀಯರಿಗೂ ಕೊಟ್ಟಿದ್ದಾನೆ. (ಪ್ರಕ. 7:9, 10, 13-15) ಸಿಹಿಸುದ್ದಿ ಸಾರೋ ಮತ್ತು ಸತ್ಯ ಕಲಿಸೋ ಕೆಲಸವನ್ನು ಯೆಹೋವ ಇಬ್ರಿಗೂ ಕೊಟ್ಟಿದ್ದಾನೆ. (ಮತ್ತಾ. 28:19, 20) ಉದಾಹರಣೆಗೆ ಅಪೊಸ್ತಲರ ಕಾರ್ಯ ಪುಸ್ತಕ ಪ್ರಿಸ್ಕಿಲ್ಲ ಅನ್ನೋ ಸಹೋದರಿ ಬಗ್ಗೆ ತಿಳ್ಸುತ್ತೆ. ಆಕೆ ಮತ್ತು ಆಕೆಯ ಗಂಡ ಅಕ್ವಿಲ್ಲ ಅಪೊಲ್ಲೋಸ ಅನ್ನೋ ವಿದ್ಯಾವಂತ ವ್ಯಕ್ತಿಗೆ ಬೈಬಲ್‌ ಸತ್ಯವನ್ನ ಸರಿಯಾಗಿ ವಿವರಿಸಿದ್ರು.—ಅ. ಕಾ. 18:24-26.

5. ಲೂಕ 10:38, 39, 42 ರಿಂದ ಯೇಸು ಸ್ತ್ರೀಯರನ್ನು ಗೌರವಿಸ್ತಿದ್ದ ಅಂತ ಹೇಗೆ ಗೊತ್ತಾಗುತ್ತೆ?

5 ಯೇಸು ಸ್ತ್ರೀಯರನ್ನು ಗೌರವಿಸಿದ. ಅವನು ಫರಿಸಾಯರ ತರ ಸ್ತ್ರೀಯರನ್ನು ಕೀಳಾಗಿ ನೋಡ್ಲಿಲ್ಲ. ಫರಿಸಾಯರು ಸ್ತ್ರೀಯರಿಗಿಂತ ಪುರುಷರು ಮೇಲು ಅಂತ ಯೋಚಿಸ್ತಿದ್ರು. ಜನ್ರ ಮುಂದೆ ಸ್ತ್ರೀಯರ ಜೊತೆ ಮಾತಾಡ್ತಿರಲಿಲ್ಲ, ಪವಿತ್ರ ಗ್ರಂಥದ ಬಗ್ಗೆಯಂತೂ ಅವರ ಜೊತೆ ಚರ್ಚಿಸ್ತಾನೇ ಇರಲಿಲ್ಲ. ಆದ್ರೆ ಯೇಸು ಹಾಗಿರಲಿಲ್ಲ. ಅವನು ಬೈಬಲಿನ ಪ್ರಾಮುಖ್ಯ ಸತ್ಯಗಳನ್ನು ತನ್ನ ಶಿಷ್ಯರೊಟ್ಟಿಗಷ್ಟೇ ಅಲ್ಲ ಸ್ತ್ರೀಯರೊಟ್ಟಿಗೂ ಚರ್ಚಿಸ್ತಿದ್ದ.b (ಲೂಕ 10:38, 39, 42 ಓದಿ.) ಯೇಸು ಸಿಹಿಸುದ್ದಿ ಸಾರಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗ್ವಾಗ ಅವನ ಜೊತೆ ಸ್ತ್ರೀಯರೂ ಇದ್ದರು. (ಲೂಕ 8:1-3) ಅಷ್ಟೇ ಅಲ್ಲ, ಅವನು ತೀರಿಹೋಗಿ ಪುನಃ ಜೀವಂತವಾಗಿ ಎದ್ದು ಬಂದಾಗ ಅದ್ರ ಬಗ್ಗೆ ಶಿಷ್ಯರಿಗೆ ತಿಳಿಸೋ ಅವಕಾಶನೂ ಸ್ತ್ರೀಯರಿಗೇ ಕೊಟ್ಟ.—ಯೋಹಾ 20:16-18.

6. ಸ್ತ್ರೀಯರ ಮೇಲಿದ್ದ ಗೌರವವನ್ನ ಅಪೊಸ್ತಲ ಪೌಲ ಹೇಗೆ ತೋರಿಸಿದ?

6 ಸ್ತ್ರೀಯರನ್ನು ಗೌರವಿಸಬೇಕು ಅಂತ ಅಪೊಸ್ತಲ ಪೌಲ ತಿಮೊತಿಗೆ ನೆನಪಿಸಿದ. ತಿಮೊತಿ “ವಯಸ್ಸಾಗಿರೋ ಸ್ತ್ರೀಯರನ್ನ ಅಮ್ಮನ ತರ, ಯುವತಿಯರನ್ನ ಅಕ್ಕತಂಗಿ ತರ” ನೋಡ್ಬೇಕು ಅಂತ ಪೌಲ ಹೇಳಿದ. (1 ತಿಮೊ. 5:1, 2) ತಿಮೊತಿ ಹೆಚ್ಚಿನ ನಂಬಿಕೆ ಬೆಳೆಸಿಕೊಳ್ಳಲು ಪೌಲ ಸಹಾಯ ಮಾಡಿದ್ರೂ ಮೊದ್ಲಿಗೆ ತಿಮೊತಿಗೆ “ಪವಿತ್ರ ಪುಸ್ತಕದಲ್ಲಿ ಇರೋದನ್ನ” ಕಲಿಸಿದ್ದು ಅವನ ತಾಯಿ ಮತ್ತು ಅಜ್ಜಿ ಅಂತ ಪೌಲ ಒಪ್ಕೊಂಡ. (2 ತಿಮೊ. 1:5; 3:14, 15) ಪೌಲ ರೋಮನ್ನರಿಗೆ ಬರೆದ ಪತ್ರದಲ್ಲಿ ಪ್ರತಿಯೊಬ್ಬ ಸಹೋದರಿಯರ ಹೆಸರನ್ನ ಹೇಳಿ ಅವ್ರಿಗೆ ವಂದನೆ ತಿಳಿಸಿದ. ಆ ಸಹೋದರಿಯರು ಮಾಡ್ತಿದ್ದ ಸೇವೆಯನ್ನ ಪೌಲ ಬರೀ ಗಮನಿಸಿದ್ದಷ್ಟೇ ಅಲ್ಲ ಅವ್ರು ಪಡ್ತಿದ್ದ ಶ್ರಮಕ್ಕೆ ಅವ್ರಿಗೆ ಧನ್ಯವಾದ ಹೇಳಿದ.—ರೋಮ. 16:1-4, 6, 12; ಫಿಲಿ. 4:3.

