ಅಧ್ಯಾಯ 1
ನಿಷ್ಕೃಷ್ಟ ವಾಚನ
ಎಲ್ಲ ರೀತಿಯ ಜನರು “ಸತ್ಯದ” ನಿಷ್ಕೃಷ್ಟ “ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆಯೆಂದು ಶಾಸ್ತ್ರವಚನಗಳು ಹೇಳುತ್ತವೆ. (1 ತಿಮೊ. 2:4) ಇದಕ್ಕೆ ಹೊಂದಿಕೆಯಲ್ಲಿ, ನಾವು ಬೈಬಲಿನಿಂದ ಗಟ್ಟಿಯಾಗಿ ಓದುವಾಗ, ನಿಷ್ಕೃಷ್ಟ ಜ್ಞಾನವನ್ನು ತಿಳಿಯಪಡಿಸಲು ನಮಗಿರುವ ಅಪೇಕ್ಷೆಯು ನಾವು ಓದುವ ವಿಧವನ್ನು ಪ್ರಭಾವಿಸಬೇಕು.
ಬೈಬಲಿನಿಂದ ಮತ್ತು ಬೈಬಲಿನ ಅರ್ಥವನ್ನು ವಿವರಿಸುವ ಪುಸ್ತಕಗಳಿಂದ ಗಟ್ಟಿಯಾಗಿ ಓದುವ ಸಾಮರ್ಥ್ಯವು, ಯುವ ಜನರು ವೃದ್ಧರು ಎಂದಿರದೆ ಎಲ್ಲರಿಗೂ ಪ್ರಾಮುಖ್ಯವಾಗಿದೆ. ಯೆಹೋವನ ಸಾಕ್ಷಿಗಳಾಗಿರುವ ನಮಗೆ, ಯೆಹೋವನ ಮತ್ತು ಆತನ ಮಾರ್ಗಗಳ ಕುರಿತಾದ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಜವಾಬ್ದಾರಿಯಿದೆ. ಇದರಲ್ಲಿ ಅನೇಕವೇಳೆ, ಒಬ್ಬ ವ್ಯಕ್ತಿಗೊ ಒಂದು ಚಿಕ್ಕ ಗುಂಪಿಗೊ ಓದಿ ಹೇಳುವುದು ಸೇರಿರುತ್ತದೆ. ನಾವು ಇಂತಹ ವಾಚನವನ್ನು ಕುಟುಂಬ ವೃತ್ತದೊಳಗೂ ಮಾಡುತ್ತೇವೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ, ಆಬಾಲವೃದ್ಧರಾದ ಸಹೋದರ ಸಹೋದರಿಯರಿಗೆ ಗಟ್ಟಿಯಾಗಿ ಓದುವುದರಲ್ಲಿ ಅಭಿವೃದ್ಧಿಹೊಂದುವ ದೃಷ್ಟಿಯಿಂದ ಸಲಹೆಯನ್ನು ಪಡೆಯುವ ಸೂಕ್ತವಾದ ಅವಕಾಶಗಳಿವೆ.
ಬೈಬಲನ್ನು ಬಹಿರಂಗವಾಗಿ ಒಬ್ಬೊಬ್ಬ ವ್ಯಕ್ತಿಗೊ ಅಥವಾ ಒಂದು ಸಭೆಗೊ ಓದಿಹೇಳುವುದು ಗಂಭೀರವಾಗಿ ಪರಿಗಣಿಸಲ್ಪಡಬೇಕಾದ ಸಂಗತಿಯಾಗಿದೆ. ಬೈಬಲು ದೈವಪ್ರೇರಿತವಾಗಿದೆ. ಅದಲ್ಲದೆ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿ. 4:12) ಇನ್ನಾವ ಮೂಲದಿಂದಲೂ ದೊರೆಯದಂಥ ಅಮೂಲ್ಯವಾದ ಜ್ಞಾನ ದೇವರ ವಾಕ್ಯದಲ್ಲಿದೆ. ಅದು, ಒಬ್ಬ ವ್ಯಕ್ತಿಯು ಒಬ್ಬನೇ ಸತ್ಯ ದೇವರ ಕುರಿತು ತಿಳಿದು, ಆತನೊಂದಿಗೆ ಉತ್ತಮವಾದ ಸಂಬಂಧವನ್ನು ಬೆಳೆಸಿ, ಜೀವನದ ಸಮಸ್ಯೆಗಳನ್ನು ಜಯಪ್ರದವಾಗಿ ನಿಭಾಯಿಸಲು ಅವನಿಗೆ ಸಹಾಯಮಾಡಬಲ್ಲದು. ದೇವರ ನೂತನ ಲೋಕದಲ್ಲಿ ನಿತ್ಯಜೀವಕ್ಕೆ ನಡೆಸುವ ದಾರಿಯನ್ನು ಅದು ವಿವರಿಸುತ್ತದೆ. ಆದುದರಿಂದ, ನಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಬೈಬಲನ್ನು ಉತ್ತಮವಾದ ರೀತಿಯಲ್ಲಿ ಓದುವುದೇ ನಮ್ಮ ಗುರಿಯಾಗಿರಬೇಕು.—ಕೀರ್ತ. 119:140; ಯೆರೆ. 26:2.