7. ಈಗ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೇವೆ?

7 ಹಿಂದಿನ ಪ್ಯಾರಗಳಲ್ಲಿ ನೋಡಿದಂತೆ, ‘ಸಹೋದರರು ಮೇಲು ಸಹೋದರಿಯರು ಕೀಳು’ ಅಂತ ಬೈಬಲ್‌ ಎಲ್ಲೂ ಹೇಳೋದೇ ಇಲ್ಲ. ಪ್ರೀತಿ ಮತ್ತು ಉದಾರತೆ ತೋರಿಸೋ ಸಹೋದರಿಯರು ಸಭೆಗೆ ಆಸ್ತಿ ಆಗಿದ್ದಾರೆ. ಸಭೆಯಲ್ಲಿ ಶಾಂತಿ ಮತ್ತು ಒಗ್ಗಟ್ಟು ಇರೋಕೆ ಸಹೋದರಿಯರು ಹಿರಿಯರಿಗೆ ತುಂಬ ಸಹಾಯ ಮಾಡ್ತಾರೆ. ಈಗ ನಾವು ಈ ಮುಂದಿನ ಪ್ರಶ್ನೆಗಳಿಗೆ ಉತ್ತರ ನೋಡೋಣ: ಕೆಲವು ಸಂದರ್ಭಗಳಲ್ಲಿ ಸಹೋದರಿಯರು ತಲೆಗೆ ಮುಸುಕು ಹಾಕಬೇಕು ಅಂತ ಯೆಹೋವ ಯಾಕೆ ಹೇಳಿದ್ದಾನೆ? ಸಭೆಯಲ್ಲಿ ಸಹೋದರರನ್ನ ಮಾತ್ರ ಹಿರಿಯರಾಗಿ, ಸಹಾಯಕ ಸೇವಕರಾಗಿ ನೇಮಿಸಲಾಗುತ್ತೆ. ಅದರರ್ಥ ಸಭೆಯಲ್ಲಿರೋ ಪ್ರತಿ ಸಹೋದರನಿಗೆ ಪ್ರತಿ ಸಹೋದರಿಯ ಮೇಲೆ ಅಧಿಕಾರ ಇರುತ್ತೆ ಅಂತನಾ?

ಎಲ್ಲಾ ಸಹೋದರಿಯರ ಮೇಲೆ ಸಹೋದರರಿಗೆ ಅಧಿಕಾರ ಇದ್ಯಾ?

ಯೇಸು ಸ್ವರ್ಗದಲ್ಲಿ ಸಿಂಹಾಸನದ ಮೇಲೆ ಕೂತಿದ್ದಾನೆ. ಅವನ ಮೇಲೆ ಯೆಹೋವನ ಮಹಿಮೆಯ ಕಿರಣಗಳು ಬೀಳ್ತಿವೆ. ಯೇಸು ಕೆಳಗಡೆ ಇರೋ ಮೂರು ಚಿತ್ರಗಳು: ಸಭೆಯಲ್ಲಿ ಕೂಟ ನಡಿತಿದೆ, ಕುಟುಂಬ ಆರಾಧನೆ ನಡಿತಿದೆ, ಮದುವೆಯಾಗಿರದ ಸಹೋದರಿ ಒಬ್ಬಳೇ ಕೂತು ಬೈಬಲ್‌ ಅಧ್ಯಯನ ಮಾಡ್ತಿದ್ದಾಳೆ. ಈ ಚಿತ್ರಗಳು ಪ್ಯಾರ 8 ಮತ್ತು 11-14 ರಲ್ಲಿ ಮತ್ತೆ ಬರುತ್ತೆ.

8. ಎಫೆಸ 5:23 ರ ಪ್ರಕಾರ ಸಭೆಯಲ್ಲಿರೋ ಎಲ್ಲಾ ಸಹೋದರರಿಗೆ ಎಲ್ಲಾ ಸಹೋದರಿಯರ ಮೇಲೆ ಅಧಿಕಾರ ಇದ್ಯಾ? ವಿವರಿಸಿ.

8 ಇದಕ್ಕೆ ಉತ್ತರ ಚುಟುಕಾಗಿ ಹೇಳೋದಾದ್ರೆ ಇಲ್ಲ. ಒಬ್ಬ ಸಹೋದರನಿಗೆ ಸಭೆಯಲ್ಲಿರೋ ಎಲ್ಲಾ ಸಹೋದರಿಯರ ಮೇಲೆ ಅಧಿಕಾರ ಇಲ್ಲ. ಕ್ರಿಸ್ತನೊಬ್ಬನೇ ಎಲ್ರಿಗೂ ಯಜಮಾನ. (ಎಫೆಸ 5:23 ಓದಿ.) ಕುಟುಂಬದಲ್ಲಿ ಹೆಂಡತಿಗೆ ಗಂಡ ಯಜಮಾನ. ಆದ್ರೆ ದೀಕ್ಷಾಸ್ನಾನ ತಗೊಂಡಿರೋ ಮಗ ಯಾವತ್ತೂ ತಾಯಿಗೆ ಯಜಮಾನ ಅಥ್ವಾ ತಲೆ ಆಗಲ್ಲ. (ಎಫೆ. 6:1, 2) ಸಭೆಯಲ್ಲಿ ಹಿರಿಯರಿಗೆ ಸಹೋದರ ಸಹೋದರಿಯರ ಮೇಲೆ ಸ್ವಲ್ಪ ಮಟ್ಟಿಗಿನ ಅಧಿಕಾರ ಮಾತ್ರ ಇರುತ್ತೆ. (1 ಥೆಸ. 5:12; ಇಬ್ರಿ. 13:17) ಮದುವೆಯಾಗಿರದ ಒಬ್ಬ ಸಹೋದರಿ ತಂದೆ ತಾಯಿ ಜೊತೆ ಇಲ್ಲದಿದ್ದರೆ ಅವಳಿಗೆ ಯಾರು ಯಜಮಾನ ಆಗ್ತಾರೆ? ಸಭೆಯಲ್ಲಿರೋ ಸಹೋದರರ ತರನೇ ಅವಳಿಗೂ ಕ್ರಿಸ್ತನೇ ಯಜಮಾನ. ಅವಳು ತನ್ನ ತಂದೆಯ ಅಧಿಕಾರದ ಕೆಳಗೆ ಇಲ್ಲದಿದ್ದರೂ ತನ್ನ ಹೆತ್ತವ್ರಿಗೆ, ಹಿರಿಯರಿಗೆ ಗೌರವ ತೋರಿಸೋದನ್ನ ಮುಂದುವರಿಸ್ತಾಳೆ.