ನಿಷ್ಕೃಷ್ಟವಾಗಿ ಓದುವ ವಿಧ. ಪರಿಣಾಮಕಾರಿಯಾಗಿ ಓದುವುದರಲ್ಲಿ ಅನೇಕ ಅಂಶಗಳು ಒಳಗೂಡಿವೆಯಾದರೂ, ನಿಷ್ಕೃಷ್ಟತೆಯನ್ನು ರೂಢಿಮಾಡಿಕೊಳ್ಳುವುದು ಪ್ರಥಮ ಹೆಜ್ಜೆಯಾಗಿದೆ. ಇದರ ಅರ್ಥವೇನೆಂದರೆ, ಮುದ್ರಿತ ಪುಟದಲ್ಲಿ ಏನಿದೆಯೊ ಅದನ್ನೇ ನಿಖರವಾಗಿ ಓದಲು ಪ್ರಯತ್ನಿಸುವುದೇ ಆಗಿದೆ. ಪದಗಳನ್ನು ಬಿಟ್ಟು ಬಿಟ್ಟು ಓದದಂತೆ, ಪದಾಂತ್ಯಗಳನ್ನು ಉಚ್ಚರಿಸದೆ ಬಿಡದಂತೆ ಅಥವಾ ಕೆಲವು ಪದಗಳು ಬೇರಾವುದೋ ಪದಗಳನ್ನು ಹೋಲುವುದರಿಂದ ಅವುಗಳನ್ನು ತಪ್ಪಾಗಿ ಓದದಂತೆ ಜಾಗರೂಕತೆ ವಹಿಸಿರಿ.
ಪದಗಳನ್ನು ಸರಿಯಾಗಿ ಓದಬೇಕಾದರೆ, ನೀವು ಪೂರ್ವಾಪರವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಇದು ಜಾಗರೂಕ ತಯಾರಿಯನ್ನು ಕೇಳಿಕೊಳ್ಳುತ್ತದೆ. ಸಕಾಲದಲ್ಲಿ, ನೀವು ಮುಂದಿನ ಶಬ್ದಗಳನ್ನು ನೋಡುತ್ತಾ ಹೋಗುವ ಸಾಮರ್ಥ್ಯವನ್ನು ಬೆಳೆಸಿಕೊಂಡು, ಯೋಚನಾಲಹರಿಯನ್ನು ಪರಿಗಣಿಸುವಲ್ಲಿ, ನಿಮ್ಮ ವಾಚನ ನಿಷ್ಕೃಷ್ಟತೆಯು ಉತ್ತಮಗೊಳ್ಳುವುದು.