ಮದುವೆಯಾಗಿರದ ಸಹೋದರಿ ಒಬ್ಬಳೇ ಕೂತು ಬೈಬಲ್‌ ಅಧ್ಯಯನ ಮಾಡ್ತಿದ್ದಾಳೆ.

ಮದುವೆಯಾಗಿರದ ಸಹೋದರಿ ತಂದೆತಾಯಿ ಜೊತೆ ಜೀವನ ಮಾಡ್ತಿಲ್ಲ ಅಂದ್ರೆ ಅವಳು ಯೇಸುವಿನ ಅಧಿಕಾರದ ಕೆಳಗೆ ಬರ್ತಾಳೆ (ಪ್ಯಾರ 8 ನೋಡಿ)

9. ಸಹೋದರಿಯರು ಕೆಲವೊಮ್ಮೆ ಯಾಕೆ ಮುಸುಕು ಹಾಕಬೇಕು?

9 ಸಭೆಯಲ್ಲಿ ಎಲ್ಲಾ ವಿಷ್ಯಗಳು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡಿಬೇಕು ಅಂತ ಯೆಹೋವ ಬಯಸ್ತಾನೆ. ಹಾಗಾಗಿ ಯೇಸು ಕ್ರಿಸ್ತನನ್ನ ಪುರುಷನಿಗೆ ಯಜಮಾನನಾಗಿ ನೇಮಿಸಿದ್ದಾನೆ. ಅಷ್ಟೇ ಅಲ್ಲ, ಯೆಹೋವ ಸಭೆಯನ್ನ ನೋಡಿಕೊಳ್ಳೋಕೆ ಪುರುಷರಿಗೆ ಅಧಿಕಾರವನ್ನ ಕೊಟ್ಟಿದ್ದಾನೆ. ಸ್ತ್ರೀಯರಿಗೆ ಈ ಅಧಿಕಾರವನ್ನ ಕೊಟ್ಟಿಲ್ಲ. (1 ತಿಮೊ. 2:12) ಒಂದುವೇಳೆ ಸಹೋದರರು ಮಾಡುವ ನೇಮಕವನ್ನ ಸಹೋದರಿಯರು ಮಾಡಬೇಕಾದ ಸಂದರ್ಭ ಬಂದ್ರೆ ಸಹೋದರಿಯರು ಮುಸುಕು ಹಾಕಬೇಕುc ಅಂತ ಯೆಹೋವ ಬಯಸ್ತಾನೆ. (1 ಕೊರಿಂ. 11:4-7) ಯೆಹೋವ ಈ ಏರ್ಪಾಡನ್ನ ಸಹೋದರಿಯರಿಗೆ ಅವಮಾನ ಮಾಡಕ್ಕಲ್ಲ ಬದ್ಲಿಗೆ ಆತ ಯಾರಿಗೆ ಅಧಿಕಾರ ಕೊಟ್ಟಿದ್ದಾನೋ ಅವ್ರಿಗೆ ಸಹೋದರಿಯರು ಗೌರವ ತೋರಿಸ್ಬೇಕು ಅನ್ನೋ ಉದ್ದೇಶದಿಂದ ಮಾಡಿದ್ದಾನೆ. ಈಗ ಮುಂದಿನ ಪ್ರಶ್ನೆಗೆ ಉತ್ತರ ನೋಡೋಣ: ಕುಟುಂಬದ ಯಜಮಾನರಿಗೆ ಮತ್ತು ಸಭೆಯ ಹಿರಿಯರಿಗೆ ಎಷ್ಟು ಅಧಿಕಾರ ಇದೆ?

ಒಬ್ಬ ಸಹೋದರಿ ಯಾವಾಗ ಮುಸುಕು ಹಾಕಬೇಕು?

ಒಬ್ಬ ಸಹೋದರಿ ತಲೆಗೆ ಮುಸುಕು ಹಾಕಿ ಕೂತ್ಕೊಂಡು ಕ್ಷೇತ್ರಸೇವಾ ಕೂಟ ನಡಿಸ್ತಿದ್ದಾಳೆ.

ಇದ್ರ ಬಗ್ಗೆ ತಿಳ್ಕೊಳ್ಳಲು ಈ ಕೆಳಗಿರೋ ಪ್ರಶ್ನೆಗಳ ಬಗ್ಗೆ ಅವಳು ಉತ್ತರ ಕೊಡ್ಬೇಕು:

  1. 1. ಅವಳು ಬೇರೆಯವ್ರ ಮುಂದೆ ಪ್ರಾರ್ಥನೆ ಮಾಡ್ತಿದ್ದಾಳಾ, ಬೇರೆಯವ್ರಿಗೆ ಬೈಬಲ್‌ ಕಲಿಸುವಾಗ ದೀಕ್ಷಾಸ್ನಾನ ತಗೊಂಡಿರೋ ಒಬ್ಬ ಸಹೋದರ ಅವಳ ಜೊತೆ ಇದ್ದಾನಾ?—1 ಕೊರಿಂ. 11:4, 5.

  2. 2. ದೀಕ್ಷಾಸ್ನಾನ ತಗೊಂಡಿರೋ ಸಹೋದರ ಇಲ್ಲದಿರೋ ಕಾರಣ ಅವನು ಮಾಡಬೇಕಾದ ನೇಮಕವನ್ನ ಮಾಡೋ ಪರಿಸ್ಥಿತಿ ಸಹೋದರಿಗೆ ಬಂದಿದ್ಯಾ?—1 ತಿಮೊ. 2:11, 12; ಇಬ್ರಿ. 13:17.