ವಿರಾಮಚಿಹ್ನೆ ಮತ್ತು ಉಚ್ಚಾರಣಾಚಿಹ್ನೆಗಳು, ಲಿಖಿತ ಭಾಷೆಯ ಪ್ರಧಾನಾಂಶಗಳು. ವಿರಾಮಚಿಹ್ನೆಯು, ಎಲ್ಲಿ ನಿಲ್ಲಬೇಕು, ಎಷ್ಟು ದೀರ್ಘ ವಿರಾಮವನ್ನು ನೀಡಬೇಕು, ಮತ್ತು ಧ್ವನಿಯನ್ನು ಏರಿಸಿ ತಗ್ಗಿಸುವ ಅಗತ್ಯವಿದೆಯೊ ಎಂಬುದನ್ನು ಸೂಚಿಸಬಹುದು. ಕೆಲವು ಭಾಷೆಗಳಲ್ಲಿ, ವಿರಾಮಚಿಹ್ನೆಯ ಪ್ರಕಾರ ಧ್ವನಿ ಬದಲಾವಣೆ ಮಾಡದಿರುವುದು, ಒಂದು ಪ್ರಶ್ನೆಯನ್ನು ಹೇಳಿಕೆಯಾಗಿ ಬದಲಾಯಿಸಬಹುದು, ಇಲ್ಲವೆ ಅರ್ಥವನ್ನೇ ಪೂರ್ತಿ ಬದಲಾಯಿಸಿಬಿಡಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ವಿರಾಮಚಿಹ್ನೆಯ ಕೆಲಸವು ಹೆಚ್ಚಾಗಿ ವ್ಯಾಕರಣಬದ್ಧವಾಗಿರುತ್ತದೆ. ಅನೇಕ ಭಾಷೆಗಳಲ್ಲಿ, ಲಿಖಿತ ರೂಪದಲ್ಲಿರುವ ಹಾಗೂ ಪೂರ್ವಾಪರಕ್ಕನುಸಾರ ಅರ್ಥಮಾಡಿಕೊಳ್ಳಬೇಕಾಗಿರುವ ಉಚ್ಚಾರಣಾಚಿಹ್ನೆಗೆ ಜಾಗರೂಕತೆಯ ಗಮನ ಕೊಡದಿರುವಲ್ಲಿ, ಆ ಭಾಗವನ್ನು ನಿಷ್ಕೃಷ್ಟವಾಗಿ ಓದುವುದು ಅಸಾಧ್ಯವೇ ಸರಿ. ಈ ಉಚ್ಚಾರಣಾಚಿಹ್ನೆಗಳು ಯಾವುದರೊಂದಿಗೆ ಜೊತೆಗೂಡಿವೆಯೊ ಆ ಅಕ್ಷರಗಳ ನಾದದ ಮೇಲೆ ಇವು ಪ್ರಭಾವಬೀರುತ್ತವೆ. ನಿಮ್ಮ ಭಾಷೆಯಲ್ಲಿ ವಿರಾಮಚಿಹ್ನೆ ಮತ್ತು ಉಚ್ಚಾರಣಾಚಿಹ್ನೆಯನ್ನು ಉಪಯೋಗಿಸುವ ವಿಧದ ಪರಿಚಯವನ್ನು ಖಂಡಿತ ಮಾಡಿಕೊಳ್ಳಿರಿ. ಅರ್ಥವತ್ತಾದ ರೀತಿಯ ವಾಚನವನ್ನು ಮಾಡುವುದಕ್ಕಿರುವ ಒಂದು ಕೀಲಿ ಕೈ ಇದೇ ಆಗಿದೆ. ನಿಮ್ಮ ಗುರಿಯು ಕೇವಲ ಪದಗಳನ್ನು ಉಚ್ಚರಿಸುವುದಲ್ಲ, ಬದಲಾಗಿ ವಿಚಾರಗಳನ್ನು ತಿಳಿಯಪಡಿಸುವುದೇ ಆಗಿದೆ ಎಂಬುದು ನೆನಪಿರಲಿ.