  3. 3. ಆ ಸಹೋದರಿ ಬೇರೆಯವ್ರ ಮುಂದೆ ಪ್ರಾರ್ಥಿಸ್ವಾಗ ಅಥ್ವಾ ಬೈಬಲ್‌ ಕಲಿಸ್ವಾಗ ಅಲ್ಲೇ ಪಕ್ಕದಲ್ಲೇ ಅವಳ ಗಂಡ ಇದ್ದಾನಾ?—1 ಕೊರಿಂ. 11:3.

ಈ ಪ್ರಶ್ನೆಗಳಿಗೆ ಉತ್ತರ ಹೌದು ಅಂತಾದ್ರೆ ಸಹೋದರಿ ಮುಸುಕು ಹಾಕಬೇಕು. ಇಲ್ಲ ಅಂತಾದ್ರೆ ಅವಳು ಮುಸುಕು ಹಾಕೋ ಅಗತ್ಯ ಇಲ್ಲ.e

ಕುಟುಂಬದ ಯಜಮಾನನಿಗೆ ಮತ್ತು ಹಿರಿಯರಿಗೆ ಇರೋ ಅಧಿಕಾರ

10. ಸಭೆಯಲ್ಲಿ ನಿಯಮಗಳನ್ನ ಇಡೋದು ಒಳ್ಳೇದು ಅಂತ ಹಿರಿಯರಿಗೆ ಯಾಕೆ ಅನಿಸ್ಬಹುದು?

10 ಹಿರಿಯರು ಯೇಸುನ ಪ್ರೀತಿಸ್ತಾರೆ ಮತ್ತು ಯೆಹೋವ, ಯೇಸು ತಮ್ಮ ಕೈಗೆ ಒಪ್ಪಿಸಿರೋ ಪ್ರತಿಯೊಂದು ‘ಕುರಿಯನ್ನೂ’ ಪ್ರೀತಿಸ್ತಾರೆ. (ಯೋಹಾ. 21:15-17) ಒಬ್ಬ ಹಿರಿಯ ಒಳ್ಳೇ ಉದ್ದೇಶದಿಂದಲೇ ಸಭೆಯವ್ರಿಗೆ ತಾನು ತಂದೆ ತರ ಇರಬೇಕು ಅಂತ ಯೋಚಿಸ್ಬಹುದು. ಕುಟುಂಬದ ಯಜಮಾನ ಕುಟುಂಬದವ್ರನ್ನ ಕಾಪಾಡೋಕೆ ನಿಯಮಗಳನ್ನ ಇಡೋ ತರಾನೇ ಸಭೆಯವ್ರನ್ನ ಕಾಪಾಡೋಕೆ ತಾನೂ ನಿಯಮಗಳನ್ನ ಇಟ್ರೆ ಚೆನ್ನಾಗಿರುತ್ತೆ ಅಂತ ಹಿರಿಯ ಯೋಚಿಸ್ಬಹುದು. ಕೆಲವೊಮ್ಮೆ ಈ ರೀತಿ ನಿಯಮಗಳನ್ನ ಮಾಡೋಕೆ ಮತ್ತು ತಮ್ಮ ಪರವಾಗಿ ತೀರ್ಮಾನಗಳನ್ನ ತಗೊಳ್ಳೋಕೆ ಸಹೋದರ ಸಹೋದರಿಯರೇ ಹಿರಿಯರ ಹತ್ರ ಕೇಳ್ಬಹುದು. ಆದ್ರೆ ಪ್ರಶ್ನೆ ಏನಂದ್ರೆ, ಹಿರಿಯರಿಗೂ ಕುಟುಂಬದ ಯಜಮಾನರಿಗೂ ಒಂದೇ ತರದ ಅಧಿಕಾರ ಇದ್ಯಾ?

ಒಬ್ಬ ಹಿರಿಯ ಸಭೆಯಲ್ಲಿ ಭಾಷಣ ಕೊಡ್ತಿದ್ದಾನೆ.

ಯೆಹೋವನಿಗೆ ಆಪ್ತರಾಗೋಕೆ ಸಭೆಯವ್ರಿಗೆ ಹಿರಿಯರು ಸಹಾಯ ಮಾಡ್ತಾರೆ, ಅವ್ರನ್ನ ಪ್ರೀತಿಸ್ತಾರೆ, ಪಶ್ಚಾತ್ತಾಪ ಪಡದವ್ರನ್ನ ಸಭೆಯಿಂದ ಹೊರಗೆ ಹಾಕೋ ಹೊಣೆ ಅವ್ರಿಗಿದೆ (ಪ್ಯಾರ 11-12 ನೋಡಿ)

11. ಕುಟುಂಬದ ಯಜಮಾನನ ಪಾತ್ರಕ್ಕೂ ಸಭೆಯ ಹಿರಿಯರ ಪಾತ್ರಕ್ಕೂ ಯಾವ ಹೋಲಿಕೆಗಳಿವೆ?

11 ಕುಟುಂಬದ ಯಜಮಾನನ ಪಾತ್ರಕ್ಕೂ ಸಭೆಯ ಹಿರಿಯರ ಪಾತ್ರಕ್ಕೂ ಹೋಲಿಕೆಗಳಿವೆ ಅಂತ ಅಪೊಸ್ತಲ ಪೌಲನ ಮಾತುಗಳಿಂದ ಗೊತ್ತಾಗುತ್ತೆ. (1 ತಿಮೊ. 3:4, 5) ಉದಾಹರಣೆಗೆ, ಕುಟುಂಬ ಸದಸ್ಯರು ಕುಟುಂಬದ ಯಜಮಾನನ ಮಾತನ್ನ ಕೇಳ್ಬೇಕು ಅಂತ ಯೆಹೋವ ಬಯಸ್ತಾನೆ. (ಕೊಲೊ. 3:20) ಸಭೆಯವ್ರು ಹಿರಿಯರ ಮಾತನ್ನ ಕೇಳ್ಬೇಕು ಅಂತ ಬಯಸ್ತಾನೆ. ಕುಟುಂಬದವ್ರು ಯೆಹೋವನಿಗೆ ಆಪ್ತರಾಗೋಕೆ ಕುಟುಂಬದ ಯಜಮಾನ ಸಹಾಯ ಮಾಡ್ತಾನೆ. ಸಭೆಯವ್ರು ಯೆಹೋವನಿಗೆ ಆಪ್ತರಾಗೋಕೆ ಹಿರಿಯರು ಸಹಾಯ ಮಾಡ್ತಾರೆ. ಯಜಮಾನ ಕುಟುಂಬದವ್ರ ಮೇಲೆ ತನಗಿರೋ ಪ್ರೀತಿನ ತೋರಿಸುವಂತೆಯೇ ಹಿರಿಯರು ಸಹ ಸಭೆಯವ್ರ ಮೇಲೆ ತಮಗಿರೋ ಪ್ರೀತಿನ ನಡೆನುಡಿಯಲ್ಲಿ ತೋರಿಸ್ತಾರೆ. ಕುಟುಂಬದ ಯಜಮಾನನ ತರನೇ ಹಿರಿಯರು ಇನ್ನೂ ಒಂದು ವಿಷ್ಯ ಮಾಡ್ತಾರೆ. ಸಹೋದರ ಸಹೋದರಿಯರು ಕಷ್ಟದಲ್ಲಿದ್ದಾಗ ಅವ್ರಿಗೆ ಸಹಾಯ ಮಾಡ್ತಾರೆ. (ಯಾಕೋ. 2:15-17) ಇನ್ನೊಂದು ಹೋಲಿಕೆ ಏನಂದ್ರೆ ಹಿರಿಯರು ಸಭೆಯವ್ರಿಗೆ ಮತ್ತು ಕುಟುಂಬದ ಯಜಮಾನ ಕುಟುಂಬದವ್ರಿಗೆ ಯೆಹೋವನ ನಿಯಮಗಳನ್ನ ಪಾಲಿಸೋಕೆ ಕಲಿಸ್ತಾರೆ. ಆದ್ರೆ ಇದನ್ನ ಮಾಡ್ವಾಗ ಹಿರಿಯರಾಗಲಿ ಕುಟುಂಬದ ಯಜಮಾನನಾಗಲಿ ‘ಬೈಬಲಿನಲ್ಲಿ ಬರೆದಿರೋ ವಿಷಯಗಳನ್ನ ಬಿಟ್ಟು’ ಬೇರೆ ವಿಷಯಗಳನ್ನ ಕಲಿಸದಂತೆ ಎಚ್ಚರ ವಹಿಸ್ಬೇಕು.—1 ಕೊರಿಂ. 4:6.

ಒಬ್ಬ ಸಹೋದರ ಕುಟುಂಬ ಆರಾಧನೆ ನಡಿಸ್ತಿದ್ದಾನೆ.

ಕುಟುಂಬದ ಯಜಮಾನ ಕುಟುಂಬದ ಪರವಾಗಿ ತೀರ್ಮಾನ ಮಾಡ್ತಾನೆ, ಆದ್ರೂ ಪ್ರೀತಿಯಿರೋ ಯಜಮಾನ ತೀರ್ಮಾನ ತಗೊಳ್ಳೋ ಮುಂಚೆ ಹೆಂಡ್ತಿಗೂ ಒಂದು ಮಾತು ಕೇಳ್ತಾನೆ (ಪ್ಯಾರ 13 ನೋಡಿ)

12-13. ಕುಟುಂಬದ ಯಜಮಾನನಿಗಿರೋ ಅಧಿಕಾರಕ್ಕೂ ಹಿರಿಯನಿಗಿರೋ ಅಧಿಕಾರಕ್ಕೂ ಇರೋ ವ್ಯತ್ಯಾಸವನ್ನ ಜ್ಞಾನೋಕ್ತಿ 6:20 ಹೇಗೆ ತೋರಿಸುತ್ತೆ?

12 ಆದ್ರೆ ಒಬ್ಬ ಹಿರಿಯನಿಗಿರೋ ಅಧಿಕಾರಕ್ಕೂ ಕುಟುಂಬದ ಯಜಮಾನನಿಗಿರೋ ಅಧಿಕಾರಕ್ಕೂ ಕೆಲವು ವ್ಯತ್ಯಾಸಗಳು ಸಹ ಇದೆ. ಉದಾಹರಣೆ ತೀರ್ಪು ಮಾಡೋ ಕೆಲಸನಾ ಯೆಹೋವ ಹಿರಿಯರಿಗೆ ಒಪ್ಪಿಸಿದ್ದಾನೆ ಮತ್ತು ತಪ್ಪು ಮಾಡಿ ಪಶ್ಚಾತ್ತಾಪ ಪಡದವರನ್ನ ಸಭೆಯಿಂದ ಹೊರಗೆ ಹಾಕೋ ಹೊಣೆಯನ್ನೂ ಅವ್ರಿಗೆ ಕೊಟ್ಟಿದ್ದಾನೆ.—1 ಕೊರಿಂ. 5:11-13.

13 ಆದ್ರೆ ಯೆಹೋವ ಕುಟುಂಬದ ಯಜಮಾನನಿಗೆ ಕೊಟ್ಟಿರೋ ಕೆಲವು ಅಧಿಕಾರವನ್ನ ಹಿರಿಯರಿಗೆ ಕೊಟ್ಟಿಲ್ಲ. ಕುಟುಂಬದಲ್ಲಿ ನಿಯಮಗಳನ್ನ ಇಡೋ ಅಧಿಕಾರವನ್ನ ಮತ್ತು ಆ ನಿಯಮಗಳನ್ನ ಕುಟುಂಬದವ್ರೆಲ್ಲಾ ಪಾಲಿಸಬೇಕು ಅಂತ ಹೇಳೋ ಅಧಿಕಾರವನ್ನ ಯೆಹೋವ ಕುಟುಂಬದ ಯಜಮಾನನಿಗೆ ಕೊಟ್ಟಿದ್ದಾನೆ. (ಜ್ಞಾನೋಕ್ತಿ 6:20 ಓದಿ.) ಉದಾಹರಣೆಗೆ, ಮಕ್ಕಳು ಮನೆಗೆ ಎಷ್ಟು ಗಂಟೆಯೊಳಗೆ ಬರಬೇಕು ಅಂತ ಹೇಳೋ ಹಕ್ಕು ಕುಟುಂಬದ ಯಜಮಾನನಿಗೆ ಇದೆ. ಹೇಳಿದ ಮಾತನ್ನು ಕೇಳದಿದ್ದಾಗ ಮಕ್ಕಳಿಗೆ ಶಿಕ್ಷೆ ಕೊಡೋ ಅಧಿಕಾರನೂ ಅವನಿಗಿದೆ. (ಎಫೆ. 6:1) ಆದ್ರೆ ಪ್ರೀತಿಯಿರೋ ಕುಟುಂಬದ ಯಜಮಾನ ಮನೆ ವಿಷ್ಯದಲ್ಲಿ ಯಾವುದೇ ತೀರ್ಮಾನ ತಗೊಳ್ಳೋ ಮುಂಚೆ ತನ್ನ ಹೆಂಡ್ತಿಗೂ ಒಂದು ಮಾತು ಕೇಳ್ತಾನೆ. ಯಾಕಂದ್ರೆ, ಅವರಿಬ್ಬರು “ಒಂದೇ ಶರೀರ.”d—ಮತ್ತಾ. 19:6.