ನೀವು ನಿಷ್ಕೃಷ್ಟವಾದ ವಾಚನ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದರೆ ಅದನ್ನು ಅಭ್ಯಾಸಮಾಡುವ ಅಗತ್ಯವಿದೆ. ಒಂದೇ ಒಂದು ಪ್ಯಾರಗ್ರಾಫನ್ನು ಓದಿರಿ, ಮತ್ತು ಯಾವುದೇ ತಪ್ಪುಮಾಡದೆ ಅದನ್ನು ಓದಲು ಸಾಧ್ಯವಾಗುವ ತನಕ ಪುನಃ ಪುನಃ ಓದಿರಿ. ಬಳಿಕ ಮುಂದಿನ ಪ್ಯಾರಗ್ರಾಫ್‌ಗೆ ಹೋಗಿರಿ. ಕೊನೆಗೆ, ಹಲವು ಪುಟಗಳನ್ನು ಓದಿರಿ. ಹಾಗೆ ಓದುವಾಗ ಮಧ್ಯೆ ಬಿಟ್ಟು ಬಿಟ್ಟು, ಹಿಂದೆ ಹೋಗಿ ಪುನರಾವರ್ತಿಸುತ್ತ ಅಥವಾ ಪದಗಳನ್ನು ತಪ್ಪಾಗಿ ಉಚ್ಚರಿಸುತ್ತ ಓದದಿರಲು ಪ್ರಯತ್ನಿಸಿ. ನೀವು ಈ ಹೆಜ್ಜೆಗಳನ್ನು ತೆಗೆದುಕೊಂಡಾದ ಮೇಲೆ, ಇನ್ನೊಬ್ಬನು ನಿಮ್ಮ ವಾಚನವನ್ನು ಕೇಳಿಸಿಕೊಂಡು, ತಪ್ಪುಗಳಿರುವಲ್ಲಿ ಅವುಗಳನ್ನು ತೋರಿಸಿಕೊಡುವಂತೆ ಕೇಳಿಕೊಳ್ಳಿರಿ.
ಲೋಕದ ಕೆಲವು ಭಾಗಗಳಲ್ಲಿ, ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ ಮತ್ತು ಸರಿಯಾದ ಬೆಳಕಿನ ಕೊರತೆಯು ವಾಚನವನ್ನು ಕಷ್ಟಕರವಾಗಿ ಮಾಡುತ್ತದೆ. ಈ ಸನ್ನಿವೇಶಗಳನ್ನು ಸರಿಪಡಿಸಲಿಕ್ಕಾಗಿ ಏನನ್ನಾದರೂ ಮಾಡಸಾಧ್ಯವಿರುವಲ್ಲಿ, ವಾಚನವು ಖಂಡಿತವಾಗಿಯೂ ಉತ್ತಮಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ.
ಚೆನ್ನಾಗಿ ಓದುವ ಸಹೋದರರು, ಸಮಯಾನಂತರ ಸಭಾ ಪುಸ್ತಕ ಅಧ್ಯಯನ ಮತ್ತು ಕಾವಲಿನಬುರುಜು ಅಧ್ಯಯನದಲ್ಲಿ, ಅಧ್ಯಯನದ ವಿಷಯಭಾಗವನ್ನು ಬಹಿರಂಗವಾಗಿ ಓದುವಂತೆ ಆಮಂತ್ರಿಸಲ್ಪಡಬಹುದು. ಆದರೆ ಅಂತಹ ಸುಯೋಗವನ್ನು ಸರಿಯಾಗಿ ನಿರ್ವಹಿಸಲಿಕ್ಕಾಗಿ, ಪದಗಳನ್ನು ಸರಿಯಾಗಿ ಉಚ್ಚರಿಸಲು ಶಕ್ತರಾಗಿರುವುದಕ್ಕಿಂತಲೂ ಹೆಚ್ಚಿನದ್ದು ಅಗತ್ಯ. ಸಭೆಯಲ್ಲಿ ಪರಿಣಾಮಕಾರಿ ಬಹಿರಂಗ ಓದುಗರಾಗಬೇಕಾದರೆ, ವೈಯಕ್ತಿಕ ವಾಚನದ ಒಳ್ಳೇ ರೂಢಿಗಳನ್ನು ನೀವು ಬೆಳೆಸಿಕೊಳ್ಳುವ ಅಗತ್ಯವಿದೆ. ಒಂದು