ಸಭೆಯ ಯಜಮಾನನಾದ ಕ್ರಿಸ್ತನನ್ನು ಗೌರವಿಸಿ

ಯೇಸು ಸ್ವರ್ಗದಲ್ಲಿ ಸಿಂಹಾಸನದ ಮೇಲೆ ಕೂತಿದ್ದಾನೆ. ಅವನ ಮೇಲೆ ಯೆಹೋವನ ಮಹಿಮೆಯ ಕಿರಣಗಳು ಬೀಳ್ತಿವೆ.

ಯೇಸು ಯೆಹೋವನ ಅಧಿಕಾರದ ಕೆಳಗಿದ್ದಾನೆ ಮತ್ತು ಕ್ರೈಸ್ತ ಸಭೆಗೆ ನಿರ್ದೇಶನ ಕೊಡ್ತಾನೆ (ಪ್ಯಾರ 14 ನೋಡಿ)

14. (ಎ) ಯೆಹೋವ ಯೇಸುವನ್ನ ಸಭೆಯ ಯಜಮಾನನಾಗಿ ಮಾಡಿರೋದು ನ್ಯಾಯವಾಗಿದೆ ಅನ್ನೋದನ್ನ ಮಾರ್ಕ 10:45 ಹೇಗೆ ತೋರಿಸುತ್ತೆ? (ಬಿ) ಆಡಳಿತ ಮಂಡಲಿ ಏನೆಲ್ಲಾ ಮಾಡುತ್ತೆ? (“ಆಡಳಿತ ಮಂಡಲಿಗಿರೋ ಜವಾಬ್ದಾರಿಗಳು” ಚೌಕ ನೋಡಿ.)

14 ಯೆಹೋವ ಯೇಸುವಿನ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ಸಭೆಯಲ್ಲಿರೋ ಪ್ರತಿಯೊಬ್ರ ಜೀವವನ್ನ ಮತ್ತು ಮುಂದಕ್ಕೆ ಯೇಸುವಿನಲ್ಲಿ ನಂಬಿಕೆಯಿಡೋ ಪ್ರತಿಯೊಬ್ರ ಜೀವವನ್ನ ಕೊಂಡುಕೊಂಡಿದ್ದಾನೆ. (ಮಾರ್ಕ 10:45 ಓದಿ; ಅ. ಕಾ. 20:28; 1 ಕೊರಿಂ. 15:21, 22) ಹಾಗಾಗಿ ತನ್ನ ಜೀವನೇ ಕೊಟ್ಟಿರೋ ಯೇಸುನ ಯೆಹೋವ ಸಭೆಯ ಯಜಮಾನನಾಗಿ ಮಾಡಿರೋದು ನ್ಯಾಯವಾಗಿಯೇ ಇದೆ. ಆದ್ರಿಂದ ಪ್ರತಿಯೊಬ್ರು, ಪ್ರತಿ ಕುಟುಂಬ ಮತ್ತು ಇಡೀ ಸಭೆಯವ್ರು ಏನು ಮಾಡ್ಬೇಕು ಅಂತ ನಿಯಮಗಳನ್ನ ಇಡೋ ಅಧಿಕಾರ ಯೇಸುಗಿದೆ. ಆ ನಿಯಮಗಳನ್ನ ನಾವು ಪಾಲಿಸ್ಬೇಕು ಅಂತ ಹೇಳೋ ಹಕ್ಕು ಯೇಸುಗಿದೆ. (ಗಲಾ. 6:2) ಆದ್ರೆ ಯೇಸು ಬರೀ ನಿಯಮಗಳನ್ನ ಕೊಡಲ್ಲ, ಆತ ನಮ್ಮಲ್ಲಿ ಪ್ರತಿಯೊಬ್ಬರನ್ನೂ ಪೋಷಿಸ್ತಾನೆ, ಪ್ರೀತಿಸ್ತಾನೆ.—ಎಫೆ. 5:29.

ಆಡಳಿತ ಮಂಡಲಿಗಿರೋ ಜವಾಬ್ದಾರಿಗಳು

ಆಡಳಿತ ಮಂಡಲಿಯ ಸದಸ್ಯರೆಲ್ಲ ಸೇರಿ ಚರ್ಚಿಸ್ತಿದ್ದಾರೆ.