ವಾಕ್ಯದಲ್ಲಿರುವ ಪ್ರತಿಯೊಂದು ಪದಕ್ಕೂ ಒಂದು ಪಾತ್ರವಿದೆಯೆಂಬುದನ್ನು ಗಣ್ಯಮಾಡುವುದು ಇದರಲ್ಲಿ ಸೇರಿದೆ. ಆ ಪದಗಳಲ್ಲಿ ಕೆಲವನ್ನು ಅಲಕ್ಷಿಸುವಲ್ಲಿ, ಏನು ಹೇಳಲ್ಪಡುತ್ತಿದೆಯೊ ಅದರ ಸರಿಯಾದ ಚಿತ್ರಣವನ್ನು ನೀವು ಪಡೆಯಲಾರಿರಿ. ನೀವು ಪದಗಳನ್ನು ತಪ್ಪಾಗಿ ಓದುವಲ್ಲಿ, ನೀವು ನಿಮ್ಮಷ್ಟಕ್ಕೇ ಓದಿಕೊಳ್ಳುತ್ತಿರುವಾಗಲೂ ವಾಕ್ಯವು ತಪ್ಪರ್ಥವನ್ನು ಕೊಡುವುದು. ಉಚ್ಚಾರಣಾಚಿಹ್ನೆಗಳನ್ನು ಅಥವಾ ಪದಗಳು ಉಪಯೋಗಿಸಲ್ಪಟ್ಟಿರುವ ಪೂರ್ವಾಪರವನ್ನು ಪರಿಗಣಿಸಲು ತಪ್ಪುವುದರಿಂದಾಗಿ, ತಪ್ಪಾದ ವಾಚನವು ಫಲಿಸಬಹುದು. ಪ್ರತಿಯೊಂದು ಪದವು ತೋರಿಬರುವ ಸನ್ನಿವೇಶದಲ್ಲಿ ಅದು ಯಾವ ಅರ್ಥವನ್ನು ಕೊಡುತ್ತದೆ ಎಂದು ತಿಳಿಯಲು ಪ್ರಯತ್ನಿಸಿ. ವಿರಾಮಚಿಹ್ನೆಯು ವಾಕ್ಯದ ಅರ್ಥವನ್ನು ಹೇಗೆ ಪ್ರಭಾವಿಸುತ್ತದೆಂಬುದನ್ನೂ ಪರಿಗಣಿಸಿ. ಸಾಮಾನ್ಯವಾಗಿ ವಿಚಾರಗಳು ಪದಸಮೂಹಗಳ ಮೂಲಕ ತಿಳಿಯಪಡಿಸಲ್ಪಡುತ್ತವೆ ಎಂಬುದು ನೆನಪಿರಲಿ. ಇವುಗಳನ್ನು ಗಮನದಲ್ಲಿಟ್ಟುಕೊಂಡು, ಗಟ್ಟಿಯಾಗಿ ಓದುವಾಗ ಕೇವಲ ಪದಗಳನ್ನು ಓದುವ ಬದಲಿಗೆ, ಪದಸಮೂಹಗಳನ್ನು ಅಂದರೆ ಪದಗುಚ್ಛಗಳನ್ನು ಮತ್ತು ವಾಕ್ಯಾಂಶಗಳನ್ನು ಓದಿರಿ. ನೀವು ಏನನ್ನು ಓದುತ್ತೀರೊ ಅದರ ಅರ್ಥವನ್ನು ಸ್ಪಷ್ಟವಾಗಿ ಗ್ರಹಿಸುವುದು, ಬಹಿರಂಗ ವಾಚನದ ಮೂಲಕ ನಿಷ್ಕೃಷ್ಟ ಜ್ಞಾನವನ್ನು ಇತರರಿಗೆ ತಿಳಿಯಪಡಿಸಲು ಶಕ್ತರಾಗುವುದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
“ಬಹಿರಂಗ ವಾಚನದಲ್ಲಿ ಶ್ರದ್ಧೆಯಿಂದ ನಿರತನಾಗುತ್ತಾ ಮುಂದುವರಿ” ಎಂದು ಅಪೊಸ್ತಲ ಪೌಲನು ಬರೆದುದು ಒಬ್ಬ ಅನುಭವಸ್ಥ ಕ್ರೈಸ್ತ ಹಿರಿಯನಿಗೇ ಆಗಿತ್ತು. (1 ತಿಮೊ. 4:13, NW) ಆದುದರಿಂದ, ಈ ಕ್ಷೇತ್ರದಲ್ಲಿ ಅಭಿವೃದ್ಧಿಹೊಂದಲು ನಮಗೆಲ್ಲರಿಗೂ ಅವಕಾಶವಿರುವುದು ಸುಸ್ಪಷ್ಟ.