ಆಡಳಿತ ಮಂಡಲಿಯ ಸದಸ್ಯರು ತಮ್ಮ ಕ್ರೈಸ್ತ ಸಹೋದರ ಸಹೋದರಿಯರ ನಂಬಿಕೆಗೆ ಒಡೆಯರಲ್ಲ. (2 ಕೊರಿಂ. 1:24) ಯೇಸು ಕ್ರಿಸ್ತನೇ ಕ್ರೈಸ್ತ ಸಭೆಯ ಯಜಮಾನ ಆಗಿದ್ದಾನೆ ಅಂತ ಅವ್ರಿಗೂ ಗೊತ್ತು ಮತ್ತು “ನೀವೆಲ್ಲ ಸಹೋದರರು” ಅಂತ ಯೇಸು ಹೇಳಿದ ಮಾತನ್ನ ಅವ್ರೂ ಸಂಪೂರ್ಣವಾಗಿ ಒಪ್ತಾರೆ. (ಮತ್ತಾ. 23:8) ಅವ್ರು ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸ್ತಾರೆ ಮತ್ತು ಅವ್ರಿಗೆ ಬೇಕಾಗಿರೋದನ್ನ ಕೊಡೋಕೆ ತಮ್ಮಿಂದಾಗೋ ಎಲ್ಲಾ ಪ್ರಯತ್ನ ಮಾಡ್ತಾರೆ. ಆಡಳಿತ ಮಂಡಲಿಯ ಸದಸ್ಯರು ಯೇಸು ಕ್ರಿಸ್ತನ ಅಧಿಕಾರದ ಕೆಳಗೆ ಬರ್ತಾರೆ. ಲೋಕದ ಎಲ್ಲಾ ಕಡೆ ಇರೋ ಯೆಹೋವನ ಜನ್ರಿಗೆ ಬೇಕಾದ ನಿರ್ದೇಶನಗಳನ್ನ ಕೊಡ್ತಾರೆ. ಶಾಖಾ ಸಮಿತಿಯ ಸದಸ್ಯರನ್ನ ಮತ್ತು ಸಂಚರಣ ಮೇಲ್ವಿಚಾರಕರನ್ನ ನೇಮಿಸ್ತಾರೆ. (ಎಫೆ. 4:7-13) ಸಂಚರಣ ಮೇಲ್ವಿಚಾರಕರು ಸಭೆಯಲ್ಲಿ ಹಿರಿಯರನ್ನ ನೇಮಿಸ್ತಾರೆ. (ಅ. ಕಾ. 14:23; ತೀತ 1:5) ಯೆಹೋವನಿಗೆ ಆಪ್ತರಾಗೋಕೆ ಸಹೋದರ ಸಹೋದರಿಯರಿಗೆ ಬೇಕಾದ ಮಾಹಿತಿಯನ್ನ ಕೊಡೋ ಮತ್ತು ಬೈಬಲಿಂದ ಕಲಿಸೋ ಜವಾಬ್ದಾರಿ ಆಡಳಿತ ಮಂಡಲಿಗಿದೆ. ಅದನ್ನ ಅವ್ರು ನಿಷ್ಠೆಯಿಂದ ಮಾಡ್ತಾರೆ. ಪತ್ರಗಳು, ಪ್ರಕಾಶನಗಳು, JW ಪ್ರಸಾರ, ಬೈಬಲ್‌ ಶಾಲೆಗಳು, ಕೂಟಗಳು, ಅಧಿವೇಶನಗಳು ಮತ್ತು ಸಮ್ಮೇಳನಗಳ ಮೂಲಕ ಇದನ್ನ ಕೊಡ್ತಾರೆ. (ಅ. ಕಾ. 15:22-35) ಎಲ್ಲಾದ್ರೂ ನೈಸರ್ಗಿಕ ವಿಪತ್ತು ಸಂಭವಿಸಿದ್ರೆ ಅಥ್ವಾ ಕಷ್ಟದ ಸನ್ನಿವೇಶ ಎದುರಾದ್ರೆ ಆಡಳಿತ ಮಂಡಲಿಯ ಸದಸ್ಯರು ತಕ್ಷಣನೇ ಆ ಸ್ಥಳ ಯಾವ ಶಾಖೆಯಡಿ ಬರುತ್ತೋ ಆ ಶಾಖೆಯನ್ನ ಸಂಪರ್ಕಿಸಿ ಸಹೋದರ ಸಹೋದರಿಯರಿಗೆ ಬೇಕಾದ ಸಹಾಯ ಸಾಂತ್ವನ ಸಿಗುವಂತೆ ನೋಡಿಕೊಳ್ತಾರೆ.f

15-16. ಸಹೋದರಿ ಮರ್ಲಿ ಮತ್ತು ಸಹೋದರ ಬೆಂಜಮಿನ್‌ ಹೇಳಿರೋ ಮಾತುಗಳಿಂದ ನೀವೇನು ಕಲಿತಿರಿ?

15 ಸಹೋದರಿಯರು ಕ್ರಿಸ್ತನಿಗೆ ಹೇಗೆ ಗೌರವ ತೋರಿಸ್ತಾರೆ? ಆತನು ನೇಮಿಸಿರೋ ಪುರುಷರು ಕೊಡೋ ನಿರ್ದೇಶನಗಳನ್ನ ಪಾಲಿಸೋ ಮೂಲಕ ಆತನಿಗೆ ಗೌರವ ತೋರಿಸ್ತಾರೆ. ಅಮೆರಿಕದ ಸಹೋದರಿ ಮರ್ಲಿ ಹೀಗೆ ಹೇಳ್ತಾರೆ: “ಒಬ್ಬ ಪತ್ನಿಯಾಗಿ ಮತ್ತು ಸಭೆಯಲ್ಲಿ ಒಬ್ಬ ಸಹೋದರಿಯಾಗಿ ನನಗಿರೋ ಜವಾಬ್ದಾರಿಗಳನ್ನ ನಾನು ತುಂಬ ಮಾನ್ಯ ಮಾಡ್ತೀನಿ. ಯೆಹೋವ ನನ್ನ ಗಂಡನಿಗೆ ಮತ್ತು ಸಭೆಯಲ್ಲಿರೋ ಹಿರಿಯರಿಗೆ ಅಧಿಕಾರ ಕೊಟ್ಟಿದ್ದಾನೆ. ಆ ಅಧಿಕಾರಕ್ಕೆ ಗೌರವ ತೋರಿಸೋಕೆ ನನ್ನಿಂದ ಆಗೋದನ್ನೆಲ್ಲಾ ಮಾಡ್ತೀನಿ. ನನ್ನ ಗಂಡ ಮತ್ತು ಸಭೆಯಲ್ಲಿರೋ ಸಹೋದರರು ನನ್ನನ್ನ ತುಂಬ ಗೌರವಿಸ್ತಾರೆ. ನನಗಿರೋ ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸಿದಾಗ ನನ್ನನ್ನ ಹೊಗಳ್ತಾರೆ. ಹಾಗಾಗಿ ಅವ್ರಿಗೆ ಗೌರವ ತೋರಿಸೋಕೆ ನಂಗೂ ಸುಲಭ ಆಗುತ್ತೆ.” ಇದೇ ತರ ಬೇರೆ ಸಹೋದರಿಯರಿಗೂ ಅನ್ಸುತ್ತೆ.

16 ಸಹೋದರರು ದೇವರು ತಮಗೆ ಕೊಟ್ಟಿರೋ ಅಧಿಕಾರನ ಚೆನ್ನಾಗಿ ಅರ್ಥಮಾಡ್ಕೊಂಡಿದ್ದೇವೆ ಅಂತ ಹೇಗೆ ತೋರಿಸ್ತಾರೆ? ಸಹೋದರಿಯರನ್ನ ಗೌರವಿಸೋ ಮೂಲಕ ತೋರಿಸ್ತಾರೆ. ಇಂಗ್ಲೆಂಡಿನ ಸಹೋದರ ಬೆಂಜಮಿನ್‌ ಹೀಗೆ ಹೇಳ್ತಾರೆ: “ಕೂಟಗಳಲ್ಲಿ ಸಹೋದರಿಯರು ಕೊಡೋ ಉತ್ತರದಿಂದ ನಾನು ತುಂಬ ಕಲಿತಿದ್ದೀನಿ. ಸ್ಟಡಿ ಹೇಗೆ ಮಾಡೋದು, ಸೇವೆನ ಇನ್ನೂ ಚೆನ್ನಾಗಿ ಹೇಗೆ ಮಾಡ್ಬಹುದು ಅನ್ನೋ ವಿಷ್ಯದಲ್ಲೂ ಅವ್ರು ತುಂಬ ಒಳ್ಳೇ ಸಲಹೆಗಳನ್ನ ಕೊಡ್ತಾರೆ. ಸಭೆಗಾಗಿ ಅವ್ರು ಮಾಡೋ ಪ್ರತಿಯೊಂದು ಕೆಲಸನೂ ತುಂಬ ಪ್ರಯೋಜನ ತರುತ್ತೆ.”

17. ಕೆಲವ್ರಿಗೆ ಯೆಹೋವ ಅಧಿಕಾರ ಕೊಟ್ಟಿದ್ದಾನೆ ಅನ್ನೋದನ್ನ ಅರ್ಥಮಾಡ್ಕೊಂಡು ಅದನ್ನ ಗೌರವಿಸೋದು ಯಾಕೆ ಮುಖ್ಯ?

17 ಯೆಹೋವನು ಕೆಲವರಿಗೆ ಅಧಿಕಾರ ಕೊಟ್ಟಿದ್ದಾನೆ ಅನ್ನೋದನ್ನ ಸಭೆಯಲ್ಲಿರೋ ಪುರುಷರು, ಸ್ತ್ರೀಯರು, ಕುಟುಂಬದ ಯಜಮಾನರು ಮತ್ತು ಹಿರಿಯರು ಹೀಗೆ ಎಲ್ರೂ ಅರ್ಥ ಮಾಡ್ಕೊಂಡು ಆ ಏರ್ಪಾಡನ್ನ ಗೌರವಿಸಬೇಕು. ಆಗ ಸಭೆಯಲ್ಲಿ ಶಾಂತಿ ಇರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪ್ರೀತಿಯ ಅಪ್ಪ ಯೆಹೋವನಿಗೆ ಮಹಿಮೆ ತರುತ್ತೆ!—ಕೀರ್ತ. 150:6.

ನಿಮ್ಮ ಉತ್ತರವೇನು?

  • ಸಹೋದರಿಯರನ್ನು ನಾವು ಹೇಗೆ ಕಾಣ್ಬೇಕು?

  • ಸಭೆಯಲ್ಲಿರೋ ಎಲ್ಲಾ ಸಹೋದರರಿಗೆ ಸಹೋದರಿಯರ ಮೇಲೆ ಅಧಿಕಾರ ಇದ್ಯಾ? ವಿವರಿಸಿ.

  • ಕುಟುಂಬದ ಯಜಮಾನನಿಗಿರೋ ಅಧಿಕಾರಕ್ಕೂ ಸಭೆಯ ಹಿರಿಯನಿಗಿರೋ ಅಧಿಕಾರಕ್ಕೂ ಯಾವ ವ್ಯತ್ಯಾಸ ಇದೆ?

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

a ಸಭೆಯಲ್ಲಿ ಸಹೋದರಿಯರಿಗೆ ಯಾವ ಪಾತ್ರ ಇದೆ? ಎಲ್ಲಾ ಸಹೋದರರಿಗೆ ಸಭೆಯಲ್ಲಿರೋ ಎಲ್ಲಾ ಸಹೋದರಿಯರ ಮೇಲೆ ಅಧಿಕಾರ ಇದ್ಯಾ? ಹಿರಿಯರಿಗೆ ಮತ್ತು ಕುಟುಂಬದ ಯಜಮಾನ್ರಿಗೆ ಒಂದೇ ರೀತಿಯ ಅಧಿಕಾರ ಇದ್ಯಾ? ಈ ಪ್ರಶ್ನೆಗಳಿಗೆ ಬೈಬಲ್‌ ಯಾವ ಉತ್ತರ ಕೊಡುತ್ತೆ ಅಂತ ಈ ಲೇಖನದಲ್ಲಿ ನೋಡೋಣ.

b 2020 ರ ಸೆಪ್ಟೆಂಬರ್‌ ಕಾವಲಿನಬುರುಜುವಿನಲ್ಲಿ ಬಂದಿರೋ “ಸಹೋದರಿಯರಿಗೆ ಬೆಂಬಲ ಕೊಡಿ” ಲೇಖನದ ಪ್ಯಾರ 6 ನೋಡಿ.

c “ಒಬ್ಬ ಸಹೋದರಿ ಯಾವಾಗ ಮುಸುಕು ಹಾಕಬೇಕು?” ಚೌಕ ನೋಡಿ.

d ಕುಟುಂಬ ಯಾವ ಭಾಷೆಯ ಸಭೆಗೆ ಹೋಗ್ಬೇಕು ಅಂತ ಯಾರು ತೀರ್ಮಾನ ಮಾಡ್ಬೇಕು ಅನ್ನೋದ್ರ ಬಗ್ಗೆ ತಿಳ್ಕೊಳ್ಳಲು 2020 ರ ಆಗಸ್ಟ್‌ ಕಾವಲಿನಬುರುಜುವಿನಲ್ಲಿರೋ “ಯೆಹೋವನ ಸಭೆಯಲ್ಲಿರೋ ಪ್ರತಿಯೊಬ್ರ ಪಾತ್ರನ ಗೌರವಿಸಿ” ಲೇಖನದ ಪ್ಯಾರ 17-19 ನೋಡಿ.

e ಇದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 239 ರಿಂದ 242 ನೋಡಿ.

f ಆಡಳಿತ ಮಂಡಲಿಯ ಜವಾಬ್ದಾರಿಗಳ ಬಗ್ಗೆ ಹೆಚ್ಚು ತಿಳ್ಕೊಳ್ಳಲು 2013 ಜುಲೈ ಕಾವಲಿನಬುರುಜುವಿನ ಪುಟ 20-25 ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